ಫೈವ್ ಸ್ಟಾರ್ ಹೋಟ್ಲಲ್ಲಿ ಒಂದು ದಿನ

ಆಹಹಾ ಬೆಡ್ಡು...

ಏರ್ ಪೋರ್ಟಲ್ಲಿ ಇಳಿಯುತ್ತಿದ್ದಂತೆ ಇನ್ನೋವಾದಿಂದ ಪಿಕಪ್ಪು

ಹೋಟೆಲ್ ಗೆ ಕಾಲಿಡುತ್ತಿದ್ದಂತೆ ಗಿರಿಜಾ ಮೀಸೆಯವನಿಂದ ದೊಡ್ಡ ಸಲಾಮು

ಪಿಂಗಾಣಿ ಗೊಂಬೆಯಂತಿರುವ ಚೆಲವೆಯಿಂದ ಮಾದಕ ನಗೆಯ ಇನಾಮು

ಬಾಗಿಲು ತೆರೆಯಲು ಇಲೆಕ್ಟ್ರಾನಿಕ್ ಚಿಪ್ಪಿನ ಕಾರ್ಡು.

ಬಾತಿಗೆ ಟಬ್ಬು, ದಿನಕ್ಕೊಂದು ಟವಲ್ಲು

ಹೊಸ ಬ್ರಷ್ಷು, ಶವರ್ ಕ್ಯಾಪು, ಸಾಬೂನು

ಕ್ಲೀನ್ ಮೈ ರೂಂ ಬಟನ್ ಒತ್ತಿ ಹೊರ ಹೋದರೆ

ವಾಪಸ್ ಬರುವಷ್ಟರಲ್ಲಿ ಥಳ ಥಳ ಫಳ ಫಳ ರೂಮು

ತಿನ್ನಲು ಚೈನೀಸು, ಕಾಂಟಿನೆಂಟು, ಇಂಡಿಯನ್ನು

ಕುಡಿಯಲು ಸ್ಮಿರ್ನ್ ಆಫು, ಜಿನ್ನು

ಮಲಗಲು ಎರಡಡಿ ದಪ್ಪದ ಕರ್ಲಾನು

ನೋಡಲು 40 ಇಂಚಿನ ಸ್ಕ್ರೀನು

ಇದು ಭಾಗ್ಯ, ಇದು ಭಾಗ್ಯ ಇದು ಭಾಗ್ಯವಯ್ಯ….

ಶವರಿನಿಂದ ಉಗುರುಬೆಚ್ಚಗಿನ ನೀರು

ತಲೆ ಮೇಲೆ ಬಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.

ರಾತ್ರಿಯಾಗುತ್ತಿದ್ದಂತೆ ಮಬ್ಬು ಬೆಳಕಿನಲ್ಲಿ ಸ್ಟ್ರಿಪ್ ಟೀಸು

ಉಳಿದದ್ದಕ್ಕೂ ವ್ಯವಸ್ಥೆಯಿದೆ, ಕೊಟ್ಟರೆ ಫೀಸು.

ಒಂದು ಟೀ ಹೇಳಿದರೆ, ದೊಡ್ಡ ಜಾರೇ ಹಜರ್ರು

ಒಂದು ತಿನ್ನುವಲ್ಲಿ ಹತ್ತು ತಿನ್ನು ಎಂಬುದೇ ಇಲ್ಲಿನ ರೂಲು.

ಟಾಯ್ಲೆಟ್ಟಲ್ಲೂ ಹಾಡ್ತಾರೆ ಸುನಿಧಿ ಚವ್ವಾಣು, ಅನು ಮಲಿಕ್ಕು.

ಇನ್ನು ವಿವರಣೆ ಸಾಕು,

ಕೇಳಿದರೆ ಪಾಯಿಖಾನೆಯಿಲ್ಲದ 69 ಕೋಟಿ ಭಾರತೀಯರು

ಎದೆ ಒಡೆದು ಸತ್ತಾರು….