ಯುವ ಪ್ರಾಣಿಗಳು….

ಕೇಂದ್ರ ಸರ್ಕಾರದ ಜಾಹೀರಾತಿನ ಕರ್ಮ ಇದು…

14312131 (2)

Advertisements

ಇತರ ಜಾತಿಗಳ ರಜೆಗಳ ಬಳಕೆ : ಹೀಗೊಂದು ವಿಚಾರ.

234
ರಜೆಗಳನ್ನು ಪಡೆದುಕೊಳ್ಳುವುದರಲ್ಲಿ ನಮ್ಮಲ್ಲಿ ಹೆಚ್ಚಿನವರು ಮುಂದು. ಅಗಸ್ಟ್ 15, ಜನವರಿ 26 ಮುಂತಾದವು ಭಾನುವಾರ ಬಂತೆಂದರೆ ಪೆಚ್ಚುಮೋರೆ ಹಾಕುವ, ಜನವರಿ ಮೊದಲ ವಾರದಲ್ಲಿ ವರ್ಷದ ಕ್ಯಾಲೆಂಡರ್ ಹಿಡಿದು ಯಾವ ಯಾವ ದಿನಗಳನ್ನು ಕ್ಲಬ್ ಮಾಡಿದರೆ ಲಾಂಗ್ ಲೀವ್ ಪಡೆದುಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುವವರೇ ಹೆಚ್ಚು. ಒಟ್ಟು 365 ದಿನಗಳಲ್ಲಿ ಭಾನುವಾರ, ಎರಡನೇ ಶನಿವಾರ, (ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಕಾರ್ಪೋರೇಟ್ ವಲಯಕ್ಕೆ ಪ್ರತಿ ಶನಿವಾರ), ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ವರಮಹಾಲಕ್ಷ್ಮಿ, ಮೊಹರ್ರಂ, ಈದ್, ಕನಕ ಜಯಂತಿ, ಗುರುನಾನಕ್ ಜಯಂತಿ, ದೀಪಾವಳಿ, ಗಣೇಶ ಚತುರ್ಥಿ, ವಿಜಯದಶಮಿ, ಗುಡ್ ಫ್ರೈಡೆ, ಕ್ರಿಸ್ ಮಸ್ ಎಂದು ರಜೆಗಳೋ ರಜೆಗಳು. ಇದರ ಜೊತೆಗೆ ರಾಜಕಾರಣಿ, ಗಣ್ಯವ್ಯಕ್ತಿ ನಿಧನಕ್ಕೆ ಸಂತಾಪದ(?) ರಜೆ.
ಭಾರತ ಬಹು ಜಾತಿ ಜನರಿರುವ ದೇಶ. ಜಾತ್ಯತೀತ ದೇಶವಾದ ಭಾರತದಲ್ಲಿ ಎಲ್ಲ ಜಾತಿಗಳೂ ಸಮಾನ. ಪ್ರತಿಯೊಂದೂ ಜಾತಿಗೂ ಅವರವರ ಹಬ್ಬಗಳು, ವಿಶೇಷ ದಿನಗಳು ಮಹತ್ವದ್ದೇ. ಆದರೆ ಅವೇ ದಿನಗಳು ಉಳಿದ ಜಾತಿಯವರಿಗೆ ಮಹತ್ವದ್ದೆ? ಉದಾಹರಣೆಗೆ, ಬಕ್ರೀದ್ ಮುಸ್ಲಿಮರ ಪ್ರಮುಖ ಹಬ್ಬ. ಅದನ್ನು ಮುಸ್ಲಿಂ ಸಮುದಾಯ ವಿಶಿಷ್ಟವಾಗಿ ಆಚರಿಸುತ್ತದೆ. ಆದರೆ ಹಿಂದೂಗಳು ಬಕ್ರೀದ್ ಆಚರಿಸುವುದಿಲ್ಲ. ಕ್ರಿಸ್ ಮಸ್ ಕ್ರಿಶ್ಚಿಯನ್ನರಿಗೆ ಪ್ರಮುಖ ಹಬ್ಬ ಆದರೆ ಮುಸ್ಲಿಮರಾಗಲಿ, ಹಿಂದೂಗಳಾಗಲಿ ಕ್ರಿಸ್ ಮಸ್ ಆಚರಿಸುವುದಿಲ್ಲ. ಹಾಗೆಯೇ, ಕ್ರಿಶ್ಚಿಯನ್ನರಿಗೂ ವರಮಹಾಲಕ್ಷ್ಮೀ ಹಬ್ಬಕ್ಕೂ ಏನೆಂದರೆ ಏನೂ ಸಂಬಂಧವೇ ಇಲ್ಲ. ಹೀಗಿದ್ದ ಮೇಲೆ ಈ ವಿಶೇಷ ದಿನಗಳ ರಜೆಯ ಸವಲತ್ತು ಆಯಾ ಜಾತಿಯವರಿಗೆ ಮಾತ್ರ ಸಿಗಬೇಕಲ್ಲವೆ? ಅಪ್ಪಟ ಲಿಂಗಾಯತ ವ್ಯಕ್ತಿಯೊಬ್ಬ ಮೊಹರ್ರಂ ದಿನದಂದು ರಜೆ ಪಡೆದುಕೊಂಡು ಏನು ಮಾಡುತ್ತಾನೆ? ಶ್ರದ್ಧಾವಂತ ಮುಸ್ಲಿಂ ವ್ಯಕ್ತಿ, ಮಹಾವೀರ ಜಯಂತಿಯಂದು ರಜೆ ಪಡೆದುಕೊಂಡು ಸಾಧಿಸುವುದಾದರೂ ಏನು? ಪ್ರತಿಯೊಬ್ಬ ಜಾತಿಯವರಿಗೂ ಅವರದೇ ದೇವರು ಶ್ರೇಷ್ಠ. (ಅದು ಸ್ವಾಭಾವಿಕ ಕೂಡ). ಹೆಚ್ಚಿನ ಹಿಂದೂಗಳು ಅಪ್ಪಿತಪ್ಪಿಯೂ ಶಿಲುಬೆಯನ್ನು ನೋಡಿ ಕೈಮುಗಿಯುವುದಿಲ್ಲ. ಹೆಚ್ಚಿನ ಕ್ರಿಶ್ಚಿಯನ್ನರು ಅಪ್ಪಿತಪ್ಪಿಯೂ ಮೃತ್ಯುಂಜಯ ಹೋಮ ಮಾಡಿಸುವುದಿಲ್ಲ. ಹೆಚ್ಚಿನ ಮುಸ್ಲಿಮರು ಅಪ್ಪಿತಪ್ಪಿಯೂ ಗಾಯತ್ರಿ ಮಂತ್ರ ಹೇಳುವುದಿಲ್ಲ. ಆದರೆ ಇವರೆಲ್ಲರಿಗೂ ಮತ್ತೊಂದು ಜಾತಿಯ ರಜೆ ಮಾತ್ರ ಬೇಕು. ಇಮಾಮ್ ಸಾಬಿಗೂ ಗೋಕಲಾಷ್ಟಮಿಗೂ ಯಾವುದೇ ಸಂಬಂಧವಿಲ್ಲ. ಆದರೆ ಗೋಕುಲಾಷ್ಟಮಿಯ ದಿನ ಇಮಾಮ್ ಸಾಬಿ ರಜೆ ತೆಗೆದುಕೊಳ್ಳುತ್ತಾನೆ, ಇಮಾಮ್ ಸಾಬಿ ಈದ್ ಎಂದು ನಮಾಜ್ ಮಾಡಲು ಹೋದರೆ, ಶ್ರೀ. ಗೋಕುಲ್ ಕೃಷ್ಣ ಅವರೂ ಕೂಡ ರಜೆ ತೆಗೆದುಕೊಳ್ಳುತ್ತಾರೆ.
ಲೇಖನದ ಆರಂಭದಲ್ಲಿ ಬರೆದಿರುವಂತೆ ನಾವೆಲ್ಲರೂ ರಜಾಪ್ರಿಯರು. ಹಬ್ಬಗಳು ಬರಲಿ ಆದರೆ ಭಾನುವಾರದಂದು ಮಾತ್ರ ಬೇಡ ಎಂಬ ಮನೋಧರ್ಮದವರು. ರಜೆಗಳನ್ನು ಪಡೆದೂ ಪಡೆದು ದೇಶ ಸೋಮಾರಿಗಳ ಗೂಡಾಗಿ ಮಾರ್ಪಟ್ಟಿದೆ. ನಮ್ಮಲ್ಲೇ ಹಲವು ಸರ್ಕಾರಿ ಕಚೇರಿಗಳು ನಾಲ್ಕೂವರೆಗೆಲ್ಲ ಖಾಲಿ ಹೊಡೆಯುತ್ತಿರುವತ್ತವೆ. ಬೇರೆ ಜಾತಿಯ ದೇವರನ್ನು ನಂಬದ, ಆ ಜಾತಿಯ ಪದ್ಧತಿಯಂತೆ ಜೀವನ ನಡೆಸದ, ಆ ಜಾತಿಯ ಆಚರಣೆಗಳನ್ನು ಮಾಡದ ನಮಗೆ ನಿಜವಾಗಿಯೂ ಆ ಜಾತಿಯ ರಜೆಯನ್ನು ಅನುಭವಿಸುವ ನೈತಿಕ ಹಕ್ಕು ಇದೆಯೆ? ಈ ಒಟ್ಟು ರಜೆಗಳಿಂದಾಗುವ ರಾಷ್ಟ್ರೀಯ ನಷ್ಟವನ್ನು ಎಂದಾದರೂ ನಾವು ಲೆಕ್ಕ ಹಾಕಿದ್ದೇವೆಯೆ? ಭಾರತದಲ್ಲಿ ರಜೆಗಳಿಂದಾಗಿಯೇ ಒಟ್ಟು ರಾಷ್ಟ್ರೀಯ ಉತ್ಪನ್ನ ಕುಂಟುತ್ತ ಸಾಗಿದೆ. ನಮ್ಮ ಸೋಮಾರಿತನದಿಂದಾಗಿಯೇ ದೇಶ ಮುಂದುವರೆಯುತ್ತಿಲ್ಲ ಎಂಬುದೂ ಸತ್ಯ. ಹೀಗಿರಬೇಕಾದರೆ, ಆದಷ್ಟು ರಜೆಗಳನ್ನು ಕಡಿಮೆ ಮಾಡಿ, ಕೆಲಸದ ಅವಧಿಯನ್ನು ಜಾಸ್ತಿ ಮಾಡಿ ನಮ್ಮ ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಿಕೊಂಡರೆ ದೇಶ ತನ್ನಿಂದ ತಾನೇ ಮುಂದೇ ಬಂದೀತು. ಭಾರತವೆಂದರೆ ಭಿಕಾರಿಗಳ ದೇಶ ಎಂಬ ಹಣೆಪಟ್ಟಿಯಿಂದ ಮುಕ್ತರಾಗಲು, ಮೈಮುರಿದು ದುಡಿಯುವುದೊಂದೇ ಉಪಾಯ. ಆದರೆ ಎದ್ದರೆ ಬಿದ್ದರೆ ರಜೆಗಳನ್ನು ಪಡೆಯಲುವ ಹಾತೊರೆಯುವವರಿಂದ ನಿಜವಾಗಿಯೂ ಎಷ್ಟರ ಮಟ್ಟಿಗಿನ ಪ್ರಗತಿ ಸಾಧ್ಯ?
ಎಲ್ಲರೂ ಒಂದಾಗಿ ಬಾಳಬೇಕು, ಸಾಮರಸ್ಯದಿಂದ ಇರಬೇಕು. ಪರಸ್ಪರರ ನಂಬಿಕೆ-ವಿಚಾರ-ದೇವರುಗಳನ್ನು ಗೌರವಿಸಬೇಕು ಎಂಬುದು ಒಪ್ಪತಕ್ಕದ್ದೇ. ಈ ನಮ್ಮ ಸಾಮರಸ್ಯವನ್ನು ನಾವು ಕೋಮುಗಲಭೆಗಳನ್ನು ತಡೆಗಟ್ಟಿ ಪ್ರದರ್ಶಿಸಬೇಕೆ ಹೊರತು ಬೇರೆ ಜಾತಿಯ ರಜೆಯನ್ನು ತೆಗೆದುಕೊಳ್ಳುವುದರಿಂದ ಅಲ್ಲ. ಇನ್ನು ಮೇಲಾದರೂ ಪ್ರಾಮಾಣಿಕರಾಗಿ ನಾವು ಆಚರಿಸುವ ಹಬ್ಬಗಳ ರಜೆಗಳನ್ನು ಮಾತ್ರ ತೆಗೆದುಕೊಂಡು ನೈತಿಕವಾಗಿ ಆರೋಗ್ಯವಂತರಾಗೋಣವೆ?
(ಅಂದಹಾಗೆ ಈ ಲೇಖನದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ಹೆಸರುಗಳನ್ನು ಹಾಗೂ ಆಯಾ ಹಬ್ಬದ ಹೆಸರುಗಳನ್ನು ಪ್ರಾಸಂಗಿಕವಾಗಿ ಬಳಸಲಾಗಿದೆ. ಇಲ್ಲಿ ಯಾವುದೇ ಜಾತಿಯನ್ನು ಹೀಗಳೆಯುವ ಉದ್ದೇಶ ಇರುವುದಿಲ್ಲ. ಈ ಜಾತಿಯ ಬದಲಾಗಿ ಯಾವುದೇ ಜಾತಿಯ ಹೆಸರು ಎಲ್ಲಿಯೇ ಹಾಕಿದರೂ, ಲೇಖನದ ಮೂಲ ಆಶಯಕ್ಕೆ ಧಕ್ಕೆ ಬರುವುದಿಲ್ಲ).