ವೃಕ್ಷೋ ರಕ್ಷತಿ ರಕ್ಷಿತಃ

ನಾವಿರುವಾ ತಾಣವೇ ಗಂಧದ ಗುಡಿ, ಚಂದದ ಗುಡಿ, ಶ್ರೀಗಂಧದ ಗುಡಿ????

“ನೋಡು ಇವರ ಮಗ ಚೆನ್ನಾಗಿಯೇ ಇದ್ದ. ಡಿಗ್ರಿ ಪಾಸ್ ಆಗುವವರೆಗೂ ಡಿಸ್ಟಿಂಕ್ಷನ್ ಲ್ಲಿಯೇ ಪಾಸ್ ಆಗಿ ಬೆಂಗಳೂರಿನಲ್ಲಿ ಒಳ್ಳೆಯ ನೌಕರಿ ಕೂಡ ಸೇರಿದ. ಆದರೆ ಸೇರಿ ಅದೇನಾಯಿತೋ ಗೊತ್ತಿಲ್ಲ, ಬೆಂಗಳೂರು ಸೇರಿದ ಆರೇ ತಿಂಗಳಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದ. ಸಿಗರೇಟು, ಎಣ್ಣೆ ಸಾಮಾನ್ಯವಾಯಿತು. ಕೆಲ ದಿನಗಳ ನಂತರ ತಲೆ ಕೆಟ್ಟುಬಿಟ್ಟಿತು. ಈಗ ಆತನ ತಂದೆ-ಮತ್ತೆ ಅವನನ್ನು ಮರಳಿ ಊರಿಗೆ ಕರೆತಂದಿದ್ದಾರೆ. ಈಗ ಡ್ರಗ್ಸ್, ಸಿಗರೇಟು, ಎಣ್ಣೆ ಚಟ ಬಿಟ್ಟಿದ್ದರೂ, ತಲೆ ಮಾತ್ರ ಸರಿಹೋಗಿಲ್ಲ”.

“ಆಕಿನ್ನ ರಾಜಸ್ಥಾನಕ್ಕ ಕೊಟ್ಟಿದ್ರಲೇ. ನೋಡಾಕ್ ಹೆಂಗ್ ಇದ್ಲ್ ಅಂದಿ? ಅಗದೀ ಐಶ್ವರ್ಯ ರೈನ….ಹುಡುಗನ ಕಡ್ಯಾವ್ರು ಭಾಳ ಪೈಶೆ ಇರಾವ್ರ ಪಾ. ಎಲ್ಲಾ ಛಲೋತಂಗೆ ಮದ್ವಿ ಮಾಡಿ ಕೊಟ್ಟಿದ್ರ. ಆದ್ರ ಅದೇನಾತ ಯಾಂಬಲ್ಲ, ಅದರವ್ನ್ ಮದಿವಿಯಾಗಿ ಬರೋಬರ್ 3 ತಿಂಗಳ್ಳಕ್ಕ ಗಂಡ ಆಕ್ಸಿಡೆಂಟ್ ನ್ಯಾಗ ಗೊಟಕ್ ಅಂದ. ಛಲೋ ಗಟ್ಟಿಮುಟ್ ಇದ್ದೋ ಆಂವ. ಅಂವ ಸತ್ತ ಮ್ಯಾಗ್ ಇಕಿ ಮ್ಯಾಲ ಅತ್ತಿ-ಮಾಂವ ಜುಲಮಿ ಮಾಡಕ್ ಹತ್ತಿದ್ರು. ಇಕಿ ಆರೆ ಎಷ್ಟ ದಿವಸ ಅಂತ ನೋಡ್ತಾಳ, ಈಗ ವಾಪಸ್ ತವರ್ ಮನಿಗೆ ಬಂದ ಅದಾಳ”.

ಯಾವುದೇ ಸರಿಯಾದ, ತಾರ್ಕಿಕವಾದ ವಿವರಣೆ ಇಲ್ಲದಿದ್ದರೂ ಕೆಲವರ ಬಾಳಿನಲ್ಲಿ ಈ ರೀತಿಯ ಘಟನೆಗಳು ಆಗಿಬಿಡುತ್ತವೆ. ಇವಕ್ಕೆ ಪೂರ್ವ ಜನ್ಮದ ಸಂಚಿತ ಕರ್ಮ ಕಾರಣವೋ ಅಥವಾ ವಿಧಿಯ ಆಟವೋ ಗೊತ್ತಿಲ್ಲ. ಆದರೆ ಈ ರೀತಿಯ ಘಟನೆಗಳನ್ನು – ಅಂದರೆ ವಯಸ್ಸಿಗೆ ಬಂದ ಮಕ್ಕಳು ಬದುಕಿನಲ್ಲಿ ಇನ್ನೇನು ಸೆಟ್ಲ್ ಆದರು ಅನ್ನುವಾಗ ಆಗುವ ದುರ್ಘಟನೆಗಳು – ಹಿರಿಯರೊಬ್ಬರ ಬಳಿ ಚರ್ಚಿಸುತ್ತಿದ್ದೆ. ಆಗ ಆ ಹಿರಿಯರು, “ಸಾಮಾನ್ಯವಾಗಿ ವೃಕ್ಷನಾಶ ಮಾಡಿದರೆ ವಂಶೋದ್ಧಾರಕರು ಈ ರೀತಿಯ ನೋವುಗಳನ್ನು ಅನುಭವಿಸಬೇಕಾಗುತ್ತದೆ. ಬೇಕಾದರೆ ಗಮನಿಸು, ಫಾರೆಸ್ಟ್ ಡಿಪಾರ್ಟಮೆಂಟಿನಲ್ಲಿರುವ ಹಲವು ಹಿರಿಯ ಅಧಿಕಾರಿಗಳ ಮಕ್ಕಳಿಗೆ ಹೀಗಾಗಿರುತ್ತದೆ. ಬೇರೆಯವರಿಗೆ ಹೀಗಾಗುವುದಿಲ್ಲ ಎಂದಲ್ಲ. ಆದರೆ ವೃಕ್ಷನಾಶಕ್ಕೆ ಕಾರಣರಾದವರ ಮಕ್ಕಳಿಗೆ ಕೆಟ್ಟ ಸ್ಥಿತಿ ಬಂದೇ ಬರುತ್ತದೆ. ಲಂಚ ತಿಂದು, ಭ್ರಷ್ಟಾಚಾರ ಮಾಡಿ ಭೂಮಿಯ ಹಸಿರ ಸೆರಗಿಗೆ ಕೈ ಹಾಕಿ, ಕಳ್ಳ ನಾಟ ಸಾಗಣೆದಾರರಿಗೆ ನೆರವಾಗುವುದು ತುಂಬಾ ಸುಲಭ. ಆದರೆ ಹಾಗೆ ಹೊಲಸು ತಿಂದು ದುಡಿದ ದುಡ್ಡನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಿಲ್ಲ. ಭಾರತೀಯ ಪರಂಪರೆಯಲ್ಲಿ ವೃಕ್ಷಸಂಹಾರ ಅಕ್ಷಮ್ಯ (unpardonable) ಕರ್ಮ. ಅದನ್ನು ಮನ್ನಿಸಲಾಗುವುದಿಲ್ಲ. ಅದಕ್ಕೆ ಶಿಕ್ಷೆಯೇ ಗತಿ” ಎಂದರು.

ಅವರು ಹೇಳಿದ್ದನ್ನು ಪೂರ್ತಿಯಾಗಿ ನಂಬಲು ನಾನು ಸರ್ವೆ ನಡೆಸಿಲ್ಲ. ನಂಬದೇ ಇರಲೂ ಕಾರಣವಿಲ್ಲ. ಒಂದಂತೂ ಸತ್ಯ. ಕಾಡುಗಳನ್ನು ಉಳಿಸದಿದ್ದರೆ, ಏಪ್ರಿಲ್ –ಮೇ ತಿಂಗಳಿನ ಬಿಸಿಲಲ್ಲಿ ದಣಿವಾರಿಸಿಕೊಳ್ಳಲು ರಸ್ತೆ ಬದಿಯಲ್ಲಿ ಒಂದೂ ಮರವನ್ನು ಉಳಿಸದೇ ಹೋದರೆ, ಕಾರ್ಪೋರೇಷನ್ ನೀರಿನ ಬದಲಾಗಿ 20 ಲೀಟರ್ ಕ್ಯಾನ್ ನೀರನ್ನೇ ಕುಡಿಯುವುದು ಅನಿವಾರ್ಯವನ್ನಾಗಿಸಿದರೆ ನಮ್ಮ ಮಕ್ಕಳು ಮಾತ್ರ ನಮ್ಮನ್ನು ಎಂದಿಗೂ ಕ್ಷಮಿಸಲಾರರು.