ಭೇಟಿ ಕೊಡಿ I PAID A BRIBE

ಭೇಟಿ ಕೊಡಿ I PAID A BRIBE
ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ.
ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ ‘ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದೇ ನಾಟಕದ ಸತ್ವ ಎಂದು ಬಾಲ್ಯದಿಂದಲೇ ತೇಜಸ್ವಿಯವರ ಬರವಣಿಗೆಗೆ ಆಕರ್ಷಿತರಾದ ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸುತ್ತಾರೆ.
‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ
ಪಾತ್ರದಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.
ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್ಗಳಿಗಾಗಿ ೯೮೮೦೬೯೫೬೫೯ ಸಂಪರ್ಕಿಸಬಹುದಾಗಿದೆ.
ಸುಧಾಕರ್ ಜೈನ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಜರ್ನಲಿಸ್ಟ್. ಕೆಪಿಎನ್ ನಲ್ಲಿ ಕೆಲಸ ಮಾಡಿದ ಬಳಿಕ ಇದೀಗ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಕೃಷಿ ಮುಂದುವರೆಸಿದ್ದಾರೆ. ಅವರ ಬ್ಲಾಗ್ ಚಾಣಕ್ಯ ದಲ್ಲಿ ಅವರು ತೆಗೆದಿರುವ ವಾಹ್ ಎನ್ನುವಂತಹ ಫೋಟೋಗಳಿವೆ. ಕೆಲ ಫೋಟೋಗಳ ಸ್ಯಾಂಪಲ್ ಇಲ್ಲಿದೆ.
ನನ್ನ ಫೋಟೋ “ಹೀಗೊಬ್ಬವನು” ಗೆ ರಿಸ್ಪೆಕ್ಟ್ ಎವ್ರಿವನ್ ನೀಡಿರುವ ಕ್ಯಾಪ್ಶನ್ ಇಲ್ಲಿದೆ. ನಿಮ್ಮ ಕ್ಯಾಪ್ಶನ್ ತುಂಬ ಇಷ್ಟವಾಯಿತು ರಿಸ್ಪೆಕ್ಟ್ ಎವ್ರಿವನ್…..
“ಮೊಬೈಲು ಇಂಟರ್ನೆಟ್ ಫೋನು ಗ್ಯಾಸು MP3 ಡೌನುಲೋಡು ಡ್ಯುಯಲ್ ಸಿಮ್ಮು ನೆಟ್ವರ್ಕು ಶೇರು ಏರು ಇಳಿ ಶೇಂದಿ ಸರಕಾರ ಯಡ್ಡಿ ರೆಡ್ಡಿ ಒಬಾಮ ಚುನಾವಣೆ ದೇವರು ದಿಂಡಿರು ಬೈಕು ಕಾರು ಲಾರಿ ರಸ್ತೆ ವಿಮಾನ ಪೆಟ್ರೋಲು ಡೀಸೆಲು global warmingಉ ಪ್ಲಾಸ್ಟಿಕ್ಕು ಪಟಾಕಿ ಏಸಿ ನುಸಿ ಸೊಳ್ಳೆ ಆರೋಗ್ಯ ಖಾಯಿಲೆ ಕಸಾಲೆ ಶಾಲೆ ಶಿಕ್ಷಣ ರಕ್ಷಣೆ ಮಿಲಿಟರಿ ಭಯೋತ್ಪಾದಕರು ಎಣ್ಣೆ ಹಾಕುವವರು ಬತ್ತಿ ಇಡುವವರು ರೈಲು ಬಿಡುವವರು ಆಡುವವರು ಹಾಡುವವರು ಕುಣಿಯುವವರು ಕಸ ಕಡ್ಡಿ ಕೂಲಿ ಕಾಳು ಶ್ರೀ ೧೦೮ ಮೈನ್ಸು ಕೋರ್ಟು ಲಂಚ ಬ್ಯಾಂಕು ಲೋನು ದುಡ್ಡು ಕಾಸು ಮಕ್ಕಳು ಮರಿ ಕಾನ್ವೆಂಟು ಇಂಗ್ಲೀಷು ಫಾರಿನ್ನು ಚಂದ್ರಲೋಕ, ಮಂಗಳನಲ್ಲಿ ನೀರು ಕರೆಂಟು ಪಾರ್ಕು ಪಬ್ಬು ಹಬ್ಬ ಬ್ಲಾಗು ಕಾಮೆಂಟು ಇನ್ನೂ ಏನೇನೇನೇನೇನೋ…..ಇವೆಲ್ಲ ನಿಮ್ಮ ಕರ್ಮ, ನನ್ನ ತಪಸ್ಸಿಗೇನೂ ಭಂಗವಿಲ್ಲ”
ಕಳಿಸಿಕೊಟ್ಟದ್ದು – ಚಂದ್ರಕೀರ್ತಿ
ಕುಂವಿ ಅವರ ಆತ್ಮಕಥನ ಗಾಂಧಿ ಕ್ಲಾಸು ಓದುತ್ತಿದ್ದೇನೆ. ಅದರೊಳಗಿನ ಆಯ್ದ ಭಾಗ.
ಕೃಪೆ – ಕುಂ. ವೀರಭದ್ರಪ್ಪ, ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್.
ಅವರೆಲ್ಲ ಪೈಕಿ ಪರಮವಿಧೇಯತೆಯೇ ಮೈವೆತ್ತಂತೆ ಬಂದಿರುತ್ತಿದ್ದ ಸಣಕಲು ವ್ಯಕ್ತಿಗೆ ಕಳೆದ ತಿಂಗಳ ವರೆಗೆ ಒಂದು ಖಾಯಂ ಹೆಸರೆಂಬುದಿರಲಿಲ್ಲ. ಹೊಲೆಯನಾಗಿದ್ದರೂ ತುಸು ಎಣ್ಣೆಗೆಂಪು ಬಣ್ಣದ ಅವನನ್ನು ಸಂತೆಕುಡ್ಲೂರು ಗೌಡರ ಮನೆಯಲ್ಲಿದ್ದ ಅಸಂಖ್ಯಾತ ಸದಸ್ಯರು ಅವನನ್ನು ಅಸಂಖ್ಯಾತ ಹೆಸರುಗಳಿಂದ ಕರೆಯುತ್ತಿದ್ದರು. ಅದರೆ ಅವು ಜಗತ್ತಿನ ಯಾವುದೇ ಭಾಷೆಯ ನಾಮವಾಚಕ ನಿಘಂಟಿನಲ್ಲಿರಲು ಸಾಧ್ಯವಿರಲಿಲ್ಲ. ಒಂದೊಂದು ನಾಮವಾಚಕವೂ ನಗೆ ತರಿಸುವಂತಿತ್ತು. “ನಿನ್ನ ಹೆಸರೇನು?” ಎಂದು ಕೇಳಿದೊಡನೆ ಅವನು ತಬ್ಬಿಬ್ಬಾಗದೆ ಇರುತ್ತಿರಲಿಲ್ಲ. ಅವನಂತೆ ನಾಮಾಂಕಿತ ವಂಚಿತರು ದಲಿತರೋಣಿಗಳಲ್ಲಿ ಅಸಂಖ್ಯಾತರಿದ್ದರು. ಆದ್ದರಿಂದ ನಾನು ಅವನಿಗೆ “ಚಂದ್ರ” ಎಂದು ನಾಮಕರಣ ಮಾಡಿ ಕರೆಯುತ್ತಿದ್ದೆನು, ಕಾರಣ ಅವನ ಮೈಬಣ್ಣ ಬೆಳ್ಳಗಿತ್ತು. ಹಾಗೆ ಕರೆದಾಗಲೆಲ್ಲ ಅವನು ನವವಧುನಿನಂತೆ ನಾಚಿ ನೀರಾಗದೆ ಇರಲಿಲ್ಲ. ಆದರೆ ಆ ಹೆಸರಿಗೆ ಅವು ಕ್ರಮೇಣ ಹೊಂದಿಕೊಂಡಿದ್ದು ಸಮಾಧನಕರ ಸಂಗತಿ.
ಚಂದ್ರನ ಸೊಂಟದ ಸುತ್ತ ಒಂದು ತುಂಡು ದೋತರ, ತಲೆಗೊಂದು ಕಿಮುಟು ವಲ್ಲಿ. ಆದರೆ ಅವೂ ಗೌಡರು ಉಟ್ಟುಬಿಟ್ಟವುಗಳಾಗಿದ್ದವು. ಮರ್ಯಾದೆ ಮುಚ್ಚಿಕೊಳ್ಳಲು ತಾನು ಎಷ್ಟು ಪ್ರಯತ್ನಿಸುತ್ತಿದ್ದರೂ ಎರಡು ಕುಂಡಿಗಳ ಪೈಕಿ ಒಂದಾದರೂ ಸಾರ್ವಜನಿಕವಾಗಿ ಗೋಚರಿಸದೆ ಇರುತ್ತಿರಲಿಲ್ಲ. ಕುಂಡಿಗಿಂತ ಮುಖ್ಯವಾಗಿ ಅವನು ತನ್ನ ಸಾಮಾನು ಹೊರಇಣುಕುವಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸುತ್ತಿದ್ದನು. ಅದು ಅವನ ಕಾಮನ್ ಸೆನ್ಸಾಗಿತ್ತು.
ಸಂಬಳ ಪಡೆದ ದಿವಸ ನಾನು ಆದವಾನಿಯಿಂದ ಒಂದು ಹೆಚ್ಚುವರಿ ಶರ್ಟನ್ನು ಖರೀದಿನಿ ಪ್ಯಾಕು ಮಾಡಿಕೊಂಡು ತಂದು ಗೂಟಕ್ಕೆ ಇಳಿಬಿಟ್ಟಿದ್ದೆನು. ಅವನು ಅದನ್ನು ರೆಪ್ಪೆಯಾಡಿಸದೆ ನೋಡುತ್ತಿದ್ದುದನ್ನು ಗಮನಿಸಿದೆನು. “ಉಟುಗೊಂತಿಯ್ಯೋನು?” ಎಂದು ನಾನು ಕೇಳಿದ್ದು ತಮಾಷೆಗೆ. ಆಶ್ಚರ್ಯವೆಂದರೆ ಅವನು “ಹ್ಹೂ” ಎಂದು ತಲೆ ಅಲ್ಲಾಡಿಸಿಬಿಡುವುದೆ…. ! ತಡಮಾಡದೆ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುತ್ತ ಚಂದ್ರ, “ಆದರೆ ನೀನಿದನ್ನ ತೊಟ್ಟುಕೊಂಡು ಗೌಡರೆದುರು ಅಡ್ಡಾಡಬೇಕು ನೋಡು” ಎಂದು ಕರಾರು ವಿಧಿಸಿದ್ದು ಎಷ್ಟು ನಿಜವೋ, ಅದಕ್ಕವನು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ್ದೂ ಅಷ್ಟೇ ನಿಜ.
ಇವತ್ತು ತೊಟ್ಟುಕೊಂಡಾನು, ನಾಳೆ ತೊಟ್ಟುಕೊಂಡಾನು ಎಂದು ಎದುರು ನೋಡಿದ ನನಗೆ ನಿರಾಸೆಯಾಗದಿರಲಿಲ್ಲ. ಅವನದನ್ನು ತೊಟ್ಟುಕೊಂಡರೆ ತಾನೆ….ಗೋಣಿತಾಟು ತುಂಡಿನೊಳಗೆ ಅಡಗಿಸಿಟ್ಟು ಕಂಕುಳದಲ್ಲಿರಿಸಿಕೊಂಡಿರುತ್ತಿದ್ದನೇ ಹೊರತು ಧರಿಸುವ ಧೈರ್ಯ ತೋರಲಿಲ್ಲ. ಹದಿನೈದಿಪ್ಪತ್ತು ದಿವಸಗಳ ಬಳಿಕ “ನೀನದನ್ನು ತೊಟ್ಟುಕೊಳ್ಳದಿದ್ದಲ್ಲಿ ವಾಪಸು ಕೊಡು” ಎಂದು ಒಣ ಬೆದರಿಕೆ ಹಾಕುವುದು ಅನಿವಾರ್ಯವಾಯಿತು. ತೊಟ್ಟರೆಲ್ಲಿ ಗೌಡಿಕೆ ಮಂದಿ ತಮ್ಮ ಅಭಿಜಾತ ಚುಚ್ಚು ಮಾತುಗಳಿಂದ ತನ್ನನ್ನು ಘಾಸಿಗೊಳಿಸುವರೋ ಎಂಬ ಆತಂಕ ಅವನಿಗಿತ್ತು. ಅವನ ಮೈಚಳಿ ಬಿಡಿಸುವ ಮತ್ತು ತನ್ಮೂಲಕ ಜಮೀನ್ದಾರಿಶಾಹಿ ವಿರುದ್ದ ಚಿಕ್ಕ ಪ್ರತಿಭಟನೆ ವ್ಯಕ್ತಪಡಿಸುವ ಇರಾದೆ ನನ್ನದಾಗಿತ್ತು. ಆದರೆ ಅವನು ಸುತ್ತಮುತ್ತ ಯಾರಿಲ್ಲದಿರುವುದನ್ನು ಖಚಿತಪಡಿಸಿಕೊಂಡು “ತ್ವಟಗಂತೀನಿ ಸಾರೂ……ಆದರ ಗವುಡರೆದುರು ಬ್ಯಾಡ….ಪರುಗಗುಣಿಮಾಗಿ ಹೊಲಕ ಬೊರ್ರಿ….ತೊಟಗಂಡು ತ್ವಾರುಸ್ತೀನಿ” ಎಂದು ಮೆಲ್ಲಗೆ ಹೇಳಿದ.
ಪರುಗುಣಿಮಾಗಿಯೆಂಬ ಬಾಣಾಪುರ ಗೌಡರ ಐವತ್ತೆಕರೆ ಬಿಳಿ ಜೋಳದ ಹೊಲ ವಾಗಿಲಿಗೆ ಒಂದು ದಮ್ಮು ದಾರಿ ದೂರದಲ್ಲಿತ್ತು. ಗೌಡರು ನನ್ನಲ್ಲಿಗೆ ಹಲವು ಸಲ ಕರೆದೊಯ್ದು ಬೆಳಸುಕಾಳು ತಿನ್ನಸಿದ್ದರು. ಆದ್ದರಿಂದ ಆ ಹೊಲದ ಪರಿಚಿತವಿತ್ತು. ಹೋದೆ. ಮೇವಿಗೆಂದು ನಡುವಿನ ಒಂದು ಭಾಗವನ್ನು ಕಟ್ಟಾಫ್ ಮಾಡಿದ್ದರು. ಅಲ್ಲಿ ಚಂದ್ರ ಹೊಸ ಶರ್ಟನ್ನು ತೊಟ್ಟುಕೊಂಡು ನವವಧುನಿನೋಪಾದಿಯಲ್ಲಿ ನಾಚಿ ಕೂತಿದ್ದ. ಕಣ್ತುಂಬ ನೋಡಿ ಕಣ್ಣಲ್ಲಿ ನೀರು ತಂದುಕೊಂಡೆ. “ನ್ವಾಡಿದ್ರೇನು ಸಾರೂ….?”ಎಂದು ಕೇಳಿದ. ಕಣ್ಣೊಳಗಿದ್ದ ಆನಂದ ಬಾಷ್ಪ ಒರೆಸಿಕೊಳ್ಳುತ್ತ ನಾನು “ನೋಡಿದ್ನೆಪ್ಪಾ…ನೋಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ಅವನು ಒಂದೊಂದಾಗಿ ಗುಂಡಿಗಳನ್ನು ಬಿಚ್ಚಿ ಪುನಃ ಮಡಚಿ ಕಂಕುಳಲ್ಲಿರಿಸಿಕೊಂಡ.
2007 ನೇ ಇಸವಿ. ರಾಮಚಂದ್ರಾಪುರ ಮಠದಲ್ಲಿ ಪ್ರಪ್ರಥಮ ವಿಶ್ವ ಗೋ ಸಮ್ಮೇಳನ ಆಯೋಜಿಸಲಾಗಿತ್ತು. ಕವರೇಜ್ ಗೆಂದು ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಹೋಗಿದ್ದೆವು. ಹೋಗುವುದಕ್ಕಿಂತ ಮೊದಲು ಸಮ್ಮೇಳನದ ಬ್ರೌಷರ್, ಮಠದಲ್ಲಿರುವ ಆಕಳುಗಳ ವಿವಿಧ ತಳಿಗಳ ವಿವರಣೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಅದರಲ್ಲಿ ಸಾಮ್ರಾಟ ಹೆಸರಿನ ಎತ್ತು ನನ್ನ ಗಮನ ಸೆಳೆದಿತ್ತು. ಕಾರಣ ಅದರ ದೈತ್ಯ ದೇಹ ಹಾಗೂ ಅದಕ್ಕಿಂತ ದೈತ್ಯ ಕೋಡುಗಳು. ಚಿತ್ರದಲ್ಲಿ ನೋಡಿಯೇ ರೋಮಾಂಚಿತಗೊಂಡಿದ್ದೆ.
ಮೂಲತಃ ನಮ್ಮದು ಕೃಷಿ ಕುಟುಂಬ. ಅಣ್ಣ ಶ್ರೀಹರ್ಷ ಸಾವಯವ ಕೃಷಿಕ. ಮನೆಯಲ್ಲೇ 10 ರಾಸುಗಳಿವೆ. ನಾನು ಚಿಕ್ಕವನಿದ್ದಾಗ ಅಪ್ಪ ಕೂಡ ರಂಜನಿ ಎಂಬ ಆಕಳನ್ನು ಸಾಕಿದ್ದರು. ಎಚ್ ಎಫ್, ಜರ್ಸಿ, ಮಲೆನಾಡು ಗಿಡ್ಡ ಜಾತಿಯ ದನಗಳನ್ನಷ್ಟೇ ನೋಡಿದ್ದ ನನಗೆ, ಮಠದಲ್ಲಿ ಮಾತ್ರ ಅಚ್ಚರಿ ಕಾದಿತ್ತು. ಪ್ರತಿಯೊಂದೂ ಆಕಳೂ ಪ್ರತಿಯೊಂದೂ ಎತ್ತೂ ಅಬ್ಬಾ…ಅದೇನು ಆಕಾರ, ಅವುಗಳ ಗಂಗೆದೊಗಲು, ಮೂತಿ, ಕೋಡು, ಮೂಗು, ಹುಬ್ಬು, ಬೆನ್ನಿನ ಆಕಾರ, ಬಣ್ಣ ಪ್ರತಿಯೊಂದರಲ್ಲಿಯೂ ವೈವಿಧ್ಯತೆ. ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ದನಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ಕೆಲವು ಆಕಳುಗಳು ತಮ್ಮ ಗಾತ್ರದಿಂದಲೇ ಹತ್ತಿರ ಬಂದು ಮೈದಡವುವಂತೆ ಮಾಡುತ್ತಿದ್ದರೆ, ಇನ್ನೂ ಕೆಲವು ಎತ್ತುಗಳ ಆಕಾರ ಹಾಗೂ ಕೋಡುಗಳು ಒಂದು ಮಾರು ದೂರದಿಂದಲೇ ಹೋಗುವಂತೆ ಮಾಡುತ್ತಿದ್ದವು.
ರಾಮಚಂದ್ರಾಪುರ ಮಠಕ್ಕೆ ಹೋದಮೇಲೆ ಬಿರುಬಿಸಿನಿಲಿನಲ್ಲಿ ಕ್ಯಾಮರಾ, ಟ್ರೈಪಾಡ್ ಹೊತ್ತುಕೊಂಡು ಎಲ್ಲವನ್ನೂ ಶೂಟ್ ಮಾಡಿ ಸ್ಟೋರಿ ಮಾಡಿದ್ದಾಯಿತು. ಸಾಮ್ರಾಟನ ಬಗ್ಗೆ ಪ್ರತ್ಯೇಕ ಸ್ಟೋರಿ ಮಾಡಬೇಕು ಎಂದುಕೊಂಡಿದ್ದೆ. ಎರಡನೇ ದಿನವೇ ಸಂಘಟಕರಿಗೆ ಹೇಳಿ ಸಾಮ್ರಾಟನನ್ನು ಕರೆತರುವಂತೆ ಹೇಳಿದೆ. ಬಯಲೊಂದರಲ್ಲಿ ಹಲವಾರು ದನಗಳು ನಿಂತುಕೊಂಡು ಮೇಯುತ್ತಿದ್ದವು. ಅಲ್ಲಿಗೆ ಸಾಮ್ರಾಟನನ್ನು ಕರೆತರಲಾಯಿತು.
ಅಬ್ಬಾ…..ಆ ಎತ್ತನ್ನು ನೋಡಿಯೇ ಒಂದು ಕ್ಷಣ ದಂಗಾದೆ. ನಾನು ಎಣಿಸದ್ದಕ್ಕಿಂತ ಎತ್ತರವಾಗಿತ್ತು, ಭವ್ಯವಾಗಿತ್ತು. ಕೋಡಗಳು ವಿಶ್ವವನ್ನೇ ವ್ಯಾಪಿಸುವಷ್ಟು ಅಗಲವಾಗಿ ಚಾಚಿಕೊಂಡಿದ್ದವು. ಆತ್ಮವಿಶ್ವಾಸ, ಧೈರ್ಯ, ಸಾಹಸ, ಬಲ, ಸ್ಟೆಮಿನಾಕ್ಕೆ ಸಾಮ್ರಾಟ ಕಳಶ ಪ್ರಾಯನಂತಿದ್ದ. ಎತ್ತೊಂದು ಇಷ್ಟು ಎತ್ತರ ಇರಲು ಸಾಧ್ಯವೇ ಎನ್ನಿಸಿತು. ಸಾಮ್ರಾಟ ದನದ ಹಿಂಡಿನಲ್ಲಿ ನಡೆದು ಬರಬೇಕಾದರೆ ಉಳಿದ ದನಗಳು ಹೆದರಿಕೆಯಿಂದ ಅದರತ್ತ ನೋಡುತ್ತ ದಾರಿ ಮಾಡಿಕೊಟ್ಟವು. ಆ ದೃಶ್ಯವಂತೂ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಹಲವು ಆಂಗಲ್ ಗಳಲ್ಲಿ ಸಾಮ್ರಾಟನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ. ನಂತರ ಪಿಟಿಸಿ ಮಾಡಬೇಕಾದಾಗ, ಸಾಮ್ರಾಟನ ಪಕ್ಕ ನಿಂತು ಮಾಡೋಣ ಎಂದುಕೊಂಡೆ. ಆದರೆ ದುರಾದೃಷ್ಣ ಅಂದು ಸಾಮ್ರಾಟನಿಗೆ ಆರಾಮಿರಲಿಲ್ಲ. ಹೀಗಾಗಿ ಸ್ವಲ್ಪ ರೆಸ್ಟ್ ಲೆಸ್ ಆಗಿದ್ದ ಆತ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಹತ್ತಿರ ಹೋಗುವುದು ಬೇಡ ಎಂದರು ಅದನ್ನು ನೋಡಿಕೊಳ್ಳುತ್ತಿದ್ದವರು. ಕೊನೆಗೆ ಸಾಮ್ರಾಟ ಬ್ಯಾಕ್ ಗ್ರೌಂಡ್ ನಲ್ಲಿರುವಂತೆ ಮಾಡಿ ಪಿಟಿಸಿ ಮಾಡಿದೆ. ಇಂದಿಗೂ ನನ್ನ ಫೆವರಿಟ್ ಪಿಟಿಸಿಗಳಲ್ಲಿ ಅದೂ ಒಂದು.
ಆದರೆ ಇನ್ನು ಸಾಮ್ರಾಟ ನೆನಪಷ್ಟೇ..ಛೆ….
(ನಿನ್ನೆ ಪ್ರಕಟವಾಗಿಬೇಕಿದ್ದ ಈ ಲೇಖನ ಕಾರಣಾಂತರಗಳಿಂದ ಇಂದು ಪ್ರಕಟವಾಗುತ್ತಿದೆ. ತಡವಾದುದಕ್ಕೆ ಕ್ಷಮೆಯಿರಲಿ)