ಆ ಎತ್ತನ್ನು ಬ್ಯಾಕ್ ಗ್ರೌಂಡ್ ನಲ್ಲಿಟ್ಟು ಪಿಟಿಸಿ ಮಾಡುವುದೇ ಹೆಮ್ಮೆಯ ವಿಷಯ

ನಿಜವಾದ ಸಾಮ್ರಾಟ

2007 ನೇ ಇಸವಿ. ರಾಮಚಂದ್ರಾಪುರ ಮಠದಲ್ಲಿ ಪ್ರಪ್ರಥಮ ವಿಶ್ವ ಗೋ ಸಮ್ಮೇಳನ ಆಯೋಜಿಸಲಾಗಿತ್ತು. ಕವರೇಜ್ ಗೆಂದು ಬೆಂಗಳೂರಿನಿಂದ ನಾನು ಹಾಗೂ ಕ್ಯಾಮರಾಮನ್ ಕೊಂಡಯ್ಯ ಹೋಗಿದ್ದೆವು. ಹೋಗುವುದಕ್ಕಿಂತ ಮೊದಲು ಸಮ್ಮೇಳನದ ಬ್ರೌಷರ್, ಮಠದಲ್ಲಿರುವ ಆಕಳುಗಳ ವಿವಿಧ ತಳಿಗಳ ವಿವರಣೆ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಅದರಲ್ಲಿ ಸಾಮ್ರಾಟ ಹೆಸರಿನ ಎತ್ತು ನನ್ನ ಗಮನ ಸೆಳೆದಿತ್ತು. ಕಾರಣ ಅದರ ದೈತ್ಯ ದೇಹ ಹಾಗೂ ಅದಕ್ಕಿಂತ ದೈತ್ಯ ಕೋಡುಗಳು. ಚಿತ್ರದಲ್ಲಿ ನೋಡಿಯೇ ರೋಮಾಂಚಿತಗೊಂಡಿದ್ದೆ.

ಮೂಲತಃ ನಮ್ಮದು ಕೃಷಿ ಕುಟುಂಬ. ಅಣ್ಣ ಶ್ರೀಹರ್ಷ ಸಾವಯವ ಕೃಷಿಕ. ಮನೆಯಲ್ಲೇ 10 ರಾಸುಗಳಿವೆ. ನಾನು ಚಿಕ್ಕವನಿದ್ದಾಗ ಅಪ್ಪ ಕೂಡ ರಂಜನಿ ಎಂಬ ಆಕಳನ್ನು ಸಾಕಿದ್ದರು. ಎಚ್ ಎಫ್, ಜರ್ಸಿ, ಮಲೆನಾಡು ಗಿಡ್ಡ ಜಾತಿಯ ದನಗಳನ್ನಷ್ಟೇ ನೋಡಿದ್ದ ನನಗೆ, ಮಠದಲ್ಲಿ ಮಾತ್ರ ಅಚ್ಚರಿ ಕಾದಿತ್ತು. ಪ್ರತಿಯೊಂದೂ ಆಕಳೂ ಪ್ರತಿಯೊಂದೂ ಎತ್ತೂ ಅಬ್ಬಾ…ಅದೇನು ಆಕಾರ, ಅವುಗಳ ಗಂಗೆದೊಗಲು, ಮೂತಿ, ಕೋಡು, ಮೂಗು, ಹುಬ್ಬು, ಬೆನ್ನಿನ ಆಕಾರ, ಬಣ್ಣ ಪ್ರತಿಯೊಂದರಲ್ಲಿಯೂ ವೈವಿಧ್ಯತೆ. ಆಂಧ್ರಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ದನಗಳನ್ನು ನೋಡುವುದಂತೂ ಕಣ್ಣಿಗೆ ಹಬ್ಬ. ಕೆಲವು ಆಕಳುಗಳು ತಮ್ಮ ಗಾತ್ರದಿಂದಲೇ ಹತ್ತಿರ ಬಂದು ಮೈದಡವುವಂತೆ ಮಾಡುತ್ತಿದ್ದರೆ, ಇನ್ನೂ ಕೆಲವು ಎತ್ತುಗಳ ಆಕಾರ ಹಾಗೂ ಕೋಡುಗಳು ಒಂದು ಮಾರು ದೂರದಿಂದಲೇ ಹೋಗುವಂತೆ ಮಾಡುತ್ತಿದ್ದವು.

ರಾಮಚಂದ್ರಾಪುರ ಮಠಕ್ಕೆ ಹೋದಮೇಲೆ ಬಿರುಬಿಸಿನಿಲಿನಲ್ಲಿ ಕ್ಯಾಮರಾ, ಟ್ರೈಪಾಡ್ ಹೊತ್ತುಕೊಂಡು ಎಲ್ಲವನ್ನೂ ಶೂಟ್ ಮಾಡಿ ಸ್ಟೋರಿ ಮಾಡಿದ್ದಾಯಿತು. ಸಾಮ್ರಾಟನ ಬಗ್ಗೆ ಪ್ರತ್ಯೇಕ ಸ್ಟೋರಿ ಮಾಡಬೇಕು ಎಂದುಕೊಂಡಿದ್ದೆ. ಎರಡನೇ ದಿನವೇ ಸಂಘಟಕರಿಗೆ ಹೇಳಿ ಸಾಮ್ರಾಟನನ್ನು ಕರೆತರುವಂತೆ ಹೇಳಿದೆ. ಬಯಲೊಂದರಲ್ಲಿ ಹಲವಾರು ದನಗಳು ನಿಂತುಕೊಂಡು ಮೇಯುತ್ತಿದ್ದವು. ಅಲ್ಲಿಗೆ ಸಾಮ್ರಾಟನನ್ನು ಕರೆತರಲಾಯಿತು.

ಅಬ್ಬಾ…..ಆ ಎತ್ತನ್ನು ನೋಡಿಯೇ ಒಂದು ಕ್ಷಣ ದಂಗಾದೆ. ನಾನು ಎಣಿಸದ್ದಕ್ಕಿಂತ ಎತ್ತರವಾಗಿತ್ತು, ಭವ್ಯವಾಗಿತ್ತು. ಕೋಡಗಳು ವಿಶ್ವವನ್ನೇ ವ್ಯಾಪಿಸುವಷ್ಟು ಅಗಲವಾಗಿ ಚಾಚಿಕೊಂಡಿದ್ದವು. ಆತ್ಮವಿಶ್ವಾಸ, ಧೈರ್ಯ, ಸಾಹಸ, ಬಲ, ಸ್ಟೆಮಿನಾಕ್ಕೆ ಸಾಮ್ರಾಟ ಕಳಶ ಪ್ರಾಯನಂತಿದ್ದ. ಎತ್ತೊಂದು ಇಷ್ಟು ಎತ್ತರ ಇರಲು ಸಾಧ್ಯವೇ ಎನ್ನಿಸಿತು. ಸಾಮ್ರಾಟ ದನದ ಹಿಂಡಿನಲ್ಲಿ ನಡೆದು ಬರಬೇಕಾದರೆ ಉಳಿದ ದನಗಳು ಹೆದರಿಕೆಯಿಂದ ಅದರತ್ತ ನೋಡುತ್ತ ದಾರಿ ಮಾಡಿಕೊಟ್ಟವು. ಆ ದೃಶ್ಯವಂತೂ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಹಲವು ಆಂಗಲ್ ಗಳಲ್ಲಿ ಸಾಮ್ರಾಟನನ್ನು ಕ್ಯಾಮೆರಾದಲ್ಲಿ ಸೆರೆಹಿಡಿದೆ. ನಂತರ ಪಿಟಿಸಿ ಮಾಡಬೇಕಾದಾಗ, ಸಾಮ್ರಾಟನ ಪಕ್ಕ ನಿಂತು ಮಾಡೋಣ ಎಂದುಕೊಂಡೆ. ಆದರೆ ದುರಾದೃಷ್ಣ ಅಂದು ಸಾಮ್ರಾಟನಿಗೆ ಆರಾಮಿರಲಿಲ್ಲ. ಹೀಗಾಗಿ ಸ್ವಲ್ಪ ರೆಸ್ಟ್ ಲೆಸ್ ಆಗಿದ್ದ ಆತ ಕಿರಿಕಿರಿ ಮಾಡುತ್ತಿದ್ದ. ಹೀಗಾಗಿ ಹತ್ತಿರ ಹೋಗುವುದು ಬೇಡ ಎಂದರು ಅದನ್ನು ನೋಡಿಕೊಳ್ಳುತ್ತಿದ್ದವರು. ಕೊನೆಗೆ ಸಾಮ್ರಾಟ ಬ್ಯಾಕ್ ಗ್ರೌಂಡ್ ನಲ್ಲಿರುವಂತೆ ಮಾಡಿ ಪಿಟಿಸಿ ಮಾಡಿದೆ. ಇಂದಿಗೂ ನನ್ನ ಫೆವರಿಟ್ ಪಿಟಿಸಿಗಳಲ್ಲಿ ಅದೂ ಒಂದು.

ಆದರೆ ಇನ್ನು ಸಾಮ್ರಾಟ ನೆನಪಷ್ಟೇ..ಛೆ….

(ನಿನ್ನೆ ಪ್ರಕಟವಾಗಿಬೇಕಿದ್ದ ಈ ಲೇಖನ ಕಾರಣಾಂತರಗಳಿಂದ ಇಂದು ಪ್ರಕಟವಾಗುತ್ತಿದೆ. ತಡವಾದುದಕ್ಕೆ ಕ್ಷಮೆಯಿರಲಿ)

Advertisements