ಈ ಫೋಟೋಗೆ ಕ್ಯಾಪ್ಶನ್ ಕೊಡಿ

ಇವರು ವಿಕಾಸ್ ಗೌಡ. ಲಂಡನ್ ಒಲಂಪಿಕ್ಸ್ ನಲ್ಲಿ ಡಿಸ್ಕಸ್ ಥ್ರೋ ನಲ್ಲಿ ಮೊಟ್ಟಮೊದಲಬಾರಿಗೆ ಫೈನಲ್ ಪ್ರವೇಶಿಸಿದವರು. ಇವರೊಡನೆ ನಾನು ಮಾಡಿದ ಸಂದರ್ಶನ ಇಂದು ಮಧ್ಯಾಹ್ನ ಮೂರು ಗಂಟೆಗೆ ಸಮಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ದಯವಿಟ್ಟು ವೀಕ್ಷಿಸಿ. ಅಂದಹಾಗೆ, ವಿಕಾಸ್ ಎತ್ತರ ಕೇವಲ 6 ಅಡಿ 9 ಇಂಚು. ಅವರೊಡನೆ ನನ್ನ ಫೋಟೊ ಇಲ್ಲಿದೆ.

Jayalalitha hits back…

ಈ ವಿಡಿಯೋವನ್ನು ಬಹುತೇಕ ಎಲ್ಲ ಮಾಧ್ಯಮ ಟ್ಲೈನಿಂಗ್ ಗಳಲ್ಲಿ ಬಳಸಲಾಗುತ್ತದೆ. ನಾನು ಕೂಡ ನನ್ನ ಟ್ರೈನಿಂಗ್ ಕ್ಲಾಸ್ ಗಳಲ್ಲಿ ಇದನ್ನು ಹಲವಾರು ಬಾರಿ ಬಳಸಿದ್ದೇನೆ. ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.

ನಿಂಗೂ ಒಂದ್ ರಾಂಗ್ ಸೈಡು ಅಂತ ಇತ್ತಲ…

ಮೊನ್ನೆಯಷ್ಟೇ ನಡೆದ ಘಟನೆ. ಕಾರು ಹಾಗೂ ಬೈಕಿಗೆ ಆಕ್ಸಿಡೆಂಟ್ ಆಯಿತಂತೆ. ಅಂತಹ ಮಹಾನ್ ಡ್ಯಾಮೇಜ್ ಏನೂ ಆಗಿರಲಿಲ್ಲ, ಆದರೂ ಈಗೋ ವಿಷ್ಯ ತಾನೆ? ಸರಿ, ನ್ಯಾಯ ಪಂಚಾಯತಿಕೆ ಶುರುವಾಯ್ತು. ಜನರು ಸೇರಿದರು. ಅಪಘಾತದಲ್ಲಿ ಕಾರಿನವನು ರಾಂಗ್ ಸೈಡ್ ನಿಂದ ಬಂದು ಗುದ್ದಿದ್ದು ಸ್ಪಷ್ಟವಾಗಿತ್ತು. ಜನ ಕೂಡ ಬೈಕಿನವನನ್ನ ಬೆಂಬಲಿಸಿದರು. ಆದರೆ ಕಾರಿನವ ಭಾರೀ ಕುಳ. ಆತನ ಅಪ್ಪ ಎಕರೆಗಟ್ಟಲೆ ಕಾಫೀ ಎಸ್ಟೇಟಿನ ಮಾಲೀಕ ಬೇರೆ. ಸೋಲೋಪ್ಪಿಕೊಳ್ಳುವುದುಂಟೆ? ವಾದ ಮಾಡಲಾರಂಭಿಸಿದನಂತೆ. ಬೈಕಿನವನು, ಜನರೂ ಪಟ್ಟು ಬಿಡಲಿಲ್ಲ. ಕೊನೆಗೆ ಕಾರಿನ ಕುಳ ಹೇಳಿದ್ದೇನು ಗೊತ್ತೆ?, “ಏನೇ ಆಗ್ಲಿ ಮಾರಾಯಾ, ನಾನು ರಾಂಗ್ ಸೈಡಿಂದ ಬಂದೆ ಅಂದ್ರೆ, ನಿಂಗೂ ಒಂದು ರಾಂಗ್ ಸೈಡು ಅಂತ ಇತ್ತಲ….”

ಭಂ ಭಂ ಭೋಲೆ ಶಂಭೊ ಶಂಕರ….

ಪ್ರತಾಪನಿಗೆ “ನಿಗಳೆ ಪಾರಿತೋಷಕ ಪ್ರಶಸ್ತಿ – 2012”

ನನ್ನೂರು ಕೊಪ್ಪದಲ್ಲಿ ಪ್ರತಿವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ವಿದ್ಯಾನಿಧಿ (ಧನ ಸಹಾಯ) ಹಾಗೂ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಒಂದು ಪ್ರಶಸ್ತಿಯನ್ನು ನಾನು ನೀಡಿದೆ. ಆದರೆ ನನ್ನ ಪ್ರಶಸ್ತಿಯ ಮಾನದಂಡ ಬೇರೆ ಇತ್ತು.

ಕೇವಲ ಅಂಕಗಳು ಬದುಕನ್ನು ರೂಪಿಸುವುದಿಲ್ಲ. ಕೇವಲ ಅಂಕಗಳು ಬದುಕಿನಲ್ಲಿ ಎಲ್ಲವೂ ಅಲ್ಲ ಎಂಬುದು ನನ್ನ ನಂಬಿಕೆ.

ಹೀಗಾಗಿ,  ಎಸ್ಎಸ್ಎಲ್ಸಿ ಅಥವಾ ಪಿಯುಸಿಯಲ್ಲಿ ಕನಿಷ್ಠ  ಶೇ.70 ಅಂಕ ಹಾಗೂ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ (ಪಠ್ಯೇತರ ಚಟುವಟಿಕೆ- ಭಾಷಣ, ಸಂಗೀತ, ಕ್ರೀಡೆ ಇತ್ಯಾದಿ) ತೊಡಗಿಸಿಕೊಂಡಿರುವ ವಿದ್ಯಾರ್ಥಿ/ನಿಗೆ “ನಿಗಳೆ ಪಾರಿತೋಷಕ ಪ್ರಶಸ್ತಿ – 2012” ಹಾಗೂ ರೂ. 501/- ಯೋಜಿಸಿದ್ದೆ. ಈ ಬಾರಿಯ ನಿಗಳೆ ಪಾರಿತೋಷಕ ಪ್ರಶಸ್ತಿಯನ್ನ ಪ್ರತಾಪನಿಗೆ ನೀಡಲಾಗಿದೆ. ಪ್ರತಾಪ ಓದಿನಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಎತ್ತಿದ ಕೈ.

ಆಲ್ ದಿ ಬೆಸ್ಟ್ ಪ್ರತಾಪ್….

ನಿಗಳೆ ಪಾರಿತೋಷಕ ಪ್ರಶಸ್ತಿ – 2012
ಪ್ರತಾಪ್

ಜರ್ನಲಿಸ್ಟ್ ಗಣಪತಿ

ಎಲ್ಲರಿಗೂ ಗಣಪತಿ ಹಬ್ಬದ ಶುಭಾಶಯಗಳು.

ವಿಘ್ನನಿವಾರಕ ಎಲ್ಲರಿಗೂ ಸದ್ಬುದ್ಧಿ ನೀಡಲಿ. ವಿಶೇಷವಾಗಿ ಮಾಧ್ಯಮದವರಿಗೆ!!

ಕೃಪೆ – ರಾಧಿಕಾ ಆನ್ ಲೈನ್

ನಿತ್ಯಾನಂದ ಸಂದರ್ಶನ

ಕೆಲ ತಿಂಗಳ ಹಿಂದೆ ನಿತ್ಯಾನಂದ ಸಂದರ್ಶನ ಮಾಡಿದ್ದೆ. ಅದರ ವಿಡಿಯೋ ಇಲ್ಲಿದೆ.

ಮೂಲವ್ಯಾಧಿಗೂ ನಾಯಿಗೂ ಏನು ಸಂಬಂಧ?

….

ಈ ಘಟನೆ ಅಷ್ಟೇನೂ ಜನರ ಗಮನ ಸೆಳೆಯಲಿಲ್ಲ. ನನ್ನ ಗಮನಕ್ಕೂ ತಡವಾಗಿಯೇ ಬಂತು. ಪೇಪರ್ ಗಳಲ್ಲಿ ಕೂಡ ಓದಿದ ಹಾಗಿಲ್ಲ. ಆಗಿದ್ದಿಷ್ಟು. 

ಕತ್ತಲಾದ ನಂತರ ಬೆಂಗಳೂರಿನ ನಿರ್ಜನ ಪ್ರದೇಶವೊಂದರಲ್ಲಿ ಆಟೋದಲ್ಲಿ ಮೂವರು ಬಂದಿದ್ದಾರೆ. ಬಂದವರೇ ಅಲ್ಲೇ ಮಲಗಿಕೊಂಡಿದ್ದ ನಾಯಿಗೆ ಮಾಂಸದ ತುಂಡು ಎಸೆದಿದ್ದಾರೆ. ಮಾಂಸದ ಆಸೆಗೆ ನಾಯಿ ಅವರ ಹಿಂದೆ ಮುಂದೆ ಸುತ್ತಾಡಿದೆ. ಹಾಗೆಯೇ ನಾಯಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದವರೇ ಅದರ ಕುತ್ತಿಗೆಯನ್ನು ಕಚಕ್ ಅನ್ನಿಸಿದ್ದಾರೆ. ಆದರೆ ಇದನ್ನೆಲ್ಲ ಹತ್ತಿರದಲ್ಲೇ ಇದ್ದ ಕೆಲ ಹುಡುಗರು ನೋಡಿದ್ದಾರೆ. ನಾಯಿ ತಲೆ ಕಡಿದದ್ದನ್ನು ನೋಡಿದ ಹುಡುಗರು ಇವರನ್ನು ಪ್ರಶ್ನಿಸಿದ್ದಾರೆ. ದಿಢೀರ್ ಅಂತ ರಾಡ್ ಎಳೆದ ಅಪರಿಚತರು ಹುಡುಗರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಆದರೆ ಹುಡುಗರೂ ಜಗ್ಗಿಲ್ಲ. ಫೈಟ್ ಗೆ ನಿಂತಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ. ಹುಡುಗರು ಇಬ್ಬರನ್ನು ಹಿಡಿದು ಸರಿಯಾಗಿ ತದಕಿದ್ದಾರೆ. ಕೊನೆಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೋಲಿಸರ ಆಗಮನ, ಆರೋಪಿಗಳ ಬಂಧನ. “ಯಾಕ್ರಪ್ಪಾ ನಾಯಿ ತಲೆ ಕಡದ್ರೀ?” ಅಂತ ಕೇಳಿದರೆ, ಅವರು ಹೇಳಿದ್ದು, “ಪೈಲ್ಸ್ ಇತ್ತು ಸಾರ್, ಬೀದಿ ಬದಿಯ ಡಾಕ್ಟರ್ ನೊಬ್ಬ ನಾಯಿ ನಾಲಿಗೆ ತಿಂದ್ರೆ ಪೈಲ್ಸ್ ವಾಸಿಯಾಗತ್ತೆ ಅಂದ. ಅದಕ್ಕೆ ನಾಯಿ ತಲೆ ಕಡದು ನಾಲಿಗೆ ತೆಗೆಯಲಿಕ್ಕೆ ಹೊರಟಿದ್ವಿ” ಅಂದ.

ಪೈಲ್ಸ್ ಗಾಗಿ ಜನ ಏನೇನು ಮಾಡುತ್ತಾರೆ ಅಂತ….

ಅಂದಹಾಗೆ ನನಗೆ ಕೂಡ ಪೈಲ್ಸ್ ಇದೆ. ಕಳೆದ ಸುಮಾರು 15 ವರ್ಷಗಳಿಂದ ಪೈಲ್ಸ್ ಇದೆ. ಅದರಿಂದ ನಾನು ಪಟ್ಟ ಯಮಯಾತನೆ ಅಷ್ಟಿಷ್ಟಲ್ಲ. ಆದರೆ ಇದೀಗ ಪೈಲ್ಸ್ ಸಂಪೂರ್ಣ ವಾಸಿಯಾಗದಿದ್ದರೂ, ಕಂಟ್ರೋಲ್ ನಲ್ಲಿದೆ. ಪೌಷ್ಟಿಕ ಆಹಾರ, ಹೆಚ್ಚು ನೀರು ಕುಡಿಯುವುದು, ನಾರಿನ ಪದಾರ್ಥ ಸೇವನೆ, ಮಸಾಲೆ ಪದಾರ್ಥ ತಿನ್ನದಿರುವುದು – ಹೀಗೆ ಕೆಲವೇ ಕೆಲವು ಸಿಂಪಲ್ ಪಥ್ಯ ಹಾಗೂ ಕೆಲ ಔಷಧಿಗಳನ್ನು ಬಳಸಿದರೆ ಪೈಲ್ಸ್ ನಿಯಂತ್ರಣದಲ್ಲಿರುತ್ತದೆ. ನಾಯಿ ತಲೆ ಕಡಿಯುವ ಅಗತ್ಯ ಬೀಳುವುದಿಲ್ಲ.

ವಿಧಾನ ಸೌಧ ಕಟ್ಟಿಸಿದ್ದು ಯಾರು?

…..

ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಮಾಧ್ಯಮ ಕಾಲೇಜೊಂದರಲ್ಲಿ ಪಾಠ ಮಾಡಲು ಹೋಗಿದ್ದೆ. ಸಾಕಷ್ಟು ಹೆಸರು ಮಾಡಿರುವ ಮಾಧ್ಯಮ ಕಾಲೇಜು ಅದು. ಪಾಠಕ್ಕಿಂತ ಮೊದಲು ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿದೆ. ಆಗ ನಡೆದ ಘಟನೆ ಇದು.

ನಾನು – “ಇವತ್ತಿನ ನ್ಯೂಸ್ ಪೇಪರ್ ಹೆಡ್ ಲೈನ್ಸ್ ಏನೇನಿದೆ?”

“…………………….(ಯಾರಿಗೂ ಗೊತ್ತಿಲ್ಲ)”

“ಇವತ್ತಿನ ನ್ಯೂಸ್ ಪೇಪರ್ ಓದೀದ್ದೀರಾ?”

“…………………….(ಯಾರಿಗೂ ಗೊತ್ತಿಲ್ಲ)”

“ಸರಿ, ನೀವು ಕೊನೆಯ ಬಾರಿ ನ್ಯೂಸ್ ಪೇಪರ್ ಓದಿ ಎಷ್ಟು ದಿನವಾಗಿದೆ?”

ಈ ಪ್ರಶ್ನೆಗೆ ಅಂತೂ ಇಂತೂ ಮೂರು ದಿನಗಳ ಹಿಂದಿನ ಹೆಡ್ ಲೈನ್ ಅನ್ನು ಹೇಳಿದರು.

“ಆಸ್ಸಾಂ ನಲ್ಲಿ ಯಾಕೆ ಗಲಾಟೆ ನಡೆಯುತ್ತಿದೆ?”

“…………………….(ಯಾರಿಗೂ ಗೊತ್ತಿಲ್ಲ)”

“ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಭಯೋತ್ಪಾದನೆಗೆ ಸಂಬಂಧಿಸಿದ ಬೆಳವಣಿಗೆ ನಡೆದಿದೆ. ಏನದು?”

“…………………….(ಯಾರಿಗೂ ಗೊತ್ತಿಲ್ಲ)”

“ವಿಧಾನ ಸೌಧದ ಕೋಣೆಯೊಂದರಲ್ಲಿ ನಡೆದ ಕಾಮಗಾರಿ ವಿವಾದಕ್ಕೆ ಕಾರಣವಾಗಿದೆ. ಯಾವ ಕಾಮಗಾರಿ?”

“…………………….(ಯಾರಿಗೂ ಗೊತ್ತಿಲ್ಲ)”

“ಆಸ್ಕರ್ ಪಿಸ್ಟೋರಿಯಸ್ ಯಾರು?”

“…………………….(ಯಾರಿಗೂ ಗೊತ್ತಿಲ್ಲ)”

“ಸರಿ ಹೋಗ್ಲಿ, ಬಿಡಿ, ವಿಧಾನ ಸೌಧ ಕಟ್ಟಿಸಿದ್ದು ಯಾರು ಅಂತ ಗೊತ್ತಾ?”

ಈ ಪ್ರಶ್ನೆಗೆ ಅಂತೂ ಇಂತೂ ವಿದ್ಯಾರ್ಥಿನಿಯೊಬ್ಬಳು ಕೈ ಎತ್ತಿದಳು. ಇಷ್ಟಾದರೂ ಗೊತ್ತಲ್ಲ ಎಂದು ನನಗೆ ಖುಷಿಯಾಯಿತು. ಹೇಳಮ್ಮ ಅಂದೆ.

“ಆಸ್ಕರ್ ಪಿಸ್ಟೋರಿಯಸ್”

ನಾನು ಮೂರ್ಛೆ ತಪ್ಪಲಿಲ್ಲ. ಯಾಕೆಂದರೆ, ಇದಕ್ಕಿಂತ ಹೆಚ್ಚು ಪ್ರತಿಭಾನ್ವಿತವರು ಫೀಲ್ಡ್ ನಲ್ಲೇ ಇದ್ದಾರೆ.

ಭೈರಪ್ಪನ್ನ ಕೊಡ್ರಿ, ಕಾರಂತರನ್ನ ಕೊಡ್ರಿ…

.....

ಇತ್ತೀಚೆಗೆ ಪ್ರೈವೆಟ್ ಡಿಟೆಕ್ಟಿವ್ ಸಂಸ್ಥೆಯೊಂದರ ಮುಖ್ಯಸ್ಥರ ಜೊತೆ ಮಾತನಾಡುತ್ತಿದ್ದೆ. ಯಾವ ಕೇಸಸ್ ಹೆಚ್ಚಿಗೆ ಬರುತ್ತಿವೆ ಅಂತ ಕೇಳಿದ್ದಕ್ಕೆ, ಅವರಂದಿದ್ದು, “ಗಂಡ ತನ್ನ ಹೆಂಡತಿಯ ಮೇಲೆ ಸಂಶಯ ವ್ಯಕ್ತಪಡಿಸುತ್ತಾನೆ. ಹೆಂಡತಿ ಗಂಡನ ಮೇಲೆ. ಈ ಪರಿಯ ಕೇಸ್ ಗಳು ವಿಪರೀತವಾಗಿವೆ. ಇನ್ನು ತಂದೆ-ತಾಯಿ ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಾರೆ” ಎಂದರು. ಮಗ ಸಿಗರೇಟು ಸೇದುವುದು, ಮಗಳು ಯಾರದ್ದೋ ಬೈಕಿನಲ್ಲಿ ಜೂಂ ಅಂತ ಹೋಗುವುದನ್ನು ಫೋಟೋ ಸಮೇತ ಮುಂದಿಟ್ಟರೆ, ತಂದೆ-ತಾಯಿಗಳಿಗೆ ಆಕಾಶವೇ ಕಳಚಿ ಬಿದ್ದ ಅನುಭವ.

ಆಗ ಕೆಲ ತಿಂಗಳ ಹಿಂದೆ ಗಂಗಾವತಿ ಪ್ರಾಣೇಶ್ ಹೇಳಿದ್ದು ನೆನಪಿಗೆ ಬಂತು. “ನಿಮ್ಮ ಮಕ್ಕಳ ಕೈಯಾಗ ಭೈರಪ್ಪನ್ನ ಕೊಡ್ರಿ, ಕಾರಂತರನ್ನ ಕೊಡ್ರಿ, ಅಡಿಗರನ್ನ ಕೊಡ್ರಿ. ಕುವೆಂಪು ಓದಸ್ರೀ…ಅಷ್ಟ ಆದ ಮ್ಯಾಲ ಯಾವ ಚಿಂತಿನೂ ಮಾಡಬ್ಯಾಡ್ರಿ. ಅವಗೊಳ ಪಾಡಿಗೆ ಅವು ಬೇಳಿತಾವ” ಅಂತ. ನಿಜ ಅನ್ನಿಸಿತು.