ಇಂದಿನಿಂದ ಕಾಷಿಯಸ್ ಮೈಂಡ್ ನಲ್ಲಿ ಉರ್ದು ಮಾಲಿಕೆ

ಉರ್ದು ಒಂದು ಸುಂದರ ಮತ್ತು ಸರಳ ಭಾಷೆ. ಆದರೆ ಹಲವಾರು ಕಾರಣಗಳಿಂದ ಈ ಭಾಷೆಯ ಕುರಿತು ಸಾಕಷ್ಟು ಗೊಂದಲಗಳಿವೆ. ಉರ್ದು ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಭಾರತದಲ್ಲಿಯೇ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾಷೆ ಇದು. ಈ ಭಾಷೆಯ ಕುರಿತು ನನ್ನ ಗುರುಗಳಾದ ಜನಾಬ್ ಮಾಹೇರ್ ಮನ್ಸೂರ್ ಅವರು ಉರ್ದು ಭಾಷೆಯ ಹಲವು ಆಯಾಮಗಳ ಬಗ್ಗೆ ಮಾತನಾಡಿದ್ದಾರೆ. ಇಂದಿನಿಂದ ಉರ್ದು ಮಾಲಿಕೆ ಆರಂಭವಾಗಲಿದೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ. ಆದರೆ ಪ್ರತಿಕ್ರಿಯೆಗಳು ವೈಯಕ್ತಿಕ ದ್ವೇಷ ಹಾಗೂ ಜನಾಂಗೀಯ ಭಾವನೆಯನ್ನು ಕೆರಳಿಸದಂತಿರಲಿ. ನಿಮ್ಮ ಅನಿಸಿಕೆಗಳು ವಸ್ತುನಿಷ್ಠವಾಗಿರಲಿ.

INVITE – ಚೆರ್ರಿ ತೋಟ

ರಂಗ ಶಂಕರದ ಕನ್ನಡ ನಾಟಕೋತ್ಸವ 2015 – ಯುವ ಪ್ರಸ್ತುತಿಗಳು ಭಾಗವಾಗಿ ವೆಂಕಟೇಶ್ ಪ್ರಸಾದ್ ರವರು ನಿರ್ದೇಶಿಸಿದ ನಾಟಕ ‘ಚೆರ್ರಿ ತೋಟ’ ಈಗ ಜುಲೈ 23, 2015 ರಂದು ರಂಗ ಶಂಕರ ದಲ್ಲಿ ಪ್ರದರ್ಶನ ಗೊಳ್ಳಲಿದೆ . ಪ್ರಸ್ತುತಿ – ಬೆಂಗಳೂರು ಥಿಯೇಟರ್ ಕಂಪನಿ
 
ಚೆರ್ರಿ ತೋಟ
 
ಮೂಲ :  ಆಂಟನ್ ಚೆಕಾಫ್
ಕನ್ನಡಕ್ಕೆ : ವೆಂಕಟೇಶ್ ಪ್ರಸಾದ್
ಪ್ರಸ್ತುತಿ :  ಬೆಂಗಳೂರು ಥಿಯೇಟರ್ ಕಂಪನಿ
ವಿನ್ಯಾಸ ಮತ್ತು ನಿರ್ದೇಶನ :  ವೆಂಕಟೇಶ್ ಪ್ರಸಾದ್
ಸ್ಥಳ : ರಂಗ ಶಂಕರ
ದಿನಾಂಕ ಮತ್ತು ಸಮಯ :  23/07/2015 , ಸಂಜೆ 7:30
ಟಿಕೆಟ್‌ದರ :  ರೂ. 100/-
ಸಂಪರ್ಕಿಸಬೇಕಾದದೂರವಾಣಿ ಸಂಖ್ಯೆ : 9900182400
ವೆಬ್ ಸೈಟ್ : www.bookmyshow.com ; www.filmysphere.com  
 
 
ನಾಟಕದ ಬಗ್ಗೆ 
ರಷ್ಯಾದ ಮಹಾನ್ ಲೇಖಕ, ನಾಟಕಕಾರ‌ಆಂಟನ್ ಚೆಕಾಫ್ 1904 ರಲ್ಲಿ ಬರೆದ ತನ್ನ ಕೊನೆಯ ನಾಟಕ ‘ದಿ ಚೆರ್ರಿ ಆರ್ಚರ್ಡ್’ ವಿಶ್ವದ ಶ್ರೇಷ್ಟ ನಾಟಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ತೋರಬಹುದಾದ ಪಲ್ಲಟಗಳು, ಸ್ಥಿತ್ಯಂತರಗಳನ್ನು ಒಂದು ಚೆರ್ರಿತೋಟದ ಪ್ರತಿಮೆಯ ಮೂಲಕ ಹೆಣೆದಿರುವ ಚೆಕಾಫ್‌ನ ಈ ನಾಟಕ ತನ್ನ ದೇಶ, ಕಾಲಗಳನ್ನು ಮೀರಿ ಪ್ರಸ್ತುತವಾಗಿದೆ.
ನಾಟಕದ ಕೇಂದ್ರವಾದ ಚೆರ್ರಿತೋಟ, ಹಲವು ಪ್ರತಿಮೆಗಳ ಸಂಕೇತವಾಗಿ ಕಾಣುತ್ತದೆ. ಬಾಲ್ಯದ ಸುಂದರ ನೆನಪುಗಳ ಪ್ರತೀಕವಾಗಿ ಒಮ್ಮೆ ಚೆರ್ರಿತೋಟ ಕಂಡರೆ, ಪರಿಸರ-ಪೃಕೃತಿಯ ಸುಂದರ ದೃಶ್ಯ ವಾಗಿಕೂಡ ಕಾಣುತ್ತದೆ. ಅಷ್ಟೇ ಅಲ್ಲದೆ, ಶತಮಾನಗಳ ಕಾಲ ಜನಸಮುದಾಯದಲ್ಲಿ ಬೇರು ಬಿಟ್ಟಿರುವ ನಂಬಿಕೆಯಾಗಿ ಕೂಡ ಚೆರ್ರಿತೋಟ ಗೋಚರಿಸುತ್ತದೆ. ಹೀಗೆ ಹಲವು ಧ್ವನಿಗಳನ್ನು, ಹಲವು ಅರ್ಥಗಳನ್ನು ಹೊಮ್ಮಿಸುತ್ತಾ ಸಾಗುವ ನಾಟಕ, ಭಾರತದಂತ ಭಿನ್ನ ವ್ಯವಸ್ಥೆಯಲ್ಲೂ ಪ್ರಸ್ತುತವಾಗಿ ಕಾಣುವ ಮೂಲಕ ಸಾರ್ವಕಾಲಿಕ ಶ್ರೇಷ್ಟ ನಾಟಕವೆಂದೆನಿಸಿಕೊಳ್ಳುತ್ತದೆ. ಒಂದು ಕಡೆ ಜಮೀನ್ದಾರಿ ಪದ್ದತಿಯ ಪಾಳೇಗಾರೀ ಮೌಲ್ಯಗಳನ್ನು ಉಳಿಸಿಕೊಳ್ಳುತ್ತ, ಪೋಷಿಸುತ್ತಾ, ಮತ್ತೊಂದು ಕಡೆ ಉದಾರೀಕರಣ, ಮುಕ್ತ ಮಾರುಕಟ್ಟೆಯ ಬಂಡವಾಳಷಾಹಿ ವ್ಯವಸ್ಥೆಗೆತನ್ನನ್ನು ತೆರೆದುಕೊಳ್ಳುತ್ತ, ಸಮಾಜವಾದದ ಕನಸನ್ನೂ ಕಾಣುತ್ತ ಸಾಗುತ್ತಿರುವ ಭಾರತದ ಪರಿಸ್ಥಿತಿಯಲ್ಲಿ, ಚೆರ್ರಿತೋಟವನ್ನುಗಟ್ಟಿ ಬೇರು ಬಿಟ್ಟ ಸಾಮಾಜಿಕ ವ್ಯವಸ್ಥೆಯೊಂದರ ಪ್ರತೀಕವಾಗಿ ನೋಡಲು ನಾವು ಪ್ರಯತ್ನಿಸಿದ್ದೇವೆ. 
 
 
ನಿರ್ದೇಶಕರ ಬಗ್ಗೆ
ಕಳೆದ ೧೫ ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿರುವ ವೆಂಕಟೇಶ್ ಪ್ರಸಾದ್, ಇತ್ತೀಚಿನವರ್ಷಗಳಲ್ಲಿ ಕನ್ನಡರಂಗಭೂಮಿಯಲ್ಲಿ ಪ್ರಮುಖವಾಗಿ ಕಾಣುತ್ತಿರುವ ನಟ ಮತ್ತು ಸಂಘಟಕ. ಬಹುಪಾಲು ರಂಗಭೂಮಿಯ ಸಾಂಗತ್ಯವನ್ನು ‘ಸಮುದಾಯ’ ಸಂಘಟನೆ ಜೊತೆ ಅಂದರೆ ಸುಮಾರು ೧೦ ವರ್ಷಗಳಕಾಲ ಸಮುದಾಯದ ಜೊತೆ ಗುರುತಿಸಿಕೊಂಡಿರುವ ವೆಂಕಟೇಶ್ ಪ್ರಸಾದ್, ರಂಗಭೂಮಿಯ ಮತ್ತು ಸಂಘಟನೆಯ ಪಾಠಗಳನ್ನು ಕಲಿತಿದ್ದು ಸಮುದಾಯದಲ್ಲಿ. ಎಮ್.ಎಸ್.ಸತ್ಯು ಅವರ ‘ಕುರಿ’ ನಾಟಕದಲ್ಲಿ ಪಾತ್ರಮಾಡುವ ಮೂಲಕ ಸಮುದಾಯ ಪ್ರವೇಶಿಸಿದ ಇವರು, ಸಮುದಾಯದ ನಂತರದ‌ಎಲ್ಲಾ ಚಟುವಟಿಕೆಗಳ ಭಾಗವಾದ ಇವರು, ಸಂಘಟನೆಯಲ್ಲೂ ಪ್ರಮುಖಪಾತ್ರ ವಹಿಸುತ್ತ, ಕಳೆದ ೩ ವರ್ಷಗಳಿಂದ ಸಮುದಾಯ, ಬೆಂಗಳೂರಿನ ಕಾರ್ಯದರ್ಶಿಯಾಗಿದ್ದರು. ಎಮ್.ಎಸ್.ಸತ್ಯು, ನಟರಾಜ್‌ಹೊನ್ನವಳ್ಳಿ, ಪ್ರಮೋದ್‌ಶಿಗ್ಗಾಂವ್, ಪ್ರಕಾಶ್‌ಬೆಳವಾಡಿ, ಶ್ರೀಪಾದ್‌ಭಟ್, ಸ್ಯಾಮ್‌ಕುಟ್ಟಿ ಪಟ್ಟಂಕರಿ ಮುಂತಾದ ಪ್ರಮುಖ ನಿರ್ದೇಶಕರ ಜೊತೆ ಕೆಲಸ ಮಾಡಿರುವ ಇವರು, ಸಮುದಾಯದ ಪ್ರಮುಖ ನಾಟಕಗಳಾದ ‘ಕುರಿ’, ‘ಜುಗಾರಿಕ್ರಾಸ್’’, ‘ಪಂಪಭಾರತ’, ಕತ್ತಲೆದಾರಿದೂರ’, ‘ಸುತ್ತಿಕೊಂಡರೆಸರ್ಪ’, ‘ಕಲ್ಯಾಣದಕೊನೆಯದಿನಗಳು’, ‘ನಮ್ಮರಾಬರ್ಟ್‌ಕ್ಲೈವ್’, ‘ತುಘಲಕ್’ ಹೀಗೆ ಹಲವು ಮಹತ್ವದ ನಾಟಕಗಳಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದಾರೆ. ಇವರು ಅಭಿನಯಿಸಿರುವ ಸಮುದಾಯದ ಇತ್ತೀಚಿನ ‘ತುಘಲಕ್’ ಕನ್ನಡ ರಂಗಭೂಮಿಯಲ್ಲೇ ವಿಶಿಷ್ಟವಾದ ಸಂಚಲನ ಮೂಡಿಸಿ ಅತಿ ಕಡಿಮೆ ಅವಧಿಯಲ್ಲಿ ಸುಮಾರು ೪೦ ಪ್ರದರ್ಶನಗಳನ್ನು ಕಂಡಿದೆ. ಇವರ ತುಘಲಕ್ ಪಾತ್ರನಿರ್ವಹಣೆ ಪ್ರೇಕ್ಷಕರಿಂದಲೂ, ವಿಮರ್ಶಕರಿಂದಲೂ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ರಂಗಭೂಮಿಯಲ್ಲದೆ ಕಿರುತೆರೆ, ಸಿನಿಮಾಗಳಲ್ಲೂ ತೊಡಗಿಸಿಕೊಂಡಿರುವ ವೆಂಕಟೇಶ್‌ಪ್ರಸಾದ್ ಟಿ.ಎನ್.ಸೀತಾರಾಮ್‌ರವರ ಬಹು ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಭಗವತಿಕಾಡು’, ‘ಮಾಗಿಯಕಾಲ’ ದಂಥ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ್ದಲ್ಲದೆ ಇತ್ತೀಚಿಗಷ್ಟೆ ‘ಗಾಳಿ ಬೀಜ’ ಎಂಬ ಪ್ರಮುಖ ಪ್ರಯೋಗಾತ್ಮಕ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ರಂಗ ಭೂಮಿಯಲ್ಲಿನ ಹೊಸ ಹೆಜ್ಜೆಯೆಂಬಂತೆ, ಸಹೃದಯ ಗೆಳೆಯರೊಂದಿಗೆ ಈಗ ಹೊಸ ತಂಡ ‘ಬೆಂಗಳೂರು ಥಿಯೇಟರ್ ಕಂಪನಿ’ ಯ ಬುನಾದಿಯಾಗಿದ್ದಾರೆ. 
 
ದಯವಿಟ್ಟು ಬನ್ನಿ , ಗೆಳೆಯರನ್ನೂ ಕರೆತನ್ನಿ …! 

ಪತ್ರಕರ್ತರ ಫೋಟೋ ಗೀಳು…

ನಮ್ಮಲ್ಲಿ ಕೆಲ ಪತ್ರಕರ್ತರಿಗೆ ಏನಾಗಿದೆಯೋ ಗೊತ್ತಿಲ್ಲ. ಮಾಜಿ/ಹಾಲಿ ಮುಖ್ಯಮಂತ್ರಿಗಳು, ಸಚಿವರು, ರಾಜಕಾರಣಿಗಳ ಜೊತೆಗೆ ಹಲ್ಲು ಕಿಸಿಯುತ್ತಲೋ, ಅಥವಾ ಏನೋ ಭಾರೀ ಮಾತನಾಡುತ್ತಿರುವಂತೆಯೋ ಅವರ ಪಕ್ಕ ನಿಂತುಕೊಂಡು ಫೋಟೋ ಹೊಡೆಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಅಂದಹಾಗೆ ಈ ರಾಜಕಾರಣಿಗಳಾರ್ಯೂ ಸಾಭ್ಯಸ್ಥರಲ್ಲ….ಒಂದಲ್ಲ ಒಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡವರೇ. ಆದರೆ ನಮ್ಮ ಕೆಲ ಪತ್ರಕರ್ತರಿಗ್ಯಾಕೋ ಇಂಥವರ ಮೇಲೆ ಅದೇನು ಭಕ್ತಿಯೋ ಗೊತ್ತಿಲ್ಲ, ಅವರ ಜೊತೆ ನಿಂತು ಫೋಟೋ ಹೊಡೆಸಿಕೊಳ್ಳುವುದೆಂದರೆ ವಿಶೇಷ ಪ್ರೀತಿ. ನಿನ್ನೆ ಮೊನ್ನೆ ಫೀಲ್ಡಿಗೆ ಬಂದ ಹುಡುಗ ಹುಡುಗಿಯರಾದರೆ ಏನೋ ಒಂದು ರೀತಿ. ಹೊಸಬರು, ಇನ್ನೂ ಮಾಧ್ಯಮ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಬಹುದು. ಆದರೆ ಆರೇಳು ವರ್ಷ ಅನುಭವವಿರುವ ಪತ್ರಕರ್ತರೇ ಹೀಗೆ ಮಾಡಿದರೆ ಹೇಗೆ? ಅಷ್ಟಕ್ಕೂ ಇಂತಹ ಫೋಟೋಗಳಿಂದ ನೀಡುವ ಸಂದೇಶವಾದರೂ ಏನು? ತಾವು ಆ ರಾಜಕಾರಣಿಯ ಜೊತೆ ತುಂಬಾ ಕ್ಲೋಸ್ ಆಗಿದ್ದೇವೆ ಎಂದು ತೋರಿಸಿಕೊಳ್ಳುವುದೆ? ಅಥವಾ ತನ್ನ ಕಾಂಟಾಕ್ಟ್ ಎಲ್ಲಿಯವರೆಗಿದೆ ಎಂದು ಪ್ರಭಾವಲಯ ಸೃಷ್ಟಿಸಿಕೊಳ್ಳುವುದೆ? ಮಾಧ್ಯಮವಲಯದಲ್ಲಿ ಒಂದು ಮಾತಿದೆ. ಪತ್ರಕರ್ತನಾದವನು ಎಲ್ಲರೊಂದಿಗೆ (ರಾಜಕಾರಣಿ-ಅಧಿಕಾರಿ-ಉದ್ಯಮಿ-ಖಾಕಿ-ಕಾವಿ ಇತ್ಯಾದಿ) ಉತ್ತಮ ಸಂಪರ್ಕನ್ನಿಟ್ಟುಕೊಳ್ಳಬೇಕೆ ಹೊರತುು ಉತ್ತಮ ಸಂಬಂಧವನ್ನಲ್ಲ ಎಂದು. ಈ ಪತ್ರಕರ್ತರಂತೂ ಈ ಮಾತನ್ನು ಸಾರಾಸಗಟಾಗಿ ಮೂಲೆಗೊತ್ತಿದ್ದಾರೆ. ಈ ರೀತಿಯ ಗೀಳಿನಿಂದ, ಇಂತಹ ಪತ್ರಕರ್ತರ ವರದಿಗಾರಿಕೆಯೇ ಮೇಲೆ ನಂಬಿಕೆಯೇ ಹೊರಟುಹೋಗುತ್ತದೆ. ಎಷ್ಟರ ಮಟ್ಟಿಗೆ ಇವರು ನಿರ್ಭೀತ ಮತ್ತು ಮುಕ್ತ ವರದಿಯನ್ನು ಮಾಡಬಲ್ಲರು ಎಂಬುದೇ ಪ್ರಶ್ನೆ.