ಮಾಧ್ಯಮ: ಅತ್ತ, ಇತ್ತ, ಎತ್ತ?

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2014 ರಲ್ಲಿ ಪ್ರಕಟವಾಗಿರುವ ನನ್ನ ಲೇಖನ. ಅಭಿಪ್ರಾಯಗಳಿಗೆ ಸ್ವಾಗತ.

...

2

ಮಾಧ್ಯಮ: ಅತ್ತ, ಇತ್ತ, ಎತ್ತ?
“ಇವತ್ತು ಮಾಧ್ಯಮದಲ್ಲಿ ಲೆಫ್ಟಿಸ್ಟ್ ಗಳು ಸೇರಿಕೊಂಡಿದ್ದಾರೆ. ಕಮ್ಯೂನಿಸ್ಟರೂ ಇದ್ದಾರೆ. ಹಾಗೆಯೇ ರೈಟಿಸ್ಟ್, ಕ್ಯಾಪಿಟಾಲಿಸ್ಟ್, ಸೋಷಿಯಾಲಿಸ್ಟ್ ಗಳೂ ಇದ್ದಾರೆ. ಆದರೆ ದುರಂತ ಅಂದರೆ ಜರ್ನಲಿಸ್ಟ್ ಗಳೇ ಇಲ್ಲ” ಎಂದು ವಿಚಾರ ಸಂಕಿರಣವೊಂದರಲ್ಲಿ ಪತ್ರಕರ್ತರೊಬ್ಬರು ಅಳಲು ತೋಡಿಕೊಂಡರು. ಅಲ್ಲೊಂದು ಮೌನವಿತ್ತು. ಅವರ ಧ್ವನಿಯಲ್ಲಿದ್ದ ನೋವು ನಿಧಾನವಾಗಿ ಕೇಳುಗರ ಹೃದಯವನ್ನು ತಟ್ಟಿ ಯೋಚನೆಗೆ ಹಚ್ಚುವಂತೆ ಮಾಡಿತ್ತು.
ಹೌದು. ಮಾಧ್ಯಮದಲ್ಲಿ ಇಂದು ಎಲ್ಲ ‘ಇಸಂ’ಗಳನ್ನು ಪ್ರಮೋಟ್ ಮಾಡುವವರು ದಂಡಿದಂಡಿಯಾಗಿ ಸಿಗುತ್ತಾರೆ. ಆದರೆ ಪತ್ರಿಕೋದ್ಯಮಕ್ಕೆ ಮಾತ್ರ ನಿಷ್ಠರಾಗಿರುವ ಪತ್ರಕರ್ತರನ್ನು ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಹುಡುಕಬೇಕಾದ ಪರಿಸ್ಥಿತಿಯಿದೆ. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯುತ್ತಾರೆ. ಸ್ವಾತಂತ್ರ್ರಾನಂತರದ ವರ್ಷಗಳಲ್ಲಿ ಮಾಧ್ಯಮ, ವಾಸ್ತವವಾಗಿಯೂ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆಯೇ ಎಂದು ಪ್ರಶ್ನಿಸಿದಾಗ, ‘ಖಂಡಿತ ಇಲ್ಲ’ ಎಂಬ ಉತ್ತರ ಸಿಗುತ್ತದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರದ ಕೆಲ ವರ್ಷಗಳಲ್ಲಿ ಮಾಧ್ಯಮ ಸರಿಯಾದ ಹಾದಿಯಲ್ಲಿಯೇ ಇತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಂತೂ ಪತ್ರಿಕೆಗಳು ರೂಪಿಸಿದ ಆಂದೋಲನದ್ದೇ ಒಂದು ತೂಕ.
ಆದರೆ ಬರಬರುತ್ತ ಮಾಧ್ಯಮದ ಸ್ವರೂಪವೇ ಬದಲಾಗತೊಡಗಿತು. ಸ್ವಾತಂತ್ರ್ಯ, ಸಚ್ಚಾರಿತ್ರ್ಯ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪತ್ರಿಕಾರಂಗದಲ್ಲಿ ಬಂಡವಾಳಶಾಹಿಗಳ ಕೈ ಮೇಲಾಗತೊಡಗಿತು. ಈಗ ಅದರ ಫಲವನ್ನು ಉಣ್ಣುತ್ತಿದ್ದೇವೆ, ಅಷ್ಟೇ. ಮಾಧ್ಯಮವನ್ನು ಒಂದು ಸೇವೆ ಎಂದು ಸರ್ಕಾರ ಗುರುತಿಸುತ್ತದೆ. ಆದರೆ ನೂರೆಂಟು ಪತ್ರಕರ್ತರನ್ನು, ಜಿಲ್ಲೆಗಳಲ್ಲಿ ಒಂದರಂತೆ ಆಫೀಸು ತೆರೆದು, ಕ್ಯಾಮೆರಾ, ಸ್ಟೂಡಿಯೋ, ಎಸಿ ಹಾಲ್, ಓಬಿ ವ್ಯಾನ್, ಸ್ಯಾಟಲೈಟ್ ರೈಟ್ಸ್, ಪ್ರಿಂಟಿಂಗ್ ಪ್ರೆಸ್ ಎಂದೆಲ್ಲಾ ಬಂಡವಾಳ ಹಾಕಿರುವ ಪತ್ರಿಕೆ ಅಥವಾ ಚ್ಯಾನಲ್ ನ ಮಾಲೀಕನಿಗೆ ಮಾತ್ರ ಮಾಧ್ಯಮ ಎಂಬುದು ಕೇವಲ ಮತ್ತು ಕೇವಲ ಬಿಝಿನೆಸ್. ‘ನಾನು ದುಡ್ಡು ಹಾಕಿದ್ದೇನೆ. ನನಗೆ ಲಾಭ ಬರಬೇಕು’ ಎಂಬುದು ಅವರ ವಾದ. ಅದಕ್ಕಾಗಿಯೇ ಮಹಿಳೆಯೆರ ಒಳಉಡುಪುಗಳನ್ನು ಮಾರುವ ಕಂಪನಿಯೊಂದು ಟೂ ಪೀಸ್ ತೊಟ್ಟಿರುವ ವಿದೇಶಿ ಹೆಣ್ಣುಮಗಳ ಚಿತ್ರವನ್ನು ಜಾಹೀರಾತಾಗಿ ನೀಡುತ್ತದೆ. ರಾಜ್ಯಮಟ್ಟದ ಪತ್ರಿಕೆಯೊಂದು ಅದನ್ನು ಮುಖಪುಟದಲ್ಲಿಯೇ ಪ್ರಕಟಿಸುತ್ತದೆ. ಅದಕ್ಕಾಗಿಯೇ ಮಟಮಟ ಮಧ್ಯಾಹ್ನ ಬೆಡಗಿಯೊಬ್ಬಳು ಲೈಂಗಿಕ ದುರ್ಬಲತೆಯನ್ನು ಹೋಗಲಾಡಿಸುವ ಗುಳಿಗೆ ಹಾಗೂ ಲೇಹ್ಯವನ್ನು 15 ನಿಮಿಷಗಳ ಕಾಲ ರಾಜ್ಯಮಟ್ಟದ ಚ್ಯಾನಲ್ ನಲ್ಲಿ ಮಾರುತ್ತಾಳೆ. ಅದಕ್ಕಾಗಿಯೇ, ಯಾರೋ ಒಬ್ಬ ರಾಜಕಾರಣಿಯ ಅನೈತಿಕ ಲೈಂಗಿಕ ಕ್ರಿಯೆಯನ್ನು ಒಂಚೂರೂ ಬ್ಲರ್ ಮಾಡದೇ, ಮನೆಮಂದಿಯೆಲ್ಲ ಕುಳಿತು ನೋಡುವ ಹೊತ್ತಿನಲ್ಲೇ ಹಸಿಬಿಸಿಯಾಗಿ ತೋರಿಸಲಾಗುತ್ತದೆ. ಅದಕ್ಕಾಗಿಯೇ, ದರಿದ್ರ ವಿಷಯವೊಂದನ್ನು ಎತ್ತಿಕೊಂಡು ತಾಸುಗಟ್ಟಲೆ ಅದನ್ನು ಹಿಂಜಿ, ಪ್ಯಾನಲ್ ಡಿಸ್ಕಷನ್ ಮಾಡಿಸಿ, ಲೈವ್ ಮಾಡಿಸಿ, ಯಾರ್ಯಾರನ್ನೋ ಕರೆದು ಜನರನ್ನು ತಪ್ಪು ದಾರಿಗೆ ಪ್ರಚೋದಿಸಲಾಗುತ್ತದೆ. ಅದಕ್ಕಾಗಿಯೇ ‘ಗುರೂಜಿ’ಗಳನ್ನು ಕರೆಯಿಸಿ ತಾಸುಗಟ್ಟಲೆ ವಾಸ್ತು ಪರಿಹಾರ, ಅನಾರೋಗ್ಯ ಪರಿಹಾರ, ಹಣಕಾಸಿನ ಪರಿಹಾರ ಮಾಡಿಸಲಾಗುತ್ತದೆ. ಯಾಕೆಂದರೆ ಬಂಡವಾಳ ಹಾಕಿದ್ದಾರೆ. ಲಾಭ ಬೇಕಲ್ಲವೆ?
ಹಾಗೆ ನೋಡಿದರೆ, ಅವರ ವಾದದಲ್ಲಿ ತಪ್ಪೂ ಇಲ್ಲ. ಬಂಡವಾಳ ಹಾಕಿರುವ ಪ್ರತಿಯೊಬ್ಬ ವ್ಯಾಪಾರಿಯೂ ಲಾಭ ಅಪೇಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಅದು ಅರ್ಥ ಶಾಸ್ತ್ರ, ವಾಣಿಜ್ಯ ಧರ್ಮ. ಕ್ಷೇತ್ರ ಯಾವುದಾದರೆ ವ್ಯಾಪಾರಿಗೇನು?
ಇದರ ಪರಿಣಾಮ ಮಾತ್ರ ಭೀಕರ. ಈಗಾಗಲೇ ಕಾರ್ಯಾಂಗ, ಶಾಸಕಾಂಗ ತಮ್ಮ ಮಾನವನ್ನು ಹರಾಜು ಹಾಕಿಕೊಂಡು ಲಜ್ಜೆಗೆಟ್ಟಿವೆ. ಪೋಲಿಸರೇ ಕಳ್ಳರ ಜೊತೆ ಶಾಮೀಲಾಗಿ ಪರ್ಸಂಟೇಜ್ ಹೊಡೆಯುವುದು, ಗಣಿ ಕೆಸರಲ್ಲಿ ಮೈಯೆಲ್ಲ ಕೆಸರು ಮಾಡಿಕೊಂಡ ಸಚಿವನೊಬ್ಬ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುವುದು, ಕಾರ್ಯಾಂಗ ಹಾಗೂ ಶಾಸಕಾಂಗದ ಲೇವಡಿಯಲ್ಲದೆ ಮತ್ತೇನು?
ಇಲ್ಲಿ ಮಾಧ್ಯಮದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಮೇಲಿನಿಂದ ಕೆಳಗಿನ ಸ್ತರದ ವರೆಗೂ ಭ್ರಷ್ಟಾಚಾರವೇ ತುಂಬಿದೆ. ನೀರಾ ರಾಡಿಯಾ ಟೇಪ್ ಹಗರಣದಲ್ಲಿ ತಮಗೇ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡ, ಎದ್ದರೆ ಬಿದ್ದರೆ ಜಮ್ಮು-ಕಾಶ್ಮೀರದಿಂದಲೇ ರಿಪೋರ್ಟಿಂಗ್ ಮಾಡುವ ಹಿರಿಯ ಪತ್ರಕರ್ತರು ಒಂದೆಡೆಯಾದರೆ, ಚಿತ್ರ-ವಿಚಿತ್ರ ಹೆಸರುಗಳನ್ನಿಟ್ಟುಕೊಂಡ ತಾಲೂಕು ಮಟ್ಟದ ಪೀತ ಪತ್ರಿಕೆಗಳು ಮತ್ತೊಂದೆಡೆ. ಇವುಗಳ ಮಧ್ಯದಲ್ಲಿ, ಸಾಧ್ಯವಾದಷ್ಟು ದಿನ ಮಾಧ್ಯಮದಲ್ಲಿ ಇದ್ದು ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಮಾಡಿ, ಮಾಡಿಸಿ, ಸೈಟು, ಕಾರು, ಮನೆ ಮಾಡಿಕೊಂಡು, ವಿಧಾನ ಸೌಧದ ಕಾರಿಡಾರ್ ಗಳಲ್ಲಿ ಟ್ರಾನ್ಸ್ ಫರ್ ಗಳನ್ನು ಮಾಡಿಸುತ್ತ ಹಾಯಾಗಿರುವವರು ನೂರಾರು ಮಂದಿ. ಇಂತಹ ಕೆಲವರಿಗೆ ಮ್ಯಾನೇಜ್ ಮೆಂಟ್ ಗಳಿಂದಲೇ ಕುಮ್ಮಕ್ಕು. ಯಾಕೆಂದರೆ ಆ ಮ್ಯಾನೇಜ್ ಮೆಂಟ್ ಪ್ರಮುಖನಿಗೆ ‘ಸಮಾಜ ಸೇವಾ ರತ್ನ’ ದಂತಹ ಪ್ರಶಸ್ತಿ ಕೊಡಿಸುವುದು, ಸಹೋದರ ಸಂಸ್ಥೆಗಳ ಟೆಂಡರ್ ಅಪ್ರೂವ್ ಮಾಡಿಸುವ ಕೆಲಸವನ್ನು ಇದೇ ಪತ್ರಕರ್ತರು ಮಾಡಬೇಕು. ಹಲವು ಮಾಧ್ಯಮ ಸಂಸ್ಥೆಗಳಂತೂ ಇದಕ್ಕಾಗಿಯೇ ‘ಸ್ಪೆಷಲ್ ಕರೆಸ್ಪಾಂಡಂಟ್’ ಗಳನ್ನು ಇಟ್ಟುಕೊಂಡಿದ್ದಾರೆ.
ಈ ಭ್ರಷ್ಟಾಚಾರಕ್ಕಿಂತ ಭಯಾನಕವಾಗಿರುವುದು ಹಾಗೂ ಆತಂಕಕಾರಿಯಾಗಿರುವುದು ಮಾಧ್ಯಮ ಹಾಗೂ ರಾಜಕಾರಣದ ಸಂಬಂಧ. ಕರ್ನಾಟಕವನ್ನೇ ನೋಡಿ. ಹಲವು ಪತ್ರಿಕೆಗಳು ಹಾಗೂ ಚ್ಯಾನಲ್ ಗಳನ್ನು ರಾಜಕಾರಣಿಗಳೇ ಬಹಿರಂಗವಾಗಿ ನಡೆಸುತ್ತಿದ್ದಾರೆ. ಇಂತಹ ಚ್ಯಾನಲ್ ಗಳಿಂದ ಎಷ್ಟರಮಟ್ಟಿಗೆ ನೈಜ ಸುದ್ದಿಯನ್ನೂ, ನೇರ ವರದಿಯನ್ನೂ, ನಿರ್ಭೀತ ಪತ್ರಿಕೋದ್ಯಮವನ್ನೂ ನಿರೀಕ್ಷಿಸಲು ಸಾಧ್ಯ? ಹೋಗಲಿ, ವಿರುದ್ಧ ಪಾರ್ಟಿಯವರ ಪತ್ರಿಕಾಗೋಷ್ಠಿಯಲ್ಲಿ ಈ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಎಷ್ಟರಮಟ್ಟಿಗೆ ತಲೆ ಎತ್ತಿ, ಎದೆ ಉಬ್ಬಿಸಿ ಪ್ರಶ್ನೆ ಕೇಳಲು ಸಾಧ್ಯ? ನವದೆಹಲಿಯಲ್ಲಿ ನಡೆಯುವ ರಾಜಕಾರಣಿಗಳ ಪತ್ರಿಕಾಗೋಷ್ಠಿಯಲ್ಲಿ ಹಲವು ರಾಜ್ಯಗಳ ಮುಖಂಡರು ತಮ್ಮ ವಿರೋಧಿ ರಾಜಕಾರಣಿ ನಡೆಸುವ ಚ್ಯಾನಲ್ ಗೆ ಸೇರಿದ ಪತ್ರಕರ್ತನ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೇ ಹೋಗುವುದಿಲ್ಲ. “ಯೂ ಮೇಯ್ ಲೀವ್ ದಿ ಪ್ರೆಸ್ ಕಾನ್ಫರೆನ್ಸ್” ಎಂದು ಮುಲಾಜಿಲ್ಲದೆ ಹೇಳುತ್ತಾರೆ.
ಮಾಧ್ಯಮ ರಾಜಕಾರಣ ಇಲ್ಲಿಯೇ ನಿಲ್ಲುವುದಿಲ್ಲ. ಹಿಂದಿ-ಇಂಗ್ಲೀಷ್-ಕನ್ನಡ ಚ್ಯಾನಲ್ ಗಳಲ್ಲಿ ನಡೆಯುತ್ತಿರುವ ಪ್ಯಾನಲ್ ಡಿಸ್ಕಷನ್ ಗಳ ಪರಿಸ್ಥತಿ ನೋಡಿದರೇ ಆ ಚ್ಯಾನಲ್ ನ ಬಣ್ಣ ಬಯಲಾಗುತ್ತದೆ. ಡಿಸ್ಕಷನ್ ಆರಂಭವಾದ ಐದಾರು ನಿಮಿಷಗಳಲ್ಲೇ ಆಂಕರ್ ನ ನಿಲುವೇನು, ಆತ ಯಾವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದು ಯಾರೇ ಆದರೂ ಥಟ್ಟನೆ ಗುರುತಿಸಬಹುದು. ಆಂಕರ್, ಪ್ಯಾನಲ್ ನಲ್ಲಿರುವ ನಿರ್ದಿಷ್ಟ ಪಕ್ಷ ಅಥವಾ ಸಂಘಟನೆಗೆ ಸೇರಿದ ವ್ಯಕ್ತಿಗೆ ಮಾತನಾಡಲು ಅವಕಾಶವನ್ನೇ ನೀಡದಿರುವುದು ಅಥವಾ ಮಧ್ಯದಲ್ಲೇ ಆತನ ಮಾತನ್ನು ತುಂಡರಿಸುವುದು, ಅನಗತ್ಯ ಪ್ರಶ್ನೆಗಳನ್ನು ಕೇಳಿ ಕಿರಿಕಿರಿ ಉಂಟುಮಾಡುವುದು, ಮತ್ತೊಬ್ಬರಿಗೆ ಬೇಕಾದ ಹಾಗೆ ಪ್ರಶ್ನೆ ಕೇಳುವುದು – ಎಲ್ಲದರಲ್ಲೂ ಅಡಗಿರುವುದು ಇದೇ ಪಕ್ಷ ರಾಜಕಾರಣ.
ರಾಜಕಾರಣದ ಮುಖ ಹೀಗಾದರೆ, ಇನ್ನು ಪತ್ರಕರ್ತರ ಪರಿಸ್ಥಿತಿ ಅವಲೋಕಿಸಿದರೆ ವಿಷಾದ ಹಾಗೂ ಆತಂಕ ಎರಡೂ ಉಂಟಾಗುತ್ತದೆ. ಮೊದಲಾದರೆ ಪತ್ರಿಕೋದ್ಯಮಕ್ಕೆಂದೇ ವಿಶೇಷವಾದ ಕೋರ್ಸ್ ಗಳಿರಲಿಲ್ಲ. ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಯಾರೂ ಹೇಳಿಕೊಡತ್ತಲೂ ಇರಲಿಲ್ಲ. ಆದರೂ ಕರ್ನಾಟಕ ‘ವಾಹ್’ ಎಂದು ಬರೆಯುವ ಪತ್ರಕರ್ತರನ್ನು ಕಂಡಿತು. ಇಂದು ಪತ್ರಿಕೋದ್ಯಮದ ಕೋರ್ಸ್ ಗಳಿವೆ. ಮಾಧ್ಯಮಕ್ಕಾಗಿಯೇ ವಿಶೇಷವಾದ ಕಾಲೇಜುಗಳಿಗವೆ. ಹೀಗಿದ್ದೂ ಅತ್ಯುತ್ತಮ ಪತ್ರಕರ್ತರು ಮಾತ್ರ ತಯಾರಾಗುತ್ತಿಲ್ಲ. ಇತ್ತಿಚೆಗಷ್ಟೇ ನನ್ನ ಸಹೋದ್ಯೋಗಿ ಪತ್ರಕರ್ತರು ಈ ಘಟನೆಯನ್ನು ವಿವರಿಸಿದರು. ಪತ್ರಿಕೋದ್ಯಮವನ್ನು ಪಾಠಮಾಡಲೆಂದು ಅವರನ್ನು ಕರ್ನಾಟಕದ ಖ್ಯಾತ ಮಾಧ್ಯಮ ಕಾಲೇಜೊಂದಕ್ಕೆ ಆಹ್ವಾನಿಸಲಾಗಿತ್ತಂತೆ. ಸ್ನಾತಕೋತ್ತರ ಪದವಿಯನ್ನು ಆಫರ್ ಮಾಡುವ ಕಾಲೇಜು ಅದು. ಹೀಗಾಗಿ ಇವರು ಸಾಕಷ್ಟು ತಯಾರಿ ಮಾಡಿಕೊಂಡೇ ಕಾಲೇಜಿಗೆ ಭೇಟಿ ಇತ್ತರು. ಪಾಠ ಮಾಡುತ್ತ, ವಿದ್ಯಾರ್ಥಿಗಳ ಬರವಣಿಗೆ ಶೈಲಿ ಹೇಗಿದೆ ಎಂದು ಅರಿಯುವ ಮನಸ್ಸಾಯಿತು. ಸರಿ ಎಂದು, ವಿದ್ಯಾರ್ಥಿಗಳಿಗೆ ಅವರು ಬಯಸಿದ ಯಾವುದಾದರೂ ಒಂದು ವಿಷಯದ ಮೇಲೆ ಚಿಕ್ಕದಾದ ಲೇಖನ ಬರೆಯಲು ಹೇಳಿದರಂತೆ. ವಿದ್ಯಾರ್ಥಿಗಳ ಲೇಖನಗಳು ಕೈಸೇರುತ್ತಿದ್ದಂತೆ ಸ್ನೇಹಿತರಿಗೆ ಯಾಕೋ ಎಲ್ಲಿಯೋ ಏನೋ ತಪ್ಪಿದ ಭಾವ. ಕಾರಣ, ವಿದ್ಯಾರ್ಥಿಗಳು ಬರೆದ ಲೇಖನದ ತುಂಬಾ ನೂರಾರು ಕಾಗುಣಿತ ತಪ್ಪುಗಳು, ತಪ್ಪು ವಾಕ್ಯರಚನೆಗಳು ಹಾಗೂ ವ್ಯಾಕರಣ ದೋಷಗಳು. ಸ್ನೇಹಿತರಿಗೆ ಆತಂಕವಾಗಿ, ವಿದ್ಯಾರ್ಥಿಗಳಿಗೆ ‘ಅ ಆ ಇ ಈ’ ಬರೆಯಿರಿ ಅಂದರಂತೆ. ಇದನ್ನು ವಿದ್ಯಾರ್ಥಿಗಳು ಬರೆದು ನೀಡಿದಾಗ, ಸ್ನೇಹಿತರಿಗೆ ಶಾಕ್. 30 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ತಪ್ಪು ತಪ್ಪು ‘ಅ ಆ ಇ ಈ’ ಬರೆದಿದ್ದರಂತೆ. ಇದು ನಡೆದದ್ದು, ಕರ್ನಾಟಕದ ಪ್ರತಿಷ್ಠಿತ ಮಾಧ್ಯಮ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಕ್ಲಾಸಿನಲ್ಲಿ. ಇವರೇ ನಮ್ಮ ಮುಂದಿನ ಪತ್ರಕರ್ತರು. ಸಮಾಜದ ಡೊಂಕನ್ನು ತಿದ್ದುವ ಅಂಕಣಕಾರರು!! ಹೇಗಿದೆ ನೋಡಿ ಪರಿಸ್ಥಿತಿ.
ಇನ್ನು ಸುದ್ದಿ ಮಾಧ್ಯಮಕ್ಕಿಂತ ಹೆಚ್ಚು ಪ್ರಭಾವ ಬೀರುವುದು GEC ಗಳು ಅಂದರೆ, General Entertainment Channel. ಇದರಲ್ಲಿ ಪ್ರಸಾರವಾಗುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ನಾಗರಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಯೋಚನಾ ಶೈಲಿ ಹಾಗೂ ಮನೋಧರ್ಮವನ್ನು ರೂಪಿಸುತ್ತವೆ. ಆದರೆ ಇಂದು ರಾಷ್ಟ್ರೀಯ ಹಾಗೂ ರಾಜ್ಯದ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಗುಣಮಟ್ಟ, ಕಥಾ ಹಂದರ, ಸನ್ನಿವೇಶ, ಡೈಲಾಗ್ ಗಳ ಬಗ್ಗೆ ಮಾತನಾಡದಿದ್ದರೇ ಒಳಿತು. ರಾಮಾಯಣ, ಮಹಾಭಾರತ, ಚಾಣಕ್ಯ, ನುಕ್ಕಡ್, ಹೆಲೋ ಝಿಂದಗಿ, ವಾಗಳೆ ಕಿ ದುನಿಯಾ, ಗುಡ್ಡದ ಭೂತದಂತಹ ಜಾಗದಲ್ಲಿ ಬಂದಿರುವ ಸೀರಿಯಲ್ ಗಳು ಅನಾಹುತವನ್ನೇ ಸೃಷ್ಟಿಸುತ್ತಿವೆ. ಎಲ್ಲ ವಾಹಿನಿಗಳಲ್ಲಿ ಹೀಗಿದೆ ಎಂದೆಲ್ಲ. ಆದರೆ ಒಳ್ಳೆಯ ಧಾರಾವಾಹಿಗಳ ಪ್ರಮಾಣ ಮಾತ್ರ ತೀರ ಕಡಿಮೆ. ರಿಯಾಲಿಟಿ ಶೋಗಳ ಹೆಸರಿನಲ್ಲಿ ಜೀವ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು, ಕೊಳ್ಳುಬಾಕ (ಕೆಟ್ಟ)ಸಂಸ್ಕೃತಿಯನ್ನು ಪ್ರಚೋದಿಸುವ, ಮಹಿಳೆಯರನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಮುಕವಾಗಿ ತೋರಿಸುವ ಕೆಲಸಗಳೇ ವಿಜೃಂಭಿಸುತ್ತಿವೆ.
ಇದೆಲ್ಲವನ್ನು ಅವಲೋಕಿಸಿದ ಬಳಿಕ ಧುತ್ತೆಂದು ಎದುರಾಗುವ ದೊಡ್ಡ ಪ್ರಶ್ನೆಯೆಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದರೆ ಮಾಧ್ಯಮಕ್ಕೆ ಕಡಿವಾಣ ಯಾರು ಹಾಕಬೇಕು ಎಂದಾಗ ಯಾರೂ ಕೈಯೆತ್ತುವುದೇ ಇಲ್ಲ. ಟಿವಿಯಲ್ಲಿ ಕೆಟ್ಟದೆನೋ ಪ್ರಸಾರವಾಗುತ್ತಿದೆ ಎಂದಾಕ್ಷಣ ಚ್ಯಾನಲ್ ಬದಲಾಯಿಸುವವರೇ ಹೆಚ್ಚು. ಆದರೆ ಆ ಚ್ಯಾನಲ್ ಪ್ರಸಾರ ಮಾಡುತ್ತಿರುವ ದೃಶ್ಯ/ವಿಷಯ ವಸ್ತುವಿನ ವಿರುದ್ಧ ಚ್ಯಾನಲ್ ಪ್ರಮುಖರಿಗಾಗಲಿ, BCCC ಮತ್ತು NBA ಗಳಿಗಾಗಿ ದೂರು ಸಲ್ಲಿಸುವವರು ಎಷ್ಟು ಮಂದಿ. “ಥೂ ಅಸಹ್ಯವಾದದ್ದನ್ನು ತೋರಿಸಿದರು ಮಾರಾಯ್ರೆ”, “ಈ ವಿಷಯದ ಮೇಲೂ ಪ್ಯಾನಲ್ ಡಿಸ್ಕಷನ್ ಬೇಕೆನ್ರಿ?” ಎಂದು ಗೊಣಗಿಕೊಂಡು ಚ್ಯಾನಲ್ ಬದಲಾಯಿಸಿ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಮುಳುಗುವವರೇ ಹೆಚ್ಚು. ಮೊದಲ ಹಂತದಲ್ಲಿ ನಾಗರಿಕರೇ ಪ್ರಶ್ನಿಸುವ, ಪ್ರಶ್ನೆಯನ್ನು ಸರಿಯಾದವರಿಗೆ ಕೇಳುವ ಕೆಲಸವನ್ನು ಮಾಡಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈಗಾಗಲೇ ಇದಕ್ಕಾಗಿ ವೀಕ್ಷಕರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿದೆ. ಅದನ್ನು ಸರಿಯಾಗಿ, ಸಂಪೂರ್ಣವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕಿದೆ.
ನಾವು ಬಯಸುವ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಮಾಧ್ಯಮವನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳೋಣ. ಮಾಧ್ಯಮವನ್ನು ಪ್ರಶ್ನಿಸೋಣ. ಬದಲಾವಣೆ ತರೋಣ.
——————–

2 thoughts on “ಮಾಧ್ಯಮ: ಅತ್ತ, ಇತ್ತ, ಎತ್ತ?

  1. ಒಳ್ಳೆಯ ಲೇಖನ, ವಿಚಾರ ಮಾಡಬೇಕಾದ ಸ೦ಗತಿ. ಸದ್ಯದ ಅಧಮ ಪರಿಸ್ಥಿತಿಗೆ ಕಡಿವಾಣ ಹಾಕಲೇ ಬೇಕು. ಯಾರು, ಹೇಗೆ ಎ೦ಬುದು ಮಾತ್ರ ಚಿದ೦ಬರ ರಹಸ್ಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.