ದಿವ್ಯಾರ ಮಾತಾಡೋ ಮನ.

ಮಾತಾಡೋ ಮನ...

ನಾನು ದಿವ್ಯ.. ಮೂಲತಃ ಪುತ್ತೂರು ವಾಸಿಯಾಗಿದ್ದು … ಪ್ರಸ್ತುತ ಹಾಸನದಲ್ಲಿ ವಿದ್ಯಾಭ್ಯಾಸ…
ನನ್ನ ಹವ್ಯಾಸ.. ಚಿತ್ರಕಲೆ,ತಾಣಯಾನ,ಹನಿಗವನಗಳು, ಅಂತರ್ಜಾಲದ ವಿಷಯದಲ್ಲಿ ಒಲವು&ಓದುವ ಛಲವು… ಎಲ್ಲಾ ರೀತಿಯ ಕಲೆಯಲ್ಲೂ ಆಸಕ್ತಿ … ಇನ್ನೂ ಅನೇಕ…

ನನಗೆ ಸಂಬ೦ಧಗಳಲ್ಲಿ ನಂಬಿಕೆ ಇದೆ … ಮತ್ತು 1-9 & x,y,z ಗಳ ಜೊತೆ ಬದುಕು ಕಷ್ಟವೆನಿಸುತ್ತದೆ ……
just .. rocking.. talking..

http://matadomana.wordpress.com/ನಾನು ಮೊನ್ನೆ 8 ಜೇನ್ನೋಣಗಳನ್ನು ಹಿಟ್ ಸಿಂಪಡಿಸಿ ಕೊಂದೆ….

oh my honey bee!!!

ಆಗ ನಾನಿನ್ನೂ ಈಟಿವಿ ಸೇರಿದ್ದ ಪರ್ವಕಾಲ. ನಾಲ್ಕು ತಿಂಗಳು ಹೈದ್ರಾಬಾದ್ ನಲ್ಲಿದ್ದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಫೀಸು. ಟ್ರೇನಿಂಗು, ಕೋಚಿಂಗು, ಮೀಟಿಂಗು ಎಂದು ಬರುತ್ತಿದ್ದ ಸ್ಟಾಫ್ ಗೆ ಉಳಿದುಕೊಳ್ಳಲಿಕ್ಕೆ ಯೂ.ಕೆ. ಗುಡಾ ಎಂಬಲ್ಲಿ ಗೆಸ್ಟ್ ಹೌಸ್ ಇತ್ತು. ಅಲ್ಲೇ ನನ್ನ ವಾಸ್ತವ್ಯ. ಒಂದು ಮನೆಯಲ್ಲಿ ನಾಲ್ಕು ಜನರು ಆರಾಮವಾಗಿ ಇರಬಹುದಾದ ಎಂಟು ಮನೆಗಳಿರುತ್ತಿದ್ದ ನಾಲ್ಕಂತಸ್ತಿನ ಕಟ್ಟಡಗಳು ಅವು. ನಾನು ಹಾಗೂ ಪಣೀಂದ್ರ ಎರಡನೇ ಮಹಡಿಯ ಮನೆಯ ಒಂದು ರೂಂ ನಲ್ಲಿದ್ದರೆ, ಮತ್ತೊಂದು ರೂಂನಲ್ಲಿ ಈಟಿವಿ ಉತ್ತರಪ್ರದೇಶ ಚ್ಯಾನಲ್ ನ ಟ್ರೇನಿ ಆಂಕರ್ ಇರುತ್ತಿದ್ದ. ಹೇಳಿ ಕೇಳಿ ಟ್ರೇನಿ ಆಂಕರ್ ಆತ. ಪ್ರತಿನಿತ್ಯ ನೀಟ್ ಶೇವ್, ಗರಿ ಗರಿ ಇಸ್ತ್ರಿ ಮಾಡಿರುತ್ತಿದ್ದ ಶರ್ಟ್, ಮುಖಕ್ಕೆ ಕ್ರೀಮು, ಮೈಗೆ ಪರ್ಫ್ಯೂಮು ಹೊಡೆದುಕೊಂಡು ಠಾಕುಠೀಕಾಗಿ ಆಫೀಸ್ ಗೆ ಹೋಗುತ್ತಿದ್ದ.

ಇಂತಿಪ್ಪ ಸಂದರ್ಭದಲ್ಲಿ ಅದೊಮ್ಮೆ ನಾವಿರುತ್ತಿದ್ದ ಮನೆಯ ಕಿಟಕಿಗೆ ಜೇನ್ನೋಣಗಳು ಗೂಡು ಕಟ್ಟಲಾರಂಭಿಸಿದವು. ಎರಡು ಮೂರು ದಿನ ಕಳೆಯುತ್ತಿದ್ದಂತೆ ದೊಡ್ಡ ಗೂಡೇ ರೆಡಿಯಾಗಿಬಿಟ್ಟಿತು. ಅವುಗಳಿಂದ ನನಗೆ ಹಾಗೂ ಪಣಿಗೆ ಏನೂ ತೊಂದರೆ ಇರಲಿಲ್ಲವಾದ್ದರಿಂದ, ನಮ್ಮ ಪಾಡಿಗೆ ನಾವು, ಅವುಗಳ ಪಾಡಿಗೆ ಅವು ವಾಸಿಸಲಾರಂಭಿಸಿದೆವು.

ಆದರೆ ನಾಲ್ಕನೆ ದಿನ ರಾತ್ರಿ ಡ್ಯೂಟಿ ಮುಗಿಸಿ ಬರುತ್ತಿದ್ದಂತೆ ನೋಡಿದ್ದೇನು, ನೂರಾರು ಜೇನ್ನೋಣಗಳು ರೂಂನಲ್ಲಿ ಸತ್ತು ಬಿದ್ದಿದ್ದವು. ತಕ್ಷಣ ಕಿಟಕಿ ಬಳಿ ಹೋಗಿ ನೋಡಿದರೆ ಗೂಡಿನ ಅವಶೇಷ ಕಂಡುಬಂತು. ಕೆಳಗೆ ಮತ್ತೆ ನೂರಾರು ಜೆನ್ನೋಣಗಳು ಸತ್ತುಬಿದ್ದಿದ್ದವು. ಯಾಕಂತ ಗೊತ್ತಾಗಲಿಲ್ಲ….ತಕ್ಷಣ ರಿಸೆಪ್ಶನ್ಗೆ ಫೋನ್ ಮಾಡಿದವನೆ “ಕ್ಯಾ ಹುವಾ ಭೈಯ್ಯಾ? ಜೆನ್ನೋಣಗಳು ಲೇದು….” ಎಂದು ಕನ್ನಡ, ಹಿಂದಿ, ಆತಂಕ ವ್ಯಕ್ತಪಡಿಸಿದೆ. ಅದಕ್ಕೆ ರಿಸೆಪ್ಶನಿಸ್ಟ್ ರಾಜು, “ವೋ ತುಮ್ಹಾರಾ ರೂಂ ಮೆ ಹೈನಾ, ಯೂಪಿವಾಲಾ ಹೈನಾ, ವೋ ಕಂಪ್ಲೇಂಟ್ ಕಿಯಾ. ತೋ ಹಮ್ನೆ ಪೆಸ್ಟಿಸೈಡ್ ಮಾರ್ಕೆ ಖತಮ್ ಕಿಯಾ” ( ಅವನಿದ್ದಾನಲ್ಲ ನಿಮ್ಮ ರೂಂ ನಲ್ಲಿ, ಯೂಪಿಯವ. ಅವ ಕಂಪ್ಲೇಂಟ್ ಮಾಡಿದ. ಹೀಗಾಗಿ ಪೆಸ್ಟಿಸೈಡ್ ಹೊಡೆದು ಕೊಂದಿದ್ದೇವೆ) ಎಂದ. ಹೈದ್ರಾಬಾದ್ ನಲ್ಲಿ ಜೇನ್ನೋಣಗಳು ಗೂಡು ಕಟ್ಟಿದರೆ, ಉತ್ತರಪ್ರದೇಶದ ಆಂಕರ್ ಏಕೆ ಕಂಪ್ಲೇಂಟ್ ಮಾಡಬೇಕು ಗೊತ್ತಾಗಲಿಲ್ಲ. ಜೇನ್ನೋಣಗಳ ಶವಗಳನ್ನು ನೋಡುತ್ತ ನಿದ್ದೆ ಹೋದೆ, ನಾಳೆ ಈ ಬಗ್ಗೆ ವಿಚಾರಿಸಬೇಕು ಎಂದುಕೊಂಡು.

ಮಾರನೇ ದಿನ ಯೂಪಿ ಆಂಕರ್ ನನಗೆ ಸಿಗಲಿಲ್ಲ. ಆದರೆ ಪಣಿಗೆ ಸಿಕ್ಕಿದ್ದನಂತೆ. ಪಣಿ ವಿಚಾರಿಸಿದ್ದಕ್ಕೆ, ತಾನು ಟ್ರೇನಿ ಆಂಕರ್. ತನಗೆ ಎಲ್ಲಾದರೂ ಮುಖಕ್ಕೆ ಜೇನ್ನೋಣ ಕಚ್ಚಿದರೆ ತನ್ನ ಜಾಬ್ ಕಥೆ ಮುಗಿಯಿತು. ಅದಕ್ಕೆ ಕಂಪ್ಲೇಂಟ್ ಮಾಡಿದೆ ಎಂದನಂತೆ. ಅಂದು ಆ ಟ್ರೇನಿ ಆಂಕರ್ ಮೇಲೆ ತೀರ ಕೋಪ ಬಂದಿತ್ತು.

ಆದರೆ ವಿಷಯ ನಮ್ಮ ಬುಡಕ್ಕೆ ಬಂದಾಗ ಏನು ಮಾಡುತ್ತೇವೆ ನೋಡಿ. ಈ ಘಟನೆ ಆಗಿದ್ದು 2004 ರಲ್ಲಿ. ಅದಾಗಿ ಆರು ವರ್ಷಗಳ ನಂತರ ಅಂದರೆ 2010 ರ ಮಾರ್ಚ್ ನಲ್ಲಿ ನನ್ನ ಮನೆಗೆ ರಾತ್ರಿ ಅಚಾನಕ್ಕಾಗಿ ಎರಡು ಜೇನ್ನೋಣಗಳು ನುಗ್ಗಿದವು. ಮನೆಯವರೆಲ್ಲ ನೋಡುತ್ತಿರುವಂತೆಯೇ ಎರಡಕ್ಕೆ ಮತ್ತೆರಡು ಬಂದು ಸೇರಿಕೊಂಡವು. ಆ ನಾಲ್ಕಕ್ಕೆ ಮತ್ತೆ ನಾಲ್ಕು ಬಂದು ಸೇರಿಕೊಂಡವು. ಒಟ್ಟು ಎಂಟು ಜೇನ್ನೋಣಗಳು ಮನೆಯ ಡ್ರಾಯಿಂಗ್ ರೂಂನಲ್ಲಿ ಗಿರಕಿ ಹೊಡೆಯತೊಡಗಿದವು. ಮನೆಯಲ್ಲಿ ಆತಂಕ. ಎರಡು ಪುಟ್ಟ ಮಕ್ಕಳಿದ್ದಾವೆ. ಅಕಸ್ಮಾತ್ ಕಚ್ಚಿದರೆ ಏನು ಗತಿ ಎಂದು. ಆ ಜೇನ್ನೋಣಗಳ ಪರ್ಸಾನಾಲಿಟಿ ನೋಡಿಯೇ ಭಯವಾಗುತ್ತಿತ್ತು. ಮಕ್ಕಳಿಗೆ ಹೋಗಲಿ ನನಗೆ ಕಚ್ಚಿದರೆ ಗತಿ ಏನು? ಮುಂದಿನ ಒಂದು ವಾರಕ್ಕೆ ಡೇಟ್ ಕೊಟ್ಟಿದ್ದೇನೆ. ಮುಖ ಊದಿಸಿಕೊಂಡು ಕ್ಯಾಮೆರಾ ಎದುರು ನಿಲ್ಲಲಾದೀತೆ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಸಾಗಿತ್ತು. ನಾನು ಅವುಗಳನ್ನು ಓಡಿಸುವ ಉಪಾಯ ಯೋಚಿಸುತ್ತಿರುವಂತೆ ಅವುಗಳನ್ನು ಕೊಲ್ಲುವ ಹುಕುಂ ಮನೆಯ ಉಳಿದ ಸದಸ್ಯರಿಂದ ಜಾರಿಯಾಯಿತು. ಆದರೆ ಕೊಲ್ಲಲು ನನಗೆ ಮನಸ್ಸಾಗಲಿಲ್ಲ. ಹೀಗಾಗಿ ಅವುಗಳನ್ನು ರೂಂನಿಂದ ಗಡಿಪಾರು ಮಾಡುವ ಪ್ರಯತ್ನ ಶುರುಮಾಡಿದೆ. ಪೇಪರ್ ನಿಂದ ಹೊರಹಾಕುವುದು, ಲೈಟ್ ಆಫ್ ಮಾಡಿ ಹೊರಗಿನ ಲೈಟ್ ಹಾಕಿ ಅಲ್ಲಿ ಹೋಗುವಂತೆ ಮಾಡುವುದು, ಎಲ್ಲವನ್ನೂ ಮಾಡಿದೆ. ಆದರೆ ನನ್ನ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಗಲಿಲ್ಲ. ಫಲ ಸಿಗುವುದು ಹೋಗಲಿ ನನ್ನ ಪ್ರಯತ್ನದಿಂದ ಜೇನ್ನೋಣಗಳು ಸ್ವಲ್ಪ ರಾಂಗ್ ಆದಂತೆ ಬಿಹೇವ್ ಮಾಡತೊಡಗಿದವು.

ಕೊನೆಗೆ ನನ್ನ ಬಳಿ ಯಾವುದೇ ಉಪಾಯವಿರಲಿಲ್ಲ. ಸೀದಾ ಹೋಗಿ ಕಸಬರಿಗೆ ಹಾಗೂ ಹಿಟ್ ತಂದೆ. ಕಸಬರಿಗೆಯಿಂದ ಒಂದೊಂದನ್ನೇ ಹಿಡಿದು, ಹೊಡೆದು, ಹಿಟ್ ಸಿಂಪಡಿಸಿ ಎಂಟೂ ಜೇನ್ನೋಣಗಳನ್ನು ಕೊಂದು ಹಾಕಿದೆ. ಅಂದು ಯಾಕೋ ಯೂಪಿ ಆಂಕರ್ ನೆನಪಾದ…..ಅದಾದ ನಂತರ ಜೇನುತುಪ್ಪವನ್ನು ನೆಕ್ಕುವ ಧೈರ್ಯ ನನಗೆ ಇದುವರೆಗೂ ಆಗಿಲ್ಲ……

ಬಿ ಸಿ ರೋಡಿನ ಸುಂದರರಾವ್

ಸುಂದರರಾಯರ ಸುಂದರ ಬ್ಲಾಗ್....

http://www.sundararao.blogspot.com/

ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಬಿ.ಸಿ.ರೋಡು (ಬಂಟ್ವಾಳ)ದಲ್ಲಿ ೧೯೮೪ರಿಂದ ೨೦೦೯ರ ಮಾರ್ಚ್ ವರೆಗೆ “ನೇಸರ ಮುದ್ರಣ” ಎಂಬ ಮುದ್ರಣಾಲಯ ನಡೆಸಿ, ಈಗ ಅದರಿಂದ ನಿವೃತ್ತ. ನಾನು ತುಂಬ ಪ್ರಭಾವಿತನಾಗಿರುವುದು ಗಾಂಧಿಯಿಂದ, ಡಾ. ರವೀಂದ್ರನಾಥ ಶಾನುಭಾಗರಿಂದ

ಕೊಪ್ಪದ ಒಂದು ಸುಂದರ ಸಂಜೆ….

ಕೊಪ್ಪ….ಪ್ರತಿಯೊಂದೂ ಕಾಲದಲ್ಲಿಯೂ ಪ್ರಕೃತಿ ದೇವಿಯ ದಿವ್ಯ ದರ್ಶನ. ಮೊನ್ನೆ ಕೊಪ್ಪಕ್ಕೆ ಹೋಗಿ ಕಾಫಿ ಎಸ್ಟೇಟ್ ವೊಂದರಲ್ಲಿ ತಿರುಗಾಡುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಕಂಡ ಸೂರ್ಯಾಸ್ತ…..

ಕೊಪ್ಪ....ನನ್ನೂರು....

ರಂಜಿತ್ ಅಡಿಗರ ನೀಲಿ ಹೂವು ನೋಡಬನ್ನಿ…

ಚಿವುಟಿಕೊಂಡು ನೋಡದಿರಿ, ಮುಂದುವರಿಯಲಿ ಕನಸುಗಳು ಬದುಕಿನುದ್ದಕ್ಕೂ...

ಹೂವು ನೀಲಿ, ನಾನು ಮಾಲಿ..!

ಹೆಸ್ರು ರಂಜಿತ್ ಅಡಿಗ. ಬೇರೂರು ಕುಂದಾಪುರ. ಬೆಂಗಳೂರಲ್ಲಿ ತುಂಬಾ ವರ್ಷ ವಾಸವಾಗಿದ್ದೆ. ಬದುಕು, ಕೆಲಸ ನನ್ನನ್ನು ಕುಂದಾಪುರದಿಂದ ಹಿಡಿದು ಸಿಂಗಾಪೂರದವರೆಗೆ ಓಡಿಸಿದೆ.

ಚಿಕ್ಕ ವಯಸ್ಸಿಂದ ಓದುವ, ಬರೆಯುವ ಗೀಳು. ಶಾಲೆಯ ಗೋಡೆಯ ಮೇಲೆ, ತೋಡಿನ ಮೇಲೆ ಬಿಡುವ ಕಾಗದದ ದೋಣಿ, ಕುಡುಮಿ ವಿಧ್ಯಾರ್ಥಿಯ ಬೆನ್ನಿಗಂಟಿದ ಚೀಟಿ ಮೇಲೆ, ಕ್ಯಾಂಟೀನಿನ ಬೆಂಚುಗಳ ಮೇಲೆ, ಗಾಯ ಮಾಡಿಕೊಂಡ ಗೆಳೆಯನ ಕೈಯ ಪ್ಲಾಸ್ಟೆರ್ ಆಫ್ ಪ್ಯಾರಿಸ್, ಟೀಚರತ್ತ ನುಗ್ಗಿದ ಹಾಳೆಯ ಕ್ಷಿಪಣಿ, ಮೊಬೈಲ್ ಎಸ್ಸೆಮ್ಮೆಸ್ಸು, ತರಂಗ, ಸುಧಾ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಕ್ರಾಂತ ಕರ್ನಾಟಕ, ಮಂಗಳ, ಆರ್ಕುಟ್.. ಹೀಗೆ ಎಲ್ಲಾ ಕಡೆ ಸಾಹಿತ್ಯ ರಾರಾಜಿಸಿದ ನಂತರ, ಈ ಬ್ಲಾಗು ಒಂದು ಬಿಟ್ಟಿದ್ದಕ್ಕೆ ಬಹಳ ಖೇದವಾಗಿತ್ತು. ನವಿಲುಗರಿ ಬ್ರಾಂಡಿನ ಸೋಮನ (ದಯವಿಟ್ಟು ಅವನನ್ನೂ ಕ್ಷಮಿಸಿ ಬಿಡಿ!) ನೆರವಿನಿಂದ “ನೀಲಿಹೂವು” ಎಂಬ ಬ್ಲಾಗು ತೆರೆದು ಆ ಆಸೆಯನ್ನೂ ಪೂರೈಸಿದ್ದೇನೆ.

ಸಿನೆಮಾ, ಅಡುಗೆ, ಪರಿಸರ, ಸಾಹಿತ್ಯ  ಅಂದರೆ ಭಾರಿ ಪ್ರೀತಿ. ಜಯಂತ್ ಕಾಯ್ಕಿಣಿ, ಯಂಡಮೂರಿ, ಬೇಂದ್ರೆ ಬರಹಗಳು ಹೆಚ್ಚು ಇಷ್ಟ. ನಾಗತಿಹಳ್ಳಿ ಚಂದ್ರಶೇಖರ್ , ಸುನಂದಾ ಪ್ರಕಾಶ ಕಡಮೆ ಸಣ್ಣಕತೆಗಳೂ ಖುಷಿಕೊಡುತ್ತದೆ. ಅಪರೂಪಕ್ಕೆ ಪತ್ರಿಕೆಗಳಲ್ಲಿ ಬರೆವ ರಮೇಶ್ ಕೆದಿಲಾಯ ರ ಬರವಣಿಗೆಯೂ ಆಪ್ತ ಅನ್ನಿಸುತ್ತದೆ.

ಈ ಬ್ಲಾಗು ನನ್ನ ಒಳಗೆ ಕುದಿವ ಭಾವಗಳಿಗೆ, ಬರಯಲೇ ಬೇಕೆಂಬ ತುಡಿತಕ್ಕೆ ಶಮನ ನೀಡುತ್ತಿದೆ.

(ಈ ಬ್ಲಾಗಿನಲ್ಲಿರುವ ಎಲ್ಲಾ ಫೋಟೋಗಳೂ ಸ್ವಂತದ್ದಲ್ಲ, ಗೂಗಲ್ ನಿಂದ ಎತ್ತಿಕೊಂಡಿದ್ದು, ಆ ಎಲ್ಲಾ ಫೋಟೋಗ್ರಾಫರುಗಳಿಗೆ, ಪೈಂಟರುಗಳಿಗೆ ನನ್ನ ನಮ್ರ ಥ್ಯಾಂಕ್ಸ್. )

ನೀಲಾಂಜನ ಅವರ ಅಲ್ಲಿದೆ ನಮ್ಮ ಮನೆ

ಅಲ್ಲಿದೆ ನಮ್ಮ ಮನೆ

ಒಳ್ಳೆಯ ಸಂಗತಿಗಳು ನಮಗೆ ಎಲ್ಲೆಡೆಯಿಂದಲೂ ಬರಲಿ – ಋಗ್ವೇದ

Let noble thoughts come to us from all directions – Rig Veda

http://neelanjana.wordpress.com/

ಇಂದಿನಿಂದ ನನ್ನ ಬ್ಲಾಗ್ ನಲ್ಲಿ ಬ್ಲಾಗ್, ಬ್ಲಾಗ್, ಬ್ಲಾಗ್….

ಬ್ಲಾಗ್ ಲೋಕದಲ್ಲಿ ಅಚ್ಚರಿಯೆನಿಸುವಷ್ಟು ಅತ್ಯುತ್ತಮ ಬ್ಲಾಗ್ ಗಳಿವೆ. ಕೆಲವು ಬ್ಲಾಗ್ ಗಳು ದಿನಕ್ಕೆ ಮೂರು ಬಾರಿ ಅಪ್ ಡೇಟ್ ಆದರೆ ಮತ್ತೆ ಕೆಲವು ಮೂರು ತಿಂಗಳಿಗೆ ಒಮ್ಮೆ ಅಪ್ ಡೇಟ್ ಆಗುತ್ತವೆ. ಕೆಲವು ಬ್ಲಾಗ್ ಗಳು 2006, 2005, 2004 ಹೀಗೆ ಅಪ್ ಡೇಟ್ ಆದವುಗಳು ಇಲ್ಲೀ ತನಕ ಅಪ್ ಡೇಟ್ ಆಗಿಲ್ಲ. ಏನೇ ಆದರೂ ಈ ಎಲ್ಲ ಬ್ಲಾಗ್ ಗಳ ಗುಣಮಟ್ಟ ಮಾತ್ರ ಚೆನ್ನಾಗಿದೆ. ಇಂದಿನಿಂದ ನನ್ನ ಬ್ಲಾಗ್ ನಲ್ಲಿ ಕೆಲ ಆಯ್ದ ಬ್ಲಾಗ್ ಗಳ ಲಿಂಕ್ ನೀಡುತ್ತಿದ್ದೇನೆ. ( ಈ ಕುರಿತು ಆಯಾ ಬ್ಲಾಗಿಗರ ಅನುಮತಿ ಪಡೆದಿಲ್ಲವಾದರೂ, ಎಲ್ಲರಿಗೂ ಇದು ಒಪ್ಪಿತವೆಂದು ಭಾವಿಸುತ್ತೇನೆ). ಆಯಾ ಬ್ಲಾಗ್ ಗಳಲ್ಲಿ ಬ್ಲಾಗಿಗರು ತಮ್ಮ ಬಗ್ಗೆ ಹೇಳಿಕೊಂಡಿರುವಷ್ಟನ್ನು ಇಲ್ಲಿ ನೀಡುತ್ತೇನೆ. ತದನಂತರ ಈ ಬ್ಲಾಗ್ ನ ಲಿಂಕ್ ಗಳನ್ನು ಶಾಶ್ವತವಾಗಿ ನನ್ನ ಬ್ಲಾಗ್ ನ ಸೈಡ್ ಬಾರ್ ನಲ್ಲಿ ಹಾಕುತ್ತೇನೆ. ಈಗಾಗಲೇ ಅವಧಿ, ಮೀಡಿಯಾ ಮೈಂಡ್, ಚಂಪಕಾವತಿ, ಮನದ ಮಾತು, ತುಂತುರು ಹನಿಗಳು, ಕಡಲತೀರ, ಮೌನಗಾಳ, ಮೋಟುಗೋಡೆ, ಕಬ್ ಕಾಷಿಯಸ್ ಮೈಂಡ್ ಬ್ಲಾಗ್ ಗಳ ಲಿಂಕ್ ನೀಡಲಾಗಿದೆ. ಇಂದಿನಿಂದ ಹೊಸ ಬ್ಲಾಗ್ ಗಳ ಪರಿಚಯ ಆರಂಭವಾಗಲಿದೆ.

ಇಂದಿನ ಮೊದಲ ಬ್ಲಾಗ್ ರಾಘವೇಂದ್ರ ಹೆಗಡೆಯವರ ರಾಗನೌಕೆ http://raganouke.wordpress.com/

ರಾಗನೌಕೆ

ರಾಗನೌಕೆಯ ಬಗ್ಗೆ….

ರಾಘು, ರಾಘವ ಎಂದೆಲ್ಲ ಆತ್ಮೀಯವಾಗಿ ಕರೆಸಿಕೊಳ್ಳುವ ನನ್ನ ಹೆಸರು ರಾಘವೇಂದ್ರ ಹೆಗಡೆ. ಊರು ಕುಮಟಾದ ಅಳಕೋಡು(ಕತಗಾಲ).ಈಗ ಕುಂದಾಪುರದ MITಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿಧ್ಯಾರ್ಥಿ.ಅದೇನೋ ಹಂಬಲವಾದಂತೆಲ್ಲ ಏನಾದರೊಂದನ್ನು ಗೀಚಿಬಿಡುವುದು ಮೊದಲಿನಿಂದ ಒಂದು ಹವ್ಯಾಸವಾಗಿಬಿಟ್ಟಿದೆ. ಹಾಗೆ ಗೀಚಿದ ಅದೆಷ್ಟೋ ಹಾಳೆಗಳು ಹರಿದು ಕಾಣೆಯಾಗಿಬಿಟ್ಟಿವೆ.

ಒಂದು ಆತಂಕ, ಒಂದು ನೋವು, ಒಂದು ಹರ್ಷ, ಒಲವಿನ ಒಂದು ನಗು,ಒಂದು ಹೂವು, ಒಂದು ಕವಿತೆ, ಒಂದು ದಿಗಿಲು, ಒಂದು ನಿರಾಳ, ತಂಪೆರೆವ ತಂಗಾಳಿ ಎಲ್ಲವೂ ಜೀವನದ ಒಂದೊಂದು ಹನಿ ಎಂದೆಲ್ಲ ಉಸುರುತ ಕಣ್ಣ ತೋಯುವ ಮನದ ಅಲೆಯಿಂದ ಸೋಕಿದ ಅದೆಷ್ಟೋ ಹನಿ ನನ್ನ ಡೈರಿಯಲ್ಲಿ ಮೌನದ ಜೊತೆ ಮೌನವಾಗಿಬಿಟ್ಟಿದೆ. ಅವುಗಳಲ್ಲಿ ಕೆಲವನ್ನಾದರೂ ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ವಿಚಾರದಲ್ಲಿದ್ದಾಗ ಸಿಕ್ಕಿದ್ದೇ ಈ ಬ್ಲಾಗು ಓಲೆ.
***************************************************************
ನನ್ನ ಬರವಣಿಗೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿ, ಉತ್ತೇಜಿಸಿ, ಅಕಾಲದಿ ಚಿರಮೌನತಳೆದ ಆತ್ಮೀಯ ಗೆಳೆಯ ಹಾಗೂ ಗುರುವಾಗಿದ್ದ ತೀರ್ಥರೂಪ ತಂದೆಯವರಿಗೆ ಈ ಬ್ಲಾಗು ಸಮರ್ಪಣೆ.

ನನ್ನ ಬರವಣಿಗೆಗೆ inspiration ಆದ ಎಲ್ಲ ಸ್ನೇಹಿತರಿಗೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕವನಗಳಿಗೆ ಸ್ಪೂರ್ತಿ ನೀಡಿದ ಮಳೆ, ನೀರು, ನೆರಳು, ಬಿಸಿಲು, ಮಬ್ಬು, ಗಾಳಿ, ಧೂಳು ಇವೆಲ್ಲವಕ್ಕೆ ನಾ ಚಿರಋಣಿ.!

***************************************************************