ಇಳೇಖಾನ್ ಇನ್ನಿಲ್ಲ…

ಈಟಿವಿಯಲ್ಲಿದ್ದಾಗ ನನ್ನ ಹಿರಿಯ ಸಹೋದ್ಯೋಗಿ ಹಾಗೂ ಮಂಡ್ಯದ ವರದಿಗಾರರಾಗಿದ್ದ ಇಳೇಖಾನ್ ಶ್ರೀಕಂಠ ಇನ್ನಿಲ್ಲ. ಐ ವಿಲ್ ಮಿಸ್ ಯೂ ಸರ್….

ನಿಮ್ಮನ್ನು ಕಳೆದುಕೊಂಡ ಪತ್ರಿಕೋದ್ಯಮ ಬಡವಾಗಿದೆ.....(ಫೋಟೋ - ಅವಧಿ)

ಸಾಹಿತಿಯೊಬ್ಬರ ಉಠಾ ಬೈಸ್ ಪ್ರಕರಣವು…..

ಫೋಟೋ - ಇಂಟರ್ನೆಟ್

ವಿಷುವಲ್ ಮೀಡಿಯಾದಲ್ಲಿ ಈ ಕಷ್ಟ ತಪ್ಪಿದ್ದಲ್ಲ….ಸುದ್ದಿ ಕರಾರುವಕ್ಕಾಗಿ ಸಿಕ್ಕಿ ಬಿಟ್ಟಿರುತ್ತದೆ….ಆದರೆ ಅದಕ್ಕೆ ಸಂಬಂಧಿಸಿದ ವಿಷುವಲ್ ಇರುವುದೇ ಇಲ್ಲ. ಹೋಗಲಿ ಫೈಲ್ ಶಾಟ್ ತೋರಿಸೋಣ ಎಂದರೆ ಒಮ್ಮೊಮ್ಮೆ ಅದೂ ಕೂಡ ಇರುವುದಿಲ್ಲ. ಕೆಲವೊಮ್ಮೆಯಂತೂ ಫೈಲ್ ಶಾಟ್ ಗಳನ್ನು ತೋರಿಸಿ ತೋರಿಸಿ, ಎಷ್ಟು ಅಭ್ಯಾಸವಾಗಿಬಿಟ್ಟಿರುತ್ತದೆಯೆಂದರೆ ಸುಪ್ರೀಂ ಕೋರ್ಟ್ ವಿಷುವಲ್ ತೋರಿಸುವಾಗ ಪ್ರತಿಬಾರಿಯೂ ಕಾಗೆಯೊಂದು ಹಾರಿ ಹೋಗುತ್ತದೆ, ಒಬ್ಬ ನಿರ್ದಿಷ್ಟ ವ್ಯಕ್ತಿ ಸೈಕಲ್ ತುಳಿದು ಹೋಗುತ್ತಾನೆ….ಹೀಗೆ. ಪ್ರತಿ ಚ್ಯಾನಲ್ ಕೂಡ ತನ್ನದೇ ಆದ ಆರ್ಕೈವ್ ಹೊಂದಿದ್ದರೂ, ಕೆಲವೊಮ್ಮೆ ಯೂ ಟ್ಯೂಬ್ ಕೂಡ ಕೆಲಸಕ್ಕೆ ಬಾರದಾಗಿರುತ್ತದೆ.

ಇದು ಈಟಿವಿಯಲ್ಲಿ ಅಂದಕಾಲತ್ತಿಲ್ ನಡೆದ ಘಟನೆ. ಅದೊಮ್ಮೆ ಓರ್ವ ಪ್ರಖ್ಯಾತ ಸಾಹಿತಿಯೊಬ್ಬರಿಗೆ ಸಂಬಂಧಿಸಿದ ಮಹತ್ವದ ಸುದ್ದಿ ಸಿಕ್ಕಿತ್ತು. ಸುದ್ದಿ ಮಹತ್ವದ್ದಾಗಿತ್ತು ಹಾಗೂ ಪೂರ್ಣ ಸುದ್ದಿ ಸಿಕ್ಕಿತ್ತು. ಬುಲೆಟಿನ್ ಟೈಮ್ ಹತ್ತಿರವಾದ್ದರಿಂದ ಸುದ್ದಿಯನ್ನು ಎವಿ (ಆಂಕರ್ ವಿಷುವಲ್ – ಆಂಕರ್ ಸುದ್ದಿ ಓದುತ್ತಿರುವಾಗ ವಿಷುವಲ್ ಓವರ್ ಲ್ಯಾಪ್ ಆಗುವುದು) ಫಾರ್ಮಾಟ್ ನಲ್ಲಿ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಸುದ್ದಿಯನ್ನೇನೋ ಬರೆಯಲಾಯಿತು. ಆದರೆ ಅದಕ್ಕೆ ವಿಷುವಲ್ ಇನ್ಸರ್ಟ್ ಮಾಡುವ ಕೆಲಸ ಟ್ರೇನಿ ಕಾಪಿ ಎಡಿಟರ್ ತಲೆಗೆ ಬಿತ್ತು. ಆ ಮಹಾಶಯ ಸಾಹಿತಿಯ ಫೈಲ್ ಶಾಟ್ ಗೆ ಹುಡುಕಿದ್ದಾನೆ. ಎಷ್ಟು ಹುಡುಕಿದರೂ ಸಾಹಿತಿಯ ದರ್ಶನ ಆರ್ಕೈವ್ ನಲ್ಲಿ ಆಗೇ ಇಲ್ಲ. ಬುಲೆಟಿನ್ ಟೈಮ್ ಬೇರೆ ಹತ್ತಿರಾಗುತ್ತಿದೆ. ಕೊನೆಗೊಮ್ಮೆ ಟ್ರೇನಿ ಸಾಹೇಬರಿಗೆ ಸಾಹಿತಿಯಿರುವ ವಿಷುವಲ್ ದರ್ಶನವಾಗಿದೆ. ದುರಾದೃಷ್ಟವೆಂದರೆ ಆ ಸಾಹಿತಿ ಚೇರ್ ನಿಂದ ಎದ್ದು ನಿಲ್ಲುವ ಸುಮಾರು ಮೂರು ಸೆಕೆಂಡ್ ಗಳ ವಿಷುವಲ್ ಅಷ್ಟೇ ಸಿಕ್ಕಿದೆ. ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯೇ ಆಸರೆ, ಬುಲೆಟಿನ್ ಟೈಮ್ ಹತ್ತಿರವಾದವನಿಗೆ ಮೂರು ಸೆಕೆಂಡ್ ವಿಷುವಲ್ಲೇ ಆಸರೆ….ಅದನ್ನೇ ಇನ್ಸರ್ಟ್ ಮಾಡಿ ಎಕ್ಸ್ ಪೋರ್ಟ್ ಮಾಡಿದ್ದಾನೆ ಕಾಪಿ ಎಡಿಟರ್.

ಸುದ್ದಿ ಪ್ರಸಾರವಾದಾಗ ಮಾತ್ರ ಪ್ರಮಾದವಾಗಿ ಹೋಗಿತ್ತು. ಆಂಕರ್ ಸುದ್ದಿಯನ್ನು ಓದುತ್ತಿದ್ದಂತೆ ವಿಷುವಲ್ ಫ್ಲೋ ಬಿಡಲಾಗಿದೆ. ವಿಷುವಲ್ ನಲ್ಲಿ ಆ ಸಾಹಿತಿ ಕುರ್ಚಿಯಿಂದ ಮೇಲೆಳುತ್ತಿದ್ದಾರೆ, ಕೂರುತ್ತಿದ್ದಾರೆ, ಮತ್ತೆ ಮೇಲೆಳುತ್ತಿದ್ದಾರೆ, ಮತ್ತೆ ಕೂರುತ್ತಿದ್ದಾರೆ, ಹೀಗೆಯೇ ತಮ್ಮ ಉಠಾ ಬೈಸ್ ಸುದ್ದಿ ಮುಗಿಯುವವರೆಗೂ ಮುಂದುವರೆಸಿದ್ದಾರೆ. ಬುಲೆಟಿನ್ ಪ್ರೋಡ್ಯೂಸರ್, ಡೆಸ್ಕ್ ಇಂಚಾರ್ಜ್ ಲಬೋ ಲಬೋ ಎಂದಿದ್ದಾರೆ.

ಆಗಿದ್ದಿಷ್ಟು……ಸುದ್ದಿಗೆ ತಕ್ಕಷ್ಟು ವಿಷುವಲ್ ಇಲ್ಲದ ಕಾರಣ ಕಾಪಿ ಎಡಿಟರ್ ತನ್ನ ಶಾರ್ಪ್ ತಲೆಯನ್ನು 120 ಕಿಮಿ. ಸ್ಪೀಡ್ ನಲ್ಲಿ ಓಡಿಸಿದ್ದಾನೆ. ಪುಣ್ಯಾತ್ಮ ಆ ಮೂರು ಸೆಕೆಂಡ್ ವಿಷುವಲ್ಲನ್ನೇ ಕಂಟಿನ್ಯೂಅಸ್ ಆಗಿ ಕಾಪಿ ಪೇಸ್ಟ್ ಮಾಡಿಬಿಟ್ಟಿದ್ದಾನೆ. ಸುದ್ದಿ ನೋಡಿದ ಎಲ್ಲರೂ ಸುಸ್ತೋ ಸುಸ್ತು….ಆ ಸಾಹಿತಿ ಮಾತ್ರ ಈ ಸುದ್ದಿಯನ್ನು ನೋಡಿದರೋ ಇಲ್ಲವೋ ಇನ್ನೂ ಗೊತ್ತಾಗಿಲ್ಲ…..