ಕುಂವಿ ಗಾಂಧಿ ಕ್ಲಾಸಿನಿಂದ….

ಕುಂವಿ ಅವರ ಆತ್ಮಕಥನ ಗಾಂಧಿ ಕ್ಲಾಸು ಓದುತ್ತಿದ್ದೇನೆ. ಅದರೊಳಗಿನ ಆಯ್ದ ಭಾಗ.

ಹ್ಯಾಟ್ಸಾಫ್ ಕುಂವಿ ಸರ್....

ಕೃಪೆ – ಕುಂ. ವೀರಭದ್ರಪ್ಪ, ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್.

ಅವರೆಲ್ಲ ಪೈಕಿ ಪರಮವಿಧೇಯತೆಯೇ ಮೈವೆತ್ತಂತೆ ಬಂದಿರುತ್ತಿದ್ದ ಸಣಕಲು ವ್ಯಕ್ತಿಗೆ ಕಳೆದ ತಿಂಗಳ ವರೆಗೆ ಒಂದು ಖಾಯಂ ಹೆಸರೆಂಬುದಿರಲಿಲ್ಲ. ಹೊಲೆಯನಾಗಿದ್ದರೂ ತುಸು ಎಣ್ಣೆಗೆಂಪು ಬಣ್ಣದ ಅವನನ್ನು ಸಂತೆಕುಡ್ಲೂರು ಗೌಡರ ಮನೆಯಲ್ಲಿದ್ದ ಅಸಂಖ್ಯಾತ ಸದಸ್ಯರು ಅವನನ್ನು ಅಸಂಖ್ಯಾತ ಹೆಸರುಗಳಿಂದ ಕರೆಯುತ್ತಿದ್ದರು. ಅದರೆ ಅವು ಜಗತ್ತಿನ ಯಾವುದೇ ಭಾಷೆಯ ನಾಮವಾಚಕ ನಿಘಂಟಿನಲ್ಲಿರಲು ಸಾಧ್ಯವಿರಲಿಲ್ಲ. ಒಂದೊಂದು ನಾಮವಾಚಕವೂ ನಗೆ ತರಿಸುವಂತಿತ್ತು. “ನಿನ್ನ ಹೆಸರೇನು?” ಎಂದು ಕೇಳಿದೊಡನೆ ಅವನು ತಬ್ಬಿಬ್ಬಾಗದೆ ಇರುತ್ತಿರಲಿಲ್ಲ. ಅವನಂತೆ ನಾಮಾಂಕಿತ ವಂಚಿತರು ದಲಿತರೋಣಿಗಳಲ್ಲಿ ಅಸಂಖ್ಯಾತರಿದ್ದರು. ಆದ್ದರಿಂದ ನಾನು ಅವನಿಗೆ “ಚಂದ್ರ” ಎಂದು ನಾಮಕರಣ ಮಾಡಿ ಕರೆಯುತ್ತಿದ್ದೆನು, ಕಾರಣ ಅವನ ಮೈಬಣ್ಣ ಬೆಳ್ಳಗಿತ್ತು. ಹಾಗೆ ಕರೆದಾಗಲೆಲ್ಲ ಅವನು ನವವಧುನಿನಂತೆ ನಾಚಿ ನೀರಾಗದೆ ಇರಲಿಲ್ಲ. ಆದರೆ ಆ ಹೆಸರಿಗೆ ಅವು ಕ್ರಮೇಣ ಹೊಂದಿಕೊಂಡಿದ್ದು ಸಮಾಧನಕರ ಸಂಗತಿ.

ಚಂದ್ರನ ಸೊಂಟದ ಸುತ್ತ ಒಂದು ತುಂಡು ದೋತರ, ತಲೆಗೊಂದು ಕಿಮುಟು ವಲ್ಲಿ. ಆದರೆ ಅವೂ ಗೌಡರು ಉಟ್ಟುಬಿಟ್ಟವುಗಳಾಗಿದ್ದವು. ಮರ್ಯಾದೆ ಮುಚ್ಚಿಕೊಳ್ಳಲು ತಾನು ಎಷ್ಟು ಪ್ರಯತ್ನಿಸುತ್ತಿದ್ದರೂ ಎರಡು ಕುಂಡಿಗಳ ಪೈಕಿ ಒಂದಾದರೂ ಸಾರ್ವಜನಿಕವಾಗಿ ಗೋಚರಿಸದೆ ಇರುತ್ತಿರಲಿಲ್ಲ. ಕುಂಡಿಗಿಂತ ಮುಖ್ಯವಾಗಿ ಅವನು ತನ್ನ ಸಾಮಾನು ಹೊರಇಣುಕುವಂತೆ ಎಷ್ಟು ಸಾಧ್ಯವೋ ಅಷ್ಟು ಎಚ್ಚರ ವಹಿಸುತ್ತಿದ್ದನು. ಅದು ಅವನ ಕಾಮನ್ ಸೆನ್ಸಾಗಿತ್ತು.

ಸಂಬಳ ಪಡೆದ ದಿವಸ ನಾನು ಆದವಾನಿಯಿಂದ ಒಂದು ಹೆಚ್ಚುವರಿ ಶರ್ಟನ್ನು ಖರೀದಿನಿ ಪ್ಯಾಕು ಮಾಡಿಕೊಂಡು ತಂದು ಗೂಟಕ್ಕೆ ಇಳಿಬಿಟ್ಟಿದ್ದೆನು. ಅವನು ಅದನ್ನು ರೆಪ್ಪೆಯಾಡಿಸದೆ ನೋಡುತ್ತಿದ್ದುದನ್ನು ಗಮನಿಸಿದೆನು. “ಉಟುಗೊಂತಿಯ್ಯೋನು?” ಎಂದು ನಾನು ಕೇಳಿದ್ದು ತಮಾಷೆಗೆ. ಆಶ್ಚರ್ಯವೆಂದರೆ ಅವನು “ಹ್ಹೂ” ಎಂದು ತಲೆ ಅಲ್ಲಾಡಿಸಿಬಿಡುವುದೆ…. ! ತಡಮಾಡದೆ ಅದನ್ನು ಪೇಪರ್ ನಲ್ಲಿ ಸುತ್ತಿಕೊಡುತ್ತ ಚಂದ್ರ, “ಆದರೆ ನೀನಿದನ್ನ ತೊಟ್ಟುಕೊಂಡು ಗೌಡರೆದುರು ಅಡ್ಡಾಡಬೇಕು ನೋಡು” ಎಂದು ಕರಾರು ವಿಧಿಸಿದ್ದು ಎಷ್ಟು ನಿಜವೋ, ಅದಕ್ಕವನು ತಲೆ ಅಲ್ಲಾಡಿಸಿ ಒಪ್ಪಿಗೆ ಸೂಚಿಸಿದ್ದೂ ಅಷ್ಟೇ ನಿಜ.

ಇವತ್ತು ತೊಟ್ಟುಕೊಂಡಾನು, ನಾಳೆ ತೊಟ್ಟುಕೊಂಡಾನು ಎಂದು ಎದುರು ನೋಡಿದ ನನಗೆ ನಿರಾಸೆಯಾಗದಿರಲಿಲ್ಲ. ಅವನದನ್ನು ತೊಟ್ಟುಕೊಂಡರೆ ತಾನೆ….ಗೋಣಿತಾಟು ತುಂಡಿನೊಳಗೆ ಅಡಗಿಸಿಟ್ಟು ಕಂಕುಳದಲ್ಲಿರಿಸಿಕೊಂಡಿರುತ್ತಿದ್ದನೇ ಹೊರತು ಧರಿಸುವ ಧೈರ್ಯ ತೋರಲಿಲ್ಲ. ಹದಿನೈದಿಪ್ಪತ್ತು ದಿವಸಗಳ ಬಳಿಕ “ನೀನದನ್ನು ತೊಟ್ಟುಕೊಳ್ಳದಿದ್ದಲ್ಲಿ ವಾಪಸು ಕೊಡು” ಎಂದು ಒಣ ಬೆದರಿಕೆ ಹಾಕುವುದು ಅನಿವಾರ್ಯವಾಯಿತು. ತೊಟ್ಟರೆಲ್ಲಿ ಗೌಡಿಕೆ ಮಂದಿ ತಮ್ಮ ಅಭಿಜಾತ ಚುಚ್ಚು ಮಾತುಗಳಿಂದ ತನ್ನನ್ನು ಘಾಸಿಗೊಳಿಸುವರೋ ಎಂಬ ಆತಂಕ ಅವನಿಗಿತ್ತು. ಅವನ ಮೈಚಳಿ ಬಿಡಿಸುವ ಮತ್ತು ತನ್ಮೂಲಕ ಜಮೀನ್ದಾರಿಶಾಹಿ ವಿರುದ್ದ ಚಿಕ್ಕ ಪ್ರತಿಭಟನೆ ವ್ಯಕ್ತಪಡಿಸುವ ಇರಾದೆ ನನ್ನದಾಗಿತ್ತು. ಆದರೆ ಅವನು ಸುತ್ತಮುತ್ತ ಯಾರಿಲ್ಲದಿರುವುದನ್ನು ಖಚಿತಪಡಿಸಿಕೊಂಡು “ತ್ವಟಗಂತೀನಿ ಸಾರೂ……ಆದರ ಗವುಡರೆದುರು ಬ್ಯಾಡ….ಪರುಗಗುಣಿಮಾಗಿ ಹೊಲಕ ಬೊರ್ರಿ….ತೊಟಗಂಡು ತ್ವಾರುಸ್ತೀನಿ” ಎಂದು ಮೆಲ್ಲಗೆ ಹೇಳಿದ.

ಪರುಗುಣಿಮಾಗಿಯೆಂಬ ಬಾಣಾಪುರ ಗೌಡರ ಐವತ್ತೆಕರೆ ಬಿಳಿ ಜೋಳದ ಹೊಲ ವಾಗಿಲಿಗೆ ಒಂದು ದಮ್ಮು ದಾರಿ ದೂರದಲ್ಲಿತ್ತು. ಗೌಡರು ನನ್ನಲ್ಲಿಗೆ ಹಲವು ಸಲ ಕರೆದೊಯ್ದು ಬೆಳಸುಕಾಳು ತಿನ್ನಸಿದ್ದರು. ಆದ್ದರಿಂದ ಆ ಹೊಲದ ಪರಿಚಿತವಿತ್ತು. ಹೋದೆ. ಮೇವಿಗೆಂದು ನಡುವಿನ ಒಂದು ಭಾಗವನ್ನು ಕಟ್ಟಾಫ್ ಮಾಡಿದ್ದರು. ಅಲ್ಲಿ ಚಂದ್ರ ಹೊಸ ಶರ್ಟನ್ನು ತೊಟ್ಟುಕೊಂಡು ನವವಧುನಿನೋಪಾದಿಯಲ್ಲಿ ನಾಚಿ ಕೂತಿದ್ದ. ಕಣ್ತುಂಬ ನೋಡಿ ಕಣ್ಣಲ್ಲಿ ನೀರು ತಂದುಕೊಂಡೆ. “ನ್ವಾಡಿದ್ರೇನು ಸಾರೂ….?”ಎಂದು ಕೇಳಿದ. ಕಣ್ಣೊಳಗಿದ್ದ ಆನಂದ ಬಾಷ್ಪ ಒರೆಸಿಕೊಳ್ಳುತ್ತ ನಾನು “ನೋಡಿದ್ನೆಪ್ಪಾ…ನೋಡಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಬಳಿಕ ಅವನು ಒಂದೊಂದಾಗಿ ಗುಂಡಿಗಳನ್ನು ಬಿಚ್ಚಿ ಪುನಃ ಮಡಚಿ ಕಂಕುಳಲ್ಲಿರಿಸಿಕೊಂಡ.