1981 ವೀನಸ್ ಸರ್ಕಸ್ ದುರಂತ….

ಖ್ಯಾತ ವಕೀಲ ಸಿ. ಎಚ್. ಹನುಮಂತರಾಯ ಅವರ ವಕೀಲರೊಬ್ಬರ ವಗೈರೆಗಳು ಪುಸ್ತಕದ ಮೇಲೆ ಕಣ್ಣಾಡಿಸುತ್ತಿದ್ದೆ. 1981 ರಲ್ಲಿ ಬೆಂಗಳೂರಿನ ರೈಲು ನಿಲ್ದಾಣದ ಸಮೀಪ ನಡೆದ ವೀನಸ್ ಸರ್ಕಸ್ ನ ಭೀಕರ ಬೆಂಕಿ ದುರಂತದ ಬಗ್ಗೆ ಹನುಮಂತರಾಯರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಛೆ...

ಅದು ವೀನಸ್ ಸರ್ಕಸ್ ನ ಕೊನೆಯ ದಿನವಾಗಿತ್ತು. ರೈಲ್ವೆನಿಲ್ದಾಣದ ಕಡೆಯಿಂದ ಸುಜಾತಾ ಥೇಟರ್ ಗೆ ಹೋಗುವ ದಾರಿಯಲ್ಲಿ ಎಡಕ್ಕೆ ರಸ್ತೆಯ ಮೇಲೆಯೇ ಒಂದು ದೇವಸ್ಥಾನವಿದೆ. ಅಲ್ಲಿಯೇ ರೈಲ್ವೇ ಓವರ್ ಬ್ರಿಜ್ ಕೂಡ ಹಾದು ಹೋಗುತ್ತದೆ. ಅದರ ಪಕ್ಕದಲ್ಲಿ ವೀನಸ್ ಸರ್ಕಸ್ ಬಂದಿತ್ತು. ಕೊನೆಯ ದಿನ ಶಾಲಾ ವಿದ್ಯಾರ್ಥಿಗಳಿಗೆಂದು ರಿಯಾಯತಿ ದರದಲ್ಲಿ ಶೋ ಏರ್ಪಡಿಸಲಾಗಿತ್ತು. ಹೀಗಾಗಿ ವಿವಿಧ ಶಾಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸರ್ಕಸ್ ನೋಡಲು ಬಂದಿದ್ದರು. ಆದರೆ ಶೋ ಮುಗಿಯುವ ಸಂದರ್ಭದಲ್ಲಿ ಅಚಾನಕ್ಕಾಗಿ ಸರ್ಕಸ್ ಟೆಂಟ್ ಗೆ ಬೆಂಕಿ ಹತ್ತಿಕೊಂಡು ಸುಮಾರು 200 ಮಕ್ಕಳು ಪ್ರಾಣಕಳೆದುಕೊಂಡರು. ಬೆಂಕಿ ಮತ್ತು ಕಾಲ್ತುಳಿತ ಮಕ್ಕಳನ್ನು ಬಲಿತೆಗೆದುಕೊಂಡಿತು. ನೂರಾರು ಮಕ್ಕಳು ಗಾಯಗೊಂಡರು. ಬೆಂಕಿಯಿಂದ ಬೆದರಿದ ಸರ್ಕಸ್ ಪ್ರಾಣಿಗಳು ತಪ್ಪಿಸಿಕೊಂಡು ರಸ್ತೆಗೆ ಬಂದು ಸಿಕ್ಕಸಿಕ್ಕಲ್ಲಿ ಓಡಲಾರಂಭಿಸಿದ್ದರಿಂದ, ಮಕ್ಕಳನ್ನು ರಕ್ಷಿಸುವುದು ಮತ್ತಷ್ಟು ಕಷ್ಟವಾಯಿತು. ಹನುಮಂತರಾಯರು ತಮ್ಮ ಪುಸ್ತಕದಲ್ಲಿ ಈ ಘಟನೆಯ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. ಅಂದು ಮಕ್ಕಳನ್ನು ರಕ್ಷಿಸುವುದರಲ್ಲಿ ರಾಯರ ಪಾತ್ರ ಕೂಡ ಇತ್ತು.

ಬೆಂಕಿ ಹತ್ತಿಕೊಳ್ಳಲು ಕಾರಣ, ಬೃಹತ್ ಗಾತ್ರದ ಸರ್ಕಸ್ ಟೆಂಟ್ ಮೇಲೆ ಹಾಯ್ದು ಹೋಗಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗಳು. ಆ ವಿದ್ಯುತ್ ತಂತಿಗಳನ್ನು ಮುಟ್ಟುವ ಅವಶ್ಯಕತೆಯೇ ಇಲ್ಲ. ಹತ್ತಿರ ಹೋದರೂ ಸಾಕು, ಝಳ ಸರಿಯಾಗಿಯೇ ತಟ್ಟುತ್ತದೆ. ವಾಸ್ತವವಾಗಿ ರೈಲ್ವೆ ಟ್ರಾಕ್ ಸಮೀಪ, ಹೈ ಟೆನ್ಶನ್ ತಂತಿಗಳು ಹಾದು ಹೋಗಿರುವ ಸಮೀಪ ಈ ರೀತಿ ಸರ್ಕಸ್ ಟೆಂಟ್ ಹಾಕಲು ಅವಕಾಶ ನೀಡುವಂತೆಯೇ ಇಲ್ಲ. ಆದರೆ ರೈಲ್ವೆ ಅಧಿಕಾರಿಗಳು ಸೇರಿದಂತೆ ಎನ್ ಓ ಸಿ ನೀಡಬೇಕಾಗಿದ್ದ ಅಧಿಕಾರಿಗಳು ಹೇಲು ತಿಂದು ಅನುಮತಿ ನೀಡಿದ್ದರು. ಅವರ ಆ ನೀಚ ಕೆಲಸಕ್ಕಾಗಿ 200 ಮಕ್ಕಳು ಕರಕಲಾಗಿದ್ದರು. ಶ್ರೀಮಾನ್ ಗುಂಡೂರಾಯರು ಆಗ ರಾಜ್ಯವನ್ನು ‘ಮುನ್ನಡೆಸುತ್ತಿದ್ದರು’. ಆ ಇಡೀ ಘಟನೆಯಲ್ಲಿ ಯಾವೊಬ್ಬ ಅಧಿಕಾರಿಗಾಗಲಿ, ಸರ್ಕಸ್ ಕಂಪನಿಯ ಮಾಲೀಕರಿಗಾಗಲಿ ಶಿಕ್ಷೆಯಾಗದೇ ಹೋಗಿದ್ದು ಮಾತ್ರ ವಿಪರ್ಯಾಸ.

ಈ ಘಟನೆಯನ್ನು ‘ಮುಕ್ತ ಮುಕ್ತ’ ದ ಸಂಚಿಕೆ ನಿರ್ದೇಶಕ ವಿನೋದ್ ಧೋಂಡಾಳೆ ಅವರೊಡನೆ ಚರ್ಚಿಸುತ್ತಿದ್ದಾಗ, ಆ ಸಂದರ್ಭದಲ್ಲಿ ನಡೆದ ಕುತೂಹಲ ಘಟನೆಯೊಂದನ್ನು ವಿನೋದ್ ನೆನಪಿಸಿಕೊಂಡರು. ಅದನ್ನು ನಾಳೆ ಬರೆಯುತ್ತೇನೆ.