70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ

ಆಖಿರ್ ಇಸ್ ದರ್ದ್ ಕೀ ದವಾ ಕ್ಯಾ ಹೈ?

ಮೊನ್ನೆ ನಾನು ಹಾಗೂ ನಮ್ಮ ಲೈಟ್ ಆಫೀಸರ್ (ಶೂಟಿಂಗ್ ನಲ್ಲಿ ಲೈಟ್ ನೋಡಿಕೊಳ್ಳುವವರು) ನಡುವೆ ನಡೆದ ಸಂಭಾಷಣೆ.

“ಸಾ, ನಮ್ಮ ಊರ್ ಕಡೆ ಜಾತ್ರೆ ಐತೆ. ನೀವ್ ಬರ್ಬೇಕು ಸಾ”

“ಹೌದೇನೋ? ಎಲ್ಲಿ ಜಾತ್ರೆ?”

“ನಮ್ ಊರಲ್ಲಿ ಸಾ. ನೀವ್ ಮಂಡ್ಯ ತಾವ ಬಂದು ಪೋನ್ ಹಾಕಿ. ನಾ ಬಂದ್ ಕರ್ಕಂಡ್ ವೋಯ್ತಿನಿ”

“ಟ್ರೈ ಮಾಡ್ತೀನಿ ಕಣೋ. ಟೈಮ್ ಆದ್ರೆ ಖಂಡಿತ ಬರ್ತಿನಿ. ಆದ್ರೆ ನಾ ಬಂದೇ ಬರ್ತಿನಿ ಅಂತ ಕಾಯ್ತಾ ಕೂರ್ಬೇಡ”

“ಸಾಕು ಬಿಡಿ ಸಾ. ನೀವು ಅಂಗ್ ಹೇಳಿದ್ರಲ್ಲ….ಸಾಕು. ಲಾಸ್ಟ್ ಟೈಮ್ ಇದೇ ಟೈಮಲ್ಲಿ ಸಾ ಇವ್ರೆಲ್ಲ ಬರ್ತಿನಿ ಅಂತ ಯೋಳಿ ನನ್ಮಕ್ಳು ಕೈಕೊಟ್ ಬಿಟ್ರು?”

“ಯಾಕೆ ಏನಾಯ್ತು?”

“ನೋಡಿ ಸಾ ಎಲ್ರಿಗೂ ಇನ್ವಿಟೇಸನ್ ಕೊಟ್ಟಿದೆ. ನಮ್ ಊರ್ ಕಡೆ ಜಾತ್ರೆ ಬರ್ಲಾ ಎಲ್ಲಾರೂ ಅಂತ. ಎಲ್ಲಾ ನನ್ಮಕ್ಳೂ ವಪ್ಕಂಡಿದ್ರು. ಅವ್ರು ಬತ್ತಾರೆ ಅಂತ ಹೇಳಿ 70 ಕೆಜಿ ಮಟನ್ನು, 40 ಕೆಜಿ ಚಿಕನ್ನು ಪೆಶಲ್ಲಾಗಿ ಮಾಡ್ಸಿದ್ದೆ. ಮೂರು ಟಗರು ಕಡ್ಸಿದ್ದೆ ಸಾ. ಇನ್ನು ಕೆಲವ್ರು ಎಣ್ಣೆ ಗಿರಾಕಿ ಅಂತ ಗೊತ್ತಿತ್ತು. ಅಂಗಾಗಿ 5 ಸಾವಿರ ರೂಪಾಯಿ ಬಾಟ್ಳು ತರ್ಸಿದ್ದೆ. ಇನ್ನೂ ಹುಡ್ರಲ್ವಾ, ಕ್ಯಾಶ್ ಇರಾಕಿಲ್ಲ ಅಂತ ಬೆಂಗ್ಳೂರಿಂದ ನಮ್ ಮಂಡ್ಯಕ್ಕೆ ಮಂಜನ್ ಸುಮೋ ಬುಕ್ ಮಾಡಿ ಅವಂಗ್ ವಂದ್ ಸಾವಿರ್ ರೂಪಾಯಿ ಕೊಟ್ಟಿದ್ದೆ, ಎಲ್ಲಾರ್ನೂವೇ ಕಕ್ಕಂಡ್ ಬಾ ಅಂತ. ನೀವ್ ನಂಬಲ್ಲ ಸಾ….ನನ್ಮಕ್ಳು ವಬ್ರೂ ಬರ್ಲಿಲ್ಲ ಅವತ್ತು. ಎಲ್ಲಾರೂ ಕೈ ಎತ್ತಿ ಬುಟ್ರು. ಎಷ್ಟೋ ಬೇಜಾರಾಗೋಯ್ತು ಅಂದ್ರೆ, ಮಟನ್ನು, ಚಿಕನ್ನು, ಎಣ್ಣೆ ಎಲ್ಲಾ ವಯ್ದು ನಮ್ ಊರ್ ತಾವ ನಾಲೆ ವಳಗ್ ಎಸೆದ್ ಬುಟ್ಟೆ. ಕಾಸ್ ವೋಯ್ತು ಅಂತ ಬೇಜಾರಿಲ್ಲ ಸಾ….ಆದ್ರೆ ಎಲ್ಲಾ ಸೇರ್ಕಂಡು ನನ್ ಮನಸ್ಸು ಮುರುದ್ರು. ಅವತ್ತೇ ಡಿಸೈಡ್ ಮಾಡ್ದೆ. ಯಾವ್ನ್ ಬರ್ತಾನೆ ಅಂತ ಗ್ವತ್ತಿರತ್ತೋ ಅವಂಗಷ್ಟೇಯಾ ಇನ್ವಿಟೇಸನ್ ಕ್ವಡೋದು ಅಂತ. ಈ ಟೈಮ್ ನೀವ್ ಬನ್ನಿ ಸಾ. ಚೆನ್ನಾಗಿರತ್ತೆ. ನಮ್ಮ ಕಬ್ಬಿನ ತ್ವಾಟದಾಗೆ ಕುಂತ್ಕಂಡ್ ಅಂಗೆ ಬಾಡೂಟ, ಎಣ್ಣೆ ಇಳಿಸ್ತಾ ಇದ್ರೆ…ಆಹಾಹಾ…ಏನ್ ಚಂದ ಸಾ…”