ಎರಡು ದಿನ ಬಿಟ್ಟು…

-ವಾಣಿ ಶ್ರೀಹರ್ಷ, ಕೊಪ್ಪ.

16105536_1206255259421757_2741888306449138539_n

ನಮ್ಮದು ಎರಡನೇ ಅಡಿಕೆ ಕೊಯಿಲು ಪ್ರಾರಂಭ ಆಯ್ತು. ಸಧ್ಯದ ನಮ್ಮ ಸಮಸ್ಯೆ ಅಂದರೆ ಕೊನೆಗಾರರ ಕೊರತೆ. ಮೊದಲ ಕೊಯಿಲಿನ ಪ್ರಾರಂಭದಲ್ಲಿ ಹಲವು ಕೊನೆಗಾರರನ್ನು ಸಂಪರ್ಕಿಸಿದರೂ ಯಾರೂ ಬರಲಿಲ್ಲ. ಕಳೆದ 4-5 ವರ್ಷಗಳಿಂದ ಹರ್ಷ ಅವರೇ ಕೊನೆ ತೆಗೆಯುತ್ತಿದ್ದರಿಂದ ಮೊದಲನೆಯದ್ದನ್ನೂ ತೆಗೆದರು. ಆದರೆ ಈ ಸಲ ಬೇರೆ ಕೆಲಸಗಳು ತುಂಬಾ ಇದ್ದುದರಿಂದ ಮತ್ತೆ ಕೊನೆಗಾರರನ್ನು ಹುಡುಕಿ ಸಂಪರ್ಕಿಸಿದರು. ಕಳೆದ ವಾರ ಒಬ್ಬ ಹುಡುಗ ಬಂದು ಒಂದು ದಿನ 130 ಕೊನೆ ತೆಗೆದು ಹೋದ. ಮರುದಿನದಿಂದ ಪತ್ತೆ ಇಲ್ಲ.2 ದಿನ ಬಿಟ್ಟು ಮನೆಗೆ ಹೋದಾಗ ಅವನು ಬೇರೆ ಕಡೆ ಹೋಗಿದ್ದಾನೆ ಅಂತ ಉತ್ತರ ಬಂತು. ಮರು ದಿನ ಹೋದಾಗಲೂ ಅದೇ ಉತ್ತರ.ಮತ್ತೆ 2 ದಿನ ಬಿಟ್ಟು ಹೋದಾಗ ಅವನು ಊರಿಗೆ ಹೋದ ಅಂತ ಗೊತ್ತಾಯ್ತು. ಅವನ ಆಸೆ ಬಿಟ್ಟೆವು. ಮತ್ತೆ ಕೆಲವರನ್ನು ಸಂಪರ್ಕಿಸಿದರೆ ಬೇರೆ ಕಡೆ ಇದೆ ಅಂತ ಹೇಳಿದರು. ಇವರನ್ನೆಲ್ಲಾ ಕಾಯುತ್ತಾ ಕೂತರೆ ಆಗೋದಿಲ್ಲ ಅಂತ ಇವರೇ ಕೊನೆ ತೆಗೆಯೋಕೆ ಶುರು ಮಾಡಿದ್ದಾರೆ.

ನಮ್ಮದು 1 ಎಕರೆ ಅಡಿಕೆ ತೋಟ. ಜೊತೆಗೆ ಹರ್ಷ ಅವರಿಗೆ ಕೊನೆ ತೆಗೆಯುವ ಕೆಲಸದಲ್ಲಿ ಆಸಕ್ತಿ ಇರೋದರಿಂದ ಅವರೇ ತೆಗೆಯುತ್ತಿದ್ದಾರೆ. ಆದರೆ ದೊಡ್ಡ ತೋಟಗಳನ್ನು ಹೊಂದಿರುವವರ ಕತೆ ಏನು? ನಮ್ಮ ಕಡೆ ಈ ರಗಳೆಗಳೇ ಬೇಡ ಅಂತ ಹಲವಾರು ಜನ ಚೇಣಿ ಕೊಡುತ್ತಿದ್ದಾರೆ..

ಇವರ ಸ್ನೇಹಿತರೊಬ್ಬರು ಮೊನ್ನೆ ” ದಿನಾ ಬೆಳಗ್ಗೆ ಕೊನೆಗಾರರ ಮನೆಗೆ ತಿರುಗೋದೇ ಆಯ್ತು. ಒಬ್ಬ ಅಂತೂ ನಮ್ಮ ಹತ್ರ 3000 ರೂ ಅಡ್ವಾನ್ಸ್ ತಗೊಂಡು ಬೇರೆ ಕಡೆ ಹೋಗ್ತಿದಾನೆ. ಕೇಳಿದ್ರೆ ನಾಳೆ ಖಂಡಿತಾ ಬರ್ತೇನೆ ಅಂತಾನೆ. ನಾಳೆ ನಾನು ಅವನ ಮನೆಗೆ ಹೋಗುವ ಮೊದಲೇ ಅವನು ಜಾಗ ಖಾಲಿ ಮಾಡಿರ್ತಾನೆ .. ಇವತ್ತು ಬೆಳಗ್ಗೆ 6 ಗಂಟೆಗೆ ಹೊರಟು 5 ಜನರ ಮನೆ ಸುತ್ತಿ ಬಂದೆ…. ಬೇಜಾರಾಗಿ ಬಿಟ್ಟಿದೆ ” ಅಂತ ಹೇಳ್ತಿದ್ರು.

ನಿಮ್ಮ ಕಡೆಯೂ ಈ ಸಮಸ್ಯೆ ಇದೆಯೇ ? ಪರಿಹಾರ ಇದೆಯೇ?