ಕಳ್ಳನನ್ನು ಹಿಡಿಯೋಕ್ಕಾಗಲ್ಲ…..ಎಸ್ ಆರ್ ನಾಯಕ್ ಬಂದು ಬಿಡ್ತಾರೆ…ಹಾಂ…..

ಆಗಷ್ಟೆ 11.30 ಆಗಿತ್ತು. ಸುಗುಣಿಯ ಅತ್ತೆ 80 ವರ್ಷದ ಪದ್ಮತ್ತೆ ಹಾಲ್ ನಲ್ಲಿ ಮಲಗಿಕೊಂಡಿದ್ದರು. ಗಂಡ ರವಿವರ್ಣ ಅದಾಗಲೇ ಆಫೀಸ್ ಗೆ ಹೋಗಿಯಾಗಿತ್ತು. ತನ್ನ ಮಕ್ಕಳ ಜೊತೆ ಪಕ್ಕದ ಮನೆಯ ಮಕ್ಕಳು ತಮ್ಮ ರೂಂ ನಲ್ಲಿ ಆಟವಾಡಿಕೊಳ್ಳುತ್ತಿದ್ದವು. ನಿತ್ಯವೂ ಹತ್ತುಗಂಟೆಗೆಲ್ಲ ಆಫೀಸ್ ಗೆ ಹೋಗುತ್ತಿದ್ದ ಸುಗುಣಿ ಮಾತ್ರ ಅಂದು ರಜೆ ತೆಗೆದುಕೊಂಡಿದ್ದಳು. ಆಗಷ್ಟೇ ಬಟ್ಟೆ ಒಗೆದು ಟೆರೆಸ್ ಮೇಲೆ ಒಣಗಿ ಹಾಕಿ ಹಿಂದಿನ ಬಾಗಿಲಿನಿಂದ ಮನೆಯೊಳಗೆ ಬಂದಳು.

ನೋಡಿದರೆ…………….,!!!!!!

ಅವಳ ಬೆಡ್ ರೂಂ ನಿಂದ ಸುಮಾರು 15 ವರ್ಷದ ಹುಡುಗನೊಬ್ಬ ಕೈಯಲ್ಲಿ ಇವರ ಬೀರುವಿನ ಡ್ರಾವರ್ ಹಿಡಿದು ಮನೆಯ ಹೊರಗೆ ಓಡಲು ಯತ್ನಿಸುತ್ತಿದ್ದ. ಒಂದು ಕ್ಷಣ ಸುಗುಣಿ ಹೆದರಿಕೊಂಡರೂ, ಮರುಕ್ಷಣವೇ ಎಚ್ಚೆತ್ತು ಸೂರು ಹಾರಿಹೋಗುವಂತೆ ಕಿರುಚಿಕೊಳ್ಳತೊಡಗಿದಳು. ಅಕ್ಕಪಕ್ಕದವರು ಎಚ್ಚೆತ್ತರು. 15 ರ ಪೋರ ಡ್ರಾವರ್ ಹಿಡಿದು ಮನೆಯ ಹೊರಗೆ ಓಡತೊಡಗಿದ. ಸುಗುಣಿ ಬಿಡಲಿಲ್ಲ. ಬೆನ್ನಟ್ಟಿದ್ದಳು. ಮನೆಯ ಹೊರಗೆ ಹೋದ ಪೋರ ದೂರದಲ್ಲಿ ತನ್ನ ಮತ್ತೊಬ್ಬ ಕಳ್ಳ ಮಿತ್ರ ನಿಲ್ಲಿಸಿಕೊಂಡಿದ್ದ ಬೈಕ್ ಹತ್ತಬೇಕು….ಅಷ್ಟರಲ್ಲಿ ಎದುರಿನಿಂದ ಆಕಸ್ಮಾತ್ತಾಗಿ ಬಂದ ವ್ಯಕ್ತಿಯೊಬ್ಬ ಈ 15 ರ ಪೋರಕಳ್ಳನಿಗೆ ಡಿಕ್ಕಿಹೊಡೆದುಬಿಟ್ಟ. ಕೈಯಲ್ಲಿದ್ದ ಡ್ರಾವರ್ ಧಡ್ ಅಂತ ಕೆಳಗೆ ಬಿತ್ತು. ಡ್ರಾವರ್ ನಿಂದ ಬೆಳ್ಳಿ, ಬಂಗಾರದ ಬಳೆ, ಸರ, ಉಂಗುರ, ಇತರ ಆಭರಣಗಳು, ದೇವರ ಮೂರ್ತಿಗಳು, ಸುಮಾರು 20 ಸಾವಿರ ಕ್ಯಾಶ್ ಎಲ್ಲವೂ ಹಾರಿ ರಸ್ತೆಯ ಮೇಲೆ ಬಿತ್ತು. ಅದನ್ನು ಹೆಕ್ಕಿಕೊಳ್ಳುತ್ತ ಕುಳಿತರೆ ತಾನು ಜನರ ಕೈಯಲ್ಲಿ ಸಿಕ್ಕಿ ಧರ್ಮದೇಟು ತಿಂದು ಪೋಲಿಸರ ಕೈಗೆ ಸಿಗುವುದು ಸ್ಪಷ್ಟ ಎಂದರಿತ ಪೋರ ತನ್ನ ಮಿತ್ರನ ಬೈಕ್ ಏರಿ ಮಾಯವಾಗಿಬಿಟ್ಟ. ಸುಗುಣಿ ಹಾಗೂ ಆಕೆಯ ನೆರೆಹೊರೆಯವರು  ಹಾಡುಹಗಲೇ ಆದ ಈ ಕಳ್ಳತನದ ಪ್ರಯತ್ನದಿಂದ ಶಾಕ್ ಗೆ ಒಳಗಾಗಿದ್ದರು. ಸುಗುಣಿ ಮನೆಯ ಲ್ಯಾಂಡ್ ಲೈನ್ ನಿಂದ ತಕ್ಷಣ ತನ್ನ ಗಂಡನಿಗೆ ಫೋನ್ ಮಾಡಿ ನಡೆದ ವಿಷಯವನ್ನು ಹೇಳಿದಳು. ರವಿವರ್ಣ ತಕ್ಷಣ ಬಂದ. ಯಾವುದಾದರೂ ಸಾಮಾನು ಕದಿಯಲಾಗಿದೆಯೆ ಎಂದು ಇಬ್ಬರೂ ಮನೆ ಪರಿಶೀಲಿಸಿದರು. ದೇವರ ದಯದಿಂದ ಕಳ್ಳನ ಪಾಲಾಗಲಿದ್ದ ಎಲ್ಲವೂ ವಾಪಸ್ ಸಿಕ್ಕಿತ್ತು. ಆದರೆ ಸುಗುಣಿಯ ಮೊಬೈಲ್ ಮಾತ್ರ ಕಳ್ಳ ಎತ್ತೊಯ್ದಿದ್ದ. ರವಿವರ್ಣ ಅಂದ, “ಕಷ್ಟಪಟ್ಟು ದುಡಿದ ಹಣ ಎಲ್ಲೂ ಹೋಗೋದಿಲ್ಲ…ಸುಗುಣಿ. ಐ ಆಮ್ ಪ್ರೌಡ್ ಆಫ್ ಯು….ಇದನ್ನ ಇಲ್ಲಿಗೇ ಬಿಡೋದು ಬೇಡ. ಬಾ ಪೋಲಿಸ್ ಕಂಪ್ಲೆಂಟ್ ಕೊಡೋಣ….ಹೇಗೂ ನಿನ್ನ ಮೊಬೈಲ್ ಕಳ್ಳನ ಬಳಿಯಿದೆಯಲ್ಲ….ಪೋಲಿಸರಿಗೆ ಟ್ರಾಕ್ ಮಾಡಲು ಈಝಿ ಆಗತ್ತೆ”.

ಇಬ್ಬರೂ ಪೋಲಿಸ್ ಠಾಣೆಗೆ ಹೋಗಿ ಇನ್ಸಪೆಕ್ಟರ್ ರನ್ನು ಸಂಧಿಸಿ. ನಡೆದ ಎಲ್ಲವನ್ನೂ ಕೂಲಂಕುಷವಾಗಿ ವಿವರಿಸಿದರು. ರೈಟರ್ ಇವರ ಸ್ಟೇಟ್ ಮೆಂಟ್ ಕೇಳಿಕೊಂಡ. ಇನ್ಸಪೆಕ್ಟರ್ ಅಂದರು,,,,”ಸುಗುಣಿಯವರೆ ನಿಮ್ಮ ಧೈರ್ಯ ಮೆಚ್ಚಬೇಕು. ನೀವು ಪೋಲಿಸ್ ಕೆಲಸಕ್ಕೆ ಕೂಡ ನೆರವಾಗಿದ್ದೀರಿ. ಕಳೆದ 2 ತಿಂಗಳಿನಿಂದ ನಮಗೆ ಸುಮಾರು 10-15 ಕಂಪೆಂಟ್ ಗಳು ಬಂದಿವೆ, ನಿಮ್ಮದೇ ಏರಿಯಾದಿಂದ. ನನ್ನ ಮನೆಯಲ್ಲಿ ಲ್ಯಾಪ್ ಟಾಪ್ ಕಾಣುತ್ತಿಲ್ಲ, ದುಡ್ಡು ಮಾಯ, ಮೊಬೈಲ್ ಕಾಣೆಯಾಗಿದೆ. ದೇವರ ಮೂರ್ತಿ ಕಾಣುತ್ತಿಲ್ಲ ಎಂದು ಜನ ಬಂದು ಕಂಪ್ಲೆಂಟ್ ಕೊಡುತ್ತಿದ್ದರು. ನಮಗೆ ಈ ಕೇಸ್ ಗಳನ್ನು ಬಿಡಿಸುವುದೇ ತಲೆನೋವಾಗಿ ಬಿಟ್ಟಿತ್ತು. ವಸ್ತುಗಳು ಹೇಗೆ ಮಾಯವಾಗುತ್ತಿವೆ ಎಂದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಕಳ್ಳತನದ ಯಾವುದೇ ಕುರುಹು ಇರುತ್ತಿರಲಿಲ್ಲ. ಕೆಲವು ಮನೆಗಳಲ್ಲಿ ಅಂತೂ ಇದರಿಂದಾಗಿ ಮನೆಯ ಸದಸ್ಯರ ನಡುವೆಯೇ ಜಗಳವಾಗಿಬಿಟ್ಟಿತ್ತು. ಹಾಡುಹಗಲೇ ಮನೆಗೆ ನುಗ್ಗಿ ಕದಿಯುತ್ತಿದ್ದಾರೆ ಎಂದು ಈಗ ಗೊತ್ತಾಯಿತು ನೋಡಿ. ಥ್ಯಾಂಕ್ಯು ವೆರಿ ಮಚ್”.

“ಯೂ ಆರ್ ವೆಲ್ ಕಂ ಸರ್….ಆದ್ರೆ ಈಗ ನನ್ನ ಹೆಂಡತಿಯ ಮೊಬೈಲ್ ಕಳ್ಳನ ಕೈಯಲ್ಲಿದೆ. ಅವನು ಫೋನ್ ಕೂಡ ರಿಸೀವ್ ಮಾಡುತ್ತಿದ್ದಾನೆ. ಕರೆಮಾಡಿದವರ ಜೊತೆ ಕೆಟ್ಟಾಕೊಳಕು ಭಾಷೆಯಲ್ಲಿ ಮಾತನಾಡುತ್ತಿದ್ದಾನೆ. ಆತನನ್ನು ಹಿಡಿಯಬಹುದಲ್ವ ಸರ್?”

“ನೋಡಿ. ಮಿ. ರವಿವರ್ಣ, ಕಳ್ಳ 15 ವರ್ಷದ ಪೋರ ಅಂತೀರಿ. 18 ವರ್ಷದ ಯಾರೇ ಆಗಲಿ, ಕಾನೂನಿನ ದೃಷ್ಟಿಯಲ್ಲಿ ಅವರು ಮಕ್ಕಳು. ಅವರ ಅಪರಾಧಗಳಿಗೆ ಶಿಕ್ಷೆಯಿರುವುದಿಲ್ಲ. ನಾವು ಹಿಡಿದರೂ ಸರ್ಕಾರ ಅವರನ್ನು ವೀಕ್ಷಣಾಲಯದಲ್ಲಿ ಇಟ್ಟು ಸಕಲ ಸೌಲಭ್ಯಗಳನ್ನು ನೀಡಿ ಮತ್ತೆ ಹೊರಗೆ ಬಿಟ್ಟು ಬಿಡುತ್ತದೆ. ಯಾಕೆ ಸುಮ್ಮನೆ ತ್ರಾಸು ಹೇಳಿ? ಹೇಗೂ ನಿಮ್ಮ ಸಾಮಾನು ನಿಮಗೆ ದೊರಕಿದೆಯಲ್ಲ….ಇನ್ಯಾಕೆ ಚಿಂತೆ?”

“ಅದ್ದೇಗೆ ಸಾರ್ ಬಿಟ್ಟುಬಿಡೋದು? ಅವನು ಆಕಸ್ಮಾತ್ ನನ್ನ ಹೆಂಡತಿ, ತಾಯಿ ಅಥವಾ ಮಕ್ಕಳಿಗೇನಾದರೂ ಮಾಡಿದ್ದರೆ. ಏನು ಗತಿಯಾಗುತ್ತಿತ್ತು ಸಾರ್….ಇವತ್ತು ನಮ್ಮ ಮನೆಗೆ ಬಂದಿದ್ದಾನೆ. ನಾಳೆ ಇನ್ಯಾರದೋ ಮನೆಗೆ ನುಗ್ಗುತ್ತಾನೆ” ಎನ್ನುತ್ತ ಆತನನ್ನು ಹಿಡಿಯಲೇಬೇಕೆಂದು ಹಟ ಹಿಡಿದ ರವಿವರ್ಣ.

ಸಾಕಷ್ಟು ಹೊತ್ತು ಚರ್ಚೆ ನಡೆಯಿತು. ಕೊನೆಗೆ ಪೋಲಿಸ್ ಇನ್ಸಪೆಕ್ಟರ್ ಬಾಯಿಬಿಟ್ಟ….

“ನೋಡಿ, ರವಿವರ್ಣ, ನಾವು ಈ ಮಕ್ಕಳನ್ನು ಹಿಡಿಯುವ ಹಾಗೇ ಇಲ್ಲ. ಅವರ ಕೂದಲು ಕೊಂಕಿದರೂ ಈ ಮಾನವ ಹಕ್ಕುಗಳ ಆಯೋಗ ಅಂತಿದೆಯಲ್ಲ….ಅದರ ಚೀಫ್ ಎಸ್ ಆರ್ ನಾಯಕ್ ಬಂದುಬಿಡ್ತಾರೆ. ಮಾನವ ಹಕ್ಕುಗಳ ಹನನ ಆಗ್ತಿದೆ ಅಂತ ಬೊಬ್ಬೆ ಹಾಕ್ತಾರೆ. ಮೀಡಿಯಾನ್ನ ಕರೆಸಿ ನನ್ನ ತೋರಿಸ್ತಾರೆ. ನನ್ನ ಶೂಟ್ ಮಾಡಿ ಮೀಡಿಯಾದವ್ರು ರೆಡ್ ಸರ್ಕಲ್  ಒಳಗೆ ಸ್ಕ್ರೀನ್ ಮೆಲೆ ನನ್ನ ತೋರಿಸ್ತಾರೆ. ಎಲ್ಲ ಬೇಕಾ ಹೇಳಿ…..ಹಾಂ…..ಬಿಡಿ. ಬಿಡಿ. …..”

ರವಿವರ್ಣ, ಸುಗುಣಿಗೆ ಏನು ಹೇಳಬೇಕೋ ಗೊತ್ತಾಗದೆ ಹಾಗೇ ಕುಳಿತರು.

(ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆ)

ಮನಸಿನ ಮರ್ಮರ

ಮನಸಿನ ಮರ್ಮರ

ನನ್ನ ಕುರಿತು ನಾ ಏನೆಂದು ಹೇಳಲಿ?

ಹೆಸರು ವಿಜಯ್ ರಾಜ್ ಕನ್ನಂತ. ನನ್ನ ಬಗ್ಗೆ ಹೇಳಲಿ ಏನಂತ?

ಸಾಹಿತ್ಯ ಸಂಗೀತದ ಕುರಿತು ಆಸಕ್ತಿ ಇದೆ…ಪುರುಸೊತ್ತು ಇದ್ರೆ ತೋಚಿದ್ದು ಗೀಚೋ ಪ್ರವೃತ್ತಿನೂ ಇದೆ.

ನಾ ಹುಟ್ಟಿದ್ದು ಹಳ್ಳಿಹೊಳೆಯಲ್ಲಿ….ಬೆಂಗಳೂರು ಸೇರಿದ್ಡು ಕೆಲಸದ ಹೆಳೆಯಲ್ಲಿ.. ಕೆಲಸ ಮಾಡ್ತಾ ಇರೋದು ಬಸವನಗುಡಿ ಬಳಿಯಲ್ಲಿ…

ಸಧ್ಯಕ್ಕೆ ಇಷ್ಟು ಸಾಕಲ್ವೇ…?

http://vijaykannantha.wordpress.com/