ಅಪ್ಪ ಬದಲಾಗಿದ್ದಾನೆ…!!!

©SUGHOSH S. NIGALE

 

©SUGHOSH S. NIGALE

ಅಪ್ಪ. ಅದೊಂದು ಆತ್ಮವಿಶ್ವಾಸ. ಅದೊಂದು ನಂಬಿಕೆ. ಅದು ಭದ್ರತೆ. ಅದು ಭಯಮಿಶ್ರಿತ ಪ್ರೀತಿ ಅಥವಾ ಪ್ರೀತಿ ಮಿಶ್ರಿತ ಭಯ. ಅದೊಂದು ಆಸರೆ. ದಟ್ಟ ಕೂದಲಿನ ಗಟ್ಟಿ ಎದೆಯ ಮೇಲೆ ಪುಟ್ಟ ತಲೆಯನ್ನಿಟ್ಟು ತಾಚಿ ಮಾಡಿದ ಮಗು ಆ ಸ್ಪರ್ಶವನ್ನೆಂದಿಗೂ ಮರೆಯಲಾರದು. ಅಪ್ಪ ಮುದ್ದಿಸುವಾಗ ಎರಡು ದಿನದಿಂದ ಕ್ಷೌರ ಮಾಡಿರದ ಆತನ ಗಡ್ಡ ಚುಚ್ಚಿದರೂ, ಅದರಲ್ಲೇ ಪ್ರೀತಿ ಕಾಣುತ್ತದೆ ಮಗು. ಅಪ್ಪ ಎಂದಿಗೂ ಅಪ್ಪನೇ.

ಅಪ್ಪ ಯಾರು ಎಂಬುದಕ್ಕೆ ಚೆಂದಾದ ಸುಭಾಷಿತವೊಂದು ಸರಳವಾದ ವ್ಯಾಖ್ಯೆಯನ್ನು ನೀಡುತ್ತದೆ. ಸುಭಾಷಿತ ಹೀಗಿದೆ.

ಜನಿತಾಚೋಪನೇತಾಚ ಯಸ್ತು ವಿದ್ಯಾಂ ಪ್ರಯಚ್ಛತಿ

ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಸ್ಮೃತಾಃ

ಅರ್ಥ – ಜನ್ಮ ನೀಡಿದವನು, ಉಪನಯನ ಮಾಡಿದವನು, ವಿದ್ಯೆ ಹೇಳಿಕೊಟ್ಟವನು, ಅನ್ನ ನೀಡಿದವನು, ಅಂಜಿಕೆ ಹತ್ತಿರ ಸುಳಿಯದಂತೆ ಕಾಪಾಡಿದವನು – ಈ ಐದನ್ನು ಯಾರು ಮಾಡುತ್ತಾರೋ ಆತ ತಂದೆ ಅನ್ನಿಸಿಕೊಳ್ಳಲು ಅರ್ಹ.

ಹಿಂದಿನ ಕಾಲದಿಂದಲೂ ನಮ್ಮ ಪರಂಪರೆಯಲ್ಲಿ ಅಪ್ಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ತಾಯಿಗೆ ನಮಸ್ಕಾರ ಅಂದ ತಕ್ಷಣ ನಾವು ಅನ್ನುವುದೇ ‘ಪಿತೃ ದೇವೋಭವ’ ಎಂದು. ದೇವರ ಸ್ಥಾನವನ್ನು ನೀಡಿರುವ ನಮ್ಮ ಪರಂಪರೆಯೇ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ತಂದೆಯಾದವನು ಮಗುವಿನೊಡನೆ ಯಾವ ರೀತಿಯಿಂದ ನಡೆದುಕೊಳ್ಳಬೇಕು ಎಂಬುದನ್ನೂ ಸೂಚಿಸಿದೆ.

ಲಾಲಯೇತ್ ಪಂಚವರ್ಷಾಣಿ

ದಶ ವರ್ಷಾಣಿ ತಾಡಯೇತ್

ಪ್ರಾಪ್ತೇತು ಷೋಡಷೇ ವರ್ಷೇ

ಪುತ್ರಂ ಮಿತ್ರವದಾಚರೇತ್

ಅರ್ಥ – ಮಗುವನ್ನು ಐದು ವರ್ಷದ ವರಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಹತ್ತು ವರ್ಷದವನಾದಾಗ ತಪ್ಪು ಮಾಡುವ ಸಂದರ್ಭದಲ್ಲಿ ಎರಡೇಟು ಹಾಕಿ ತಿದ್ದಬೇಕು. ಆದರೆ ಅದೇ ಮಗು ಹದಿನಾರು ವರ್ಷದವನಾದಾಗ ಅದನ್ನು ಮಿತ್ರನಂತೆ ನೋಡಿಕೊಳ್ಳಬೇಕು ಎನ್ನುತ್ತದೆ ಸುಭಾಷಿತ. ಹೌದು. ದೇವರೂ ಕೂಡ ಮಿತ್ರನಾಗಲು ಸಾಧ್ಯವಲ್ಲವೆ?

ನಮ್ಮಲ್ಲಿ ಮೊದಲಿನಿಂದಲೂ ತಂದೆಯ ಬಗ್ಗೆಯಿದ್ದ ಪರಿಕಲ್ಪನೆ ಒಂದೇ ತೆರನಾಗಿದ್ದಾದರೂ, ಕಾಲದಿಂದ ಕಾಲಕ್ಕೆ ತಂದೆ-ಮಗ  ಅಥವಾ ತಂದೆ-ಮಗಳ ಸಂಬಂಧ ಮಾತ್ರ ಕಾಲನ ಹೊಡೆತಕ್ಕೆ ಸಿಕ್ಕು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಆಧುನಿಕತೆ ಹಾಗೂ ಜಾಗತೀಕರಣದ ಇಂದಿನ ಯುಗದಲ್ಲಂತೂ ತಂದೆ-ಮಗನ ಸಂಬಂಧ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಶ್ರೀರಾಮನ ಆಸ್ಥಾನಕ್ಕೆ ಬಂದು ಕುಶ-ಲವರು ರಾಮ ಚರಿತೆಯನ್ನು ಹಾಡಿದಾಗ ಇದ್ದ ಸಂಬಂಧಕ್ಕೂ, ತಂದೆಯಾದವನು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೋ, ಮದುವೆಗೋ ಎಂದೋ ಮಕ್ಕಳಿಗೆ 2 ವರ್ಷ ತುಂಬುತ್ತಲೇ ಉಳಿತಾಯ ಆರಂಭಿಸಬೇಕು ಅಥವಾ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು ಎಂದು ಹೇಳುವ ಇಂದಿನ ಕಾಲದ ಸಂಬಂಧಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಸಹಜವಾಗಿಯೇ ತಂದೆಗೊಂದು ಸ್ಥಾನ ತಾನೇ ತಾನಾಗಿ ಲಭಿಸಿದೆ. ಆ ತಂದೆ ಎಂತಹ ಕ್ರೂರ ತಂದೆಯೇ ಆಗಿರಲಿ – ಇದು ವಿಪರ್ಯಾಸವಾದರೂ – ಆತನಿಗೊಂದು ಸ್ಥಾನ ಎಂದು ನೀಡಲ್ಪಟ್ಟಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಂದೆಯಾದವನು ಮಕ್ಕಳಿಗೆ ಒಂದು ಅನನ್ಯತೆಯನ್ನು (ಐಡೆಂಟಿಟಿ) ದೊರಕಿಸಿಕೊಡುತ್ತಾನೆ. “ತಾಯಿಯಾರೋ ಗೊತ್ತಿಲ್ಲ” ಎಂಬುದಕ್ಕಿಂತ “ತಂದೆಯಾರೋ ಗೊತ್ತಿಲ್ಲ” ಎಂಬುದು ನಮ್ಮ ಸಮಾಜದಲ್ಲಿ ಹೆಚ್ಚು ಇರುಸುಮುರುಸು ಉಂಟುಮಾಡುವ ಸಂಗತಿಯಾಗಿದೆ. ಹಿಂದಿ ಚಿತ್ರರಂಗದಲ್ಲಂತೂ ತಂದೆಯಿಲ್ಲದೆ, ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುವ ನಾಯಕ ಚಿತ್ರದುದ್ದಕ್ಕೂ ಪ್ರೇಕ್ಷಕರ ಕರುಣೆಗಿಟ್ಟಿಸುತ್ತಾನೆ.

ರಾಮಾಯಣದ ಕಾಲದಲ್ಲಿ ವಾಸ್ತವವಾಗಿಯೇ ತಂದೆ ‘ದೇವೋಭವ’ ಆಗಿದ್ದ. ಅದಕ್ಕೇ ಅಲ್ಲವೇ ಸ್ವತಃ ಶ್ರೀರಾಮ ತಂದೆಯ ಮಾತನ್ನು ಉಳಿಸಲು ಪತ್ನಿ ಹಾಗೂ ತಮ್ಮನೊಡನೆ 14 ವರ್ಷಗಳ ಕಾಲ ಕಾಡಿನತ್ತ ಹೆಜ್ಜೆ ಹಾಕಿ ಇನ್ನಿಲ್ಲದ ಕಷ್ಟಗಳಿಗೆ ಸಿಕ್ಕಿಹಾಕಿಕೊಂಡದ್ದು? ರಾಮ ಅಂದಿಗೂ ಇಂದಿಗೂ ನಮಗೆ ಆದರ್ಶ. ಎಲ್ಲ ಸಂಬಂಧಗಳಿಗೂ ಆದರ್ಶ. ಅಗಸನ ಮಾತನ್ನು ಕೇಳಿಕೊಂಡು ಪತ್ನಿಯನ್ನು ದೂರ ಮಾಡಿದ ಎಂಬ ಆರೋಪ ರಾಮನ ಮೇಲಿದ್ದರೂ, ಹಿಂದಿನ ಘಟನೆಗಳು ಆಯಾ ದೇಶ-ಕಾಲ-ಪರಿಸ್ಥಿತಿಯ ಒತ್ತಡಗಳಿಂದ ಉಂಟಾಗಿದ್ದು ಎಂಬುದನ್ನು ಮರೆಯಬಾರದು. ರಾಮ ಅಧಿಕಾರವನ್ನು ತ್ಯಜಿಸಿ ಸೀತೆ ಹಾಗೂ ಲಕ್ಷ್ಮಣನೊಡನೆ ಕಾಡಿಗೆ ಹೋಗಿದ್ದು, ಅಲ್ಲಿ ಲಕ್ಷ್ಮಣ, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಸೀತೆಗೆ ಮಾಯಾಜಿಂಕೆ ಕಂಡಿದ್ದು, ಸೀತಾಪಹರಣವಾಗಿದ್ದು, ಜಟಾಯು ರೆಕ್ಕೆ ಕತ್ತರಿಸಿಕೊಂಡದ್ದು, ಹನುಮ ಸಮುದ್ರ ಜಿಗಿದದ್ದು, ತನ್ನ ಬಾಲದಿಂದ ಲಂಕೆಗೆ ಬೆಂಕಿ ಇಟ್ಟದ್ದು, ಭಾರತದಿಂದ ಶ್ರೀಲಂಕೆಗೆ ಸೇತುವೆ ನಿರ್ಮಾಣವಾಗಿದ್ದು, ರಾಮ-ರಾವಣ ಯುದ್ಧವಾಗಿದ್ದು, ಕೊನೆಗೆ ರಾಮ ಸೀತೆಯೊಡನೆ ಮರಳಿದ್ದು ಎಲ್ಲವೂ ನಡೆದಿದ್ದು ಕೇವಲ ಕೇವಲ ಶ್ರೀರಾಮನ ಪಿತೃವಾಕ್ಯ ಪರಿಪಾಲನೆಗಾಗಿ!!

ಬಹುಶಃ ಶ್ರೀರಾಮ, “ಇಲ್ಲ ತಂದೆಯೇ, ನೀನು ಕೈಕೇಯಿಗೆ ಮಾತು ಕೊಟ್ಟಿರಬಹುದು. ನಿನ್ನ ಮಾತನ್ನು ಉಳಿಸಿಕೊಳ್ಳುವುದು ನಿನ್ನ ಜವಾಬ್ದಾರಿಯೇ ಹೊರತು. ನನ್ನದಲ್ಲ. ಕ್ಷಮಿಸು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ರಾಜನ ಮಗನಾಗಿ ನನ್ನ ಕರ್ತವ್ಯ ಕೇವಲ ಅಯೋಧ್ಯೆಯ ರಕ್ಷಣೆ ಹಾಗೂ ಪ್ರಜಾ ಪರಿಪಾಲನೆ. ಅದು ಧರ್ಮ ಕೂಡ” ಎಂದಿದ್ದರೆ ರಾಮನ ಮಾತಿಗೆ ಭರತನೂ ಎದುರಾಡುತ್ತಿರಲಿಲ್ಲ. ರಾಮಾಯಣವೂ ನಡೆಯುತ್ತಿರಲಿಲ್ಲ! ಆದರೆ ರಾಮ ತಂದೆಯ ಇಕ್ಕಟ್ಟನ್ನು ಅರ್ಥಮಾಡಿಕೊಂಡವನೇ ನೇರವಾಗಿ ಕಾಡಿಗೆ ನಡೆದುಬಿಟ್ಟ. 14 ವರ್ಷಗಳಲ್ಲಿ ಏನೆಲ್ಲ ನಡೆದುಹೋಯಿತು. ಕೇವಲ ರಾಮ ದಶರಥನ ಮೇಲೆ ಇಟ್ಟಿದ್ದ ಭಕ್ತಿ ಹಾಗೂ ಗೌರವಕ್ಕಾಗಿ.

ತ್ರೇತಾಯುಗದಲ್ಲಿ ‘ಪಿತೃವಾಕ್ಯ’ಕ್ಕಾಗಿ ಇಷ್ಟೆಲ್ಲ ನಡೆದರೆ ದ್ವಾಪರಯುಗದಲ್ಲಿ ನಡೆದದ್ದು ಮತ್ತಷ್ಟು ವಿಚಿತ್ರ.  ತಂದೆ ಶಂತುನುವಿಗಾಗಿ ಸತ್ಯವತಿಯ ಬಳಿ ತೆರಳಿ ಬ್ರಹ್ಮಚಾರಿಯಾಗಿರುವುದಾಗಿ ಘೋಷಿಸಿದ ಭೀಷ್ಮ ಎಲ್ಲೊ ಒಂದು ಕಂಡೆ ದ್ವಾಪರದಲ್ಲಿ ಶ್ರೀರಾಮನ ಮುಂದುವರಿದ ಭಾಗದಂತೆ, ಆತನ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಆದರೆ ಈ ಸಾತ್ವಿಕತೆ ಹೆಚ್ಚು ಹೊತ್ತು ಉಳಿಯುವುದಿಲ್ಲ. ಏಕೆಂದರೆ ತಲೆ ಮೇಲೆ ಮಗುವನ್ನು ಹೊತ್ತುಕೊಂಡು ಯಮುನಾ ನದಿ ದಾಟಿ ಕೃಷ್ಣನನ್ನು ಬದುಕಿಸಿದ ವಸುದೇವ ಆದರ್ಶ ತಂದೆಯಾಗಿ ಕಂಡರೆ, ಮತ್ತೊಂದೆಡೆ ಮಕ್ಕಳ ಮೇಲಿನ ಕುರುಡು ಪ್ರೀತಿಯಿಂದ ಮಕ್ಕಳ ವಿನಾಶಕ್ಕೇ ಕಾರಣನಾದ ಧೃತರಾಷ್ಟ್ರನೂ ಕಾಣಸಿಗುತ್ತಾನೆ. ತ್ರೇತಾಯುಗದಲ್ಲಿ ಅಪ್ಪನ ಮಾತಿಗೆ ಮಗ ಬೆಲೆಕೊಟ್ಟು ಕಾಡಿಗೆ ಹೋದರೆ, ದ್ವಾಪರದಲ್ಲಿ ಅಪ್ಪನೇ ಮಕ್ಕಳ ಕುಕರ್ಮಗಳನ್ನು ತಿದ್ದದೆ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಇದು ಕಾಲದ ಬದಲಾವಣೆಯನ್ನು ತೋರಿಸುವುದರ ಜೊತೆಗೆ ಅಪ್ಪ ಎಂಬ ಮೌಲ್ಯ, ಆದರ್ಶ ಹೇಗೆ ಬದಲಾಯಿತು ಎಂಬುದನ್ನು ಸೂರ್ಯನಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಜೊತೆಗೆಯೇ ದ್ವಾಪರಯುಗದಲ್ಲಿ ತಂದೆಯ ಮೌಲ್ಯವೇ ಹಲವಾರು ಸಂದರ್ಭಗಳಲ್ಲಿ ಅಲ್ಲಾಡಿಹೋಗುತ್ತದೆ. ತಂದೆಯ ಅಸ್ತಿತ್ವಕ್ಕೆ ಪ್ರಶ್ನೆ ಚಿಹ್ನೆ ಎದುರಾಗುತ್ತದೆ. ಪಾಂಡುರಾಜ, ಧೃತರಾಷ್ಟ್ರ, ವಿದುರ, ಕರ್ಣ, ಹಾಗೂ ಪಾಂಡವರ ಜನನ ಪ್ರಕ್ರಿಯೆಯಲ್ಲಿ ಅಪ್ಪನಾದವನು ಕೇವಲ ಜೈವಿಕ ತಂದೆ (ಬಯೋಲಾಜಿಕಲ್ ಫಾದರ್) ಆಗುತ್ತಾನೆಯೇ ಹೊರತು ಭಾವನಾತ್ಮಕ ತಂದೆ ಆಗುವುದೇ ಇಲ್ಲ. ಅಪ್ಪನ ಅಸ್ತಿತ್ವ, ಮೌಲ್ಯ, ಪಾತ್ರ, ಇತ್ಯಾದಿಗಳ ಬಗ್ಗೆ ಬಹುಶಃ ಮೊಟ್ಟಮೊದಲ ಸ್ಥಿತ್ಯಂತರ ಇಲ್ಲಿಂದಲೇ ಆರಂಭವಾಯಿತು ಎನ್ನಬಹುದು.

ಇನ್ನು ಕಲಿಯುಗದಲ್ಲಿ ಕಂಡಷ್ಟು ಸ್ಥಿತ್ಯಂತರಗಳು, ಬದಲಾವಣೆಗಳು ಇನ್ನೂ ಅಗಾಧ. ಇಂದು ಅಪ್ಪ ಕೇವಲ ಅಪ್ಪನಾಗಿ ಉಳಿದಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಕೆಲಸದ ಒತ್ತಡ, ಬದಲಾಗಿರುವ ಜೀವನ ಶೈಲಿ, ವ್ಯಾಯಮ ರಹಿತ ಜೀವನ, ಕುಡಿತ-ಸಿಗರೇಟು ಸೇವನೆಯಂತಹ ದುಶ್ಚಟಗಳು, ಅತಿಯಾದ ಬೊಜ್ಜು, ಕಲುಷಿತ ಆಹಾರ-ನೀರು ಸೇವನೆ, ಕುಂಠಿತಗೊಂಡಿರುವ ವೀರ್ಯಾಣುಗಳ ಸಂಖ್ಯೆಯಿಂದಾಗಿ ಜೈವಿಕ ತಂದೆಯಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. (ಹಾಗಾದರೆ ಭಾರತದ ಜನಸಂಖ್ಯೆ ಇಷ್ಟು ಹೇಗೆ ಹೆಚ್ಚಾಗಿದೆ ಅನ್ನುತ್ತೀರಾ? ಈ ಅಂಶವನ್ನು ಸಧ್ಯ ಪಕ್ಕಕ್ಕಿಟ್ಟು ಯೋಚಿಸೋಣ). ಸಂತಾನ ಹೀನತೆ ಹೊಸ ಯುಗದಲ್ಲಿ ಸವಾಲಾಗಿ ಪರಿಣಮಿಸಿದ್ದರೆ, ವೈದ್ಯಕೀಯ ರಂಗಕ್ಕೆ ಉದ್ಯಮವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿವರ್ಷ ಹೊಸ ಹೊಸ ಸಂತಾನ ಹೀನತೆ ಚಿಕಿತ್ಸಾ ಕೇಂದ್ರಗಳು ಸಂತಾನವಿಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ದಿನೇದಿನೇ ಏರುತ್ತಿದೆ. ಬೆಂಗಳೂರಿನಲ್ಲೇ ಪ್ರತಿಷ್ಠಿತ ಚಿಕಿತ್ಸಾ ಕೇಂದ್ರಗಳಲ್ಲಿ ತಿಂಗಳಿಗೆ ಕನಿಷ್ಠ ತಲಾ 5 ಪ್ರನಾಳ ಶಿಶುಗಳು ಜನ್ಮತಾಳುತ್ತಿವೆ. ಪ್ರತಿಯೊಂದು ಪ್ರನಾಳ ಶಿಶುವಿಗೂ ಕನಿಷ್ಠ ಒಂದೂವರೆಯಿಂದ 2 ಲಕ್ಷ ರೂಪಾಯಿಯಷ್ಟು ಖರ್ಚು ತಗಲುತ್ತದೆ. ಆದರೆ ವೈದ್ಯಕೀಯ ಸಾಧನೆಗಳ ಸಹಾಯದಿಂದ ಜೈವಿಕ ತಂದೆ-ತಾಯಿಯಾಗುವವರು, ಭಾವನತ್ಮಕವಾಗಿ, ಲೌಕಿಕವಾಗಿ ಕೂಡ ಉತ್ತಮ ತಂದೆತಾಯಿ ಎನಿಸಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲೇ ಸ್ವಲ್ಪ ಎಡವಟ್ಟಾಗುತ್ತಿರುವುದು ಕಂಡಬರುತ್ತಿದೆ.

ಮೊನ್ನೆ ಒಬ್ಬ ಹಿರಿಯರು ಹೇಳಿದರು. “ಇತ್ತೀಚೆಗೆ DINK ಕುಟುಂಬಗಳು ಹೆಚ್ಚಾಗುತ್ತಿವೆ” ಅಂತ. “ಹಾಗೆಂದರೇನು?” ಅಂತ ಕೇಳಿದೆ. ಅವರು ಹೇಳಿದ್ದು “DINK ಅಂದರೆ Double Income No Kids ಕುಟುಂಬಗಳು” ಅಂತ. ಮಕ್ಕಳು ಬೇಕೋ ಬೇಡವೋ ಎಂಬ ನಿರ್ಧಾರ ವೈಯುಕ್ತಿಕ ಮಟ್ಟದ್ದು. ಅದರಲ್ಲಿ ಮೂರನೇ ವ್ಯಕ್ತಿ ತಲೆಹಾಕುವ ಹಾಗಿಲ್ಲ. ಎಷ್ಟೋ ದಂಪತಿಗಳು ಮದುವೆಗೆ ಮುನ್ನವೇ ತಮಗೆ ಮಕ್ಕಳು ಬೇಡ ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಆದರೆ ಮಕ್ಕಳು ಬೇಕೆಂದು ಬಯಸುವ ತಂದೆತಾಯಿಗಳು ಆಧುನಿಕತೆ ಹಾಗೂ ಆಧುನಿಕ ಜೀವನ ಶೈಲಿಯ ಒತ್ತಡದಿಂದಾಗಿ ಸಾಕಷ್ಟು ಹಣ ಗಳಿಸುತ್ತಿದ್ದರೂ ಮಕ್ಕಳಾಗದೇ ಕೊರಗುವುದು ಹೊಸ ಯುಗದ ಮತ್ತೊಂದು ದುರಂತ ಎನಿಸುತ್ತದೆ.

ಶ್ರೀಮಂತ ಹಾಗೂ ಮಧ್ಯಮ ವರ್ಗದಲ್ಲಿ ಈ ಕಥೆಯಾದರೆ ಬಡ ವರ್ಗದ ಲೆಕ್ಕಾಚಾರಗಳೇ ಬೇರೆ. ಅಲ್ಲಿ ಮದುವೆಯಾದ ಬಳಿಕ ಅಪ್ಪನಾಗುವುದು ಹೆಮ್ಮೆಯ ವಿಷಯ ಅಲ್ಲವೇ ಅಲ್ಲ. ಮಕ್ಕಳನ್ನು ‘ಹುಟ್ಟಿಸುವುದು’ ಅನಿವಾರ್ಯವೇ ಹೊರತು ಆಯ್ಕೆಯಲ್ಲ. ಹೆಚ್ಚು ಹೆಚ್ಚು ಮಕ್ಕಳಾದಷ್ಟೂ ಕುಟುಂಬದ ಬಡತನ ದೂರವಾಗುತ್ತದೆ ಎಂಬ ಭ್ರಮೆ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಅಪ್ಪನ ಮೇಲಿರುವುದರಿಂದ ಆತನ ಮೊದಲ ಮಗನ ವಯಸ್ಸು 16 ವರ್ಷಗಳಿದ್ದರೆ ಕೊನೆಯ ಮಗಳಿಗೆ 8 ತಿಂಗಳೂ ಪೂರೈಸಿರುವುದಿಲ್ಲ. ಇವರೂ ಕೇವಲ ಜೈವಿಕ ತಂದೆಯರು. ದ್ವಾಪರ ಯುಗದ ಜೈವಿಕ ಅಪ್ಪಂದಿರ ಹಾಗೆ. ಕಾರಣಗಳು ಬೇರೆ ಬೇರೆ ಇದ್ದರೂ ಪರಿಣಾಮ ಮಾತ್ರ ಒಂದೇ. ಒಂದು ಮಗುವಿಗೆ ಅಪ್ಪನಾಗುವುದೇ ಕಷ್ಟವಿರುವಾಗ ಹತ್ತು ಮಕ್ಕಳಿಗೆ ಒಬ್ಬನೇ ವ್ಯಕ್ತಿ ಅದ್ಹೇಗೆ ಸಮರ್ಥ ತಂದೆಯಾಗಬಲ್ಲ? ಹತ್ತು ಮಕ್ಕಳಲ್ಲಿ ಯಾವ ಮಗು ತಾನೆ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಅಂತ ಹೆಮ್ಮೆಯಿಂದ ಹೇಳಬಹುದು?

ಈ ಸಮಸ್ಯೆ ಕೇವಲ ಹತ್ತು ಮಕ್ಕಳಿರುವ ಕುಟುಂಬದಲ್ಲಿಯೇ ಇರಬೇಕು ಎಂದೇನಿಲ್ಲ. ಎಷ್ಟೋ ಉಳ್ಳವರ ಮನೆಗಳಲ್ಲಿಯೇ, ಒಂದೇ ಮಗು ಇರುವ ಕುಟುಂಬದಲ್ಲಿ ಕೂಡ ಆ ಒಂಟಿ ಮಗು ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳುವ ಪರಿಸ್ಥಿತಿಯಿಲ್ಲ.

ಕೆಲ ವರ್ಷಗಳ ಹಿಂದೆ ಜೋಕೊಂದು ಪ್ರಚಲಿತದಲ್ಲಿತ್ತು. ವಿದೇಶದಲ್ಲಿ ತಂದೆಯಾದವನು ಎಷ್ಟು ಬಿಝಿಯಾಗಿರುತ್ತಾನೆಂದರೆ, ವೀಕೆಂಡ್ ಗಳಲ್ಲಿ ಆತ ಮನೆಗೆ ಬಂದಾಗ ಆತನ ಮಗ ತನ್ನ ತಾಯಿಗೆ “ಮಮ್ಮಿ, ಸಮ್ ಅಂಕಲ್ ಹ್ಯಾಸ್ ಕಮ್” ಎಂದು ಹೇಳುತ್ತಾನೆ ಅಂತ. ಆದರೆ ಈ ಜೋಕ್ ಇದೀಗ ನಮ್ಮಲ್ಲಿನ  ಸಾಕಷ್ಟು ಕುಟುಂಬಗಳಲ್ಲಿ ಘಟಿಸಿಬಿಡುವ ಆತಂಕ ಎದುರಾಗಿದೆ. ಮಗು ತನ್ನ ತಂದೆಗೆ ಅಂಕಲ್ ಎಂದು ಹೇಳದಿದ್ದರೂ, ತಂದೆ ಮಕ್ಕಳ ನಡುವಿನ ಸಂಬಂಧದ ರೇಷ್ಮೆ ದಾರಗಳು ಲಡ್ಡಾಗುತ್ತಿವೆ.

ಅಪ್ಪನಾದನವ ಪಾತ್ರ, ಜವಾಬ್ದಾರಿ, ಹರವು, ವಿಸ್ತಾರ, ಇಂದು ತೀರ ಹೆಚ್ಚಿದೆ. ಅಪ್ಪ ಇಂದು ಕೇವಲ ಅಪ್ಪನಾಗಿ ಉಳಿಯದೇ ಅಮ್ಮನ ಪಾತ್ರವನ್ನೂ ನಿರ್ವಹಿಸುತ್ತಿದ್ದಾನೆ. ಹಾಗೆ ನೋಡಿದರೆ, ಅಮ್ಮನಾದವಳು ಕೂಡ ಅಪ್ಪನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಬಿಡಿ. ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಭಾಗಶಃ ಎಲ್ಲ ಅಮ್ಮಂದಿರಿಗೂ ಅಪ್ಪನ ಪಾತ್ರವನ್ನು ನಿರ್ವಹಿಸುವದು ಸಾಧ್ಯ. ಆ ಅರ್ಹತೆ, ಸಾಮರ್ಥ್ಯ, ಅಡಾಪ್ಟೆಬಿಲಿಟಿ, ಎಲ್ಲ ಸ್ತ್ರೀಯರಲ್ಲಿದೆ. ಆದರೆ ಪುರುಷರಲ್ಲಿ? ಪುಟ್ಟ ಮಗುವೊಂದರ ಚಡ್ಡಿ ಬದಲು ಮಾಡಬೇಕೆಂದರೂ ಹಲವು ಅಪ್ಪಂದಿರಿಗೆ ಕುತ್ತಿಗೆಗೆ ಬಂದು ಬಿಡುತ್ತದೆ. ಇನ್ನು ಮಗುವಿಗೆ ಒಂದು, ಎರಡು ಮಾಡಿಸುವುದಂತೂ ದೂರ ಉಳಿಯಿತು. ಎಲ್ಲ ಅಪ್ಪಂದಿರೂ ಇದನ್ನು ಮಾಡಲೇಬೇಕೆಂದಿಲ್ಲ. ಹಲವರಿಗೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರಲಾರದು.

ಆದರೆ ಅಪ್ಪನಾದವನು ಅಮ್ಮನಾಗುವುದರಲ್ಲಿ ಇರುವ ಸುಖವೇ ಬೇರೆ. ಆ ಮಜವನ್ನು ಅನುಭವಿಸಿದ ಅಪ್ಪಂದಿರಿಗೇ ಗೊತ್ತು, ಆ ಸುಖ ಎಂತಹುದೆಂದು. ಮಕ್ಕಳಿಗೆ ಇನ್ಶೂರೆನ್ಸ್ ಮಾಡಿಸುವುದು, ನೋಟ್ ಪುಸ್ತಕ, ಪೆನ್ನು, ಪಾಟಿಚೀಲ (ಈಗಿನ ಮಕ್ಕಳು ಪಾಟಿ ಬಳಸದೇ ಇರುವುದರಿಂದ ಸ್ಕೂಲ್ ಬ್ಯಾಗ್ ಅನ್ನೋಣವೇ?), ಹೊತ್ತಿಗೆ ಸರಿಯಾಗಿ ಊಟ, ಬಟ್ಟೆ, ವಸತಿ ಒದಗಿಸಿಬಿಟ್ಟರೆ ಅಲ್ಲಿಗೆ ಅಪ್ಪನ ಜವಾಬ್ದಾರಿ ಮುಗಿದುಹೋಯಿತೆ? ಅನೇಕ ಅಪ್ಪಂದಿರು ಇವಿಷ್ಟನ್ನೇ ತಮ್ಮ ಜವಾಬ್ದಾರಿಯೆಂದು ತಿಳಿದುಕೊಂಡಿರುವುದು ಆಘಾತಕಾರಿ. ಮಗು ಒಂದಾ ಮಾಡಿದರೆ, ಆರಾಮವಾಗಿ ಟಿವಿ ನೋಡುತ್ತ, ಚಿಪ್ಸ್ ಮೆಲ್ಲುತ್ತ ಕುಳಿತಿರುವ ಗಂಡ, ಹೆಂಡತಿಯನ್ನು ಕರೆದು “ನೋಡೇ, ಪುಟ್ಟ ಒಂದಾ ಮಾಡಿದೆ. ಒರಸೂ ಒಂಚೂರು” ಎಂದು ಹೇಳುವುದು, ಹಾಗೆಯೇ ಅಡಿಗೆ ಮನೆಯಲ್ಲಿ ದುಡಿದುಡಿದು ಹೈರಾಣಾಗಿರುವ ಹೆಂಡತಿ ಒದ್ದೆ ಕೈಯನ್ನು ಒರೆಸಿಕೊಳ್ಳುತ್ತ ಬಂದು ಪುಟ್ಟನ ಒಂದಾ ಒರೆಸಿ, ಚಡ್ಡಿ ಬದಲಿಸುವುದು – ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಮಕ್ಕಳಿಗೆ ಸ್ನಾನಮಾಡಿಸುವುದು, ತುತ್ತು ತಿನ್ನಿಸುವುದು, ತಲೆ ಬಾಚುವುದು, ಬ್ರಷ್ ಮಾಡಿಸುವುದು, ಎಲ್ಲವೂ ತಾಯಿಯೇ. ಆದರೆ ವೈದ್ಯರ ಪ್ರಕಾರ ಮಗುವಿನ ಬೆಳವಣಿಗೆಯಲ್ಲಿ ‘ಸ್ಪರ್ಶ’ ಮಹತ್ವದ ಪಾತ್ರವಹಿಸುತ್ತದೆ. ಈ ಸ್ಪರ್ಶವೇ ವಾಸ್ತವವಾಗಿ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಪ್ರೀತಿಯಿಂದ ಮಗುವನ್ನು ಸ್ಪರ್ಶಿಸಿದಾಗ ಸ್ವಾಭಾವಿಕವಾಗಿಯೇ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯಮಾಡಿದಂತಾಗುತ್ತದೆ. ಮಗುವನ್ನೇ ಸ್ಪರ್ಶಿಸದಿರುವ ತಂದೆ ಯಾವುದೇ ರೀತಿಯಲ್ಲಿಯೂ ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಾರ. ಆತ ಸಮಾಜದಲ್ಲಿ ಓರ್ವ ಜವಾಬ್ದಾರಿಯುತ ಅಪ್ಪ ಎನಿಸಿಕೊಳ್ಳಬಹುದು. ಆದರೆ ಮಗುವಿನ ಮನಸ್ಸಿನ ಮೂಲೆಯಲ್ಲೆಲ್ಲೋ ಅಪ್ಪನ ಕುರಿತಂತೆ ಒಂದು ಅಂತರ ಉಳಿದುಕೊಂಡುಬಿಡುತ್ತದೆ. ಈ ಅಂತರವೇ ಮುಂದೆ ಮಗ ದೊಡ್ಡವನಾಗಿ ಕಾಲೇಜು ಮೆಟ್ಟಿಲೇರಿದಾಗ ಸ್ಲಾಮ್ ಬುಕ್ ಗಳ ‘ಮೈ ಎನಿಮಿ’ ಕಾಲಂನಲ್ಲಿ ‘ಮೈ ಫಾದರ್’ ಎಂದು ತುಂಬುವಂತೆ ಮಾಡುತ್ತದೆ. ಹೀಗಾಗಿ ಅಪ್ಪನಿಗೆ ಅಗತ್ಯ ಇರಲಿ, ಇಲ್ಲದಿರಲಿ ಆತ ತಾಯಿಯ ಪಾತ್ರವನ್ನೂ ನಿರ್ವಹಿಸಿದರೆ ಮಗು ನಿಜವಾಗಿಯೂ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳಬಹುದು.

ಈ ಹಿಂದೆ ಅಪ್ಪ ನಿಜವಾಗಿಯೂ ಭಯ ಹುಟ್ಟಿಸುವ, ಶಿಕ್ಷಿಸುವ, ತಪ್ಪು ಮಾಡಿದಾಗ ನಾಲ್ಕು ಬಾರಿಸುವ, ತನ್ನ ಮಗನನ್ನೇ ‘ಮಂಗ್ಯಾನ ಮಗನೇ’ ಎಂದು ಬೈಯುವುದುಕ್ಕಷ್ಟೇ ಸೀಮಿತನಾಗಿದ್ದ. ಆದರೆ ಇದನ್ನೆಲ್ಲ ಮಾಡುತ್ತಿದ್ದ ಅಪ್ಪ ಒಳಗಿನಲ್ಲಿ ಕರುಣಾಮಯಿಯೇ ಆಗಿರುತ್ತಿದ್ದ. ಸಡಿಲ ಬಿಟ್ಟರೆ ಎಲ್ಲಿ ಮಗ ಹಾಳಾಗಿಬಿಡುತ್ತಾನೋ ಎಂಬ ಆತಂಕ ಅಪ್ಪನನ್ನು, ಸದಾ ಗಂಟು ಮೂತಿ ಹಾಕಿಕೊಂಡು, ಒಂದು ಕೈಯಲ್ಲಿ ಬರಲು ಮತ್ತೊಂದು ಕೈಯಲ್ಲಿ ಮಗನ ಪ್ರೋಗ್ರೆಸ್ ರಿಪೋರ್ಟ್ ಹಿಡಿದುಕೊಂಡು ಮಗ ಮನೆಗೆ ಬಂದಕೂಡಲೆ ಆತನಿಗೆ ಹೊಡೆಯಲು ಸನ್ನದ್ಧನಾಗಿಯೇ ನಿಂತಿರುವಂತೆ ಮಾಡುತ್ತಿತ್ತು. ಕುಂ. ವೀರಭದ್ರಪ್ಪನನವರ ಆತ್ಮಕಥೆ ‘ಗಾಂಧಿ ಕ್ಲಾಸು’ ನಲ್ಲಿ ಅವರು ತಮ್ಮ ತಂದೆಯನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆಂದರೆ, ಆ ತಂದೆ ಹಿಂದಿನ ಕಾಲದ ಎಲ್ಲ ತಂದೆಯರ ಪ್ರತಿನಿಧಿಯಂತೆ ನಮಗೆ ತೋರುತ್ತಾರೆ. ಕುಂವಿ ತಂದೆಯ ಬಗ್ಗೆ ನಮಗೆ ನಿಜಕ್ಕೂ ಗೌರವ ಭಾವನೆ ಮೂಡತ್ತದೆ. ಹೊಡೆಯುವ, ಶಿಕ್ಷಿಸುವ ತಂದೆಯನ್ನೇ ಮುಂದೆ ಮಗ ದೊಡ್ಡವನಾದ ಮೇಲೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅಪ್ಪ ತನ್ನ ಒಳ್ಳೆಯದಕ್ಕಾಗಿಯೇ ಹೀಗೆ ಮಾಡಿದ್ದು ಎಂದು ಮಗನಿಗೂ ಗೊತ್ತಿರುತ್ತಿತ್ತು. ಮನೆಯಲ್ಲಿ ನಾಲ್ಕು ಮಕ್ಕಳಿದ್ದರೆ ನಾಲ್ಕೂ ಮಕ್ಕಳಿಗೆ ಒಟ್ಟಿಗೆ ಒಂದೇ ಬಣ್ಣದ ಜವಳಿ ತೆಗೆದುಕೊಂಡು ಬಂದು, “ಸ್ವಲ್ಪ ದೊಡ್ಡದಾಗಿಯೇ ಹೊಲಿಯಪ್ಪ. ಬೆಳೆಯುವ ಹುಡುಗರು” ಎಂದು ಸಿಂಪಿಗೆ ಹೇಳಿ ಅಸಡ್ಡಾಳ ದೊಗಳೆ ಚಡ್ಡಿಗಳನ್ನು ಹೊಲಿಸಿಕೊಂಡು ಬರುತ್ತಿದ್ದ ಅಪ್ಪ, ಅಂದಿನ ಮಕ್ಕಳಿಗೆ ಅಚ್ಚುಮೆಚ್ಚಿನವನಾಗಿರುತ್ತಿದ್ದ. ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ಹತ್ತನೇ ಕ್ಲಾಸಿನ ಹುಡುಗ ತಂದೆಯ ಕ್ಷೌರದಲಗನ್ನು ಬಳಸಿದಾಗ ತಂದೆ ಮಗನನ್ನು “ಓಹೋ ದೋಡ್ಡೋವ್ನಾಗಿ ಬಿಟ್ಯೇನೋ…ಕತ್ತೆ ಭಡವ” ಎಂದು ಬೈಯ್ಯುತ್ತ ಕೋಲು ತೆಗೆದುಕೊಂಡು ಮಗನಿಗೆ ಬಾರಿಸುತ್ತಾನೆ. ಆದರೆ ಅಂತಹ ತಂದೆಯೇ ಮುಂದೆ ಅದೇ ಮಗನಿಗೆ ಆತ್ಮೀಯ ಗೆಳೆಯನಾಗುತ್ತಾನೆ.

ಆದರೆ ವಿಚಿತ್ರ ನೋಡಿ, ಇಂದು ಮಗುವಿಗೆ ಎಲ್ಲ ಸೌಲಭ್ಯಗಳನ್ನು ತಂದುಕೊಡುವ ಅಪ್ಪಂದಿರ ‘ಉದಯ’ವಾಗಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಏರಿದೆ. ಅಲ್ಲಿ ಸೇರಿಸಲ್ಪಡುತ್ತಿರುವ ಅಪ್ಪ-ಅಮ್ಮಂದಿರ ಸಂಖ್ಯೆಯೂ ಏರುತ್ತಿದೆ. ವೃದ್ಧಾಶ್ರಮದಲ್ಲಿರುವ ಒಬ್ಬೊಬ್ಬ ಅಜ್ಜ-ಅಜ್ಜಿಯರ ಕಥೆ ಕೇಳಿದರೆ ಮನುಷ್ಯತ್ವ, ಮಾನವೀಯತೆಯ ಬಗ್ಗೆ ನಂಬಿಕೆಯೇ ಹೊರಟುಹೋಗುತ್ತದೆ. ಹಾಗಾದರೆ ಇಂತಹ ಸ್ಥಿತಿ ಏಕೆ ನಿರ್ಮಾಣವಾಗಿದೆ? ಲಕ್ಷ ಲಕ್ಷ ಗಳಿಸುವ ಮಕ್ಕಳು ಏಕೆ ತಮ್ಮ ಅಪ್ಪನನ್ನೋ-ಅಮ್ಮನನ್ನೋ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ? ಇದು ಮಕ್ಕಳನ್ನು ಸರಿಯಾಗಿ ಬೆಳೆಸದಿರುವ ಪರಿಣಾಮವೇ? ಅಥವಾ ವೃದ್ಧಾಶ್ರಮಗಳು ಈ ಕಾಲದ, ಬದಲಾದ ಸನ್ನಿವೇಶದ, ಬದಲಾದ ಪರಿಸ್ಥಿತಿಯ ಅನಿವಾರ್ಯ ಅವಿಭಾಜ್ಯ ಅಂಗಗಳೇ?

ಒಂದಂತೂ ಸತ್ಯ. ಅಪ್ಪನ ಜವಾಬ್ದಾರಿ ಕೇವಲ ಭೌತಿಕ ಸಂಗತಿಗಳ ಪೂರೈಕೆಗಷ್ಟೇ ಮುಕ್ತಾಯವಾಗುವುದಿಲ್ಲ. ಒಳಗೆ ಪ್ರೀತಿಯಿಟ್ಟುಕೊಂಡು ಬಾಹ್ಯದಲ್ಲಿ ಬರಲು ಹಿಡಿದು ಶಿಕ್ಷಿಸುವುದು ಇಂದಿನ ಪರಿಸ್ಥಿತಿಗೆ ಹೊಂದುವುದೂ ಇಲ್ಲ. ಏಕೆಂದರೆ ಮಕ್ಕಳ ರಕ್ಷಣೆಗೆಂದು ಮಾನವ ಹಕ್ಕು ಆಯೋಗಗಳಿವೆ, ಸರ್ಕಾರೇತರ ಸಂಸ್ಥೆಗಳಿವೆ. ಹಾಗೆಂದು ಹೇಳಿ, ಮಗ ಹಟ ಮಾಡುತ್ತಾನೆಂದು ಅದನ್ನು ಸಮಾಧಾನಪಡಿಸಲೊಸುಗ ಬೇಕುಬೇಕೆಂದಾಗಲೆಲ್ಲ ಪಿಝಾ ತಿನ್ನಿಸಿದರೆ, ಆತ 12-13 ವರ್ಷಕ್ಕೆಲ್ಲ 70 ಕೆಜಿ ತೂಗುತ್ತಾನೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ಅಪ್ಪನೇ ಹೊರಬೇಕಾಗುತ್ತದೆಯೇ ಹೊರತು, ಮಾನವ ಹಕ್ಕುಗಳ ಆಯೋಗ ಅಥವಾ ಸರ್ಕಾರೇತರ ಸಂಸ್ಥೆ ಸಹಾಯಕ್ಕೆ ಬರುವುದಿಲ್ಲ! ಇಂದಿನ ಕಾಲದ ಅಪ್ಪಂದಿರು ತೀರ ಸೂಕ್ಷ್ಮವಾಗಿ ತಮ್ಮ ಕಾಯಿಯನ್ನು ಚಲಿಸಬೇಕಾಗಿದೆ. ಒಂದು ಗುಲಗುಂಜಿ ಬಿದ್ದರೆ ಹೆಚ್ಚಾಯಿತು, ತೆಗೆದರೆ ಕಮ್ಮಿಯಾಯಿತು ಎಂಬಂತಹ ಪರಿಸ್ಥಿತಿ. ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನಭವತಿ ಎಂಬುದು ಮಕ್ಕಳಿಗೂ ಗೊತ್ತು. ಹೀಗಾಗಿ ಅಪ್ಪನ ಮೇಲೆ ಗೂಬೆ ಕೂರಿಸುವುದು ಸುಲಭ ಕೂಡ. ಬೆಳೆದ ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದರೆ, ಮುದುಕರಾದಾಗ ತಮ್ಮ ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದೆಂದರೆ, ಇಂದಿನ ಅಪ್ಪ ‘ದೇವೋಭವ’ ಆಗಬೇಕೆಂದೇನಿಲ್ಲ. ಬರೀ “ಅಪ್ಪ” ನಾದರೆ ಅಷ್ಟೇ ಸಾಕು.

(ಈ ಬಾರಿಯ ಉತ್ಥಾನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ)

Advertisements

13 thoughts on “ಅಪ್ಪ ಬದಲಾಗಿದ್ದಾನೆ…!!!

  1. Sughosh avare, tumba chennagide.

    heNNu makkalannu keLi appana bagge ondu raatri mugiyuva kathe heLthaare. vruddhashramakke hogo vayu vruddhara bagge nanage kaaLaji ide, avaru kelavu sala nanna maga olle udyogakke serali, olle maneya heNNannu maduveyaagali, tanna maga haagagali ennuva hambaladalli magane nanage vayassada mele anna haakde idre oditeeni nodu katte badava antha byyodanna marthirtaareno ashte.

    On the lighter vein – Nivedita ranta amma iro tanaka dayananda swamy gaLu ellri appana sukha kaaNodu (I like Nivedita’s role BTW, the bold and beautiful)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s