ರಾಘವೇಂದ್ರರ ಮತ್ತೊಂದು ಕವನ ‘ಹೀಗೇನೆ’

ಕವನ – ಹೀಗೇನೆ

ರಾಘವೇಂದ್ರ ಜೋಶಿ

................

ಹೀಗೇನೆ

ಮಧ್ಯರಾತ್ರಿಯಲ್ಲಿ

ಎದ್ದುಹೋದ ಬುದ್ಧ,

ಗೆದ್ದರೂ ಕ್ಷಣದಲ್ಲಿ

ಬಿದ್ದುಹೋದ ಗೊಮ್ಮಟ.

ಆಕಾಶ ನೋಡಲು

ದುರ್ಬೀನು ಬೇಕೇ?

ಬಟ್ಟಬಯಲಲ್ಲಿ

ಖಾಲಿಖಾಲಿಯಾಗುವದೆಂದರೆ ಹೀಗೇನೆ..

*

ಅಪ್ಪನ ಕೈಯಿಂದ

ಗಾಳಿಯಲ್ಲಿ ಹಾರಿದ ಮಗು.

ಮತ್ತೇ ಹಿಡೀತಾನೆ ಬಿಡು

ಅಂತ ನಗುತ್ತಿತ್ತು.

ಗಾಳಿಗೂ ವಿಚಿತ್ರ

ಮುಲಾಜು.

ಸತ್ತು ಹೋಗುವಷ್ಟು

ನಂಬುವದೆಂದರೆ ಹೀಗೇನೆ..

*

ತೇಲಿಸಿದಳು ಕುಂತಿ

ತೆಪ್ಪದಲಿ ಮಗನನ್ನು;

ತುಪ್ಪದ ಭಾಂಡಲೆಯಲ್ಲಿ

ನೂರೊಂದು ಮಕ್ಕಳು.

ಹುಟ್ಟಿಸಿದ ದೇವರು

ಹುಲ್ಲು ಮೇಯುತ್ತಿದ್ದ.

ಕತ್ತಲೂ

ಕೂಡ ಮಿಂಚುವದೆಂದರೆ ಹೀಗೇನೆ..

*

ಸುತ್ತಲೂ ಕರ್ಕಶ

ಆದರೂ ಕೇಳಿಸದು.

ಎಲ್ಲೋ ನಿಡುಸುಯ್ಯುತ್ತಿರುವ

‘ಲಬ್ ಡಬ್‘ ಅವಳದೇನಾ?

ಆದಷ್ಟು ಬೇಗ

ವೈದ್ಯರನ್ನು ಕಾಣಬೇಕು.

ಶಬ್ದದೊಳಗೆ

ನಿಶ್ಶಬ್ದವಾಗುವದೆಂದರೆ ಹೀಗೇನೆ..

*

ಸಡಗರದಿ ನಾರಿಯರು

ಹಡೆಯುವಾಗ ಸೂಲಗಿತ್ತಿ;

ಅಡವಿಯೊಳಗೆ ಹೆರುವ

ಮೃಗವ ಹಿಡಿದು

ರಕ್ಷಿಸುವರ್ಯಾರು?

ಯಾರು?

ಗೊತ್ತಿಲ್ಲ.

ಆದರೆ

ದಾಸರು ನೆನಪಾಗುವದೆಂದರೆ ಹೀಗೇನೆ…