ವೃಕ್ಷೋ ರಕ್ಷತಿ ರಕ್ಷಿತಃ

ನಾವಿರುವಾ ತಾಣವೇ ಗಂಧದ ಗುಡಿ, ಚಂದದ ಗುಡಿ, ಶ್ರೀಗಂಧದ ಗುಡಿ????

“ನೋಡು ಇವರ ಮಗ ಚೆನ್ನಾಗಿಯೇ ಇದ್ದ. ಡಿಗ್ರಿ ಪಾಸ್ ಆಗುವವರೆಗೂ ಡಿಸ್ಟಿಂಕ್ಷನ್ ಲ್ಲಿಯೇ ಪಾಸ್ ಆಗಿ ಬೆಂಗಳೂರಿನಲ್ಲಿ ಒಳ್ಳೆಯ ನೌಕರಿ ಕೂಡ ಸೇರಿದ. ಆದರೆ ಸೇರಿ ಅದೇನಾಯಿತೋ ಗೊತ್ತಿಲ್ಲ, ಬೆಂಗಳೂರು ಸೇರಿದ ಆರೇ ತಿಂಗಳಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದ. ಸಿಗರೇಟು, ಎಣ್ಣೆ ಸಾಮಾನ್ಯವಾಯಿತು. ಕೆಲ ದಿನಗಳ ನಂತರ ತಲೆ ಕೆಟ್ಟುಬಿಟ್ಟಿತು. ಈಗ ಆತನ ತಂದೆ-ಮತ್ತೆ ಅವನನ್ನು ಮರಳಿ ಊರಿಗೆ ಕರೆತಂದಿದ್ದಾರೆ. ಈಗ ಡ್ರಗ್ಸ್, ಸಿಗರೇಟು, ಎಣ್ಣೆ ಚಟ ಬಿಟ್ಟಿದ್ದರೂ, ತಲೆ ಮಾತ್ರ ಸರಿಹೋಗಿಲ್ಲ”.

“ಆಕಿನ್ನ ರಾಜಸ್ಥಾನಕ್ಕ ಕೊಟ್ಟಿದ್ರಲೇ. ನೋಡಾಕ್ ಹೆಂಗ್ ಇದ್ಲ್ ಅಂದಿ? ಅಗದೀ ಐಶ್ವರ್ಯ ರೈನ….ಹುಡುಗನ ಕಡ್ಯಾವ್ರು ಭಾಳ ಪೈಶೆ ಇರಾವ್ರ ಪಾ. ಎಲ್ಲಾ ಛಲೋತಂಗೆ ಮದ್ವಿ ಮಾಡಿ ಕೊಟ್ಟಿದ್ರ. ಆದ್ರ ಅದೇನಾತ ಯಾಂಬಲ್ಲ, ಅದರವ್ನ್ ಮದಿವಿಯಾಗಿ ಬರೋಬರ್ 3 ತಿಂಗಳ್ಳಕ್ಕ ಗಂಡ ಆಕ್ಸಿಡೆಂಟ್ ನ್ಯಾಗ ಗೊಟಕ್ ಅಂದ. ಛಲೋ ಗಟ್ಟಿಮುಟ್ ಇದ್ದೋ ಆಂವ. ಅಂವ ಸತ್ತ ಮ್ಯಾಗ್ ಇಕಿ ಮ್ಯಾಲ ಅತ್ತಿ-ಮಾಂವ ಜುಲಮಿ ಮಾಡಕ್ ಹತ್ತಿದ್ರು. ಇಕಿ ಆರೆ ಎಷ್ಟ ದಿವಸ ಅಂತ ನೋಡ್ತಾಳ, ಈಗ ವಾಪಸ್ ತವರ್ ಮನಿಗೆ ಬಂದ ಅದಾಳ”.

ಯಾವುದೇ ಸರಿಯಾದ, ತಾರ್ಕಿಕವಾದ ವಿವರಣೆ ಇಲ್ಲದಿದ್ದರೂ ಕೆಲವರ ಬಾಳಿನಲ್ಲಿ ಈ ರೀತಿಯ ಘಟನೆಗಳು ಆಗಿಬಿಡುತ್ತವೆ. ಇವಕ್ಕೆ ಪೂರ್ವ ಜನ್ಮದ ಸಂಚಿತ ಕರ್ಮ ಕಾರಣವೋ ಅಥವಾ ವಿಧಿಯ ಆಟವೋ ಗೊತ್ತಿಲ್ಲ. ಆದರೆ ಈ ರೀತಿಯ ಘಟನೆಗಳನ್ನು – ಅಂದರೆ ವಯಸ್ಸಿಗೆ ಬಂದ ಮಕ್ಕಳು ಬದುಕಿನಲ್ಲಿ ಇನ್ನೇನು ಸೆಟ್ಲ್ ಆದರು ಅನ್ನುವಾಗ ಆಗುವ ದುರ್ಘಟನೆಗಳು – ಹಿರಿಯರೊಬ್ಬರ ಬಳಿ ಚರ್ಚಿಸುತ್ತಿದ್ದೆ. ಆಗ ಆ ಹಿರಿಯರು, “ಸಾಮಾನ್ಯವಾಗಿ ವೃಕ್ಷನಾಶ ಮಾಡಿದರೆ ವಂಶೋದ್ಧಾರಕರು ಈ ರೀತಿಯ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಬೇಕಾದರೆ ಗಮನಿಸು, ಫಾರೆಸ್ಟ್ ಡಿಪಾರ್ಟಮೆಂಟಿನಲ್ಲಿರುವ ಹಲವು ಹಿರಿಯ ಅಧಿಕಾರಿಗಳ ಮಕ್ಕಳಿಗೆ ಹೀಗಾಗಿರುತ್ತದೆ. ಬೇರೆಯವರಿಗೆ ಹೀಗಾಗುವುದಿಲ್ಲ ಎಂದಲ್ಲ. ಆದರೆ ವೃಕ್ಷನಾಶಕ್ಕೆ ಕಾರಣರಾದವರ ಮಕ್ಕಳಿಗೆ ಕೆಟ್ಟ ಸ್ಥಿತಿ ಬಂದೇ ಬರುತ್ತದೆ. ಲಂಚ ತಿಂದು, ಭ್ರಷ್ಟಾಚಾರ ಮಾಡಿ ಭೂಮಿಯ ಹಸಿರ ಸೆರಗಿಗೆ ಕೈ ಹಾಕಿ, ಕಳ್ಳ ನಾಟ ಸಾಗಣೆದಾರರಿಗೆ ನೆರವಾಗುವುದು ತುಂಬಾ ಸುಲಭ. ಆದರೆ ಹಾಗೆ ಹೊಲಸು ತಿಂದು ದುಡಿದ ದುಡ್ಡನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ. ಭಾರತೀಯ ಪರಂಪರೆಯಲ್ಲಿ ವೃಕ್ಷಸಂಹಾರ ಅಕ್ಷಮ್ಯ (unpardonable) ಕರ್ಮ. ಅದನ್ನು ಮನ್ನಿಸಲಾಗುವುದಿಲ್ಲ. ಅದಕ್ಕೆ ಶಿಕ್ಷೆಯೇ ಗತಿ” ಎಂದರು.

ಅವರು ಹೇಳಿದ್ದನ್ನು ಪೂರ್ತಿಯಾಗಿ ನಂಬಲು ನಾನು ಸರ್ವೆ ನಡೆಸಿಲ್ಲ. ನಂಬದೇ ಇರಲೂ ಕಾರಣವಿಲ್ಲ. ಒಂದಂತೂ ಸತ್ಯ. ಕಾಡುಗಳನ್ನು ಉಳಿಸದಿದ್ದರೆ, ಏಪ್ರಿಲ್ –ಮೇ ತಿಂಗಳಿನ ಬಿಸಿಲಲ್ಲಿ ದಣಿವಾರಿಸಿಕೊಳ್ಳಲು ರಸ್ತೆ ಬದಿಯಲ್ಲಿ ಒಂದೂ ಮರವನ್ನು ಉಳಿಸದೇ ಹೋದರೆ, ಕಾರ್ಪೋರೇಷನ್ ನೀರಿನ ಬದಲಾಗಿ 20 ಲೀಟರ್ ಕ್ಯಾನ್ ನೀರನ್ನೇ ಕುಡಿಯುವುದು ಅನಿವಾರ್ಯವನ್ನಾಗಿಸಿದರೆ ನಮ್ಮ ಮಕ್ಕಳು ಮಾತ್ರ ನಮ್ಮನ್ನು ಎಂದಿಗೂ ಕ್ಷಮಿಸಲಾರರು.

 

ಶೂಟಿಂಗ್ ಸೆಟ್ಟಲ್ಲಿ ಹೀಗೊಂದು ಲೈಟ್

ಮೊನ್ನೆ ಮುಕ್ತ ಮುಕ್ತದ ಔಟ್ ಡೋರ್ ಶೂಟ್ ಇತ್ತು. ರಾತ್ರಿ ಎಚ್ ಎಂ ಐ ಲೈಟ್ ಹಾಕಿ, ಅದಕ್ಕೆ ಗ್ರಿಡ್ ಹಾಕಿದಾಗ ನನ್ನ ಕ್ಯಾಮೆರಾ ಕಣ್ಣಿಗೆ ಕಂಡದ್ದು ಹೀಗೆ.

© SUGHOSH S. NIGALE

ಶೋಭಾ ಕರಂದ್ಲಾಜೆ ಮತ್ತು ಭರತನಾಟ್ಯಂ

ಫೋಟೋ ಕೃಪೆ – ಸುಧಾಕರ ಜೈನ್ .

ಮತ್ತಷ್ಟು ಸೂಪರ್ ಫೋಟೋಗಳು ಅವರ ಬ್ಲಾಗ್ ನಲ್ಲಿ.

what a pose I say...!!!

ಇಂದು ರಾತ್ರಿ 8.30 ರಿಂದ 9.30 ರವರೆಗೆ ಲೈಟ್ ಆಫ್ ಮಾಡಿ

ಇಂದು ರಾತ್ರಿ 8.30 ರಿಂದ 9.30 ರ ವರೆಗೆ ಅರ್ತ್ ಅವರ್ ಇದೆ. ಹೀಗಾಗಿ ದಯವಿಟ್ಟು ಅಗತ್ಯವಿಲ್ಲದ ವಿದ್ಯುತ್ ದೀಪಗಳನ್ನು 1 ಗಂಟೆಯ ಕಾಲ ಆರಿಸುವ ಮೂಲಕ ಇದನ್ನು ಆಚರಿಸಲಾಗುತ್ತದೆ. ವರ್ಲ್ಡ್ ವೈಲ್ಡ್ ಫಂಡ್ ಇದಕ್ಕೆ ಪ್ರತಿವರ್ಷ ಕರೆ ನೀಡುತ್ತದೆ. ಹೋದ ವರ್ಷ ನಮ್ಮ ಗಲ್ಲಿಯಲ್ಲಿ ನಮ್ಮ ಮನೆಯೂ ಸೇರಿದಂತೆ ಒಂದೆರಡು ಮನೆಗಳವರು ಮಾತ್ರ ಇದನ್ನು ಆಚರಿಸಿದ್ದೆವು. ಬನ್ನಿ, ಈ ಬಾರಿ ಎಲ್ಲರೂ ಸೇರಿ ಅರ್ತ್ ಅವರ್ ಆಚರಿಸೋಣ.

ಫೋಟೋ ಕೃಪೆ - ಇಂಟರ್ನೆಟ್

ಅಪ್ಪನಾಗುವುದು ಸುಲಭವಲ್ಲ…

ಮೊದಲು ಅಪ್ಪನಾಗು, ಆಮೇಲೆ ಹಿರೋ ಆಗು...

ಅಪ್ಪನಾಗುವುದು ಸುಲಭ ಎಂದು ನೀವಂದುಕೊಂಡಿದ್ದರೆ

ಖಂಡಿತ ಗಲತ್ ಫೆಮಿ ಮಾಡಿಕೊಂಡಿದ್ದೀರಿ.

ಅಂದರೆ ಅಪ್ಪನಾಗುವುದು ಸುಲಭವೇ….

ಆದರೆ ಅಪ್ಪನಾದ ಬಳಿಕ ಆ ಪದವಿಯನ್ನ ಜೀರ್ಣಿಸಿಕೊಳ್ಳುವುದಿದೆಯಲ್ಲ

ಅದು ಎಲ್ಲರಿಗೂ ಸಾಧ್ಯವಿಲ್ಲ.

ನಿಜವಾಗಲೂ ಹಿಸ್ಟೇರಿಯಾ ತಾಯಿಯಾದವಳಿಗೆ ಹಿಡಿಯಬೇಕಾದುದಲ್ಲ

ಅದು ಅಪ್ಪನಿಗೆ ಹಿಡಿಯಬೇಕಾದದ್ದು,

ನಿಜವಾದ ಅಪ್ಪನಾಗಿದ್ದರೆ ಮಾತ್ರ.

ಬರೀ ಬೀಜ ಕೊಟ್ಟು ಬಿಟ್ಟರೆ ಮುಗಿಯಲಿಲ್ಲ ಸ್ವಾಮಿ.

ಬೀಜವೇನು, ಬೇಕಾದರೆ ಮೂಟೆಗೆ ಮೂಟೆ ಸರ್ಕಾರದ ಸಬ್ಸಿಡಿ ಅಂಗಡಿಗಳಲ್ಲಿ ಸಿಗುತ್ತದೆ.

ಪೈರನ್ನು ಯಾವನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಮುಖ್ಯ.

ದಿನವಿಡೀ ಗಾಣದೆತ್ತಿನಂತೆ ದುಡಿದು ದುಡಿದು ಹೈರಾಣಾಗಿ ಮನೆಗೆ ಬಂದಾಗ

ಪೈರನ್ನು ಎತ್ತಿಕೊಂಡು ಮುದ್ದು ಮಾಡಿ ಅದಕ್ಕೆ ಕಿಶ್ಶಿ ಕೊಟ್ಟು, ಇಶ್ಶಿ ಬಳಿಯಬೇಕು.

ಸರಿಯಾಗಿ ಊಟಕ್ಕೆ ಕುಳಿತು ಒಂದನೇ ತುತ್ತನ್ನು ಜಗಿಯುತ್ತಿರುವಾಗಲೇ

ಪೈರು ಉಚ್ಚೆ ಹೊಯ್ದುಕೊಂಡಿರುತ್ತೆ.

ಅದು ಅದರ ಚಡ್ಡಿಗೆ ತಾಗಿ ನಿಮ್ಮ ಥ್ರೀಫೋರ್ತ್ ಅನ್ನು ಠಂಡಾ ಠಂಡಾ ಕೂಲ್ ಕೂಲ್

ಮಾಡುವವರೆಗೂ ಗೊತ್ತಾಗುವುದಿಲ್ಲ. ಆಗ ರಪ್ ಅಂತ ಊಟಬಿಟ್ಟು ಏಳಬೇಕು.

ನಿಮ್ಮ ಕಣ್ಣೆದುರಿಗೇ ನಿಮ್ಮ 20 ಸಾವಿರ ರೂಪಾಯಿ ಮೊಬೈಲ್ ರಪ್ ಅಂತ ಗೋಡೆಗೆ ಅಪ್ಪಳಿಸಿ ಎರಡು ಹೋಳಾಗಿ

ಬೀಳುವುದನ್ನು ನೋಡುವ ತಾಳ್ಮೆ ಇರಬೇಕು.

ಆಗಷ್ಟೇ ಫಿನೈಲ್ ಹಾಕಿ ಒರೆಸಿದ ನೆಲದ ಮೇಲೆ ರವೆಯ ಡಬ್ಬ ತಲೆಕೆಳಗಾಗಿ ಬೀಳುವುದನ್ನು ನೋಡಿಯೂ

ನೋಡದಂತಿರಬೇಕು.

ಲ್ಯಾಪ್ ಟಾಪ್ ನ ಕೀಗಳು ಕುಯ್ಯು ಮರ್ರೋ ಎಂದು ಪೈರಿನ ಕೈಗೆ ಸಿಕ್ಕಿ ಹೊಯ್ಕೊಳ್ಳುತ್ತಿದ್ದರೂ

ನೀವು ಮಾತ್ರ ಸುದರ್ಶನ ಕ್ರಿಯೆಯನ್ನು ಮಾಡುತ್ತಿರಬೇಕು.

ಇಷ್ಟೆಲ್ಲ ಆದರೂ ಪೈರಿಗೆ ಕೊಂಚ ಜ್ವರ ಬಂದರೆ ಅದರ ಝಳ ನಿಮಗೆ ತಾಗುವಂತಿರಬೇಕು

ಪೈರು ಧಡ್ ಅಂತ ಬಿದ್ದು ತುಟಿ ಒಡೆದುಕೊಂಡರೆ ನೀವು ಭೋರಂತ ಅಳಬೇಕು

ದೇಹ ಆಫೀಸಿನಲ್ಲಿದ್ದರೂ ಮನಸ್ಸು ಪೈರಿನ ಸುತ್ತಲೇ ಇರಬೇಕು.

ಅದಕ್ಕೇ ಹೇಳಿದ್ದು,

ಅಪ್ಪನಾಗುವುದು ಸುಲಭ ಅಲ್ಲ ಕಣ್ರೀ….

ಹೀಗಾಗಿಯೇ ಹೇಳುತ್ತೇನೆ, ಅಪ್ಪನಾಗುವ ಅರ್ಹತೆಯಿದ್ದರೆ ಮಾತ್ರ ಅಪ್ಪನಾಗಿ

ಏಕೆಂದೆರೆ ಅಪ್ಪನಾಗುವುದು ಸುಲಭವಲ್ಲ.

 

2010 ರಲ್ಲಿ ನನ್ನ ಬ್ಲಾಗ್

The stats helper monkeys at WordPress.com mulled over how this blog did in 2010, and here’s a high level summary of its overall blog health:

Healthy blog!

The Blog-Health-o-Meter™ reads Wow.

Crunchy numbers

Featured image

About 3 million people visit the Taj Mahal every year. This blog was viewed about 26,000 times in 2010. If it were the Taj Mahal, it would take about 3 days for that many people to see it.

In 2010, there were 388 new posts, growing the total archive of this blog to 549 posts. There were 678 pictures uploaded, taking up a total of 70mb. That’s about 2 pictures per day.

The busiest day of the year was April 9th with 330 views. The most popular post that day was ಮುಕ್ತ ಮುಕ್ತದ ಬಗ್ಗೆ ಬಸ್ ನಲ್ಲಿ ಮಾತಾಡಿದ್ದು…..

Where did they come from?

The top referring sites in 2010 were kn.wordpress.com, baala-doni.blogspot.com, facebook.com, WordPress Dashboard, and motugode.blogspot.com.

Some visitors came searching, mostly for ತಿಕ, ಅಯೋಧ್ಯೆ, ಬೆತ್ತಲಾಗಿ, ಪರಿಸರ ಸಂರಕ್ಷಣೆ, and jayashree raj.

Attractions in 2010

These are the posts and pages that got the most views in 2010.

1

ಮುಕ್ತ ಮುಕ್ತದ ಬಗ್ಗೆ ಬಸ್ ನಲ್ಲಿ ಮಾತಾಡಿದ್ದು…. April 2010
2 comments

2

ಕಾಂಡೋಮ್ ಖರೀದಿ : ಯಾಕಿಷ್ಟು ಮಡಿವಂತಿಕೆ? October 2009
12 comments

3

ತಿ…. ಮುಚ್ಕೊಂಡು ಹೋಗ್ಬೇಕು…. January 2010
16 comments

4

ಅಯ್ಯೋ ಮಲೆಯಾಳಿ ಕನ್ನಡವೇ…. November 2010
4 comments

5

ಐಶ್ವರ್ಯಾ ರೈ ಮದುವೆ ಅಟೆಂಡ್ ಮಾಡುತ್ತೀರಾ ಎಂದು ವಿವೇಕ್ ಓಬೇರಾಯ್ ಗೆ ಕೇಳಿದ್ದು….. March 2010
7 comments

ಮರ್ವಾದೆ ಅಂತಾನೆ ನೋಡಿ ಸಾ…

ha..ha..ha...ಕರ್ಮ ಕಣ್ರೀ...

ಕೆಲ ವರ್ಷಗಳ ಹಿಂದೆ ಯಾವುದೋ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆ.

ಏಪ್ರಿಲ್ ತಿಂಗಳ ಭುಗುಭುಗು ಬಿಸಿಲು. ಆಕ್ಟರ್, ನಿರ್ದೇಶಕ, ಕ್ಯಾಮರಾಮನ್, ಸೆಟ್ ಹುಡುಗರು ಎಲ್ಲರೂ ಸೆಖೆಯಿಂದ ಕಂಗಾಲಾಗಿದ್ದಾರೆ. ಮೊದಲೇ ಒಂದು ಪ್ಯಾರಾದಷ್ಟು ದೊಡ್ಡ ಡೈಲಾಗ್. ಆಕ್ಟರ್ ಪ್ರತಿಭಾವಂತನೇ ಆದರೂ ಅಂದು ಮಾತ್ರ ಯಾಕೋ ಮತ್ತೆ ಮತ್ತೆ ತಪ್ಪುತ್ತಿದ್ದಾನೆ. ಒಮ್ಮೆ ಆಕ್ಟರ್ ಡೈಲಾಗ್ ತಪ್ಪಿದರೆ, ಮತ್ತೊಮ್ಮೆ ಕ್ಯಾಮರಾ ಟ್ರಾಲಿ ಸರಿಯಾಗಿ ಮೂವ್ ಆಗುತ್ತಿಲ್ಲ, ಮಗದೊಮ್ಮೆ ಸರಿಯಾಗಿ ಟೇಕ್ ನಡೆಯುವಾಗಲೇ ಗೋಡೆಯ ಗಡಿಯಾರ ಢಣ್ ಎಂದು ಬಾರಿಸಿ ನಿರ್ದೇಶಕನಿಗೆ ಸಿಟ್ಟುಬರಿಸುತ್ತಿದೆ, ಹೀಗೇ ಏನೇನೋ ಕಾರಣಗಳಿಂದಾಗಿ ರಿಟೇಕ್ ಮೇಲೆ ರಿಟೇಕ್ ನಡೆಯುತ್ತಿದೆ.

ಸುಮಾರು 10-12 ರಿಟೇಕ್ ಆದಮೇಲೆ ಅಂತೂ ಇಂತೂ ಆಕ್ಟರ್ ಫಾರ್ಮ್ ಗೆ ಬಂದಿದ್ದಾನೆ. ನಿರ್ದೇಶಕ ಆಕ್ಷನ್ ಹೇಳಿದ್ದಾನೆ. ಟ್ರಾಲಿ ಸರಿಯಾಗಿ ಮೂವ್ ಆಗಿದೆ. ಈ ಬಾರಿ ಆಕ್ಟರ್ ನಿಜವಾಗಿಯೂ ತುಂಬಾ ಭಾವಪೂರ್ಣವಾಗಿ ಅಭಿನಯಿಸುತ್ತಿದ್ದಾನೆ. ಇನ್ನೇನು ಆಕ್ಟರ್ ಡೈಲಾಗ್ ನ ಕೊನೆಯ ಸಾಲು ಹೇಳಿ ಮುಗಿಸಬೇಕು, ನಿರ್ದೇಶಕ ಶಾಟ್ ಓಕೆ ಅನ್ನಬೇಕು, ಅಷ್ಟರಲ್ಲಿ ಸೌಂಡ್ ರಿಕಾರ್ಡಿಸ್ಟ್ ಕಟ್ ಕಟ್ ಅಂದಿದ್ದಾನೆ. (ಸಾಮಾನ್ಯವಾಗಿ ಶಾಟ್ ನಡುವೆ ಕಲಾವಿದನ ಧ್ವನಿಯಲ್ಲದೆ ಬೇರೆ ಧ್ವನಿ ಅಂದರೆ ಏರೋಪ್ಲೆನ್ ಹಾರುವ ಸದ್ದು, ವಾಹನದ ಹಾರ್ನ್, ಗೋಡೆಯ ಗಡಿಯಾರ ಘಂಟೆ ಇತ್ಯಾದಿ ಸದ್ದು ಬಂದರೆ ಸೌಂಡ್ ರಿಕಾರ್ಡಿಸ್ಟ್ ಕಟ್ ಹೇಳುತ್ತಾನೆ)

ಆಕ್ಟರ್, ನಿರ್ದೇಶಕ, ಸಹ ನಿರ್ದೇಶಕ, ಕ್ಯಾಮರಾಮನ್ ಎಲ್ಲರಿಗೂ ಆಶ್ಚರ್ಯ. ಕಲಾವಿದ ಡೈಲಾಗ್ ತಪ್ಪಿಲ್ಲ, ಯಾವುದೇ ಸೌಂಡ್ ಡಿಸ್ಟರ್ಬನ್ಸ್ ಬಂದಿಲ್ಲ, ಆದರೂ ಸೌಂಡ್ ರಿಕಾರ್ಡಿಸ್ಟ್ ಯಾಕೆ ಕಟ್ ಹೇಳಿದ್ದಾನೆ ಅಂತ. ನಿರ್ದೇಶಕ ಸಿಟ್ಟು ಹಾಗೂ ಅಸಮಧಾನದಿಂದಲೇ “ಏನಾಯ್ತೋ?” ಅಂತ ಕೇಳಿದ್ದಾನೆ. ಆತ ಮಂಡ್ಯದ ಕಡೆಯ ಸೌಂಡ್ ರಿಕಾರ್ಡಿಸ್ಟ್. ತಕ್ಷಣ ಹೇಳಿದ್ದಾನೆ, “ನೋಡಿ ಸಾ…. ಈ ವಯ್ಯ (ಆಕ್ಟರ್) ‘ಮರ್ಯಾದೆ’, ‘ಮರ್ಯಾದೆ’ ಅಂತ ಉಚ್ಚಾರಣೆ ಮಾಡ್ತವ್ನೆ. ಅದು ‘ಮರ್ವಾದೆ’ ಅಲ್ವಾ ಸಾ? ಅದಕ್ಕೆ ಕಟ್ ಅಂದೆ ಸಾ….”ಅಂತ.

ನಿರ್ದೇಶಕನ ತಲೆ ಕೆಟ್ಟು ಹೋಗಿ ಬ್ರೇಕ್ ಕೂಗಿ ಎದ್ದು ಹೋದರೆ, ಸೆಟ್ಟನಲ್ಲಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ.

 

ಉರ್ದುವಿನಲ್ಲಿ ಚೋಮನ ದುಡಿ

ಡಾ. ಶಿವರಾಮ ಕಾರಂತಚೋಮನ ದುಡಿಯನ್ನು ನನ್ನ ಉರ್ದು ಉಸ್ತಾದ್ ಜನಾಬ್ ಮಾಹೇರ್ ಮನ್ಸೂರ್ ಅವರು 1982 ನೇ ಇಸವಿಯಲ್ಲಿ ಉರ್ದುವಿಗೆ ತಂದಿದ್ದಾರೆ. ಅದರ ಮುಖಪುಟ ಇಲ್ಲಿದೆ. ಉರ್ದುವಿನಲ್ಲಿ ಚೋಮಾ ಕಾ ಢೋಲ್ ಎಂದು ಹೆಸರಿಟ್ಟಿದ್ದಾರೆ. ಈ ಕವರ್ ಪೇಜ್ ನಿಮಗಾಗಿ.

ಚೋಮಾ ಕಾ ಢೋಲ್

‘ಮದ್ಯಪಾನ ಸೇವಿಸಿ’ ಈ ಬೋರ್ಡ್ ಬರೆಯಲಾಗಿದೆಯೆ?

ಬೆಂಗಳೂರಿನ ಶಂಕರಮಠ ರಸ್ತೆಯ ಸಿಗ್ನಲ್ ಸಮೀಪ ಕಂಡದ್ದು…

© SUGHOSH S. NIGALE

ಎಚ್ ನರಸಿಂಹಯ್ಯ ಹಾಗೂ ಹಾರಾಟದ ಹೋರಿ

ಕೃಪೆ - ಇಂಟರ್ನೆಟ್

ಪ್ರೊ. ಕೆ. ವಿ. ಘನಶ್ಯಾಮ, ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿದ್ದವರು. ಎಚ್. ಎನ್. ರ ಗರಡಿಯಲ್ಲಿ ಬೆಳೆದವರು. ಘನಶ್ಯಾಮ ಅವರ ಅನುಭವ ಕಥನದ ಹೆಸರು ‘ನಾ ಬಂದ ಹಾದಿಯಲ್ಲಿ’. ಇದು ಒಂದು ಕಾಲೇಜು ಜೀವನ ಚರಿತ್ರೆ. ಅಭಿನವ ಮತ್ತು ಕೊಳವಳ್ಳಿ ಪ್ರಕಾಶನ ಪುಸ್ತಕ ಹೊರತಂದಿವೆ. ಅದರಲ್ಲಿನ ಆಯ್ದ ಭಾಗವೊಂದು ಇಲ್ಲಿದೆ.

ಕೃಪೆ – ಪ್ರೊ. ಕೆ. ವಿ. ಘನಶ್ಯಾಮ, ಅಭಿನವ ಮತ್ತು ಕೊಳವಳ್ಳಿ ಪ್ರಕಾಶನ.

 

ಅಯ್ಯೋ ಮರೆತೆ, ನಾವು ಊಟಕ್ಕೆ ಸೇರುತ್ತಿದ್ದ ಸಮಯದಲ್ಲಿ ನಡೆದ ಒಂದು ಪ್ರಸಂಗವನ್ನು ಹೇಳಲೇಬೇಕು. ನಾಗರಾಜ ರೆಡ್ಡಿಯವರ ಮನೆಯಲ್ಲಿ ಒಂದು ದಿನ ಊಟಕ್ಕೆ ಸೇರಿದ್ದೆವು. (ರೆಡ್ಡಿಯವರು ಅವರ ಹಳ್ಳಿಯಾದ ಸಿಂಗನಾಯಕನ ಹಳ್ಳಿಯ ಅವರ ತೋಟದ ಮನೆಯಲ್ಲೂ ಒಂದು ಬಾರಿ ಎಲ್ಲರಿಗೂ ಊಟ ಹಾಕಿಸಿದರು) ಆ ದಿನ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇತ್ತು. ಊಟವಾದ ಮೇಲೆ ದೂರದರ್ಶನದಲ್ಲಿ ಬಿತ್ತರವಾಗುತ್ತಿದ್ದ ಈ ಮ್ಯಾಚ್ ನಲ್ಲಿ ನಾವೆಲ್ಲ ತಲ್ಲೀನರಾದೆವು. ಮಾತಿಗೆ ಜನ ಸಿಗದೆ ಎಚ್. ಎನ್. ಗೆ ಬೇಸರವಾಯಿತು. “ಸರಿಯಪ್ಪ ನೀವು ಮ್ಯಾಚ್ ನೋಡಿ. ನಾನು ಹೊರಡುತ್ತೇನೆ” ಎಂದರು. ರೆಡ್ಡಿ ಮನೆಯ ಹತ್ತಿರ ಆಟೋ ಸಿಗುತ್ತಿರಲಿಲ್ಲ. ಎಚ್. ಎನ್. ರನ್ನು ಆಟೋ ಹತ್ತಿಸಿ ಬರುತ್ತೇವೆಂದು ನಾನು, ನಟರಾಜ ಅವರ ಜೊತೆ ಮಹಡಿ ಇಳಿದು ರಸ್ತೆಗೆ ಬಂದು ನಾಲ್ಕು ಹೆಜ್ಜೆ ಹಾಕಿದ್ದೇವೆ, ರಸ್ತೆಯ ಆಚೆ ಬದಿ ಒಂದ ಮಾರುತಿ ಕಾರು ನಿಂತಿತು. ಕಾರಿನಿಂದ ಇಳಿದ ಮಧ್ಯವಯಸ್ಕ ವ್ಯಕ್ತಿಯೊಂದು, ರಸ್ತೆ ದಾಟಿ ಬಂದು ಎಚ್. ಎನ್. ಗೆ ನಮಸ್ಕರಿಸಿ, “ಸಾರ್ ನಾನು ನಿಮ್ಮ ಹಳೆಯ ವಿದ್ಯಾರ್ಥಿ. ಆಸ್ಟ್ರೇಲಿಯಾಕ್ಕೆ ಹೋಗಿ 25 ವರ್ಷಗಳಾಗಿವೆ. ಅಲ್ಲಿಯೇ ವಾಸಿಸುತ್ತಿದ್ದೇನೆ. ನನಗೆ ಕನ್ನಡದ ನಂಟು ಇನ್ನೂ ಹೋಗಿಲ್ಲ. ನಿಮ್ಮ ಆತ್ಮಕಥೆ ‘ಹಾರಾಟದ ಹೋರಿ’ ಓದಿದೆ. ಬಹಳ ಚೆನ್ನಾಗಿದೆ. ಅದರ 20 ಪುಸ್ತಕಗಳನ್ನು ಗೆಳೆಯರಿಗೆ ಕೊಡಲು ತೆಗೆದುಕೊಂಡಿದ್ದೇನೆ. ಕಾರಿನಲ್ಲಿದೆ” ಎಂದು ಹೇಳಿದ ಕೂಡಲೇ ನನಗೆ ನಗು ಬಂದರೂ ತಡೆದುಕೊಂಡಿದ್ದೆ. ಎಚ್. ಎನ್. ನಗಲಿಲ್ಲ. ನಟರಾಜ್ ಮಾತ್ರ ಮಧ್ಯರಸ್ತೆಯಲ್ಲಿ ನಿಂತೇ ಕಿಸಕ್ಕನೆ ನಕ್ಕುಬಿಟ್ಟರು. ವಿದ್ಯಾರ್ಥಿಗೆ ಅವಮಾನವಾದಂತಾಯಿತು. ತಕ್ಷಣವೇ ಅವರಿಗೆ ತಾವು ಮಾಡಿದ ಅಚಾತುರ್ಯದ ಅರಿವಾಯಿತು. ಸಾರಿ ಸರ್ ಎಂದರು. ಎಚ್. ಎನ್. ಆತ್ಮಕಥೆಯ ಹೆಸರು ‘ಹೋರಾಟದ ಹಾದಿ’. ಎಚ್. ಎನ್. ರನ್ನು ನೋಡಿದ ಆನಂದದಲ್ಲಿ ಮೈಮರೆತ ಅವರ ಬಾಯಿಂದ ಬಂದದ್ದು ‘ಹಾರಾಟದ ಹೋರಿ’ ಅಷ್ಟೆ.

 

ಕಾಪಿ ರೈಟ್, ಕಾಪಿ ರೈಟ್….ರೈಟ್..ರೈಟ್…ರೈಟ್

ಕಾಫಿ ಸೇವಿಸಿ ಕಾಪಿ ರೈಟ್ ಅನ್ನಿ...
ಕಾಪಿ ರೈಟ್ ಆದ್ರೆ, ಟೀ ರಾಂಗಾ?

ನಾನು ಹಾಗೂ ಎನ್ ಆರ್ ನಾರಾಯಣಮೂರ್ತಿ

ಎನ್ ಆರ್ ನಾರಾಯಣಮೂರ್ತಿಯವರನ್ನು ಸಂದರ್ಶಿಸಿದ ಬಳಿಕ ಅವರೊಂದಿಗೆ ಫೋಟೋ.

© RESERVED

ಎನ್ ಆರ್ ನಾರಾಯಣಮೂರ್ತಿ ಸಂದರ್ಶನ

ವನವಾಸ ಮುಗಿದಿದೆ. ಬ್ಲಾಗ್ ಅಡ್ ಡೇಟ್ ನಿಲ್ಲಿಸಿದ್ದಕ್ಕೆ ನಾನು ಕ್ಷಮೆ ಕೇಳಿದ್ದೂ ಆಗಿದೆ, ತಾವು ಕ್ಷಮಿಸಿದ್ದೂ ಆಗಿದೆ. ಈಗೇನಿದ್ದರೂ ಮತ್ತೆ ರಮ್ಯ ಚೈತ್ರ ಕಾಲ…

ಐತಿಹಾಸಿಕ ಕಾರ್ಯಕ್ರಮವೊಂದರಲ್ಲಿ ತೊಡಗಿಕೊಂಡಿದ್ದರಿಂದ ಬ್ಲಾಗಿಗಾಗಿ ಸಮಯ ಸಿಗಲಿಲ್ಲ. ಆ ಐತಿಹಾಸಿಕ ಕಾರ್ಯಕ್ರಮವೇ ಬೆಳವಾಗಿಯ ವಿಶ್ವ ಕನ್ನಡ ಸಮ್ಮೇಳನ. ಮೊದಲ ದಿನ ಸಾಹಿತಿ ಡಾ. ಯೂ. ಆರ್. ಅನಂತಮೂರ್ತಿಯವರು ಬಿಡುಗಡೆಗೊಳಿಸಿದ ‘ಪುನರಾವಲೋಕನ’ ಸಂದರ್ಭ ಗ್ರಂಥದ ತಯಾರಿಯಲ್ಲಿ ತೊಡಗಿಕೊಂಡಿದ್ದೆ. ಈ ಸಂದರ್ಭ ಗ್ರಂಥಕ್ಕೆ ಪ್ರೋ. ಹಂಪನಾ ಸಂಪಾದಕರು. ಜಿ. ಎನ್. ಮೋಹನ್ ಸಹ- ಸಂಪಾದಕರು. ನಾನು ಈ ಗ್ರಂಥದ ರಿಸೋರ್ಸ್ ಟೀಮ್ ನಲ್ಲಿದ್ದೆ. ಕೇವಲ 20 ದಿನಗಳ ಅವಧಿಯಲ್ಲಿ 400 ಪುಟಗಳ ಸಂದರ್ಭ ಗ್ರಂಥ ತಯಾರಾಗಿ, ಇದೀಗ ಕನ್ನಡಿಗರ ಕೈಯಲ್ಲಿದೆ. ಈ ಪುಸ್ತಕದ ತಯಾರಿ ಹೇಗೆಲ್ಲ ನಡೆಯಿತು, ಕೆಲ ಹೆಸರುವಾಸಿ (ಹೆಸರಷ್ಟೇ ವಾಸಿ) ಎಂದೆನಿಸಿರುವ ಸಾಹಿತಿಗಳೊಡನೆ ಒಡನಾಡುವಾಗ ಆದ ಪ್ರಸಂಗಗಳೇನು ಎಂಬುದನ್ನೆಲ್ಲ ಅಚಾನೂಕವಾಗಿ ಬ್ಲಾಗಿನಲ್ಲಿ ದಾಖಲಿಸುತ್ತೇನೆ.

ಪ್ರಸ್ತುತ, ಈ ಗ್ರಂಥಕ್ಕಾಗಿ ನಾನು ಇನ್ಫೋಸಿಸ್ ನ ಎನ್. ಆರ್. ನಾರಾಯಣಮೂರ್ತಿಯವರನ್ನು ಸಂದರ್ಶಿಸಿದ್ದೇನೆ. ಆ ಸಂದರ್ಶನವನ್ನು ನೀವು ಅವಧಿಯಲ್ಲಿ ಓದಬಹುದು. ಇದೇ ಸಂದರ್ಶನ ಕನ್ನಡಪ್ರಭ ಪತ್ರಿಕೆಯಲ್ಲಿ ಮಾರ್ಚ್ 11 ರಂದು ಪ್ರಕಟವಾಗಿದೆ. ಅದರ ಸ್ಕ್ರೀನ್ ಶಾಟ್ ಇಲ್ಲಿದೆ. ಓದಿ, ಅಭಿಪ್ರಾಯ ತಿಳಿಸಿ.

ಸಂದರ್ಶನದಲ್ಲಿ...
..................