ಪ್ರಶ್ನೆ ಕೇಳೋದು ಸರಿಯಾಗಿಲ್ಲ

ಹೌದಲ್ವಾ?

ಕನ್ನಡದ ಹಿರಿಯ ನಟರೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಹಿರಿಯ ನಟರು ಕನ್ನಡದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿ ಜನಮಾನಸದ ಮೇಲೆ ಅಚ್ಚಳಿಯದ ಮುದ್ರೆಯೊತ್ತಿದ್ದಾರೆ. ನಮ್ಮ ಜೊತೆ ಮತ್ತೊಬ್ಬ ವ್ಯಕ್ತಿಯೂ ಪ್ರಯಾಣಿಸುತ್ತಿದ್ದರು. ಅವರಿಗೆ ಈ ಹಿರಿಯ ನಟರನ್ನು ಕಂಡರೆ ತುಂಬಾ ಗೌರವ. ಹೀಗಾಗಿ ಹಿರಿಯ ನಟರದ್ದು ಹಾಗೂ ಈ ವ್ಯಕ್ತಿಯದ್ದೂ ನಿರಂತರವಾಗಿ ಮಾತು ಸಾಗಿತ್ತು. ಹೀಗೇ ಮಾತನಾಡುವಾಗ ವ್ಯಕ್ತಿ, ಹಿರಿಯ ನಟರಿಗೆ ಕೇಳಿದರು,

“ಸರ್ ತಾವು ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ? ವಿಷ್ಣುವರ್ಧನ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ?” ಅಂತ. ಆಗ ತಕ್ಷಣ ಹಿರಿಯ ನಟರು ಹೇಳಿದರು, “ನೋಡಿ ಸ್ವಾಮಿ, ಜನ ಹೀಗೇ ಕೇಳ್ತಾರೆ. ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದೀಯಾ, ವಿಷ್ಣು ಜೊತೆ ಎಷ್ಟು ಮಾಡಿದೀಯಾ ಅಂತ. ಪೋಷಕ ನಟರೆಂದರೆ ಜನರಿಗೆ ಯಾಕೆ ಈ ರೀತಿಯ ಭಾವನೆಯೋ ಗೊತ್ತಿಲ್ಲ. ಯಾರೂ ನನ್ನನ್ನ, ‘ಸಾರ್ ರಾಜ್ ಕುಮಾರ್ ನಿಮ್ಮ ಜೊತೆ ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ, ವಿಷ್ಣು ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ’ ಅಂತ ಕೇಳೋದೇ ಇಲ್ಲ. ಒಂದು ಚಿತ್ರದಲ್ಲಿ ನವರಸಗಳೂ ಬೇಕು. ಊಟದಲ್ಲಿ ಎಲ್ಲ ರುಚಿಯೂ ಬೇಕು. ಊಟ ಮಾಡುವಾಗ ಹಲವಾರು ಬಾರಿ ಮುಖ್ಯ ಪದಾರ್ಥಕ್ಕಿಂತ ಉಪ್ಪಿನಕಾಯಿಯ ರುಚಿಯೇ ನಾಲಿಗೆಯಲ್ಲಿ ಉಳಿಯುತ್ತದೆ ಅಲ್ಲವೆ?” ಎಂದರು.

ಅವರ ಪಾಯಿಂಟ್ ಸರಿಯೆನಿಸಿತು.