ನೀರಿನ ರುಚಿ ಬದಲಾಗಿದೆ

ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದೆ. ನಾನು ಅಲ್ಲಿ ಕಳೆದಿರುವುದು ಸುಮಾರು 22 ವರ್ಷ. ಬೆಳಗಾವಿ ನೀರು ಕುಡಿದು ಬೆಳೆದವನು. ಸದಾ ಸಿಹಿ ಸಿಹಿಯಾಗಿರುತ್ತಿದ್ದ ನೀರು ಈ ಬಾರಿ ಮಾತ್ರ ಯಾಕೋ ಸ್ವಲ್ಪ ಬೇರೆಯಾಗಿದೆ ಅನಿಸಿತು. ರುಚಿಯಲ್ಲಿ ಏನೋ ವ್ಯತ್ಯಾಸ. ಸಿಹಿ ಕಡಿಮೆಯಾದ ಅನುಭವ. ಸ್ನೇಹಿತನ್ನ ಕಾರಣವೇನೆಂದು ಕೇಳಿದೆ, “ಇಲ್ಲೀಮಟ ರಾಕಸ್ಕೋಪ್ ನೀರ್ ಕೊಡ್ತಿದ್ರು. ಈಗ ಚೋವೀಸ್ ತಾಸ್ ಪಾಣಿ (24 ಗಂಟೆ ನೀರು) ಅಂತ ಹೇಳಿ ಹಿಡಕಲ್ ಡ್ಯಾಮ್ ನೀರ್ ಬಿಡಾಕ್ ಹತ್ಯಾರ. ನೀ ಈಗ ಕುಡದದ್ದು ಹಿಡಕಲ್ ಡ್ಯಾಮ್ ನೀರು” ಅಂದ. ಬೆಳಗಾವಿಯಲ್ಲಿ ನೀರು ಸರಬರಾಜು ಖಾಸಗೀಕರಣಗೊಂಡಿದೆ. ಸಧ್ಯಕ್ಕೇನೋ ಚೋವೀಸ್ ತಾಸ್ ಪಾಣಿ ಬರುತ್ತಿದೆ. ಆದರೆ, ನೀರು ಸರಬರಾಜು ಖಾಸಗೀಕರಣಗೊಂಡಿರುವುದರಿಂದ ಮುಂದೆ ಇದೇ ರೀತಿ ನೀರು ಬರುತ್ತದೆಯೆಂಬ ಗ್ಯಾರಂಟಿ ಮಾತ್ರ ಕೊಂಚವೂ ಇಲ್ಲ. ಬೆಳಗಾವಿ ಬದಲಾಗುತ್ತಿದೆ. ಆ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ.