ಹುಡುಗ ಹುಡುಗನ್ನೇ ಮದುವೆ ಆಗೋ ಈ ಕಾಲ್ದಲ್ಲೂ….

ನಿರ್ವಿಘ್ನಂ ಕುರುಮೇ ದೇವ....

ಟ್ರಿಣ್ ಟ್ರಿಣ್, ಟ್ರಿಣ್ ಟ್ರಿಣ್, ಟ್ರಿ…..

ಹಲೋ….

ಹಲೋ ಸರ್ ನಮಸ್ಕಾರ.

ನಮಸ್ಕಾರ. ಯಾರ್ ಮಾತಾಡೋದು?

ಸರ್, ನಾನು ಹಯವದನ.

ಓಹ್…ಹಯವದನ್. ಏನ್ರೀ ಪತ್ತೇನೇ ಇಲ್ವಲ್ರಿ….ಒಂದು ಫೋನ್ ಇಲ್ಲ, ಒಂದೇ ಮೆಸೇಜ್ ಇಲ್ಲ. ನಿಮ್ಮ ಮೊಬೈಲ್ ಗೆ ಟ್ರೈ ಮಾಡಿದ್ರೆ ಸ್ವಿಚ್ ಆಫ್ ಅಂತ ಬರ್ತಾ ಇತ್ತು….ಹಂ ಇರ್ಲಿ ಬಿಡಿ. ಎಲ್ಲಿ ಇದೀರಾ? ಏನ್ ಮಾಡ್ತಾ ಇದೀರಾ?

ಇಲ್ಲೇ ಬೆಂಗ್ಳೂರಲ್ಲೇ ಇದೀನಿ ಸರ್. ಅದೇ ಸಾಫ್ಟ್ ವೇರ್ ಕಂಪ್ನೀನಲ್ಲೇ ಕೆಲಸ ಮಾಡ್ತಾ ಇದೀನಿ. ಒಂದು ಗುಡ್ ನ್ಯೂಸ್ ಕೋಡೋಣ ಅಂತ ಪೋನ್ ಮಾಡ್ದೆ. ತಾವು ಬಯ್ಯಬಾರ್ದು.

ನೀವು ಗುಡ್ ನ್ಯೂಸ್ ಕೊಟ್ರೆ ನಾನ್ ಯಾಕ್ರೀ ಬೈಲಿ? ಏನು ಗುಡ್ ನ್ಯೂಸು?

ನನ್ನ ಮದುವೆ ಆಯ್ತು ಸರ್.

ಏನು? ಮದುವೆ ಮಾಡ್ಕೊಂಡ್ರಾ? ಹೇ…ಕಾಂಗ್ರಾಚುಲೇಷನ್ಸ್. ಮತ್ತೆ ನಮಗೆಲ್ಲ ಊಟಕ್ಕ್ ಕರೀಲೇ ಇಲ್ಲ. ಹೋಗ್ಲಿ ಇನ್ಫಾರ್ಮೂ ಮಾಡ್ಲಿಲ್ಲ. ಇದು ಅನ್ಯಾಯ ಕಣ್ರೀ….ಅಂದ ಹಾಗೆ ಹುಡುಗಿ ನಾಗವೇಣಿನೇ ತಾನೆ?

ಹೌದು ಸಾರ್. ಅವಳ್ ಜೊತೆನೇ ಮದ್ವೇ ಆಯ್ತು. ನಾಲ್ಕು ವರ್ಷದ ಪ್ರೇಮ. ನಿಮಗ್ ಗೊತ್ತಿಲ್ದೇ ಇದ್ದಿದ್ದು ಏನಿದೆ? ಆದ್ರೆ ಸಾರಿ ಸರ್. ಯಾರಿಗೂ ಇನ್ಫಾರ್ಮ್ ಮಾಡ್ಲಿಕ್ಕೆ ಆಗ್ಲಿಲ್ಲ. ತುಂಬ ಅರ್ಜೆಂಟ್ ಅರ್ಜೆಂಟಲ್ಲಿ ಮದುವೆ ಆಯ್ತು. ಅದೂ ರಿಜಿಸ್ಟರ್ ಮ್ಯಾರೇಜ್ ಸರ್.

ಓಹ್ ಹೌದಾ…..ಯಾಕೆ ಏನಾದ್ರೂ ಪ್ರಾಬ್ಲಂ ಆಯ್ತಾ?

ಪ್ಲಾಬ್ಲಂ ಆಗ್ಲಿಲ್ಲ ಸರ್. ಪ್ಲಾಬ್ಲಂ ಆಗೋ ಹಾಗೆ ಮಾಡಿದ್ರು. ನಾವು ಅಯ್ಯರ್ಸು. ನಾಗವೇಣಿ ಅಯ್ಯಂಗಾರ್ಸು. ನಮ್ ನಮ್ ಪೇರೆಂಟ್ಸ್ ಎಲ್ಲಾ ಒಪ್ಕೊಂಡಿದ್ರು. ಕೊನೆಗೆ ಇಬ್ರದ್ದು ಬೇರೆ ಬೇರೆ ಕಾಸ್ಟು ಅಂತ ಎರಡ ಕಡೆನೂ ಬೇಡ ಅಂದ್ಬಿಟ್ರು.

ಏನ್ ಹಯವದನ….ಈ ಕಾಲ್ದಲ್ಲೂ ಇದೆಲ್ಲ….

ಈ ಕಾಲ್ದಲ್ಲೇ ಹೆಚ್ಚಾಗಿದೆ ಸರ್. ಹುಡುಗ ಹುಡಗನ ಜೊತೆ, ಹುಡುಗಿ ಹುಡುಗಿ ಜೊತೆ ಮದುವೆ ಆಗ್ತಾ ಇರೋ ಇವತ್ತಿನ ಕಾಲದಲ್ಲೂ ಹೀಗೆಲ್ಲ ಆಗತ್ತೆ ಅಂದ್ರೆ ನಂಬಕ್ಕಾಗಲ್ಲ. ಅಲ್ವಾ ಸರ್? ಈಗ ಎರಡೂ ಕಡೆಯವರ ವಿರೋಧ ಕಟ್ಟಿಕೊಂಡೇ ಮದುವೆ ಆಗೀದಿವಿ. ನಿಮ್ಮ ಆಶೀರ್ವಾದ ಬೇಕು ಸರ್.

ಖಂಡಿತ ನನ್ನ ಆಶೀರ್ವಾದ ಇದೆ. ಅಂದ ಹಾಗೆ ಬರೋ ಭಾನುವಾರ ಏನ್ ಮಾಡ್ತಾ ಇದೀರಿ?

ವಿಶೇಷ ಏನೂ ಇಲ್ಲ ಸರ್.

ಹಾಗೆದ್ರೆ ಹೊಸ ಗಂಡ ಹೆಂಡತಿ ನಮ್ಮ ಮನೆಗೆ ಊಟಕ್ಕೆ ಬನ್ನಿ. ಆಮೇಲೆ ಮಾತಾಡೋಣ.

ಸರಿ ಸರ್. ಒನ್ಸ್ ಅಗೇನ್ ಸಾರಿ ಸರ್. ಮದುವೆಗೆ ಕರೀಯೋದಕ್ಕೆ ಆಗ್ದೇ ಇದ್ದದ್ದಕ್ಕೆ.

ನೋ ಇಶ್ಯೂಸ್ ಹಯವದನ. ವಿಶ್ ಯೂ ಎ ಹ್ಯಾಪಿ ಮ್ಯಾರೀಡ್ ಲೈಫ್. ಟೇಕ್ ಕೇರ್. ಬೈ.

ಬೈ. ಥ್ಯಾಂಕ್ಯೂ ಸರ್. ಇಡ್ತೀನಿ.

ಟೀಂ….ಟೀಂ….ಟೀಂ……