ಎಷ್ಟು ಕಟುಕ ಮನುಷ್ಯ

ಛೆ

ಬಹಳ ಹಿಂದೆ ಯಾರೋ ಹೇಳಿದ ಘಟನೆ.

ಕರಡಿಯೊಂದು ತನ್ನ ಮರಿಯೊಂದಿಗೆ ಆಟವಾಡುತ್ತಿಂತೆ. ಸ್ವಲ್ಪ ಹೊತ್ತಾದ ಬಳಿಕ ಅದಕ್ಕೆ ಹಲಸಿನ ಹಣ್ಣಿನ ಪರಿಮಳ ಬಂದಿದೆ. ಮರಿಯನ್ನು ಅಲ್ಲೇ ಬಿಟ್ಟು ಹಲಸಿನ ಹಣ್ಣನ್ನು ಅರಸುತ್ತ ಹೋಗಿ ಮರವನ್ನು ಪತ್ತೆ ಮಾಡಿದೆ. ಕರಡಿಯ ಅದೃಷ್ಟ, ಆ ಮರದಲ್ಲಿಯೇ ಜೇನು. ಇನ್ನು ಕೇಳಬೇಕೆ? ಕರಡಿ ಹಲಸಿನ ಹಣ್ಣು ಹಾಗೂ ಜೇನನ್ನು ಕಿತ್ತು ಹತ್ತಿರದಲ್ಲಿಯೇ ಇದ್ದ ಬಂಡೆಯ ಬಳಿ ಬಂದು, ಹಲಸಿನ ತೊಳೆಗಳನ್ನು ಚೆನ್ನಾಗಿ ಕಿವುಚಿ ಅದಕ್ಕೆ ಜೇನನ್ನು ಸೇರಿಸಿ ರಸಾಯನ ತಯಾರು ಮಾಡಿದೆ. ಆದರೆ ತಾನು ತಿನ್ನದೆ ರಸಾಯನ ತಿನ್ನಿಸಲು ತನ್ನ ಮರಿಯನ್ನು ಕರೆದುಕೊಂಡು ಬರಲು ಹೋಯಿತಂತೆ. ಕರಡಿ ಕಣ್ಮರೆಯಾಗುತ್ತಿದ್ದಂತೆ ಅಲ್ಲಿಗೆ ಬಂದ ಕೆಲ ಮನುಷ್ಯರು ಕರಡಿ ಮಾಡಿಟ್ಟಿದ್ದ ರಸಾಯನವನ್ನು ಸಂಪೂರ್ಣ ಬಳಿದುಕೊಂಡು ಹೋದರಂತೆ. ಕರಡಿ ತನ್ನ ಮರಿಯೊಂದಿಗೆ ಬಂದಾಗ ನೆಕ್ಕಲು ಕೂಡ ರಸಾಯನವಿಲ್ಲ. ರಸಾಯನ ಇಲ್ಲದ್ದನ್ನು ನೋಡಿದ ಕರಡಿಗೆ ದುಃಖದ ಕಟ್ಟೆ ಒಡೆದಿದೆ. ಅದು ಜೋರಾಗಿ ಕಿರುಚುತ್ತ ತನ್ನ ತಲೆಯನ್ನು ಅದೇ ಕಲ್ಲಿಗೆ ಹೊಡೆದುಕೊಳ್ಳಲಾರಂಭಿಸಿತಂತೆ. ಸುಮಾರು ಹೊತ್ತು ಹೀಗೆಯೇ ನೋವಿನಿಂದ ಕಿರುಚುವುದು, ತಲೆಯನ್ನು ಕಲ್ಲಿಗೆ ಜಪ್ಪಿಕೊಳ್ಳುವುದು ಮಾಡಿತಂತೆ. ಮರಿ ಕರಡಿ ಏನೂ ಮಾಡಲು ತೋಚದೆ ಅಮ್ಮನ ಮೈಗೆ ಮೈ ತಾಕಿಸುತ್ತ ಸಮಾಧನ ಮಾಡುತ್ತಿತ್ತಂತೆ. “ಅದನ್ನು ನೋಡಿದ ನನಗೆ ಕಣ್ಣಲ್ಲಿ ನೀರು ಬಂತು ಮಾರಾಯ” ಎಂದಿದ್ದರು ಇದನ್ನು ಹೇಳಿದವರು. ನನ್ನ ಗಂಟಲು ಕೂಡ ನೋಯಲಾರಂಭಿಸಿತ್ತು. ಎಂತಹ ದುಷ್ಟನಲ್ಲವೆ ಮನುಷ್ಯ?