‘ಹೀಗೇನೆ’ಗೆ ವಿಮರ್ಶೆ

ಕವನ – ರಾಘವೇಂದ್ರ ಜೋಶಿ

ವಿಮರ್ಶೆ – ಸುಘೋಷ್ ಎಸ್ ನಿಗಳೆ

.....

ಒಂಚೂರು ಶೀರ್ಷಿಕೆಯ ಬಗ್ಗೆ.

ಹೀಗೇನೆ ಪದ ಸಾಹಿತ್ಯದಲ್ಲಿ ಹೇಗೆಂದರೆ ಹಾಗೆ ಬಳಕೆಯಾಗುತ್ತದೆ. ಒಂದು ಮಾತಲ್ಲಿ ಸತ್ವವಿಲ್ಲದಿದ್ದಾಗ ಅದನ್ನು ಚ್ಯೂಯಿಂಗ್ ಗಮ್ ನಂತೆ ಎಳೆಯಲು, ಹೇಳಬಾರದೆಂಬ ವಿಷಯ ಮರೆಮಾಚಲು, ಪ್ರಮುಖ ವಿಷಯ ಮಾತಾಡುವ ಮುಂಚೆ ಪೀಠೆಕೆ ಹಾಕಲು – ಹೀಗೆಲ್ಲ ಹೀಗೇನೆ ಪದ ಬಳಕೆಯಾಗುತ್ತದೆ. ಒಂದರ್ಥದಲ್ಲಿ ಸಾಮಾನ್ಯದಲ್ಲಿ ಸಾಮಾನ್ಯ ಪದ ಹೀಗೇನೆ. ಇದನ್ನು ಹೀಗೂ ಬಳಸಬಹುದು ಹಾಗೂ ಹಾಗೂ ಬಳಸಬಹುದು. ಬೇಕೆಂದ ಹಾಗೆ ಬಳಸುವ ಸ್ವಾತಂತ್ರ್ಯ ಕೊಡುವ ಪದಗಳಲ್ಲಿ ಇದೂ ಒಂದು. ಆದರೆ ಹೀಗೆನೆ ಕವನದಲ್ಲ ಈ ಶಬ್ದದ ಮೊದಲು ಬಂದಿರುವ ಪದಗಳು – ಪ್ರಿಫಿಕ್ಸ್ – ಹೀಗೇನೆ ಶಬ್ದಕ್ಕೆ ಅಸಮಾನ್ಯ ತೂಕವನ್ನು ನೀಡಿವೆ. ಪ್ರತಿಚರಣವೂ ಹೀಗೇನೆ ಎಂದು ಕೊನೆಗೊಂಡು ಇದು ಹೀಗಷ್ಟೇ ಅಲ್ಲ ಹಾಗೆ ಕೂಡ ಎಂಬುದನ್ನು ಸೂಚಿಸುತ್ತದೆ.

ಈ ಕವನ ಯಾವುದೋ ಅತಿ ದೂರದ ಎರಡು ಬಿಂದುಗಳನ್ನು ಹಿಡಿದು ಜೋಡಿಸುವಂತೆ ಕಂಡರೂ, ಜೋಡಿಸಿದ ಮೇಲೆ ಆ ಎರಡೂ ಬಿಂದಗಳೂ ಅಕ್ಕಪಕ್ಕದಲ್ಲಿಯೇ ಇವೆ ಅಥವಾ ಆ ಎರಡೂ ಬಿಂದುಗಳೂ ಒಂದೇ ಎಂದು ಭಾಸವಾಗುತ್ತದೆ. ಕವನದಲ್ಲಿ ಕತ್ತಲೂ ಕೂಡ ಮಿಂಚುತ್ತದೆ, ಶಬ್ದದೊಳಗೆ ನಿಶ್ಯಬ್ದವಾಗುವ ಪ್ರಕ್ರಿಯೆಯೂ ನಡೆಯುತ್ತದೆ. ಮಧ್ಯರಾತ್ರಿಯಲ್ಲಿ ಎದ್ದುಹೋಗುವ ಬುದ್ಧ, ಗೆದ್ದರೂ ಕ್ಷಣದಲ್ಲಿಬಿದ್ದುಹೋಗವ ಗುಮ್ಮಟ ಬಟ್ಟಬಯಲಲ್ಲಿ ಖಾಲಿಖಾಲಿಯಾಗುತ್ತಾರೆ.

ಖಾಲಿಯಾಗಲು ಕೆಚ್ಚೆದೆಬೇಕು. ಖಾಲಿಯಾಗುವುದೆಂದರೆ ಸುಮ್ಮನೆಯ ಮಾತಲ್ಲ. ಎಲ್ಲರಿಗ ಖಾಲಿಯಾಗುವ ಧೈರ್ಯವಿರುವುದಿಲ್ಲ. ಒಮ್ಮೆ ಖಾಲಿಯಾದರೆ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಖಾಲಿಯಾಗುವ ಯೋಗ್ಯತೆ, ಅರ್ಹತೆ, ಧೈರ್ಯ, ಬಲ ಕೆಲವರಿಗೆ ಮಾತ್ರವಿರುತ್ತದೆ. ಇನ್ನು ಕೆಲವರು ವೈಯುಕ್ತಿಕವಾಗಿ ಖಾಲಿಯಾದರೂ ಬಟ್ಟಬಯಲಲ್ಲಿ ಖಾಲಿಯಾಗಲು ಹಿಂದೇಟು ಹಾಕುತ್ತಾರೆ. ಕೆಲವರು ಮಾತ್ರ ಬಟ್ಟಬಯಲಲ್ಲಿ ಖಾಲಿಯಾಗುವ ಧೈರ್ಯ ತೋರುತ್ತಾರೆ. ಇನ್ನು ಕೆಲವರು ಬಟ್ಟಬಯಲಲ್ಲಿ ಖಾಲಿ ಖಾಲಿಯಾಗುತ್ತಾರೆ. ಖಾಲಿಯಾಗುವುದು ಒಂದು ರೀತಿಯಲ್ಲಿ ಪ್ರಯಾಣವನ್ನು ಸೂಚಿಸುತ್ತದೆ. ಅದು ಅಪೂರ್ಣತೆಯಿಂದ ಪೂರ್ಣತೆಯಿಂದ ಕಡೆಯ ಪ್ರಯಾಣ. ಆ ಪ್ರಯಾಣ ದುರ್ಗಮವಾಗಿದ್ದರೂ ಆಯ್ಕೆ ಮಾಡಿಕೊಂಡು ಪ್ರಯಾಣ ಮಾಡುವವನಿಗೆ ಮಾತ್ರ ಸದಾ ಆಹ್ಲಾದಕಾರಿಯಾಗಿರುತ್ತದೆ. ಒಮ್ಮೆ ಗಮ್ಯ ತಲುಪಿದ ಮೇಲೆ ಅವನಂತಹ ಸುಖೀ ಮನುಥ್ಯ ಮತ್ತೊಬ್ಬನಿಲ್ಲ. ಆದರೆ ಹೀಗೆ ಅಪೂರ್ಣತೆಯಿಂದ ಪೂರ್ಣತೆಯತ್ತ ತೆರಳಿ ಖಾಲಿಯಾಗುವ ನಿರ್ಧಾರ ಕೈಗೊಳ್ಳುವುದು ಕಷ್ಟದ ಕೆಲಸ. ಇದು ಒಂಥರ ಬಿಟ್ಟೇನೆಂದರೆ ಬಿಡದೀ ಮಾಯೆ ಅನ್ನುವ ಹಾಗೆ. ನಮ್ಮಲ್ಲಿ ಹಲವರಿಗೆ ಖಾಲಿಯಾಗುವ ಬಯಕೆ, ಇಚ್ಛೆ ಇದ್ದರೂ ಅವರ ಒಟ್ಟಾರೆ ಪರಿಸ್ಥಿತಿ ಖಾಲಿಯಾಗಲು ಅನುವು ಮಾಡಿಕೊಡುವುದಲ್ಲಿ. ಖಾಲಿಯಾಗುವ ಸಮಯ ಮೀರಿ ಹೋಗಿರುತ್ತದೆ. ಬಹುಶಃ ಸಿದ್ಧಾರ್ಥನಿಗೂ ಖಾಲಿಯಾಗುವ ಸಮಯ ಮುಗಿದು ಹೋಗಿತ್ತು. ಆತ ಅದಾಗಲೇ ತುಂಬಿತುಳುಕುವ ಕೊಡವಗಾದಿದ್ದ. ಹೀಗಾಗಿ ಆತ ಖಾಲಿಯಾಗುವ ನಿರ್ಧಾರ ಕೈಗೊಂಡಾಗ ಮಧ್ಯರಾತ್ರಿಯಲ್ಲಿ ಎದ್ದು ಹೋಗಬೇಕಾಯ್ತು. ಎದ್ದು ಹೋಗಾಬೇಕಾದಾಗ ಸಿದ್ಧಾರ್ಥ – ಅಪೂರ್ಣ. ಎದ್ದು ಹೋದ ಮೇಲೆ ಬುದ್ಧ – ಪೂರ್ಣ. ಹೌದು. ಕವಿ ಹೇಳುವ ಹಾಗೆ ಬಟ್ಟ ಬಯಲಲ್ಲಿ ಖಾಲಿಯಾಗುವುದೆಂದೆ ಹೀಗೇನೆ.

ಎರಡನೆಯ ಪಂಕ್ತಿ ಹೀಗಿದೆ.

ಅಪ್ಪನ ಕೈಯಿಂದ

ಗಾಳಿಯಲ್ಲಿ ಹಾರಿದ ಮಗು.

ಮತ್ತೇ ಹಿಡೀತಾನೆ ಬಿಡು

ಅಂತ ನಗುತ್ತಿತ್ತು.

ಗಾಳಿಗೂ ವಿಚಿತ್ರ

ಮುಲಾಜು.

ಸತ್ತು ಹೋಗುವಷ್ಟು

ನಂಬುವದೆಂದರೆ ಹೀಗೇನೆ..

ಅಪ್ಪ. ಅದೊಂದು ಆತ್ಮವಿಶ್ವಾಸ. ಅದೊಂದು ಭರವಸೆ. ಅದೊಂದು ಆಶ್ರಯ. ಅದೊಂದು ಭಯ ಮಿಶ್ರಿತ ಪ್ರೀತಿ ಅಥವಾ ಪ್ರೀತಿ ಮಿಶ್ರಿತ ಭಯ. ಪುರುಷ ಪ್ರಧಾನ ಸಮಾಜ ಅಪ್ಪನಿಗೊಂದು ವಿಶೇಷ ಸ್ಥಾನವನ್ನು ನೀಡಿದೆ. ಆತ ಎಷ್ಟೇ ಕ್ರೂರಿಯಾಗಿರಲಿ ಅಪ್ಪ ಅಪ್ಪನೇ. ನನಗೆ ತಾಯಿ ಯಾರೋ ಗೊತ್ತಿಲ್ಲ ಎಂಬುದಕ್ಕಿಂತ ನನಗೆ ತಂದೆ ಯಾರೋ ಗೊತ್ತಿಲ್ಲ ಎಂಬುದು ನಮ್ಮ ಸಮಾಜದಲ್ಲಿ ಹೆಚ್ಚು ಮುಜುಗರವನ್ನುಂಟು ಮಾಡುವ ಸಂಗತಿಯಾಗಿದೆ. ಅಪ್ಪನಿಗೂ ಅಮ್ಮನಿಗೂ ಮೊದಲಿನಿಂದಲೂ ಜಗಳ. ಈ ಜಗಳ ಹಚ್ಚಿಕೊಟ್ಟದ್ದು ಪ್ರಭು ಶ್ರೀರಾಮಚಂದ್ರ. ಪಿತೃವಾಕ್ಯ ಪರಿಪಾಲನೆಗಾಗಿ ಸಿಂಹಾಸನ ತ್ಯಜಿಸಿ, ಹೆಂಡತಿ ಹಾಗೂ ತಮ್ಮನೊಡನೆ ಹೆಜ್ಜೆ ಹಾಕಿ ಕಾಡಿಗೆ ನಡೆದ. ಅಲ್ಲಿ ಲಕ್ಷ್ಮಣ, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಸೀತೆಗೆ ಮಾಯಾಜಿಂಕೆ ಕಂಡಿದ್ದು, ಸೀತಾಪಹರಣವಾಗಿದ್ದು, ಜಟಾಯು ರೆಕ್ಕೆ ಕತ್ತರಿಸಿಕೊಂಡದ್ದು, ಹನುಮ ಸಮುದ್ರ ಜಿಗಿದದ್ದು, ತನ್ನ ಬಾಲದಿಂದ ಲಂಕೆಗೆ ಬೆಂಕಿ ಇಟ್ಟದ್ದು, ಭಾರತದಿಂದ ಶ್ರೀಲಂಕೆಗೆ ಸೇತುವೆ ನಿರ್ಮಾಣವಾಗಿದ್ದು, ರಾಮ-ರಾವಣ ಯುದ್ಧವಾಗಿದ್ದು, ಕೊನೆಗೆ ರಾಮ ಸೀತೆಯೊಡನೆ ಮರಳಿದ್ದು ಎಲ್ಲವೂ ನಡೆದಿದ್ದು ಕೇವಲ ಕೇವಲ ಶ್ರೀರಾಮನ ಪಿತೃವಾಕ್ಯ ಪರಿಪಾಲನೆಗಾಗಿ. ಆದರೆ ರಾಮ ಮುಂದೆ ನಿಲುವು ಬದಲಿಸಿಬಿಟ್ಟ. ರಾವಣ ಸಂಹಾರವಾದ ಮೇಲೆ ಲಂಕೆಯ ವೈಭವವನ್ನು ನೋಡಿದ ಲಕ್ಷ್ಮಣ ಅಣ್ಣ, ಇಲ್ಲೇ ಇದ್ದು ಬಿಡೋಣ ಎಂದಾಗ ರಾಮ ಹೇಳಿದ್ದು,

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೆ

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಿಸಿ. ಎಂದು. ಅಮ್ಮ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತ ದೊಡ್ಡದು ಎಂದನೇ ಹೊರತು ಅಪ್ಪ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತ ದೊಡ್ಡದು ಅನ್ನಲಿಲ್ಲ. ಹೀಗಾಗಿ ಅಪ್ಪ-ಅಮ್ಮನ ನಡುವೆ ಜಗಳ ಹಚ್ಚಿದ ಕೀರ್ತಿ ಶ್ರೀರಾಮಚಂದ್ರನಿಗೇ ಸಲ್ಲುತ್ತದೆ. ಇದನ್ನು ಯಾಕೆ ಹೇಳಿದೆನೆಂದರೆ ರಾಘವೇಂದ್ರ ಜೋಶಿಯವರು ಮಗುವನ್ನು ಗಾಳಿಯಲ್ಲಿ ಅಪ್ಪನ ಕೈಯಿಂದಲೇ ಹಾರಿಸುತ್ತಾರೆ. ಅಮ್ಮನ ಕೈಯಿಂದಲ್ಲ. ಆದರೆ ಇಂದು ಅಪ್ಪನ ಕೈಯಿಂದ ಗಾಳಿಯಲ್ಲಿ ಹಾರಿದ ಮಗು ಮತ್ತೆ ಅಪ್ಪನ ಕೈಗೆ ಬರುವುದೇ ಇಲ್ಲ. ಬದಲಾಗಿ ಗಾಳಿಯಲ್ಲಿ ಹಾಗೆಯೇ ನೇತಾಡುತ್ತದೆ. ಕಾರಣ,…ಅಪ್ಪನ ಕಂಕುಳದ ಬೆವರಿನ ದುರ್ಗಂಧ. ಅಪ್ಪ ಅದ್ಯಾವುದೋ ಸುಡುಗಾಡು ಸಾಬೂನಿನಿಂದ ಮೈತೊಳೆದು ಬಂದು, ಕೀಟಾಣುಗಳನ್ನು ಕೊಂದು ಬಂದು ಮೇಲಷ್ಟೇ ಮಗು ಅಪ್ಪನ ಕೈಗೆ ಬರುತ್ತದೆ. ಅಪ್ಪನ ಪ್ರೀತಿಯನ್ನು ಕೊಲ್ಲುವ ಅತ್ಯಂತ ಕೆಟ್ಟ ಜಾಹೀರಾತು ಇದೆಂದರೆ ತಪ್ಪಾಗಲಾರದು. ಕವಿ ಹೇಳುವ ಹಾಗೆ ಮತ್ತೆ ಹಿಡೀತಾನೆ ಬಿಡು ಎಂದು ಮಗು ನಗುತ್ತಿತ್ತು. ಗಾಳಿಗೂ ವಿಚಿತ್ರ ಮುಲಾಜು. ಸತ್ತುಹೋಗುವಷ್ಟು ನಂಬುವುದೆಂದರೆ ಹೀಗೆನೆ. ನಾನು ಆಗಲೇ ಹೇಳಿದ ಹಾಗೆ ಅಪ್ಪ ಒಂದು ಆತ್ಮವಿಶ್ವಾಸ, ಅದೊಂದು ಭದ್ರತೆ, ಹೀಗಾಗಿಯೇ ಮಗುವಿಗೆ ಮತ್ತೆ ಹಿಡಿತಾನೆ ಬಿಡು ಎಂಬ ಭರವಸೆ. ಆ ಸಂದರ್ಭದಲ್ಲಿ ಮಗುವಿಗೆ ಸತ್ತು ಹೋಗುವಷ್ಟು ನಂಬುಗೆ. ಸತ್ತು ಹೋದಮೇಲೆ ನಂಬುಗೆ ಉಳಿದರೆಷ್ಟು ಬಿಟ್ಟರೆಷ್ಟು? ಅಂತ ಕೇಳಬಹುದು. ಆದರೆ ಇಲ್ಲಿ ಸಾಯುವ ಪ್ರಶ್ನೆಯೇ ಇಲ್ಲ. ಏಕೆದಂದರೆ ಗಾಳಿಯಲ್ಲಿ ಚಿಮ್ಮಿರುವ ಮಗುವನ್ನು ಕೆಳಗೆ ಹಿಡಿಯಲು ನಿಂತಿರುವುದು ಅಪ್ಪ. ಅಂಕಲ್ಲೋ, ಆಂಟಿಯೋ ಅಲ್ಲ.

ಕವಿತೆಯ ಮತ್ತೊಂದು ಚರಣ

ತೇಲಿಸಿದಳು ಕುಂತಿ

ತೆಪ್ಪದಲಿ ಮಗನನ್ನು;

ತುಪ್ಪದ ಭಾಂಡಲೆಯಲ್ಲಿ

ನೂರೊಂದು ಮಕ್ಕಳು.

ಹುಟ್ಟಿಸಿದ ದೇವರು

ಹುಲ್ಲು ಮೇಯುತ್ತಿದ್ದ.

ಕತ್ತಲೂ

ಕೂಡ ಮಿಂಚುವದೆಂದರೆ ಹೀಗೇನೆ..

ಸಾಮಾನ್ಯ ಪರಿಸ್ಥಿತಿಯಲ್ಲಿ ಮಳೆ ಸುರಿಯುತ್ತದೆ. ಗುಡುಗು ಗುಡುಗುತ್ತದೆ. ಸಿಡಿಯು ಹೊಡೆಯುತ್ತದೆ. ಮಿಂಚು ಮಿಂಚುತ್ತದೆ. ಆದರೆ ಇಲ್ಲಿ ಕತ್ತಲು ಮಿಂಚುತ್ತದೆ. ಕತ್ತಲು ಮಿಂಚಬೇಕಾದ ಸಂದರ್ಭದಲ್ಲಿ ಹುಟ್ಟಿಸಿದ ದೇವರು ಹುಲ್ಲು ಮೇಯುತ್ತಿರುತ್ತಾನೆ. ಅಥವಾ ಆತ ಹುಲ್ಲು ಮೇಯುತ್ತಿದ್ದಾನೆ ಎಂದೇ ಮಿಂಚು ಮಿಂಚದೇ ಕತ್ತಲು ಮಿಂಚುತ್ತದೆ. ಹೀಗೇನೆ. ಆಗಷ್ಟೇ ಏಕೆ ಇಂದು ಕೂಡ ಹಲವಾರು ಬಾರಿ ದೇವರು ಹುಲ್ಲು ಮೇಯುತ್ತಿರುತ್ತಾನೆ ಅನಿಸುವುದಿಲ್ಲವೆ? ಬೆಂಗಳೂರಿನ ಮಳೆಗೆ ಮೋರಿಯಲ್ಲಿ ಮಗು ಕೊಚ್ಚಿ ಹೋದಾಗ, ಭ್ರಷ್ಟ ಕಾರ್ಪೋರೇಟರ್ ಕಟ್ಟಿಸಿದ ಗೋಡೆ ಬಿದ್ದು ಯುವತಿ ಸತ್ತಾಗ, ತಪ್ಪು ಮಾಡಿರದೇ ಇದ್ದರೂ ಟ್ರಾಫಿಕ್ ಪೋಲಿಸ್ ಕುಂಟುನೆಪ ಹೇಳಿ ಲಂಚಕೇಳಿದಾಗ, ಎಲ್ ಕೆಜಿ ಸೀಟಿಗಾಗಿ ಪೋಷಕರು ನಡುಗುವ ಚಳಿಯಲ್ಲಿ ಪ್ರತಿಷ್ಠಿತ ಶಾಲೆಗಳ ಗೇಟುಗಳ ಮುಂದೆ ಮುದುಡಿ ಮಲಗಿದಾಗ ದೇವರು ಹುಲ್ಲುಮೇಯುತ್ತಿರುತ್ತಾನೆ ಅನಿಸುವುದಿಲ್ಲವೆ? ಆದರೆ ಅಣ್ಣಾ ಹಜಾರೆ ತಮ್ಮ ಸತ್ಯಾಗ್ರಹದಲ್ಲಿ ವಿಜಯಿಯಾದಾಗ, ಕ್ರಿಕೆಟಿಗಳಲ್ಲದ ಅಶ್ವಿನಿ ಅಕ್ಕುಂಜಿ ಕಾರ್ಪೋರೇಷನ್ ಬ್ಯಾಂಕಿನ ಬ್ರಾಂಡ್ ಅಂಬಾಸಿಡರ್ ಆದಾಗ, ಬಾಬಾ ರಾಮದೇವ್ ಪ್ರಾಣಾಯಾಮ ಮಾಡಿ ನೂರಾರು ಜನರು ನೋವಿನಿಂದ ಮುಕ್ತಿ ಪಡೆದಾಗ, ಕತ್ತಲೂ ಮಿಂಚುತ್ತದೆ ಹೀಗೇನೆ.

ಕವನದ ಮತ್ತೊಂದು ಚರಣ

ಸಡಗರದಿ ನಾರಿಯರು

ಹಡೆಯುವಾಗ ಸೂಲಗಿತ್ತಿ;

ಅಡವಿಯೊಳಗೆ ಹೆರುವ

ಮೃಗವ ಹಿಡಿದು

ರಕ್ಷಿಸುವರ್ಯಾರು?

ಯಾರು?

ಗೊತ್ತಿಲ್ಲ.

ಆದರೆ

ದಾಸರು ನೆನೆಪಾಗುವುದೆಂದರೆ ಹೀಗೇನೆ

ಸಡಗರದಿ ನಾರಿಯರು, ಹಡೆಯುವಾಗ ಸೂಲಗಿತ್ತಿ. ಆದರೆ ಅಡವಿಯೊಳಗೆ,…

ಅಡವಿಯೊಳೆಗೆ ಜಿರಾಫೆ ತನ್ನ ಕರುಳ ಕುಡಿ ಹುಟ್ಟಿದ ತಕ್ಷಣ ಅದನ್ನು ಕಾಲಿನಿಂದ ಒಂದೇ ಸಮನೆ ಒದೆಯುತ್ತದೆ. ಧೂಳೆಬ್ಬಿಸಿ ಆಗಷ್ಟೇ ಜನಿಸಿರುವ ಮರಿಯನ್ನು ಹೈರಾಣು ಮಾಡುತ್ತದೆ. ತಾಯಿ ಜಿರಾಫೆಯ ಉದ್ದೇಶ ಸ್ಪಷ್ಟ. ತನ್ನ ಕರುಳ ಕುಡಿಗೆ ಬದುಕುವ ಬಲ, ಬದುಕುವ ಛಲ ಎರಡೂ ಇದ್ದರೆ ಅದು ತನ್ನ ಕಾಲ ಮೇಲೆ ನಿಲ್ಲುತ್ತದೆ. ಹಾಗೆ ನಿಂತರೆ ಮಾತ್ರ ಅದು ಬದುಕಲು ಯೋಗ್ಯ ಅಂತ. ಒದೆ ತಿಂದು, ಧೂಳು ಕುಡಿದು ಕೊನೆಗೂ ಮಗು ಎದ್ದು ನಿಲ್ಲುತ್ತದೆ. ತಾಯಿ ಜಿರಾಫೆ ಸಂತಸಗೊಳ್ಳುತ್ತದೆ. ಆದರೆ ಆಗ ದಾಸರು ನೆನಪಾಗುತ್ತಾರೆ.

ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಕಲ್ಲು ಸಕ್ಕರೆ ಕೊಳ್ಳಿರೋ,

ಎನಗೂ ಆಣೆ ರಂಗ, ನಿನಗೂ ಆಣೆ