ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ…

ಆಫ್ ಮಾಡಿ ಪ್ಲೀಸ್...

ಸೂರ್ಯ ಮನೆ ಸೇರುವ ಮೊದಲೇ ಬೆಂಗಳೂರಿನಲ್ಲಿ ಯಾರೂ ಮನೆ ಸೇರುವುದಿಲ್ಲ. ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಹೋಗುವವರು ರಾತ್ರಿ ಮನೆಗೆ ಹೋದ ಬಳಿಕ ಹೆಡ್ ಲೈಟ್ ಆಫ್ ಮಾಡದೇ ಹಾಗೆಯೇ ಗಾಡಿ ಆಫ್ ಮಾಡಿ ಪಾರ್ಕ್ ಮಾಡಿಬಿಡುತ್ತಾರೆ. ಮಾರನೇ ದಿನ ಮತ್ತೆ ಕೆಲಸಕ್ಕೆ ಹೊರಡುವಾಗ ಗಾಡಿಯ ಹೆಡ್ ಲೈಟ್ ಆನ್ ಆಗಿಯೇ ಇರುತ್ತದೆ. ಇದು ಸವಾರರಿಗೆ ಸಾಮಾನ್ಯವಾಗಿ ಗೊತ್ತಾಗುವುದಿಲ್ಲ. ಆದರೆ ಗಾಡಿಯ ಲೈಟ್ ಆನ್ ಇದೆ ಎಂದು ಮುಂದಿನಿಂದ ಬರುತ್ತಿರುವ ಯಾರೊಬ್ಬರೂ ಹೇಳುವುದೇ ಇಲ್ಲ. ಮರ್ಯಾದೆಗೆ ಕಡಿಮೆ ಎಂದು ಭಾವಿಸುತ್ತಾರೋ, ಅಥವಾ ಬೇರೊಬ್ಬರ ಸುದ್ದಿ ತಮಗೇಕೆ ಎಂದು ಭಾವಿಸುತ್ತಾರೋ ಗೊತ್ತಿಲ್ಲ.

ಬೆಂಗಳೂರಿನಲ್ಲಿ ನಾನು ಎಷ್ಟೋ ಬಾರಿ ಹೀಗೆಯೇ ಲೈಟ್ ಆನ್ ಮಾಡಿಕೊಂಡು ಹೋಗುವಾಗ, ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಹೇಳಿದವರು ಬಹಳಷ್ಟು ಕಡಿಮೆ.

ಆದರೆ ಅದೇ ಬೆಳಗಾವಿಯಲ್ಲಿ ಅಥವಾ ಕೊಪ್ಪದಲ್ಲಿ ಹೀಗೆ ಬೈಕ್ ಲೈಟ್ ಆನ್ ಮಾಡಿಕೊಂಡು ಓಡಿಸಿದರೆ, ಮುಂದಿನಿಂದ ಬರುವ ಪ್ರತಿ ಎರಡನೇ ಅಥವಾ ಮೂರನೇ ವ್ಯಕ್ತಿ, ಕೈಯಿಂದ ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಎಂದು ಹೇಳುತ್ತಾನೆ.

ಇದು ಸಣ್ಣ ವಿಷಯವಾಗಿ ಕಂಡರೂ, ಬೈಕ್ ನ ಬ್ಯಾಟರಿ ಲೈಫ್ ಮೇಲೆ ಪರಿಣಾಮವಾಗುವುದರ ಜೊತೆಗೆ, ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಹೋಗುವುದು ರಾಷ್ಟ್ರೀಯ ನಷ್ಟವಲ್ಲವೆ? ನಾನು ಬೆಂಗಳೂರಿನಲ್ಲಿ ಹೆಡ್ ಲೈಟ್ ಆನ್ ಇರುವುದನ್ನು ಕಂಡಾಗಲೆಲ್ಲ ಕೈಯಿಂದ ಸಿಗ್ನಲ್ ಮಾಡಿ ಎಚ್ಚರಿಸಿದ್ದೇನೆ. ಹೀಗೆ ಮಾಡಿದ್ದಕ್ಕೆ ಕೆಲವೊಮ್ಮೆ ಸವಾರರು ನನ್ನನ್ನೇ ದುರುಗುಟ್ಟಿಕೊಂಡು ನೋಡಿದ್ದಿದೆ. (ನನ್ನ ಬೈಕು, ನನ್ನ ಲೈಟು –  ಇವನಪ್ಪನ ಗಂಟೇನು ಹೋಗುತ್ತದೆ ಎಂಬ ಉಡಾಫೆಯೆ?)

ಏನೇ ಆದರೂ, ಹೆಡ್ ಲೈಟ್ ಆನ್ ಇದ್ದರೆ, ಕಾರಿನ ಡೋರ್ ಸರಿಯಾಗಿ ಕೂತಿರದಿದ್ದರೆ, ಹಿಂದುಗಡೆ ಕುಳಿತ ಮಹಿಳೆಯ ವೇಲ್ ಚಕ್ರಕ್ಕೆ ಸಿಗುವ ಸಂಭವವಿದ್ದರೆ, ನಾನಂತೂ ಸವಾರರನ್ನು ಎಚ್ಚರಿಸುತ್ತಿದ್ದೇನೆ. ಮರ್ಯಾದೆಗಿಂತ ಪ್ರಾಣ ದೊಡ್ಡದಲ್ವೆ?