ನಾನು ಮೊನ್ನೆ 8 ಜೇನ್ನೋಣಗಳನ್ನು ಹಿಟ್ ಸಿಂಪಡಿಸಿ ಕೊಂದೆ….

oh my honey bee!!!

ಆಗ ನಾನಿನ್ನೂ ಈಟಿವಿ ಸೇರಿದ್ದ ಪರ್ವಕಾಲ. ನಾಲ್ಕು ತಿಂಗಳು ಹೈದ್ರಾಬಾದ್ ನಲ್ಲಿದ್ದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಫೀಸು. ಟ್ರೇನಿಂಗು, ಕೋಚಿಂಗು, ಮೀಟಿಂಗು ಎಂದು ಬರುತ್ತಿದ್ದ ಸ್ಟಾಫ್ ಗೆ ಉಳಿದುಕೊಳ್ಳಲಿಕ್ಕೆ ಯೂ.ಕೆ. ಗುಡಾ ಎಂಬಲ್ಲಿ ಗೆಸ್ಟ್ ಹೌಸ್ ಇತ್ತು. ಅಲ್ಲೇ ನನ್ನ ವಾಸ್ತವ್ಯ. ಒಂದು ಮನೆಯಲ್ಲಿ ನಾಲ್ಕು ಜನರು ಆರಾಮವಾಗಿ ಇರಬಹುದಾದ ಎಂಟು ಮನೆಗಳಿರುತ್ತಿದ್ದ ನಾಲ್ಕಂತಸ್ತಿನ ಕಟ್ಟಡಗಳು ಅವು. ನಾನು ಹಾಗೂ ಪಣೀಂದ್ರ ಎರಡನೇ ಮಹಡಿಯ ಮನೆಯ ಒಂದು ರೂಂ ನಲ್ಲಿದ್ದರೆ, ಮತ್ತೊಂದು ರೂಂನಲ್ಲಿ ಈಟಿವಿ ಉತ್ತರಪ್ರದೇಶ ಚ್ಯಾನಲ್ ನ ಟ್ರೇನಿ ಆಂಕರ್ ಇರುತ್ತಿದ್ದ. ಹೇಳಿ ಕೇಳಿ ಟ್ರೇನಿ ಆಂಕರ್ ಆತ. ಪ್ರತಿನಿತ್ಯ ನೀಟ್ ಶೇವ್, ಗರಿ ಗರಿ ಇಸ್ತ್ರಿ ಮಾಡಿರುತ್ತಿದ್ದ ಶರ್ಟ್, ಮುಖಕ್ಕೆ ಕ್ರೀಮು, ಮೈಗೆ ಪರ್ಫ್ಯೂಮು ಹೊಡೆದುಕೊಂಡು ಠಾಕುಠೀಕಾಗಿ ಆಫೀಸ್ ಗೆ ಹೋಗುತ್ತಿದ್ದ.

ಇಂತಿಪ್ಪ ಸಂದರ್ಭದಲ್ಲಿ ಅದೊಮ್ಮೆ ನಾವಿರುತ್ತಿದ್ದ ಮನೆಯ ಕಿಟಕಿಗೆ ಜೇನ್ನೋಣಗಳು ಗೂಡು ಕಟ್ಟಲಾರಂಭಿಸಿದವು. ಎರಡು ಮೂರು ದಿನ ಕಳೆಯುತ್ತಿದ್ದಂತೆ ದೊಡ್ಡ ಗೂಡೇ ರೆಡಿಯಾಗಿಬಿಟ್ಟಿತು. ಅವುಗಳಿಂದ ನನಗೆ ಹಾಗೂ ಪಣಿಗೆ ಏನೂ ತೊಂದರೆ ಇರಲಿಲ್ಲವಾದ್ದರಿಂದ, ನಮ್ಮ ಪಾಡಿಗೆ ನಾವು, ಅವುಗಳ ಪಾಡಿಗೆ ಅವು ವಾಸಿಸಲಾರಂಭಿಸಿದೆವು.

ಆದರೆ ನಾಲ್ಕನೆ ದಿನ ರಾತ್ರಿ ಡ್ಯೂಟಿ ಮುಗಿಸಿ ಬರುತ್ತಿದ್ದಂತೆ ನೋಡಿದ್ದೇನು, ನೂರಾರು ಜೇನ್ನೋಣಗಳು ರೂಂನಲ್ಲಿ ಸತ್ತು ಬಿದ್ದಿದ್ದವು. ತಕ್ಷಣ ಕಿಟಕಿ ಬಳಿ ಹೋಗಿ ನೋಡಿದರೆ ಗೂಡಿನ ಅವಶೇಷ ಕಂಡುಬಂತು. ಕೆಳಗೆ ಮತ್ತೆ ನೂರಾರು ಜೆನ್ನೋಣಗಳು ಸತ್ತುಬಿದ್ದಿದ್ದವು. ಯಾಕಂತ ಗೊತ್ತಾಗಲಿಲ್ಲ….ತಕ್ಷಣ ರಿಸೆಪ್ಶನ್ಗೆ ಫೋನ್ ಮಾಡಿದವನೆ “ಕ್ಯಾ ಹುವಾ ಭೈಯ್ಯಾ? ಜೆನ್ನೋಣಗಳು ಲೇದು….” ಎಂದು ಕನ್ನಡ, ಹಿಂದಿ, ಆತಂಕ ವ್ಯಕ್ತಪಡಿಸಿದೆ. ಅದಕ್ಕೆ ರಿಸೆಪ್ಶನಿಸ್ಟ್ ರಾಜು, “ವೋ ತುಮ್ಹಾರಾ ರೂಂ ಮೆ ಹೈನಾ, ಯೂಪಿವಾಲಾ ಹೈನಾ, ವೋ ಕಂಪ್ಲೇಂಟ್ ಕಿಯಾ. ತೋ ಹಮ್ನೆ ಪೆಸ್ಟಿಸೈಡ್ ಮಾರ್ಕೆ ಖತಮ್ ಕಿಯಾ” ( ಅವನಿದ್ದಾನಲ್ಲ ನಿಮ್ಮ ರೂಂ ನಲ್ಲಿ, ಯೂಪಿಯವ. ಅವ ಕಂಪ್ಲೇಂಟ್ ಮಾಡಿದ. ಹೀಗಾಗಿ ಪೆಸ್ಟಿಸೈಡ್ ಹೊಡೆದು ಕೊಂದಿದ್ದೇವೆ) ಎಂದ. ಹೈದ್ರಾಬಾದ್ ನಲ್ಲಿ ಜೇನ್ನೋಣಗಳು ಗೂಡು ಕಟ್ಟಿದರೆ, ಉತ್ತರಪ್ರದೇಶದ ಆಂಕರ್ ಏಕೆ ಕಂಪ್ಲೇಂಟ್ ಮಾಡಬೇಕು ಗೊತ್ತಾಗಲಿಲ್ಲ. ಜೇನ್ನೋಣಗಳ ಶವಗಳನ್ನು ನೋಡುತ್ತ ನಿದ್ದೆ ಹೋದೆ, ನಾಳೆ ಈ ಬಗ್ಗೆ ವಿಚಾರಿಸಬೇಕು ಎಂದುಕೊಂಡು.

ಮಾರನೇ ದಿನ ಯೂಪಿ ಆಂಕರ್ ನನಗೆ ಸಿಗಲಿಲ್ಲ. ಆದರೆ ಪಣಿಗೆ ಸಿಕ್ಕಿದ್ದನಂತೆ. ಪಣಿ ವಿಚಾರಿಸಿದ್ದಕ್ಕೆ, ತಾನು ಟ್ರೇನಿ ಆಂಕರ್. ತನಗೆ ಎಲ್ಲಾದರೂ ಮುಖಕ್ಕೆ ಜೇನ್ನೋಣ ಕಚ್ಚಿದರೆ ತನ್ನ ಜಾಬ್ ಕಥೆ ಮುಗಿಯಿತು. ಅದಕ್ಕೆ ಕಂಪ್ಲೇಂಟ್ ಮಾಡಿದೆ ಎಂದನಂತೆ. ಅಂದು ಆ ಟ್ರೇನಿ ಆಂಕರ್ ಮೇಲೆ ತೀರ ಕೋಪ ಬಂದಿತ್ತು.

ಆದರೆ ವಿಷಯ ನಮ್ಮ ಬುಡಕ್ಕೆ ಬಂದಾಗ ಏನು ಮಾಡುತ್ತೇವೆ ನೋಡಿ. ಈ ಘಟನೆ ಆಗಿದ್ದು 2004 ರಲ್ಲಿ. ಅದಾಗಿ ಆರು ವರ್ಷಗಳ ನಂತರ ಅಂದರೆ 2010 ರ ಮಾರ್ಚ್ ನಲ್ಲಿ ನನ್ನ ಮನೆಗೆ ರಾತ್ರಿ ಅಚಾನಕ್ಕಾಗಿ ಎರಡು ಜೇನ್ನೋಣಗಳು ನುಗ್ಗಿದವು. ಮನೆಯವರೆಲ್ಲ ನೋಡುತ್ತಿರುವಂತೆಯೇ ಎರಡಕ್ಕೆ ಮತ್ತೆರಡು ಬಂದು ಸೇರಿಕೊಂಡವು. ಆ ನಾಲ್ಕಕ್ಕೆ ಮತ್ತೆ ನಾಲ್ಕು ಬಂದು ಸೇರಿಕೊಂಡವು. ಒಟ್ಟು ಎಂಟು ಜೇನ್ನೋಣಗಳು ಮನೆಯ ಡ್ರಾಯಿಂಗ್ ರೂಂನಲ್ಲಿ ಗಿರಕಿ ಹೊಡೆಯತೊಡಗಿದವು. ಮನೆಯಲ್ಲಿ ಆತಂಕ. ಎರಡು ಪುಟ್ಟ ಮಕ್ಕಳಿದ್ದಾವೆ. ಅಕಸ್ಮಾತ್ ಕಚ್ಚಿದರೆ ಏನು ಗತಿ ಎಂದು. ಆ ಜೇನ್ನೋಣಗಳ ಪರ್ಸಾನಾಲಿಟಿ ನೋಡಿಯೇ ಭಯವಾಗುತ್ತಿತ್ತು. ಮಕ್ಕಳಿಗೆ ಹೋಗಲಿ ನನಗೆ ಕಚ್ಚಿದರೆ ಗತಿ ಏನು? ಮುಂದಿನ ಒಂದು ವಾರಕ್ಕೆ ಡೇಟ್ ಕೊಟ್ಟಿದ್ದೇನೆ. ಮುಖ ಊದಿಸಿಕೊಂಡು ಕ್ಯಾಮೆರಾ ಎದುರು ನಿಲ್ಲಲಾದೀತೆ ಎಂಬ ಯೋಚನೆ ನನ್ನ ಮನಸ್ಸಿನಲ್ಲಿ ಸಾಗಿತ್ತು. ನಾನು ಅವುಗಳನ್ನು ಓಡಿಸುವ ಉಪಾಯ ಯೋಚಿಸುತ್ತಿರುವಂತೆ ಅವುಗಳನ್ನು ಕೊಲ್ಲುವ ಹುಕುಂ ಮನೆಯ ಉಳಿದ ಸದಸ್ಯರಿಂದ ಜಾರಿಯಾಯಿತು. ಆದರೆ ಕೊಲ್ಲಲು ನನಗೆ ಮನಸ್ಸಾಗಲಿಲ್ಲ. ಹೀಗಾಗಿ ಅವುಗಳನ್ನು ರೂಂನಿಂದ ಗಡಿಪಾರು ಮಾಡುವ ಪ್ರಯತ್ನ ಶುರುಮಾಡಿದೆ. ಪೇಪರ್ ನಿಂದ ಹೊರಹಾಕುವುದು, ಲೈಟ್ ಆಫ್ ಮಾಡಿ ಹೊರಗಿನ ಲೈಟ್ ಹಾಕಿ ಅಲ್ಲಿ ಹೋಗುವಂತೆ ಮಾಡುವುದು, ಎಲ್ಲವನ್ನೂ ಮಾಡಿದೆ. ಆದರೆ ನನ್ನ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಗಲಿಲ್ಲ. ಫಲ ಸಿಗುವುದು ಹೋಗಲಿ ನನ್ನ ಪ್ರಯತ್ನದಿಂದ ಜೇನ್ನೋಣಗಳು ಸ್ವಲ್ಪ ರಾಂಗ್ ಆದಂತೆ ಬಿಹೇವ್ ಮಾಡತೊಡಗಿದವು.

ಕೊನೆಗೆ ನನ್ನ ಬಳಿ ಯಾವುದೇ ಉಪಾಯವಿರಲಿಲ್ಲ. ಸೀದಾ ಹೋಗಿ ಕಸಬರಿಗೆ ಹಾಗೂ ಹಿಟ್ ತಂದೆ. ಕಸಬರಿಗೆಯಿಂದ ಒಂದೊಂದನ್ನೇ ಹಿಡಿದು, ಹೊಡೆದು, ಹಿಟ್ ಸಿಂಪಡಿಸಿ ಎಂಟೂ ಜೇನ್ನೋಣಗಳನ್ನು ಕೊಂದು ಹಾಕಿದೆ. ಅಂದು ಯಾಕೋ ಯೂಪಿ ಆಂಕರ್ ನೆನಪಾದ…..ಅದಾದ ನಂತರ ಜೇನುತುಪ್ಪವನ್ನು ನೆಕ್ಕುವ ಧೈರ್ಯ ನನಗೆ ಇದುವರೆಗೂ ಆಗಿಲ್ಲ……