ಮಂಡೆ ಬಿಸಿ – ಹಂಡೆ ಬಿಸಿ

ತನ್ನದಲ್ಲದ ಊರಿನ ಆಫೀಸಿನ

ಕಂಪ್ಯೂಟರಿನ ಮುಂದೆ ಕೂತು

‘ಮಂಡೆಬಿಸಿ’ ಮಾಡಿಕೊಳ್ಳೋದಕ್ಕಿಂತ

ಹುಟ್ಟೂರಿಗೆ ಹೋಗಿ

ಮನೆಯ ಬಚ್ಚಲಿನಲಿ ಕುಕ್ಕುರುಗಾಲಿನಲಿ ಕೂತು

‘ಹಂಡೆಬಿಸಿ’ ಮಾಡುವುದು

ಸಾವಿರು ಪಟ್ಟು ಮೇಲು ಎಂದುಕೊಂಡನು –

ತಂತ್ರಜ್ಞ

(ವಾಟ್ಸ್ ಆಪ್ ನಲ್ಲಿ ಬಂದಿದ್ದು)

ಫ್ರೀಯಾಗಿ ಕೊಟ್ಟರೆ ಏನಾದ್ರೂ ಓಕೆ…

©SUGHOSH S NIGALE

ಏನೇ ಕೊಟ್ಟರೂ ಫ್ರೀಯಾಗಿ ಕೊಡಬೇಕು. ಹಾಗೆ ಕೊಟ್ಟರೆ ಸಾಕು ನಮ್ಮ ಜನ, ಏನು ಎತ್ತ ಎಂದು ನೋಡದೆ ಅದಕ್ಕೆ ಮುಗಿಬೀಳುವುದೇ ಜಾಯಮಾನ ಎನಿಸುತ್ತದೆ. ಅಗಸ್ಟ್ 15 ರಂದು ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಹೋಗಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷಣ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ಅದಾಗಲೇ ನಿಗದಿತ ಸೀಟುಗಳಿಗಿಂತ ಹೆಚ್ಚಿಗೆ ಪಾಸ್ ಗಳನ್ನು ವಿತರಿಸಿದ್ದರಿಂದ ಜನ ಕೂರುವ ಸ್ಟಾಂಡ್ ಗಳು ಕಿಕ್ಕಿರಿದು ತುಂಬಿದ್ದವು. ಕೂತವರಿಗಿಂತ ನಿಂತು ನೋಡುತ್ತಿದ್ದವರೇ ಜಾಸ್ತಿ. ಮಾಲತೇಶ್ ಬಡಿಗೇರ್ ನಿರ್ದೇಶಿಸಿದ ನೃತ್ಯಕ್ಕೆ ಮಕ್ಕಳು ಉತ್ಸಾಹದಿಂದ ಕುಣಿಯುತ್ತಿದ್ದರು. ಇದೇ ಸಂದರ್ಭದಲ್ಲಿ ಅದ್ಯಾವ ಪುಣ್ಯಾತ್ಮ ಅಧಿಕಾರಿ ಆ ನಿರ್ಧಾರ ಕೈಗೊಂಡನೋ ಗೊತ್ತಿಲ್ಲ….. ಜನರಿಗೆ ಅಗಸ್ಟ್ 15 ರ ಸಿಹಿ ಹಂಚುವ ಮಹೋನ್ನತ ಸಾಧನೆಯ ಶುಭಾರಂಭ ಮಾಡಲಾಯಿತು. ಜುಜುಬಿ ಒಂದು ಪೇಡೆ ಇರುವ ಪ್ಯಾಕೆಟ್ಟನ್ನು ಯಾರೋ ಒಬ್ಬ ವಿತರಿಸುತ್ತ ಜನರೆಡೆಗೆ ಬಂದ. ಮಕ್ಕಳ ನೃತ್ಯ ಭಾಡ್ ಮೇ ಗಯಾ. ಸಿಹಿ ಪ್ಯಾಕೆಟ್ ತೆಗೆದುಕೊಳ್ಳಲು ಜನ ಮುಗಿಬಿದ್ದರು. ಮಕ್ಕಳಿಗಾದರೆ ಏನೋ ರಿಯಾಯತಿ ಕೊಡೋಣ.. ಅವು ಬಾಲವಿಲ್ಲದ ಮಂಗಗಳು. ಆದರೆ ದೊಡ್ಡವರಿಗೇನಾಗಿತ್ತು ರೋಗ? ಅಪ್ಪಿಲಿ, ಅವ್ವಿಲಿ, ಚಿಕ್ಕಿಲಿ, ದೊಡ್ಡಿಲಿ, ಅಂಕಲ್ ಇಲಿ, ಆಂಟಿ ಇಲಿ ಎಂದು ಪ್ಯಾಕೆಟ್ ತೆಗೆದುಕೊಳ್ಳಲು ಮುನ್ನುಗ್ಗಿದರು. ನನ್ನ ಕಣ್ ಮುಂದೆ ಥಟ್ ಅಂತ ಹಸಿವಿನಿಂದ ಬಳಲುತ್ತಿರುವ ರುವಾಂಡಾ, ಸೋಮಾಲಿಯಾ ದೇಶದ ಜನರ ಮುಖಗಳು ನೆನಪಿಗೆ ಬಂದವು. ಅವರಿಗಾದರೋ ಪಾಪ, ಆಹಾರ ಮತ್ತು ಹಸಿವಿನ ಸಮಸ್ಯೆ. ಆದರೆ ಅಗಸ್ಟ್ 15 ರಂದು ಧ್ವಜಾರೋಹಣಕ್ಕೆ ಬರುವ ನಮ್ಮ ಭಾರತೀಯರಿಗೇನಾಗಿದೆ ಧಾಡಿ? ತುಂಬಾ ಚೀಪ್ ಅನ್ನಿಸಿಬಿಟ್ಟಿತ್ತು. ಬಿಟ್ಟಿ ಸಿಕ್ಕರೆ ಸಾಕು ಕಣ್ರೀ ಕೆಲವರಿಗೆ……..ನ್ನೂ ಬೇಕಾದರೆ ತೆಗೆದುಕೊಂಡು ಬಿಡುತ್ತಾರೆ.

ಪುಟ್ಟ ಬೆಂಕಿಪೊಟ್ಟಣದ ದೊಡ್ಡ ಜಗತ್ತು…

ಈ ಹವ್ಯಾಸ ಮೈಗಂಟಿಸಿಕೊಂಡಿದ್ದು 6 ನೇ ಕ್ಲಾಸು ಇದ್ದಾಗ. ಅಣ್ಣ ಅಂಚೆ ಚೀಟಿ ಸಂಗ್ರಹಣೆ ಮಾಡುತ್ತಿದ್ದ. ನನಗೆ ಬೆಂಕಿಪೊಟ್ಟಣ ಸಂಗ್ರಹಿಸುವ ಯೋಚನೆ ಹೇಗೆ ಬಂತೋ ಗೊತ್ತಿಲ್ಲ. ಹವ್ಯಾಸ ಶುರುವಾದ ಮೇಲೆ ಸುಮಾರು 1000 ಬೆಂಕಿಪೊಟ್ಟಣಗಣಗಳನ್ನು ಸಂಗ್ರಹಿಸಿದೆ. ಕಾಲೇಜು ಮೆಟ್ಟಿಲು ಹತ್ತುವವರೆಗೂ ಈ ಹವ್ಯಾಸವಿತ್ತು.

ಬೆಂಕಿಪೊಟ್ಟಣ ಸಂಗ್ರಹಕ್ಕೆಂದು ಗೆಳೆಯರ ಗುಂಪು ಕಟ್ಟಿ ಬೆಳಗಾವಿಯ ಗಲ್ಲಿ ಗಲ್ಲಿ ಅಲೆಯುತ್ತಿದ್ದೆ. ಕಸದ ತಿಪ್ಪೆಯಲ್ಲಿ ಕೈಯಾಡಿಸುತ್ತಿದ್ದೆ. ಹೈವೆ ಹತ್ತಿರದ ಢಾಬಾಗಳಿಗೆ ಹೋಗಿ ಅಲ್ಲಿ ಲಾರಿ ಡ್ರೈವರ್ ಗಳು ಬಿಸಾಕಿರುತ್ತಿದ್ದ ಬೇರೆ ಬೇರೆ ರಾಜ್ಯಗಳ ಬೆಂಕಿಪೊಟ್ಟಣ ಎತ್ತಿಕೊಳ್ಳುತ್ತಿದ್ದೆ. ಹೋಟೇಲುವಗಳ ವಿಶೇಷ ಬೆಂಕಿಪೊಟ್ಟಣ, ಯಾವುದೋ ವಸ್ತುವಿನ ಜೊತೆ ನೀಡುವ ಉಚಿತ ಬೆಂಕಿಪೊಟ್ಟಣ, ವಿದೇಶದಿಂದ ಸಂಬಂಧಿಕರು ತಂದುಕೊಟ್ಟ ಉದ್ದ ಕಡ್ಡಿಯ ಬೆಂಕಿಪೊಟ್ಟಣ – ಹೀಗೆ ತರಹೇವಾರಿ ಬೆಂಕಿಪೊಟ್ಟಣಗಳು ಸಂಗ್ರಹದಲ್ಲಿದ್ದವು. ಮೊನ್ನೆ ಅಟ್ಟದ ಮೇಲಿನ ರಟ್ಟಿನ ಬಾಕ್ಸ್ ನಲ್ಲಿ ನನ್ನ ಈ ಬೆಂಕಿಪೊಟ್ಟಣದ ಪುಸ್ತಕ ಸಿಕ್ಕಿತು. ಅದರ ಕೆಲ ಪುಟಗಳು ಇಲ್ಲಿವೆ.

1 2 3 4 5 6 7 8 9 10 11 12 13 14 15 16 17 18 19 20 21 22

ಕೇಳು ಜನಮೇಜಯ

ಸುಮಾರು 10 ವರ್ಷಗಳ ಹಿಂದೆ ನಾನು ನಟಿಸಿದ ನಾಟಕ “ಕೇಳು ಜನಮೇಜಯ”. ಶ್ರೀರಂಗರ ರಚನೆ. ‘ಸ್ನೇಹ ಸಮೂಹ’ದ  ಕೊಡುಗೆ. ಇದರಲ್ಲಿ ನಾಯಕ ಪಾತ್ರ ಮಾಡಿದ ರಾಜಶೇಖರ ನಿಲೋಗಲಮಠ ಈಗ ನಮ್ಮೊಂದಿಗಿಲ್ಲ.

ಭಾಗ – 1

ಭಾಗ – 2

ನಾನು “ಸತ್ತ ಪ್ರಜೆ” ಅಲ್ಲ “ಸತ್ ಪ್ರಜೆ”

©SUGHOSH S NIGALEನಾನು ಬೆಂಗಳೂರಿನ ಸತ್ತ ಪ್ರಜೆ ಅಲ್ಲ ಸತ್ ಪ್ರಜೆ. ಗುಂಡಿ ತುಂಬಿದ ರಸ್ತೆಗಳ ಬಗ್ಗೆ, ಹದಗೆಟ್ಟ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ, ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ – ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕ ಹಕ್ಕು ನನಗಿದೆ. ಅದರ ಬಗ್ಗೆ ಹೆಮ್ಮೆ ಇದೆ. ಸತ್ತ ಪ್ರಜೆಗಳ ಬಗ್ಗೆ ಸಿಟ್ಟಿದೆ. ಸತ್ ಪ್ರಜೆಗಳ ಬಗ್ಗೆ ಅಭಿಮಾನವಿದೆ.

ಕೆಲಸದ ಕುರಿತಾದ ಎಟಿಟ್ಯೂಡ್

©SUGHOSH S NIGALEನನಗೆ ಒಂದು ಕ್ಷಣವೂ ಸುಮ್ಮನಿರಲು ಸಾಧ್ಯವಿಲ್ಲ. ಸುಮ್ಮನಿರುವುದು ಕೇವಲ ನಿದ್ದೆ ಮಾಡುತ್ತಿರುವಾಗ ಮಾತ್ರ. ಎಚ್ಚರವಿದ್ದಾಗ ಹುಡುಕ್ಯಾಡಿಕೊಂಡು ಕೆಲಸ ಮಾಡುತ್ತೇನೆ. ಕೆಲವರಿಗೆ ಕೆಲಸ ಹುಡುಕ್ಯಾಡಿಕೊಂಡು ಬಂದರೂ ತಪ್ಪಿಸಿಕೊಳ್ಳುವ ಜಾಯಮಾನ. ಅದೆಂಗ್ರಿ ಜನ ಬದುಕ್ತಾರೆ ಅಂತ….?

ಇಯಂ ಆಕಾಶವಾಣಿ…..

air

ನಿನ್ನೆ ಕಾರಿನಲ್ಲಿ ಕುಳಿತು ಕುಣಿದಾಡಿಬಿಟ್ಟೆ. ಅಷ್ಟು ಖುಷಿಯಾಗಿತ್ತು. ಯಾಕೆಂದರೆ ನನ್ನ ಕಲರ್ಸ್ ಆಫೀಸಿನಿಂದ ಜಯನಗರದವರೆಗೆ ಭಯಂಕರ ಟ್ರಾಫಿಕ್ ಜ್ಯಾಮ್ ಆಗಿ ಬರೊಬ್ಬರಿ ಒಂದೂವರೆ ಗಂಟೆ ತೆಗೆದುಕೊಂಡೆ. ಅಷ್ಟು ಹೊತ್ತು ಕಾರಿನಲ್ಲಿ ಕುಳಿತು, ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಕ್ಕೆ ಸಿಕ್ಕಾಪಟ್ಟೆ ಆನಂದವಾಗಿ ಕಾರಿನಲ್ಲಿ ಕುಣಿದಾಡಲು ಕಾರಣ.

ತಮಾಷೆ ಮಾಡುತ್ತಿಲ್ಲ, ಕಣ್ರೀ….ನಿಜ ಹೇಳ್ತೀನಿ.

ವಿಷಯ ಇಷ್ಟೇ. ಸೆಕೆಂಡ್ ಹ್ಯಾಂಡ್ ಕಾರ್ ತೆಗೆದುಕೊಂಡು ಮೂರು ವರ್ಷವಾಗುತ್ತ ಬಂದಿದ್ದರೂ, ಕಾರಿನಲ್ಲಿ ಎಎಂ (ಎಂಪ್ಲಿಟ್ಯೂಡ್ ಮಾಡ್ಯುಲೇಷನ್) ರೇಡಿಯೋ ಬರುತ್ತಿರಲಿಲ್ಲ. ಹೀಗಾಗಿ ಬೆಂಗಳೂರು ಆಕಾಶವಾಣಿಯ ಪ್ರೈಮರಿ ಚ್ಯಾನಲ್ ಅನ್ನು ಕಾರಿನಲ್ಲಿ ಕೇಳುವ ಸುಖದಿಂದ ವಂಚಿತನಾಗಿದ್ದೆ. ಎಫ್ ಎಂ ಚ್ಯಾನಲ್ ಗಳು ನನ್ನ ಕಾರಿನ ಬದುಕನ್ನು ಮೂರಾಬಟ್ಟೆ ಮಾಡಿದ್ದವು. ಅಲ್ರೀ ಅದೇನು ಎಡ್ವರ್ಟೈಸು, ಅದೇನು ಹಾಡು….ಅಬ್ಬಬ್ಬ….ತಲೆ ಫುಲ್ ಗಿರ್ ಎಂದುಬಿಟ್ಟಿತ್ತು.

ಅದ್ಯಾವುದೋ ಅಪಾರ್ಟ್ ಮೆಂಟಂತೆ, ಇಂಟರ್ ನ್ಯಾಷನಲ್ ಏರ್ ಪೋರ್ಟಿನಿಂದ ಕೇವಲ 20 ನಿಮಿಷ, ಎಂಜಿ ರೋಡಿನಿಂದ 25 ನಿಮಿಷ, ಇಂಟರ್ ನ್ಯಾಷನಲ್ ಶಾಲೆಗೆ 10 ನಿಮಿಷ, ಅಮ್ಯೂಸ್ ಮೆಂಟ್ ಪಾರ್ಕ್ ಗೆ 15 ನಿಮಿಷ ಅಂತರದಲ್ಲಿದೆಯಂತೆ. ಹೀಗಿದ್ದೂ, ಇದು ಇರುವುದು ದಟ್ಟ ಕಾನನದಲ್ಲಿಯಂತೆ. ಅಮೇಜಾನ್ ಕಾಡುಗಳಲ್ಲಿರುವ ಪಕ್ಷಿ ಸಂಕುಲ ಈ ಅಪಾರ್ಟ್ ಮೆಂಟ್ ಇರುವ ಜಾಗದಲ್ಲಿ ಇದೆಯಂತೆ. ಬೆಳಿಗ್ಗೆ ಎದ್ದಾಕ್ಷಣ ಪಕ್ಷಿಗಳ ಚಿಂವ್ ಚಿಂವ್ ಕೇಳಿಸುತ್ತದೆಯಂತೆ….ಹೀಗೆ ಮುಂಡಾಮೋಚುವ ಅಪಾರ್ಟ್ ಮೆಂಟ್ ಜಾಹೀರಾತುಗಳು……..

ಚಲಿಸುತ್ತಿರುವ ಶತಾಬ್ದಿ ಎಕ್ಸ್ ಪ್ರೆಸ್ ಟ್ರೇನ್ ಅನ್ನು ಬೇಕಾದರೂ ನಾನು ಓಡಿ ಹೋಗಿ ಹಿಡಿಯಬಲ್ಲೆ. ಆದರೆ ಕೆಲವು ಮಹಿಳಾ ಆರ್ ಜೆ ಗಳ ಮಾತುಗಳನ್ನು ಹಿಡಿಯುವುದಂತೂ ನನ್ನ ಕೈಲಾಗದ ಮಾತು. ಅದೇನು ಫಾಸ್ಟು ಅಂತೀರಿ, ಆ ಶಬ್ದ ನನ್ನ ಕಿವಿಯೊಳಗೆ ಹೋಗಿ, ಮೆದುಳಿಗೆ ತಲುಪಿ, ನನ್ನ ಬಡ ಮೆದುಳು ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆಕೆ ಮಾತನಾಡುವುದನ್ನೆಲ್ಲ ಮಾತನಾಡಿ, “ಬನ್ನೋ ತೇರಾ ಫೈಗರ್ ಲಾಗೇ ಸೆಕ್ಸಿ” ಹಾಡು ಪ್ಲೇ ಮಾಡಿರುತ್ತಾಳೆ. ಸರಿ, ನಾನೂ ಸುಸ್ತು, ನನ್ನ ಮೆದುಳಂತೂ ಸುಸ್ತೋ ಸುಸ್ತು.

ಇನ್ನು ಕೆಲವು ಆರ್ ಜೆ ಗಳದ್ದಂತೂ ಕರ್ಮಕಾಂಡ. ಇವರ ಮಾತು ಕಮ್ಮಿ, ಉಗ್ಗು ಜಾಸ್ತಿ. “ಶಬ್ದವೇದಿ ಚಿತ್ರದಿಂದ ಹಾಡನ್ನು ಪ್ರಸಾರ ಮಾಡಿ ಅಂತ ಕೇಳಿದ್ದಾರೆ ಬಬಾ…..ಣಸವಾಡಿಯಿಂದ…. ಕೆ…..ಶವಮೂರ್ತಿ, ಒಒಒಂಟಿಕೊ…….ಪ್ಪಲುವಿನಿಂದ ಪ್ರಕಾಶ್, ಹಾಗೇ ಕುಶಾ…..ಲನಗ…..ರದಿಂದ ಸೌಮ್ಯ, ರಾಹುಲ್. ಈಗ ಈ ಹಾಡು ಕೇಳ್ಬಿಟ್ಟು ಬನ್ನಿ” ಎಂಬ ಅಮೋಘ ಮಾತುಗಳು.

ಎಲ್ಲ ಎಫ್ ಎಂ ಚ್ಯಾನಲ್ ಗಳು ಹೀಗೆ ಅಂತ ಅಲ್ಲ. ಆದರೆ ನನಗೆ ಬೇಕಾದಾಗ ಮಾತ್ರ ನನ್ನ ಕಿಶೋರ, ರಫಿ, ಲತಾ, ಮುಬಾರಕ್ ಬೇಗಂ, ಹೇಮಂತ್ ಕುಮಾರ್, ಸಿಗುತ್ತಲೇ ಇರಲಿಲ್ಲ.

ಇಂತಿಪ್ಪ ಸನ್ನಿವೇಶದಲ್ಲಿ ನನ್ನ ಕಾರಿನಲ್ಲಿ ಅಂತೂ ಇಂತೂ ಪರ್ಮುಟೇಶನ್ನು, ಕಾಂಬಿನೇಶನ್ನು, ಮೋಡ್, ಸೀಕ್, ಸೆಟ್ ಎಲ್ಲಾ ಒತ್ತಿ  ಎಎಂ ಬೆಂಗಳೂರು ಆಕಾಶವಾಣಿಯ ಪ್ರೈಮರಿ ಚ್ಯಾನಲ್ ಹಚ್ಚಿದೆ ನೋಡಿ…..ಆಹಾ ಏನು ಖುಷಿ ಅಂತೀರಿ.

ಮೊದಲು ರಸವಾರ್ತೆ ಪ್ರಸಾರವಾಯಿತು. ಅದಾದ ಬಳಿಕ ಕಾಣೆಯಾದವರ ಬಗ್ಗೆ ಪ್ರಕಟಣೆ, ಗೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ನಾಲ್ಕು ಅಡಿ ಮೂರು ಅಂಗುಲ…..ಅಬ್ಬಾ….ಎಷ್ಟು ದಿನವಾಗಿತ್ತು ಈ ರೀತಿಯ ಪ್ರಕಟಣೆ ಕೇಳಿ….. ನಂತರ ಪರಶಿವಮೂರ್ತಿಯವರ ಬೇಸ್ ವಾಯ್ಸ್ ನಿಂದ ಪ್ರದೇಶ ಸಮಾಚಾರ. ಅದಾದ ನಂತರ ಕರ್ನಾಟಕ ಕೃಷಿ ಮಾರುಕಟ್ಟೆ ಮಂಡಳಿಯಿಂದ ರಾಜ್ಯದ ಕೃಷಿ ಉಗ್ರಾಣಗಳ ಕುರಿತು ಪ್ರಾಯೋಜಿತ ಕಾರ್ಯಕ್ರಮ. ಕೆಲ ಹೊತ್ತಿನ ನಂತರ ಪಶ್ಚಿಮ ಬಂಗಾಲದ ಯಾವುದೋ ವಿಶ್ವವಿದ್ಯಾನಿಲಯದ ಇಬ್ಬರು ಇಕಾನಾಮಿಕ್ಸ್ ಪ್ರೊಫೆಸರ್ ಗಳು ಮ್ಯಾಕ್ರೋ ಇಕನಾಮಿಕ್ಸ್ ಬಗ್ಗೆ ಚರ್ಚೆ ನಡೆಸಿದರು. ಎಷ್ಟು ಅರ್ಥಪೂರ್ಣವಾಗಿತ್ತು ಇದೆಲ್ಲ…..ಬಳಿಕ ರಾತ್ರಿ ಎನ್ ಟಿ ಎಸ್ ಇ ಹಾಗೂ ಎನ್ ಎಮ್ ಎಮ್ ಎಸ್ ಪರೀಕ್ಷೆಗಳ ಕುರಿತು ಶಿಕ್ಷಣ ಇಲಾಖೆಯವರಿಂದ ನೇರ ಫೋನ್ ಇನ್ ಕಾರ್ಯಕ್ರಮ. ಇದರಲ್ಲಿ ಬಾಗಲಕೋಟ ಜಿಲ್ಲಾ ಮುಧೋಳ ತಾಲೂಕು, ಗೋಸಬಾಳ ಗ್ರಾಮದ ಮಹಮ್ಮದ್ ಗೌಸ್ ಎಂಬ ಶಿಕ್ಷಕರಿಂದ ಪ್ರಶ್ನೆ “ಸರ್,  ಈ ಬಾರಿ ಓಬಿಸಿ ವಿದ್ಯಾರ್ಥಿಗಳಿಗೆ 30 ರೂಪಾಯಿ ಹಾಗೂ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ 15 ರೂಪಾಯಿ ಶುಲ್ಕ ನಿಗದಿ ಮಾಡಿದ್ದೀರಿ. ಇದು ತುಂಬಾ ಜಾಸ್ತಿ ಅಂತ ಪೋಷಕರು ಹೇಳ್ತಿದಾರೆ.. ಫೀಸ್ ಸ್ವಲ್ಪ ಕಡಿಮೆ ಮಾಡಿ ಸಾರ್” ಎಂಬ ಕೋರಿಕೆ. “ಸಾರ್, ಈ ಪರೀಕ್ಷೆಗಳ ಕುರಿತು ಯಾವ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ?” ಎಂದು ಯಾವುದೋ ತಾಲೂಕಿನ ಶಿಕ್ಷಕಿ ಕೇಳಿದಾಗ, “ಅದೇನಮ್ಮ, ನಿಮ್ಮ ಟ್ರಾನ್ಸ್ ಫರ್ಸ್ ಗೆಲ್ಲ ನೀವು ನೋಡ್ತೀರಲ್ಲ…..ಅದೇ ವೆಬ್ ಸೈಟು” ಎಂಬ ಉತ್ತರ. J

ಆಹಾ, ಎಷ್ಟು ಅರ್ಥಪೂರ್ಣವಾಗಿತ್ತು ಅಂತೀರಿ ಕಾರ್ಯಕ್ರಮಗಳು…..

ಈಗ ಹೇಳಿ ನಾನು ಕಾರಿನಲ್ಲಿ ಕುಣಿದಾಡಿದ್ದು ತಪ್ಪಾ ಅಂತಾ? J

ಬದ್ರಾ ಸ್ಟಾಪ್ ನಲ್ಲಿ ಕಾಫಿ ರುಚಿ

ಮಳೆಗಾಲದಲ್ಲಿ ನನ್ನ ಊರಾದ ಕೊಪ್ಪಕ್ಕೆ ಒಂದು ಟ್ರಿಪ್ ನಾನು ಮಾಡಲೇಬೇಕು. ಈ ಬಾರಿ ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಹೋಗಿದ್ದೆ. ಕೊಪ್ಪದಿಂದ ಮರುಳುವಾಗ ಅಣ್ಣ, “ಬದ್ರಾ ಸ್ಟಾಪ್ ನಲ್ಲಿ ಕಾಫಿ ಕುಡಿದು ಹೋಗಿ” ಎಂದಿದ್ದ. ಬಾಳೆಹೊನ್ನೂರಿಂದ ಸ್ವಲ್ಪ ಮುಂದೆ ಬಂದರೆ ಬದ್ರಾ ಸ್ಪಾಪ್ ಎಂಬ ಬೋರ್ಡ್ ಕಂಡ ಕೂಡಲೇ ಕಾರ್ ನಿಲ್ಲಿಸಿದೆ. ಕಾಫಿ ತೋಟದ ನಡುವೆ ಈ ಪುಟ್ಟ ಬದ್ರಾ ಸ್ಟಾಪ್ ಇದೆ. ಬಿಸಿ ಬಿಸಿ ಅಪ್ಪಟ ಕಾಫಿ ದೊರೆಯುತ್ತದೆ. ಸುರಿಯುವ ಮಳೆಯ ನಡುವೆ ಬಿಸಿ ಬಿಸಿ ಕಾಫಿ ಹೀರುತ್ತಿದ್ದರೆ…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸುಘೋಷ!!

ಯಾವುದಾದರೂ ನಿರ್ದಿಷ್ಟ ವಿಷಯದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಯಾರಾದರೂ ಸಂಬಂಧವೇ ಇಲ್ಲದ ಮಾತುಗಳನ್ನಾಡಿದರೆ, “ಬದ್ರಾ ಸ್ಟಾಪಿಗೆ ಹೋಗಿ ಟೀ ಕೇಳಿದ ಹಾಗಾಯಿತು, ಮಾರಾಯ” ಎಂಬ ಮಾತು ಕೂಡ ಕೊಪ್ಪದಲ್ಲಿ ಇದೀಗ ಹುಟ್ಟಿಕೊಂಡಿದೆ!!