ಅಪ್ಪನಾಗುವುದು ಸುಲಭವಲ್ಲ…

ಮೊದಲು ಅಪ್ಪನಾಗು, ಆಮೇಲೆ ಹಿರೋ ಆಗು...

ಅಪ್ಪನಾಗುವುದು ಸುಲಭ ಎಂದು ನೀವಂದುಕೊಂಡಿದ್ದರೆ

ಖಂಡಿತ ಗಲತ್ ಫೆಮಿ ಮಾಡಿಕೊಂಡಿದ್ದೀರಿ.

ಅಂದರೆ ಅಪ್ಪನಾಗುವುದು ಸುಲಭವೇ….

ಆದರೆ ಅಪ್ಪನಾದ ಬಳಿಕ ಆ ಪದವಿಯನ್ನ ಜೀರ್ಣಿಸಿಕೊಳ್ಳುವುದಿದೆಯಲ್ಲ

ಅದು ಎಲ್ಲರಿಗೂ ಸಾಧ್ಯವಿಲ್ಲ.

ನಿಜವಾಗಲೂ ಹಿಸ್ಟೇರಿಯಾ ತಾಯಿಯಾದವಳಿಗೆ ಹಿಡಿಯಬೇಕಾದುದಲ್ಲ

ಅದು ಅಪ್ಪನಿಗೆ ಹಿಡಿಯಬೇಕಾದದ್ದು,

ನಿಜವಾದ ಅಪ್ಪನಾಗಿದ್ದರೆ ಮಾತ್ರ.

ಬರೀ ಬೀಜ ಕೊಟ್ಟು ಬಿಟ್ಟರೆ ಮುಗಿಯಲಿಲ್ಲ ಸ್ವಾಮಿ.

ಬೀಜವೇನು, ಬೇಕಾದರೆ ಮೂಟೆಗೆ ಮೂಟೆ ಸರ್ಕಾರದ ಸಬ್ಸಿಡಿ ಅಂಗಡಿಗಳಲ್ಲಿ ಸಿಗುತ್ತದೆ.

ಪೈರನ್ನು ಯಾವನು ಹೇಗೆ ಕಾಪಾಡಿಕೊಳ್ಳುತ್ತಾನೆ ಎಂಬುದು ಮುಖ್ಯ.

ದಿನವಿಡೀ ಗಾಣದೆತ್ತಿನಂತೆ ದುಡಿದು ದುಡಿದು ಹೈರಾಣಾಗಿ ಮನೆಗೆ ಬಂದಾಗ

ಪೈರನ್ನು ಎತ್ತಿಕೊಂಡು ಮುದ್ದು ಮಾಡಿ ಅದಕ್ಕೆ ಕಿಶ್ಶಿ ಕೊಟ್ಟು, ಇಶ್ಶಿ ಬಳಿಯಬೇಕು.

ಸರಿಯಾಗಿ ಊಟಕ್ಕೆ ಕುಳಿತು ಒಂದನೇ ತುತ್ತನ್ನು ಜಗಿಯುತ್ತಿರುವಾಗಲೇ

ಪೈರು ಉಚ್ಚೆ ಹೊಯ್ದುಕೊಂಡಿರುತ್ತೆ.

ಅದು ಅದರ ಚಡ್ಡಿಗೆ ತಾಗಿ ನಿಮ್ಮ ಥ್ರೀಫೋರ್ತ್ ಅನ್ನು ಠಂಡಾ ಠಂಡಾ ಕೂಲ್ ಕೂಲ್

ಮಾಡುವವರೆಗೂ ಗೊತ್ತಾಗುವುದಿಲ್ಲ. ಆಗ ರಪ್ ಅಂತ ಊಟಬಿಟ್ಟು ಏಳಬೇಕು.

ನಿಮ್ಮ ಕಣ್ಣೆದುರಿಗೇ ನಿಮ್ಮ 20 ಸಾವಿರ ರೂಪಾಯಿ ಮೊಬೈಲ್ ರಪ್ ಅಂತ ಗೋಡೆಗೆ ಅಪ್ಪಳಿಸಿ ಎರಡು ಹೋಳಾಗಿ

ಬೀಳುವುದನ್ನು ನೋಡುವ ತಾಳ್ಮೆ ಇರಬೇಕು.

ಆಗಷ್ಟೇ ಫಿನೈಲ್ ಹಾಕಿ ಒರೆಸಿದ ನೆಲದ ಮೇಲೆ ರವೆಯ ಡಬ್ಬ ತಲೆಕೆಳಗಾಗಿ ಬೀಳುವುದನ್ನು ನೋಡಿಯೂ

ನೋಡದಂತಿರಬೇಕು.

ಲ್ಯಾಪ್ ಟಾಪ್ ನ ಕೀಗಳು ಕುಯ್ಯು ಮರ್ರೋ ಎಂದು ಪೈರಿನ ಕೈಗೆ ಸಿಕ್ಕಿ ಹೊಯ್ಕೊಳ್ಳುತ್ತಿದ್ದರೂ

ನೀವು ಮಾತ್ರ ಸುದರ್ಶನ ಕ್ರಿಯೆಯನ್ನು ಮಾಡುತ್ತಿರಬೇಕು.

ಇಷ್ಟೆಲ್ಲ ಆದರೂ ಪೈರಿಗೆ ಕೊಂಚ ಜ್ವರ ಬಂದರೆ ಅದರ ಝಳ ನಿಮಗೆ ತಾಗುವಂತಿರಬೇಕು

ಪೈರು ಧಡ್ ಅಂತ ಬಿದ್ದು ತುಟಿ ಒಡೆದುಕೊಂಡರೆ ನೀವು ಭೋರಂತ ಅಳಬೇಕು

ದೇಹ ಆಫೀಸಿನಲ್ಲಿದ್ದರೂ ಮನಸ್ಸು ಪೈರಿನ ಸುತ್ತಲೇ ಇರಬೇಕು.

ಅದಕ್ಕೇ ಹೇಳಿದ್ದು,

ಅಪ್ಪನಾಗುವುದು ಸುಲಭ ಅಲ್ಲ ಕಣ್ರೀ….

ಹೀಗಾಗಿಯೇ ಹೇಳುತ್ತೇನೆ, ಅಪ್ಪನಾಗುವ ಅರ್ಹತೆಯಿದ್ದರೆ ಮಾತ್ರ ಅಪ್ಪನಾಗಿ

ಏಕೆಂದೆರೆ ಅಪ್ಪನಾಗುವುದು ಸುಲಭವಲ್ಲ.