ಮುಕ್ತ ಮುಕ್ತದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್

ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.

ಧರ್ಮ ಭಾರತಿ ಎಂಬ ಮ್ಯಾಗಝೀನ್ ನಲ್ಲಿ ನಾನು ಬರೆದ ಲೇಖನವೊಂದಕ್ಕೆ ಸಂಭಾವನೆಯನ್ನು ಎಂಓ ಮಾಡಲಾಗಿತ್ತು. ಅದನ್ನು ಹಿಡಿದುಕೊಂಡು ಅಂಚೆಯಣ್ಣ ನನ್ನ ಮನೆ ಬಾಗಿಲು ತಟ್ಟಿದರು. ಬಾಗಿಲು ತೆರೆಯುತ್ತಲೇ ನನ್ನನ್ನು ನೋಡಿದವರೆ ಎಕ್ಸೈಟ್ ಆಗಿ “ಓಹ್..ಸಾರ್ ನೀವಾ…” ಎಂದು ಮಾತಿಗಾರಂಭಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮಾತಾಡುತ್ತ ನಿಂತುಬಿಟ್ಟರು.

ಚಿಕ್ಕವನಿದ್ದಾಗಿನಿಂದಲೂ ನನಗೆ ಅಂಚೆಯಣ್ಣ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನಿಗೆ ಪತ್ರ ಬರೆಯುವ ಹವ್ಯಾಸ ತುಂಬಾ ಇತ್ತು. ಅದು ನನಗೂ ಹರಿದು ಬಂತು. ಹೊಸವರ್ಷಕ್ಕೆ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್ ಕಳಿಸುವುದು, ಶಾಲೆಯ ಫಲಿತಾಂಶ ಬಂದ ಮೇಲೆ ಅದನ್ನು ನೆಂಟರಿಷ್ಟರಿಗೆ ತಿಳಿಸುವುದು ಹೀಗೆಲ್ಲ ಮೊದಲು ತುಂಬಾ ಪತ್ರ ಬರೆಯುತ್ತಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಪತ್ರ ಬರೆದಿಲ್ಲ. ಕಾರಣ ಸುಲಭ. ಮೊಬೈಲ್ ಬಂದಿದೆ ಅದಕ್ಕೆ. ಇರಲಿ.

ಧಾರಾವಾಹಿ, ಪಾತ್ರಗಳು, ಕಂಟೆಂಟ್ ಎಲ್ಲವನ್ನು ಮಾತನಾಡಿದ ಬಳಿಕ ಅಂಚೆಯಣ್ಣ ಹೇಳಿದರು.

“ಸರ್ ನಿಮಗೊಂದು ರಿಕ್ವೆಸ್ಟ್ ಮಾಡ್ಕೋತಿನಿ. ಬೇಜಾರು ಮಾಡ್ಕೋಬೇಡಿ. ದಯವಿಟ್ಟು ಇದನ್ನ ಸೀತಾರಾಮ್ ಸಾರ್ ಅವರಿಗೂ ಹೇಳಿ” ಅಂದರು.

“ಪರ್ವಾಗಿಲ್ಲ ಹೇಳಿ” ಅಂದೆ.

“ಸರ್, ನೋಡಿ ನಮ್ಮದು ತುಂಬಾ ಹಳೆಯ ಡಿಪಾರ್ಟಮೆಂಟ್. ನಾವು ಪ್ರಧಾನಿ ಬಳಿಯೂ ಹೋಗುತ್ತೇವೆ. ಬಡವನ ಮನೆಗೂ ಹೋಗುತ್ತೇವೆ. ಆದರೆ ನಮ್ಮ ಕಷ್ಟ ಮಾತ್ರ ಹಾಗೇ ಇದೆ. ನಿಮ್ಮ ಸೀರಿಯಲ್ ನಲ್ಲಿ ಪತ್ರ, ಪಾರ್ಸೆಲ್ ಎಲ್ಲ ಹಿಡ್ಕೊಂಡು ಶಂಕರಮೂರ್ತಿ ಮನೆಗೋ, ನಿಮ್ಮ ಮನೆಗೋ ಬರ್ತಾರಲ್ಲ ಆಗ ಅವರ ಕೈಯಲ್ಲಿ ‘ಪೋಸ್ಟ್’ ಅಂತ ಕೂಗ್ಸಿ ಸಾರ್. ‘ಕೊರಿಯರ್’ ಅಂತ ಬೇಡ” ಅಂದರು.

ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಖಂಡಿತ ಸೀತಾರಾಮ್ ಸರ್ ಗೆ ಹೇಳುತ್ತೇನೆ” ಅಂದೆ. ಅಂಚೆಯಣ್ಣ ಖುಷಿಯಾಗಿ ಮುಂದಿನ ಮನೆಗೆ ಪೋಸ್ಟ್ ಹಾಕಲು ಹೋದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಅಂಚೆ ಇಲಾಖೆಯನ್ನು ಖಾಸಗಿಯವರ ಕೈಗೆ ಕೊಡುವ ನಿರ್ಧಾರ ಮಾಡಲು ಹೊರಟಿದೆ. ನಮ್ಮ ರಾಜಕಾರಣಿಗಳ ಚರ್ಮ ನಿಜಕ್ಕೂ ದಪ್ಪ ಅಲ್ವಾ?

4 thoughts on “ಮುಕ್ತ ಮುಕ್ತದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್

  1. ಖಾಸಗಿಯವರ ಕೈಗೆ ಕೊಟ್ರೂ ಪೋಸ್ಟು ಪೋಸ್ಟೇ ಅಲ್ವಾ.

    ಖಾಸಗಿಯವರು ಅದನ್ನು ಲಾಭದಾಯಕವಾಗಿಸಿ ಒಳ್ಳೆ ಸೇವೆ ಕೊಟ್ಟು ನೆಡೆಸುವುದಾದರೆ ಅದು ಸರಿಯೇ.

    ಅಂದಹಾಗೆ ಅಂಚೆಯಣ್ಣನ ವೃತ್ತಿ ಅಭಿಮಾನ ಮೆಚ್ಚುವಂತದ್ದು.

  2. ನಿಜ ನಿಮ್ಮ ಮಾತು. ನಮ್ಮ ರಾಜಕಾರಣಿಗಳು ಸೂಕ್ಷ್ಮಸಂವೇಧನೆಗಳನ್ನು ಕಳೆದುಕೊಂಡಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆಯೆಂದರೆ ಲೋಕಾಯುಕ್ತದ ಕಾರ್ಯವ್ಯಾಪ್ತಿಯ ವಿಸ್ತರಣೆಯಲ್ಲಿ ಆಗುತ್ತಿರುವ ವಿಳಂಬ ಹಾಗು ಕಪ್ಪುಹಣದ ಬಗ್ಗೆ ತಾತ್ಸಾರ ಧೋರಣೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s