ಬಾಡೂಟದಲ್ಲಿ ಬರೀ ಗ್ರೇವಿ ತಿಂದದ್ದು

ಹಳ್ಳಿಯವರಿಗೆ ಊಟ, ಸುಘೋಷ್ ಗೆ ಕಾಟ (ಚಿತ್ರಕೃಪೆ - ಇಂಟರ್ನೆಟ್)

ಕಳೆದ ಲೋಕಸಭಾ ಚುನಾವಣೆಯಲ್ಲಿ ನಡೆದ ಘಟನೆ. ಚುನಾವಣೆಗೂ ಮೊದಲು ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ದಿನಚರಿಯನ್ನು ಜನರಿಗೆ ತೋರಿಸಲೆಂದು ‘ಎ ಡೇ ವಿತ್ ದಿ ಲೀಡರ್’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದೆವು. ರಾತ್ರಿ 10.30 ರ ‘ಕನ್ನಡನಾಡಿ’ ಮುಗಿದ ಬಳಿಕ ಇದು ಪ್ರಸಾರವಾಗುತ್ತಿತ್ತು. ನನಗೆ ಕಾಂಗ್ರೆಸ್ ನ ಸಿದ್ದರಾಮಯ್ಯನವರ ಜೊತೆ ಇಡೀ ದಿನ ಇದ್ದು ಅವರ ದಿನಚರಿಯನ್ನು ಶೂಟ್ ಮಾಡಬೇಕಾಗಿತ್ತು. ಸಾಕಷ್ಟು ಮೊದಲೇ ಅವರಿಗೆ ವಿಷಯ ತಿಳಿಸಿ ಇಂತಿಂಥ ದಿನ ಬರುತ್ತೇವೆ ಎಂದು ಹೇಳಿದ್ದೆ. ನಿಗದಿತ ದಿನದಂದು ನಾನು ಹಾಗೂ ಕ್ಯಾಮರಾಮನ್ ಮೋಹನ್ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಸಿದ್ದು ಮನೆಯಲ್ಲಿ ಹಾಜರಿದ್ದೆವು. ಅವರು ವ್ಯಾಯಾಮ ಮಾಡುವುದು, ಕಾರ್ಯಕರ್ತರೊಂದಿಗೆ ಮಾತನಾಡುವುದು, ತಿಂಡಿ ತಿನ್ನುವುದು, ಪುಸ್ತಕ ಓದುವುದು ಹೀಗೆ ಎಲ್ಲವನ್ನೂ ಶೂಟ್ ಮಾಡಿಕೊಳ್ಳುತ್ತಿದ್ದೆ. ಜೊತೆಜೊತೆಗೆ ಅವರ ಡ್ರೈವರ್, ಅಡುಗೆಯವರು, ಸೆಕ್ಯುರಿಟಿಯವರೊಂದಿಗೂ ಸಿದ್ದು ಅಭ್ಯಾಸಗಳು, ಚಟುವಟಿಕೆಗಳ ಬಗ್ಗೆ ಮಾತನಾಡುತ್ತಿದ್ದೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಮೈಸೂರಿಗೆ ಹೊರಟರು. ಸರಿ, ನಾನು ಹಾಗೂ ಕ್ಯಾಮರಾಮನ್ ಮೋಹನ್ ಕೂಡ  ಅವರೊಡನೆ ಅವರ ಎಸ್ ಯು ವಿ ಏರಿದೆವು. ದಾರಿ ಮಧ್ಯದಲ್ಲಿಯೇ ಸಿದ್ದು ಸಂದರ್ಶನ ಮುಗಿಸಿಕೊಂಡೆ. ಮೈಸೂರು ತಲುಪಿ ಕೆಲ ಹಳ್ಳಿಗಳತ್ತ ಸಿದ್ದು ಕಾರ್ ದೌಡಾಯಿಸಿತು.

ಮಧ್ಯಾಹ್ನದ ಊಟ ಯಾವುದೊ ಒಂದು ಹಳ್ಳಿಯಲ್ಲಿ ಏರ್ಪಾಡಾಗಿತ್ತು. ಇಡೀ ಹಳ್ಳಿಯಲ್ಲಿ ಅಂದು ಸಂಭ್ರಮದ ವಾತಾವರಣ. ದೊಡ್ಡದಾಗಿ ಶಾಮಿಯಾನ ಹಾಕಿದ್ದರು. ಸಿದ್ದು ಕಾರ್ ಇಳಿಯುತ್ತಿದ್ದಂತೆ ಜನರ ಜೈಘೋಷ, ಮಹಿಳೆಯರಿಂದ ಆರತಿ ಬೆಳಗಿ ಸ್ವಾಗತ ಇತ್ಯಾದಿ. ಜನರೊಡನೆ ಸುಮಾರು ಹೊತ್ತು ಕಳೆದ ಬಳಿಕ ಸಿದ್ದು ಊಟಕ್ಕೆ ನಡೆದರು. ನಾನೂ ಊಟಕ್ಕೆ ಕುಳಿತುಕೊಳ್ಳುವಂತೆ ಕಾರ್ಯಕರ್ತರು ಆಹ್ವಾನಿಸಿದರು. ಆದರೆ ನನಗೆ ಶಾಟ್ ತೆಗುದುಕೊಳ್ಳಬೇಕಾದ್ದರಿಂದ ಎರಡನೇ ಪಂಕ್ತಿಗೆ ಕೂರೋಣ ಎಂದುಕೊಂಡೆ. ಅಷ್ಟರಲ್ಲಿ ಕ್ಯಾಮರಾನ್ ಮೋಹನ್, “ಸುಘೋಷ್ ನೀವು ಊಟ ಮುಗಿಸಿಬಿಡಿ. ನಿಮ್ಮದಾದ ಮೇಲೆ ಕ್ಯಾಮರಾ ಹಿಡಿದುಕೊಳ್ಳಿ. ಅಷ್ಟರಲ್ಲಿ ನಾನೂ ಊಟ ಮುಗಿಸುತ್ತೇನೆ” ಎಂದರು. ಸರಿ ಎಂದುಕೊಂಡು ನಾನು ಊಟಕ್ಕೆ ಕುಳಿತೆ.

ನಾನು ಹಾಗೂ ಮೋಹನ್, ಸಿದ್ದು ಮನೆಗೆ ಬೆಳಿಗ್ಗೆ ತಲುಪಿದ್ದು 6 ಗಂಟೆಗೆ. ಮಧ್ಯಾಹ ಊಟಕ್ಕೆ ಕುಳಿತಾಗ 2 ಗಂಟೆ. ಅಷ್ಟರವರೆಗೆ ನನ್ನ ಹಾಗೂ ಮೋಹನ್ ಹಣೆಯಲ್ಲಿ ಬರೆದದ್ದು ಕೇವಲ ಬೈಟೂ ಟೀ ಅಷ್ಟೇ. ಹೀಗಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು.

ಸರಿ, ಎಂದುಕೊಂಡು ಊಟಕ್ಕೆ ಕುಳಿತುಕೊಂಡೆ. ಆಗ ಆಯಿತು ನೋಡಿ ಫಜೀತಿ. ಸಿದ್ದು ಬರುತ್ತಾರೆ ಎಂಬ ಸಂಭ್ರಮದಲ್ಲಿ ಹಳ್ಳಿಯವರು ಭರ್ಜರಿ ಬಾಡೂಟ ಮಾಡಿಸಿದ್ದರು. ತಟ್ಟೆಯಲ್ಲಿ ಅನ್ನ, ಉಪ್ಪು, ಬಿಟ್ಟರೆ ಮಿಕ್ಕಿದ್ದೆಲ್ಲವೂ ನಾನ್ ವೆಜ್. ನಾನೋ ಸಸ್ಯಾಹಾರಿ. ಆದರೆ ನನ್ನ ಸಸ್ಯಾಹಾರಕ್ಕೆ ಗಂಟುಬೀಳಲು ಹೊಟ್ಟೆ ಸುತಾರಾಂ ಒಪ್ಪುತ್ತಿಲ್ಲ. “ಕಲ್ಲನ್ನಾದರೂ ಒಳಗಿಳಿಸು, ಆದರೆ ಏನನ್ನಾದರೂ ಕಳಿಸು” ಎಂದು ಹೊಟ್ಟೆ ಕೂಗಿಕೊಳ್ಳುತ್ತಲೇ ಇತ್ತು. ಮನಸ್ಸು ಮಾತ್ರ “ಯಾವುದೇ ಕಾರಣಕ್ಕೂ ನಾನ್ ವೆಜ್ ಮುಟ್ಟಬೇಡ” ಎಂದು ಎಚ್ಚರಿಸುತ್ತಿತ್ತು. ಕೆಲ ಕ್ಷಣ ಗೊಂದಲದಲ್ಲಿ ಕಳೆದೆ. ನನ್ನನ್ನು ನೋಡಿ ಕಾರ್ಯಕರ್ತರು “ಏನ್ ಸಾರ್ ಊಟ ಸೇರ್ತಾ ಇಲ್ವಾ?” ಅಂದ್ರು.

“ಇಲ್ಲ ನಾನು ವೆಜಿಟೇರಿಯನ್” ಅಂದೆ.

“ಓಹ್ ಹಾಗಾ ಸಾರ್, ಇರಿ ಸಾರ್ ಹಾಗಿದ್ರೆ ಬರೀ ಗ್ರೇವಿ ಹಾಕ್ತೀವಿ. ಪೀಸ್ ಹಾಕಲ್ಲ. ಊಟ ಮಾಡಿ ಸಾರ್” ಎಂದವರೇ ಬಕೇಟಿನಿಂದ ಗ್ರೇವಿ ಸುರಿಸುರಿದು ಅನ್ನದ ಮೇಲೆ ಹಾಕಿದರು. ಈಗ ನಾನು ನನ್ನ ಮೆದುಳಿಗೆ ಹೆಚ್ಚು ಯೋಚಿಸಲು ಅವಕಾಶ ನೀಡದೆ ಉಸಿರು ಬಿಗಿಹಿಡಿದು ಕೆಲ ತುತ್ತು ಇಳಿಸಿದೆ. ಸ್ವಲ್ಪ ಸಮಾಧಾನವಾಯಿತು. ಆದರೆ ಪೂರ್ತಿ ಊಟ ಮಾಡಲು ಆಗಲೇ ಇಲ್ಲ. ಕ್ಯಾಮರಾಮನ್ ಮೋಹನ್ ಗೆ ಮಾತ್ರ ಅಂದು ಔತಣ. ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕ್ಯಾಮರಾಮನ್ ಮೊದಲು, ಆಮೇಲೆ ರಿಪೋರ್ಟರ್ ಎಂದು ನೆನಪಿಸಿಕೊಂಡು ಮತ್ತೆ ಸಿದ್ದು ದಿನಚರಿಯನ್ನು ಶೂಟ್ ಮಾಡಲು ಆರಂಭಿಸಿದೆ.