ವಾಹನ ಸಂಚಾರ ನಿಷೇಧ…ಕಾರಣವೇನು?

10987702_10205733346553648_8289966174225615087_n3

-ಸುಂದರ ರಾವ್

ನಿನ್ನೆ ವಿ4 ವಾಹಿನಿಯವರು ಫೋನ್ ಮಾಡಿ “ರಾತ್ರಿ ಎಂಟು ಗಂಟೆಗೆ ಬಂಟ್ವಾಳದ ಕಸ ವಿಲೇವಾರಿ ಬಗ್ಗೆ ಕಾರ್ಯಕ್ರಮ ಇದೆ. ನೀವೂ ಬರಬೇಕು” ಎಂದರು. ಸಂಜೆಯ ಮೇಲೆ ಹೊರಟವನಿಗೆ ನಂತೂರು ಜಂಕ್ಷನ್ ಮುಟ್ಟುವಾಗಲೇ ತಡವಾಗಿದೆ ಅನ್ನಿಸುತ್ತಿತ್ತು. ವಾಹಿನಿಯ ಕಚೇರಿ ಇರುವುದು ಯೆಯ್ಯಾಡಿಯಲ್ಲಿ. ನಾನು ಪದುವಾ ಹೈಸ್ಕೂಲ್ ಎದುರಿನ ಒಳರಸ್ತೆಯಲ್ಲಿ ಹೋದೆ. ಸ್ವಲ್ಪ ದೂರ ಹೋದಾಗ ರಸ್ತೆಯಲ್ಲಿ ಜನ ಸೇರಿದ್ದು ಕಾಣಿಸಿತು. ಮೈಕ್ ಕೇಳಿಸುತ್ತಿತ್ತು. ನವರಾತ್ರಿಯ ಗೌಜಿ ಇರಬೇಕು ಅನ್ನಿಸಿತು. ಮುಂದೆ ಹೋಗುವಂತಿರಲಿಲ್ಲ. ಮೂರು ಜನ ನನ್ನ ಸ್ಕೂಟರಿಗೆ ಅಡ್ಡ ಬಂದರು. ಒಬ್ಬರು “ಈ ದಾರಿಯಲ್ಲಿ ಹೋಗಿಲಿಕ್ಕಿಲ್ಲ. ನೀವು ಹಿಂದೆ ಹೋಗಬೇಕು” ಎಂದರು. ನಾನು “ಛೆ! ಹಾಗಿದ್ದರೆ ಹಿಂದೆ ಹೋಗುವುದೇ ಸರಿಯೋ?” ಅಂದೆ. “ಹೌದು” ಅಂದರು. ಮಾತಾಡದೆ ಸ್ಕೂಟರ್ ಹಿಂದೆ ತಿರುಗಿಸಿದೆ!
ಹೀಗೆ ಹಬ್ಬಗಳನ್ನು ರಸ್ತೆಯಲ್ಲೇ ಆಚರಿಸುವವರು, ವಾಹನ ಸಂಚಾರ ನಿಯಂತ್ರಣವನ್ನು ತಮ್ಮ ಕೈಗೇ ತೆಗೆದುಕೊಳ್ಳುವವರು ಸುಮಾರು ಕಡೆ ಇದ್ದಾರೆ. ಆದರೆ ವಾಹನ ಸಂಚಾರವನ್ನೇ ನಿಷೇಧಿಸಿದ್ದನ್ನು ಕಂಡದ್ದು ಇದೇ ಮೊದಲು!
ನನಗೀಗ ಅರವತ್ತಾರು ವರ್ಷ. ಅಲ್ಲಿ ನನ್ನನ್ನು ತಡೆದವರು ತರುಣರು. ಅವರಿಗಿಂತ ವಯಸ್ಸಿನಲ್ಲಿ ದೊಡ್ಡವನು ಎಂಬ ಒಂದೇ ಅಧಿಕಾರದಿಂದ ಹೇಳಬೇಕೆನಿಸುತ್ತಿದೆ: “ಹೀಗೆ ಮಾಡಬೇಡಿ. ಇದು ಸರಿಯಲ್ಲ”