ಏನ ಬರ್ಲಿ, ಸರ್ ಆಶೀರ್ವಾದ ಒಂದ್ ನನ್ನ ಮ್ಯಾಲಿರಲಿ

ಡಾ. ಶ್ರೀನಿವಾಸ ಎಲ್. ಕುಲಕರ್ಣಿ, ಬೆಳಗಾವಿಯ ಆರ್ ಪಿ ಡಿ ಮಹಾವಿದ್ಯಾಲಯದಲ್ಲಿ ನನಗೆ 5 ವರ್ಷಗಳ ಕಾಲ ಕನ್ನಡ ಪಾಠವನ್ನು ಮಾಡಿದವರು. ಕನ್ನಡ ಪಾಠದ ಜೊತೆಗೆ ಬದುಕಿನ ಪಾಠವನನ್ನೂ ಕಲಿಸಿಕೊಟ್ಟವರು. ಅವರ ಷಷ್ಠಿ ಪೂರ್ತಿ ಸಂದರ್ಭದ ಅಭಿನಂದನಾ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ ಇಲ್ಲಿದೆ.

...

ಏನ ಬರ್ಲಿ, ಸರ್ ಆಶೀರ್ವಾದ ಒಂದ್ ನನ್ನ ಮ್ಯಾಲಿರಲಿ
“ನೀವ್ ನೋಡ್ರಿ ಬೇಕಾದ್ರ, ಧಾರವಾಡದ ಒಂದ್ ಹೆಣಮಗಳನ್ನ ಪುಣೆಕ್ಕ ಮದವಿ ಮಾಡೆ ಕೊಡ್ರಿ, ಆಕಿ ಹೋಗಿ ಒಂದ್ ವಾರ ಆಗೂದ್ರೊಳಗ ಎಷ್ಟ್ ಛಂದ ಮರಾಠಿ ಕಲ್ತಿರ್ತಾಳಂದ್ರ, ಮನಿ ಮಂದಿಗಿಂತ ಛಲೋ ಮರಾಠಿ ಮಾತಾಡ್ತಿರ್ತಾಳ. ಹಂಗ, ಒಂದ್ ಪುಣೆ ಹೆಣಮಗಳು ಮದುವೆಯಾಗಿ ನಮ್ ಧಾರವಾಡಕ್ಕ ಬರ್ತಾಳ. ಬಂದ್ ಒಂದ್ ವಾರ್ ಆಗಿರೂದಿಲ್ಲ, ಮನೀ ಮಂದೀಗೆಲ್ಲ ಎಷ್ಟ ಛಲೋ ಮರಾಠಿ ಕಲಿಸಿಬಿಟ್ಟಿರ್ತಾಳ. ಕನ್ನಡಿಗರ ಈ ಸ್ವಭಾವಕ್ಕ ಏನ್ ಅಂತೀರೀ?” ಎಂದು ಕುಲಕರ್ಣಿ ಸರ್ ಪ್ರಶ್ನೆಯೊಂದನ್ನು ಎಸೆದಾಗ, ಹುಡುಗಿಯರು ಮುಸಿಮುಸಿ ನಕ್ಕರೆ, ಹುಡುಗರು ಹ್ಹೆಹ್ಹೆಹ್ಹೆ ಎಂದು ಜೋರಾಗಿಯೇ ನಕ್ಕರು.
ಅದು ಮಳೆಗಾಲ. ರಾಣಿ ಪಾರ್ವತಿದೇವಿ ಕಾಲೇಜಿನ ಭವ್ಯ ಕ್ಲಾಸ್ ರೂಮು. ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳ ಕರಿ ಕೊಡೆಗಳೆಲ್ಲ ತೊಯ್ದುತೊಪ್ಪೆಯಾಗಿ ಕುಳಿತಿದ್ದವು. ಅದರ ನಡುವೆ ವಿದ್ಯಾರ್ಥಿನಿಯರ ಕಲರ್ ಕಲರ್ ಕೊಡೆಗಳು, ಇಡೀ ಕ್ಲಾಸ್ ರೂಮಿನ ಸೊಬಗನ್ನು ಹೆಚ್ಚಿಸಿದ್ದವು. ಯೌವನದ ಹುಚ್ಚು ಪ್ರವಾಹದಲ್ಲಿ ತೇಲುತ್ತಿದ್ದ ಹುಡುಗ-ಹುಡುಗಿಯರು, ಕುಲಕರ್ಣಿ ಸರ್ ಅವರ ಈ ಪ್ರಶ್ನೆ ಕೇಳಿ ಮುಖಮುಖ ನೋಡತೊಡಗಿದರು.
“ಅದು ಕನ್ನಡಿಗರ ಗುಣಾರೀ ಸರ….”
ಹುಡುಗಿಯೊಬ್ಬಳು ಹೇಳಿದಳು.
“ಭಾಳ ಛಲೋ ಆತು. ನೀವು ಗುಣ ಅಂದ್ರಿ. ಕೆಲವು ಮಂದಿ ಇದನ್ನ ಕನ್ನಡಿಗರ ದೊಡ್ಡಸ್ತಿಕೆ ಅಂತಾರ” ಎಂದು ಸುಮ್ಮನಾದರು. ಅಲ್ಲೊಂದು ಪ್ರೆಗ್ನೆಂಟ್ ಪಾಸ್ ಇತ್ತು. ವಿದ್ಯಾರ್ಥಿಗಳಿಗೆ ವಿಚಾರ ಮಾಡಲು ಅವಕಾಶ.
ಹೀಗೆ ಎಸ್.ಎಲ್. ಪಾಠಮಾಡುತ್ತಿದ್ದರೆ ಹಾಗೇ ಕೇಳುತ್ತ ಕೂರಬೇಕು ಎನಿಸುತ್ತಿತ್ತು. ದೈನಂದಿನ ಬದುಕಿನ ಘಟನೆಗಳನ್ನೇ ಬಾಲವಿಲ್ಲದ ನಮ್ಮಂತಹ ಟೀನೇಜುಗಳಿಗೆ ಎಷ್ಟು ಸರಳವಾಗಿ ಹೇಳುತ್ತಿದ್ದರೆಂದರೆ, ಅವರ ಕ್ಲಾಸ್ ಮಿಸ್ ಮಾಡಿಕೊಳ್ಳಬೇಕು ಅನ್ನಿಸುತ್ತಲೇ ಇರಲಿಲ್ಲ. ಅವರ ಕ್ಲಾಸ್ ಎಂದಿಗೂ ಏಕಮುಖಿಯಾದ ಉದಾಹರಣೆ ಇಲ್ಲವೇ ಇಲ್ಲ. ಅದೊಂದು ಚರ್ಚಾಕೂಟ. ಅಲ್ಲಿ ಆರೋಪ, ಪ್ರತ್ಯಾರೋಪ, ವಾದ, ವಿವಾದ ಎಲ್ಲವೂ ಆಗಿ ಕೊನೆಗೆ ಜಜ್ ಸ್ಥಾನದಲ್ಲಿ ಕುಳಿತಿರುತ್ತಿದ್ದ ಎಸ್ ಎಲ್ ಅತ್ಯಂತ ಮ್ಯಾಚೂರ್ ಆದ ಅಭಿಪ್ರಾಯ ಹೇಳಿ ನಮ್ಮ ಬೌದ್ಧಿಕ ಹಸಿವನ್ನು ತಣಿಸುತ್ತಿದ್ದರು.
ಒಮ್ಮೆ, “For every action, there is an equal and opposite reaction ಅನ್ನೂ ನ್ಯೂಟನ್ನನ ಸಿದ್ಧಾಂತ, ಭೌತಶಾಸ್ತ್ರಕ್ಕಿಂತಾ ಮನುಷ್ಯ ಸಂಬಂಧಗಳಿಗೇ ಹೆಚ್ಚು ಅನ್ವಯಸ್ತದ” ಎಂದು ಬಾಂಬ್ ಹಾಕಿದ್ರು. ವಿದ್ಯಾರ್ಥಿಗಳು ಸುಮ್ಮನಾಗಿ “ಇದು ಹ್ಯಾಂಗ?” ಎಂದು ಮನಸ್ಸಿನಲ್ಲಿಯೇ ಯೋಚಿಸತೊಡಗಿದರು. ಆಗ ನಾನೆಂದೆ,
“ಸರ, ನಾ ಒಂದ್ ಹುಡುಗೀನ್ನ ಪ್ರೀತ್ಸಾಕ್ಹತ್ತೇನಿ. ಒಂದೇ ವ್ಯಾಳೆ ಪ್ರತಿಯೊಂದು action ಗೂ equal reaction ಇರ್ಬೇಕ ಅಂದ್ರ, ಆಕಿನೂ ನನ್ನ ಪ್ರೀತಿಸ್ಬೇಕು. ಆದ್ರ ಆಕಿ ನನ್ನ ಪ್ರೀತಿಸವಾಳ್ಳು. ಇಲ್ಲಿ, ನ್ಯೂಟನ್ನನ ಲಾ ಫೇಲ್ ಆತಲ್ರಿ?” ಎಂದೆ.
“ಅಲ್ರೀ…, ಸುಘೋಷ್, ನೀವ್ ಪ್ರೀತ್ಸಾಕ್ಹತ್ತೇರಿ, ಅಂದ್ರ ಈಕ್ವಲ್ ಆಗಿ ಆಕಿನೂ ಪ್ರೀತಸ್ಪೇಕು ಅಂತೇನಿಲ್ಲ. ಆಕಿ opposite ಆಗಿರ್ಬಹುದಲ್ಲ….ಆವಾಗ ನ್ಯೂಟನ್ನನ ಸಿದ್ಧಾಂತ ಸಂಬಂಧಗಳಿಗೆ ಹೆಚ್ಚು ಅನ್ವಯ ಆಗ್ತದ ಅಂತ ಅನ್ಸೂದಿಲ್ಲೇನು?” ಎಂದರು ಕುಲಕರ್ಣಿ ಸರ್. ಈಗ ನಗುವ ಸರದಿ ನಮ್ಮೆಲ್ಲರದ್ದಾಗಿತ್ತು. ಅಂದು ಹುಡುಗಿಯರೆಲ್ಲ ಗುರಾಯಿಸಿ ನನ್ನ ಕಡೆ ನೋಡುತ್ತಿದ್ದರೆ, ಹುಡುಗರು “ಸುಗ್ಯಾಂದು ತಲಿ ಕೆಟ್ಟೇತಿ, ಆಂವ ಮಾನಸಿಕ ಆಗ್ಯಾನ” ಎಂದು ತೀರ್ಮಾನಿಸಿದ್ದರು.
ನಾನು ಕುಲಕರ್ಣಿ ಸರ್ ಬಳಿ ಕಲಿತದ್ದು ಬರೋಬ್ಬರಿ 5 ವರ್ಷ. ಅದೊಂದು ಎಫ್ ಡಿ ಯಂತೆ ಇಂದಿಗೂ ನನ್ನ ಬಳಿ ಇದೆ. ಅದರ ಬಡ್ಡಿಯನ್ನು ಇನ್ನೂ ನಾನು ಪಡೆಯುತ್ತಿದ್ದೇನೆ. ಕ್ಲಾಸ್ ರೂಮಿನ ಆ ಪರಿಮಳ, ಕಾಲೇಜು ಬಿಟ್ಟು 12 ವರ್ಷಗಳಾಗುತ್ತಿದ್ದರೂ, ಇನ್ನೂ ನಿನ್ನೆ ಮೊನ್ನೆ ನಡೆದಷ್ಟು ಫ್ರೆಶ್ ಆಗಿದೆ ನನ್ನ ಮನಸ್ಸಿನಲ್ಲಿ.
ಕುಲಕರ್ಣಿ ಸರ್ ಕೇವಲ ಕ್ಲಾಸಿರೂಮಿಲ್ಲಿ ಮಾತ್ರ ‘ಸರ’ ಆಗದೆ ಕ್ಯಾಂಪಸ್ಸಿನಲ್ಲಿಯೂ ‘ಸರ್’ ಆಗಿದ್ರು. “ಸರ್, ಧಾರವಾಡ ಆಕಾಶವಾಣಿಯೊಳಗೆ ನಿಮ್ಮ ಭಾಷಣ ಭಾಳ ಛಲೋ ಇತ್ರೀ” ಅಂದಾಗ, “ಕೇಳಿದ್ರಿ…..”ಎಂದು ಸಂತಸ ವ್ಯಕ್ತಪಡಿಸಿದ, ಹಣದ ಅಡಚಣೆಯಲ್ಲಿದ್ದಾಗ ಗರಿ ಗರಿ ನೋಟನ್ನು ನಿರ್ಲಿಪ್ತವಾಗಿ ಕೈಗೆ ನೀಡಿದ, ಯೂತ್ ಫೆಸ್ಟಿವಲ್ ಗೆ ಯೂನಿವರ್ಸಿಟಿಗೆ ಹೋದ ಸಂದರ್ಭದಲ್ಲಿ ಕದ್ದು ಸಿಗರೇಟು ಹೊಡೆಯುತ್ತಿದ್ದಾಗ, ನೋಡಿಯೂ ನೋಡದಂತೆ ನಡೆದುಕೊಂಡ ಹೋದ, “ಪತ್ರಿಕೋದ್ಯಮ ಅನ್ನೋದು ಭಾಳ ಎಲ್ಲಾ ಕೊಡ್ತದ. ಪ್ರಾಮಾಣಿಕರಾಗಿರ್ರೀ…. ಅಷ್ಟ ಸಾಕು. ನಿಮಗ ಗಿಫ್ಟ್ ಕೊಟ್ಟಾಂವ ಸುಮ್ಮ ಕೊಡೂದಿಲ್ಲ, ಜಗತ್ತಿಗೆಲ್ಲ ಹೇಳ್ಕೊಂಡು ಅಡ್ಯಾಡತಾನ ನಾನ ಕೊಟ್ಟಿದ್ದು ಅಂತ. ಹಂತಾ ಪ್ರಸಂಗ ತಂದ್ಕೋಬ್ಯಾಡ್ರಿ” ಎಂದು ಈಟಿವಿ ಸೇರಿದಾಗ ಬುದ್ಧಿವಾದ ಹೇಳಿದ ಕುಲಕರ್ಣಿ ಸರ್ ಇಂದಿಗೂ ನನಗೆ ಮಾರ್ಗದರ್ಶಕರು.
ಫೈನಲ್ ಇಯರ್ ಬಿ.ಎ. ಇರಬೇಕಾದರೆ ನಡೆದ ಘಟನೆಯೊಂದು ಮಾತ್ರ ನನ್ನ ಮನಸ್ಸಿನಲ್ಲಿ ಕುಲಕರ್ಣಿ ಸರ್ ಬಗ್ಗೆ ಹುಳಿ ಹಿಂಡಿಬಿಟ್ಟಿತು. ಕಾಲೇಜಿನ ಜಿಎಸ್ ಸ್ಥಾನಕ್ಕೆ ಚುನಾವಣೆಗಳು ಕ್ಯಾನ್ಸಲ್ ಆಗಿದ್ದವು. ಇಲೆಕ್ಷನ್ ಸಂದರ್ಭದಲ್ಲಿ ಆಗುತ್ತಿದ್ದ ವಿದ್ಯಾರ್ಥಿಗಳ ನಡುವಿನ ಘರ್ಷಣೆಗಳು, ಹೊಡೆದಾಟ, ಪೊಲೀಸ್ ಸೆಕ್ಯುರಿಟಿ, ಚುನಾವಣೆಯ ಸಂದರ್ಭದಲ್ಲಿ ಹೊರಗಿನ ರೌಡಿಗಳ ಮಧ್ಯ್ಪರವೇಶ ಇತ್ಯಾದಿಗಳಿಂದ ಕಾಲೇಜು ಆಡಳಿತ ಮಂಡಳಿ ರೋಸಿಹೋಗಿತ್ತು. ಹೀಗಾಗಿ ಸೆಲೆಕ್ಷನ್ ಪದ್ಧತಿ ಜಾರಿಗೆ ಬಂದಿತ್ತು. ನಾನು ಜಿಎಸ್ ಆಗವುದು ಆ ಸೂರ್ಯಚಂದ್ರರಷ್ಟೇ ಸತ್ಯವಾಗಿತ್ತು. ಸಮಸ್ಯೆಯಾಗಿದ್ದು ನಾನು ನನ್ನ ಕೆಲವು ಸ್ನೇಹಿತರನ್ನು ಎಲ್ ಆರ್, ಸಿಎಸ್ ಪೋಸ್ಟ್ ಗೆ ಸಂದರ್ಶನದ ಸಂದರ್ಭದಲ್ಲಿ ಇನ್ ಫ್ಲುಯೆನ್ಸ್ ಮಾಡಲು ಹೋದಾಗ. ಪ್ರಿನ್ಸಿಪಾಲರು ಕೋಪಗೊಂಡರು. ಸೆಲೆಕ್ಷನ್ ಕಮಿಟಿಯಲ್ಲಿದ್ದ ಕುಲಕರ್ಣಿ “ಸರ್ ಅದ್ಹೆಂಗ್ ಆಗ್ತದ, ಸಾಧ್ಯನ ಇಲ್ಲ ಬಿಡ್ರಿ” ಎಂದರು. ಪರಿಣಾಮ ಆ ವರ್ಷ ಇಡೀ ಪ್ರಕ್ರಿಯಿಯೇ ಸ್ಥಗಿತಗೊಂಡುಬಿಟ್ಟಿತು. ಸೆಪ್ಟೆಂಬರ್ ಸುಮಾರಿಗೆ ಅಂತೂ ಇಂತೂ ಬೇರೆ ಯಾರನ್ನೋ ಸಿಎಸ್ ಹಾಗೂ ಎಲ್ ಆರ್ ಆಗಿ ನೇಮಿಸಲಾಯಿತು. ನನಗೆ ಕುಲಕರ್ಣಿ ಸರ್ ಬಗ್ಗೆ ನಖಶಿಖಾಂತ ಕೋಪಬಂದಿತ್ತು. ನಾ ಜಿಎಸ್ ಆಗೂದನ್ನ ತಪ್ಸಿದ್ದು ಕುಲಕರ್ಣಿ ಸರ್ ಎಂಬ ಭಾವನೆಯಲ್ಲಿದ್ದೆ. ಮುಂದೊಂದು ದಿನ ಕುಲಕರ್ಣಿ ಸರ್ ಸಿಕ್ಕಾಗ ಅವರೇ ಮಾತಿಗೆ ನಿಂತಿದ್ದರು, “ನೀವು ಜಿಎಸ್ ಆಗ್ದೇ ಇದ್ದಿದ್ದು ಒಳ್ಳೇದಾತು ಸುಘೋಷ್” ಅಂದ್ರು. ನಾನು ಉರಿದು ಹೋದೆ. “ನೀವ ನನ್ನ ಜಿಎಸ್ ಮಾಡ್ಲಿಲ್ಲ” ಎಂದು ಅಸಮಧಾನದಿಂದ ನುಡಿದೆ. “ಸುಘೋಷ, ನಾ ಭಾಳ ಹುಡುಗುರನ್ನ ನೋಡೇನಿ. ಈ ಜಿಎಸ್, ಎಲ್ ಆರು, ಸಿಎಸ್ ಅಂತ ಇಡೀ ವರ್ಷ ವೇಸ್ಟ್ ಮಾಡ್ಕೊಂಡು ಬಿಡ್ತಾರ. ಎಲ್ಲಾರೂ ಅಲ್ಲ….ಆದ್ರ ಆ ಜವಾಬ್ದಾರಿಯ ಒತ್ತಡದಾಗ ಒಮ್ಮೊಮ್ಮೆ ಹಂಗ ಆಗಿ ಬಿಡ್ತದ… ಅಭ್ಯಾಸ ಮಾಡೋದಿಲ್ಲ. ಪರೀಕ್ಷಾ ಬಂದಾಗ ಏನೂ ಓದಿರೋದಿಲ್ಲ. ಹುಶಾರಿರ್ತಾರು ಆದ್ರ, ಅಭ್ಯಾಸ ಮಾಡಿಲ್ಲ ಅಂದ್ರ ಏನ್ ಆಗ್ತದ ಹೇಳ್ರೀ…ಪರ್ಸಂಟೇಜು ಡೌನ್ ಆಗ್ತದ. ಮುಂದಿನ ಜೀವನಕ್ಕ ಅದು ತೊಂದ್ರಿ ಆಗ್ತದ” ಅಂದ್ರು. ಆಗ ಅವರು ಹೇಳಿದ್ದು ಖಂಡಿತವಾಗಿಯೂ ನನಗೆ ರುಚಿಸಿರಲಿಲ್ಲ. ಆದರೆ ಕಾಲೇಜಿನಿಂದ ಹೊರಬಂದ ಒಂದೆರಡು ವರ್ಷಗಳಲ್ಲೇ ಕುಲಕರ್ಣಿ ಸರ್ ಅವರ ನಿರ್ಧಾರದಿಂದ ನಾನೆಷ್ಟು ಪ್ರಯೋಜನ ಪಡೆದೆನೆಂದು ಗೊತ್ತಾಯಿತು. ಕಾಲೇಜಿನಲ್ಲಿದ್ದಾಗ ‘ಕ್ರಾಂತಿವೀರ’ ಎಂದು ಹೆಸರು ಗಳಿಸಿದ್ದ ನಾನು ಯೂತ್ ಫೆಸ್ಟಿವಲ್, ನಾಟಕ, ನೃತ್ಯ, ಹಾಡು, ಕಾಲೇಜಿನ ಗಲಾಟೆಗಳು ಎಂದು ಸಂಪೂರ್ಣ ‘ಷಹೀದ್’ ಆಗುವುದು ನಿಶ್ಚಿತವಾಗಿತ್ತು. “ಏನ ಮಾಡ್ರಿ, ಒಂದು ಮಿತಿಒಳಗ ಮಾಡ್ರಿ. ಅತೀ ಆದ್ರ ಅಮೃತಾನೂ ವಿಷ ಆಗ್ತದ” ಎನ್ನುವ ಅವರ ಮಾತು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.
ಇಂದಿನ ನನ್ನ ಯಶಸ್ಸಿನಲ್ಲಿ ಕುಲಕರ್ಣಿ ಸರ್ ಅವರ ಪಾತ್ರ ಬಹು ಮಹತ್ವದ್ದು. ನನ್ನ ಕಾಲೇಜು ದಿನಗಳಲ್ಲಿ ಬಹುಶಃ ಇಂತಹ ಗುರುಗಳು ಇಲ್ಲದೇ ಹೋಗಿದ್ದರೆ, ನನ್ನ ಬದುಕು ಇಂದು ಇಷ್ಟೊಂದು ವೈವಿಧ್ಯಮಯ ಹಾಗೂ ಸುಂದರವಾಗಿರುತ್ತಿರಲಿಲ್ಲ. ಕುಲಕರ್ಣಿ ಸರ್ ಅಂದಿಗೂ ಇಂದಿಗೂ ಎಂದಿಗೂ ನನ್ನ ಗುರುಗಳು. ಷಷ್ಟಿಪೂರ್ತಿಯ ಈ ಸಂದರ್ಭದಲ್ಲಿ ನಾನು ಭಗವಂತನಲ್ಲಿ ಕೇಳುವುದು, “ಏನ ಬರ್ಲಿ, ಕುಲಕರ್ಣಿ ಸರ್ ಆಶೀರ್ವಾದ ಒಂದು ನನ್ನ ಮ್ಯಾಲಿರಲಿ. ಇಂಥಾ ಗುರುಗಳಿಂದ ಮಾತ್ರ ನಿಜವಾದ ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯ. ಹಿಂತಾವ್ರಿಗೆ ಆಯುರಾರೋಗ್ಯ ಕೊಟ್ಟು, ನಮ್ಮ ಮ್ಯಾಲೆ ಕೃಪಾ ತೋರ್ಸಪ್ಪಾ” ಅಂತಾ ಮಾತ್ರ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s