ಪತ್ರಕರ್ತರ ಫೋಟೋ ಗೀಳು…

ನಮ್ಮಲ್ಲಿ ಕೆಲ ಪತ್ರಕರ್ತರಿಗೆ ಏನಾಗಿದೆಯೋ ಗೊತ್ತಿಲ್ಲ. ಮಾಜಿ/ಹಾಲಿ ಮುಖ್ಯಮಂತ್ರಿಗಳು, ಸಚಿವರು, ರಾಜಕಾರಣಿಗಳ ಜೊತೆಗೆ ಹಲ್ಲು ಕಿಸಿಯುತ್ತಲೋ, ಅಥವಾ ಏನೋ ಭಾರೀ ಮಾತನಾಡುತ್ತಿರುವಂತೆಯೋ ಅವರ ಪಕ್ಕ ನಿಂತುಕೊಂಡು ಫೋಟೋ ಹೊಡೆಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಅಂದಹಾಗೆ ಈ ರಾಜಕಾರಣಿಗಳಾರ್ಯೂ ಸಾಭ್ಯಸ್ಥರಲ್ಲ….ಒಂದಲ್ಲ ಒಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡವರೇ. ಆದರೆ ನಮ್ಮ ಕೆಲ ಪತ್ರಕರ್ತರಿಗ್ಯಾಕೋ ಇಂಥವರ ಮೇಲೆ ಅದೇನು ಭಕ್ತಿಯೋ ಗೊತ್ತಿಲ್ಲ, ಅವರ ಜೊತೆ ನಿಂತು ಫೋಟೋ ಹೊಡೆಸಿಕೊಳ್ಳುವುದೆಂದರೆ ವಿಶೇಷ ಪ್ರೀತಿ. ನಿನ್ನೆ ಮೊನ್ನೆ ಫೀಲ್ಡಿಗೆ ಬಂದ ಹುಡುಗ ಹುಡುಗಿಯರಾದರೆ ಏನೋ ಒಂದು ರೀತಿ. ಹೊಸಬರು, ಇನ್ನೂ ಮಾಧ್ಯಮ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಬಹುದು. ಆದರೆ ಆರೇಳು ವರ್ಷ ಅನುಭವವಿರುವ ಪತ್ರಕರ್ತರೇ ಹೀಗೆ ಮಾಡಿದರೆ ಹೇಗೆ? ಅಷ್ಟಕ್ಕೂ ಇಂತಹ ಫೋಟೋಗಳಿಂದ ನೀಡುವ ಸಂದೇಶವಾದರೂ ಏನು? ತಾವು ಆ ರಾಜಕಾರಣಿಯ ಜೊತೆ ತುಂಬಾ ಕ್ಲೋಸ್ ಆಗಿದ್ದೇವೆ ಎಂದು ತೋರಿಸಿಕೊಳ್ಳುವುದೆ? ಅಥವಾ ತನ್ನ ಕಾಂಟಾಕ್ಟ್ ಎಲ್ಲಿಯವರೆಗಿದೆ ಎಂದು ಪ್ರಭಾವಲಯ ಸೃಷ್ಟಿಸಿಕೊಳ್ಳುವುದೆ? ಮಾಧ್ಯಮವಲಯದಲ್ಲಿ ಒಂದು ಮಾತಿದೆ. ಪತ್ರಕರ್ತನಾದವನು ಎಲ್ಲರೊಂದಿಗೆ (ರಾಜಕಾರಣಿ-ಅಧಿಕಾರಿ-ಉದ್ಯಮಿ-ಖಾಕಿ-ಕಾವಿ ಇತ್ಯಾದಿ) ಉತ್ತಮ ಸಂಪರ್ಕನ್ನಿಟ್ಟುಕೊಳ್ಳಬೇಕೆ ಹೊರತುು ಉತ್ತಮ ಸಂಬಂಧವನ್ನಲ್ಲ ಎಂದು. ಈ ಪತ್ರಕರ್ತರಂತೂ ಈ ಮಾತನ್ನು ಸಾರಾಸಗಟಾಗಿ ಮೂಲೆಗೊತ್ತಿದ್ದಾರೆ. ಈ ರೀತಿಯ ಗೀಳಿನಿಂದ, ಇಂತಹ ಪತ್ರಕರ್ತರ ವರದಿಗಾರಿಕೆಯೇ ಮೇಲೆ ನಂಬಿಕೆಯೇ ಹೊರಟುಹೋಗುತ್ತದೆ. ಎಷ್ಟರ ಮಟ್ಟಿಗೆ ಇವರು ನಿರ್ಭೀತ ಮತ್ತು ಮುಕ್ತ ವರದಿಯನ್ನು ಮಾಡಬಲ್ಲರು ಎಂಬುದೇ ಪ್ರಶ್ನೆ.