‘ಉದಯವಾಣಿ’ಯಲ್ಲಿ ನನ್ನ ಕಥೆ ‘ಓ ಧನಾತ್ಮಕ’

...

ಇಂದಿನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿರುವ ನನ್ನ ಕಥೆ ‘ಓ ಧನಾತ್ಮಕ

ಕಥೆ ಇಲ್ಲಿದೆ….

ಸಮಾಹಿತ ಹಾಗೂ ಸುಗುಣಿಗೆ ಸಾಕಾಗಿ ಬಿಟ್ಟಿತ್ತು. ಮೊದಮೊದಲು ಅದನ್ನೆಲ್ಲ ತುಂಬಾ ಲಘುವಾಗಿ ತೆಗೆದುಕೊಂಡಿದ್ದರು. ಇತ್ತೀಚೆಗೆ ನೀರು ಮೂಗಿನ ಮಟ್ಟಕ್ಕೆ ಬಂದಿತ್ತು. ದಿನಾಗ್ಲೂ ಸುಮಿತ್ರಮ್ಮನ ಅದೇ ಮಾತು ಕೇಳಿ ಕೇಳಿ ತಲೆ ಚಿಟ್ಟುಹಿಡಿದು, ತಾವು ನಿತ್ಯವೂ ಇಂಪೋರ್ಟೇಡ್ ಶ್ಯಾಂಪೂ ಹಾಕಿ ತೊಳೆಯುವ, ಫಳಫಳ ಹೊಳೆಯುವ, ರೇಷ್ಮೆಯಂತಹ ಕೂದಲುಗಳು ಉದುರಿಬಿಡುತ್ತವೆಯೋ ಎಂದು ಇಬ್ಬರಿಗೂ ಆತಂಕ ಶುರುವಾಗಿತ್ತು. ಮೊನ್ನೆ ಸಮಾಹಿತನ ತಲೆಯಲ್ಲಿ ಬೆಳ್ಳಿ ಕೂದಲೊಂದನ್ನು ನೋಡಿ ಹೌಹಾರಿದ್ದ ಸುಗುಣಿ, ತನ್ನ ಗಂಡನ ಶೀರ್ಷದಲ್ಲಿನ ಈ ಬೆಳ್ಳಿ ಕೂದಲಿನ ಚೊಚ್ಚಲ ಜನನಕ್ಕೆ ಸುಮಿತ್ರಮ್ಮನ ಕಿರುಕುಳವೇ ಕಾರಣ ಎಂದು ನಿರ್ಧರಿಸಿಬಿಟ್ಟಿದ್ದಳು. ತನ್ನ ತಲೆಯಲ್ಲಿ ಬೆಳ್ಳಿ ಕೂದಲಿನ ಬಾಣಂತನ ಮಾಡಲು ಇಷ್ಟವಿಲ್ಲದ ಆಕೆಗೆ, ಈ ಸಮಸ್ಯೆಗೆ ಉಪಾಯ ಹುಡುಕಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು. ಆದರೆ ಏನೇ ಮಾಡಿದರೂ ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಮಾತ್ರ ದಂಪತಿಗಳು ‘ದಂ’ ಬರುವವರೆಗೆ ಯೋಚಿಸಿದರೂ ಗೊತ್ತಾಗಿರಲಿಲ್ಲ. ಒಟ್ಟಿನಲ್ಲಿ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ ಅನ್ನೋ ಪರಿಸ್ಥಿತಿ.

ಆಗಿದ್ದಿಷ್ಟೇ….ಸಮಾಹಿತ ಹಾಗೂ ಸುಗುಣಿ ಮದುವೆಯಾಗಿ, ಮೊದಲ ಮಹಡಿಯಲ್ಲಿದ್ದ ಈ ಹೊಸ ಮನೆಗೆ ಬಾಡಿಗೆಗೆ ಬಂದು ಆರು ತಿಂಗಳು ಕಳೆದಿತ್ತು. ಬಾಡಿಗೆ ಮನೆಯನ್ನು ತೋರಿಸಲು ಬ್ರೋಕರ್ ಕರೆದುಕೊಂಡು ಬಂದಾಗ ಇಬ್ಬರಿಗೂ ಮನೆ ತುಂಬಾ ಇಷ್ಟವಾಗಿಬಿಟ್ಟಿತ್ತು. ಜೊತೆಗೆ ಬ್ರೋಕರ್ ಎಂಬ ಮನೆಮುರುಕನ ಹಿಂದೆ ನಾಲ್ಕು ದಿನಗಳಿಂದ ಮನೆ ಬಾಡಿಗೆ ಮನೆ ನೋಡಲು ಸುತ್ತಾಡಿದ್ದರಿಂದ, ಇನ್ನೂ ಹೆಚ್ಚು ಮನೆಗಳನ್ನು ನೋಡುವ ತ್ರಾಣವಾಗಲಿ, ಸಮಯವಾಗಲಿ ಇಬ್ಬರಿಗೂ ಇರಲಿಲ್ಲ. ಹೀಗಾಗಿ ಇದೇ ಮನೆಯನ್ನು ಬಾಡಿಗೆಗೆ ಹಿಡಿಯುವುದೆಂದು ನಿರ್ಧರಿಸಿದರು.  ಓನರ್ ಜೊತೆ ಮಾತನಾಡಲು ಕುಳಿತಾಗಲಂತೂ, ಓನರ್ ಗೋಪಾಲಯ್ಯ ಹಾಗೂ ಅವರ ಧರ್ಮಪತ್ನಿ ಸುಮಿತ್ರಮ್ಮ ತುಂಬ ಪ್ರೀತಿಯಿಂದ ಮಾತನಾಡಿಸಿದರು. ಗೋಪಾಲಯ್ಯನವರ ಮನೆಯ ಟೀಪಾಯ್ ಮೇಲಿದ್ದ ಒಂದು ಇಂಗ್ಲೀಷ್, ಒಂದು ಕನ್ನಡ ದಿನಪತ್ರಿಕೆ, ಕನ್ನಡದ ಎರಡು ಪ್ರಮುಖ ವಾರ ಪತ್ರಿಕೆಗಳು, ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಖ್ಯಾತ ಸಾಹಿತಿಯೊಬ್ಬರ ಬೋಗಸ್ ಕಾದಂಬರಿ –ಈ ಎಲ್ಲ ಪರಮೋಚ್ಚ ಕನ್ನಡ ಸಾಹಿತ್ಯವು ಓನರ್ ಸಾಕಷ್ಟು ಓದಿಕೊಂಡವರು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ಗೋಪಾಲಯ್ಯ ಮನೆಮುರುಕನಿಗೆ ಬಾಡಿಗೆ ಮನೆಯ ಕೀ ಕೊಡದೆ, ಹಸಿರು ಕ್ರಾಂತಿ ಆದಾಗ ಭಾರತದಲ್ಲಿ ಬಂದ ಬಂಪರ್ ಬೆಳೆಯನ್ನು ನೆನಪಿಸುವ ತಮ್ಮ ಎದೆಯ ಮೇಲಿನ ಕಪ್ಪು-ಬಿಳಿ ಮಿಶ್ರಿತ ಕೂದಲುಗಳನ್ನು ಪ್ರದರ್ಶಿಸುತ್ತ, ಗುಂಡುಗುಂಡಾದ ಶರೀರವನ್ನು ಹೊತ್ತುಕೊಂಡು ದುಡುದುಡು ಫಸ್ಟ್ ಫ್ಲೋರ್ ಗೆ ಹೋಗಿ, ಇಡೀ ಮನೆಯಲ್ಲಿ ಅಡ್ಡಾಡಿ ದಂಪತಿಗಳಿಗೆ ಮನೆ ತೋರಿಸಿದ್ದರು. ಮನೆಯಲ್ಲಿ ಯಥೇಚ್ಛವಾಗಿದ್ದ ಗಾಳಿ ಬೆಳಕು, ಮನೆಯ ಲೊಕೇಷನ್ ಎಲ್ಲವೂ ತುಂಬಾ ಚೆನ್ನಾಗಿತ್ತು. ಕೆಳಗೆ ಓನರ್, ಮೇಲೆ ಬಾಡಿಗೆದಾರರು. ಕಾವೇರಿ ಕನೆಕ್ಷನ್ ಜೊತೆಗೆ ಬೋರ್ವೆಲ್ ನೀರು. ಪ್ರತ್ಯೇಕ ಮೀಟರ್. ವಿಶಾಲವಾದ ಟೆರೆಸ್…..ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಎಲ್ಲರೂ ಮನೆ ನೋಡಿಕೊಂಡು ಕೆಳಗೆ ಬರುವಷ್ಟರಲ್ಲಿ ಗೋಪಾಲಯ್ಯನವರ ಧರ್ಮಪತ್ನಿ ಮಾ.ಸ.ಸೌ. (ಮಾತೋಶ್ರಿ ಸಮಾನರಾದ ಸೌಭಾಗ್ಯವತಿ ಅಲ್ಲ, ಮಾತಿನಿಂದ ಸಡ್ಡುಹೊಡೆಯುವ ಸೌಭಾಗ್ಯವತಿ) ಸುಮಿತ್ರಮ್ಮ ಬೆಳ್ಳಿ ಬಟ್ಟಲನ್ನು ನಾಚಿಸುವ ಸ್ಟೀಲ್ ಬಟ್ಟಲುಗಳಲ್ಲಿ ಎಲ್ಲರಿಗೂ ಬಿಸಿ ಬಿಸಿ ಕಾಫಿ ತಂದಿರಿಸಿದ್ದರು. ಕಾಫಿ ಹೀರುತ್ತ ಬಾಡಿಗೆ ವಿಷಯ ಚರ್ಚೆಯಾಯಿತು.

“ಒಂಭತ್ತೂವರೆ ಸಾವಿರ ರೂಪಾಯಿ, ಹತ್ತು ತಿಂಗಳ ಬಾಡಿಗೆ ಅಡ್ವಾನ್ಸ್” ಗೋಪಾಲಯ್ಯ ಹೇಳಿದರು.

“ಸಾರ್, ನಾವು ಈಗಷ್ಟೇ ಮದುವೆಯಾಗಿದ್ದೇವೆ. ನಿಮಗೂ ಗೊತ್ತು….ಆರಂಭದಲ್ಲಿ ಸಂಸಾರ ಎಷ್ಟು ಕಷ್ಟ ಅಂತ. ಹೀಗಾಗಿ ಎಂಟೂವರೆ ಸಾವಿರ, ಹತ್ತು ತಿಂಗಳ ಬಾಡಿಗೆಯಾದರೆ ನಮಗೆ ಅನುಕೂಲವಾಗುತ್ತಿತ್ತು” ಎಂದ ಸಮಾಹಿತ. ಗೋಪಾಲಯ್ಯ ಏನೋ ಮಾತಾಡಬೇಕು ಅನ್ನುವಷ್ಟರಲ್ಲಿ ಮತ್ತೆ ಮಾ.ಸ.ಸೌ ಅವರು ಮಧ್ಯೆಯೇ ಮೂಗು ತೂರಿಸಿ “ನಮ್ದೂ ಬೇಡ. ನಿಮ್ದೂ ಬೇಡ. ಒಂಬತ್ತು ಸಾವಿರ. ಹತ್ತು ತಿಂಗಳ ಅಡ್ವಾನ್ಸ್. ಆಗ್ಬಹುದಾ?” ಅಂದರು. ಸಮಾಹಿತ-ಸುಗುಣಿಗೂ ಅಷ್ಟೇ ಬೇಕಾಗಿತ್ತು. ಇನ್ನೇನು ಟೋಕನ್ ಅಡ್ವಾನ್ಸ್ ಕೊಡಬೇಕು ಅನ್ನುವಷ್ಟರಲ್ಲಿ ಥಟ್ಟನೆ ಸುಮಿತ್ರಮ್ಮ ಕೇಳಿದ ಪ್ರಶ್ನೆಗೆ ಸಮಾಹಿತ ಬೆಚ್ಚಿದ್ದ.

“ಅಂದಹಾಗೆ, ನಿಮ್ಮದು ಯಾವ ಕಡೆ?”

ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಸಮಾಹಿತನಿಗೆ ಗೊತ್ತಾಗಲಿಲ್ಲ. ಮೇಡಂ ತಮ್ಮ ಊರು ಕೇಳುತ್ತಿದ್ದಾರೋ, ಜಾತಿ ಕೇಳುತ್ತಿದ್ದಾರೋ, ಅಥವಾ ಬೇರೆನನ್ನೋ ಕೇಳುತ್ತಿದ್ದಾರೋ ತಿಳಿಯದೆ ಗೊಂದಲಕ್ಕೊಳಗಾದ. ರಕ್ಷಣಾತ್ಮಕವಾಗಿ ಆಡಲು ನಿರ್ಧರಿಸಿದವನೇ, “ನಮ್ಮದು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ವಡಗಾಂವ್ ಬುದ್ರುಕ್ ಊರು” ಎಂದಿದ್ದ.

“ಛೆ ಛೆ ನಾನು ಊರು ಕೇಳ್ಳಿಲ್ಲ…..ಅಂದ್ರೆ ನೀಮ್ಮದು ಯಾವ ಕಮ್ಯುನಿಟಿ ಅಂತ?” ಎಂದು ರಾಗವಾಗಿ, ಕನ್ನಡದ ಖ್ಯಾತ ಸೀರಿಯಲ್ ಒಂದರಲ್ಲಿನ ಪೆದ್ದು ಶಾರದಮ್ಮನ ಪಾತ್ರ ಕೇಳುವ ಹಾಗೆ ತಾನ್ ಪುರಾ ಇಲ್ಲದೆ ರಾಗವಾಗಿ ಸುಮಿತ್ರಮ್ಮ ಕೇಳಿದರು.

ಸಮಾಹಿತ ಸುಲಭವಾಗಿ ಸುಳ್ಳು ಹೇಳಬಹುದಾಗಿದ್ದರೂ, ಆತನಿಗಾಗಲಿ ಸುಗುಣಿಗಾಗಲಿ ಸುಳ್ಳು ಹೇಳುವುದು ಇಷ್ಟವಿರಲಿಲ್ಲ. ಗೋಪಾಲಯ್ಯ-ಸುಮಿತ್ರಮ್ಮ ಸಾಕಷ್ಟು ಸಂಪ್ರದಾಯಸ್ಥರಂತೆ ಕಾಣುತ್ತಿದ್ದುದರಿಂದ ಅವರಿಂದ ಸತ್ಯ ಮುಚ್ಚಿಟ್ಟು ಚೀಟ್ ಮಾಡುವುದು ಬೇಡ ಅನ್ನಿಸಿತು.

“ನನ್ನದು ……………ಕಮ್ಯುನಿಟಿ. ಸುಗುಣಿಯದ್ದು…………….ಕಮ್ಯುನಿಟಿ. ನಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್” ಅಂದ..

“ಲವ್ ಮ್ಯಾರೇಜ್ಜಾ?” ಧಟ್ಟನೆ ಕೇಳಿದ್ದರು ಮಾ.ಸ.ಸೌ.

ಹೌದೆಂದು ಇಬ್ಬರೂ ತಲೆಯಾಡಿಸಿದರು. ತಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್ ಅಂದ ತಕ್ಷಣ ಈ ಮನೆ ತಮ್ಮಿಂದ ಕೈಬಿಟ್ಟಿತು ಅಂದುಕೊಂಡಿದ್ದ ಸಮಾಹಿತ. ಏಕೆಂದರೆ ಈ ಹಿಂದೆ ಕೂಡ ನಾಲ್ಕೈದು ಕಡೆ ಮನೆ ಓನರ್ ಗಳು ಎಲ್ಲದಕ್ಕೂ ಒಪ್ಪಿ ಕೊನೆಗೆ ಇವರು ತಮ್ಮ ಕಮ್ಯುನಿಟಿಯಲ್ಲ ಎಂದ ತಕ್ಷಣ, ಏನೋ ಕಾರಣ ಹೇಳಿ ಮನೆ ಬಾಡಿಗೆಗೆ ನೀಡಿರಲಿಲ್ಲ. ಇಲ್ಲಿ ಮಾತ್ರ ನಡೆದದ್ದೇ ಬೇರೆ. ಸುಮಿತ್ರಮ್ಮ ಸರಿಯಾಗಿ ಹನ್ನೊಂದು ನಿಮಿಷ 21 ಸೆಕೆಂಡು 17 ಮೈಕ್ರೋ ಸೆಕೆಂಡು ಯಾರಿಗೂ ಮಧ್ಯ ಪ್ರವೇಶಿಸಲು ಅನುವಾಗದಂತೆ ನಿರಂತರವಾಗಿ, ಪಕ್ಕಾ ಪ್ರಗತಿಪರ ನಾಯಕರಂತೆ “ಜಾತಿಯೆಲ್ಲ ಮಿಥ್ಯ, ಮನುಷ್ಯತ್ವವೊಂದೇ ಸತ್ಯ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮನುಷ್ಯ ಜಾತಿ ತಾನೊಂದೇ ವಲಂ, ನೂರ ದೇವರನೆಲ್ಲ ನೂಕಾಚೆ ದೂರ, ತಮಗಂತೂ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ,…”ಎಂದೆಲ್ಲ ಯದ್ವಾತದ್ವಾ ಮಾತಾಡಿ ನವದಂಪತಿಗಳಿಗೆ ಆನಂದವನ್ನುಂಟುಮಾಡಿದ್ದರು. ಅಂದೇ ಸಾಯಂಕಾಲ ರೆಂಟ್ ಅಗ್ರಿಮೆಂಟ್ ಗೆ ಸಹಿ ಬಿದ್ದಿತ್ತು. ಬ್ರೋಕರ್ ತನ್ನ ಹರುಕು ಮುರುಕು ಇಂಗ್ಲೀಷ್ ನಲ್ಲಿ ಕಾಗೆ ಕಾಲು ಗುಬ್ಬಿ ಕಾಲು ಕೆತ್ತಿ ಸಹಿ…….ಓ ಸಾರಿ……ಸಿಗ್ನೇಚರ್ ಮಾಡಿದ್ದ.

ಒಂದು ಶುಭ ದಿನ ಮಿನಿ ಲಾರಿಯೊಂದರಲ್ಲಿ ಎಲ್ಲ ಸಾಮಾನುಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಲಾಯಿತು. ನೂತನ ದಂಪತಿಗಳ ಸಂಸಾರ ಶುರುವಾಯಿತು. ಸುಮಿತ್ರಮ್ಮ ಹಾಗೂ ಗೋಪಾಲಯ್ಯನವರಿಗೆ ಮಕ್ಕಳಿರಲಿಲ್ಲ ಎಂದು ನಿಧಾನವಾಗಿ ಸುಗುಣಿ-ಸಮಾಹಿತರಿಗೆ ತಿಳಿದಿತ್ತು. ಸುಮಿತ್ರಮ್ಮನೇ ಪರೋಕ್ಷವಾಗಿ ಈ ವಿಷಯ ತಿಳಿಸಿದ್ದರು. ಮಕ್ಕಳಿರುತ್ತಿದ್ದರೆ ಬಹುಶಃ ಸಮಾಹಿತ, ಸುಗುಣಿಯ ವಯಸ್ಸಿನವರೇ ಆಗಿರುತ್ತಿದ್ದರು. ಆದರೆ ಈಗ ಈ ಇಬ್ಬರೂ ಆ ಇಬ್ಬರಿಗೆ ಮಕ್ಕಳಂತಾಗಿದ್ದರು. ಮನೆಗ ಬಂದ ಎರಡನೆಯ ದಿನವೇ ತಮ್ಮನ್ನು ಸರ್ ಎಂದು ಕರೆಯದೆ ಅಂಕಲ್ ಹಾಗೂ ಆಂಟಿ ಎಂದು ಕರೆಯಬೇಕೆಂದು ಗೋಪಾಲಯ್ಯ ತಾಕೀತು ಮಾಡಿದ್ದರು. ತನ್ನ ಮನೆಯಲ್ಲಿ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಸುಗುಣಿಯನ್ನು ಆಕೆಯ ತಂದೆ, ತಾಯಿ, ಅಣ್ಣಂದಿರು, ನೆಂಟರು ಬಾಯಿಕಾಟು ಮಾಡಿದ್ದರು. ಹೀಗಾಗಿ ಆಕೆಯಂತೂ ಆಂಟಿ-ಅಂಕಲ್ ಎಂದು ಕರೆಯುವ ಬದಲಾಗಿ ಮಮ್ಮಿ-ಡ್ಯಾಡಿ ಎಂದು ಕರೆಯುವುದೊಂದು ಬಾಕಿಯಿತ್ತು. ಸುಗುಣಿ, ಸುಮಿತ್ರಮ್ಮನವರ ಜಾತಿಯವಳೇ ಆಗಿದ್ದ ಕಾರಣ ಸ್ವಲ್ಪ ಹೆಚ್ಚೇ ಅನಿಸುವಷ್ಟು ವಾತ್ಸಲ್ಯ ನಾಲ್ಕೇ ದಿನದಲ್ಲಿ ಬೆಳೆದು ಬಿಟ್ಟಿತ್ತು. ಗೋಪಾಲಯ್ಯ ರಿಟೈರ್ ಆಗಿದ್ದರಿಂದ ಧಾರಾಳವಾಗಿ ವಾತ್ಸಲ್ಯ ಹರಿಸುತ್ತ ಕೂರುವಷ್ಟು ಸಮಯ ಅವರ ಬಳಿಯೂ ಇತ್ತು.

ಆದರೆ ಸಮಸ್ಯೆ ಶುರುವಾಗಿದ್ದು ಕೆಲ ದಿನಗಳ ಕಳೆದ ಬಳಿಕ. ನವ ದಂಪತಿಗಳು ಜಗತ್ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜಗತ್ಪ್ರಸಿದ್ದ ಕಂಪನಿ ಎಂದ ಮೇಲೆ ಕೇಳಬೇಕೆ?, ಇಬ್ಬರಿಗೂ ಲಕ್ಷಕ್ಕೂ ಮೇಲ್ಪಟ್ಟು ಸಂಬಳ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿನ ಕಾಲಾಪಾನಿಯ ಕೈದಿಗಳಿಗೆ ನೀಡಲಾಗುತ್ತಿದ್ದ ಕೆಲಸಕ್ಕಿಂತ ಹೆಚ್ಚು ಕೆಲಸ ಇಬ್ಬರ ಪಾಲಿಗೂ ಇರುತ್ತಿತ್ತು. ಹೀಗಾಗಿ ಗಂಡ-ಹೆಂಡತಿ ನಿತ್ಯವೂ ದುಡಿದುಡಿದು, ಸ್ಟಾರ್ಚ್ ಹಾಕಿರುತ್ತಿದ್ದ ಬಟ್ಟೆಗಳನ್ನು ಹಿಗ್ಗಾಮುಗ್ಗಾ ಸುಕ್ಕು ಮಾಡಿಕೊಂಡು ಹೈರಾಣಾಗಿ ಮನೆಗೆ ಬರುತ್ತಿದ್ದರು. ಮನೆಗೆ ಬಂದ ಮೇಲೆ ಸುಗುಣಿಗೆ ಅಡಿಗೆ ಮಾಡುವುದು ಹೋಗಲಿ, ಟೀ ಮಾಡುವಷ್ಟು ಕೂಡ ತ್ರಾಣ ಇರುತ್ತಿರಲಿಲ್ಲ. ಒಂದು ದಿನ ಡೋಮಿನೋಸಂ, ಮತ್ತೊಂದು ದಿನ ಪಿಝಾ ಹಟ್ಟಂ, ಮಗದೊಂದು ದಿನ ಮಯೂರಿಯಂ, ಅದರ ನೆಕ್ಸ್ಟ್ ದಿನ ನಂದಿನಿ ಡೀಲಕ್ಸಂ ಹೀಗೆ ಹೋಟಲ್ ನಿಂದ ಊಟ-ತಿಂಡಿ ಬರುವುದು ಸಾಮಾನ್ಯವಾಗಿತ್ತು. ಇಂತಹ ಒತ್ತಡದ ಬದುಕಿನಲ್ಲೇ ಸುಗುಣಿ ಸಾಧ್ಯವಾದಗಲೆಲ್ಲ ಮನೆಯ ಹೊರಗೆ ರಂಗೋಲಿ ಹಾಕುವುದು, ದೇವರ ಪೂಜೆ ಮಾಡುವುದು ಮಾಡುತ್ತಿದ್ದಳು.

ನಿಜವಾದ ಸಮಸ್ಯೆ ಇಲ್ಲಿಂದ ಶುರುವಾಯಿತು ಅನ್ನಬಹುದು.ಸುಮಿತ್ರಮ್ಮ ಅಂದು ಮಾಡಿದ ಪ್ರಗತಿಪರ ಭಾಷಣಕ್ಕೂ ಅವರ ವರ್ತನೆಗೂ ಸಂಬಂಧವೇ ಇಲ್ಲ ಎಂಬುದು ಸುಗುಣಿಗೆ ನಿಧಾನವಾಗಿ ತಿಳಿಯುತ್ತ ಹೋಗಿತ್ತು. ನಾಗರ ಪಂಚಮಿಯಿಂದ ವಿಜಯದಶಮಿಯವರೆಗಿನ ಅವಧಿಯಲ್ಲಿ ನವದಂಪತಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. “ನೀನು ದಿನಾಲೂ ಯಾಕೆ ಮನೆ ಮುಂದೆ ರಂಗೋಲಿ ಹಾಕಲ್ಲ?”, “ಇವತ್ತು ಗ್ರಹಣ. ಮನೆಗೆ ವಾಪಸ್ ಬಂದ್ಮೇಲೆ ಸ್ನಾನ ಮಾಡಿಲ್ವಾ?”, “ಇವತ್ತು ಗಣೇಶ ಚತುರ್ಥಿ. ಮನೇಲಿ ಮೋದಕ ಮಾಡಿದಿಯಾ ತಾನೆ?”, “ನಿಮ್ಮ ಕಡೆ (ನಿಮ್ಮ ಜಾತಿಯಲ್ಲಿ) ವರಮಹಾಲಕ್ಷ್ಮಿ ಹಬ್ಬ ಮಾಡಲ್ವಾ?”, ಹೀಗೆ ಆಯಾಯಾ ಸಂದರ್ಭಕ್ಕೆ, ಹಬ್ಬಕ್ಕೆ ತಕ್ಕಂತೆ ಮಿಲಿಯನ್ ಗಟ್ಟಲೆ ಪ್ರಶ್ನೆ ಕೇಳಿ ಸುಗುಣಿಯನ್ನು ಸುಸ್ತು ಮಾಡಿದ್ದರು ಸುಮಿತ್ರಮ್ಮ. ಬರೀ ಪ್ರಶ್ನೆ ಕೇಳಿದ್ದರೆ ಪರವಾಗಿರಲಿಲ್ಲ. ಆದರೆ ಅವರು ಕೇಳುತ್ತಿದ್ದ ರೀತಿ ಹೇಗಿರುತ್ತಿತ್ತೆಂದರೆ “ಎಂಥ ಜನಾನಪ್ಪ ನೀವು? ಒಂಚೂರು ಸಂಪ್ರದಾಯ, ನೇಮ ನಿಷ್ಠೆ ಅಂತ ಬೇಡ್ವ. ಸಮಾಹಿತಂದು ಬಿಡು. ಅವನು ಬೇರೆ ಜಾತಿ. ನೀನಾದ್ರೂ ಮಾಡ್ಬಾರ್ದಾ? ನಿಂದು ನಮ್ದು ಒಂದೇ ಜಾತಿ ಅಲ್ವ?” – ಈ ಎಲ್ಲ ಭಾವಗಳನ್ನು ಸುಮಿತ್ರಮ್ಮ ತಮ್ಮ ಪ್ರಶ್ನೆಯಲ್ಲಿ ಧ್ವನಿಸುತ್ತಿದ್ದರು. ಒಂದೆರಡು ಬಾರಿಯಂತೂ ಪರೋಕ್ಷವಾಗಿ ಸುಮಿತ್ರಮ್ಮ ಹೀಗೆ ಹೇಳಿಯೂ ಇದ್ದರು. ಮನೆಯ ಎದುರು ರಂಗೋಲಿ ಹಾಕಲು ಸಮಯವಿಲ್ಲದ ಸುಗುಣಿ, ಗೌರಿ ಹಬ್ಬಕ್ಕೆ ಮೋದಕ ಮಾಡುವುದು, ಆಚಾರ್ಯರೇಣುಕರು ರಾಜ್ಯದ ಡಿಸಿಎಂ ಆಗುವಷ್ಟೇ ಅಸಾಧ್ಯವಾಗಿತ್ತು. ಈ ಚೊರೆ ಎಷ್ಟು ಹೆಚ್ಚಿತೆಂದರೆ ಹಬ್ಬ-ಹರಿದಿನ-ಸೂರ್ಯಗ್ರಹಣ-ಚಂದ್ರಗ್ರಹಣಕ್ಕೆ ಎರಡು ದಿನ ಮೊದಲೇ ಸುಗುಣಿಯ ರಕ್ತದೊತ್ತಡ ಜಾಸ್ತಿಯಾಗಿ, ಮೂಡ್ ಆಫ್ ಆಗಿ, ಅದರಿಂದಾಗಿ ಸಮಾಹಿತನ ಜೊತೆ ವಿನಾಕಾರಣ ಜಗಳ ಆಗಿ ಇನ್ನೇನೇನೆಲ್ಲ ಆಗಿ, ಆಗಬಾರದ್ದೆಲ್ಲ ಆಗಿ ಬಿಡುತ್ತಿತ್ತು.

ಮೊದಲೆಲ್ಲ ಬರೀ ಪ್ರಶ್ನೆಯಾಗಿ ಕಾಡಲಾರಂಭಿಸಿದ್ದು, ನಂತರ ಆದೇಶಗಳಾಗಿ ಮಾರ್ಪಟ್ಟವು. ಪ್ರಶ್ನಾರ್ಥಕ ಚಿಹ್ನೆಗಳು ಮಾಯವಾದವು. “ರಂಗೋಲಿ ಹಾಕು, ತೋರಣ ಕಟ್ಟು, ಅರಿಷಿನ ದಾರ ಕಟ್ಕೋ, ಇವತ್ತು ರಾತ್ರಿ ಸಮಾಹಿತನ ಜೊತೆ ಮಲಗ್ಬೇಡ, ದಿನ ಚನ್ನಾಗಿಲ್ಲ…..”ಹೀಗೆಲ್ಲ ಸುಮಿತ್ರಮ್ಮ ಮಾತಾನಾಡಲಾರಂಭಿಸಿದ್ದರು. ಸುಗುಣಿ ಸಿಕ್ಕಾಗಲೆಲ್ಲ ತಮ್ಮದು ಶ್ರೇಷ್ಠ ಜಾತಿ. ಅಷ್ಟೇ ಅಲ್ಲ ಆ ಶ್ರೇಷ್ಠ ಜಾತಿಯ ಸಬ್ ಕಾಸ್ಟ್ ಗಳಲ್ಲಿರುವ ಮತ್ತೂ ಶ್ರೇಷ್ಠವಾಗಿರುವ ಜಾತಿ ತಮ್ಮದು. ತಮ್ಮ ಜಾತಿಯ ವಿಶಿಷ್ಟತೆ, ಆಚಾರ, ಪದ್ಧತಿ ಇತ್ಯಾದಿಗಳ ಬಗ್ಗೆ ಸಮಾ ಕೊರೆಯುತ್ತಿದ್ದರು. ಆಗಾಗ ಸಮಾಹಿತನ ಜಾತಿಯ ಬಗ್ಗೆ ನೇರವಾಗಿಯೇ ಕೀಳಾಗಿ ಮಾತಾಡುತ್ತಿದ್ದರು ಕೂಡ.

ಪರಿಸ್ಥಿತಿ ಹೀಗಿರುತ್ತ ಒಂದು ದಿನ……

ವಿದೇಶದಲ್ಲಿ ಯಾವುದೋ ಫೀಸ್ಟ್ ಇದ್ದದ್ದರಿಂದ ಭಾರತದಲ್ಲಿನ ಸುಗುಣಿ ಕೆಲಸ ಮಾಡುತ್ತಿದ್ದ ಜಗತ್ಪ್ರಸಿದ್ಧ ಎಂಎನ್ಸಿ ಕಂಪನಿಗೆ ರಜಾ ಇತ್ತು. ಸುಮಿತ್ರಮ್ಮನಿಂದ ತಪ್ಪಿಸಿಕೊಳ್ಳಲು ಸುಗುಣಿ, ಪಕ್ಕದ ಮನೆಗೆ ಹೋಗಿ ಮಾತನಾಡುತ್ತ ಕುಳಿತಿದ್ದಳು. ಹೀಗೆ ಮಾತುಮಾತಲ್ಲೇ ಸುಗುಣಿ, ಸುಮಿತ್ರಮ್ಮನವರಿಗೆ ಮಕ್ಕಳಿಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದಳು. ಆಗ ಪಕ್ಕದ ಮನೆಯಾಕೆ ಹೌಹಾರಿ, “ಅಯ್ಯೋ ಅವರಿಗೇನ್ ಬಂತ್ರಿ ರೋಗ… ನಿಮ್ಮ ಹತ್ರ ತಮಗ ಮಕ್ಳಿಲ್ಲ ಅಂತ ಹೇಳಿದ್ರಾ…? ರಾಮ ರಾಮ…!! ಏನು ಕಾಲ ಬಂತು ನೋಡ್ರಿ…ಅವರಿಗೆ ಮಗ ಸೊಸೆ ಎಲ್ಲಾ ಇದಾರೆ ಕಣ್ರೀ. ಆದರೆ ಇವರ ಜೊತೆ ಇರಲ್ಲ. ಬೇರೆ ಮನೆ ಮಾಡ್ಕೊಂಡು ಇರ್ತಾರೆ ಅಷ್ಟೆ” ಎಂದರು. ಸುಗುಣಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ.

“ಮತ್ತೆ ನಮ್ಮ ಹತ್ರ ಹಾಗ್ಯಾಕೆ ಹೇಳಿದರು?” ಅಂತ ಕೇಳಿದಳು. ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರೂ, ಅಭ್ಯಾಸ ಬಲದಂತೆ ಆ ಕಡೆ ಈ ಕಡೆ ನೋಡಿದ ಪಕ್ಕದ ಮನೆಯಾಕೆ, ತೀರ ಮೆಲುದನಿಯಲ್ಲಿ “ಅಯ್ಯೋ ಅವರ ಮಗಂದು ಲವ್ ಮ್ಯಾರೇಜು. ಲವ್ವಲ್ಲಿ ಜಾತಿ ಯಾರಾದ್ರೂ ನೋಡ್ತಾರಾ? ಸರಿ, ಅವರ ಮಗಾನೂ ಜಾತಿ ನೋಡ್ತೇ ಲವ್ ಮಾಡ್ದ. ಹುಡುಗಿದು ಯಾವುದೋ ಕೆಳಗಿನ ಜಾತಿ ಅಂತ ಸುಮಿತ್ರಮ್ಮಂಗೆ ಗೊತ್ತಾಯ್ತು. ನೀವು ನಂಬಲ್ಲ ಆದ್ರೂ ಹೇಳ್ತಿನಿ. ಈ ಸುಮಿತ್ರಮ್ಮ ತಮ್ಮ ಸೊಸೆಗೆ ಮನೆ ಹೊಸಿಲು ತುಳಿಯೋದಕ್ಕೂ ಬಿಡ್ಲಿಲ್ಲ. ಗೋಪಾಲಯ್ಯ ಮಗನ ಮದುವೆನ ಒಪ್ಕೊಂಡ್ರೂ ಸುಮಿತ್ರಮ್ಮ ರಂಪ ರಾಮಾಯಣ ಮಾಡಿ ಸೊಸೆನ ಮನೆ ಒಳಗೆ ಬಿಟ್ಟಕೊಳ್ಳಲೇ ಇಲ್ಲ. ಅದಕ್ಕೆ ಮಗ ಬೇರೆ ಮನೆ ಮಾಡಿ ಇದ್ದಾನೆ. ಜಾತಿ ಅಂದ್ರೆ ಅಷ್ಟು ಮುಖ್ಯ ಆ ಯಮ್ಮಂಗೆ” ಅಂದರು ಪಕ್ಕದ ಮನೆಯಾಕೆ.

ಗಿರ್ ಎಂದು ಸುತ್ತುತ್ತಿದ್ದ ಸುಗುಣಿಯ ತಲೆ ಸಮಸ್ಥಿತಿಗೆ ಬರಲು ಕೆಲವು ನಿಮಿಷಗಳೇ ಹಿಡಿದವು. ವಾಪಸ್ ಮನೆಗೆ ಬಂದಳವಳೇ ಸಮಾಹಿತನಿಗೆ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಸುಮಿತ್ರಮ್ಮನ ಕಾಟದಿಂದ ತಪ್ಪಿಸಿಕೊಳ್ಳಬೇಕಾದರೆ ಹಾಗೂ ತಮ್ಮ ತಲೆ ಕೂದಲುಗಳು ಬಿಳಿಯಾಗುವುದನ್ನು ತಡೆಯಬೇಕಾದರೆ, ಬೇರೆ ಮನೆ ನೋಡುವುದೇ ಉತ್ತಮ ಎಂದು ಹೇಳಿದಳು. ಸಮಾಹಿತ ತುಂಬ ಹರ್ಷದಿಂದ ಇದನ್ನು ಒಪ್ಪಿದ. ಸುಮಿತ್ರಮ್ಮನ ಮಾತಿನ ಟಾರ್ಚರ್ ನಿಂದಾಗಿ ಸುಗುಣಿ ಅನಗತ್ಯವಾಗಿ ತನ್ನ ಫ್ರಸ್ಟ್ರೇಷನ್ನನ್ನು ಸಮಾಹಿತನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೀಗಾಗಿ ಇಬ್ಬರ ನಡುವೆ ಅನಗತ್ಯವಾಗಿ ಮಾತಿನ ಚಕಮಕಿ ನಡೆಯುತ್ತಿದ್ದವು. ಜಾತಿಗಾಗಿ ಸ್ವಂತ ಸೊಸೆಯನ್ನೇ ಒಪ್ಪದ ಸುಮಿತ್ರಮ್ಮ ತಮ್ಮ ನಡುವೆ ಡಿವೋರ್ಸ್ ಮಾಡಿಸಲೂ ಹಿಂಜರಿಯುವುದಿಲ್ಲ ಎಂದು ಸುಗುಣಿಗೆ ಅನ್ನಿಸಿತ್ತು. ಬರೀ ಜಾತಿ ಜಾತಿ ಎಂದು 24 ಗಂಟೆಯೂ ಬಡಿದುಕೊಳ್ಳುವ ಜನಕ್ಕೆ ಬುದ್ಧಿ ಬರುವಾದದರೂ ಯಾವಾಗ ಎಂದು ಆಕೆ ಯೋಚಿಸುತ್ತಿದ್ದಳು. ಫುಲೆ, ಕಬೀರ್, ಬಸವಣ್ಣ, ಮತ್ತೆ ಹುಟ್ಟಿಬರಬಾರದೇ ಎನಿಸುತ್ತಿತ್ತು.

ಸಮಾಹಿತ ಅದಾಗಲೇ ಹೊಸ ಬಾಡಿಗೆ ಮನೆ ನೋಡಿ ಬಂದಿದ್ದ. ಹೊಸ ಮನೆ ಯಾವ ರೀತಿಯಲ್ಲಿಯೂ ಅವರು ಈಗಿದ್ದ ಮನೆಗೆ ಸಮವಾಗಿಲ್ಲದಿದ್ದರೂ ಮನೆ ಬದಲಾಯಿಸಲು ದಂಪತಿಗಳು ನಿರ್ಧರಿಸಿಯಾಗಿತ್ತು.

ಇನ್ನೇನು ಒಂದೆರಡು ದಿನದಲ್ಲೇ ಮನೆ ಬದಲಾಯಿಸುಬೇಕು ಅನ್ನುವಷ್ಟರಲ್ಲಿ…..

ತಮ್ಮ 1987 ಮಾಡೆಲ್ ಬಜಾಜ್ ಸ್ಕೂಟರ್ ಮೇಲೆ ಹೋಗುತ್ತಿದ್ದ ಗೋಪಾಲಯ್ಯನವರಿಗೆ ಆಟೋರಿಕ್ಷಾ ಬಂದು ಗುದ್ದಿತು. ಗೋಪಾಲಯ್ಯನವರನ್ನು ಆಸ್ಪತ್ರೆ ಸೇರಿಸಲು ಸುತ್ತಲಿದ್ದ ಸೊಫಿಸ್ಟಿಕೇಟೆಡ್ ಜನ ಮುಂದಾಗದ ಕಾರಣ, ಕೊನೆಗೆ ಪೋಲಿಸರೇ ಬಂದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸುಮಿತ್ರಮ್ಮನವರಿಗೆ ಸುದ್ಧಿ ತಿಳಿದು ಆಸ್ಪತ್ರೆ ತಲುಪಿದಾಗ ಗೋಪಾಲಯ್ಯನವರ ತಲೆ, ಕಾಲು, ಭುಜಕ್ಕೆ ಬ್ಯಾಂಡೇಜ್ ಸುತ್ತಿ ಮಲಗಿಸಲಾಗಿತ್ತು. ಅವರಿಗೆ ತುರ್ತು ಆಪರೇಷನ್ ಮಾಡಬೇಕಿತ್ತು. ಸುಮಿತ್ರಮ್ಮನ ಪರ್ಸಿನಲ್ಲಿ ಎರಡು ಕ್ರೆಡಿಟ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ನೋಡಿದ ಖಾಸಗಿ ಆಸ್ಪತ್ರೆಯವರು ಗೋಪಾಲಯ್ಯನವರನ್ನು ತಕ್ಷಣ ಆಪರೇಷನ್ ಥೇಟರ್ ನೊಳಕ್ಕೆ ಕರೆದೊಯ್ದರು. ಅಷ್ಟರಲ್ಲಿ ಅಪಘಾತದ ಸುದ್ಧಿ ತಿಳಿದು ಸುಗುಣಿ-ಸಮಾಹಿತ ಕೂಡ ಬಂದು ಸುಮಿತ್ರಮ್ಮನವರನ್ನು ಕೂಡಿಕೊಂಡರು. ಕೆಲ ಹೊತ್ತಿನಲ್ಲಿ ಆಪರೇಷನ್ ಥೇಟರ್ ನೊಳಗಿಂದ ಹೊರ ಬಂದ ಜೂನಿಯರ್  ಡಾಕ್ಟರ್ ಪಾಶ್ಚಾಪುರೆ, “ಮೇಡಂ, ನಿಮ್ಮ ಹಸ್ಬೆಂಡ್ ಗೆ ಅರ್ಜೆಂಟಾಗಿ ಬ್ಲಡ್ ಕೊಡಬೇಕು. ನಮ್ಮಲ್ಲಿ ಬ್ಲಡ್ ಇಲ್ಲ. ಅರೇಂಜ್ ಮಾಡಿ. ಕ್ವಿಕ್” ಎಂದು ಹೇಳಿ ಮಾಯವಾದರು. ಕ್ರೆಡಿಟ್ ಕಾರ್ಡ್ ಇದ್ದರೆ ಎಲ್ಲವೂ ಸಾಧ್ಯ ಅಂದುಕೊಂಡಿದ್ದ ಸುಮಿತ್ರಮ್ಮ ತಕ್ಷಣ ತಮ್ಮ ಮೊಬೈಲ್ ನಿಂದ ನೆಂಟರಿಗೆಲ್ಲ ಫೋನ್ ಮಾಡಲಾರಂಭಿಸಿದರು. ಇಪ್ಪತ್ತು ನಿಮಿಷ ಕಳೆದರೂ ಸುಮಿತ್ರಮ್ಮನವರಿಗೆ ತಮ್ಮ ಯಾವೊಬ್ಬ ನೆಂಟರಿಂದಲೂ ರಕ್ತ ನೀಡಲು ಕರೆಸಲಾಗಲಿಲ್ಲ. ಅಷ್ಟರಲ್ಲಾಗಲೇ ಡಾ. ಪಾಶ್ಚಾಪುರೆ ಎರಡು ಬಾರಿ ಬಂದು “ಅರೇಂಜ್ ಆಯ್ತಾ?” ಎಂದು ಕೇಳಿ ಸುಮಿತ್ರಮ್ಮನವರ ಹೆಚ್ಚುತ್ತಿರುವ ರಕ್ತದೊತ್ತಡಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿ ಹೋಗಿದ್ದರು. ಬ್ಲಡ್ ಬ್ಯಾಂಕ್ ಗಳಿಗೆ ಸುಮಿತ್ರಮ್ಮ ಏಕೆ ಫೋನ್ ಮಾಡುತ್ತಿಲ್ಲ ಎಂಬುದು ಸುಗುಣಿ ಸಮಾಹಿತರಿಗೆ ಅರ್ಥವಾಗಿತ್ತು. ಕೊನೆಗೂ ತಮ್ಮ ನೆಂಟರು ಯಾರೊಬ್ಬರೂ ಸಿಗದೇ ಸುಮಿತ್ರಮ್ಮ ಕೈಚೆಲ್ಲಿ ಕುಳಿತಾಗ ಸುಗುಣಿಗೆ ಕೆಡುಕೆನಿಸಿತು. ಸುಮಿತ್ರಮ್ಮನ ಬಳಿ ಹೋದವಳೇ, “ಆಂಟಿ, ಸಮಾಹಿತಂದು ‘ಓ’ ಪಾಸಿಟಿವ್ ಬ್ಲಡ್ ಗ್ರೂಪ್. ಅಂದ್ರೆ ಯೂನಿವರ್ಸಲ್ ಡೋನರ್. ನಿಮಗೆ ಪರ್ವಾಗಿಲ್ಲ ಅಂದ್ರೆ, ಸಮಾಹಿತಾನೇ ಬ್ಲಡ್ ಡೊನೇಟ್ ಮಾಡ್ತಾರೆ. ಆದ್ರೆ ಅವರು ನಿಮ್ಮ ಜಾತಿ ಅಲ್ಲ. ಗೊತ್ತಲ್ವ? ನಿಮಗೆ ನಡೆಯತ್ತಾ?” ಎಂದು ಕೇಳಿದಳು.

ಕೆಲ ಹೊತ್ತಿನ ನಂತರ ಸುಗುಣಿ-ಸಮಾಹಿತ ಆಸ್ಪತ್ರೆಯಿಂದ ಹೊರಟರು. ಸಮಾಹಿತ, ಕೈಮೇಲೆ ಸೂಜಿ ಚುಚ್ಚಿದ್ದ ಜಾಗವನ್ನು ಹತ್ತಿಯಲ್ಲಿ ಒರೆಸಿಕೊಂಡು, ರಕ್ತವಂಟಿದ್ದ ಹತ್ತಿಯನ್ನು ಡಸ್ಟ್ ಬಿನ್ ನಲ್ಲಿ ಒಗೆದು ಸುಗುಣಿಯ ಕೈಹಿಡಿದು ನಡೆಯತೊಡಗಿದ.

……

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.