ಕ್ಯಾಮೆರಾ ಕಂಡೊಡನೆ ಶೋಕ ನಾಪತ್ತೆ

(ಅಕ್ಟೋಬರ್ 22, 2009 ರಂದು ಪ್ರಕಟವಾದ ಲೇಖನ).

ಮಾತಾಡ್ ಮಾತಾಡ್ ಮಲ್ಲಿಗೆ

ಡಾ. ರಾಜ್ ನಿಧನರಾಗಿ ಒಂದು ವರ್ಷವಾಗಿತ್ತು. ಮೊದಲ ಪುಣ್ಯತಿಥಿಯ ಮುನ್ನಾದಿನ ಕರ್ಟನ್ ರೇಸರ್ ಸ್ಟೋರಿ ಮಾಡಲು ರಾಜ್ ಸಮಾಧಿಗೆ ತೆರಳಿದ್ದೆ. ಸಮಾಧಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಯತಿರಾಜ್ ಎಂದಿನಂತೆ ರಾಜ್ಯದ ವಿವಿಧ ಕಡೆಗಳಿಂದ ಬರುತ್ತಿರುವ ಜನತೆ, ಅಂಕಿ-ಸಂಖ್ಯೆ, ಸಮಾಧಿಗೆ ಇನ್ನೂ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹೀಗೆ ಮಾತನಾಡುತ್ತ ಯತಿರಾಜ್, “ಸುಘೋಷ್, ಕಳೆದ ಒಂದು ತಿಂಗಳ ಹಿಂದೆ ಕೋಲಾರದಿಂದ ಒಬ್ಬ ಮನುಷ್ಯ ಬಂದಿದ್ದಾನೆ. ಹಳದಿ-ಕೆಂಪು ಬಣ್ಣದ ಸೈಕಲ್ ತುಳಿಯುತ್ತ ಇಲ್ಲೇ ಸಮಾಧಿಯ ಬಳಿಯೇ ಸುತ್ತಾಡುತ್ತಿರುತ್ತಾನೆ. ಡಾ. ರಾಜ್ ಅಭಿಮಾನಿಯಂತೆ. ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದಾನಂತೆ. ಆದರೆ ಅವರು ತೀರಿಕೊಂಡಾಗಿನಿಂದ ಮನಸ್ಸಿಗೆ ತೀರ ನೋವಾಗಿ ಅದರಿಂದ ಹೊರಬರಲಾರದೆ ಮೌನವೃತ ಕೈಗೊಂಡಿದ್ದಾನಂತೆ. ಹೀಗೆ ಮೌನವೃತ ಕೈಗೊಳ್ಳುವದರ ಬದಲು ಅಣ್ಣಾವ್ರ ನೆನಪಿನಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹದ್ದೇನಾದರೂ ಮಾಡು ಎಂದರೆ ಕೇಳಲೊಲ್ಲ. ಅವನ ಮೇಲೆ ಸ್ಟೋರಿ ಮಾಡಬಹುದು” ಎಂದರು. ಎಲಾ..ಎಲಾ…ಡಾ. ರಾಜ್ ತೀರಿಕೊಂಡಿದ್ದಕ್ಕೆ ಈ ಪಾರ್ಟಿ ಮೌನವೃತ ಮಾಡುತ್ತಿದ್ದಾನಲ್ಲ. ‘ಒಳ್ಳೆ’ ಸ್ಟೋರಿ ಮಾಡಬೇಕು ಎಂದುಕೊಂಡು ಆತನನ್ನು ಕರೆಸಿದೆ. ಕ್ಯಾಮೆರಾಮನ್ ಗೆ ಸ್ಟೋರಿ ಬ್ರೀಫ್ ಮಾಡಿ ಆತ ಸಮಾಧಿಯ ಬಳಿ ಸೈಕಲ್ ನಡೆಸುವುದು, ನಡೆದುಕೊಂಡು ಬರುವುದು, ಸಮಾಧಿ ಬಳಿ ಅಣ್ಣಾವ್ರ ಭಾವಚಿತ್ರವನ್ನು ನೋಡುತ್ತ ಜೋಲು ಮುಖ ಹಾಕಿಕೊಂಡು ಕುಳಿತಿರುವುದು ಹೀಗೆ ಹಲವು ಶಾಟ್ ಗಳನ್ನು ತೆಗೆಸಿಕೊಂಡೆ. ಸರಿ ಬೈಟ್ ಗಾಗಿ ನಿಂತುಕೊಂಡಾಗಲೇ ಸಮಸ್ಯೆಯಾಗಿದ್ದು. ಪಾರ್ಟಿ ಮೌನವೃತಧಾರಿ. ಹಾಗಾದರೆ ಬೈಟ್ ಹೇಗೆ ತೆಗೆಯುವುದು. ಇದಕ್ಕೆ ಮತ್ತೆ ಯತಿರಾಜನೇ ಮಧ್ಯಸ್ಥಿಕೆ ವಹಿಸಿದ. ಆತನನ್ನೂ, ಯತಿರಾಜ್ ನನ್ನು ನಿಲ್ಲಿಸಿ ಡಬಲ್ ಫ್ರೇಮ್ ಇಡಲು ಹೇಳಿದೆ. ನಾನು ಪ್ರಶ್ನೆ ಕೇಳುವುದು, ಮೌನವೃತಧಾರಿ ಕೈಸನ್ನೆ, ಬಾಯಿ ಸನ್ನೆ ಮಾಡುವುದು, ಯತಿರಾಜ್ ಅದನ್ನು ಅರ್ಥಮಾಡಿಕೊಂಡು ಮಾತನಾಡುವುದು ಹೀಗೆ ಸಾಗಿತ್ತು ನಮ್ಮ ಬೈಟ್ ನ ವೈಖರಿ. ನಾನು ಕೇಳಿದ್ದಕ್ಕೆ ಆ ಪಾರ್ಟಿ ಏನೇನೋ ಕೈಸನ್ನೆ ಮಾಡುತ್ತಿದ್ದ. ಅದು ಯತಿರಾಜನಿಗೂ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತನಿಗೆ ಅರ್ಥವಾಗಿದ್ದನ್ನು ಆತ ಬಂದಷ್ಟು ಹೇಳುತ್ತಿದ್ದ. ಈ ತಮಾಷೆ ನೋಡುತ್ತಿದ್ದ ಜನ ಸುತ್ತಲೂ ಜಮಾಯಿಸಿದ್ದರು. ನಂತರ ಅದ್ಯಾಕೋ ಆಸಾಮಿಗೆ ಕ್ಯಾಮೆರ ಮುಂದೆ ಹೀಗೆಲ್ಲ ಮಾಡುವುದು ತೀರ ಬೇಜಾರು ಎನಿಸಿರಬೇಕು. ಒಂದು ಸಂದರ್ಭದಲ್ಲಿ ತಾನು ಮಾಡಿದ ಕೈಸನ್ನೆಯನ್ನು ಯತಿ, ಸರಿಯಾಗಿ ಇಂಟಪ್ರಿಟ್ ಮಾಡುತ್ತಿಲ್ಲ ಎಂದು ಬೇಸರಿಸಿ ಧಡಾರ್ ಎಂದು ಮಾತನಾಡಲು ಆರಂಭಿಸಿಬಿಟ್ಟ. ಹ್ಹೆ..ಹ್ಹೆ..ಹ್ಹೆ….ಎಂದು ಮೊದಲು ನನ್ನ ಕ್ಯಾಮರಾಮನ್ ನಗಲಾರಂಭಿಸುತ್ತಿದ್ದಂತೆ ಸುತ್ತಲಿದ್ದ ಜನ ಹೋಎಂದು ಕಿರುಚಿದರು. ನನಗೆ ಏನೂ ಮಾಡಲು ತೋಚದೆ, ರಾಜ್ ಅಭಿಮಾನಿ ಮೌನವೃತಧಾರಿಯಾದ ಸ್ಟೋರಿಗೆ ಎಳ್ಳು ನೀರು ಬಿಟ್ಟು ಕಾರ್ ಏರಿದೆ.ಅಣ್ಣಾವ್ರ ಹೆಸರಿನಲ್ಲಿ ಏನೆನೆಲ್ಲ ಮಾಡುತ್ತಾರೆ ಅಲ್ವಾ?

ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ?

(ಈ ಲೇಖನ ಪ್ರಕಟವಾಗಿದ್ದು ಅಕ್ಟೋಬರ್, 29 2009 ರಂದು)

what's my fault?

ಈ ಲೇಖನ ಓದುವ ಮೊದಲು ನಿಮ್ಮಲ್ಲಿ ಒಂದು ರಿಕ್ವೆಸ್ಟ್. ಲೈಂಗಿಕತೆ, ಕಾಮ, ಕಾಂಡೋಮ್  ಇತ್ಯಾದಿಗಳ ಬಗ್ಗೆ ಮಾತನಾಡಲು, ಚರ್ಚಿಸಲು ನಿಮಗೆ ಮುಜುಗರ ಎನಿಸುತ್ತದೆಯಾದರೆ ದಯವಿಟ್ಟು ಲೇಖನ ಓದಬೇಡಿ. ಈ ಲೇಖನ ಕೇವಲ ‘ಪುರುಷರಿಗೆ’ ಮಾತ್ರ. ಅಂದ ಹಾಗೆ ಭಾರೀ ಸೀಕ್ರೆಟ್ ಏನನ್ನೂ ಬರೆಯಲು ಹೋಗುತ್ತಿಲ್ಲ ಮತ್ತೆ ಹಾಂ…

ಜನಸಂಖ್ಯಾ ನಿಯಂತ್ರಣಕ್ಕಾಗಿ, ಸೇಫ್ ಸೆಕ್ಸ್ ಗಾಗಿ, ಏಡ್ಸ್ ತಡೆಗಟ್ಟುವುದಕ್ಕಾಗಿ, ಮಕ್ಕಳ ನಡುವಿನ ಅಂತರಕ್ಕಾಗಿ, ಹೀಗೆ ಹಲವು ಕಾರಣಗಳಿಗೆ ಸರ್ಕಾರ ನೇರವಾಗಿ ಕಾಂಡೋಮ್ ಪ್ರಮೋಟ್ ಮಾಡುತ್ತದೆ.(‘ಮಾತಾಡೋನೇ ಮಹಾಶೂರಆಡ್ ನೆನಪಾಯಿತೆ?). ಅಷ್ಟೇ ಅಲ್ಲ ವೈದ್ಯರು, ಆಸ್ಪತ್ರೆಗಳು, ತಜ್ಞರು ಕೂಡ ಕಾಂಡೋಮ್ ಬಳಕೆಯನ್ನು ಪ್ರೋತ್ಸಾಹಿಸುತ್ತಾರೆ. ಅನೇಕ ಶೌಚಾಲಯಗಳಲ್ಲಿ ಕಾಂಡೋಮ್ ವೆಂಡಿಂಗ್ ಮಷಿನ್ ಗಳನ್ನು ಸರ್ಕಾರವೇ ಇರಿಸಿದೆ. ಅಷ್ಟೇ ಅಲ್ಲ ಹಲವು ಕಡೆಗಳಲ್ಲಿ ಕಾಂಡೋಮ್ ಅನ್ನು ಉಚಿತವಾಗಿ ಹಂಚಲಾಗುತ್ತದೆ. (ಉಚಿತವಾಗಿ ಹಂಚುವ ಕಾಂಡೋಮ್ ಗಳ ಗುಣಮಟ್ಟದ ಚರ್ಚೆ ಸಧ್ಯ ಬೇಡ) ನಾಕೋ, ಕೆಎಸ್ಎಪಿಎಸ್ ನಂತಹ ಸಂಸ್ಥೆಗಳಂತೂ ಎಚ್ಐವಿ ತಡೆಗಟ್ಟಲು ನಡೆಸುವ ಪ್ರಚಾರದಲ್ಲಿ ಕಾಂಡೋಮ್ ಬಳಕೆಗೆ ಅಗ್ರ ಸ್ಥಾನ ನೀಡುತ್ತವೆ.

ಸನ್ನಿವೇಶ ಹೀಗಿದ್ದರೂ ನಮ್ಮ ಮೆಡಿಕಲ್ ಶಾಪ್ ನಡೆಸುವವರು ಮಾತ್ರ ಇನ್ನೂ ಯಾವುದೋ ಓಬಿರಾಯನ ಕಾಲದಲ್ಲಿದ್ದಾರೆ ಎನಿಸುತ್ತದೆ. ಮೆಡಿಕಲ್ ಶಾಪ್ ನವರಷ್ಟೇ ಅಲ್ಲ, ಗ್ರಾಹಕರು ಕೂಡ.

ಕಾಂಡೋಮ್ ಖರೀದಿ ಎಂಬುದು ಬಹುತೇಕ ಪುರುಷರಿಗೆ ಒಂದು ದೊಡ್ಡ ಸಮಸ್ಯೆ. ಇತರ ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳಾ ಗ್ರಾಹಕರು ಇಲ್ಲದಿರುವ ಸಂದರ್ಭದಲ್ಲಿ, ಮೆಡಿಕಲ್ ಶಾಪ್ ನಲ್ಲಿ ಮಹಿಳಾ ಸಹಾಯಕಿಯರು ಇಲ್ಲವೆಂದು ಖಾತ್ರಿ ಪಡಿಸಿಕೊಂಡು ಹೋಗಬೇಕು. ಮಾಲ್ ಗಳಲ್ಲಿ ಕೊಳ್ಳುವುದಾದರೋ, ಅದು ಬೇರೊಂದು ಸಮಸ್ಯೆ. ಆ ಕಾಂಡೋಮ್ ಗಳನ್ನು ಒಳ್ಳೆ ಚಾಕಲೇಟ್ ಪೆಪ್ಪರಮಿಂಟ್ ಇಟ್ಟಹಾಗೆ ಧಗ್ ಅಂದ ಎಲ್ಲರೆದುರೇ ಪ್ರದರ್ಶನಕ್ಕಿಟ್ಟುಬಿಟ್ಟಿರುತ್ತಾರೆ. ಆ ಕಡೆ ಈ ಕಡೆ ನೋಡಿ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಸೆಕೆಂಡಿನ ಸಾವಿರದ ಒಂದನೇ ಭಾಗದ ಸ್ಪೀಡಿನಲ್ಲಿ ಧಡಕ್ಕನೇ ಕೈ ಹಾಕಿ ಕಾಂಡೋಮ್ ಪ್ಯಾಕೆಟ್ಟನ್ನು ಬುಟ್ಟಿಗೆ ಎಸೆಯಬೇಕು. ಈ ಎಲ್ಲ ಆಧ್ವಾನದಲ್ಲಿ ಆ ಕಾಂಡೋಮ್ ನ ಬ್ರಾಂಡ್ ಯಾವುದು, ಅದರ ಸೈಜ್ ಏನು (ಏನು ಕಾಂಡೋಮ್ ಗಳಲ್ಲಿಯೂ ಸೈಜ್ ಇರುತ್ತಾ?), ಕಲರ್ ಏನು, ಅದು ಆಯಿಲ್ ಲೂಬ್ರಿಕೇಟೆಡ್ಡಾ ಅಥವಾ ಡ್ರೈ ಕಾಂಡೋಮಾ, ಬೆಲೆ ಎಷ್ಟು, ಪ್ಯಾಕೆಟ್ಟಿನಲ್ಲಿ ಎಷ್ಟು ಕಾಂಡೋಮ್ ಗಳಿವೆ ಇತ್ಯಾದಿಯೆಲ್ಲ ನೋಡಲು ಸಮಯವೆಲ್ಲಿರುತ್ತದೆ. ಹೀಗೆ ಸಾಗುತ್ತದೆ ಪುರುಷರ ಸಮಸ್ಯೆಗಳು.

ಇನ್ನೂ ಮೆಡಿಕಲ್ ಶಾಪ್ ನಲ್ಲಿ ಖರೀದಿಸುವುದಂತೂ ಸಾಹಸವೇ ಸರಿ. ಯಾರೂ ಇಲ್ಲದಿದ್ದಾಗ ಹೋಗಿ ಕೇಳಿದರೂ, ಆ ಆಸಾಮಿ ನಾವು ಕಾಂಡೋಮ್ ಕೇಳುತ್ತಿದ್ದಂತೆಯೆ ದೆವ್ವ ಬಡಿದಂತಾಡುತ್ತಾನೆ. ಆ ಬ್ರಾಂಡ್ ಇದೆಯಾ, ಈ ಬ್ರಾಂಡ್ ಇದೆಯಾ ಎಂದು ನೀವು ಕೇಳಲು ಆರಂಭಿಸಿದಿರೋ, ಸಾರ್ ಒಳಗೆ ಬನ್ನಿ. ಇಲ್ಲಿ ಡ್ರಾವರ್ ನಲ್ಲಿ ಸಾಕಷ್ಟು ಇದೆ. ಬೇಕಾದ್ದು ನೋಡಿ ಎಂದು ನಿಮ್ಮನ್ನು ನೇರವಾಗಿ ಅಂಗಡಿಯೊಳಗೆ ಆಹ್ವಾನಿಸಿ ಬಿಡುತ್ತಾನೆ. ಕೆಲವು ಮೆಡಿಕಲ್ ಶಾಪ್ ನವರಂತೂ ನಾವು ಕಾಂಡೋಮ್ ಕೇಳಿ ಮಹಾಪರಾಧ ಮಾಡಿಬಿಟ್ಟಿದ್ದೇವೆ ಎಂಬಂತೆ ನಮ್ಮನ್ನು ನೋಡುತ್ತಾರೆ. ಅಲ್ರೀ ಮಹಾರಾಯರೇ, ನಿಮಗೆ ಅದನ್ನು ಮಾರಲು ಮುಜುಗರ ಎಂದರೆ, ಅಂಗಡಿಯಲ್ಲಿ ಯಾಕ್ರೀ ಇಟ್ಟುಕೊಳ್ತೀರಿ?

ಈ ಎಲ್ಲ ರೀತಿಯ ಕನ್ ಪ್ಯೂಶನ್ ಗಳಾಗುವುದಕ್ಕೆ ಬಹುಶಃ ಇನ್ನೂ ಕಾಂಡೋಮ್ ಬಗ್ಗೆ ಇರುವ ಟಾಬೂ ಹಾಗೂ ಸ್ಟಿಗ್ಮಾ ಕಾರಣವೆನಿಸುತ್ತದೆ. ಈಗ ಹೇಳಿ ಮಾತಾಡೋನೆ ಮಹಾಶೂರ ಅಲ್ವೆ?

ಗುರುಕುಲ

ಜುಲೈ 30 ರಿಂದ ಬೆಳಿಗ್ಗೆ 10 ಗಂಟೆಗೆ ಉಮಾ ಥೇಟರ್ ನಲ್ಲಿ ಸುನೀಲ್ ಪುರಾಣಿಕ್ ನಿರ್ದೇಶನದ ‘ಗುರುಕುಲ’…

ಗುರುಕುಲ
ಗುರುಕುಲ

ಜನತಾ ದರ್ಶನ

(ಅಗಸ್ಟ್ 20, 2009 ರಂದು ಪ್ರಕಟವಾದ ಲೇಖನ)

ನನ್ನ ಪ್ರೀತಿಯ ಅಭಿಮಾನಿ ದೇವರುಗಳೆ...

ರಸ್ತೆಯಲ್ಲಿ, ಅಂಗಡಿಗಳಲ್ಲಿ, ಹೋಟೆಲ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ನನ್ನನ್ನು ದುರುಗುಟ್ಟಿಕೊಂಡು ನೋಡಿ ಹೋಗುವುದು ಸಾಮಾನ್ಯ. ಪತ್ರಕರ್ತನಾಗಿ ಐದು ವರ್ಷದಲ್ಲಿ ಪಿಟಿಸಿಗಳನ್ನು ನೀಡಿ ಎಷ್ಟು ಜನರಿಗೆ ನನ್ನ ಮುಖ ಪರಿಚಯವಾಗಿದೆಯೋ ಗೊತ್ತಿಲ್ಲ. ಆದರೆ ಮುಕ್ತ ಮುಕ್ತ ದಲ್ಲಿ ಆಕ್ಟಿಂಗ್ ಶುರುವಾದ ಮೇಲಂತೂ ಈ ದುರುಗುಟ್ಟುವಿಕೆ ಸಾಮಾನ್ಯವಾಗಿದೆ. ಇಂತಹ ಜನರಲ್ಲಿ ಎರಡು ವಿಧ. ಒಬ್ಬರು ಕೇವಲ ದುರುಗುಟ್ಟಿಕೊಂಡು ನೋಡಿ ತಮ್ಮ ಪಾಡಿಗೆ ತಾವು ಹೋಗಿಬಿಡುವವರು. ಮತ್ತೊಂದು ಕೆಟೆಗರಿಯ ಜನ, ಫಕ್ಕನೆ ನನ್ನನ್ನು ನಿಲ್ಲಿಸಿ “ಸಾರ್ ನೀವು ಸೀರಿಯಲ್ ನಲ್ಲಿ ಮಾಡ್ತೀರಲ್ಲವಾ?” ಅಥವಾ “ನೀವು ಮುಕ್ತ ಮುಕ್ತದಲ್ಲಿ ಆಕ್ಟ್ ಮಾಡ್ತೀರಲ್ಲವಾ?” ಎಂದು ಆರಂಭಿಸಿ, ಮುಂದಿನ ಕಥೆ ಹೇಳಿ ಎಂದು ಪೀಡಿಸುವವರು. ಈ ಥರದ ಜನ, ಯಾವುದೋ ಪಾತ್ರಕ್ಕೆ ಅನ್ಯಾಯವಾಗುತ್ತಿದೆ ಹಾಗಾಗಬಾರದು, ನೋಡಿಕೊಳ್ಳಿ ಎಂದು ಹುಕುಂ ಜಾರಿ ಮಾಡುತ್ತಾರೆ. ತಮ್ಮ ಪ್ರಕಾರ ಶಾಂಭವಿಗೆ ಮದುವೆಯಾಗಬೇಕು, ಶಂಕರಮೂರ್ತಿಗೆ ಯಾರಾದರೂ ಬಾರಿಸಬೇಕು, ಆನಂದರಾಜ್ ನಂದೀಪುರ್ ಬೈ ಇಲೆಕ್ಷನ್ ನಲ್ಲಿ ಗೆಲ್ಲಬೇಕು, ಮಧುಗೆ ಕಲ್ಯಾಣಿಗಿಂತ ವೈಜಯಂತಿಯೇ ಹೆಚ್ಚು ಸೂಟೆಬಲ್ ಇತ್ಯಾದಿ ಇತ್ಯಾದಿ ಪುಕ್ಕಟೆ ಸಲಹೆ ನೀಡುತ್ತಾರೆ. ನಾನು ಹ್ಹೆ ಹ್ಹೆ ಹ್ಹೆ ಎಂದು ತಲೆಯಲ್ಲಾಡಿಸಿ ಆದಷ್ಟು ಬೇಗ ಅಲ್ಲಿಂದ ಎಸ್ಕೇಪ್ ಆಗುತ್ತೇನೆ. ಮೊದಮೊದಲು ಈ ಅನುಭವಗಳು ವಿಶೇಷ ಎನಿಸುತ್ತಿದ್ದವು. ಇದು ಹೆಚ್ಚಾದಂತೆಲ್ಲ ನನ್ನಲ್ಲಿ ಕೊಂಚ ಮಟ್ಟಿಗಿನ ಅಹಂಕಾರವೂ ಬೆಳೆಯಿತೆನ್ನಿ...ಆದರೆ ಇತ್ತೀಚೆಗೆ ಬೆರೆಯದೇ ಅನುಭವವಾಯಿತು.

ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದೆ. ಡಾಕ್ಟರ್ ದಾರಿ ಕಾಯುತ್ತ ಅಲ್ಲೇ ಇದ್ದ ಚೇರಿನಲ್ಲಿ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ವ್ಯಕ್ತಿ ರಾಗ ಎಳೆಯಿತು. “ಸಾರ್, ನೀವು ಸೀರಿಯಲ್ ನಲ್ಲಿ ಆಕ್ಟ್ ಮಾಡ್ತೀರಲ್ಲವಾ…”

“ಹೌದು” ಎಂದೆ.

ವ್ಯಕ್ತಿ ಸುಮ್ಮನಾಯಿತು. 10 ನಿಮಿಷ ಕಳೆದಿರಬೇಕು “ಸಾರ್, ನಿಮ್ಮ ಊರು ಯಾವುದು” ಎಂದಿತು.

“ಕೊಪ್ಪ” ಎಂದೆ.

ವ್ಯಕ್ತಿ ಸುಮ್ಮನಾಯಿತು.

ನಾನು, “ನಿಮ್ಮ ಊರು ಯಾವುದು” ಎಂದು ಪ್ರಶ್ನಿಸಿದೆ.

“ಬೆಂಗಳೂರೇ” ಎಂದು ಉತ್ತರಿಸಿ ಮತ್ತೆ ಸುಮ್ಮನಾಯಿತು.

“ಏನು ಮಾಡಿಕೊಂಡಿದ್ದೀರಿ?” ಕೇಳಿದೆ.

“ಬಿಸಿನೆಸ್” ಉತ್ತರಿಸಿ ಮತ್ತೆ ಸುಮ್ಮನಾಯಿತು.

ಈ ಬೆಂಗಳೂರಿಗರಿಗೆ ಸ್ಪಲ್ಪ ಕೊಬ್ಬು. ತೀರ ಲೆವೆಲ್ ಮೆಂಟೇನ್ ಮಾಡುತ್ತಾರೆ. ಕಲಾವಿದನೊಬ್ಬ ಪಕ್ಕದಲ್ಲಿ ಬಂದು ಕುಳಿತುಕೊಂಡಿದ್ದರೂ ಸೀರಿಯಲ್ ಬಗ್ಗೆಯಾಗಲಿ, ನನ್ನ ಬಗ್ಗೆಯಾಗಲಿ ಕೇಳುತ್ತಲೇ ಇಲ್ಲವಲ್ಲ ಎಂದು ಅನಿಸಿತು. ಇದಲ್ಲದೆ ನಾನೇ ಮುಂದಾಗಿ ಮಾತನಾಡಿಸುತ್ತಿದ್ದರೂ ಚುಟುಕಾಗಿ ಮಾತನಾಡಿ, ಭಾರೀ ಸ್ಮಾರ್ಟ್ ಆಗಿ ವರ್ತಿಸುತ್ತಿದ್ದಾನೆ, ಸರಿಯಾಗಿ ಮಾತನಾಡಲು ಈ ಮನುಷ್ಯನಿಗೇನು ಧಾಡಿ ಎಂದುಕೊಂಡೆ. ಬೆಂಗಳೂರಿನಂತಹ ಊರಿನಲ್ಲಿ ಹಾದಿಗೊಬ್ಬರು ಬೀದಿಗಿಬ್ಬರು ಟಿವಿ ಕಲಾವಿದರು, ಫಿಲ್ಮ್ ಹಿರೋಗಳು ತಿರುಗಾಡುವುದರಿಂದ ಇಲ್ಲಿನ ಜನರಿಗೆ ಕ್ರೇಜ್ ಸ್ವಲ್ಪ ಕಡಿಮೆಯೇ. ಹಿತ್ತಲ ಗಿಡ ಮದ್ದಲ್ಲವಲ್ಲ. ಅದೂ ಅಲ್ಲದೆ ಬೆಂಗಳೂರಿಗರು ಸೋ ಕಾಲ್ಡ್ ಸೋಫಿಸ್ಟಿಕೇಟೆಡ್ ಜನ. ತಾವೇ ಮುಂದಾಗಿ ಮಾತನಾಡಿಸಿದರೆ ಮರ್ಯಾದೆಗೆ ಕಮ್ಮಿ ಎಂದು ಭಾವಿಸುವವರು. ಈ ವ್ಯಕ್ತಿ ಕೂಡ ಹಾಗೆಯೇ ಹೆಡ್ ವೇಟ್ ನ ವ್ಯಕ್ತಿಯಾಗಿರಬಹುದು ಎಂದೆಲ್ಲ ಯೋಚಿಸತೊಡಗಿದೆ.

ಇತ್ತೀಚೆಗೆ ಬಾಗಲಕೋಟೆಗೆಂದು ಸಂವಾದಕ್ಕೆ ಹೋದಾಗ, ಜನ ನಮ್ಮನ್ನು ಗುರುತಿಸಿದ್ದ ಪರಿ ನೋಡಿ ಬೆಂಗಳೂರಿಗರು ತೀರ ಸಪ್ಪೆ ಎಂದೆನಿಸಿತ್ತು.

ನಾನು ಸುಮ್ಮನಾಗೋಣ ಎಂದುಕೊಂಡರೂ, ನನ್ನಲ್ಲಿದ್ದ ಪತ್ರಕರ್ತ ಸುಮ್ಮನಿರಬೇಕಲ್ಲ. ಮತ್ತೆ ಪಟ್ಟು ಬಿಡದೆ, ವ್ಯಕ್ತಿಯ ಜೊತೆ ಮಾತಿಗಾರಂಭಿಸಿದೆ.

“ಮುಕ್ತ ಮುಕ್ತ ಹೇಗೆನ್ನಿಸುತ್ತಿದೆ?”.

“ಚೆನ್ನಾಗಿ ಬರ್ತಿದೆ ಸಾರ್..” ವ್ಯಕ್ತಿ ಸುಮ್ಮಗಾಯಿತು.

“ನಿಮಗೆ ಯಾವ ಪಾತ್ರ ಇಷ್ಟ?” ಮತ್ತೆ ಪ್ರಶ್ನಿಸಿದೆ.

“ಸಾರ್ ತಪ್ಪು ತಿಳಿಯಬೇಡಿ. ಈಗ ಅರ್ಧ ಗಂಟೆಯ ಮೊದಲಷ್ಟೇ ಹಲ್ಲು ತೆಗೆಸಿಕೊಂಡಿದ್ದೇನೆ. ಹೀಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ” ಎಂದು ಉತ್ತರಿಸಿ ವ್ಯಕ್ತಿ ಸುಮ್ಮನಾಯಿತು.

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್

ದೇವರು

ದೇವರ ಮೂರ್ತಿಗಳನ್ನು ಹೊರತು ಪಡಿಸಿ ದೇವರ ಕೋಣೆಯಲ್ಲಿದ್ದ ಎಲ್ಲ ಸಾಮಾನುಗಳನ್ನು ಅಡಿಗೆ ಮನೆಯಲ್ಲಿನ ಸಿಂಕ್ ಹತ್ತಿರ ತಂದೆ. ಊದುಬತ್ತಿಯ ಸ್ಟಾಂಡ್ ಮೇಲೆ ಬೂದಿ ಉದುರಿ ಅದು ಮಾಸಿಹೋಗಿತ್ತು. ನಿಲಾಂಜನಕ್ಕೆ ಜಿಡ್ಡು ಹಿಡಿದಿತ್ತು. ಧೂಪವಿಡುವ ಬಿಲ್ಲೆಯನ್ನು ಡಿಸ್ಪೋಸ್ ಮಾಡಿದರೆನೇ ಚೆನ್ನ ಎನಿಸಿತು. ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್ ಆಗಿತ್ತು. ಅರಿಶಿನ-ಕುಂಕುಮ ಇಡುವ ಬೆಳ್ಳಿಯ ಬಟ್ಟಲುಗಳು ಬೆಳ್ಳಿಯವೇ ಎಂಬುದರ ಬಗ್ಗೆ ಸಂಶಯ ಬರುತ್ತಿತ್ತು. ಗಂಟೆ ಮಾತ್ರ ಫಳಫಳನೇ ಹೊಳೆಯುತ್ತ, ತನ್ನನ್ನು ಯಾರೂ ಬಳಸಿಯೇ ಇಲ್ಲ ಎಂದು ಸಾರಿ ಹೇಳುತ್ತಿತ್ತು.

ನಾಗಂದಿಗೆ ಮೇಲಿನ ಕೆಂಪು ಡಬ್ಬಿ ತೆಗೆದು, ಅದರಲ್ಲಿ ಉದ್ದ ಚಮಚ ಹಾಕಿ ಒಂದಷ್ಟು ಪೀತಾಂಬರಿಯನ್ನು ಸುರುವಿಕೊಂಡೆ. ನಾಳೆ ಏರ್ ಟೆಲ್ ಬಿಲ್ ತುಂಬಬೇಕು. ಮೊದಲು ಬೆಳ್ಳಿಯ ನಿಲಾಂಜನ ಕೈಗೆತ್ತಿಕೊಂಡೆ.ಅದರಲ್ಲಿದ್ದ ಬತ್ತಿಯ ಕಾಲು ಹಿಡಿದೆಳೆದು ಕಸದ ಬುಟ್ಟಿಗೆ ಬಿಸಾಕಿ, ನಿಲಾಂಜನವನ್ನು ನಳದ ಕೆಳಗೆ ಹಿಡಿದೆ. ಈ ಬಾರಿಯ ಹಾಯ್ ಬೆಂಗಳೂರಿನಲ್ಲಿಯಾದರೂ ನನ್ನ ಆರ್ಟಿಕಲ್ ಬರಲಿದೆಯೆ?. ಓ ಮನಸೇ ನೀರಸವಾಗುತ್ತಿದೆಯಲ್ಲ….  ಬಲಗೈ ಬೆರಳುಗಳಿಗೆ ಕೊಂಚವೇ ಪೀತಾಂಬರಿ ಮೆತ್ತಿಸಿ ನಿಲಾಂಜನಕ್ಕೆ ಬಳಿದೆ. ಎರಡೂ ಹೆಬ್ಬಟ್ಟುಗಳಿಂದ ಚೆನ್ನಾಗಿ ತಿಕ್ಕಿದೆ. ಪಕ್ಕಕ್ಕಿಟ್ಟೆ.

ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಗಸಗಸಗಸನೆ ಪೀತಾಂಬರಿ ಉಜ್ಜಿದೆ. ಸುಮಾರು ಹೊತ್ತು ಉಜ್ಜುತ್ತಲೇ ಇದ್ದೆ. ಚಿಕನ್ ಪಾಕ್ಸ್ ಹೋಗಲಿಲ್ಲ. ಕಪಾಟಿನಲ್ಲಿದ್ದ ಹಳೆಯ ಟೂತ್ ಬ್ರಶ್ ತಂದೆ. ಪೀತಾಂಬರಿಯಲ್ಲಿ ಅದ್ದಿ ಉಜ್ಜಿದೆ. ರೋಗ ವಾಸಿಯಾಯಿತು. ಮೊನ್ನೆ ಮಟಮಟ ಮಧ್ಯಾಹ್ನ ಪ್ರಯಾಣಿಸುತ್ತಿರಬೇಕಾದರೆ ಸ್ಲೀಪರ್ ಬಸ್ಸಿನಲ್ಲಿ ಎಲ್ಲರೂ ನಿದ್ರಿಸುತ್ತಿದ್ದಾಗ ನಾನೂ ಅವಳು ಇಬ್ಬರೇ ಎಚ್ಚರವಾಗಿದ್ದೆವು. ವಿಪರೀತ ಎಸಿಯಿಂದಾಗಿ ಇಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ. ಇಬ್ರೂ ಕ್ಯಾಬಿನ್ ಗೆ ಹೋಗಿ ಬೈಟು ಸಿಗರೇಟು ಸೇದಿದ್ದು ಎಷ್ಟು ಚೆನ್ನಾಗಿತ್ತಲ್ಲ. ತಾಮ್ರದ ವಹಿವಾಟೇ ಹಾಗೇ. ಎಷ್ಟು ತೋಳೆದರೂ ನಂತರ ಒರೆಸಿಯೇ ಇಡಬೇಕು. ಇಲ್ಲದಿದ್ದರೆ, ಮತ್ತೆ ಕಲೆ ಉಳಿದುಬಿಡುತ್ತದೆ. ಟರ್ಕಿಸ್ ಟಾವೇಲಿನಿಂದ ಚೆನ್ನಾಗಿ ಒರೆಸಿದೆ. ಫಳಫಳನೆ ಹೊಳೆಯುವಂತೆ ಮಾಡಿದೆ.

ಹಿತ್ತಾಳೆಯ ಊದುಬತ್ತಿ ಸ್ಟಾಂಡನ್ನು ಡಿಟ್ಯಾಚ್ ಮಾಡಿದೆ. ಸಾವಯವ ಕೃಷಿಗೆ ಉತ್ತೇಜನ ನೀಡಲು…….ಮತ್ತೆ ಬ್ರಷ್ಷನ್ನು ಪೀತಾಂಬರಿಯಲ್ಲಿ ಅದ್ದಿ ದಶದಿಕ್ಕುಗಳಿಂದಲೂ ತಿಕ್ಕಿದೆ. ಸ್ಟಾಂಡ್ ಮೇಲೆ ಮಾಡಿದ್ದ ಡಿಸೈನ್ ನಿಂದಾಗಿ ಸಂದಿಯಲ್ಲೆಲ್ಲ ಜಿಡ್ಡು ಮೆತ್ತಿಕೊಂಡಿತ್ತು. ಮತ್ತಷ್ಟು ಪೀತಾಂಬರಿ ಅಂಟಿಸಿದೆ. ಅವನು ಒಂದು ಕೋಟಿ ಮಾಡಿಕೊಂಡನಂತೆ. ನಾವು ಪ್ರೆಸ್ ಕಾನ್ಫರೆನ್ಸಿನಲ್ಲಿ ಪೆನ್ನು, ಪ್ಯಾಡು ತೆಗೆದುಕೊಂಡರೆ ಈ ಹಲ್ಕಟ್ ಮ್ಯಾನೇಜ್ ಮೆಂಟಿಗೆ ಎಕ್ಸಪ್ಲನೇಶನ್ ಕೊಡಬೇಕು. ಸರಿಹೋಯಿತು. ಜಿಡ್ಡು ಎಲ್ಲ ಹೋಗಿ ಸರಿಹೋಯಿತು. ಸ್ಟಾಂಡ್ ಕೂಡ ಮೊದಲಿನಂತಾಯಿತು.

ಅಷ್ಟರಲ್ಲಿ ಪೀತಾಂಬರಿ ಮುಗಿಯಿತು. ಮತ್ತಷ್ಟು ಪೀತಾಂಬರಿ ಸುರಿದುಕೊಂಡೆ. ಅರಿಶಿನ-ಕುಂಕುಮದ ಬೆಳ್ಳಿಯ ಬಟ್ಟಲುಗಳು ತೇಜ ಕಳೆದುಕೊಂಡಿದ್ದವು. ಮೊದಲು ಸೋಪಿನಿಂದ ತೊಳೆದೆ. ಅದಗ್ವಾಡಿ ಅದ ಸೂರು ದಿನವೆಲ್ಲ ಬೇಜಾರು ಹಾಡು ಚೆನ್ನಾಗಿದೆ. ಶಂಕರ್ ನಾಗ್ ವಾಯ್ಸ್ ಸೂಪರ್. ಅಟಲ್ ಬಿಹಾರಿ ವಾಜಪೇಯಿ ವಯಸ್ಸೇಷ್ಟು ಈಗ? ನಂತರ ಮತ್ತೆ ಗಸಗಸನೆ ಪೀತಾಂಬರಿ ತಿಕ್ಕಿ ಬಟ್ಟಲುಗಳು ಬೆಳ್ಳಿಯವೇ ಎಂಬ ಕುರಿತಾದ ಸಂಶಯವನ್ನು ದೂರ ಮಾಡಿದೆ.

ಧೂಪವಿಡುವ ಬಿಲ್ಲೆಯನ್ನು ಕಸದ ಬುಟ್ಟಿಗೆ ಎಸೆದೆ. ಗಂಟೆಯನ್ನು ಕೇವಲ ಒರೆಸಿದೆ.

ಪೂಜೆಯ ಎಲ್ಲ ತಯಾರಿ ಆಗಿತ್ತು. ಎಲ್ಲ ಸಾಮಾನುಗಳನ್ನು ತೆಗೆದುಕೊಂಡು ದೇವರ ಕೋಣೆ ಪ್ರವೇಶಿಸಿದೆ. ದೇವರ ಮೂರ್ತಿಗೆ ಅಲಂಕಾರ ಮಾಡಿದೆ. ದೀಪ ಬೆಳಗಿದೆ. ಊದುಬತ್ತಿ, ಧೂಪ ಹಚ್ಚಿದೆ. ಮಂತ್ರ ಹೇಳಿದೆ. ನೈವೇದ್ಯ ತೋರಿಸಿದೆ. ದೇವರಿಗೆ ಬಾಗಿ ನಮಸ್ಕರಿಸಿದೆ. ತಲೆಯೆತ್ತಿ ನೋಡಿದೆ. ದೇವರು ಕಾಣಿಸಲಿಲ್ಲ.

(ಅಗಸ್ಟ್ 29, 2009 ರಂದು ಪ್ರಕಟವಾಗಿದ್ದು)

ಹಲ್ಲಿಗೊಂದು ಸೆಂಡ್ ಆಫ್ ….

(ಜುಲೈ 30, 2009 ರಂದು ಪ್ರಕಟವಾಗಿದ್ದ ಲೇಖನ. ಇದು ವಿಜಯ ಕರ್ನಾಟಕದಲ್ಲಿಯೂ ಪ್ರಕಟವಾಗಿತ್ತು)

ಪ್ರೀತಿಯ ಹಲ್ಲೆ...

ಪ್ರೀತಿಯ ಹಲ್ಲೇ…,

ಹೌದು ನಿನಗೆ ಹಲ್ಲು ಅಂತಲೇ ಕರೆಯಬೇಕು. ಯಾವ ಹಲ್ಲು ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಏಕೆಂದರೆ ನಾನು ನಿಮಗೆ ಇದುವರೆಗೆ ಹೆಸರೇ ಇಟ್ಟಿಲ್ಲ. ಹಾಗೇನಾದರು ಆದರೆ ನಾನು ನಿಮಗೆ ೩೨ ಹೆಸರು ಹುಡುಕಬೇಕು. ಹುಡುಕುವುದೇನು ದೊಡ್ಡ ಕೆಲಸವಲ್ಲ. ಆದರೆ ಯಾಕೋ ನಿಮಗೆ ಹೆಸರಿಡಲು ನನಗೆ ಹೊಳೆಯಲೇ ಇಲ್ಲ. ನನ್ನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೊಟ್ಟೆ ಹೀಗೆ ಪ್ರತಿಯೊಂದು ಅಂಗಕ್ಕೆ ಅವರದೇ ಆದ identity ಇದೆ. ಆದರೆ ನಿಮಗೆ ನೀವೆಲ್ಲರೂ ಸೇರಿ ‘ ಹಲ್ಲುಗಳು’, ಅಷ್ಟೇ. ಕೆಲವರಿಗೆ ದವಡೆ, ಕೋರೆ ಎಂಬ ಹೆಸರಿದ್ದರೂ ನೀವು ಯಾವ ದವಡೆ ಯಾವ ಕೋರೆ ಎಂಬುದಕ್ಕೆ ಕೆರೆದುಕೊಳ್ಳಬೇಕಾಗುತ್ತದೆ. ತಲೆಯನ್ನು. ಹೀಗಿದ್ದೂ ನಿನಗೆ ಡಾ. ತ್ರಿವಿಕ್ರಂ ಹೆಸರಿಟ್ಟಿದ್ದು, ಸೆಕಂಡ್ ಫ್ರೊಂ ದಿ ರೈಟ್ ಟಾಪ್.

ಅಂತೂ ನನ್ನ ನಿನ್ನ ಇಷ್ಟು ವರ್ಷಗಳ ಸಂಬಂಧ ಮುಗಿದಿದೆ. ನೀನು ಹುಟ್ಟಿದಾಗ ಬಹುಶಃ ನನಗೆ ಮೂರೋ ನಾಲ್ಕೋ ವರ್ಷವಿರಬೇಕು. ಆದರೆ ನಿನ್ನಾಣೆಗೂ ನೀನು ಹುಟ್ಟಿದ್ದು ನನಗೆ ತಿಳಿಯಲಿಲ್ಲ. ಎದುರಿನ ಕೆಲವು ಹಲ್ಲುಗಳನ್ನು ಬಿಟ್ಟರೆ, ಒಳಗಿನ ಹಲ್ಲುಗಳಿಗೆ ನನಗೆ ಸಂಬಂಧವೇ ಇರಲಿಲ್ಲ. Actually, ಒಳಗಿನ ಹಲ್ಲುಗಳೇ ಎಲೆ ಮರೆಯ ಕಾಯಿಯ ಹಾಗೆ ಗಿರಣಿಯಂತೆ ಕರಕರ ದುಡಿಯುತ್ತಿದ್ದರೂ ಅವು ನನ್ನ ಬದುಕಿನಲ್ಲಿ ಯಾವುದೇ ಭಾವನಾತ್ಮಕ ಅಸ್ತಿತ್ವ ಹೊಂದಿರಲೇ ಇಲ್ಲ.

ಆದರೆ ಈಗ ನಿಮ್ಮಗಳ imporatance ಗೊತ್ತಾಗುತ್ತಿದೆ. ಡಾ. ತ್ರಿವಿಕ್ರಂ ತಮ್ಮ ಗೌಸ್ ಹಾಕಿದ ಕೈಗಳಲ್ಲಿ ಇಕ್ಕಳ ಹಿಡಿದು ನಿನ್ನನ್ನು ನನ್ನಿಂದ ಬೇರ್ಪಡಿಸಿ ರಕ್ತಸಿಕ್ತವಾಗಿದ್ದ ನಿನ್ನ ದೇಹವನ್ನು ‘ಕಣ್’ ಎಂದು ಟ್ರೇಯಲ್ಲಿ  ಹಾಕಿದಾಗ ನನ್ನ ಕಣ್ಣು ತುಂಬಿ ಬಂದಿತ್ತು. ನೋವಿನಿಂದ ಹೀಗಾಗಿದೆ ಎಂದು ಡಾ. ತ್ರಿವಿಕ್ರಂ ಅಂದುಕೊಂಡಿರಬೇಕು. ಆದರೆ ಅವರಿಗೇನು ಗೊತ್ತು, ನನ್ನ ನಿನ್ನ ಅಗಲಿಕೆಯ ದುಃಖ.
ನನ್ನ ನಿನ್ನ ಸಂಬಂಧ ಸುಮಾರು ೨೪-೨೫ ವರ್ಷಗಳದ್ದು ಅಲ್ಲವೇ? ಇಷ್ಟು ವರ್ಷ ನೀನು ನನ್ನೋಡನಿದ್ದೆ . ಆದರೆ ನಿನ್ನ ಇರುವಿಕೆ ಗೊತ್ತಗುತ್ತಿದ್ದುದು ಮಾತ್ರ ಕೆಲವೇ ಕೆಲವು ಸಂದರ್ಭಗಳಲ್ಲಿ. ಎಂಟು ಒಂಬತ್ತೆನೆಯ ಕ್ಲಾಸಿನಲ್ಲಿ ಪರೀಕ್ಷೆಯ ದಿನವೇ ನೀನು ಭಯಂಕರವಾಗಿ ತೊಂದರೆ ಕೊಡಲು ಆರಂಭಿಸುತ್ತಿದೆ. ನೀನು ಹಾಗೆಯೇ ಇದ್ದರೂ, ಒಸಡು ಹಾಗೂ ಗಲ್ಲಕ್ಕೆ ಬಾವು ಬರಲು ಕಾರಣವಾಗುತ್ತಿದ್ದೆ. ಸುಪುತ್ರನ ಬಾತಿದ ಮುಖವನ್ನು ನೋಡುತ್ತಿದ್ದ ಅಪ್ಪ-ಅಮ್ಮ “ಇರಲಿ ಬಿಡು. ಪರೀಕ್ಷೆ ಮುಂದಿನ ಬಾರಿ ಬರೆದರಾಯಿತು” ಎನ್ನುತ್ತಿದ್ದರು. ಒಂದೆರಡು ದಿನಗಳ ಕಾಲ ನನ್ನನ್ನು ನರಳಿಸಿ ಪರೀಕ್ಷೆ ಮುಗಿಯುತ್ತಿದ್ದ ಹಾಗೆ ಸರಿಯಾಗಿ ಬಿಡುತ್ತಿದ್ದೆ. ಮತ್ತೆ ನಿನ್ನ ಇರುವಿಕೆ ಗೊತ್ತಾಗುತ್ತಿದ್ದುದು ಮುಂದಿನ ಪರೀಕ್ಷೆಯ ವೇಳೆಗೆ!!

ಡಾ. ತ್ರಿವಿಕ್ರಂ ನಿನ್ನನ್ನು ಉಳಿಸಿಕೊಳ್ಳಲು ತುಂಬ ಪ್ರಯತ್ನ ಪಟ್ಟರು. ಮೂರು ಬಾರಿ ರೂಟ್ ಕೆನಾಲ್ ಮಾಡಿದರೂ, ಎಸಿ ಕ್ಲಿನಿಕ್ ನಲ್ಲಿ ಅವರ ಹಣೆಯ ಬೆವರು ಕಿತ್ತು ಬಂತೇ ಹೊರತು ಅವರಿಗೆ ನಿನ್ನ ರೂಟ್ ವರೆಗೆ ತಲುಪಲು ಆಗಲೇ ಇಲ್ಲ. “ಲಿಸನ್, ಐ ಥಿಂಕ್ ಇಟ್ ಇಸ್ ಕಂಪ್ಲೀಟ್ಲಿ ಬ್ಲಾಕ್ಡ್. ದೆರಿಸ್ ನೋ ಪಾಯಿಂಟ್ ಇನ್ ವೇಸ್ಟಿಂಗ್ ಟೈಮ್ ಅಂಡ್ ಮನಿ. ವಿ ವಿಲ್ extract ಇಟ್ಅಂತ ನಿನಗೆ ಮರಣ ದಂಡನೆ ವಿಧಿಸಿದ್ದರು.

ಹಲ್ಲೇ, ನಿನ್ನ ಸಂಬಂಧ ಕೊನೆಗೊಳ್ಳಲು ನಾನೇ ಕಾರಣ. ಬಹುಷಃ ನಿನ್ನ ಬಗ್ಗೆ ನಾನು ಇನ್ನೂ ಹೆಚ್ಚು ಪ್ರೀತಿಯಿಂದ ನಡೆದುಕೊಂಡಿದ್ದರೆ, ನಮ್ಮಿಬ್ಬರ ಅನುಬಂಧ ಇನ್ನೂ ಕೆಲ ವರ್ಷ ಮುಂದುವರೆಯಬಹುದಿತ್ತೇನೋ.

ನೀನು ನನ್ನಿದ ದೂರವಾಗುತ್ತಿರುವ ಈ ಸಂದರ್ಭದಲ್ಲಿ ನಿನ್ನ ಕೊಡುಗೆಯನ್ನು ಸ್ಮರಿಸುವುದು ನನ್ನ ಕರ್ತವ್ಯ. ಇಷ್ಟು ವರ್ಷಗಳ ಕಾಲ ಹಸಿವು ಹಾಗೂ ಬಾಯಿ ಚಪಲಕ್ಕಾಗಿ ಬಾಯಲ್ಲಿ ತುರುಕಿದ್ದ ಎಲ್ಲವನ್ನೂ ಮರು ಮಾತನಾಡದೇ ಅರೆದಿದ್ದಕ್ಕೆ ಮತ್ತು ಆ ಮೂಲಕ ಅಜೀರ್ಣ ಹಾಗೂ ಮೂಲವ್ಯಾಧಿ ಬರದಂತೆ ನೋಡಿಕೊಂಡದ್ದಕ್ಕೆ ನಿನಗಿದೋ ನಮಸ್ಕಾರ. ನಾನು ನಕ್ಕಾಗಲೆಲ್ಲ ಕೆನ್ನೆಯಲ್ಲಿ ಗುಳಿ ಬೀಳಲು ನಿನ್ನದೇ ಕೊಡುಗೆ ನೀಡಿದ್ದಕ್ಕೆ ನಿನಗಿದೋ ನಮಸ್ಕಾರ. ಕಾಲೇಜಿನ ಲ್ಯಾಬ್  ನಲ್ಲಿ ನನ್ನನ್ನು ಒಳಗೊಳಗೇ ಪ್ರೀತಿಸುತ್ತಿದ್ದ ಹುಡುಗಿ ರಪಕ್ಕನೆ ಎದುರಾಗಿ ಕೆನ್ನೆಗೆ ಬಿಗಿಯಾಗಿ ಮುತ್ತು ಕೊಟ್ಟಾಗ ಗಲ್ಲ ಒಳ ಹೋಗದಂತೆ ತಡೆದ್ದಿದ್ದಕ್ಕೆ ನಿನಗಿದೋ ನಮಸ್ಕಾರ. ಹಾಸ್ಟೆಲ್ ರೂಮ್ ನಲ್ಲಿ ಅಸಂಖ್ಯಾತ ಬಿಯರ್ ಬಾಟಲಿಗಳನ್ನು ಓಪನ್ ಮಾಡಲು ಓಪನರ್ ಬದಲು ನಿನ್ನನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ!

ಈಗ ನಿನ್ನ ಸ್ಥಳದಲ್ಲಿ ಬ್ರಿಜ್ ಕೂರಿಸುತ್ತಾರಂತೆ. ಈಗ ನಿನ್ನ ಬದಲಿಗೆ ಮೂರು ಹಲ್ಲು ಹಾಕಿಸಿಕೊಳ್ಳಬೇಕು ನಾನು. ಆದರೂ ಇಷ್ಟು ವರ್ಷ ನನ್ನೊಡನಿದ್ದು, ಹೀಗೆ ಬೇರೆಯಾಗಿ ಹೋದೆಯಲ್ಲ, ಐ ಆಮ್ ಸಾರಿ ಹಲ್ಲೇ….


ನನ್ನ ಬ್ಲಾಗ್ ನ ಮೊದಲ ಪೋಸ್ಟ್

(ಕಳೆದ ವರ್ಷ ಜುಲೈ 24 ರಂದು ನನ್ನ ಬ್ಲಾಗ್ ಆರಂಭವಾದಾಗ ಬರೆದಿದ್ದ ಮೊದಲ ಲೇಖನ)

ಕೋಡುಗಲ್ಲ ಮಾದೇವನಿಗೆ....

ಆದರಣೀಯ ದೇವರಿಗೆ,

24-07-09

ಬನಶಂಕರಿ, ಬೆಂಗಳೂರು.

ಸುಘೋಷನು ಮಾಡುವ ನಮಸ್ಕಾರಗಳು. ಉ.ಕು. ತರುವಾಯ. ನಾನು ಚೆನ್ನಾಗಿದ್ದೇನೆ. ನೀನೂ ಸಹ ಚೆನ್ನಾಗಿರುವಿಯೆಂದು ಭಾವಿಸಿದ್ದೇನೆ. ಅಂದ ಹಾಗೆ ನನ್ನ ಹೊಸ ಪ್ರಯತ್ನವನ್ನು ತಿಳಿಸಲೊಸುಗ ಈ ಪತ್ರವು.

ಹಲವು ವರ್ಷಗಳು ಕಳೆಯಿತು. ಇನ್ನಾದರೂ ಮುನಿಸು ಬಿಟ್ಟು ಪತ್ರ ಬರೆಯೋಣ ಎಂದುಕೊಂಡೆ. ನಿನ್ನ ಅಸ್ತಿತ್ವದ ಬಗ್ಗೆ ಪರ-ವಿರೋಧ ವಾಗ್ವಾದ ಮಾಡುವವರು ಇನ್ನೂ ಭೂಮಂಡಲದಲ್ಲಿ ಇದ್ದಾರೆ. ನಾನೂ ಎರಡೂ ಗುಂಪಿಗೆ ಸೇರಿಲ್ಲ. ಹೀಗಾಗಿ ನಿನಗೆ ಪತ್ರ ಬರೆದು ನನ್ನ ಸ್ಥಿತಿ-ಗತಿಯನ್ನು ತಿಳಿಸಿದರೆ, ನನ್ನ ಅಪ್ಪನ ಗಂಟೆನೂ ಹೋಗುವುದಿಲ್ಲವಲ್ಲ ಎಂಬ ಕಾರಣದಿಂದ ಪತ್ರ ಟೈಪಿಸುತ್ತಿರುವೆ.

ಓ ದೇವನೆ, ಈ ಪಾಪಿ ದುನಿಯಾಕ್ಕೆ ನಾನು ಎಂಟ್ರಿ ಪಡೆದು ಎರಡೂವರೆ ದಶಕಗಳಿಗೂ ಮೆಲಾಗಿದೆ. ಕಾಲಕಾಲಕ್ಕೆ ಅನ್ನ, ನೀರು, ವಾಯು, ಅಂಗವಸ್ತ್ರ, ಇತ್ಯಾದಿ ಧರ್ಮ, ಅರ್ಥ, ಕಾಮಾಕಾಂಕ್ಷೆಗಳನೆಲ್ಲ ಮನಃಪೂರ್ವಕವಾಗಿ ಅನುಭವಿಸುತ್ತಿರುವೆ. ಇರಲಿ. ಆ ಕುರಿತು ಮತ್ತೆ ಹೇಳುತ್ತೇನೆ.

ಈ ಪತ್ರ ಬರೆಯಲು ಮುಖ್ಯ ಕಾರಣವೆಂದರೆ, ರಾಜ್ಯದಲ್ಲಿ ಅಷ್ಟೇ ಏಕೆ ಇಡೀ ದೇಶದಲ್ಲೇ ಮೀಡಿಯಾದ ಪರಿಸ್ಥಿತಿ ಕುಲಗೆಟ್ಟುಹೋಗಿದೆ. ಕೆಲ ಪತ್ರಕರ್ತರು ಆರೋಗ್ಯಕರ ಪತ್ರಿಕೋದ್ಯಮದ ತಲೆಯನ್ನು ಚೊಕ್ಕವಾಗಿ ಬೋಳಿಸಿ, ಉಂಡೆ ನಾಮ ತಿಕ್ಕಿದ್ದಾರೆ. ಜನರಲ್ಲಿ ಮೀಡಿಯಾ ಕುರಿತಂತೆ ಗೌರವ ಭರದಿಂದ ಕಡಿಮೆಯಾಗುತ್ತಿದೆ. ರಾಜಕಾರಣಿಗಳು ಪತ್ರಕರ್ತರನ್ನು “ಏನ್ ಬ್ರದರ್” ಅಂತಲೂ, ಪತ್ರಕರ್ತರು ರಾಜಕಾರಣಿಗಳನ್ನು “ಅಣ್ಣಾ…” ಎಂತಲೂ ಸಂಬೋಧಿಸಿ ಪರಸ್ಪರರ ನಡುವಿನ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಾಜಕಾರಣಿಗಳು ಮಾಡಲು ಬೇರೆನೂ ಕೆಲಸವಿಲ್ಲವಾಗಿ, ತಮಗಿಷ್ಟಬಂದಂತೆ ಟಿವಿ ಚಾನೆಲ್ ಗಳನ್ನು ತೆಗೆಯುತ್ತಿದ್ದಾರೆ. ದೆಹಲಿಯಂತಹ ಪ್ರದೇಶದಲ್ಲಿ ಯಾವುದೇ ಸಾಮಾನ್ಯ ಪತ್ರಿಕಾಗೋಷ್ಟಿಗೆ ಕನಿಷ್ಟ 45 ಕ್ಯಾಮೆರಗಳು ಸಾಲಾಗಿ ನಿಲ್ಲುತ್ತಿವೆ. ದೇಶದ ಪ್ರತಿಷ್ಠಿತ ಪತ್ರಿಕೋದ್ಯಮ ಕಾಲೇಜುಗಳಿಂದ ಬುಳುಬುಳು ಹೊರಬೀಳುತ್ತಿರುವ ಕನ್ಯೆಯರು, ರಾಷ್ಟ್ರೀಯ ವಾಹಿನಿಗಳ ಆರಂಕಿ ಸಂಬಳವನ್ನು ತಮ್ಮ ಕಿರುಬೆರಳಿನ ಚೂಪಾದ ಉಗುರಿನಿಂದ ಧಿಕ್ಕರಿಸಿ, ಕಾರ್ಪೋರೇಟ್ ವಲಯದಲ್ಲಿ ಪಿಆರ್ ಓ ಗಳಾಗಿ ಮೆರೆಯುತ್ತಿದ್ದಾರೆ. ಸ್ಟಿಂಗ್ ಆಪರೇಷನ್ ಎಂಬ ಹೊಸ ಶಾಖೆಯೊಂದು ಪ್ರಾರಂಭಗೊಂಡಿದ್ದು, ಪತ್ರಕರ್ತರು ಹಾಗೂ ಭ್ರಷ್ಟರು ಒಟ್ಟೊಟ್ಟಿಗೆ ಸಮಾಜವನ್ನು ತಿನ್ನಲು ಇಂಬು ಸಿಕ್ಕಿದೆ. ಮುದ್ರಣ ಮಾಧ್ಯಮದಲ್ಲಿ ಸರಿಯಾಗಿ ಅರ್ಕಾವತ್ತು ಕೊಡಲು ಬಾರದ ಪೋರರು ಸಬ್ ಎಡಿಟರುಗಳಾಗಿ ಭರ್ತಿಗೊಂಡು, ಪ್ರೋ. ಜಿ. ವೆಂಕಟಸುಬ್ಬಯ್ಯನಂತಹವರಿಗೆ ಹೊಸ ಹೊಸ ಪದಪ್ರಯೋಗಗಳ ಹಾಗೂ ಶಬ್ದಗಳ ಪರಿಚಯ ಮಾಡಿಸುತ್ತಿದ್ದಾರೆ. ಇರಲಿ. ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದು ನನ್ನ ಆರೋಗ್ಯಕ್ಕೂ ನಿನ್ನ ಆರೋಗ್ಯಕ್ಕೂ ಒಳ್ಳೆಯದಲ್ಲವೆಂದು ನಾ ಬಲ್ಲೆ ಅದರಿಂದ ಇಲ್ಲೇ ನಿಲ್ಲಿಸುತ್ತೇನೆ.

ದೇವರೇ, ನಿನಗೆ ತಿಳಿದ ಹಾಗೆ ನಾನು ಟೈಮ್ ವೇಸ್ಟ್ ಇಂಡಿಯಾ ಅಲ್ಲಲ್ಲ ಸಾರಿ, ಟೈಮ್ಸ್ ಆಫ್ ಇಂಡಿಯಾ-ಎನ್ಐಇ, ವಿಜಯ್ ಟೈಮ್ಸ್, ಈ ಟಿವಿ, ಎ ಎನ್ ಐ ಹೀಗೆ ಹಲವು ಮಾಧ್ಯಮ ಪ್ರಾಕಾರಗಳಲ್ಲಿ ದುಡಿದು ಒಳ್ಳೆ ಅನುಭವ ಗಳಿಸಿಕೊಂಡಿದ್ದೇನೆ. ಆದರೆ ಪತ್ರಿಕೋದ್ಯಮದ ಏಕತಾನತೆಯಿಂದ ಬೇಸತ್ತು ಇದೀಗ ಕೊಂಚ ಬ್ರೇಕ್ ತೆಗೆದುಕೊಂಡಿರುವುದು ನಿನಗೆ ತಿಳಿದೇ ಇದೆ. ಏನಕೇನ ಪ್ರಕಾರೇಣ, ಕನ್ನಡ ಕಿರುತೆರೆಯಲ್ಲಿ ಚರ್ಚೆ ಹುಟ್ಟುಹಾಕಿರುವ ಮುಕ್ತ ಮುಕ್ತ ಧಾರಾವಾಹಿಯಲ್ಲಿ ಮುಖ್ಯಮಂತ್ರಿಗಳ ಚೊಚ್ಚಲ ಪುತ್ರನಾಗಿ ನಟಿಸಲು ಮೊದಲುಮಾಡಿದ್ದೇನೆ. ಆದರೆ ಹಾಗೇಂದು ಹೇಳಿ ಮೀಡಿಯಾವನ್ನು ಮರೆತಿಲ್ಲ. ನನ್ನ ಬೇರುಗಳೂ ಇನ್ನೂ ಮೀಡಿಯಾದಲ್ಲೇ ಇವೆ. ಟೊಂಗೆಗಳು ಮಾತ್ರ ಬೇರೆಬೇರೆ ಕಡೆಗೆ ಪಸರಿಸುತ್ತಿವೆ.

ಈ ಮಧ್ಯೆ ಕಾಷಿಯಸ್ ಮೈಂಡ್. ವರ್ಡ್ ಪ್ರೆಸ್. ಕಾಮ್ ಬ್ಲಾಗ್ ಆರಂಭಿಸಿ ಕಿತಾಪತಿಯನ್ನು ಮುಂದುವರೆಸಿದ್ದೇನೆ. ಈ ಕಿತಾಪತಿಗೆ ನಿರ್ವಿಘ್ನಂ ಕುರುಮೇ ದೇವ….

ನನ್ನಿಂದ ಒಳ್ಳೆಯ ಲೇಖನ ಬರೆಸು ದೇವ…

ಓದುಗರಿಂದ ಒಳ್ಳೆಯ ಕಾಮೆಂಟ್ ತರಿಸು ದೇವ…

ಮತ್ತೇನೂ ವಿಶೇಷವಿಲ್ಲ. ಅಲ್ಲಿನ ಎಲ್ಲ ಹಿರಿ-ಕಿರಿಯ ದೇವರುಗಳಿಗೆ ನನ್ನ ನಮಸ್ಕಾರಗಳನ್ನು ತಿಳಿಸು.

ಇಂತಿ ನಿನ್ನ

ಸುಘೋಷ್.

ಇದನ್ನೂ ಓದು – ನೀನು ಯಾವಾಗ ಬರುವಿಯೆಂದು ಮುಂಚಿತವಾಗಿ ತಿಳಿಸಿದರೆ ರಿಸೀವ್ ಮಾಡಿಕೊಳ್ಳಲು ನಾನೇ ಬರುವೆ.

ಹ್ಯಾಪಿ ಬರ್ತಡೇ ಟು CAUTIOUSMIND

CAUTIOUSMIND

ನನ್ನ “CAUTIOUSMIND – ನನ್ನ ಕಿತಾಪತಿಗಳ ಜಗತ್ತು” ಆರಂಭವಾಗಿ ಇಂದಿಗೆ 1 ವರ್ಷ.

ಬ್ಲಾಗ್ ಓದುಗರಿಗೆ, ಓದಿ ಪ್ರೋತ್ಸಾಹಿಸಿದವರಿಗೆ, ಪ್ರೋತ್ಸಾಹಿಸಿ ಕಮೆಂಟಿಸಿದವರಿಗೆ, ಕಮೆಂಟಿಸಿ ಕಾಲೆಳೆದವರಿಗೆ – ಹೀಗೆ ಎಲ್ಲರಿಗೂ ಎಲ್ಲರಿಗೂ ತುಂಬು ಹೃದಯದ ಧನ್ಯವಾದ.

ತಮ್ಮ ಹಾರೈಕೆ ಹೀಗೇ ಇರುತ್ತದೆಂದು ಆಶಿಸುವ

ವಿಶ್ವಾಸಿ

ಸುಘೋಷ್ ಎಸ್ ನಿಗಳೆ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

Ekalavya

Ekalavya
Ekalavya

Dear Friends,

EKALAVYA

CHITRASAMOOHA is happy to announce that the above film by Baraguru Ramachandrappa is this weekend’s film at Chitravarsha. The film is produced by Dev Nagesh · The film has received the best Children Film of the year 2007-2008 in the Karnataka State Film Competition, · This film was shown in Trissur International Film Festival, Kerala Please see the attachment for the further details. There will be two screenings of the film and details are as follows.

Date Saturday the July 24 and Sunday the July 25,. 2010.

Time 6.30pm on both the days.

Venue Suchitra Auditorium. B.V.Karanth Road. Next to Post Office Banashankari 2nd Stage

Ticket Rs 40/-

Please come to the film with family and friends. Please note that Suchitra is a mini theater and has just 120 seats. Tickets can be booked in advance too. For further details contact Chitrasamooha (Mob 9743531223).

Regards Chitrasamooha

ನಕಲಿ ನ್ಯಾಯಾಲಯ, ನಕಲಿ ಪೋಲಿಸ್ ಸ್ಟೇಷನ್

ಕೃಪೆ - ವಿಜಯ ಕರ್ನಾಟಕ

ಇನ್ನು ನಾಲ್ಕೇ ನಾಲ್ಕು ದಿನ ಬಾಕಿ,,,,ನನ್ನ ಬ್ಲಾಗಿನ ಹುಟ್ಟುಹಬ್ಬಕ್ಕೆ

ಯಶಸ್ವೀ ಭವ

ಹೌದು. ಇನ್ನು ಕೇವಲ ನಾಲ್ಕು ದಿನ ಬಾಕಿ ಇದೆ ನನ್ನ ಬ್ಲಾಗಿನ ಹ್ಯಾಪಿ ಬರ್ತ್ ಡೇ ಗೆ. ಅಂದು ಗಂಟೆಗೊಂದರಂತೆ 12 ಬೆಸ್ಟ್ ಲೇಖನಗಳನ್ನು ಪ್ರಕಟಿಸಬೇಕೆಂದುಕೊಂಡಿದ್ದೆ. ಆದರೆ ಯೋಜನೆ ಕೊಂಚ ಬದಲಾಗಿದೆ. ಗಂಟೆಗೊಂದರಂತೆ ಲೇಖನಗಳು ಪ್ರಕಟವಾದರೆ ಸ್ವಲ್ಪ ಹೆವಿಯಾಗಬಹುದು ಅನ್ನಿಸಿದ್ದರಿಂದ, ಕೆಲ ಬೆಸ್ಟ್ ಲೇಖನಗಳನ್ನು ದಿನಕ್ಕೊಂದರಂತೆ ಮರುಪ್ರಕಟಿಸಲು ನಿರ್ಧರಿಸಿದ್ದೇನೆ. ಇದರ ಜೊತೆಗೆ ಸಿಹಿ ಸುದ್ದಿಯೊಂದರ ಬ್ರೇಕಿಂಗ್ ನ್ಯೂಸ್ ಅಂತೂ ಇದ್ದೇ ಇದೆ. ಹಿರಿಯರ ಆಶೀರ್ವಾದ, ಕಿರಿಯರ ಪ್ರೀತಿ, ಒಂದೇವಾರ್ಗಿಯವರ ಸಹಕಾರ ನನ್ನ ಮೇಲೆ ಸದಾ ಇರಲೆಂದು .

ವಿಶ್ವಾಸಿ

ಸುಘೋಷ್ ಎಸ್. ನಿಗಳೆ.

ಗೇರ್ ಸೈಕಲ್ ಹೊಡೆಯುವ ಪುರುಷಾರ್ಥವಾದರೂ ಏನು?

ಆರಂಭದಲ್ಲಿ ಬಳಕೆಗೆ ಬಂದ ಸೈಕಲ್ ಗಳು

ನನ್ನ ಪ್ರಕಾರ ಚಕ್ರಗಳ ಆವಿಷ್ಕಾರವಾಗಿದ್ದು ಆದಿಮಾನವನ ಕಾಲದ ಕ್ರಾಂತಿಯಾದರೆ, ಸೈಕಲ್ ಆವಿಷ್ಕಾರವಾಗಿದ್ದು ಮಾನವ ಇತಿಹಾಸದಲ್ಲಿ ಆದ ಎರಡನೇ ಅತಿ ದೊಡ್ಡ ಕ್ರಾಂತಿ. ಹಲವಾರು ಪ್ರಯತ್ನ ಮತ್ತು ತಪ್ಪುಗಳ (ಟ್ರಯಲ್ ಅಂಡ್ ಎರರ್) ನಂತರ ಬಂದ ಎರಡು ಸಮನಾದ ಚಕ್ರಗಳ ಸೈಕಲ್ ಒಂದು ಹಂತದಲ್ಲಿ ತೀರ ಜನಪ್ರಿಯವಾಯಿತು. ಇಂದು ಬೀಟೆಲ್ ಕಾರು ಇಟ್ಟುಕೊಂಡಿರುವಷ್ಟೇ ಪ್ರತಿಷ್ಠೆ, ಅಂದು ಸೈಕಲ್ ಇಟ್ಟುಕೊಂಡವರಲ್ಲಿ ಇರುತ್ತಿತ್ತು. ಆ ಸೈಕಲ್ ಗೆ ಡೈನಮೋ ಇದ್ದರಂತೂ ಮುಗಿದೇ ಹೋಯಿತು. ಅದು ಎಸಿ ವೋಲ್ವೋ ಬಸ್ಸೇ ಸರಿ.

ಹರ್ಕ್ಯುಲೆಸ್, ಹಿರೋ, ಏವನ್, ಬಿಎಸ್ಎ-ಎಸ್ಎಲ್ಆರ್, ಮುಂತಾದ ಸೈಕಲ್ ಗಳಂತೂ ತಲೆಮಾರುಗಳನ್ನೇ ಆಳಿಬಿಟ್ಟವು. ಸೆಂಟರ್ ಬಾರ್ ಮೇಲೆ ಮಾಡಿಸಿದ ಪುಟ್ಟ ಕುಷನ್ ಸೀಟ್ ನಲ್ಲಿ ಕುಳಿತು ಅಪ್ಪನ ಜೊತೆ ಸೈಕಲ್ ಮೇಲೆ ಹೋದ ನೆನಪು ನನಗಿನ್ನೂ ಇದೆ. ನಂತರ ಅದೇ ಸೈಕಲ್ಲನ್ನು ಕತ್ತರಿಗಾಲಲ್ಲಿ ಹೊಡೆಯಲು ಹೋಗಿ ಬಿದ್ದದ್ದು, ನಂತರ ಮನೆಗೆ ಬಂದ ಅಣ್ಣನ ಬಿಎಸ್ಎ ಸೈಕಲ್ಲನ್ನು ಪ್ರಪ್ರಥಮ ಬಾರಿ ಬ್ಯಾಲೆನ್ಸ್ ಮಾಡಿ ಹೊಡೆದಾಗ ಆದ ಖುಷಿ ಎಲ್ಲವೂ ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಸೈಕಲ್ ಯಾವತ್ತೂ ನನ್ನ ನೆಚ್ಚಿನ ಸಂಗಾತಿ. ಇಂದಿಗೂ ನನ್ನ ಬಳಿ ನಾನು ಕಾಲೇಜಿನಲ್ಲಿ ಬಳಸುತ್ತಿದ್ದ ಮ್ಯಾಕ್ ಒನ್ ಸೈಕಲ್ ಇದೆ. ಅದರ ಬಳಕೆ ಕಡಿಮೆಯಾಗಿದ್ದರೂ, ಅದನ್ನು ಹೊಡೆದಾಗ ನನಗೆ ಏನೋ ಒಂದು ರೀತಿಯ ಉತ್ಸಾಹವಿರುತ್ತದೆ. ಬಾಲ್ಯ ಮರುಕಳಿಸಿದ ಹಾಗೆ ಅನಿಸುತ್ತದೆ.

ಆದರೆ, ಈಗ ಬಂದಿವೆ ನೋಡಿ ಗೇರ್ ಸೈಕಲ್ ಗಳು….ಅವು ಇಡೀ ಸೈಕಲ್ ಪದದ ಅರ್ಥವನ್ನೇ ಹಾಳುಮಾಡಿಬಿಟ್ಟಿವೆ. ಇಡೀ ಶರೀರಕ್ಕೆ ಉತ್ತಮ ವ್ಯಾಯಾಮ ಒದಗಿಸಬೇಕಾಗಿದ್ದ ಸೈಕಲ್ ಗಳು, ಗೇರ್ ಗಳ ಹಾವಳಿಯಿಂದಾಗಿ ಬರಗೆಟ್ಟು ಹೋಗಿವೆ. ಗೇರ್ ಹೆಸರಿನಲ್ಲಿ ಸೈಕಲ್ ಚೈನನ್ನು ಇಪ್ಪತ್ತೆಂಟು ಕಡೆ ತಿರುಚಲಾಗಿರುತ್ತದೆ. ಗೇರ್ ಹಾಕುವಾಗ ಕಿರ್ ಕಿರ್ ಶಬ್ದ ಬರುತ್ತದೆಯೇ ಹೊರತು, ಎಂಥ ರಸ್ತೆಯಲ್ಲಿ ಎಂಥ ಗೇರ್ ಹಾಕಬೇಕು ಅಂತ ಬೆರಳೆಣಿಕೆ ಮಂದಿಗಷ್ಟೇ ಗೊತ್ತಿರುತ್ತದೆ. ಅದಕ್ಕೇ ಅಲ್ಲವೇ ಏರು ರಸ್ತೆಯಲ್ಲಿ ರಪರಪನೇ ಪೆಡಲ್ ತುಳಿಯುತ್ತಿದ್ದರೂ, ಗೈರ್ ಸೈಕಲ್ ಮುಂದೆಯೇ ಹೋಗುವುದಿಲ್ಲ. ಅದೇ ರೆಗ್ಯುಲರ್ ಸೈಕಲ್ ನೋಡಿ, ಸ್ವಲ್ಪ ತುಳಿಯಿರಿ ಸಾಕು, ಅಷ್ಟು ದೂರ ಹೋಗಿರುತ್ತೀರಿ.

ಇನ್ನು ಗೇರ್ ಹೆಚ್ಚಾದಷ್ಟೂ ಅವುಗಳ ಬೆಲೆಯೂ ಹೆಚ್ಚು. ಆದರೆ ಅವುಗಳ ಉಪಯೋಗ ಮಾತ್ರ ತಿಳಿಯದು. ಮೊದಲೆಲ್ಲ ಬಡವರ ನೆಚ್ಚಿನ ವಾಹನವಾಗಿದ್ದ ಸೈಕಲ್, ಇಂದು ಕೈಗೆಟುಕದ ಬೆಲೆಗೆ ತಲುಪಿವೆ. ಗೇರ್ ಇಲ್ಲದ ಸೈಕಲ್ ಕೇಳಿದರೆ, ನಮ್ಮನ್ನು ಹಳೆಯ ಪಳಿಯುಳಿಕೆಗಳಂತೆ ಅಂಗಡಿಯವರು ನೋಡುವುದೂ ಇದೆ. ಹಾಳಾಗಿ ಹೋಗಲಿ ಎಂದು ಗೇರ್ ಇರುವ ಸೈಕಲ್ ಕೊಂಡರೆ, ಕೊಂಡ ಕೆಲವೇ ವರ್ಷಗಳಲ್ಲಿ ಅಥವಾ ತಿಂಗಳುಗಳಲ್ಲಿ ಆ ಗೇರ್ ಗಳು ತಮ್ಮ ತಿಥಿಯನ್ನು ಸಾಂಗವಾಗಿ ಆಚರಿಸಿಕೊಂಡಿರುತ್ತವೆ. ಹಿಂಗಿರಬೇಕಾದರೆ, ಗೇರ್ ಸೈಕಲ್ ಹೊಡೆಯುವ ಪುರುಷಾರ್ಥವಾದರೂ ಏನು?

ನಿಮ್ಮಂಥ ಹಲ್ಕಟ್ ಗಳಿಂದಲೇ ಹೀಗಾಗೋದು

ಜನ-ವಾಹನ ನಿಬಿಡ ರಸ್ತೆ. ಜನ ನೋಡನೋಡುತ್ತಿರುವಂತೆ ವ್ಹೀಲಿ ಮಾಡುತ್ತಿದ್ದ ತರುಣನೊಬ್ಬ ದಭಾರ್ ಎಂದು ಎದುರಿನಿಂದ ಬರುತ್ತಿದ್ದ ಆಟೋವೊಂದಕ್ಕೆ ಡಿಕ್ಕಿ ಹೊಡೆದ. ಆಟೋ ಡ್ರೈವರ್, ಹಿಂದೆ ಕುಳಿತ ಪ್ರಯಾಣಿಕನಿಗೆ ಸಾಧಾರಣ ಗಾಯವಾಯಿತು. ಈ ತರುಣನಿಗೆ ಕೂಡ ಗಾಯವಾದರೂ ತಕ್ಷಣ ಎದ್ದ. ಜನರೆಲ್ಲ ಬಂದು ಬಿದ್ದವರಿಗೆ ಉಪಚರಿಸಿದರು. ಯಾರೋ ನೀರು ತಂದುಕೊಟ್ಟರು. ಟ್ರಾಫಿಕ್ ಪೋಲಿಸ್ ಪ್ರತ್ಯಕ್ಷನಾಗಿ ವಿಚಾರಿಸತೊಡಗಿದ. ಯಾರಿಗೂ ಅಷ್ಟೇನೂ ಪೆಟ್ಟಾಗಿರಲಿಲ್ಲವಾದ್ದರಿಂದ ಪ್ರಕರಣ ಬಗೆಹರಿಯಿತೆಂದು ಜನರು ಅಂದುಕೊಂಡು ತಮ್ಮ ತಮ್ಮ ಪಾಡಿಗೆ ಹೋಗಲು ಅನುವಾದರು. ಆದರೆ ಅಷ್ಟರಲ್ಲಿ ಅದೆಲ್ಲಿದ್ದರೋ ಪುಣ್ಯಾತ್ಮ….ಆರಡಿ ಮೀರಿದ ಸುಮಾರು 60 ದಾಟಿದ್ದರೂ ಕಟ್ಟು ಮಸ್ತಾಗಿದ್ದ ವೃದ್ಧರೊಬ್ಬರು ಗುಂಪಿನಿಂದ ತೂರಿಕೊಂಡು ಬಂದವರೇ ಆ ತರುಣನ ಕಾಲರ್ ಪಟ್ಟಿ ಹಿಡಿದು ರಪರಪನೆ ಕಪಾಳಕ್ಕೆ ಬಿಗಿಯತೊಡಗಿದರು. ಅಪಘಾತದ ಶಾಕ್ ನಿಂದ ಇನ್ನೂ ಹೊರಬರದ ತರುಣ ಸಮಾ ಏಟು ತಿನ್ನತೊಡಗಿದೆ. ಜನರಿಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವದರ ಮೊದಲೇ ತರುಣ ಕೆಳಗೆ ಬಿದ್ದಿದ್ದ. ಆ ವೃದ್ಧರು ಈಗ ಕಾಲಿನಿಂದ ಒದೆಯಲು ಆರಂಭಿಸಿದ್ದರು. ಅಂತೂ ಇಂತೂ ಜನ ಮಧ್ಯಪ್ರವೇಶಿಸಿ ತರುಣನನ್ನು ವೃದ್ಧರ ತೆಕ್ಕೆಯಿಂದ ಬಿಡಿಸಿದರು. “ಏನ್ರೀ ಏನು ಮಾಡ್ತಾ ಇದ್ದೀರಿ? ಆಕ್ಸಿಡೆಂಟ್ ಆಗಿದೆ. ಪಾಪ ಹುಡುಗ ಬಿದ್ದಿದ್ದಾನೆ. ಅವನನ್ನ ಉಪಚರಿಸೋದು ಬಿಟ್ಟು ಹೊಡೀತಾ ಇದ್ದೀರಲ್ರೀ?” ಎಂದು ಗುಂಪಿನಲ್ಲಿದ್ದವನೊಬ್ಬ ವೃದ್ಧರನ್ನು ತರಾಟೆಗೆ ತೆಗೆದುಕೊಂಡ. “ಸಹಾಯ ಮಾಡದೇ ಇದ್ರೆ ಸುಮ್ಮನೇ ಇರ್ರೀ. ಯಾಕ್ರೀ ದನಕ್ಕೆ ಹೊಡೆದ ಹಾಗೆ ಹೊಡೀತಾ ಇದ್ದೀರಾ?” ಎಂದ ಮತ್ತೊಬ್ಬ. ಎಲ್ಲರೂ ಸೇರಿ ವೃದ್ಧರಿಗೆ ದಬಾಯಿಸತೊಡಗಿದರು.

safe riding

ನಿಧಾನವಾಗಿ ವೃದ್ಧರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ವೃದ್ಧರು ಮಾತಿಗಿಳಿದರು. “ಅನ್ನಿ ಸಾರ್ ಅನ್ನಿ…ಯಾರೂ ಬೇಕಾದ್ರೂ ಏನೂ ಅನ್ನಿ….ಆದ್ರೆ ನನ್ನ ಗೋಳು ಯಾರು ಕೇಳುವವರು ಹೇಳಿ? ನನ್ನ 25 ವರ್ಷದ ಹುಡುಗನ್ನ ನಾನು ಮೊನ್ನೆಯಷ್ಟೇ ಕಳೆದುಕೊಂಡೆ. ಹ್ಯಾಗೆ ಗೊತ್ತಾ? ಈ ದರಿದ್ರ ಮೋಟರ್ ಬೈಕನವನು ಇದ್ದಾನಲ್ಲ….ಇವನಂತಹ ಯಾರೋ ಹಲ್ಕಟ್ ನಿಂದ. ಬೈಕ್ ಓಡಿಸುತ್ತ ಏಳು ವರ್ಷವಾಗಿದ್ದರೂ, ಯಾರಿಗೂ ಒಂಚೂರು ಟಚ್ ಮಾಡದೆ ಜಾಗರೂಕನಾಗಿ ಬೈಕ್ ಓಡಿಸಿದ್ದ ನನ್ನ ಮಗ. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರೆ ಜನ ಇರೋ ರಸ್ತೆನಲ್ಲಿ ವ್ಹೀಲಿ ಮಾಡುತ್ತಿದ್ದವನೊಬ್ಬ ಸೀದಾ ಬಂದು ನನ್ನ ಮಗನ ಎದೆಯ ಮೇಲೇ ಫ್ರಂಟ್ ಟೈರ್ ಗುದ್ದಿದ್ದ. ಗುದ್ದಿದ ರಭಸಕ್ಕೆ ನನ್ನ ಮಗ ಸ್ಥಳದಲ್ಲೇ ಸತ್ತ. ಬೈಕ್ ಇರೋದು ಪ್ರಯಾಣಿಸುವುದಕ್ಕೆ ಕಣ್ರೀ…ಇಂತಹ ಲೋಫರ್ ಗಳು ಜನರಿರೋ ರಸ್ತೆಯಲ್ಲಿ ವ್ಲೀಲಿ ಮಾಡುವುದಕ್ಕಲ್ಲ….ಬಿಸಿರಕ್ತ….ವ್ಲೀಲಿ ಮಾಡಿದರೂ ಜನರಿಲ್ಲದ ಎಷ್ಟೋ ರಸ್ತೆ ಇವೆಯಲ್ಲ…ಅಲ್ಲಿ ಬೇಕಾದರೆ ತೋರಿಸಲಿ ತಮ್ಮ ಗಾಂಚಾಲಿ….ಇಲ್ಯಾಕೆ ಬೇಕು ಹೇಳಿ…”ಹೀಗೆ ವೃದ್ಧರ ಮಾತು ಮುಂದುವರೆಯುತ್ತಿದ್ದಂತೆ ಜನರಿಗೆ ನಿಜವಾಗಿಯೂ ಆ ತರುಣನ ಮೇಲೆ ಸಿಟ್ಟು ಬಂದಿತ್ತು.

ಮಾತಾಡ್ ಮಾತಾಡ್ ಮಲ್ಲಿಗೆ

ಮಲ್ಲಿಗೆ ಮಲ್ಲಿಗೆ
ಮಾತಾಡ್ ಮಾತಾಡ್ ಮಲ್ಲಿಗೆ

CHITRASAMOOHA is happy to announce that the above

film by Nagathihalli Chandrashekar is this weekend’s

film at Chitravarsha. The film is produced by K. Manju and

has Vishnuvardhan and Suhasini in the lead roles.

 • The film has received an award ( Third best film) in the  Karnataka  State Film Competition,
 • This film was shown  in Chennai International Film Festival
 • International film festival of India, Goa

Please see the attachment for the further details.

There will be two screenings of the film and details are as follows.

Date            Saturday the July 17 th and

Sunday the July 18th. 2010.

Time           6.30pm on both the days.

Venue        Suchitra Auditorium.

B.V.Karanth Road.

Next to Post Office

Banashankari 2nd Stage

Ticket       Rs 40/-

Please come to the film with family and friends.

Please note that Suchitra is a mini theater and has just 120 seats. Tickets can be booked in advance too. For further details contact Chitrasamooha (Mob 9743531223).

Regards

Chitrasamooha

ಜುಲೈ 17 ರ ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ….

sorry sorry.....yes papa....

ಅನಿವಾರ್ಯ ಕಾರಣಗಳಿಂದಾಗಿ ಜುಲೈ 17 ರ ವರೆಗೆ ಬ್ಲಾಗ್ ಅಪ್ಡೇಟ್ ಇರುವುದಿಲ್ಲ. ಕ್ಷಮೆಯಿರಲಿ.

ವಿಶ್ವಾಸಿ

ಸುಘೋಷ್ ಎಸ್. ನಿಗಳೆ

ಒಂದು ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ

ಧನ್ಯವಾದ

ಆದರಣೀಯ ಹಿರಿಯರೆ, ನೆಚ್ಚಿನ ಕಿರಿಯರೆ, ಆತ್ಮೀಯ ಒಂದೇವಾರ್ಗಿಯವರೆ,

ಸಮಯವೇ ಹಾಗೇ. ಕಣ್ಣು ಬಿಟ್ಟು ಕಣ್ಣು ತೆಗೆಯುವುದರೊಳಗೆ ಕರಗಿಬಿಟ್ಟಿರುತ್ತದೆ. ಗಟ್ಟಿಯಾಗಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡ ಸಮಯ ಕೂಡ ಹಾಗೇ ಇಲ್ಲವಾಗಿಬಿಡುತ್ತದೆ. ಇದು ಸಮಯದ ಅಡ್ವಾಂಟೇಜ್ ಕೂಡ ಹೌದು.

ನನ್ನ ಬ್ಲಾಗ್ ಇದೇ ತಿಂಗಳ 24 ಕ್ಕೆ ಒಂದು ವರ್ಷ ಪೂರ್ಣಗೊಳಿಸುತ್ತಿದೆ. ಅಂದು, ಈ ವರೆಗೆ ಪ್ರಕಟವಾಗಿರುವ ಲೇಖನಗಳಲ್ಲಿ 12 ಬೆಸ್ಟ್ ಲೇಖನಗಳು, 12 ಬೆಸ್ಟ್ ಛಾಯಾಚಿತ್ರಗಳು ಗಂಟೆಗೊಂದರಂತೆ ಪ್ರಕಟವಾಗಲಿವೆ. ಬ್ಲಾಗಲ್ಲಿ ಹೆಚ್ಚು ಓದಿಸಿಕೊಂಡ ಲೇಖನ, ಬಯ್ಯಿಸಿಕೊಂಡ ಲೇಖನ, ವಿವಾದಕ್ಕೊಳಗಾದ ಲೇಖನ ಹೀಗೆ ಎಲ್ಲವೂ ಮತ್ತೊಮ್ಮೆ ಹಾಜರಾಗಲಿದೆ. ಜೊತೆಗೆ, ಸಿಹಿಸುದ್ದಿಯೊಂದನ್ನು ಅಂದು ತಮ್ಮೆಲ್ಲರೊಂದಿಗೆ ಹಂಚಿಕೊಳ್ಳಲಿದ್ದೇನೆ.

ಬ್ಲಾಗನ್ನು ಪೋಷಿಸಿದ ಎಲ್ಲರಿಗೂ ತುಂಬ ಹೃದಯದ ಧನ್ಯವಾದ.

ಸುಘೋಷ್ ಎಸ್. ನಿಗಳೆ.

ಎಂತೆಂತಹ ಫ್ರಾಡ್ ಗಳಿರ್ತಾರೆ ಮಾರಾಯ್ರೆ

ನಿಮಗೂ ಕೂಡ ಇಂತಹ ಫ್ಲಾಡ್ ಮೇಲ್ ಬಂದಿರಬಹುದು. ಬಂದಿಲ್ಲವಾಗಿದ್ದರೆ ಓದಿ. ಮೋಸಹೋಗಬೇಡಿ. ವಿಪರ್ಯಾಸವೆಂದರೆ ಇಂತಹ ಮೇಲ್ ನಂಬಿ ಮೋಸ ಹೋಗುವ ಗೂಬೆಗಳೂ (ಪ್ರಾಣಿಪ್ರಿಯರ ಕ್ಷಮೆ ಕೇಳಿ ಉಪಮೆ) ಇದ್ದಾರೆ.

ಫ್ರಾಡೇಶ್ವರ ಮುರ್ದಾಬಾದ್

My dear,

I’m Malaysian and my name is Rohaya Md Nor,am in the hospital due to my cancer and my doctor told me that i will die in less three months time so as the treatments is going on am looking of a friend who can take up my charity project that I have be wanting to start but at  this moment I cannot do it since I have a severe case of Esophagus cancer.I would like to leave my life savings for a humanitarian organization or an individual who s’ willing to come up with a charity organization to  cater for the less fortunate kids and orphans who have lost their parents due to natural causes and the person will take 20%  of my funds and 80% will be used for the project.I grew up as an orphan and i don,t have family member or friend to trust to take care of this project. Like they say, the angel you know is worse than the devil you don’t know. I will provide you with detailed information  once you indicate your willingness.

PLEASE CONTACT ME DIRECTLY ON     norrohaya11@live.com

Mrs Rohaya Md Nor

ರಂಗ ಮಿತ್ರರ ನಾಟಕಕಗಳು

ಬನ್ನಿ...ನೋಡಿ...ಪ್ರೋತ್ಸಾಹಿಸಿ

ರಂಗಮಿತ್ರರು

ಅರ್ಪಿಸುವ ನಾಟಕಗಳು

ತೆರೆಗಳು’

ಹಾಗೂ

‘ ಪೋಲೀಸರಿದ್ದಾರೆ  ಎಚ್ಚರಿಕೆ!! ’

೧೫ ಜುಲೈ,೨೦೧೦,

ಸಂಜೆ ೭ ರಿಂದ ೮.೩೦

ಸಂಜೆ ೭ ರಿಂದ ೮.೩೦

ರಚನೆ : ಪಿ. ಲಂಕೆಶ್

ನಿರ್ದೇಶನ : ನರೇಂದ್ರ ಕಶ್ಯಪ್

———–

ಮನೆಮನಗಳಲ್ಲಿ ಮನರಂಜನೆ

ಬಂಧುಗಳೇ, ರಂಗಮಿತ್ರರು ತಂಡವು ಪ್ರಾಯೋಜಕರ ಹುಡುಕಾಟದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ಪ್ರದರ್ಶನಗಳನ್ನು ಪ್ರಾಯೋಜಿಸಿದಲ್ಲಿ ಈ ಸ್ಥಳವನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ. ತಾವು ಮುಂದೆ ಬಂದು ಅಥವಾ ನಮಗೆ ಪ್ರಾಯೋಜಕರನ್ನು ಪರಿಚಯಿಸುವ ಮೂಲಕ ಒಂದು ಸದುದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡಕ್ಕೆ ಬೆಂಬಲ ನೀಡುವಿರೆಂದು ನಂಬಿದ್ದೇವೆ.

ಸಭೆಗಳಲ್ಲಿ, ಸಮಾರಂಭಗಲ್ಲಿ, ಉತ್ಸವಗಳಲ್ಲಿ ನಮಗೆ ಅವಕಾಶವಿತ್ತು, ತಂಡವನ್ನು ಬೆಳೆಸಬೇಕೆಂದು ಈ ಮೂಲಕ ಕೋರುತ್ತೇವೆ.

ಸಂಪರ್ಕ:- ಮಹೇಶ್ ಸಾಗರ್- 9886159150, ನರೇಂದ್ರ ಕಶ್ಯಪ್- 9591888390,

ರೇಣುಕ- 9845526477

ನಮ್ಮೊಂದಿಗೆ:-

ಡಾ|| ಬಿ.ವಿ.ರಾಜಾರಾಂ,ಅಧ್ಯಕ್ಷರು,ಕರ್ನಾಟಕ ನಾಟಕ ಅಕ್ಯಾಡೆಮಿ

ಪ್ರೊ|| ಹೆಚ್.ವಿ.ವೇಣುಗೋಪಾಲ್,

ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್,

ಸಂಸ ಮಾಸ ಪತ್ರಿಕೆ

ಕೃತಙ್ಞತೆಗಳು:-

ಕರ್ನಾಟಕ ನಾಟಕ ಅಕ್ಯಾಡೆಮಿ

ಎ.ಡಿ.ಎ. ರಂಗಸಂಸ್ಥೆ

ನಾವು ಗೇಯ್ದು ಗಳಸ್ತೀವಿ, ನೀವು ….ಯ್ದು ಗಳಸ್ತೀರಿ.

ಶಿವಪ್ಪ ಕಾಯೋ ತಂದೆ....

(ಸತ್ಯ ಘಟನೆ)

ಅಪ್ಪನಿಗೆ 7 ಏಕರೆ ಫಲವತ್ತಾದ ಜಮೀನಿತ್ತು. ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬನೇ ಮಗನಿಗೆ ಅದನ್ನು ವಹಿಸಿ ಸುಖವಾಗಿ ಸಾಯಬೇಕೆಂದು ಅಪ್ಪನ ಆಸೆ. ಕೃಷಿಯೆಂದರೆ ಕೆಸರು, ಮಣ್ಣು ಎಂಬ ಭಾವನೆ ಮಗನಿಗಿಲ್ಲವಾದರೂ, ಕೃಷಿಯೆಂದರೆ ಅಷ್ಟಕಷ್ಟೆ. ತಂದೆಯ ಒತ್ತಾಯಕ್ಕೆ ಕೆಲ ದಿನ ದುಡಿದಂತೆ ಮಾಡಿದ ಮಗ ನಂತರ ನಗರ ಸೇರಿಬಿಟ್ಟ. ಅಲ್ಲಲ್ಲಿ ಸಿಕ್ಕಸಿಕ್ಕ ಕೆಲಸ ಮಾಡಿದ. ಮಾಡಿದ. ಮಾಡಿದ. ಮಾಡುತ್ತಲೇ ಹೋದ. ಕೈಯಲ್ಲಿ ಕಾಸು ಓಡಾಡದಿದ್ದರೂ ಶೋಕಿಗೇನೂ ಕೊರತೆಯಿರಲಿಲ್ಲ. ಒಮ್ಮೆ ಹಳ್ಳಿಗೆ ಮರಳಿದಾಗ ಅಪ್ಪನಿಗೆ ಅಂತ ಶಾಲು, ಕೋಲು, ಪಂಚೆ, ಅಂತ ಉಡುಗೊರೆಗಳನ್ನು ತಂದಿದ್ದ. ಇದೆಲ್ಲ ನೋಡಿದವನೇ ಅಪ್ಪ, ಕೋಪಗೊಂಡು “ನಾವೆಲ್ಲ ಇಲ್ಲಿ ಹಳ್ಳಿಯಲ್ಲಿ ಗೇಯ್ದು ಗಳಸ್ತೀವಿ….ನೀವು ಅಲ್ಲಿ ಕೇಯ್ದು ಗಳಸ್ತೀರಿ” ಅಂತ ಅಬ್ಬರಿಸಿ, ಎಲ್ಲ ಉಡುಗೊರೆಗಳನ್ನು ತಿರಸ್ಕರಿಸಿಬಿಟ್ಟ. ಬಂಗಾರಂದತಹ ಜಮೀನನ್ನು ನೋಡಿಕೋಳ್ಳದ ವೃದ್ಧ ತಂದೆಯ ಕೋಪ ಸ್ಫೋಟಿಸಿತ್ತು. ಅದಾದ ಕೆಲ ದಿನಗಳ ನಂತರ ಅಪ್ಪ ಕೊರಗಿನಲ್ಲಿಯೇ ತೀರಿಕೊಂಡ. ಮಗ ಇನ್ನೂ ನಗರದಲ್ಲಿ ಕೆಲಸ ಮಾಡುತ್ತಿದ್ದಾನೆ. ಏಳು ಎಕರೆ ಭೂಮಿ ಪಾಳು ಬೀಳುತ್ತಿದೆ.

ಇದು ನಮ್ಮ ಟ್ರಾಫಿಕ್ ಪೋಲಿಸರ ಹಣೆಬರಹ….

ಮೊನ್ನೆ ರಾಯನ್ ಸರ್ಕಲ್ ಬಳಿ ತೆಗೆದಿದ್ದು….

ಅಜಯಕುಮಾರೇಶ್ವರ ನೀನೇ ಕಾಪಾಡಪ್ಪ....

ಗುಲಾಬಿ ಟಾಕೀಸ್

ಗುಲಾಬಿ ಟಾಕೀಸ್
ಗುಲಾಬಿ ಟಾಕೀಸ್
ಗುಲಾಬಿ ಟಾಕೀಸ್
ಗುಲಾಬಿ ಟಾಕೀಸ್

Dear Friends,

GULABI TALKIES

CHITRASAMOOHA  screens GULABI TALKIES ,a film by Girish Kasaravalli in Chitravarsha, their programme of screening award winning Kannada films on every week ends. The film  has received the following awards

 • Best Film at the Osian’s Cinefan festival of Asian and Arab Cinema,
 • Best Actress (Umashri) at the Osian’s Cinefan festival of Asian and Arab Cinema,
 • Best film – Jury award at International Film Festival, Vesoul. France
 • Best Script at the Lavente Film Festival,Italy.
 • National Award -Best Kannada Film award
 • National Award Best Actress (Umashree)
 • Karnataka State Award –Best Film.
 • Karnataka State Award –Best Acxtress(Umashree)
 • Karnataka State Award –Best Script
 • This film was shown in more than 30 International Film Festivals across the world  the following film festivals
 • London, Rotterdam, Shanghai(China), Bangkok, Abu Dhabi, Brisbane(Australia), Singapore, Madrid(Spain), Tallinn, Munich(Germany), Vesoul(France), Lavente (Italy),Palm Spring (US) Etc
 • International film festival of India, Goa, Trivandrum, Mumbai, Kolkata, Pune, Bangalore, Delhi, Chennai etc

Based on a story by Vaidehi the film is Produced by Basant Kumar Patil. Please see the attachment for further details.

There will be two screenings of the film and details are as follows.

Date            Saturday the July 10th. and

Sunday the July 11th. 2010.

Time           6.30pm on both the days.

Venue        Suchitra Auditorium.

B.V.Karanth Road.

Next to Post Office

Banashankari 2nd Stage

Ticket       Rs 40/-

Please note that Suchitra is a mini theater and has just 120 seats. Tickets can be booked in advance too. For further details contact Chitrasamooha (Mob 9743531223)

Regards

Chitrasamooha

ಇದು ಎಂಥಾ ದೇಶ ಅಂದ್ರೆ…

ಇದು ಎಂಥ ದೇಶ ಅಂದ್ರೆ
ಕೃಪೆ - ವಿಜಯ ಕರ್ನಾಟಕ