ರಾಘವೇಂದ್ರ ಜೋಶಿಯವರ ತ್ರೈಮಾಸಿಕ ಲೆಕ್ಕ

ರಾಘವೇಂದ್ರ ಜೋಶಿಯವರು ಕವಿತೆ – ಕನ್ನಡಿಯಲ್ಲಿ ಓದಿದ ತ್ರೈಮಾಸಿಕ ಲೆಕ್ಕ.

...........


ತ್ರೈಮಾಶಿಕ ಲೆಕ್ಕ 

ಎಷ್ಟೊಂದು ಕೋಳಿಗಳು

ಕೂಗುತ್ತವೆ

ಒಂದೇ ಒಂದು ಸೂರ್ಯನ

ಆಗಮನ ಸಾರಲು

ಎಷ್ಟೊಂದು ಮರಗಳು

ಉರುಳುತ್ತವೆ

ಒಂದೇ ಒಂದು

ಕವನ ಬರೆಯಲು

ಎಷ್ಟೊಂದು ಕಣ್ಣುಗಳು

ಹರಿದಾಡುತ್ತವೆ

ಒಂದೇ ಒಂದು

ಮುಗ್ಧೆ ತತ್ತರಿಸಲು

ಎಷ್ಟೊಂದು ಕೈಗಳು

ಬೇಡುತ್ತವೆ

ಒಂದೇ ಒಂದು

ಪರೀಕ್ಷೆ ಪಾಸಾಗಲು

ಎಷ್ಟೊಂದು ಕಾಲುಗಳು

ನೆಲಕ್ಕೊರಗುತ್ತವೆ

ಒಂದೇ ಒಂದು

ಗಮ್ಯ ತಲುಪಲು

ಎಷ್ಟೊಂದು ನಾಲಿಗೆಗಳು

ಜೊಲ್ಲಿಸುತ್ತವೆ

ಒಂದೇ ಒಂದು

ಕ್ಲಿಪ್ಪಿಂಗ್ ನೋಡಲು

ಎಷ್ಟೊಂದು ಸೀಶೆಗಳು

ಬರಿದಾಗುತ್ತವೆ

ಒಂದೇ ಒಂದು

ನೋವ ನೀಗಿಸಲು

ಎಷ್ಟೊಂದು ವೀರ್ಯಾಣು

ಕದನಕ್ಕಿಳಿಯುತ್ತವೆ

ಒಂದೇ ಒಂದು

ಕಂದನ ಸೃಷ್ಟಿಸಲು

ಎಷ್ಟೊಂದು?

ಎಷ್ಟೊಂದು?

ಚಿಕ್ಕಂದಿನಲ್ಲಿ ಅಕ್ಕ

ಹೇಳುತ್ತಿದ್ದ

ತ್ರೈಮಾಶಿಕ ಲೆಕ್ಕದ ನೆನಪು:

ಇಷ್ಟಕ್ಕೆ ಅಷ್ಟಾದರೆ

ಅಷ್ಟಕ್ಕೆ ಎಷ್ಟು??