ಕ್ಯಾಮೆರಾ ನೋಡುತ್ತಲೇ ಓಡಿಹೋದವರೆಷ್ಟು ಜನರೋ

ಒಂದೊ ಎರಡೋ, ಅಂಕೆಯ ಹೇಳೋ

ಸುಮಾರು ಮೂರು ವರ್ಷಗಳ ಹಿಂದಿನ ಮಾತು. ಅದು ಅಕ್ಟೋಬರ್ 30 ರ ಆಸುಪಾಸು. ಈಟಿವಿ ಕಚೇರಿಯಲ್ಲಿ ಪತ್ರಕರ್ತರ ಮಧ್ಯಾಹ್ನದ ಮೀಟಿಂಗ್ ನಡೆಯುತ್ತಿತ್ತು. ಜಿ. ಎನ್. ಮೋಹನ್ ಮಾತನಾಡುತ್ತ ಪತ್ರಕರ್ತರಿಗೆ ಕೇಳಿದರು, “ಹುಂ…ಈಗ ನವೆಂಬರ್ 1 ಕ್ಕೆ ಸ್ಟೋರಿ ಏನ್ರಪಾ?” ಅಂತ. ಸರಿ ಶುರುವಾಯಿತು ನೋಡಿ ಪ್ರಕಾಂಡ ಪಂಡಿತ ಪತ್ರಕರ್ತರ ಸ್ಟೋರಿ ಐಡಿಯಾಗಳು, “ಸರ್, ಕನ್ನಡ ಧ್ವಜ ಹರಿದುಹೋಗಿರುತ್ತೆ ಅದರ ಬಗ್ಗೆ ಸ್ಟೋರಿ ಮಾಡಬಹುದು”. “ಸರ್, ಇಂದಿನ ಕನ್ನಡದ ಸ್ಥಿತಿ-ಗತಿ ಬಗ್ಗೆ ಸ್ಟೋರಿ ಮಾಡಬಹುದು”, “ಸರ್ ಕನ್ನಡ ಸಂಘಟನೆಗಳ ‘ಖನ್ನಡ’ ಪ್ರೇಮದ ಬಗ್ಗೆ ಸ್ಟೋರಿ ಮಾಡಬಹುದು” ಅಂತೆಲ್ಲ ಹೇಳುತ್ತ ಹೋದೆವು. ಎಲ್ಲ ಸ್ಟೋರಿಗಳನ್ನು ಅದಾಗಲೇ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಮಾಡಿಯಾಗಿತ್ತು. ಹೀಗಾಗಿ ಅವೇ ಘಿಸಾಪಿಟಾ ಸ್ಟೋರಿಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದವು. ಕೇಳುವಷ್ಟು ಕೇಳಿಸಿಕೊಂಡ ಮೋಹನ್ ಸರ್, ಕೊನೆಗೆಂದರು, “ಸರಿ, ನಾನೊಂದು ಸ್ಟೋರಿ ಹೇಳ್ತಿನಿ. ಹೀಗ್ ಮಾಡಿದ್ರೆ ಹೇಗೆ ನೋಡಿ, ಕನ್ನಡ ಅಂಕಿಗಳನ್ನ ಒಂದು ಹಾಳೆ ಮೇಲೆ ಬರ್ಕೊಂಡು ಸುಮ್ನೆ ಜನರಿಗೆ ಕೇಳ್ತಾ ಹೋಗಿ ಇದೆಷ್ಟು ಅಂತ. ನೋಡೋಣ, ಎಷ್ಟು ಜನ ಉತ್ತರಿಸ್ತಾರೆ ಅಂತ” ಅಂದ್ರು.

ಎಲ್ಲರಿಗೂ ಈ ಸ್ಟೋರಿ ಐಡಿಯಾ ಭಯಂಕರ ಇಷ್ಟವಾಗಿ ಹೋಯ್ತು. ಆಮೇಲಿನಿದೆ, 1 ರಿಂದ 9 ರವರೆಗಿನ ಅಂಕೆಗಳನ್ನ ವಿವಿಧ ಹಾಳೆಗಳ ಮೇಲೆ ಪ್ರತ್ಯೇಕವಾಗಿ ಬರೆದು ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಪತ್ರಕರ್ತರೆಲ್ಲ ಓಡಿದೆವು. ಅಬ್ಬಾ….ಜನರಿಗೂ ಈ ಅಂಕೆಗಳ ಆಟ ಎಷ್ಟುವಾಯ್ತು ಅಂದ್ರೆ ಜನರೇ ಇದು ಸರಿ ಅದು ಸರಿ ಎಂದು ಬೆಟ್ ಕಟ್ಟಿದರು. ಕೆಲವರಂತೂ ಅಂಕೆ ಗುರುತಿಸಲಾರದೆ ಪ್ಯಾಲಿ ನಗೆ ನಕ್ಕರೆ, ಮತ್ತೆ ಕೆಲವರು ಕನ್ನಡದ 7 ಹಾಗೂ 3 ಅಂಕಿಗಳನ್ನು 2 ಅಂತಲೂ, 9 ನ್ನು 6 ಹಾಗೂ 6 ನ್ನು 9 ಎಂತಲೂ ಓದಿ ‘ಖನ್ನಡ’ ಪ್ರೇಮ ಮೆರೆದರು. ಎಂ.ಜಿ ರೋಡಿನಲ್ಲಂತೂ ಜನ ಮುಖ ತಪ್ಪಿಸಿಕೊಂಡು ಓಡಿದರು. ಬಹುತೇಕ ಕನ್ನಡಿಗರಿಗೆ ಕನ್ನಡ ಅಂಕೆಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ.

ಸ್ಟೋರಿ ಅಷ್ಟೇ ಅದ್ಭುತವಾಗಿ ವಿಶೇಷ ಇಫೆಕ್ಟ್ ಮ್ಯೂಸಿಕ್ ನೊಂದಿಗೆ ಎಡಿಟ್ ಆಗಿ ಏರ್ ಆಯಿತು. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆಯೂ ದೊರೆಯಿತು. ಹೆಂಗಿದೆ ಸ್ಟೋರಿ ಐಡಿಯಾ?