ನಮ್ಮಿಬ್ಬರ ನಡುವಿನ ಸಂಬಂಧ ಹೀಗೇ ಅಂತ ಇರಲಿಲ್ಲ

ಕೆಲವು ಸಂಬಂಧಗಳೇ ಹಾಗೇ

ಬಿಡಿಸಿಕೊಳ್ಳಬೇಕೆಂದರೂ ಬಿಡಿಸಿಕೊಳ್ಳಲಾಗುವುದಿಲ್ಲ

ಕಾಮದಂತೆ ಧ್ಯಾನಿಸುವ ಹಾಗೆ ಮಾಡುತ್ತವೆ.

ಮಗು ಹುಟ್ಟಿದರೆ ಹೋಗಿ ನೋಡಿ ಬರಬೇಕೆನಿಸುತ್ತದೆ.

ನನ್ನ ಜೊತೆಯೇ ಇದ್ದಳು

ನಿನ್ನೆ ಮೊನ್ನೆ ತನಕ,

ಆಡುತ್ತಿದ್ದಳು, ಜಗಳವಾಡುತ್ತಿದ್ದಳು, ರಮಿಸುತ್ತಿದ್ದಳು

ಸುಂದರಿಯಾಗಿದ್ದರಿಂದ ಅದಕ್ಕೆ ತಕ್ಕ ಹಾಗೆ ಗಾಂಚಾಲಿಯೂ ಇತ್ತು ಅನ್ನಿ.

ನನಗೆ ತಾಯಿ, ತಂಗಿ, ಪ್ರೇಯಸಿ ಎಲ್ಲವೂ ಆಗುತ್ತಿದ್ದಳು – ನಾಟಕಗಳಲ್ಲಿ.

ಅರೆಹೊಟ್ಟೆ ಇದ್ದಾಗ ಸೀಮೆಎಣ್ಣೆ ಸ್ಟೌ ನಲ್ಲಿ ಚಿತ್ರಾನ್ನ ಮಾಡಿ ಬಡಿಸುತ್ತಿದ್ದಳು.

ನಿದ್ದೆ ಬಂದರೆ ತನ್ನ ರೂಂನಲ್ಲೇ ಮಲಗಲು ಹೇಳಿ

ರಗ್ಗು ಹೊದೆಸುತ್ತಿದ್ದಳು.

ನಮ್ಮಿಬ್ಬರ ನಡುವಿನ ಸಂಬಂಧ ಹೀಗೇ ಅಂತ ಇರಲಿಲ್ಲ.

ಡೇಟ್ ಆದಾಗ ಪ್ಯಾಡ್ಸ್ ತರುವಂತೆ ಹೇಳಿ ಹಣಕೊಟ್ಟು ಕಳಿಸುತ್ತಿದ್ದಳು

ಯಾವುದೇ ಅಳುಕಿಲ್ಲದೆ.

ಒಮ್ಮೊಮ್ಮೆ, ಅಲ್ಲಲ್ಲ, ಹಲವು ಬಾರಿ ಜಗಳವಾದದ್ದಿದೆ.

ಆದರೆ ನಾನು ಅವ್ವಾ ಅಂತ ಕರೆಯುತ್ತಿದ್ದ ಅವಳೊಡನೆ

ಮಾತು ಬಿಡುವುದಾದರೂ ಹೇಗೆ?

ಮೊನ್ನೆ ಆಕೆಯ ಮದುವೆಯಾಯಿತು.

ಅದೇ, ನನ್ನ ಮದುವೆಯಾಗಿ ಎರಡು ದಿನಗಳ ಬಳಿಕ.

ನಿನ್ನೆ ಸುದ್ದಿ ಬಂತು, ಗಂಡು ಹಡೆದಿದ್ದಾಳೆ ಎಂದು.

ಹೋದೆ, ಹೆಂಡತಿಯನ್ನು ಕರೆದುಕೊಂಡು.

ಮಗುವಿಗಿಂತ ಅವಳೇ ಮುದ್ದಾಗಿ ಕಂಡಳು.

ಹೆರಿಗೆಯ ಬಳಲಿಕೆ ಮುಖದಲ್ಲಿತ್ತು.

ನಾನು ಅದನ್ನು ಗಮನಿಸಿದೆ.

ನನ್ನ ಹೆಂಡತಿ ನನ್ನನ್ನು ಗಮನಿಸಿದಳು.

ಇಂದು ಬೆಳಿಗ್ಗೆ ನನಗೆ ಮಗಳು ಹುಟ್ಟಿದ್ದಾಳೆ.

ನೋಡಲಿಕ್ಕೆ ಥೇಟ್….