“ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ”

ಟಚ್ ಅಪ್ ತೆಗೆದುಕೊಳ್ಳುತ್ತಿರುವುದು

ಕಿರುತೆರೆ ಕಲಾವಿದರು ಬೆಂಗಳೂರಿಗರಿಗೆ ಅಪರೂಪದವರೇನಲ್ಲ. ನಾನು ಈ ಹಿಂದೆ ಹೇಳಿದಂತೆ ಹಾದಿಗೊಬ್ಬ, ಬೀದಿಗಿಬ್ಬರು ಕಿರುತೆರೆ ಕಲವಿದರು ಬೆಂಗಳೂರಿಲ್ಲಿದ್ದಾರೆ. ಆದರೆ ಇದೇ ಕಿರುತೆರೆ ಕಲಾವಿದರು ಬೆಂಗಳೂರೇತರ ಜಿಲ್ಲೆಗಳಲ್ಲಿ ಕಂಡರೆ, ಅನೇಕ ಸಲ ಜನರಿಗೆ ನಂಬುವುದು ಕಷ್ಟವಾಗುತ್ತದೆ.

ಶೂಟಿಂಗ್ ಸಲುವಾಗಿ ಮೊನ್ನೆ ಕಾರವಾರಕ್ಕೆ ಹೋಗಿದ್ದೆ. ಎಂದಿನಂತೆ ನಾನು ಹೋದಲ್ಲೆಲೆಡೆ, ಮುಕ್ತ ಮುಕ್ತ ದ ಬಗ್ಗೆಯೇ ಚರ್ಚೆ. ನನ್ನ ಆಕ್ಟಿಂಗ್, ಮುಕ್ತ ಮುಕ್ತ ಕಥೆ ಸಾಗುತ್ತಿರುವ ರೀತಿ, ಟಿಎನ್ಎಸ್ ಸರ್ ಅವರ ವಿಭಿನ್ನ ಧಾರಾವಾಹಿ – ಹೀಗೆ ಜನರೊಡನೆ ಚರ್ಚೆ ಸಾಗಿತ್ತು. ಸಂಜೆ ಶೂಟಿಂಗ್ ಮುಗಿಸಿದ ಬಳಿಕ ನಮ್ಮ ಕ್ಯಾಮರಾಮನ್ ನನ್ನನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ತಮ್ಮ ಪತ್ನಿಗೆ ನನ್ನನ್ನು ಪರಿಚಯಸಿತ್ತ, “ಯಾರು ಗೊತ್ತಾಯ್ತಲ್ಲ?” ಎಂದರು. ಅವರ ಪತ್ನಿ ನನ್ನನ್ನು ಕಂಡು ಗುರುತಿಸಿ ಸಂತಸದಿಂದ ನಮಸ್ಕಾರ ಮಾಡಿದರು. ಅಷ್ಟರಲ್ಲಿ ಕ್ಯಾಮರಾಮನ್ ಅವರ ವಯಸ್ಸಾದ, ದಪ್ಪ ಕನ್ನಡಕ ಹಾಕಿಕೊಂಡಿದ್ದ ತಾಯಿ ಕೂಡ ಹೊರಬಂದರು. ಮತ್ತೆ ನಮ್ಮ ಕ್ಯಾಮರಾಮನ್ ತಮ್ಮ ತಾಯಿಗೆ, “ನೋಡಮ್ಮ, ದೇವಾನಂದಸ್ವಾಮಿ ಬಂದಿದಾರೆ” ಎಂದರು. ಅದಕ್ಕೆ ಆ ತಾಯಿ “ಅಯ್ಯೋ ಹೌದಲ್ಲೋ…ಥೇಟ್ ದೇವಾನಂದಸ್ವಾಮಿಯ ಥರಾನೇ ಇದ್ದಾನಲ್ಲಪ್ಪ” ಎಂದು ಉದ್ಗರಿಸಿದರು. ಕ್ಯಾಮರಾಮನ್ಗೆ ಮುಜುಗರವಾದಂತಾಗಿ, “ಏ ಏನಮ್ಮ,,,ಥೇಟ್ ಹಾಗೆಯೇ ಇದ್ದಾನೆ ಅಂದ್ರೇನು?…ಅವರೇ ಬಂದಿರೋದು” ಎಂದರು. ‘ಮುಖ್ಯಮಂತ್ರಿ ಮಗ’ನನ್ನು ತಮ್ಮ ಮನೆಯಲ್ಲಿ ಕಂಡ ತಾಯಿಯ ಸಂತಸ ಇಮ್ಮಡಿಸಿತು. ನನಗೆ ಮಾತ್ರ ನಗು ತಡೆಯಲಾಗಲಿಲ್ಲ.