ಭಗವಂತ ಪಿನ್ ಕೊಟ್ಟ ಸೇಫ್ಟಿಗಂತ…

(ಅಕ್ಟೊಬರ್ 8, 2009 ರಂದು ಪ್ರಕಟವಾದ ಲೇಖನ).

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ

ಮಹಿಳೆಯರು ಬಸ್ ಗಳಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಅಂಗಚೇಷ್ಟೇ ಮಾಡಿ ಕಾಟ ಕೊಡುವಸಭ್ಯ ಪುರುಷರು ಎಲ್ಲಕಡೆಗೂ ಇರುವವರೇ. ರಾತ್ರಿ ಪ್ರಯಾಣಿಸುವಾಗಲಂತೂ ಇವರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಆ ಮಹಿಳೆಗಾಗುವ ದೈಹಿಕ, ಮಾನಸಿಕ ಕಿರುಕುಳವಂತೂ ಹೇಳತೀರದಷ್ಟು. ಸಾಮಾನ್ಯವಾಗಿ ಮಧ್ಯವಯಸ್ಸು ದಾಟುತ್ತಿರುವ ಪುರುಷರು ಇಂತಹ ದುಸ್ಸಾಹಸಕ್ಕೆ ಕೈಹಾಕುವುದು ಹೆಚ್ಚು. ಇಂತಹ ಪುರುಷನೊಬ್ಬನಿಂದ ಪಾರಾದ ನನ್ನ ಸಂಬಂಧಿಕಳೊಬ್ಬಳ ಅನುಭವ ಇಲ್ಲಿದೆ.

ಓವರ್ ಟು ನನ್ನ ಸಂಬಂಧಿಕಳು…..

ಮಂಗಳೂರಿನಿಂದ ಉಡುಪಿಗೆ ಹೊರಟಿದ್ದೆ. ಹೊರಡುವಾಗ ಖಾಲಿಯೇ ಇದ್ದ ಬಸ್, ಸ್ಟಾಪ್ ಗಳು ಕಳೆದಂತೆಲ್ಲ ಜನರಿಂದ ತುಂಬತೊಡಗಿತು. ಇಬ್ಬರು ಕೂರುವ ಸೀಟ್ ನಲ್ಲಿ ನಾನು ಕುಳಿತಿದ್ದೆ. ನನ್ನ ಪಕ್ಕದಲ್ಲಿ ಸುಮಾರು 45 ವಯಸ್ಸಿನ ವ್ಯಕ್ತಿಯೊಬ್ಬ ಬಂದು ಕುಳಿತ. ಸ್ಪಲ್ಪ ಸಮಯ ಕಳೆದಿರಬೇಕು. ಆತ ನಿದ್ದೆಗೆ ಜಾರಿದ. ನಾನು ಕಿಟಕಿಯಿಂದ ಆಚೆ ನೋಡುತ್ತ ಕುಳಿತಿದ್ದೆ. ನಿಧಾನವಾಗಿ ಆತನ ತಲೆ ನನ್ನ ಭುಜದ ಮೇಲೆ ವಾಲಲಾರಂಭಿಸಿತು. ನನಗಿಂತ ತುಂಬ ಹಿರಿಯನಾದ್ದರಿಂದ ಹಾಗೂ ತುಂಬ ಸಭ್ಯನಂತೆ ಕಾಣುತ್ತಿದ್ದುದರಿಂದ ನಾನೂ ಸುಮ್ಮನಿದ್ದೆ. ಆದರೆ ನಂತರ ಈ ವಾಲಿಕೆ ತುಸು ಅತೀ ಎನ್ನಿಸುವಷ್ಟು ಹೆಚ್ಚಾಯಿತು. ಕೈಯಿಂದ ಆತನ ತಲೆಯನ್ನು ಸರಿಸಿದೆ. ಸ್ಪಲ್ಪ ಸಮಯ ಸರಿಯಾಗಿದ್ದ ಆತನ ತಲೆ ಮತ್ತೆ ನನ್ನ ಭುಜದ ಮೇಲೆ ವಾಲಿತು. ಈ ಬಾರಿ ಆತನ ದೇಹ ಕೂಡ ಸ್ವಲ್ಪ ವಾಲತೊಡಗಿತ್ತು. ನನಗೆ ಕಿರಿಕಿರಿ ಆಗಲಾರಂಭಿಸಿತು. ಎತ್ತಲೋ ನೋಡುತ್ತಿದ್ದ ನಾನು ಆತನ ಕಡೆ ಛಕ್ಕನೆ ತಿರುಗಿದಾಗ ಆಸಾಮಿ ವಾರೆಗಣ್ಣಿನಿಂದ ನನ್ನನ್ನು ನೋಡುತ್ತಿರುವುದು ಗಮನಕ್ಕೆ ಬಂತು. ಓಹೋ ಇದು ಸಾಮಾನ್ಯವಾದ ನಿದ್ದೆಯಲ್ಲ ಎಂದು ಫಕ್ಕನೆ ಹೊಳೆಯಿತು. ಈ ಬಾರಿ ಸ್ಪಲ್ಪ ರಫ್ ಆಗಿಯೇ ಆತನ ತಲೆ ಸರಿಸಿದೆ. ನಿದ್ದೆಯಿಂದ ಎದ್ದವರಂತೆ ನಟಿಸುತ್ತ ನನಗೆ ಬಸ್ ನಲ್ಲಿ ಮಲಗಿ ಪ್ರಯಾಣಿಸುವುದೇ ಅಭ್ಯಾಸಎಂದು ಭಾರೀ ಸಾಭ್ಯಸ್ತನಂತೆ ಪೋಸು ಕೊಡುತ್ತ ಮತ್ತೆ ತಲೆ ವಾಲಿಸಲಾರಂಭಿಸಿದ.

ಆಸಾಮಿಗೆ ಚಿಕಿತ್ಸೆ ಅನಿವಾರ್ಯವಾಗಿತ್ತು. ಬಳೆಗಳಿಗೆ ಸಿಕ್ಕಿಸಿಕೊಂಡಿದ್ದ ಸೇಫ್ಟಿ ಪಿನ್ ತೆಗೆದೆ. ನಿಧಾನವಾಗಿ ನನ್ನ ಭುಜದ ಬಳಿ ಹಿಡಿದೆ. ಇದನ್ನು ಗಮನಿಸದ ಆತ ಟರ್ನಿಂಗ್ ಒಂದರಲ್ಲಿ ತುಸು ಜೋರಾಗಿಯೇ ತಲೆ ವಾಲಿಸಿದ. ಕಿವಿಯ ಪಕ್ಕ ಕಚಕ್ ಎಂದು ಚುಚ್ಚಿತು ನೋಡಿ…ಪಿನ್ನು, ಕೈಯಿಂದ ನೀವಿಕೊಳ್ಳುತ್ತ ಸಿಟ್ಟಿನಿಂದ “ಇದೇನಮ್ಮ ಮಾಡುತ್ತೀದ್ದೀಯಾ?” ಎಂದು ಕೇಳಿದ.

ನನಗೆ ಬಸ್ ನಲ್ಲಿ ಹೀಗೆ ಪಿನ್ ಹಿಡಿದುಕೊಂಡೇ ಪ್ರಯಾಣಿಸುವುದು ಅಭ್ಯಾಸ ಎಂದೆ. ಮುಂದೆ ಆತನ ತಲೆ ನನ್ನ ಭುಜದ ಮೇಲೆ ವಾಲುವುದಿರಲಿ, ಆತ ನಿದ್ದೆ ಮಾಡಿದ್ದರೆ ಕೇಳಿ.