ನಾನೀಗ ಸೂಲಗಿತ್ತಿ

ನಮ್ಮ ಮನೆಯ ಹಿಂದೆ ಯುಟಿಲಿಟಿ ಏರಿಯಾದಲ್ಲಿ ಸಾಮಾನುಗಳನ್ನು ಇಡಲು ಒಂದು ಸ್ಟಾಂಡ್ ಇದೆ. ಅಲ್ಲಿ ಚುಕ್ಕೆ ಮುನಿಯ ದಂಪತಿ ಗೂಡು ಕಟ್ಟಿವೆ. ಗುಬ್ಬಿಗಿಂತ ಸ್ವಲ್ಪ ಚಿಕ್ಕದಾಗಿರುವ ಈ ಪಕ್ಷಿಯ ಕೆಳಭಾಗದಲ್ಲಿ ಬಿಳಿಚುಕ್ಕೆಗಳಿರುತ್ತವೆ. ಇದರ ಗೂಡು ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಆದರೆ ಈ ದಂಪತಿಯ ಗೂಡು ಕಟ್ಟುವ ಶ್ರಮ, ನಾವು ನಡೆದಾಡುವಾಗ ಫರ್ ಎಂದು ರೆಕ್ಕೆ ಬಡಿದು ನಮಗೂ ಹೆದರಿಸಿ ಹಾರಿಹೋಗುವುದು. ದೂರದಲ್ಲೇ ಕುಳಿತು ನಾವು ಒಳಗೆ ಹೋಗುತ್ತಿರುವಂತೆ ಮತ್ತೆ ಗೂಡಿಗೆ ಬರುವುದು – ಎಲ್ಲವನ್ನೂ ನೋಡಲು ಚೆಂದ. ಸುಮಾರು 1 ತಿಂಗಳು ಮನೆಯಲ್ಲಿದ್ದು ನಂತರ ಹಾರಿಹೋಗುತ್ತವೆ. ಕಳೆದ ವರ್ಷ ಇದೇ ವೇಳೆ ಇದೇ ಜಾಗದಲ್ಲಿ ಗೂಡು ಮಾಡಿದ್ದವು. ಅವೇನಾ ಈ ಪಕ್ಷಿಗಳು ಗೊತ್ತಿಲ್ಲ, ಆದರೆ ನಾವಂತೂ ಅದಕ್ಕೆ ಕೊಂಚವೂ ತೊಂದರೆಯಾಗದ ಹಾಗೆ ಎಲ್ಲ ಜಾಗೃತೆಯವನ್ನು ವಹಿಸುತ್ತೇವೆ. eagerly waiting for juniors….

ಕೇಳು ಜನಮೇಜಯದ ಒಂದು ಸನ್ನಿವೇಶ

ಶ್ರೀರಂಗರ ನಾಟಕ ‘ಕೇಳು ಜನಮೇಜಯ’ವನ್ನು ನಮ್ಮ ‘ಸ್ನೇಹ ಸಮೂಹ’ ತಂಡ ಆಡಿದ್ದು ಸುಮಾರು 12 ವರ್ಷಗಳ ಹಿಂದೆ. ಇದರಲ್ಲಿ ನಾನು ಮಾಡಿದ್ದು ಸಾಮಾನ್ಯಪ್ಪ ಎಂಬ ಪಾತ್ರ. ಸಾಮಾನ್ಯಪ್ಪನ ಮಾತುಗಳು ಕೇಳಲು ತಮಾಷೆಯಾದರೂ, ಬದುಕಿನ ಸಂಕೀರ್ಣತೆಯನ್ನು ದಾಟುವ ಉಪಾಯ ಹೇಳುತ್ತವೆ.

ವಿಜಯnext ನಲ್ಲಿ ನನ್ನ “ಇದೇ ಈ ಹೊತ್ತಿನ ವಿಶೇಷ”

14534685

ಓದಿಗಾಗಿ :

ಇದೇ ಈ ಹೊತ್ತಿನ ವಿಶೇಷ

ಎಂದಿನಂತೆ ನೂರ್ ಜಹಾನ್ ಬಾಯಿಬಡಿದುಕೊಳ್ಳುವುದಕ್ಕೆ ಅವಳದೇ ಆದ ಕಾರಣವಿರಲಿಲ್ಲ. ಹುಸೇನಿ-ನೂರ್ ಜಹಾನ್ ರ ಹನ್ನೊಂದು ವರುಷದ ಪುತ್ರ ಯಾಕೂಬ್ ಮತ್ತೆ ಹಾವಿನಂತಾಡತೊಡಗಿದ್ದ. ಬೆಳಿಗ್ಗೆ ಎದ್ದ ತಕ್ಷಣ, ಶಾಲೆಯಲ್ಲಿ, ಬಯಲಲ್ಲಿ ಆಟವಾಡುವಾಗ, ಊಟ ಮಾಡುವಾಗ ಹೀಗೆ ಯಾವಾಗೆಂದರೆ ಆವಾಗ, ಯಾಕೂಬನಿಗೆ ‘ಹಾವಿನ ತೊಂದರೆ’ ಶುರುವಾಗಿಬಿಡುತ್ತಿತ್ತು. ಒಮ್ಮೆ ತೊಂದರೆ ಶುರುವಾದರೆ, ಧಬ್ ಅಂತ ನೆಲಕ್ಕೆ ಬಿದ್ದು ಕೈಗಳನ್ನು ಹೆಡೆಯ ಹಾಗೆ ಮಾಡಿಕೊಂಡು, ನಾಲಿಗೆಯನ್ನು ಹೊರ ಚಾಚಿ ಭಯಂಕರವಾಗಿ ಹೊರಳಾಡುತ್ತಿದ್ದ. ಹಿಡಿದುಕೊಳ್ಳಲು ಹೋದರೆ ಕಚ್ಚುತ್ತಿದ್ದ. ತಲೆ, ಮೊಳಕೈ, ಮಂಡಿಚಿಪ್ಪು ಗೋಡೆಗೆ ರಪ್ ಅಂತ ಬಡಿಯುತ್ತಿತ್ತು. ಬಯಲಲ್ಲಾದರೆ ಕಲ್ಲು-ಮುಳ್ಳು ತಾಗಿ ದೇಹದಿಂದ ರಕ್ತ ಸುರಿದರೂ ಕೆಲ ನಿಮಿಷಗಳಾದ ಮೇಲಷ್ಟೇ ಹೊರಳಾಟ ನಿಲ್ಲುತ್ತಿತ್ತು.

ಯಾಕೂಬನನ್ನು ಹಿಡಿದುಕೊಳ್ಳಲುಹೋಗಿ ಹಿಂದೆ ಐದಾರು ಬಾರಿ ಕಚ್ಚಿಸಿಕೊಂಡಿದ್ದ ಹುಸೇನಿ ಸುಮ್ಮನಾದ, ಆದರೆ ತಾಯಿ ಹೃದಯ ಸುಮ್ಮನಿರಬೇಕಲ್ಲ? ನೂರ್ ಜಹಾನ್, ಹೋ ಎಂದು ಅಳುತ್ತಾ ಬಾಯಿಬಡಿದುಕೊಂಡಳು. ಮಗನ ಹೊರಳಾಟ ಮತ್ತು ತಾಯಿಯ ಆಕ್ರಂದನದಲ್ಲಿ, ಹುಸೇನಿ ಮೌನವಾಗಿ ಅಳುತ್ತಿದ್ದುದು ಆತನಿಗೆ ಮಾತ್ರ ಕೇಳಿಸಿತು.

“ಚುಪ್ ಕರ್ ಅಬ್…. ವೋಂ ನ್ಯೂಸ್ ಚ್ಯಾಲನ್ ವಾಲೆ ಕಲ್ ಆಕೂ ಬುಲಾಯೆ ನೈಸೋ? ಜುಮ್ಮೆ ಕೆ ದಿನ್ ಆವ್ ಕರ್ಕು….ಜಾಕ್ ಆಯೇಂಗೆ….”  ಎಂದು ಹೆಂಡತಿಯನ್ನು ಸಮಾಧಾನಪಡಿಸಿದ.

ಯಾಕೂಬ್ ಹಾವಿನಂತೆ ಆಡಲು ಆರಂಭಿಸಿ ವರ್ಷವೇ ತುಂಬಿತ್ತು. ತೋರಿಸದ ವೈದ್ಯರು-ಹಕೀಮರಿಲ್ಲ. ಮಾಡದ ಔಷದಿಯಿಲ್ಲ. ಆದರೆ ಯಾಕೂಬಿನ ಸಮಸ್ಯೆ ಹೆಚ್ಚುತ್ತಲೇ ಇತ್ತು. ಜನ ಆತನಿಗೆ ನಾಗದೋಷವಿದೆ, ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬನ್ನಿ ಎಂದರು. ಹುಸೇನಿ ತಯಾರಿದ್ದರೂ, ಜಮಾತಿನ ಮುಖಂಡರು ಏನಂದುಕೊಳ್ಳುತ್ತಾರೋ ಎಂದು ಆ ವಿಚಾರವನ್ನೇ ಕೈಬಿಟ್ಟಿದ್ದ. ಮಗನ ಕಷ್ಟ ನೋಡಲಾಗದೆ ತಾಯಿ ಹುಚ್ಚಿಯಂತಾಗಿದ್ದಳು. ನ್ಯೂಸ್ ಚ್ಯಾನಲ್ ಮೂಲಕವಾದರೂ ಕಷ್ಟ ಪರಿಹಾರವಾಗಬಹುದು ಎಂಬ ಆಸೆಯೊಂದು ಹುಸೇನಿ ದಂಪತಿಯಲ್ಲಿ ಉಳಿದಿತ್ತು.

ನೂರ್ ಜಹಾನಳ ತಮ್ಮ, ಯಾಕೂಬ್ ಹಾವಿನಂತಾಡುವುದನ್ನು ಮೊಬೈಲಿನಲ್ಲಿ ರಿಕಾರ್ಡ್ ಮಾಡಿದ್ದ. ಆ ವಿಡಿಯೋ ವಾಟ್ಸಾಪ್ ಮೂಲಕ ಹುಸೇನಿಯ ಊರಾದ ಬೀಡಿಯಿಂದ, ಅಳ್ನಾವರ್, ಖಾನಾಪೂರ್, ಜಾಂಬೋಟಿ, ಬೆಳಗಾವಿ ಮಾರ್ಗವಾಗಿ ಬೆಂಗಳೂರಿನ ನ್ಯೂಸ್ ಚ್ಯಾನೆಲ್ ತಲುಪಿತ್ತು. ಅದೇ ಕಾರಣಕ್ಕೆ ನ್ಯೂಸ್ ಚ್ಯಾನೆಲ್ಲಿನವರು ಹುಸೇನಿ ಕುಟುಂಬವನ್ನು ಬೆಂಗಳೂರಿನ ಸ್ಟುಡಿಯೋಕ್ಕೆ ಕರೆಸಿಕೊಂಡಿದ್ದರು.

—–

“ಯಂಥಾ ಮ್ಹಾರಾಯಾ… ಒಂದ್ ಮರ್ಡರ್ ಇಲ್ಯೆ, ಒಂದ್ ರೇಪ್ ಇಲ್ಯೆ, ಯಂಥ ಬುಲೆಟಿನ್ ಮಾಡೋದು” ಎಂದು ಸುಪ್ರಿಯಾ ಹೆಗಡೆ ಬೇಸರದಿಂದ ಮೈಮುರಿದಳು. ನೈಟ್ ಶಿಫ್ಟಿನಲ್ಲಿ ಕೂಡ ಯಾವುದೇ ಒಳ್ಳೆ ಸ್ಟೋರಿ ಇರಲಿಲ್ಲ. ಬೆಳಿಗ್ಗೆ 6 ಗಂಟೆ ಬುಲೆಟಿನ್ನಿಗೆ ‘ಒಗೆತ ಬೇಡದ ಜೀನ್ಸ್ ಪ್ಯಾಂಟ್’ ಎಂಬ ಸ್ಟೋರಿ ಇದ್ದರೂ ಆಕೆಗೆ ಸಮಾಧಾನವಿರಲಿಲ್ಲ. ಬೆಳಗ್ಗೆ 9 ಗಂಟೆ ಬುಲೆಟಿನ್ನಿಗಾದರೂ ಬಿಸಿಬಿಸಿ ನೀಡಲೇಬೇಕಿತ್ತು. ಅಷ್ಟರಲ್ಲಿ ಡೆಸ್ಕಿಗೆ ನುಗ್ಗಿದ ಇನ್ಪುಟ್ ಚೀಫ್ ಪ್ರಶಾಂತ್  “ಅದೇನ್ರೀ ಅದು ಸ್ಕ್ರಾಲಿಂಗು?…ಕನ್ನಡದ ಕೊಲೆ ಮಾಡ್ತೀರಲ್ರೀ…ಗಮನ ಎಲ್ಲಿರುತ್ತೆ ನಿಮ್ಮದು?”  ಎನ್ನುತ್ತ, “ಯಾರ್ರೀ ಅಲ್ಲಿ… ಹಾರ್ಧಿಕದಲ್ಲಿ ಧ ಬಾಲ ತೆಗೀರಿ, ಅಮೇರಿಕದಲ್ಲಿ ಮೆ ದೀರ್ಘ ತೆಗೀರಿ, ಭರತದಲ್ಲಿ ಭ ಇಳಿಸಿ…ಏ ನಾನು ಹೇಳ್ತೀನಿ ಮತ್ತೆ,….ನಾನೇದ್ರೂ ಬಿಪಿ ಹೆಚ್ಚುಕಡಿಮೆಯಾಗಿ ಡೆಸ್ಕಿನಲ್ಲಿ ಸತ್ತರೆ ನೀವೇ ಹೊಣೆ” ಎಂದು ಸುಪ್ರಿಯಾಳತ್ತ ನೋಡಿದ. ಆಕೆ ತಲೆ ತಗ್ಗಿಸಿ ಕೀಬೋರ್ಡ್ ಕುಟ್ಟುತ್ತಿದ್ದಳು. ನಂತರ ಧೈರ್ಯ ಮಾಡಿ, ಪ್ರಶಾಂತನನ್ನು ಕೇಳಿದಳು,

“ಸಾರ್, 9 ಗಂಟೆಗೆ ಯಂಥದೂ ಇಲ್ಲ…”

“ನಾನು ಈಗ ಹೋಗಿ ಐದನೇ ಫ್ಲೋರಿನಿಂದ ಕೆಳಗೆ ಹಾರಿ ಸಾಯುತ್ತೇನೆ. ಮೊದಲೆ ಕ್ಯಾಮೆರಾ ಸೆಕ್ಷನ್ನಿಗೆ ಹೇಳಿಬಿಡಿ. ಅದನ್ನೇ ಎಕ್ಸ್ ಕ್ಲೂಸಿವ್ ಮಾಡಿಬಿಡಿ, ಆಯ್ತಲ್ವೋ?”

ಸುಪ್ರಿಯಾ ಮೌನಳಾದಳು.

“ರೀ ಸುಪ್ರಿಯಾ, ನಿಮ್ಗೆ ಕಣ್ಣು ಕಾಣ್ತದಾ? ಎರಡು ದಿನದ ಹಿಂದೆಯೇ ಬೆಳಗಾವಿಯಿಂದ ನಾಗದೋಷ ವಿಶುವಲ್ ಬಂದಿದೆ, ಎಷ್ಟು ಚಂದ ಇದೆ ಗೊತ್ತಾ? ಅವ 11 ವರ್ಷದ ಹುಡುಗ ಹಾವಿನ ಹಾಗೆ ಆಡ್ತಾನೆ.  ಅದು ಇವತ್ತು ಮಧ್ಯಾಹ್ನದ ಪ್ಯಾನಲ್ ಡಿಸ್ಕಷನ್ ಸಬ್ಜೆಕ್ಟು…ಅದನ್ನ ಹೆಡ್ ಲೈನ್ ಮಾಡಿಕೊಳ್ಳಲಿಕ್ಕೆ ನಿಮಗೆಂಥ ರೋಗ? ಬಂದು ಬಿಟ್ರಿ,,,,ಎಕ್ಸ್ ಕ್ಲೂಸಿವ್ ಇಲ್ಲ ಅಂತ”  ಎಂದ ಪ್ರಶಾಂತ.

ಸುಪ್ರಿಯಾ ಬುಸುಗುಡುತ್ತಲೇ

ಹಾವಿನ ಹಾಗೆ ಆಟ, ಹಾವಿನ ಹಾಗೆ ಊಟ – ಬೆಳಗಾವಿಯಲ್ಲೊಬ್ಬ ನಾಗ ಬಾಲಕ – ಬೆಚ್ಚಿ ಬಿದ್ದ ಮೆಡಿಕಲ್ ಫೀಲ್ಡ್  ಎಂದು ಹೆಡ್ ಲೈನ್ ಬರೆದಳು.

———

ದೂರದ ಬೀಡಿಯಿಂದ ಹುಸೇನಿ ತನ್ನ ಹೆಂಡತಿ ಮಗನೊಂದಿಗೆ ನ್ಯೂಸ್ ಚ್ಯಾನಲ್ಗೆ ಬೆಳಿಗ್ಗೆಯೇ ಕಾಲಿಟ್ಟ. ಹಿಂದೆಂದೂ ನೋಡಿರದಿದ್ದ ದೊಡ್ಡ ಸ್ಕ್ರೀನ್ ಟಿವಿಗಳು ರಿಸೆಪ್ಶನ್ನಿನನಲ್ಲಿ ರಾರಾಜಿಸುತ್ತಿದ್ದವು.

ಕೆಲ ಸಮಯದ ಬಳಿಕ ಮೂವರನ್ನು ಸ್ಟೂಡಿಯೊದೊಳಕ್ಕೆ ಕರೆದೊಯ್ಯಲಾಯಿತು. ಒಳಗೆ ಮೂವರಿಗೂ ಯಾವುದೋ ಬೇರೆ ಲೋಕಕ್ಕೆ ಹೋದ ಅನುಭವ. ಮುಖಕ್ಕೆ ಹೊಡೆಯುವ ಪ್ರಖರ ಲೈಟ್ ಗಳು, ನೂರಾರು ಕೇಬಲ್ಲುಗಳು, ಭಯವನ್ನು ಹುಟ್ಟಿಸುವ ಬೃಹತ್ ಕ್ಯಾಮೆರಾಗಳು – ಎಲ್ಲವನ್ನೂ ನೋಡಿ ಹುಸೇನಿ ದಂಗಾಗಿದ್ದ. ಯಾಕೂಬನಿಗಂತೂ ಮಾತೇ ಹೊರಡದಾಗಿತ್ತು.

ಮೂವರನ್ನು ಸಾಲಾಗಿ ಕೂರಿಸಲಾಯಿತು. ಒಂದು ಕಡೆ ಹುಸೇನಿ, ಯಾಕೂಬ್, ನೂರ್ ಜಹಾನ್. ಮತ್ತೊಂದು ಪಾರ್ಶ್ವದಲ್ಲಿ  ದಪ್ಪನಾದ ಅರೆಬೆತ್ತಲೆ ವ್ಯಕ್ತಿಯೊಂದು ಕುಳಿತಿತ್ತು. ಆತನ ಹಣೆಯ ಮೇಲೆ ದೊಡ್ಡದಾಗಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ವಿವಿಧ ಮಣಿಗಳುಳ್ಳ ಹಾರಗಳು, ಬೆರಳಲ್ಲಿ ಚಿನ್ನದುಂಗುರಗಳು. ಇನ್ನೊಂದು ಕುರ್ಚಿಯಲ್ಲಿ ಹೋತದ ಗಡ್ಡದ, ಚೂಪು ಮುಖದ, ನೀಲಿ ಕನ್ನಡಕದ ಕೋಟು ಟೈನಲ್ಲಿದ್ದ ವ್ಯಕ್ತಿ.

ಈ ಗುಂಪಿನ ಮಧ್ಯದಲ್ಲಿ ಸುರಸುಂದರಾಂಗಿ ಆಂಕರ್ ಮೋಕ್ಷಾ ಕುಳಿತಿದ್ದಳು.

ಹುಸೇನಿ ಕುಟುಂಬಕ್ಕೆ ಮೈಕ್ ಕೇಬಲ್ಲುಗಳನ್ನು ಚುಚ್ಚಲಾಯಿತು. ಮೇಕಪ್ಪಿನವ ಬಂದು ಪೌಡರ್ ಮೆತ್ತಿದ.

ಆಂಕರ್ ಉಲಿಯಲು ಆರಂಭಿಸಿದಳು,

“ವೀಕ್ಷಕರೆ ನಮಸ್ಕಾರ… ನಾನು ಮೋಕ್ಷಾ. ಇಂದು ಮತ್ತೊಂದು ವಿಸ್ಮಯ. ಬೀಡಿ ಗ್ರಾಮದ 11 ವರ್ಷದ ಬಾಲಕ ಯಾಕೂಬ್ ಹಾವಿನಂತೆ ಹೊರಳಾಡುತ್ತಾನೆ. ನಾಲಿಗೆ ಹೊರಚಾಚುತ್ತಾನೆ. ಹತ್ತಿರ ಬಂದರೆ ಕಚ್ಚುತ್ತಾನೆ. ಆತ ಹೀಗೇಕೆ ಮಾಡುತ್ತಾನೆ, ಆತನ ಮೈಯಲ್ಲಿ ವಿಷವೇನಾದರೂ ಇದ್ಯಾ, ಅಷ್ಟಕ್ಕೂ ಯಾಕೂಬ್ ಸ್ವಂತ ತಾಯಿಯನ್ನೇ ಕಚ್ಚಿದ್ದ್ಯಾಕೆ? ಈ ಎಲ್ಲದರ ಬಗ್ಗೆ ಚರ್ಚೆ ಮಾಡ್ತೀವಿ, ಇದೇ ಈ ಹೊತ್ತಿನ ವಿಷೇಷ, ನಾಗಬಾಲಕ”  ಎಂದಳು.

ಮುಂದುವರೆಸುತ್ತ “ಇವತ್ತಿನ ಕಾಯಕ್ರಮದಲ್ಲಿ ನಮ್ಮ ಜೊತೆ ಹುಸೇನ್ ಸಾಬ್ ಕುಟುಂಬವಿದೆ. ಹಾಗೆನೇ ಪ್ರಕಾಂಡ ಪಂಡಿತರೂ, ಜ್ಯೋತಿರ್ವಿಜ್ಞಾನ ಪ್ರವೀಣರೂ, ಬೆರಳುಗಳ ಮೇಲಿರುವ ಕೂದಲುಗಳ ಆಧಾರದ ಮೇಲೆ ಕರಾರುವಕ್ಕಾಗಿ ಭವಿಷ್ಯ ನುಡಿಯುವ ಶ್ರೀ ನಾಗಭೂಷಣಗುರೂಜಿಯವರಿದ್ದಾರೆ. ಗುರೂಜಿ ಕಾರ್ಯಕ್ರಮಕ್ಕೆ ಸ್ವಾಗತ” ಎಂದಳು. ಗುರೂಜಿಯವರು ಗಂಭೀರವಾಗಿ ನಮಸ್ಕರಿಸಿದರು.

“ಹಾಗೇನೆ ಮನೋಚಿಕಿತ್ಸಕರಾದ ಡಾ.ಗುರುರಾಜ ಕೂಡ ಇದ್ದಾರೆ, ಡಾಕ್ಟರ್ ನಿಮಗೂ ಸ್ವಾಗತ”

ಜ್ಯೋತಿಷಿಗಳಿಗೆ ನೀಡಿದ ಬಿಲ್ಡಪ್ಪಿನ ಕಾಲುಭಾಗವನ್ನೂ ತಮಗೆ ನೀಡದ್ದರಿಂದ ಡಾ.ಗುರುರಾಜಿಗೆ ಬೇಜಾರಾಯಿತಾದರೂ, ಅದನ್ನು ತೋರಿಸಿಕೊಳ್ಳದೇ ನಮಸ್ಕರಿಸಿದರು.

“ಯಾಕೂಬ್ ನೀನ್ಯಾಕೆ ಹೀಗೆ ಮಾಡುತ್ತೀಯ?” ಎಂದು ಗದರಿದಂತೆ ಮೋಕ್ಷಾ ಪ್ರಪ್ರಥಮ ಪ್ರಶ್ನೆಯನ್ನು ಯಾಕೂಬನ ಮೇಲೆಯೇ ಎಸೆದಳು. ಸ್ಟುಡಿಯೋದ ಝಗಮಗಿಸುವ ಬೆಳಕು, ಎಸಿಯ ಕೊರೆಯುವ ಛಳಿಯಿಂದ ಬೆಚ್ಚಿಬಿದ್ದಿದ್ದ ಯಾಕೂಬ್ ತ್ತೆ..ತ್ತೆ..ತ್ತೆ…ಪೆ…ತ್ತೆ….ತ್ತೆ…ಎಂದ.

“ಈಗ ಒಂದು ಬ್ರೇಕ್” ಎಂದು ತಕ್ಷಣ ಘೋಷಿಸಿದ ಮೋಕ್ಷಾ ಬ್ರೇಕ್ ಗೆ ಹೊರಟುಹೋದಳು.

ಇನ್ನೇನು ಮೋಕ್ಷಾ ತನ್ನ ಮೇಕಪ್ ಕಿಟ್ಟಿನಿಂದ ಲಿಪ್ ಸ್ಟಿಕ್ ಹಚ್ಚಿಕೊಳ್ಳಬೇಕು ಅನ್ನುವಷ್ಟರಲ್ಲಿ ಪ್ರಶಾಂತ್, ಪಿಸಿಆರ್ ಗೆ ನುಗ್ಗಿ ಟಾಕ್ ಬ್ಯಾಕಿನಲ್ಲಿ ಮೋಕ್ಷಾಳ ಕರ್ಣವೇ ಹರಿದುಹೋಗುವಂತೆ , “ರ್ರೀ…ಎಂತದ್ರೀ ಇಂಟ್ರೋ ಕೊಡ್ತೀರಾ, ನಿಮ್ಮ ತಲೆ, ಒಂದು ಪ್ಯಾನಲ್ ಡಿಸ್ಕಷನ್ ಶ್ಟಾರ್ಟ್ ಹೆಂಗೆ ಮಾಡುವುದು ಗೊತ್ತುಂಟಾ ನಿಮಗೆ? ಅಲ್ರೀ ಆ ಹುಡುಗ ಹೆದ್ರುವ ಹಾಗೆ ಪ್ರಶ್ನೆ ಕೇಳ್ತೀರಲ್ರೀ…ಅವರ ಅಪ್ಪ ದೆವ್ವದಂತೆ ಕೂತಿದಾನೆ ಅಲ್ಲಿ…ಮೊದ್ಲು ಅವನ್ನ ಮಾತಾಡಿಸ್ರಿ…ನಿಮ್ಮ ದಮ್ಮಯ್ಯ…ನಿಮ್ಮನ್ನೆಲ್ಲ ಕಟ್ಟಿಕೊಂಡು ನಾನು ಸಾಯ್ಬೇಕಾ?….ಮೋಕ್ಷಾ ಮೋದ್ಲೇ ಹೇಳಿರ್ತೇನೆ…ಡಿಸ್ಕಷನ್ ನಡೆಯುವಾಗ ಅವನಪ್ಪ ಅಮ್ಮ ಅಳುವ ಹಾಗೆ ಮಾಡ್ಲಿಲ್ಲ ಅಂದ್ರೆ ಪಾಯಿಂಟ್ ಫೈವ್ ಟಿಆರ್ಪಿಯೂ ಬರೂದಿಲ್ಲ…ಮೊದ್ಲು ಅವರಿಬ್ರನ್ನ ಅಳಿಸಿ, ಆ ಡಾಕ್ಟರನ್ನ ಬೇಕಾದ್ರೆ ಬಿಟ್ಟ್ಹಾಕಿ….ಗುರೂಜಿಯನ್ನ ಮಾತಾಡಿಸಿ ಆಯ್ತೊ…” ಎಂದು ಒದರಿದ.

ರಪ್ ಎಂದು ಮೇಕಪ್ ಬಾಕ್ಸ್ ಮುಚ್ಚಿದ ಮೋಕ್ಷಾ ಮತ್ತೆ ಡಿಸ್ಕಷನ್ ಆರಂಭಿಸಿದಳು. ಈ ಬಾರಿ ಹುಸೇನಿ ತನ್ನ ಮಗನಿಗಾಗುತ್ತಿರುವ ತೊಂದರೆಯನ್ನು ವಿವರಿಸಿದ. ಏನೇ ಆದರೂ ತಂದೆ-ತಾಯಿಯ ಕಣ್ಣಲ್ಲಿ ನೀರು ಬರಲೇ ಇಲ್ಲ.

ಇದಾದ ನಂತರ ಕ್ಯಾತ ಜ್ಯೋತಿಸಿಯ ಸರದಿ ಬಂತು.

“ಗುರೂಜಿ, ನೀವು ಜ್ಯೋತಿಷ್ಯವನ್ನು ಅಧ್ಯಯನ ಮಾಡಿದ್ದೀರಿ. ವೇದಗಳನ್ನು ಓದಿದ್ದೀರಿ. ಯಾಕೂಬನ ಬಗ್ಗೆ ಏನೆನ್ನುತ್ತೀರಿ?”

ಗುರೂಜಿ ಉತ್ತರಿಸಲು ಶುರು ಮಾಡಿದರು,

“ವೋಂ… ಗುರುರು ಬ್ರಮ್ಮಾ ಗುರುರು ವಿಸ್ಣು, ಗುರುರು ದೇವೋ ಮಹೇಸ್ವರ, ಗುರುರು ಸಾಕ್ಸಾತ್ ಪರಬ್ರಮ್ಮ ತಸ್ಮೈ ಸ್ರೀ ಗುರುವೇ ನಮ್ಮ. ಈ ಯಾಕೂಬ್ ಅನ್ನತಕ್ಕಂಥ ಬಾಲಕನ ಜಾತಕವನ್ನ ನೋಡಿದಾಗ, ನಮಗೆ ಏನಪಾ ಅಂತಂದ್ರೆ ಈತನ ಜಾತಕದಲ್ಲಿ ಸರ್ಪದೋಸ ಇರೋದು ಕಂಡುಬರುತ್ತೆ. ಅಸ್ಟೇ ಅಲ್ಲ ಈಗ ಯಾಕೂಬನಿಗೆ ಕರ್ಕಾಟಕ ಮೀನ ಲಗ್ನವಾಗಿ ಚಂದ್ರ ಹನ್ನೊಂದನೇ ಮನೆಯಲ್ಲಿದ್ದಾನೆ ಹಾಗೇ ತುಲಾ ರಾಸಿಯಲ್ಲಿ ಸನಿ ದೀರ್ಗವಾಗಿ ಸಂಚರಿಸುತ್ತಿದ್ದಾನೆ……. ” ಎಂದು ಆರಂಭಿಸಿ ಯಾಕೂಬನ ಜನ್ಮ ಜಾಲಾಡಿಬಿಟ್ಟರು.

ಮೋಕ್ಷಾಳಿಗಾಗಲಿ, ಹುಸೇನಿ ದಂಪತಿಗಾಗಲಿ, ಪಿಸಿಆರ್ನಲ್ಲಿದ್ದ ಪ್ರೊಡ್ಯೂಸರ್ಗಾಗಲಿ ಜ್ಯೋತಿಸಿಯ ಒಂದಕ್ಷರವೂ ಅರ್ಥವಾಗಲಿಲ್ಲ. ಆತ ಮಾತು ಮುಗಿಸುವ ಹೊತ್ತಿಗೆ ಬ್ರೇಕ್ ಸಮಯವಾಗಿತ್ತು.

ಮುಂದಿನ ಸೆಗ್ಮೆಂಟಿನಲ್ಲಿ ಚರ್ಚೆಯನ್ನು ಪಬ್ಲಿಕ್ ಕಾಲ್ ಗೆ ಓಪನ್ ಮಾಡಲಾಗಿತ್ತು. ಇದರಲ್ಲಿ ನಿಮ್ಮ ಮಗನಿಗೆ ನಾಗದೋಷವಿಲ್ಲ, ಆತನನ್ನು ಸೈಕಾಟ್ರಿಸ್ಟ್ ಗಳಿಗೆ ತೋರಿಸಿ ಎಂದು ಕೆಲವರೆಂದರೆ, ಮತ್ತೆ ಕೆಲವರು ಇದಕ್ಕೆ ನಾಗಪ್ರತಿಷ್ಠೆ ಸೂಕ್ತ ಪರಿಹಾರ ಎಂದರು. ಇನ್ಯಾರೋ ಫೋನ್ ಮಾಡಿ, ಇದು ಯಾಕೂಬ್ ಕುಟುಂದ ಘರ್ ವಾಪಸಿಯ ಹುನ್ನಾರವೆಂದು ಆಪಾದಿಸಿದರು. ಈ ಸೆಗ್ಮೆಂಟ್ ತುಂಬ ಪಬ್ಲಿಕ್ ಕಾಲೇ ಆಗಿಹೋಯಿತು.

ಮತ್ತೊಂದು ಬ್ರೇಕ್ ಬಂದಿತು.

ಈಗ ಕೊನೆ ಸೆಗ್ಮೆಂಟ್ ಆಗಿತ್ತು. ಒಂದು ಗಂಟೆಯ ಡಿಸ್ಕಷನ್ನಿನಲ್ಲಿ ಮುಕ್ಕಾಲು ಗಂಟೆ ಕಳೆದಿದ್ದರೂ ಇನ್ನೂ ಮನೋವೈದ್ಯರನ್ನೇ ಮಾತನಾಡಿಸಿರಲಿಲ್ಲ ಮೋಕ್ಷಾ. ಅಂತೂ ಇಂತೂ ಕೊನೆಗೆ “ಡಾ.ಗುರುರಾಜ ನಿಮ್ಮ ಮನಃಶಾಸ್ತ್ರ ಇದಕ್ಕೆ ಏನು ಹೇಳುತ್ತದೆ?” ಎಂದು ಕೇಳಿದಳು.

“ನೋಡಿ, ನನ್ನ ಪ್ರಕಾರ ಯಾಕೂಬನಿಗೆ ಇರೋದು…..”ಎಂದು ಡಾಕ್ಟರು ಮಾತು ಆರಂಭಿಸುವಷ್ಟರಲ್ಲಿ, ಧಪ್ ಎಂದು ಸದ್ದಾಯಿತು. ಕ್ಯಾಮರಾಮನ್, ಕ್ಯಾಮರಾ ಶೋಲ್ಡರ್ ಮೇಲೆ ಇಟ್ಟುಕೊಂಡು ಟೇಬಲ್ ಬಳಿ ಮುನ್ನುಗ್ಗಿದ. ಟೇಬಲ್ ಹಿಂದುಗಡೆ ಯಾಕೂಬ್ ಕುರ್ಚಿಯಿಂದ ಬಿದ್ದು ನಿಧಾನವಾಗಿ ಹಾವಿನಂತೆ ಹೊರಳಲು ಆರಂಭಿಸಿದ್ದ. ಮೋಕ್ಷಾಳ ಬಾಯಿಯಲ್ಲಿ ಜೊಲ್ಲು ಆರಿತ್ತು. ಜ್ಯೋತಿಸಿ ಹೆದರಿಕೊಂಡು ಎರಡೂ ಕಾಲು ಕುರ್ಚಿ ಮೇಲಿಟ್ಟು ಕುಳಿತಿತ್ತು. ಡಾಕ್ಟರ್ ಹಣೆಗೆ ಕೈಹಚ್ಚಿ ಕುಳಿತರು. ನೂರ್ ಜಹಾನ್ ಕಣ್ಣಲ್ಲಿ ಚುಳ್ ಎಂದು ನೀರು ಹರಿಯಿತು. ಮತ್ತೊಂದು ಕ್ಯಾಮೆರಾ ಆ ತಾಯಿಯ ಕಣ್ಣೀರನ್ನು ಶೂಟ್ ಮಾಡಲಾರಂಭಿಸಿತು. ಹುಸೇನಿ ತನ್ನ ಕುರ್ಚಿಯಿಂದ ಎದ್ದವನೇ ಯಾಕೂಬನನ್ನು ಎತ್ತಿಕೊಳ್ಳಲು ಮುಂದಾದ. ಆತನ ಶರ್ಟಿಗೆ ಪಿನ್ ಮಾಡಿದ್ದ ಆಡಿಯೋ ಕೇಬಲ್ ಕಾಲಿಗೆ ಸಿಕ್ಕಿಹಾಕಿಕೊಂಡು ಆತನೂ ಯಾಕೂಬನ ಮೇಲೆ ಬಿದ್ದ. ತಬ್ಬಿಬ್ಬಾದ ಯಾಕೂಬ್ ಹುಸೇನಿಯನ್ನು ಬಲವಾಗಿ ಕಚ್ಚಿದ. “ಮರ್ಯಾರೆ…”ಎಂದು ಹುಸೇನಿ ನೋವಿನಿಂದ ಕೂಗಿಕೊಂಡ.

————–

ಮರುದಿನ ಸೂರ್ಯ ಮೂಡಿದಾಗ, ಜ್ಯೋತಿಸಿಯ ಮನೆ ಮುಂದೆ ಯಥಾಪ್ರಕಾರ ಹತ್ತಾರು ಜನ ಜಾತಕ ಹಿಡಿದು ನಿಂತಿದ್ದರು. ಟಿಆರ್ಪಿಯಲ್ಲಿ ಚೇತರಿಕೆ ಕಂಡಿದ್ದರಿಂದ ಪ್ರಶಾಂತ ಸೇರಿದಂತೆ ಎಲ್ಲರೂ ಖುಷಿಯಲ್ಲಿದ್ದರು. ಮಾರ್ನಿಂಗ್ ಶಿಫ್ಟಿಗೆ ಬಂದಿದ್ದ ಸುಪ್ರಿಯಾ ಹೆಗಡೆ, ಎಂದಿನಂತೆ “ಒಂದ್ ರೇಪ್ ಇಲ್ಯೆ, ಒಂದ್ ಮರ್ಡರ್ ಇಲ್ಯೆ” ಎಂದು ಗೊಣಗಿದಳು. ಡೆಸ್ಕಿನಲ್ಲಿದ್ದ ಇನ್ಪುಟ್ ಚೀಫ್ ಪ್ರಶಾಂತ್ “ರ್ರೀ…ನಿನ್ನೆ ಸ್ಟುಡಿಯೋವಳಗೆ ಆ ಹುಡುಗ ಬೀಳಲಿಲ್ವಾ, ಅದನ್ನ ಪ್ಯಾಕೇಜ್ ಮಾಡಿಸಿ. ಇವತ್ತು ಇಡೀ ದಿನ ಅದೇ ಓಡ್ಬೇಕು, ಗೊತ್ತಾಯ್ತಾ?” ಎಂದ.

ನ್ಯೂಸ್ ಚ್ಯಾನಲ್ ಮೂಲಕ ತಮಗೆ ಒಳ್ಳೆಯದಾಗಬಹುದೆಂಬ ಹುಸೇನಿ ದಂಪತಿಯ ಆಸೆ….

 

 

ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ…

©black dog
ಬಿಗ್ ಬಾಸ್ ಪ್ರಿವ್ಯೂ ಮುಗಿಸಿಕೊಂಡು ನಾನು ಹಾಗೂ ಡ್ರೈವರ್ ಪ್ರೇಮ್ ಹಿಂದಿರುಗುತ್ತಿದ್ದೆವು. ಕೋಡಿಪಾಳ್ಯ ಕ್ರಾಸ್ ಬಳಿ ಕಪ್ಪು ನಾಯಿಯೊಂದು ಗಾಯಗೊಂಡು ಬಿದ್ದುಕೊಂಡಿತ್ತು. ಯಾವುದೋ ವಾಹನ ಅದಕ್ಕೆ ಡಿಕ್ಕಿ ಹೊಡೆದು ಹೋಗಿತ್ತು. ಸರಿ, ಕಾರ್ ನಿಲ್ಲಿಸಿ ಅದರ ಪರಿಸ್ಥಿತಿ ನೋಡಿದೆ. ನಾಯಿಯ ದೇಹದ ಹಿಂಭಾಗ, ಕಾಲುಗಳು ಸಂಪೂರ್ಣವಾಗಿ ಘಾಸಿಗೊಂಡಿದ್ದವು. ಒಂದು ಕಣ್ಣಿಗೂ ಗಾಯವಾಗಿತ್ತು. ನಾಯಿ ಎದ್ದು ಓಡಾಡುವ ಸ್ಥಿತಿಯಲ್ಲಿರಲಿಲ್ಲ. ಆ ಕಡೆ ಈ ಕಡೆ ನೋಡಿ ನೋವಿನಿಂದ ನರಳಿ ಮತ್ತೆ ಸುಮ್ಮನೆ ಮಲಗಿಬಿಡುತ್ತಿತ್ತು. ನನಗೆ ಹತ್ತಿರ ಎಲ್ಲಿ ಪ್ರಾಣಿದಯಾ ಸಂಘದ ಸೆಂಟರ್ ಗಳಿವೆ ಗೊತ್ತಿರಲಿಲ್ಲ. ತಕ್ಷಣ ವಲ್ಲೀಶ್ ಗೆ ಫೋನ್ ಮಾಡಿದೆ. ಅವರು ಪೂರ್ಣಿಮಾ ಎಂಬುವವರ ನಂಬರ್ ನೀಡಿದರು. ಪೂರ್ಣಿಮಾರಿಗೆ ಕಾಲ್ ಮಾಡಿದರೆ, ಕೆಂಗೇರಿ ಉಪನಗರದಲ್ಲಿರುವ ಕೃಪಾ ಕೇಂದ್ರದ ಮಾಹಿತಿ ನೀಡಿದರು. ಸರಿ, ನಾನು ಮನೆಗೆ ಬಂದು ನನ್ನ ಕಾರ್ ತೆಗೆದುಕೊಂಡು ಖಾಲಿ ಸಿಮೆಂಟ್ ಚೀಲ, ನೀರು ತೆಗೆದುಕೊಂಡು ಮತ್ತೆ ನಾಯಿ ಇದ್ದ ಸ್ಥಳಕ್ಕೆ ಬಂದೆ. ಜನರೆಲ್ಲ ನೋಡುತ್ತಿದ್ದರೂ, ಯಾರಿಗೂ ನಾಯಿ ಬಗ್ಗೆ ಕರುಣೆ ತೋರಿಸಬೇಕು ಎನ್ನಿಸಲಿಲ್ಲ. ನೀರು ಕುಡಿಸುವ ಪ್ರಯತ್ನ ಮಾಡಿದೆ. ಸ್ವಲ್ಪ ನೀರು ಕುಡಿಯಿತು. ನಾನು ಮತ್ತು ಪ್ರೇಮ್ ಅದನ್ನು ಸಿಮೆಂಟ್ ಚೀಲದ ಮೇಲೆ ಮಲಗಿಸಿ, ನನ್ನ ಕಾರಿನ ಡಿಕ್ಕಿಯಲ್ಲಿಟ್ಟೆವು. ಕೋಡಿಪಾಳ್ಯದಿಂದ ಸೀದಾ ಕೃಪಾ ಸಂಸ್ಥೆಗೆ ಬಂದೆ. ಅಲ್ಲಿ ಟೇಕನಾಥ್ ಎಂಬುವವರು ನಾಯಿಯನ್ನು ತೆಗೆದುಕೊಂಡು ಹೋದರು. ಈ ಎಲ್ಲ ಪ್ರಕ್ರಿಯೆಯಲ್ಲಿ ನನ್ನ ಮಗ ಉದಾತ್ತ ಕೂಡ ಜೊತೆಗಿದ್ದ. ನಾಯಿಗೆ ಏನಾಯಿತು, ಆಕ್ಸಿಡೆಂಟ್ ಹೇಗೆ ಆಯಿತು, ಯಾವ ವಾಹನ ಬಂದು ಹೊಡೆದಿದ್ದು ಎಂದೆಲ್ಲ ಪ್ರಶ್ನೆ ಕೇಳುತ್ತ ನನಗೆ ಸಹಾಯ ಮಾಡುತ್ತಿದ್ದ.
ಕೊನೆಗೆ ವಾಪಸ್ ಬರುವಾಗ ಕೇಳಿದ, “ಅಪ್ಪಾ,ಯಾವುದೋ ಗಾಡಿ ಬಂದು ಅದಕ್ಕೆ ಆಕ್ಸಿಡೆಂಟ್ ಮಾಡಿ ಹೋಗಿದ್ದರೆ, ಪೋಲಿಸ್ ಕೇಸ್ ಯಾಕೆ ಆಗಿಲ್ಲ?” ಅಂತ. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ….
ಅಂದ ಹಾಗೆ ಇಂದು ಬೆಳಿಗ್ಗೆ ಟೇಕನಾಥ್ ಫೋನ್ ಮಾಡಿದ್ದರು. ಆ ಕಪ್ಪು ನಾಯಿ ಚಿಕಿತ್ಸೆಗೆ ಸ್ಪಂದಿಸದೆ ಸತ್ತುಹೋಯಿತಂತೆ…ರೆಸ್ಟ್ ಇನ್ ಪೀಸ್….