‘ಪ್ರೋಫೆಷನ್ ವೋರಾಟಗಾರ’ರಿಗೆ ಬುದ್ಧಿ ಕಲಿಸಿದ್ದು

ಯಾರದ್ದಂತೆ ಸರ್ಕಾರ, ಅವರಪ್ಪಂದಂತೆ ಸರ್ಕಾರ...

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆಗಳಿಗೇನೂ ಕೊರತೆಯಿಲ್ಲ. ಪ್ರತಿಭಟನೆಗಳು ಪ್ರಜಾಪ್ರಭುತ್ವ ಜೀವಂತವಿರುವುದರ ಸಂಕೇತ. 80, 90 ರ ದಶಕಗಳಂತೂ ಪೂರ್ತಿ ಪ್ರತಿಭಟನೆ, ಹೋರಾಟ, ಚಳವಳಿಮಯ. ಆದರೆ ಇತ್ತೀಚೆಗೆ ಹೆಚ್ಚಿನ ಪ್ರತಿಭಟನೆಗಳು ಅರ್ಥ ಕಳೆದುಕೊಳ್ಳುತ್ತಿವೆ. ಪ್ರತಿಭಟನೆಗಳ ಸಂಖ್ಯೆ ಹೆಚ್ಚಾಗಿದ್ದರೂ ಅವುಗಳ ಗುಣಮಟ್ಟದಲ್ಲಿ ತೀರ ಕುಸಿತವುಂಟಾಗಿದೆ.

ಬೆಂಗಳೂರಿನಂತ  ನಗರಗಳಲ್ಲಂತೂ ವಾರಕ್ಕೆ ಹತ್ತರಂತೆ ಪ್ರತಿಭಟನೆಗಳು ನಡೆಯುತ್ತವೆ. ಕೆಲವು ಪ್ರತಿಭಟನೆಗಳು ಸಾಚಾ ಇದ್ದರೂ, ಇನ್ನೂ ಹಲವಾರು ಪ್ರತಿಭಟನೆಗಳು ಕೇವಲ ಮೀಡಿಯಾಗೋಸ್ಕರ ಮಾಡುವಂಥವುಗಳು. ಕೋಣದ ಮೇಲೆ ಕುಳಿತುಕೊಳ್ಳುವುದು, ರಾಜಭವನದ ಗೋಡೆಗೆ ಉಚ್ಚೆ ಹೊಯ್ಯುವ ಕೆಲ ಟಿಪಿಕಲ್ ಪ್ರತಿಭಟನೆಗಳೂ ಇವೆ. ಮೀಡಿಯಾಗಳಿಗೋಸ್ಕರ ಮಾಡುವ ಪ್ರತಿಭಟನೆಗಳ ಸ್ವರೂಪ ತುಂಬಾ ಚೆನ್ನಾಗಿರುತ್ತದೆ. ಕನಿಷ್ಠ ನಾಲ್ಕೈದು ವಿಡಿಯೋ ಕ್ಯಾಮೆರಾ, ಹತ್ತಾರು ಫೋಟೋಗ್ರಾಫರುಗಳು ಬಂದ ಬಳಿಕವೇ ಘೋಷಣೆಗಳು ಮೊಳಗುತ್ತವೆ. ತಮಟೆ ಲಬೋ ಲಬೋ ಬಾಯಿಬಡಿದುಕೊಳ್ಳುತ್ತದೆ. ಬೇರೆ ಬೇರೆ ಚ್ಯಾನಲ್ ಗಳಿಗೆ ಬೇರೆಬೇರೆಯವರು ಸ(ಸ್ವ)ರತಿಯಲ್ಲಿ ಮಾತಾಡುತ್ತಾರೆ. ಸ್ಟಿಲ್ ಫೋಟೋಗ್ರಾಫರುಗಳಿಗೆ ಬೇಕಾದ ಹಾಗೆ ಪೋಸು ಕೊಡುತ್ತಾರೆ. ಮೀಡಿಯಾದವರು ತಮ್ಮ ಕೆಲಸ ಮುಗಿಸಿಕೊಂಡು ಅತ್ತ ಹೋಗುತ್ತಿದ್ದಂತೆ ಕ್ಷಣಾರ್ಧದಲ್ಲಿ ಪ್ರತಿಭಟನೆ ಅಂತ್ಯಗೊಳ್ಳುತ್ತದೆ. ಎಲ್ಲರೂ ಮಂಗಮಾಯ. ನಾಳೆಯ ಪೇಪರ್ ನಲ್ಲಿ ಮಾತ್ರ ದೊಡ್ಡದಾಗಿ ಪ್ರಶಸ್ತಿ ಬರುತ್ತದೆ. ಸಾಮಾನ್ಯವಾಗಿ ‘ಪ್ರೊಫೆಷನ್ ವೋರಾಟಗಾರ’ರಿಂದ ಈ ರೀತಿಯ ಪ್ರತಿಭಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ.

ಹಿಂದೆ ಈ ಟಿವಿಯ ಶಿವಮೊಗ್ಗದ ಜಿಲ್ಲಾ ವರದಿಗಾರರಾಗಿ ಸಂತೋಷ್ ನಡುಬೆಟ್ಟ ಎಂಬುವವರಿದ್ದರು. ನನ್ನ ಆತ್ಮೀಯ ಸ್ನೇಹಿತರು. ಅವರು ಈ ರೀತಿಯ ಪ್ರೊಫೆಷನ್ ವೋರಾಟಗಾರರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದರು. ಇಂತಿಂಥ ಜಾಗದಲ್ಲಿ ಇಷ್ಟಿಷ್ಟು ಹೊತ್ತಿಗೆ ಪ್ರತಿಭಟನೆಯಿದೆ. ದಯವಿಟ್ಟು ಬಂದು ಕವರ್ ಮಾಡಿ ಎಂದು ಬೇಡಿಕೆ ಬಂದ ತಕ್ಷಣ ಅವರು, ನಿಗದಿಪಡಿಸಿದ ಸಮಯಕ್ಕಿಂತ ಕನಿಷ್ಠ ಎರಡರಿಂದ ಮೂರು ಗಂಟೆ ತಡವಾಗಿ ಪ್ರತಿಭಟನಾ ಸ್ಥಳವನ್ನು ತಲುಪುತ್ತಿದ್ದರು. ಏನ್ ಸಾರ್ ಲೇಟು ಎಂದು ವೋರಾಟಗಾರರು ಕೇಳಿದಾಗಲೆಲ್ಲ, ನೀವು ನಮಗೋಸ್ಕರ ಪ್ರತಿಭಟನೆ ಮಾಡುತ್ತೀರೋ ಇಲ್ಲ ಜನರಿಗೆ, ಸರ್ಕಾರಕ್ಕೆ ನಿಮ್ಮ ಬೇಡಿಕೆಗಳು ತಿಳಿಯಲಿ ಅಂತ ಪ್ರತಿಭಟನೆ ಮಾಡುತ್ತೀರೋ? ಅರ್ಧಗಂಟೆ ಪ್ರತಿಭಟನೆ ಮಾಡಿದರೆ ಯಾರಿಗೂ ನಿಮ್ಮ ಹೋರಾಟ ಅರ್ಥವಾಗುವುದಿಲ್ಲ. ಹೀಗಾಗಿ ನಮಗಾಗಿ ಪ್ರತಿಭಟನೆ ಮಾಡಬೇಡಿ. ಜನರಿಗೋಸ್ಕರ ಮಾಡಿ. ಕನಿಷ್ಠ ಎರಡು-ಮೂರು ಗಂಟೆ ಮಾಡಿದರೆ ಜನರಿಗೆ ಗೊತ್ತಾಗುತ್ತದೆ. ನಿಮ್ಮ ಪ್ರತಿಭಟನೆಗೂ ಅರ್ಥ ಬರುತ್ತದೆ. ನಾನು ಆಗ ಬಂದು ಕವರ್ ಮಾಡುತ್ತೇನೆ ಅನ್ನುತ್ತಿದ್ದರು. ಈ ರೀತಿ ಮಾಡಿ ಮಾಡಿ ಹಲವಾರು ವೋರಾಟಗಾರರಿಗೆ ಬುದ್ಧಿ ಕಲಿಸಿದ್ದರು. ಹೆಂಗಿದೆ ಐಡಿಯಾ?