ಇಯಂ ಆಕಾಶವಾಣಿ…..

air

ನಿನ್ನೆ ಕಾರಿನಲ್ಲಿ ಕುಳಿತು ಕುಣಿದಾಡಿಬಿಟ್ಟೆ. ಅಷ್ಟು ಖುಷಿಯಾಗಿತ್ತು. ಯಾಕೆಂದರೆ ನನ್ನ ಕಲರ್ಸ್ ಆಫೀಸಿನಿಂದ ಜಯನಗರದವರೆಗೆ ಭಯಂಕರ ಟ್ರಾಫಿಕ್ ಜ್ಯಾಮ್ ಆಗಿ ಬರೊಬ್ಬರಿ ಒಂದೂವರೆ ಗಂಟೆ ತೆಗೆದುಕೊಂಡೆ. ಅಷ್ಟು ಹೊತ್ತು ಕಾರಿನಲ್ಲಿ ಕುಳಿತು, ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಕ್ಕೆ ಸಿಕ್ಕಾಪಟ್ಟೆ ಆನಂದವಾಗಿ ಕಾರಿನಲ್ಲಿ ಕುಣಿದಾಡಲು ಕಾರಣ.

ತಮಾಷೆ ಮಾಡುತ್ತಿಲ್ಲ, ಕಣ್ರೀ….ನಿಜ ಹೇಳ್ತೀನಿ.

ವಿಷಯ ಇಷ್ಟೇ. ಸೆಕೆಂಡ್ ಹ್ಯಾಂಡ್ ಕಾರ್ ತೆಗೆದುಕೊಂಡು ಮೂರು ವರ್ಷವಾಗುತ್ತ ಬಂದಿದ್ದರೂ, ಕಾರಿನಲ್ಲಿ ಎಎಂ (ಎಂಪ್ಲಿಟ್ಯೂಡ್ ಮಾಡ್ಯುಲೇಷನ್) ರೇಡಿಯೋ ಬರುತ್ತಿರಲಿಲ್ಲ. ಹೀಗಾಗಿ ಬೆಂಗಳೂರು ಆಕಾಶವಾಣಿಯ ಪ್ರೈಮರಿ ಚ್ಯಾನಲ್ ಅನ್ನು ಕಾರಿನಲ್ಲಿ ಕೇಳುವ ಸುಖದಿಂದ ವಂಚಿತನಾಗಿದ್ದೆ. ಎಫ್ ಎಂ ಚ್ಯಾನಲ್ ಗಳು ನನ್ನ ಕಾರಿನ ಬದುಕನ್ನು ಮೂರಾಬಟ್ಟೆ ಮಾಡಿದ್ದವು. ಅಲ್ರೀ ಅದೇನು ಎಡ್ವರ್ಟೈಸು, ಅದೇನು ಹಾಡು….ಅಬ್ಬಬ್ಬ….ತಲೆ ಫುಲ್ ಗಿರ್ ಎಂದುಬಿಟ್ಟಿತ್ತು.

ಅದ್ಯಾವುದೋ ಅಪಾರ್ಟ್ ಮೆಂಟಂತೆ, ಇಂಟರ್ ನ್ಯಾಷನಲ್ ಏರ್ ಪೋರ್ಟಿನಿಂದ ಕೇವಲ 20 ನಿಮಿಷ, ಎಂಜಿ ರೋಡಿನಿಂದ 25 ನಿಮಿಷ, ಇಂಟರ್ ನ್ಯಾಷನಲ್ ಶಾಲೆಗೆ 10 ನಿಮಿಷ, ಅಮ್ಯೂಸ್ ಮೆಂಟ್ ಪಾರ್ಕ್ ಗೆ 15 ನಿಮಿಷ ಅಂತರದಲ್ಲಿದೆಯಂತೆ. ಹೀಗಿದ್ದೂ, ಇದು ಇರುವುದು ದಟ್ಟ ಕಾನನದಲ್ಲಿಯಂತೆ. ಅಮೇಜಾನ್ ಕಾಡುಗಳಲ್ಲಿರುವ ಪಕ್ಷಿ ಸಂಕುಲ ಈ ಅಪಾರ್ಟ್ ಮೆಂಟ್ ಇರುವ ಜಾಗದಲ್ಲಿ ಇದೆಯಂತೆ. ಬೆಳಿಗ್ಗೆ ಎದ್ದಾಕ್ಷಣ ಪಕ್ಷಿಗಳ ಚಿಂವ್ ಚಿಂವ್ ಕೇಳಿಸುತ್ತದೆಯಂತೆ….ಹೀಗೆ ಮುಂಡಾಮೋಚುವ ಅಪಾರ್ಟ್ ಮೆಂಟ್ ಜಾಹೀರಾತುಗಳು……..

ಚಲಿಸುತ್ತಿರುವ ಶತಾಬ್ದಿ ಎಕ್ಸ್ ಪ್ರೆಸ್ ಟ್ರೇನ್ ಅನ್ನು ಬೇಕಾದರೂ ನಾನು ಓಡಿ ಹೋಗಿ ಹಿಡಿಯಬಲ್ಲೆ. ಆದರೆ ಕೆಲವು ಮಹಿಳಾ ಆರ್ ಜೆ ಗಳ ಮಾತುಗಳನ್ನು ಹಿಡಿಯುವುದಂತೂ ನನ್ನ ಕೈಲಾಗದ ಮಾತು. ಅದೇನು ಫಾಸ್ಟು ಅಂತೀರಿ, ಆ ಶಬ್ದ ನನ್ನ ಕಿವಿಯೊಳಗೆ ಹೋಗಿ, ಮೆದುಳಿಗೆ ತಲುಪಿ, ನನ್ನ ಬಡ ಮೆದುಳು ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಆಕೆ ಮಾತನಾಡುವುದನ್ನೆಲ್ಲ ಮಾತನಾಡಿ, “ಬನ್ನೋ ತೇರಾ ಫೈಗರ್ ಲಾಗೇ ಸೆಕ್ಸಿ” ಹಾಡು ಪ್ಲೇ ಮಾಡಿರುತ್ತಾಳೆ. ಸರಿ, ನಾನೂ ಸುಸ್ತು, ನನ್ನ ಮೆದುಳಂತೂ ಸುಸ್ತೋ ಸುಸ್ತು.

ಇನ್ನು ಕೆಲವು ಆರ್ ಜೆ ಗಳದ್ದಂತೂ ಕರ್ಮಕಾಂಡ. ಇವರ ಮಾತು ಕಮ್ಮಿ, ಉಗ್ಗು ಜಾಸ್ತಿ. “ಶಬ್ದವೇದಿ ಚಿತ್ರದಿಂದ ಹಾಡನ್ನು ಪ್ರಸಾರ ಮಾಡಿ ಅಂತ ಕೇಳಿದ್ದಾರೆ ಬಬಾ…..ಣಸವಾಡಿಯಿಂದ…. ಕೆ…..ಶವಮೂರ್ತಿ, ಒಒಒಂಟಿಕೊ…….ಪ್ಪಲುವಿನಿಂದ ಪ್ರಕಾಶ್, ಹಾಗೇ ಕುಶಾ…..ಲನಗ…..ರದಿಂದ ಸೌಮ್ಯ, ರಾಹುಲ್. ಈಗ ಈ ಹಾಡು ಕೇಳ್ಬಿಟ್ಟು ಬನ್ನಿ” ಎಂಬ ಅಮೋಘ ಮಾತುಗಳು.

ಎಲ್ಲ ಎಫ್ ಎಂ ಚ್ಯಾನಲ್ ಗಳು ಹೀಗೆ ಅಂತ ಅಲ್ಲ. ಆದರೆ ನನಗೆ ಬೇಕಾದಾಗ ಮಾತ್ರ ನನ್ನ ಕಿಶೋರ, ರಫಿ, ಲತಾ, ಮುಬಾರಕ್ ಬೇಗಂ, ಹೇಮಂತ್ ಕುಮಾರ್, ಸಿಗುತ್ತಲೇ ಇರಲಿಲ್ಲ.

ಇಂತಿಪ್ಪ ಸನ್ನಿವೇಶದಲ್ಲಿ ನನ್ನ ಕಾರಿನಲ್ಲಿ ಅಂತೂ ಇಂತೂ ಪರ್ಮುಟೇಶನ್ನು, ಕಾಂಬಿನೇಶನ್ನು, ಮೋಡ್, ಸೀಕ್, ಸೆಟ್ ಎಲ್ಲಾ ಒತ್ತಿ  ಎಎಂ ಬೆಂಗಳೂರು ಆಕಾಶವಾಣಿಯ ಪ್ರೈಮರಿ ಚ್ಯಾನಲ್ ಹಚ್ಚಿದೆ ನೋಡಿ…..ಆಹಾ ಏನು ಖುಷಿ ಅಂತೀರಿ.

ಮೊದಲು ರಸವಾರ್ತೆ ಪ್ರಸಾರವಾಯಿತು. ಅದಾದ ಬಳಿಕ ಕಾಣೆಯಾದವರ ಬಗ್ಗೆ ಪ್ರಕಟಣೆ, ಗೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ನಾಲ್ಕು ಅಡಿ ಮೂರು ಅಂಗುಲ…..ಅಬ್ಬಾ….ಎಷ್ಟು ದಿನವಾಗಿತ್ತು ಈ ರೀತಿಯ ಪ್ರಕಟಣೆ ಕೇಳಿ….. ನಂತರ ಪರಶಿವಮೂರ್ತಿಯವರ ಬೇಸ್ ವಾಯ್ಸ್ ನಿಂದ ಪ್ರದೇಶ ಸಮಾಚಾರ. ಅದಾದ ನಂತರ ಕರ್ನಾಟಕ ಕೃಷಿ ಮಾರುಕಟ್ಟೆ ಮಂಡಳಿಯಿಂದ ರಾಜ್ಯದ ಕೃಷಿ ಉಗ್ರಾಣಗಳ ಕುರಿತು ಪ್ರಾಯೋಜಿತ ಕಾರ್ಯಕ್ರಮ. ಕೆಲ ಹೊತ್ತಿನ ನಂತರ ಪಶ್ಚಿಮ ಬಂಗಾಲದ ಯಾವುದೋ ವಿಶ್ವವಿದ್ಯಾನಿಲಯದ ಇಬ್ಬರು ಇಕಾನಾಮಿಕ್ಸ್ ಪ್ರೊಫೆಸರ್ ಗಳು ಮ್ಯಾಕ್ರೋ ಇಕನಾಮಿಕ್ಸ್ ಬಗ್ಗೆ ಚರ್ಚೆ ನಡೆಸಿದರು. ಎಷ್ಟು ಅರ್ಥಪೂರ್ಣವಾಗಿತ್ತು ಇದೆಲ್ಲ…..ಬಳಿಕ ರಾತ್ರಿ ಎನ್ ಟಿ ಎಸ್ ಇ ಹಾಗೂ ಎನ್ ಎಮ್ ಎಮ್ ಎಸ್ ಪರೀಕ್ಷೆಗಳ ಕುರಿತು ಶಿಕ್ಷಣ ಇಲಾಖೆಯವರಿಂದ ನೇರ ಫೋನ್ ಇನ್ ಕಾರ್ಯಕ್ರಮ. ಇದರಲ್ಲಿ ಬಾಗಲಕೋಟ ಜಿಲ್ಲಾ ಮುಧೋಳ ತಾಲೂಕು, ಗೋಸಬಾಳ ಗ್ರಾಮದ ಮಹಮ್ಮದ್ ಗೌಸ್ ಎಂಬ ಶಿಕ್ಷಕರಿಂದ ಪ್ರಶ್ನೆ “ಸರ್,  ಈ ಬಾರಿ ಓಬಿಸಿ ವಿದ್ಯಾರ್ಥಿಗಳಿಗೆ 30 ರೂಪಾಯಿ ಹಾಗೂ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳಿಗೆ 15 ರೂಪಾಯಿ ಶುಲ್ಕ ನಿಗದಿ ಮಾಡಿದ್ದೀರಿ. ಇದು ತುಂಬಾ ಜಾಸ್ತಿ ಅಂತ ಪೋಷಕರು ಹೇಳ್ತಿದಾರೆ.. ಫೀಸ್ ಸ್ವಲ್ಪ ಕಡಿಮೆ ಮಾಡಿ ಸಾರ್” ಎಂಬ ಕೋರಿಕೆ. “ಸಾರ್, ಈ ಪರೀಕ್ಷೆಗಳ ಕುರಿತು ಯಾವ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ?” ಎಂದು ಯಾವುದೋ ತಾಲೂಕಿನ ಶಿಕ್ಷಕಿ ಕೇಳಿದಾಗ, “ಅದೇನಮ್ಮ, ನಿಮ್ಮ ಟ್ರಾನ್ಸ್ ಫರ್ಸ್ ಗೆಲ್ಲ ನೀವು ನೋಡ್ತೀರಲ್ಲ…..ಅದೇ ವೆಬ್ ಸೈಟು” ಎಂಬ ಉತ್ತರ. J

ಆಹಾ, ಎಷ್ಟು ಅರ್ಥಪೂರ್ಣವಾಗಿತ್ತು ಅಂತೀರಿ ಕಾರ್ಯಕ್ರಮಗಳು…..

ಈಗ ಹೇಳಿ ನಾನು ಕಾರಿನಲ್ಲಿ ಕುಣಿದಾಡಿದ್ದು ತಪ್ಪಾ ಅಂತಾ? J

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s