ಶ್ಯಾಮ ಮಂಗಳಮುಖಿ ಮುಖಾಮುಖಿ

ಶ್ಯಾಮ ಒಬ್ಬ ಡೆವಲಪರ್. ಕಳೆದ ಹಲವಾರು ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿದ್ದಾನೆ.

ಆತ ಈಗಾಗಲೇ ಕೋಟಿಗಟ್ಟಲೇ ಗಳಿಸಿದ್ದಾನೆ, ಆತನ ಬಳಿ ಲ್ಯಾಂಡ್ ಕ್ರೂಸರ್ ಕಾರಿದೆ. ಸ್ವಂತಕ್ಕೆಂದು ಸ್ವಿಮಿಂಗ್ ಪೂಲ್ ಇರುವ 80*100 ಅಳತೆಯ ಬಂಗಲೆಯಿದೆ, ಕೈ ಹಾಗೂ ಕೊರಳನ್ನು ತೂಕಕ್ಕೆ ಹಾಕಿದರೆ ಕನಿಷ್ಠ ಅರ್ಧ ಕೆಜಿ ಬಂಗಾರ ಸಿಗುತ್ತದೆ ಅಂತೆಲ್ಲ ನೀವು ಅಂದುಕೊಳ್ಳಬೇಡಿ. ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿದ್ದಾನೆ ಎಂದ ಮಾತ್ರಕ್ಕೆ ಇವೆಲ್ಲವೂ ಆತನ ಬಳಿ ಖಂಡಿತ ಇಲ್ಲ. ಹಾಗೆಂದು ಹೇಳಿ ಹತ್ತಡಿ ಚದರಳತೆಯ ಅಂಗಡಿಯಲ್ಲಿ ಕುಳಿತು ಆತ ಬಿಝಿನೆಸ್ ಮಾಡುತ್ತಾನೆ ಎಂದೇನೂ ಇಲ್ಲ. ಬೆಂಗಳೂರಿನ ಒಬ್ಬ ಸಾಮಾನ್ಯ ಡೆವಲಪರ್ ಆತ. ಸ್ಪ್ಲೆಂಡರ್ ಬೈಕಿನಲ್ಲಿ ವರ್ಷಕ್ಕೆ 50 ಸಾವಿರ ಕಿ. ಮಿ. ಸುತ್ತಾಡಿ, ವಾರಗಟ್ಟಲೆ ಮನೆಗೆ ಹೋಗದೆ,  ದಿನಕ್ಕೆ ಕನಿಷ್ಠ 16 ರಿಂದ 18 ಗಂಟೆ ಕೆಲಸ ಮಾಡಿದ್ದಾನೆ. ಮಾಡುತ್ತಿದ್ದಾನೆ. ತನ್ನ ಪರಿಶ್ರಮದಿಂದ ಅಪಾರ್ಟಮೆಂಟುಗಳನ್ನು ಕಟ್ಟಿಸಿದ್ದಾನೆ ಹಾಗೂ ಇನ್ನು ಕೆಲವು ಕಡೆ ಪ್ರಾಪರ್ಟಿ ಡೆವಲಪ್ ಮಾಡುತ್ತಿದ್ದಾನೆ. ಆತ ಇತ್ತೀಚೆಗೆ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ತನ್ನದೇ ಜಾಗದಲ್ಲಿ ವಾಣಿಜ್ಯ ಸಂಕೀರ್ಣ (ಕಮರ್ಷಿಯಲ್ ಕಾಂಪ್ಲೆಕ್ಸ್) ವೊಂದನ್ನು ಕಟ್ಟಿಸಿದ. ಕಾಂಪ್ಲೆಕ್ಸ್ ನ ವಾಸ್ತುಶಾಂತಿಗೆಂದು ನನ್ನನ್ನು ಕರೆದಿದ್ದ. ಪುರೋಹಿತರನ್ನು ಕರೆಸಿ ಅಚ್ಚುಕಟ್ಟಾಗಿ ಪೂಜೆ ನೆರವೇರಿಸಿದ್ದ. ಹೋದ ನಾವೆಲ್ಲ ಊಟವಾದ ಮೇಲೂ ಬೆರಳು ಚೀಪುವಷ್ಟು ರುಚಿಕಟ್ಟಾಗಿದ್ದ ಊಟ ಹಾಕಿಸಿದ್ದ.

ಇದು ಮೊದಲ ಭಾಗ.

ಎರಡನೆಯ ಭಾಗ ಹೀಗಿದೆ.

ಎರಡು ದಿನಗಳ ಬಳಿಕ ಶ್ಯಾಮನಿಗೆ ಫೋನ್ ಮಾಡಿದೆ. ನನಗೆ ಸೈಟ್ ಕೊಳ್ಳಬೇಕಿತ್ತು. ಹೀಗಾಗಿ ಆತನೊಡನೆ ಚರ್ಚಿಸಬೇಕಿತ್ತು. “ಖಂಡಿತ ಸಿಗ್ತೀನಿ. ಯಾರೋ ಓಬ್ರಿಗೆ ಹೆದರಿ ನಮ್ಮ ಕಾಂಪ್ಲೆಕ್ಸ್ ನಿಂದ ಓಡಿ ಹೋಗ್ತಿದಿನಿ. ಖಂಡಿತ ಇವತ್ತು ಸಂಜೆ ಇಂತಿಂಥಲ್ಲಿ ಸಿಗ್ತೀನಿ” ಅಂದ. ನನಗೇಕೋ ಹೆದರಿಕೆ ಆಯ್ತು. ಮೊದಲೇ ರಿಯಲ್ ಎಸ್ಟೇಟ್ ಉದ್ಯಮ. ಚದರಡಿ ವ್ಯಾಜ್ಯಕ್ಕೆ ಬೆಂಗಳೂರಿನಲ್ಲಿ ಹೆಣಗಳು ಉರುಳುತ್ತವೆ. ರಿಜಿಸ್ಟ್ರೇಶನ್ ಆದ ಹತ್ತು ನಿಮಿಷದ ಒಳಗೆ ಬ್ರೋಕರ್ ಎಂಬುವವನಿಗೆ ಆತನ ಕಮಿಷನ್ ಹಣ ಬಾರದೇ ಇದ್ದರೆ ಕೆಟ್ಟಾಕೊಳಕು ಭಾಷೆಯ ಪ್ರಯೋಗವಾಗುತ್ತದೆ, ದಿನನಿತ್ಯ ಕೋಟಿಗಟ್ಟಲೆ ಲಂಚದ ಹಣ ಅತ್ತಿಂದಿತ್ತ ಇತ್ತಿಂದತ್ತ ವರ್ಗಾವಣೆಯಾಗುತ್ತದೆ, ಅಂತಹ ವ್ಯಾಪರ ಇದು. ಶ್ಯಾಮನಿಗೇನಾದರೂ ರೌಡಿಗಳ ಕಾಟ ಶುರುವಾಯಿತೆ ಎಂದು ಭಯವಾಯಿತು. ಆದರೆ ತಕ್ಷಣ ಸಮಾಧಾನ ಮಾಡಿಕೊಂಡೆ. ಇರಲಾರದು. ಶ್ಯಾಮ ಸ್ವತಃ ಆರಡಿ ಒಂದಿಂಚು ಇದ್ದಾನೆ. ದೈಹಿಕವಾಗಿ, ಮಾನಸಿಕವಾಗಿ ಪ್ರಬಲ ವ್ಯಕ್ತಿ. ಆದರೆ ಅಷ್ಟೇ ಮೃದು ಕೂಡ. ಎಂದಿಗೂ ಜಿರಳೆ ಹೊಡೆದವನಲ್ಲ. ಸಂಜೆ ಹೇಗೂ ಸಿಗ್ತಾನಲ್ಲ ವಿಚಾರಿಸೋಣ ಎಂದುಕೊಂಡು ಸುಮ್ಮನಾದೆ.

ಸಂಜೆ ಶ್ಯಾಮ ಸಿಕ್ಕ. ಮುಂದಿನದು ಶ್ಯಾಮನ ಮಾತಲ್ಲಿ.

....

ನಾನು ಎರಡು ದಿನ ಪೂಜೆ ಇಟ್ಟುಕೊಂಡಿದ್ದೆ ಕಣೋ. ಶನಿವಾರದ ಪೂಜೆಗೆ ಮಿತ್ರರು ಹಾಗೂ ಬಿಝಿನೆಸ್ ಗೆಳೆಯರನ್ನು ಕರೆದಿದ್ದೆ. ಮಾರನೇ ದಿನ ಅಂದರೆ ಭಾನುವಾರ ಸಂಬಂಧಿಕರನ್ನು ಕರೆದಿದ್ದೆ. ನೀವು ಅಂದು ಅಂದರೆ ಶನಿವಾರ ಗೆಳೆಯರೆಲ್ಲ ಬಂದ ದಿನ ಎಲ್ಲವೂ ಸುಸೂತ್ರವಾಗಿ ನಡೆಯಿತು. ಆದರೆ ಎರಡನೇ ದಿನ ಭಾನುವಾರ ಮಾತ್ರ ವಿಪರೀತ ಹಿಂಸೆ ಅನುಭವಿಸಿಬಿಟ್ಟೆ. ಕಾಂಪ್ಲೆಕ್ಸ್ ನ ಹೊರಗೆ ಶುಭಕಾರ್ಯಕ್ಕೆಂದು ಚಪ್ಪರ ಹಾಕಿಸಿದ್ದೆ, ಇಡೀ ಕಟ್ಟಡಕ್ಕೆ ಲೈಟಿಂಗ್ ಮಾಡಿಸಿದ್ದೆ. ಹೀಗಾಗಿ ಶುಭಕಾರ್ಯವಿದೆ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು. ಭಾನುವಾರ ಬೆಳಿಗ್ಗೆ ಕೆಲ ಹಿಜಡಾಗಳು ಕಾಂಪ್ಲೆಕ್ಸಿಗೆ ಬಂದವರೇ “ಓನರ್ ಎಲ್ಲಿ?” ಎಂದು ನಮ್ಮ ಸೆಕ್ಯುರಿಟಿಯವನ ಹತ್ತಿರ ಕೇಳಿ ನನ್ನ ಬಳಿ ಬಂದು ಹಣಕೊಡುವಂತೆ ಪೀಡಿಸಲಾರಂಭಿಸಿದರು. ಪೂಜೆಯ ಸಮಯದಲ್ಲಿ ಸುಮ್ನೆ ಗೊಂದಲ ಬೇಡ ಎಂದು ನಾನು ನೂರು ರೂಪಾಯಿ ಕೊಡಲು ಹೋದರೆ, ನನ್ನ ಬಳಿಯಿಂದ ಬರೋಬ್ಬರಿ 1500 ರೂಪಾಯಿ ಕಿತ್ತುಕೊಂಡು ಹೊರಟು ಹೋದರು. ದುಡ್ಡು ಹೋದರೆ ಹೋಗಲಿ, ಕಾಟ ತಪ್ಪಿತಲ್ಲ ಎಂದು ಸುಮ್ಮನಾದೆ.

ಕೆಲ ಸಮಯದ ಬಳಿಕ ಪೂಜೆ ಆರಂಭವಾಯಿತು. ಒಬ್ಬೊಬ್ಬರೇ ಸಂಬಂಧಿಕರು ಬರಲಾರಂಭಿಸಿದ್ದರು. ನಾನು ಅಂದು ಕಚ್ಚೆ ಪಂಚೆಯಲ್ಲಿದ್ದೆ. ಪೂಜೆಯ ಗಡಿಬಿಡಿಯಲ್ಲಿದ್ದೆ. ಪುರೋಹಿತರು 120 ಕಿಲೋಮೀಟರ್ ಸ್ಪೀಡಿನಲ್ಲಿ ಮಂತ್ರ ಹೇಳದೆ ಸುಶ್ರಾವ್ಯವಾಗಿ ಮಂತ್ರಗಳನ್ನು ಹೇಳುತ್ತಿದ್ದರು. ನೆಂಟರಿಷ್ಟರ ಮಕ್ಕಳು ಕಾಂಪ್ಲೆಕ್ಸ್ ತುಂಬಾ ಓಡಾಡಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿದ್ದರು. ಇದೇ ಸಮಯದಲ್ಲಿ ಕಾಂಪ್ಲೆಕ್ಸ್ ನ ಹೊರಗೆ ಮತ್ತೆ ಎರಡು ಆಟೋಗಳು ಬಂದು ನಿಂತವು.  ಈ ಬಾರಿ ಆಟೋದಿಂದ ಇಳಿದದ್ದು ಮತ್ತೆ ಆರೇಳು ಹಿಜಡಾಗಳು. ಆದರೆ ಈ ಬಾರಿ ತಂಡ ಮಾತ್ರ ಬದಲಾಗಿತ್ತು. ಬಹುಶಃ ಬೆಳಿಗ್ಗೆ ಬಂದ ತಂಡ ಈ ತಂಡಕ್ಕೆ ಮಾಹಿತಿ ಕೊಟ್ಟಿರಬಹುದು. ಇವರು ನೇರಾನೇರ ಕಾಂಪ್ಲೆಕ್ಸ್ ಗೆ ನುಗ್ಗಿದವರೇ ಪೂಜೆ ನಡೆಯುತ್ತಿದ್ದ ಜಾಗಕ್ಕೆ ಬಂದು ಬಿಟ್ಟರು. ಪುರೋಹಿತರಿಗೆ ಇರಿಸು ಮುರಿಸಾಗಿ “ಸ್ವಲ್ಪ ಆಚೆ ನಿಂತ್ಕೊಳ್ಳ್ರಮ್ಮ, ಇಲ್ಲಿ ಮಡಿಯಿದೆ” ಎಂದರೆ, ಒಬ್ಬ ಹಿಜಡಾ ತನ್ನ ಸೀರೆಯನ್ನು ಮಂಡಿಯವರೆಗೆ ಎತ್ತಿ, “ಏ…ನಿನ್ನ ಕೆಲ್ಸ ನೀ ನೋಡು. ನಮಗೆ ನಮ್ಮ ಕೆಲಸ ಮಾಡ್ಲಿಕ್ಕೆ ಬಿಡು ಆಯ್ತಾ?” ಎಂದು ಎಲ್ಲರೆದುರಿಗೆ ಅಂದ. ಅವರು ಹೇಳಿದ ಹಾಗೆ ಕೇಳದಿದ್ದರೆ ಸೀನ್ ಕ್ರಿಯೇಟ್ ಮಾಡುತ್ತಾರೆ ಎಂದು ನನಗೆ ಗೊತ್ತಾಯಿತು. ಅವರಿಗೆ ತಕ್ಷಣ ಹಣ ಕೊಡೋಣವೆಂದರೆ ನಾನು ಕಂಚೆಪಚ್ಚೆ ಉಟ್ಟಿದ್ದೆ. ನಾಲ್ಕಾಣೆ ಇಟ್ಟುಕೊಳ್ಳಲೂ ಜಾಗವಿರಲಿಲ್ಲ. ಮನೆಯವರೆಲ್ಲ ಯಾವುದೋ ಬೇರೆ ಕೆಲಸದಲ್ಲಿದ್ದರು. ಏನು ಮಾಡಲಿ ತೋಚಲಿಲ್ಲ. ಬಂದ ಸಂಬಂಧಿಕರೆಲ್ಲ ವಿಚಿತ್ರವಾಗಿ ನನ್ನನ್ನೇ ನೋಡುತ್ತಿದ್ದಾರೆ. ಆ ಹಿಜಡಾನ ಸೀರೆ ಮಂಡಿಯಿಂದ ಮತ್ತೂ ಮೇಲೆ ಸರಿದಿದೆ. ಆ ಹಿಜಡಾನ ಸೀರೆ ಮೇಲೆ ಸರಿಯುತ್ತಿದ್ದರೆ ನನ್ನ ಪಿತ್ತ ಕೂಡ ನೆತ್ತಿಗೇರತೊಡಗಿತ್ತು. ಆದರೆ ನಾನು ಏನೂ ಮಾಡುವ ಹಾಗಿರಲಿಲ್ಲ. ಮರ್ಯಾದೆಯ ಪ್ರಶ್ನೆ. ಸಿಟ್ಟು ನುಂಗಿಕೊಳ್ಳಲೇ ಬೇಕಾಯಿತು. ತಕ್ಷಣ ನಮ್ಮ ಸಂಬಂಧಿಕರ ಬಳಿ ಹೋಗಿ “ಯಾರ್ಯಾರ ಹತ್ರ ನೂರ್ನೂರು ರೂಪಾಯಿ ನೋಟಿದ್ಯೋ ಎಲ್ಲಾ ಕೊಟ್ಟು ಬಿಡಿ, ಆಮೇಲೆ ಕೊಡ್ತೀನಿ, ಏನೂ ಅಂದ್ಕೋಬೇಡಿ ಪ್ಲೀಸ್” ಅಂದವನೇ ಹಣ ಸೇರಿಸತೊಡಗಿದೆ. ಪಾಪ ಎಲ್ಲರೂ ತಮ್ಮ ಬಳಿ ಇದ್ದ ನೂರು ಇನ್ನೂರು ರೂಪಾಯಿಗಳನ್ನು ಕೊಡಲಾರಂಭಿಸಿದರು. ನನಗೆ ಈ ಹಿಜಡಾ ದಂಡು ಅಲ್ಲಿಂದ ಹೋಗಿದ್ದರೆ ಸಾಕಿತ್ತು. ಕೊನೆಗೆ ಒಂದೂವರೆ ಸಾವಿರ ರೂಪಾಯಿ ಸಂಗ್ರಹವಾಗಿತ್ತು. ಅಷ್ಟನ್ನು ಎತ್ತಿಕೊಂಡು ಹಿಜಡಾ ದಂಡು ಮಾಯವಾಯಿತು. ನಾನು ನಿಟ್ಟುಸಿರು ಬಿಟ್ಟೆ. ಈ ಗಡಿಬಿಡಿಯಲ್ಲಿ ಯಾರೋ ಸಂಬಂಧಿಕರೊಬ್ಬರು ನಾಲ್ಕು ನೂರು ರೂಪಾಯಿಗಳನ್ನು ಕೊಟ್ಟಿದ್ದರು. ಅವರು ಯಾರೆಂದು ನಾನು ಮುಖ ಕೂಡ ನೋಡಿಲ್ಲ. ಪಾಪ…ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಅವರಿಗೆ ನಾಲ್ಕು ನೂರು ರೂಪಾಯಿ ಟ್ಯಾಕ್ಸ್ ಬಿದ್ದಿದೆ.

 

ವಿಷಯ ಇಲ್ಲಿಗೇ ಮುಗಿದಿದ್ದರೆ ನಾನು ನಿನಗೆ ಇದನ್ನೆಲ್ಲ ಹೇಳುತ್ತಲೇ ಇರಲಿಲ್ಲ. ಇವನ್ನೆಲ್ಲ ನಾನು ತಲೆಗೆ ಹಚ್ಚಿಕೊಳ್ಳುವುದೂ ಇಲ್ಲ. ಆದರೆ ವಿಷಯ ಇಲ್ಲಿಗೇ ಮುಗಿಯಲಿಲ್ಲ. ಮಾರನೇ ದಿನ ಅಂದರೆ ಸೋಮವಾರ ಬೆಳಿಗ್ಗೆ ಪೂಜೆಯ ಎಲ್ಲ ಕೆಲಸ ಮುಗಿಸಿ ನಾನು ಕಾಂಪ್ಲೆಕ್ಸಿನ ಅಳಿದುಳಿದ ಕೆಲಸವನ್ನು ಮುಗಿಸುತ್ತಿದ್ದೆ. ಒಂದೆಡೆ ಕಾಂಪ್ಲೆಕ್ಸ್ ನ ಕೆಲಸ ಮತ್ತೊಂದೆಡೆ ಎರಡು ದಿನಗಳಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ವಿಪರೀತ ಸುಸ್ತಾಗಿತ್ತು. ಆದರೆ ಕೆಲಸ ಮಾಡದೆ ವಿಧಿ ಇರಲಿಲ್ಲ. ಈ ಹೊತ್ತಿನಲ್ಲಿ ಕಾಂಪ್ಲೆಕ್ಸ್ ಎದುರುಗಡೆ ಮತ್ತೆ ಏನೋ ಗಲಾಟೆ ಕೇಳಿಸಿತು. ಮೇಲಿನಿಂದ ನೋಡಿದೆ. ಶಾಕ್ ಆಯಿತು. ಈ ಬಾರಿ ಮತ್ತೆ ಆರೆಂಟು ಜನ ಬೇರೆ ಹಿಜಡಾಗಳು ಬಂದು ನಮ್ಮ ಸೆಕ್ಯುರಿಟಿಯವನಿಗೆ ಓನರ್ ಎಲ್ಲಿ ಎಂದು ಪೀಡಿಸುತ್ತಿದ್ದರು. ಓನರ್ ಇನ್ನೂ ಬಂದಿಲ್ಲ ಎಂದು ಸೆಕ್ಯುರಿಟಿಯವನು ಹೇಳಿದರೂ, ಹಿಜಡಾಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಸೆಕ್ಯುರಿಟಿಯವನು ವಿಧಿಯಿಲ್ಲದೆ ಅವರಿಂದ ತಪ್ಪಿಸಿಕೊಂಡು ನನ್ನ ಬಳಿ ಬಂದ. ನಾನು ಜೇಬಿನಲ್ಲಿದ್ದ – ನನ್ನ ಬಳಿ ಆಗ ಅಷ್ಟೇ ಇದ್ದದ್ದು – 50 ರೂಪಾಯಿಯನ್ನು ಸೆಕ್ಯುರಿಟಿಯವನಿಗೆ ಕೊಟ್ಟು ಅವರನ್ನು ಸಾಗಹಾಕು ಎಂದೆ. ಆದರೆ ಅಷ್ಟರಲ್ಲಿ ನಾನಿದ್ದ ಸ್ಥಳಕ್ಕೇ ಹಿಜಡಾಗಳು ಬಂದಾಗಿತ್ತು. ಬಂದವರೇ “ಆಹಾಹಾ…ಏನ್ ಮಾಮಾ 50 ರೂಪಾಯಿ ಕೊಡ್ತೀಯಾ? ಇಷ್ಟು ದೊಡ್ಡ ಬಿಲ್ಡಿಂಗ್ ಕಟ್ಸಿ ಬರೀ 50 ರೂಪಾಯಿನಾ? ತ್ತಾ..ತ್ತಾ…ಬಿಚ್ಚು ಬಿಚ್ಚು ಕಾಸು…”ಎಂದು ಸೆರಗು ಜಾರಿಸಿ ಕೇಳಲಾರಂಭಿಸಿದರು. ಎದೆಯನ್ನು ತೋರಿಸಿ “ನೋಡೋ…ನೋಡೋ..”ಎಂಬ ಹಿಂಸೆ ಬೇರೆ.  ಇವರ ಕಾಟದಿಂದ ನಾನು ರೋಸಿ ಹೋಗಿದ್ದೆ. ಆದರೆ ಆಗ ನನ್ನ ದೇಹಕ್ಕೆ ಮನಸ್ಸಿಗೆ ಎಷ್ಟು ಸುಸ್ತಾಗಿತ್ತೆಂದರೆ ಅವರೊಡನೆ ಜಗಳವಾಡಲೂ ಎನರ್ಜಿಯಿರಲಿಲ್ಲ. ಹೀಗಾಗಿ ಮೊಬೈಲ್ ನಲ್ಲಿ ಕಾಲ್ ಬಂದಂತೆ ನಟಿಸುತ್ತ ಹೊರಗೆ ಬಂದು ಪಕ್ಕದ ಹೋಟೆಲ್ ನಲ್ಲಿ ಸೇರಿಕೊಂಡೆ. ಹತ್ತು ನಿಮಿಷ ಕಳೆಯಿತು. 15 ನಿಮಿಷ, ಅರ್ಧಗಂಟೆ, ಮುಕ್ಕಾಲು ಗಂಟೆ ಕಳೆಯಿತು. ಸೆಕ್ಯುರಿಟಿಯವನಿಗೆ ಫೋನ್ ಮಾಡುತ್ತಲೇ ಇದ್ದೆ. “ಇಲ್ಲ ಸಾರ್ ಇನ್ನೂ ಹೋಗಿಲ್ಲ. ಇಲ್ಲೇ ಇದಾರೆ. ನಿಮ್ಮನ್ನು ನಾನೇ ಕಳಿಸಿದ್ದು ಅಂತ ನನಗೆ ಹೊಲಸು ಹೊಲಸು ಬಯ್ಯುತ್ತಿದ್ದಾರೆ” ಎಂದ ಸೆಕ್ಯುರಿಟಿಯವ. ನಾನು ಬಿಡಲಿಲ್ಲ. ಸಂಜೆಯಾದರೂ ಸರಿ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೆ ಮತ್ತೆ 5 ನಿಮಿಷದಲ್ಲಿ ಸೆಕ್ಯುರಿಟಿಯವನು ಫೋನ್ ಮಾಡಿದ. ಈ ಬಾರಿ ಅವನು ಅಳುತ್ತಿದ್ದ. ಅವನು ಹೇಳಿದುದನ್ನು ಕೇಳಿ ನನಗೆ ಅರಗಿಸಿಕೊಳ್ಳಲಾಗಲಿಲ್ಲ. ನನ್ನನ್ನು ಆ ಸೆಕ್ಯುರಿಟಿಯವನೇ ಹೊರಗೆ ಕಳಿಸಿದ್ದಾನೆ ಎಂದು ಮೊದಲು ಸೆಕ್ಯುರಿಟಿಯವನಿಗೆ ಬಯ್ದ ಹಿಜಡಾಗಳು ನಂತರ ಸೆಕ್ಯುರಿಟಿಯವನ ‘ಕೆಳಗಿನದನ್ನು’ ಗಟ್ಟಿಯಾಗಿ ಒತ್ತಿ, ತಮ್ಮ ‘ಮೇಲಿನದನ್ನು’ ಅವನ ಬಾಯಲ್ಲಿ ಹಾಕಿ ಎಲ್ಲರೆದುರೇ ಹಿಂಸಿಸಿದ್ದರು. ಈ ಆಘಾತದಿಂದ ಪಾಪ ಸೆಕ್ಯುರಿಟಿ ಗಾರ್ಡ್ ತತ್ತರಿಸಿ ಹೋಗಿದ್ದ. ನಾನು ಕಾಂಪ್ಲೆಕ್ಸ್ ನತ್ತ ಓಡಿ ಹೋದೆ. ಆಗಲೆ ಹಿಜಡಾಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಉಳಿದ ಕೆಲಸಗಾರರು ಅಳುತ್ತಿದ್ದ ಸೆಕ್ಯುರಿಟಿ ಗಾರ್ಡ್ ಗೆ ಸಮಾಧಾನ ಹೇಳುತ್ತಿದ್ದರು. ನನಗೆ ಕೋಪ ತಡೆಯಲಾಗಲಿಲ್ಲ. ಆದರೆ ಆಗಬಾರದ್ದೆಲ್ಲ ಆಗಿ ಹೋಗಿತ್ತು. ತಕ್ಷಣ ನೈಟ್ ಶಿಫ್ಟ್ ನ ಸೆಕ್ಯುರಿಟಿ ಗಾರ್ಡ್ ಗೆ ಕೂಡಲೇ ಬರುವಂತೆ ಫೋನ್ ಮಾಡಿ. ಅಳುತ್ತಿದ್ದ ಸೆಕ್ಯುರಿಟಿ ಗಾರ್ಡ್ ನನ್ನು ಮತ್ತೊಬ್ಬರ ಜೊತೆಯಲ್ಲಿ ಮನೆಗೆ ಕಳಿಸಿಕೊಟ್ಟೆ.

ಇನ್ನು ಮೇಲೆ ನಿರ್ಧರಿಸಿದ್ದೇನೆ. ಈ ತಂಡ ಮತ್ತೆ ಬಂತೆಂದರೆ ನಾನು ಮೊದಲು ಹೊರಗೆ ಬಂದು ಇವರನ್ನು ಕರೆದುಕೊಂಡು ಬಂದಿರುವ ಆಟೋದವನ ಕೊರಳ ಪಟ್ಟಿ ಹಿಡಿದು ನಾಲ್ಕು ತದಕಿ, ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋಗುತ್ತೇನೆ. ಆಗ ಬುದ್ಧಿ ಬರುತ್ತದೆ.

ಆದರೆ ವಿಪರ್ಯಾಸ ನೋಡು. ಇದೇ ಹಿಜಡಾಗಳ ಬಗ್ಗೆ ನನಗೆ ಮೊದಲಿನಿಂದಲೂ ಸಾಫ್ಟ್ ಕಾರ್ನರ್ ಇದೆ. ಕೈಲಾದಗಲೆಲ್ಲ ಅವರಿಗೆ ಸಹಾಯ ಮಾಡಿದ್ದೇನೆ. ನನ್ನ ಕಾರಲ್ಲಿ ನಾನು ಯಾವತ್ತೂ ಒಂದಿಷ್ಟು ಚಿಲ್ಲರೆ ಇಟ್ಟಿರುತ್ತೇನೆ. ಅದು ಕೇವಲ ವೃದ್ಧ ಭಿಕ್ಷುಕರಿಗೆ ಹಾಗೂ ಹಿಜಡಾಗಳಿಗೆ ಮೀಸಲು. ಅವರಿಗೆ ಎಲ್ಲರಂತೆ ಗೌರವಯುತವಾಗಿ ಬಾಳುವ ಹಕ್ಕಿದೆ ಎಂದು ನಂಬಿರುವವನು ನಾನು. ಅವರ ಹಕ್ಕುಗಳನ್ನು ಬೆಂಬಲಿಸಿ ಮಾತನಾಡುತ್ತೇನೆ. ಆದರೆ ನೋಡು ನನಗೆ ಸಿಕ್ಕಿದ್ದು ಮಾತ್ರ ಇದು. ನಾನು ಈ ಕಾಂಪ್ಲೆಕ್ಸ್ ಕಟ್ಟಲು ದುಡಿದ ಪರಿ ನನಗಷ್ಟೇ ಗೊತ್ತು. ಈ ಕಾಂಪ್ಲೆಕ್ಸ್ ಗಾಗಿ ನನ್ನ ಬೈಕ್ ಮಾರಿದ್ದೇನೆ, ಕಾರ್ ಮಾರಿದ್ದೇನೆ. ಪ್ರತಿ ಪೈಸೆ, ಹೌದು ಪೈಸೆ, ರೂಪಾಯಿಯಲ್ಲ, ಅದರ ಲೆಕ್ಕವಿಟ್ಟಿದ್ದೇನೆ. ಈ ಹೊತ್ತಿಗೂ ನನ್ನ ಮೇಲೆ ಕೋಟಿಗಟ್ಟಲೆ ಸಾಲವಿದೆ. ಆದರೆ ಇದೆಲ್ಲ ಯಾರಿಗೂ ಕಾಣುವುದಿಲ್ಲ. ಇಷ್ಟೆಲ್ಲ ಆಗಿದ್ದರೂ ಹಿಜಡಾಗಳ ಮೇಲಿನ ನನ್ನ ಸಾಫ್ಟ್ ಕಾರ್ನರ್ ಹೋಗಿಲ್ಲ. ಏಕೆಂದರೆ ಅವರ ಈ ಸ್ಥಿತಿಗೆ ನಮ್ಮ ಸಮಾಜ, ಸರ್ಕಾರ, ಪಾಲಿಸಿ ಮೇಕರ್ಸ್, ಅಧಿಕಾರ ಶಾಹಿ, ಹಿಜಡಾಗಳ ಹೆಸರಲ್ಲಿ ದುಡ್ಡು ಮಾಡಿಕೊಳ್ಳುವ ಕೆಲ ಎನ್ ಜಿ ಓ ಗಳು ಕಾರಣರೇ ಹೊರತು ಬೇರಾರೂ ಅಲ್ಲ. ಇಂದಿಗೂ ಹಿಜಡಾಗಳು ಮಂಗಳಮುಖಿಯರೇ. ಆದರೆ, ದಯವಿಟ್ಟು ಭಿಕ್ಷೆಯ ಹೆಸರಲ್ಲಿ ನಿಮ್ಮ ಮಾನವನ್ನು ನೀವೇ ಹರಾಜು ಹಾಕಿಕೊಳ್ಳಬೇಡಿ ಎಂದಷ್ಟೇ ನಾನು ಕೇಳಿಕೊಳ್ಳುವುದು.

—–

ಇಷ್ಟು ಹೇಳಿ ಮುಗಿಸುವಾಗ ಶ್ಯಾಮನಿಗೆ ನಿಜವಾಗಲೂ ದುಃಖವಾಗಿತ್ತು.

ನಮ್ಮ ಸಮಾಜ ಖಂಡಿತವಾಗಿಯೂ ಹಿಜಡಾಗಳಿಗೆ ಗೌರವಯುತವಾದ ಬಾಳು ಬದುಕಲು ಅನುವು ಮಾಡಿಕೊಡುತ್ತಿಲ್ಲ. ಚಿತ್ರರಂಗವಂತೂ ಹಿಜಡಾಗಳನ್ನು ಕೀಳು ಮಟ್ಟದ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿರಿಸಿದೆ. ಹಿಜಡಾಗಳ ಪುನರ್ವಸತಿಗೆ ಬೆರಳೆಣಿಕೆಯಷ್ಟು ಸಂಘ ಸಂಸ್ಥೆಗಳು ಮಾತ್ರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಚುನಾವಣೆ ಬಂದಾಗಲೂ ನಮ್ಮ ರಾಜಕಾರಣಿಗಳಿಗೆ ಹಿಜಡಾಗಳು ನೆನಪಾಗುವುದಿಲ್ಲ. ಸಿಗ್ನಲ್ ಗಳಲ್ಲಿ ಹಿಜಡಾ ಬೇಡುತ್ತ ಬಂದರೆ ಮುಖ ಸಿಂಡರಿಸುವವರೇ ಹೆಚ್ಚು. ಎಲ್ಲವೂ ಒಪ್ಪತಕ್ಕ ವಿಷಯವೇ. ಆದರೆ, ಮಂಗಳಮುಖಿಯರೇ, ಸಮಾಜ ನಿಮ್ಮ ಬಗ್ಗೆ ಪ್ರೀತಿ ತೋರಿಸದಿದ್ದರೂ, ನೀವು ಮಾತ್ರ ಸಮಾಜವನ್ನು ಪ್ರೀತಿಸಿ. ನಿಮ್ಮ ನೋವು ಅರ್ಥವಾಗುತ್ತದೆ. ನೀವು ಪಡುವ ಹಿಂಸೆಗೆ ಮರುಗುತ್ತೇವೆ. ಆದರೆ ಪ್ರತಿಯೊಂದು ಮೋಡದ ಹಿಂದೆಯೂ ಬೆಳ್ಳಿಯ ಕಿರಣವಿದ್ದೇ ಇದೆ. ಮೋಡ ಸರಿದು, ಆ ಕಿರಣ ಕಾಣಿಸುವವರೆಗೆ ಶ್ಯಾಮನಂತಹವರ ಬಗ್ಗೆ ಪ್ರೀತಿಯರಲಿ. ನಿಮಗೆ ಗೊತ್ತಿಲ್ಲದ ಅನೇಕ ಶ್ಯಾಮರಿದ್ದಾರೆ. ಈ ರೀತಿಯ ವರ್ತನೆಯಿಂದ ಸಮಾಜ ನಿಮ್ಮ ಬಗ್ಗೆ ಮತ್ತಷ್ಟು ಅಸಹ್ಯಪಡದಂತೆ ನೋಡಿಕೊಳ್ಳಿ. ಬೆಳ್ಳಿಯ ಕಿರಣ ಬೇಗ ಕಾಣಲಿ ಎಂದಷ್ಟೇ ನಾನು ಹಾರೈಸುತ್ತೇನೆ.


 

11 thoughts on “ಶ್ಯಾಮ ಮಂಗಳಮುಖಿ ಮುಖಾಮುಖಿ

    • ಮೊದಲು ಕನ್ನಡ ಪ್ರಭಕ್ಕೆ ಕಳಿಸಿದೆ. ಅವರು ಪ್ರಕಟಿಸಲಿಲ್ಲ. ಆಮೇಲೆ ವಿಜಯ ಕರ್ನಾಟಕಕ್ಕೆ ಕಳಿಸಿದೆ. ಅವರೂ ಪ್ರಕಟಿಸಲಿಲ್ಲ. ಈ ಲೇಖನ ಅವರಿಗೆ ಯಾಕೆ ಸೇರಲಿಲ್ಲ ಅನ್ನುವುದು ಗೊತ್ತಾಗಲಿಲ್ಲ. ನನ್ನ ರಿಮೈಂಡರ್ ಗಳಿಗೂ ಪ್ರತಿಕ್ರಿಯೆ ದೊರೆಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಬ್ಲಾಗ್ ನಲ್ಲಿ ಪ್ರಕಟಿಸಬೇಕಾಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.