ಪ್ರಶಸ್ತಿ, ಹಣ ವಾಪಸ್ ನೀಡಿದ್ದೀರಿ, ಆದರೆ….

kalburgi

ಕಲಬುರ್ಗಿ ಹತ್ಯೆ ಖಂಡಿಸಿ ಮತ್ತು ಹತ್ಯೆ ನಡೆದು ಇಷ್ಟು ದಿನಗಳಾದರೂ ಅಪರಾಧಿಗಳನ್ನು ಸೆರೆ ಹಿಡಿಯುವಲ್ಲಿ ಆಡಳಿತ ವಿಫಲವಾಗಿರುವುದನ್ನು ವಿರೋಧಿಸಿ ಹಲವಾರು ಸಾಹಿತಿಗಳು ತಮಗೆ ಸಂದ ವಿವಿಧ ಪ್ರಶಸ್ತಿಗಳನ್ನು ವಾಪಸ್ ನೀಡಿದ್ದಾರೆ. ಆ ಸಂದರ್ಭದಲ್ಲಿ ಹಲವರು, “ಪ್ರಶಸ್ತಿ ಮಾತ್ರ ವಾಪಸ್ ನೀಡಿದ್ದಾರಾ, ಅಥವಾ ಅದರ ಜೊತೆ ಬಂದ ಹಣವನ್ನೂ ವಾಪಸ್ ಮಾಡಿದ್ದಾರಾ?” ಎಂದು ಕೇಳಿದ್ದರು. ನನ್ನ ಅರಿವಿಗೆ ಬಂದ ಹಾಗೆ ಎಲ್ಲ ಸಾಹಿತಿಗಳೂ ತಮಗೆ ಸಂದ ಪ್ರಶಸ್ತಿಯ ಜೊತೆಗೆ ಹಣವನ್ನೂ ವಾಪಸ್ ಮಾಡಿದ್ದಾರೆ. ಬಹುಶಃ, ಇದಕ್ಕೆ ಮುನ್ನುಡಿ ಬರೆದವರು ಚಂಪಾ ಅವರು. ತಮ್ಮ ಪ್ರಶಸ್ತಿಯ ಜೊತೆಗೆ 1 ಲಕ್ಷದ ಚೆಕ್ಕನ್ನೂ ವಾಪಸ್ ಮಾಡಿದ್ದರು.

ಸಾಹಿತಿಗಳು ಪ್ರಶಸ್ತಿ ಮರಳಿಸುತ್ತಿರುವುದರ ಬಗ್ಗೆ ಕಮ್ಮಟವೊಂದರಲ್ಲಿ ಚರ್ಚೆ ಮಾಡುತ್ತಿರುವಾಗ, ಭಾಗವಹಿಸಿದ ಒಬ್ಬರು, ಈ ಪ್ರಶ್ನೆಯನ್ನು ಮುಂದಿಟ್ಟರು. “ನೋಡಿ ಸ್ವಾಮಿ, ಪ್ರಶಸ್ತಿ ಮತ್ತು ಹಣ ವಾಪಸ್ ನೀಡುವುದು ಸ್ವಾಗತಾರ್ಹವೇ. ನಾನೂ ಅದನ್ನು ಸ್ವಾಗತಿಸುತ್ತೇನೆ. ಆದರೆ ಮರಳಿಸುವುದೆಂದರೆ ಸಂಪೂರ್ಣವಾಗಿ ಮರಳಿಸಬೇಕು. ಪ್ರಶಸ್ತಿಯನ್ನು ಮರಳಿಸಿದ ಸಾಹಿತಿಗಳು, ಕಲಬುರ್ಗಿಯವರ ಅಪರಾಧಿಗಳು ಸಿಕ್ಕಿಹಾಕಿಕೊಂಡ ಬಳಿಕವೂ ಪ್ರಶಸ್ತಿ ಮತ್ತು ಹಣವನ್ನು ಪುನಃ ಸ್ವೀಕರಿಸಬಾರದು. ಜೊತೆಗೆ, ಇಲ್ಲಿ ಮತ್ತೊಂದು ವಿಷಯವಿದೆ. ಈ ಪ್ರಶಸ್ತಿಗಳ ಮೊತ್ತವೆಲ್ಲವೂ ಸಾವಿರ ಮತ್ತು ಲಕ್ಷದ ಲೆಕ್ಕದಲ್ಲಿದೆ. ಈ ಪ್ರಶಸ್ತಿಗಳು ಈ ಸಾಹಿತಿಗಳಿಗೆ ಸಂದು ಹಲವು ವರ್ಷಗಳು ಕಳೆದಿವೆ. ಇಷ್ಟು ಹಣಕ್ಕೆ ಇಷ್ಟು ವರ್ಷ ಬಡ್ಡಿ ಎಷ್ಟಾಯಿತು? ಉಳಿತಾಯ ಖಾತೆಯಲ್ಲಿಟ್ಟರೆ ಕನಿಷ್ಠ 4 ಪರ್ಸೆಂಟ್ ಬಡ್ಡಿ ಬರುತ್ತದೆ. ಫಿಕ್ಸ್ಡ್ ಡಿಪಾಸಿಟ್ ನಲ್ಲಿ ಇನ್ನೂ ಹೆಚ್ಚು. ಆ ಬಡ್ಡಿಯ ಹಣವನ್ನೂ ಸಾಹಿತಿಗಳು ವಾಪಸ್ ಮಾಡಬೇಕು” ಅಂತ.

ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಓದುಗರು ಉತ್ತರ ನೀಡಬಹುದು.