ತ್ರೈಮಾಸಿಕ ಲೆಕ್ಕಕ್ಕೆ ನನ್ನ ವಿಮರ್ಶೆ

ತ್ರೈಮಾಸಿಕ ಲೆಕ್ಕಕ್ಕೆ ನನ್ನ ವಿಮರ್ಶೆ. (ಕಾರ್ಯಕ್ರಮದಲ್ಲಿ ಓದಿದ ಯಥಾಪ್ರತಿ)

...........

ರಾಘವೇಂದ್ರ ಜೋಶಿಯವರ ಹೀಗೇನೆ ಹಾಗೂ ತ್ರೈಮಾಸಿಕ ಲೆಕ್ಕ ಈ ಎರಡು ಕವನಗಳ ಬಗ್ಗೆ ಮಾತಾನಾಡುವುದಕ್ಕೆ ಈ ಸಂದರ್ಭದಲ್ಲಿ ತುಂಬಾ ಸಂತೋಷವಾಗುತ್ತಿದೆ.

ಕವನಗಳ ಬಗ್ಗೆ ಮಾತನಾಡುವುದರ ಮೊದಲು ಒಂದೆರಡು ಮಾತಗಳನ್ನು ಆಡಲು ಇಷ್ಟಪಡುತ್ತೇನೆ.

ಮೊನ್ನೆ ಒಬ್ಬ ಪ್ರಸಿದ್ಧ ಚಿತ್ರಕಾರರೊಡನೆ ಚಿತ್ರಕಲೆಯ ಬಗ್ಗೆ ಹೀಗೆ ಮಾತನಾಡುತ್ತಿದ್ದೆ. ಮಾತನಾಡುತ್ತ ನಾನೆಂದೆ, ಸರ್, ನನಗೆ ಈ ಮಾಡರ್ನ್ ಆರ್ಟ್ ಗಿಂತ ರಿಯಲಿಸ್ಟಿಕ್ ಆರ್ಟ್ ತುಂಬಾ ಇಷ್ಟ. ಮಾಡರ್ನ್ ಆರ್ಟ್ ಒಂದು ರೀತಿಯಲ್ಲಿ ಎಸ್ಕೇಪಿಸಮ್, ಪಲಾಯನವಾದ ಅನ್ನಿಸುತ್ತದೆ. ಏನೋ ಗೀಚಿ, ಯಾವುದೋ ಒಂದಿಷ್ಟು ಬಣ್ಣ ಬಳಿದು ಅದನ್ನು ಮಾಡರ್ನ್ ಆರ್ಟ್ ಎಂದರಾಯಿತು. ಆದರೆ ರಿಯಲಿಸ್ಟಿಕ್ ಹಾಗಲ್ಲ. ಇದ್ದುದನ್ನು ಇದ್ದಹಾಗೆಯೇ ಬರೆಯಬೇಕು. ಹಾಗೆ ಬರೆಯಲು ನಿಜವಾದ ಕೌಶಲ್ಯ ಬೇಕು. ಮಾಡರ್ನ್ ಆರ್ಟ್ ವೇಸ್ಟ್ ಅಲ್ವಾ ಸಾರ್ ಅಂದೆ.

ಅದಕ್ಕೆ ಆ ಚಿತ್ರಕಾರರೆಂದರು ಇಲ್ಲ ಹಾಗಲ್ಲ ಅದು. ಮಾಡರ್ನ್ ಅರ್ಟ್ ಗೂ ಅದರದೇ ಆದ ಭಾಷೆ, ತೂಕ, ಬಣ್ಣಗಳ ಮಿಶ್ರಣದ ಪರಿಮಾಣ ಎಲ್ಲ ಇದೆ. ನೀವು ಹೇಳುವ ಹಾಗೆ ಯಾವ್ಯಾವುದನ್ನೋ ಮಾಡರ್ನ್ ಆರ್ಟ್ ಅನ್ನಲು ಬರುವುದಿಲ್ಲ ಎಂದರು.

ನಾನು ಅವರಿಗೊಂದು ಉದಾಹರಣೆ ಕೊಟ್ಟೆ. ಸರ್, ನಾನೂ ಕೂಡ ಅಲ್ಪಸ್ವಲ್ಪ ಪೇಂಟಿಂಗ್ ಮಾಡುತ್ತೇನೆ. ಕೆಲ ದಿನಗಳ ಹಿಂದೆ ಮಾಡರ್ನ್ ಆರ್ಟ್ ನ ಹುಚ್ಚಿಗೆ ಬಿದ್ದು ಒಂದು ಡ್ರಾಯಿಂಗ್ ಶೀಟ್ ಮೇಲೆ ಒಂದು ಮಾಡರ್ನ್ ಆರ್ಟ್ ಬರೆದು ಫ್ರೇಮಿಂಗ್ ಮಾಡಲೆಂದು ಫ್ರೇಮ್ ಮಾಡುವವನ ಬಳಿ ಕೊಟ್ಟಿದ್ದೆ. ನನ್ನ ಪ್ರಕಾರ ಆ ಪೇಂಟಿಂಗ್ ನ್ನು ಲಂಬವಾಗಿ ಅಂದರೆ ವರ್ಟಿಕಲ್ ಆಗಿ ಗೋಡೆಗೆ ತೂಗುಹಾಕಬೇಕಿತ್ತು. ನಾನು ಅದನ್ನು ಹಾಗೆಯೇ ಚಿತ್ರಿಸಿದ್ದೆ. ಆದರೆ ಫ್ರೇಮ್ ಹಾಕುವವನು ಅದಕ್ಕೆ ಫ್ರೇಮ್ ಏನೋ ಹಾಕಿದ್ದ. ಆದರೆ ತೂಗು ಹಾಕಲು ಅನುಕೂಲವಾಗುವಂತೆ ಫ್ರೇಮ್ ಹಿಂಬದಿಗೆ ಮೊಳೆ ಸೇರಿಸಲು ಜಾಗ ಮಾಡುತ್ತಾರಲ್ಲ ಅದನ್ನು ಅಡ್ಡಡ್ಡವಾಗಿ ಹಾರಿಜಾಂಟಲ್ ಆಗಿ ಮಾಡಿಬಿಟ್ಟಿದ್ದ. ಸಾಮಾನ್ಯರಿಗೆ ಅರ್ಥವಾಗದ ಈ ಮಾಡರ್ನ್ ಆರ್ಟ್ ನ ಉದ್ದೇಶವಾದರೂ ಏನು ಸಾರ್? ಅನೇಕ ಬಾರಿ ಈ ಮಾಡರ್ನ್ ಆರ್ಟ್ ನನಗೇ ಅರ್ಥವಾಗುವುದಿಲ್ಲ ಸರ್ ಎಂದೆ.

ಅಲ್ಲ ಕಣಯ್ಯ, ಮಾಡರ್ನ್ ಆರ್ಟ್ ಅರ್ಥ ಆಗುತ್ತೆ. ಆದರೆ ಆ ಮಾಡರ್ನ್ ಆರ್ಟ್ ಕಳಿಸುವ ಸಿಗ್ನಲ್ ಗಳನ್ನು ಕ್ಯಾಚ್ ಮಾಡಲು ತಲೆ ಮೇಲೆ ಅಂಟೇನಾ ಇರ್ಬೇಕು ಕಣಯ್ಯ ಅಂದ್ರು.

ಬಹುಶಃ ಅವರ ಈ ಮಾತು ಕವಿತೆಗೆ ಕೂಡ ಅನ್ವಯಿಸುತ್ತದೆ. ಹಲವು ಕವಿತೆಗಳು ಕೆಲವರಿಗೆ ಅರ್ಥವಾಗುವುದಿಲ್ಲ. ಕೆಲ ಕವಿತೆಗಳು ಕೆಲವರಿಗೆ ಅರ್ಥವಾಗುವುದಿಲ್ಲ. ಇನ್ನು ಎಲ್ಲ ಕವಿತೆಗಳೂ ಎಲ್ಲರಿಗೂ ಅರ್ಥವಾಗುದಿಲ್ಲ. ಇನ್ನು ಕಥೆ, ಕಾದಂಬರಿಯ ಬೆನ್ನು ಬಿದ್ದವರಿಗಂತೂ ಕವಿತೆ ಎಂದರೆ ಅಷ್ಟಕಷ್ಟೇ. ಆದರೆ ನನ್ನ ಪ್ರಕಾರ ಕವಿತೆಯೊಂದು ಅರ್ಥವಾಗಲು ಅಥವಾ ಅದರಲ್ಲಿರುವ ಭಾವವನ್ನು ಅನುಭವಿಸಲು ಆ ಕವಿತೆ ಕಳಿಸುವ ಸಿಗ್ನಲ್ ಗಳನ್ನು ಕ್ಯಾಚ್ ಮಾಡುವ ಅಂಟೆನಾ ನಮ್ಮ ತಲೆಯ ಮೇಲಿರಬೇಕು. ನಾನು ಅತ್ಯಂತ ಸಂತೋಷದಿಂದ ಹಾಗೂ ವಿನಮ್ರತೆಯಿಂದ ಹೇಳುತ್ತಿದ್ದೇನೆ ಅಂತಹ ಖಂಡಿತವಾಗಿಯೂ ಅಂಟನಾ ನನ್ನ ತಲೆಯ ಮೇಲೆ ಇಲ್ಲ.  ನಿಮಗೆ ನನ್ನ ತಲೆಯ ಮೇಲೆ ಯಾವುದೇ ಅಂಟೇನಾ ಕಾಣಿಸದಿರುವುದೇ ಇದಕ್ಕೆ ಸಾಕ್ಷಿ.

ಹಾಗೆಂದು ಹೇಳಿ ನನಗೆ ಎಲ್ಲ ಕವಿತೆಗಳು ಅರ್ಥವಾಗುವುದಿಲ್ಲವೆಂದಲ್ಲ. ನಾನೂ ಕೂಡ ಕೆಲ ಕವನಗಳನ್ನು ಬರೆದಿರುವುದರಿಂದ ಮತ್ತು ಬರೆಯುತ್ತಿರುವುದರಿಂದ, ಇತರ ಕವನ ಬರೆಯುತ್ತಿರುವವರ ಮೇಲೂ ನನಗೆ ಸಹಾನುಭೂತಿಯಿದೆ. ಹಾಗಾಗಿ ಇಂದು ಶ್ರೀ ರಾಘವೇಂದ್ರ ಜೋಶಿಯವರ ಕವನಗಳ ಬಗ್ಗೆ ಮಾತನಾಡಲು ಸಿದ್ಧನಾಗಿದ್ದೇನೆ. ಇಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ಅದೆಂದರೆ ನಾನು ಅವರ ಕವನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಅಷ್ಟೇ. ವಿಮರ್ಶೆ ಮಾಡುತ್ತಿಲ್ಲ. ವಿಮರ್ಶೆ ಎಂಬ ಪದದ ಭಾರ ನನ್ನ ಮೇಲೆ ಬೀಳದಿರಲಿ ಎಂಬುದಕ್ಕೆ ಈ ಎಚ್ಚರ.

ರಾಘವೇಂದ್ರರ ಮೊದಲ ಕವನ ತ್ರೈಮಾಸಿಕ ಲೆಕ್ಕ.

ಒಂಚೂರು ಶೀರ್ಷಿಕೆಯ ಬಗ್ಗೆ.

ತ್ರೈಮಾಸಿಕ ಅಂದ ತಕ್ಷಣ ಕೆಲವರು ಈ ಶಬ್ದವನ್ನು ಪಾಕ್ಷಿಕ, ಮಾಸಿಕ, ತ್ರೈಮಾಸಿಕ, ಎಂದು ಪತ್ರಿಕೆಗಳಿಗೆ ಸಂಬಂಧಸಿದಂತೆ ಸ್ವೀಕರಿಸಿದರೆ, ಇಂದಿನ ಕಾಲದ ಹಲವರು ವಿವಿಧ ಐಟಿ ಕಂಪನಿಗಳು ಘೋಷಿಸುವ ತ್ರೈಮಾಸಿಕ ಫಲಿತಾಂಶ, ಕ್ವಾರ್ಟರ್ಲೀ ರಿಸಲ್ಟ್ಸ್ ಅರ್ಥದಲ್ಲಿ ತೆಗೆದುಕೊಳ್ಳುತ್ತಾರೆ. ಇನ್ನು ಕ್ವಾರ್ಟರ್ಲೀ ರಿಸಲ್ಟ್ಸ್ ಶಬ್ದದಲ್ಲಿ ಕ್ವಾರ್ಟರ್ ಶಬ್ದ ಇರುವುದರಿಂದ ಮತ್ತೊಂದು ಕಾರಣಕ್ಕೆ ಈ ಶಬ್ದ ಅನೇಕರಿಗೆ ಪ್ರಿಯವೆನಿಸುತ್ತದೆ. ರಾಘವೇಂದ್ರರಿಗೆ ಹೇಗೆಂದು ನನಗೆ ಗೊತ್ತಿಲ್ಲ….ಆದರೆ ಕವನದಲ್ಲಿ ನೋವು ಮರೆಯಲು ಅವರು ಸೀಶೆಗಳನ್ನು ಖಾಲಿ ಮಾಡಿದ್ದಾರೆ ಎಂಬುದು ಮಾತ್ರ ಸತ್ಯ.

ಇನ್ನು ಲೆಕ್ಕ ಅಂದ ತಕ್ಷಣ ಹಲವರಿಗೆ ಬೆವರೊಡೆಯುತ್ತದೆ. ಯಾವುದೋ ಜನ್ಮದ ಕುಕರ್ಮದ ಫಲವೇ ಈ ಜನ್ಮದಲ್ಲಿ ಲೆಕ್ಕ ಬಿಡಿಸುವ ಮೂಲಕ ತೀರಿಸಬೇಕಾಗಿದೆ ಎಂದು ನಾವು ಹುಡುಗರು ಹತ್ತನೇ ತರಗತಿಯಲ್ಲಿ ಬಲವಾಗಿ ನಂಬಿದ್ದೆವು. ಬೀಜಗಣಿತ ನಿಜವಾಗಿಯೂ ಬೀಜಗಣಿತವಾಗಿತ್ತು, ಅಲ್ಜಿಬ್ರಾದಲ್ಲಿ ಕೊನೆಯ ಅಕ್ಷರ ಮಾತ್ರ ಇಷ್ಟವಾಗುತ್ತಿತ್ತು, ಪೈಥಾಗೋರಸ್ಸನ ಪ್ರಮೇಯಗಳು ನಮ್ಮ ಪ್ರಮೇಯಗಳನ್ನು ಹಾಳುಮಾಡುತ್ತಿದ್ದರೆ, ಅಂಕಗಣಿತ ಅಂಕುಶ ಗಣಿತ ಆಗುತ್ತಿತ್ತು. ಮಾರಲ್ ಪಿರಿಯೇಡ್ ಕ್ಲಾಸಿನಲ್ಲಿ ರಾಮನ ಕಡೆಯಿಂದ ನಾವು ಒಳ್ಳೆಯ ಕೆಲಸ ಮಾಡಿಸುತ್ತಿದ್ದೆವು. ರಾಮ ಯಾವತ್ತಿಗೂ ಸುಳ್ಳು ಹೇಳುತ್ತಿರಲಿಲ್ಲ, ರಸ್ತೆಯ ಮೇಲೆ ಬಿದ್ದಿದ್ದ ಮುಳ್ಳನ್ನು ತೆಗೆದು ಪಕ್ಕಕ್ಕೆ ಹಾಕುತ್ತಿದ್ದ, ರಸ್ತೆ ದಾಟಬೇಕಾಗಿದ್ದ ಮುದುಕಿಯನ್ನು ರಸ್ತೆ ದಾಟಿಸುತ್ತಿದ್ದ. ಆದರೆ ಅದೇ ರಾಮ ಗಣಿತದ ಕ್ಲಾಸಿನಲ್ಲಿ ಮಾತ್ರ ವಿಚಿತ್ರವಾಗಿ ವರ್ತಿಸುತ್ತಿದ್ದ. ರಾಮನ ತಂದೆ ಆತನಿಗೆ ಒಂದು ಕೆಜಿ ತುಪ್ಪವನ್ನು ಪೇಟೆಗೆ ಹೋಗಿ ಮಾರಿಕೊಂಡು ಬಾ ಅಂದರೆ ರಾಮ ರಸ್ತೆ ಮಧ್ಯದಲ್ಲಿ ಇನ್ನಿಲ್ಲದ ಲಫಡಾ ಮಾಡುತ್ತಿದ್ದ. ಒಂದು ಕೆಜಿಯಲ್ಲಿ ಸ್ವಲ್ಪ ತುಪ್ಪವನ್ನು ಕದ್ದು ಸ್ವಲ್ಪ ತಾನು ತಿನ್ನುವುದು, ಸ್ವಲ್ಪ ಗೆಳೆಯರಿಗೆ ಕೊಡುವುದು, ಅದಕ್ಕೆ ಸ್ವಲ್ಪ ಡಾಲ್ಡಾ ಸೇರಿಸುವುದು ಹೀಗೆ ಮಾಡಿ ಒಂದು ಕೆಜಿ ತುಪ್ಪದ ಲೆಕ್ಕವನ್ನು ತಪ್ಪಿಸುತ್ತಿದ್ದ. ಅದನ್ನು ಮಾರಿಯಾದ ಮೇಲೆ ಬಂದ ಹಣದಲ್ಲಿ ಕೂಡ ಕೈಯಾಡಿಸುತ್ತಿದ್ದ. ಕೊನೆಗೆ ರಾಮ ತುಪ್ಪ ತಿಂದು, ಅದನ್ನು ಮಾರಿ ಬಂದ ಹಣದಲ್ಲಿ ತಾನು ಸ್ವಲ್ಪ ಇಟ್ಟುಕೊಂಡು ನಮಗೆ ಮಾತ್ರ ತುಪ್ಪದ ಲೆಕ್ಕದ ಗಣಿತದ ಸಮಸ್ಯೆಗಳನ್ನು ಬಿಡಿಸಲು ಹೇಳುತ್ತಿದ್ದ. ಮಾರಲ್ ಪಿರಿಯೇಡ್ ನ ರಾಮನಿಗೂ, ಗಣಿತದ ಪಿರಿಯೇಡ್ ನ ರಾಮನಿಗೂ ಯಾವುದೇ ಸಂಬಂಧ ಇರುತ್ತಿರಲಿಲ್ಲ. ಬಹುಶಃ ಹೀಗಾಗಿಯೇ ನಮಗೆ ಲೆಕ್ಕ ಎನ್ನುವುದು ಪೂರ್ವ ಜನ್ಮದ ಕುಕರ್ಮ ತೊಳೆಯುವ ಸಾಧನವಾಗಿ ಮಾರ್ಪಟ್ಟಿತ್ತು.

ಆದರೆ ಆದರೆ ರಾಘವೇಂದ್ರ ಜೋಶಿಯವರು ತ್ರೈಮಾಸಿಕ ಲೆಕ್ಕವಂತೂ ರಾಮನ ಲೆಕ್ಕದಹಾಗೆ ಇಲ್ಲವೇ ಇಲ್ಲ. ಕೃಷ್ಣನ ಲೆಕ್ಕವಂತೂ ಅಲ್ಲವೇ ಅಲ್ಲ. ಅದು ಕೇವಲ ರಾಘವೇಂದ್ರರ ಲೆಕ್ಕ.

ಬದುಕಿನ ಹಲವಾರು ಸೂಕ್ಷ್ಮ ಲೆಕ್ಕಗಳನ್ನು ಅದೆಷ್ಟು ಸಹಜವಾಗಿ ಅವರು ಶಬ್ದಗಳಲ್ಲಿ ಇಳಿಸಿದ್ದಾರೆಂದರೆ ಲೆಕ್ಕ ಬರದವರಿಗೂ, ಲೆಕ್ಕವನ್ನು ದ್ವೇಷಿಸುವವರಿಗೂ ತ್ರೈಮಾಸಿಕ ಲೆಕ್ಕ ತುಂಬ ಹಿಡಿಸುತ್ತದೆ. ಬದುಕಿನ ಲೆಕ್ಕಾಚಾರಗಳನ್ನು ಕವಿ ಇಲ್ಲಿ ನವಿರಾಗಿ ಚಿತ್ರಿಸಿದ್ದಾರೆ. ಜಾನಪದ, ವಿಜ್ಞಾನ, ಆಧ್ಯಾತ್ಮ, ಪರಿಸರ, ಸಾಧನೆ, ಸೆಕ್ಸ್ ಹೀಗೆ ಹಲವು ವಿಷಯಗಳಲ್ಲಿ ಬರುವ ಲೆಕ್ಕಗಳು ಇಲ್ಲಿವೆ. ಇವುಗಳಲ್ಲಿ ಬರುವ ಸಂಗತಿಗಳೆಲ್ಲವೂ ನಮಗೆ ಗೊತ್ತಿರುವಂತಹದ್ದೇ, ಅಷ್ಟೇ ಅಲ್ಲ ನಾವೂ ಕೂಡ ಈ ಸಂಗತಿಗಳನ್ನು ಒಂದಿಲ್ಲ ಒಂದು ಸಲ ಅನುಭವಿಸಿದಂತಹುಗಳೇ. ಯಾವುದೇ ಏಲಿಯನ್ ವಿಚಾರಗಳು ಇಲ್ಲಿಲ್ಲ. ಸಾಮಾನ್ಯ ಅನ್ನಿಸುವಂತಹದ ವಿಚಾರಗಳನ್ನು ಅಸಮಾನ್ಯವಾಗಿ ಪೋಣಿಸಿರುವುದು ಇದರ ಅಗ್ಗಳಿಕೆ. ಶಬ್ದಗಳೊಡನೆ ಆಟವಾಡುತ್ತ ಉದಾ – ಇಷ್ಟಕ್ಕೆ ಅಷ್ಟಾದರೆ, ಅಷ್ಟಕ್ಕೆ ಎಷ್ಟು ಎನ್ನುತ್ತ ಪ್ರಾಸವನ್ನು ಕುಣಿಸುತ್ತ ಸಿಂಪಲ್ ಲೆಕ್ಕವನ್ನು ಹೇಳುತ್ತಾರೆ.

ಹಾಗೇ ನೋಡಿದರೆ ಬದುಕೇ ಒಂದು ಲೆಕ್ಕಾಚಾರ. ಬದುಕು ಎನ್ನುವುದು ನಿಂತಿರುವುದು ನ್ಯೂಟನ್ನಿನ ಮೂರನೇ ನಿಯಮದ ಮೇಲೆ ಫಾರ್ ಎವ್ರಿ ಆಕ್ಷನ್ ದೇರ್ ಈಸ್ ಆನ್ ಈಕ್ವಲ್ ಅಂಡ್ ಅಪೋಸಿಟ್ ರಿಯಾಕ್ಷನ್. ಭೌತಿಕ ವಸ್ತುಗಳಿಗಿಂತ ಮಾನವ ಸಂಬಂಧಗಳಿಗೆ ಈ ಲೆಕ್ಕ ಹೆಚ್ಚು ಅನ್ವಯವಾಗುತ್ತದೆ ಎಂಬುದು ಸತ್ಯಸ್ಯ ಸತ್ಯ. ಅತ್ತ್ಯುತ್ತಮ ಲೆಕ್ಕಾಚಾರ ಮಾಡುವವನೇ ಮುಂದೆ ಬರುತ್ತಾನೆ, ಯಶಸ್ಸು ಗಳಿಸುತ್ತಾನೆ ಎಂಬುದು ವಾಸ್ತವವಾದಿಗಳ ಅಂಬೋಣ. ಗಾಂಧೀಜಿ ಬನಿಯಾ ಸಮುದಾಯಕ್ಕೆ ಸೇರಿದವರು. ವ್ಯಾಪಾರ ಮಾಡುವುದು ಬನಿಯಾ ಸಮುದಾಯದ ರಕ್ತದಲ್ಲಿಯೇ ಇದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಮಾಡಿದ್ದು ಪ್ಯೂರ್ ವ್ಯಾಪಾರ. ವ್ಯಾಪಾರ ಮಾಡಿಯೇ ಎಂ. ಕೆ. ಗಾಂಧಿ, ಮಹಾತ್ಮಾ ಗಾಂಧಿ ಎನಿಸಿದ್ದು ಎಂಬ ವಿಚಿತ್ರ ವಾದವೂ ಇದೆ. ಏನೇ ಆಗಲಿ ಲೆಕ್ಕವಂತೂ ಬದುಕಿನ ಅವಿಭಾಜ್ಯ ಅಂಗ. ಬದುಕು ಹಾಗೂ ಲೆಕ್ಕವನ್ನು ಬೇರ್ಪಡಿಸಲು ಸಾಧ್ಯವಾಗುವುದೇ ಇಲ್ಲ. ಕವನದಲ್ಲಿ ಬರುವಂತೆ ನಾವು ಹುಟ್ಟಿದ್ದೇ ಲೆಕ್ಕಾಚಾರದ ಮೂಲಕ. ನಾವು ಹುಟ್ಟುವ ಮೊದಲೇ ಶುರುವಾಗೋದು ಫ್ಯಾಮಿಲಿ ಪ್ಲಾನಿಂಗ್ ಎಂಬ ಲೆಕ್ಕಾಚಾರ. ಕವಿತೆಯ ಸಾಲು

ಎಷ್ಟೊಂದು ವೀರ್ಯಾಣು

ಕದನಕ್ಕಿಳಿಯುತ್ತವೆ

ಒಂದೇ ಒಂದು

ಕಂದನ ಸೃಷ್ಟಿಸಲು

ಎಂಬ ಲೆಕ್ಕಾಚಾರ ಮುಗಿದ ಬಳಿಕವಷ್ಟೇ ನಮ್ಮ ಜನನ. Whenever you feel depressed, oppressed and helpless just remember that your were once upon a time strongest among millions of sperms ಎಂಬ ಸ್ಪೂರ್ತಿದಾಯಕ ಮಾತಿದೆ. ಇದನ್ನೇ ಈ ಕವಿತೆಯ ಸಾಲುಗಳು ಮತ್ತೊಮ್ಮೆ ನೆನಪಿಸುತ್ತವೆ. ಕದನ ಹಾಗೂ ಕಂದನ ಶಬ್ದದಲ್ಲಿ ಇರುವ ವ್ಯತ್ಯಾಸ ಒಂದು ಅನುಸ್ವಾರ ಮಾತ್ರ. ಅದೂ ಅಲ್ಲದೆ ಕದನ ಯಾರು ಮಾಡುತ್ತಾರೆ ಎಂಬುದೂ ಮುಖ್ಯ. ಕದನ ಯಾಕಾಗಿ ಎಂಬುದೂ ಮುಖ್ಯ. ಉದಾ – ರಾಜಕಾರಣಿಗಳು ಕದನ ಮಾಡಿದಾಗ ಅವಾಚ್ಯ ಶಬ್ದಗಳು, ಅಸಂವಿಧಾನಿಕ ಪದಗಳು ಹುಟ್ಟುತ್ತವೆ.  ಆದರೆ ಅದೇ ವೀರ್ಯಾಗಳು ಕದನ ಮಾಡಿದಾಗ ಕಂದ ಹುಟ್ಟುತ್ತದೆ. ಹಾಗಾದರೆ ರಾಜಕಾರಣಿಗಳು ಮತ್ತು ವೀರ್ಯಾಣುಗಳಲ್ಲಿ ಯಾರು ಶ್ರೇಷ್ಠರು ಎಂಬುದನ್ನು ನೀವೇ ನಿರ್ಧರಿಸಬಹುದು. ಕವಿ ವೀರ್ಯಾಣುಗಳಲ್ಲಿ ಕದನ ಮಾಡಿಸಿದ್ದಕ್ಕೆ ಧನ್ಯವಾದ.

ಕವನದ ಮತ್ತೊಂದು ಭಾಗ ಹೀಗಿದೆ.

ಎಷ್ಟೊಂದು ಮರಗಳು

ಉರುಳುತ್ತವೆ

ಒಂದೇ ಒಂದು

ಕವನ ಬರೆಯಲು

ಚಲನ ಚಿತ್ರಗಳಲ್ಲಿ ಈ ದೃಶ್ಯ ಸಾಮಾನ್ಯ. ಕ್ಲೋಸ್ ಅಪ್ ಶಾಟ್ ಇರುತ್ತದೆ. ಆ ಶಾಟ್ ನಲ್ಲಿ ಮುದ್ದೆ ಮಾಡಿ ಬಿಸಾಕಿರುವ ಒಂದು ಕಾಗದವನ್ನು ತೋರಿಸುತ್ತಾರೆ. ಕ್ಯಾಮರಾ ವೈಡ್ ಆಗುತ್ತ ಬಂದ ಹಾಗೆ ಕೋಣೆ ತುಂಬ ಕೇವಲ ಮುದ್ದೆ ಮಾಡಿ ಬಿಸಾಕಿದ ಕಾಗದಗಳೇ ಕಾಣಿಸುತ್ತೆ. ಹಾಗೆ ಕ್ಯಾಮೆರಾ ಟಿಲ್ಟ್ ಅಪ್ ಆಗುತ್ತದೆ. ಅಲ್ಲಿ ಪ್ರಿಯತಮನೋ, ಪ್ರಿಯತಮೆಯೋ ಪ್ರೇಮ ಪತ್ರವನ್ನು ಬರೆಯುತ್ತ ಕುಳಿತಿರುತ್ತದೆ. ಅಲ್ಲಿಗೆ ಎಲ್ಲರಿಗೂ ಆ ಅಮರ ಪ್ರೇಮಿಯ ಮಾನಸಿಕ ಸ್ಥಿತಿ ಅರ್ಥವಾಗುತ್ತದೆ. ಆದರೆ ಆ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಸಲು ಮಾತ್ರ ಅಚ್ಚ ಬಿಳಿಯ, ಎಕ್ಸಿಕ್ಯುಟಿವ್ ಬಾಂಡ್ ನ, ಎ 4 ಸೈಜ್ ನ ನೂರಾರು ಹಾಳೆಗಳು ಹಾಗೇ ವೇಸ್ಟ್ ಆಗಿರುತ್ತವೆ.

ಇದೇ ರೀತಿ ಹಲವು ಬಾರಿ ಕವನಕ್ಕೂ ಆಗತ್ತುದೆ. ನಾವು ಪರಿಸರದ ಬಗ್ಗೆ ಕವನ ಬರೆಯಬೇಕೆಂದರೂ ಪರಿಸರ ಹಾಳುಮಾಡಲೇಕಾದುದು ಅನಿವಾರ್ಯ. ಹೀಗಾಗಿ ಇನ್ನು ಮುಂದೆ ಕವಿಗಳು ಕವನಗಳನ್ನು ಬರೆಯುವಾಗ ಹೆಚ್ಚು ಚಿತ್ತು ಖಾಟು ಮಾಡದೆ ಆದಷ್ಟು ಕಡಿಮೆ ಮರಗಳನ್ನು ಕಡಿಯಲು ಕೋರುತ್ತವೆ ಈ ಸಾಲುಗಳು. ಕವಿಗಳು ಮರ ಕಡಿಯುವುದರ ಬಗ್ಗೆ ಎಚ್ಚೆತ್ತಿದ್ದಾರೆಯೋ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಖ್ಯಾತ ವಿಜ್ಞಾನ ಬರಹಗಾರ ಹಾಗೂ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರಂತೂ ನಮ್ಮೆಲ್ಲರಿಗಿಂತ ಮೊದಲೇ ಎಚ್ಚೆತ್ತುಕೊಂಡು ಸ್ಪೂರ್ತಿವನ ನಿರ್ಮಿಸಿದ್ದಾರೆ. ಕವಿಗಳು ಇತ್ತ ಒಮ್ಮೆ ಗಮನ ಹರಿಸುವುದು ಒಳಿತು.

ತ್ರೈಮಾಸಿಕ ಲೆಕ್ಕದ ಪ್ರತಿಯೊಂದು ಭಾಗವೂ ಸುಭಾನಲ್ಲಾಹ್ ಅನ್ನುವಂತಿದೆ. ಅದರ ಮತ್ತೊಂದು ಚರಣ ಹೀಗಿದೆ.

ಎಷ್ಟೊಂದು ಕಣ್ಣುಗಳು

ಹರಿದಾಡುತ್ತವೆ

ಒಂದೇ ಒಂದು

ಮುಗ್ಧೆ ತತ್ತರಿಸಲು

ಈ ರೀತಿಯ ಅನುಭವಕ್ಕೆ ಶೇ. 99 ರಷ್ಟು ಹೆಣ್ಣು ಮಕ್ಕಳು ಒಳಗಾಗಿದ್ದಾರೆ ಎಂದು ಅಧ್ಯಯನಗಳು ಹೇಳುತ್ತವೆ. ಬೇಡವಾದ ಒಂದು ನೋಟ, ಒಂದು ಸ್ಪರ್ಶ, ಅತೀವ ಹಿಂಸೆಯನ್ನು ತರುತ್ತದೆ. ನಾವು ಹೆಚ್ಚೆಚ್ಚು ಆಧುನಿಕರಾಗುತ್ತ ಹೋದ ಹಾಗೆ ಹೆಚ್ಚು ಸಂವೇದನಾಶೀಲವಾಗಬೇಕಿದ್ದ ನಮ್ಮ ಕಣ್ಣುಗಳು ತಮ್ಮ ವಿಷನ್ ಕಳೆದುಕೊಳ್ಳುತ್ತಿವೆ. ಕೆಟ್ಟದ್ದು ಕೇಳಬೇಡ, ಕೆಟ್ಟದ್ದನ್ನು ಮಾತಾಡಬೇಡ, ಕೆಟ್ಟದ್ದನ್ನು ನೋಡಬೇಡ ಎಂದಿದ್ದಾರೆ ಹಿರಿಯರು. ಆದರೆ ನಮ್ಮ ಕಣ್ಣು ಮಾತ್ರ ಕೆಟ್ಟದ್ದನ್ನು ಮಾತಾಡುತ್ತಿವೆ, ಕೆಟ್ಟದ್ದನ್ನು ಕೇಳುತ್ತಿವೆ ಹಾಗೂ ಕೆಟ್ಟದ್ದನ್ನೇ ನೋಡುತ್ತಿವೆ. ಬಹುಶಃ ನಮ್ಮ ಕಣ್ಣುಗಳು ಹೆಚ್ಚು ಸಂವೇದನಾಶೀಲರವಾಗಿರುತ್ತಿದ್ದರೆ ಅರುಣಾ ಶಾನಭಾಗ್ ಎಲ್ಲ ಸಾಮಾನ್ಯ ಮಹಿಳೆಯರಂತೆ ಮದುವೆಯಾಗಿ ತುಂಬು ಸಂಸಾರ ನಡೆಸುತ್ತಿದ್ದಳು. ಹಸೀನಾ ಆಸಿಡ್ ದಾಳಿಗೆ ಒಳಗಾಗದೆ ಹಸೀನ್ ಆಗಿಯೇ ಇರುತ್ತಿದ್ದಳು. ಆದರೆ ಕವಿತೆಯ ಸಾಲಿನಂತೆ ಇಂದು ಕಣ್ಣುಗಳು ಬಸ್ಸಿನಲ್ಲಿ, ಫುಟ್ ಪಾತ್ ನಲ್ಲಿ, ಮಾಲ್ ನಲ್ಲಿ, ಬೀದಿ ಬೀದಿಗಳಲ್ಲಿ ಹರಿದಾಡುತ್ತವೆ. ಮುಗ್ದೆಯರನ್ನು ಹರಿಯುತ್ತವೆ ಹಾಗೂ ಆಡುತ್ತವೆ.

ಇಲ್ಲಿ ಮತ್ತೊಂದು ವಿಚಾರವೆಂದರೆ ತತ್ತರಿಸದಿದೇ ಹೋದರೂ, ಬೇಡವಾದ ನೋಟಕ್ಕೆ ಹಾಗೂ ಸ್ಪರ್ಶಕ್ಕೆ ಅಸಹ್ಯಪಡುವ ಮುಗ್ಧೆಯ ಜೊತೆಗೆ ಅಲ್ಲೊಬ್ಬ ಇಲ್ಲೊಬ್ಬ ಮುಗ್ಧನೂ ಇದ್ದಾನೆ.

ಇದರದೇ ಮುಂದುವರೆದ ಭಾಗವೇನೋ ಎಂಬಂತೆ ಬರುವ ಮತ್ತೊಂದು ಸಾಲು.

ಎಷ್ಟೊಂದು ನಾಲಿಗೆಗಳು

ಜೊಲ್ಲಿಸುತ್ತವೆ

ಒಂದೇ ಒಂದು

ಕ್ಲಿಪ್ಪಿಂಗ್ ನೋಡಲು

ಜೊಲ್ಲಿಸುತ್ತವೆ ಎಂಬ ಪದಪ್ರಯೋಗ ವ್ಯಾಕರಣ ಶುದ್ಧವೋ ಗೊತ್ತಿಲ್ಲ. ಅದನ್ನು ಬಲ್ಲವರು ಹೇಳಬೇಕು. ಆದರೆ ಈ ಪದಮಾತ್ರ ತುಂಬ ಪರಿಣಾಮಕಾರಿಯಾಗಿ ತನಗೆ ಬೇಕಾದುದನ್ನು ಹೇಳಿದೆ. ಶ್ರೀನಿವಾಸ ವೈದ್ಯರ ಹಳ್ಳಬಂತು ಹಳ್ಳ ಓದುವಾಗ ಅದರಲ್ಲಿ ಅವರು ಸುಮಾರು 1920 ರ ಸುಮಾರಿಗೆ ಲೈಂಗಿಕ ವೈಭವೀಕರಣದ ಪುಸ್ತಕಗಳು ಇದ್ದುದನ್ನು ಬರೆದಿದ್ದಾರೆ. ಗಮನಿಸಿ ಲೈಂಗಿಕ ಪುಸ್ತಕಗಳಲ್ಲ. ಲೈಂಗಿಕ ವೈಭವೀಕರಣದ ಪುಸ್ತಕಗಳು. ಹಳ್ಳ ಬಂತು ಹಳ್ಳ ಇತಿಹಾಸದ ಪುಸ್ತಕವಲ್ಲ. ಅದೊಂದು ಕಾದಂಬರಿ. ಆದರೆ ಪೋರ್ನೋ ಆಗಿನಿಂದಲೂ ಇತ್ತು ಎಂಬುದಕ್ಕೆ ಇತರ ಆಧಾರಗಳೂ ಇವೆ. ಜಂಗಮವಾಣಿಯಲ್ಲಿ ನೀಲಿ ಹಲ್ಲುಗಳ ಆವಿಷ್ಕಾರವಾದ ಮೇಲಂತೂ….ಓಹ್ ಕ್ಷಮಿಸಿ ಮೊಬೈಲ್ ಫೋನ್ ನಲ್ಲಿ ಬ್ಲೂ ಟೂತ್ ಆವಿಷ್ಕಾರವಾದ ಮೇಲಂತೂ ಎಲ್ಲರ ಮೊಬೈಲ್ ಗಳಲ್ಲಿ ಕ್ಲಿಪ್ಪಿಂಗ್ ಗಳೋ ಕ್ಲಿಪ್ಪಂಗ್ ಗಳು, ನಾಲಿಗೆಯಲ್ಲಿ ಜೊಲ್ಲೋ ಜೊಲ್ಲು. ನನ್ನ ಸ್ನೇಹಿತನೊಬ್ಬ ಹೇಳುತ್ತಿದ್ದ ಆತನಿಗೆ ಕಾಲೇಜು ದಿನಗಳಲ್ಲಿ ಈ ಕ್ಲಿಪ್ಪಿಂಗ್ ನೋಡುವ ಚಟ ವಿಪರೀತವಾಗಿ ಅಂಟಿಕೊಂಡಿತ್ತಂತೆ. ಅದಷ್ಟೆ ಎಷ್ಟು ಆಡಿಕ್ಟ್ ಆಗಿ ಬಿಟ್ಟಿದ್ದನೆಂದರೆ ನಿತ್ಯವೂ ಮಿಲಿಯನ್ ಗಟ್ಟನೆ ಕಂದಮ್ಮಗಳನ್ನು ಕೊಲ್ಲುತ್ತಿದ್ದನಂತೆ. ಹಾಗಿದ್ದರೂ ಆ ಚಟ ಮಾತ್ರ ಈತನನ್ನು ಬಿಡಲಿಲ್ಲವಂತೆ. ಆದರೆ ಒಂದು ದಿನ ಮಾತ್ರ ಥಟ್ ಅಂತ ಕ್ಲಿಪ್ಪಿಂಗ್ ನೋಡುವುದನ್ನು ನಿಲ್ಲಿಸಿಬಿಟ್ಟನಂತೆ. ಕಾರಣ – ಆತನಿಗೆ ಆತನ ಕಾಲೇಜು ಪ್ರೋಫೆಸರ್ ಒಬ್ಬರು ಹೇಳಿದರಂತೆ. ನೋಡಪ್ಪ, ಯಾವ ಮಹಿಳೆಯೇ ಆಗಲಿ ತಾನಾಗಿಯೇ ಈ ದಂಧೆಗೆ ಮುಂದಾಗುವುದಿಲ್ಲ. ಪ್ರತಿಯೊಬ್ಬ ಮಹಿಳೆಯೂ ಈ ಕೂಪಕ್ಕೆ ತಳ್ಳಲ್ಪಡುತ್ತಾಳೆ. ಬಂದವರು ವಿಧಿಯಿಲ್ಲದೆ, ಆ ಕೂಪದಿಂದ ಹೊರಬರುವ ದಾರಿ ಗೊತ್ತಿಲ್ಲದೆ, ಹೊಟ್ಟೆಪಾಡಿಗಾಗಿ ಅಲ್ಲೇ ಉಳಿದುಬಿಡುತ್ತಾರೆ. ಆದರೆ ಸಾಯುವವರೆಗೂ ನರಕ ಅನುಭವಿಸುತ್ತಾರೆ. ಬೇಕಾದರೆ ನಳಿನಿ ಜಮೀಲಾಗೆ ಕೇಳಿ ನೋಡು. ಪ್ರತಿನಿತ್ಯವೂ ಕಣ್ಣೀರು ಸುರಿಸುತ್ತಾರೆ. ನೀನು ಕ್ಲಿಪ್ಪಿಂಗ್ ನೋಡುತ್ತಿದ್ದಿಯೆಂದರೆ ಅವರನ್ನು ಹತಭಾಗ್ಯರನ್ನಾಗಿಸಿದ ಪಾಪ ನಿನಗೇ ತಟ್ಟುತ್ತದೆ. ಅವರ ಕಣ್ಣೀರು ನಿನ್ನನ್ನೆಂದಿಗೂ ಕ್ಷಮಿಸದು. ಏಕೆಂದರೆ ಪರೋಕ್ಷವಾಗಿ ನಿಮ್ಮಂತಹವರೇ ಆ ದಂಧೆ ಬೆಳೆಯಲು ಕಾರಣ ಎಂದರಂತೆ. ಅಂದಿನಿಂದ ಈತ ಮತ್ತೆಂದೂ ಜೊಲ್ಲು ಸುರಿಸಲಿಲ್ಲವಂತೆ.

ಇಷ್ಟೆಲ್ಲ ವಿಚಾರಗಳನ್ನು ರಾಘವೇಂದ್ರ ಜೋಶಿಯವರು ಮಾತ್ರ ನಾಲ್ಕೆ ಸಾಲಿನಲ್ಲಿ ಬರೆದು ಹೇಳಬೇಕಾಗಿರುವುದಕ್ಕಿಂತ ಹೆಚ್ಚಿಗೆ ಹೇಳಿದ್ದಾರೆ.

ಕೊನೆಯ ಚರಣ ಹೀಗಿದೆ.

ಎಷ್ಟೊಂದು?

ಎಷ್ಟೊಂದು?

ಚಿಕ್ಕಂದಿನಲ್ಲಿ ಅಕ್ಕ

ಹೇಳುತ್ತಿದ್ದ

ತ್ರೈಮಾಶಿಕ ಲೆಕ್ಕದ ನೆನಪು:

ಇಷ್ಟಕ್ಕೆ ಅಷ್ಟಾದರೆ

ಅಷ್ಟಕ್ಕೆ ಎಷ್ಟು??

ಎಂದು ಕೊನೆಗೊಳ್ಳುತ್ತದೆ. ಇಷ್ಟಕ್ಕೆ ಅಷ್ಟಾದರೆ ಅಷ್ಟಕ್ಕೆ ಎಷ್ಟು ಎಂದು ನಮಗೊಂದು ಲೆಕ್ಕವನ್ನೂ ಕೊಡುತ್ತದೆ. ಇದನ್ನು ಓದಿದಾಗ ನನಗೆ ಥಟ್ಟನೆ ನೆನಪಿಗೆ ಬಂದದ್ದು –

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯುತೆ

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ

ಎಂಬ ಶ್ಲೋಕ. ಬದುಕಿನ ಲೆಕ್ಕಕ್ಕೂ ಬಹಶಃ ಈ ಶ್ಲೋಕವೇ ಉತ್ತರವೇನೋ.