‘ಹದ್ದು’ ಮೀರಿದ ಕಾಗೆ

img_20170201_080929302_hdrimg_20170201_081020083_hdr

ಕಳೆದ ವಾರ ನಡೆದ ಘಟನೆ. ನೈಸ್ ರಸ್ತೆಯಲ್ಲಿ ಹೋಗುತ್ತಿದ್ದೆ. ಸುಮಾರು 50 ಮೀಟರ್ ದೂರದಲ್ಲಿ ಕಾಗೆ ಹಾಗೂ ಹದ್ದು ಆಕಾಶದಲ್ಲಿಯೇ ಜಗಳವಾಡುತ್ತಿದ್ದವು. ಹಿಂದೆ ಹಲವು ಬಾರಿ ಕಾಗೆ – ಹದ್ದು ಕಚ್ಚಾಟ ನೋಡಿದ್ದರಿಂದ ಇದು ಸಹಜ ಎಂದುಕೊಂಡೆ. ಆದಕೆ ಕ್ಷಣಾರ್ಧದಲ್ಲಿ ಅದೇನಾಯಿತೋ, ಕಾಗೆ ಅದ್ಹೇಗೆ ದಾಳಿ ಮಾಡಿತೋ, ಸುಮಾರು 30 ಅಡಿ ಮೇಲಿನಿಂದ ಹದ್ದು ಧೋಪ್ ಅಂತ ರಸ್ತೆಯ ನಡುವೆ ಬಿದ್ದುಬಿಟ್ಟಿತು. ದಾಳಿ ಮಾಡಿದ ಕಾಗೆ ಎಸ್ಕೇಪ್. ತಕ್ಷಣ ಕಾರ್ ಸೈಡಿಗೆ ನಿಲ್ಲಿಸಿ, ಹಿಂದೆ ಬರುತ್ತಿದ್ದ ವಾಹನಗಳನ್ನು ಪಕ್ಕದಿಂದ ಬರುವಂತೆ ಕೈಸನ್ನೆ ಮಾಡುತ್ತ ಹದ್ದಿನ ಬಳಿ ಹೋದರೆ, ರೆಕ್ಕೆ ಬಡಿಯುತ್ತ ಒದ್ದಾಡುತ್ತಿತ್ತು. ತಕ್ಷಣ ಎತ್ತಿಕೊಂಡು ಕಾರಿನ ಹಿಂದಿನ ಸೀಟಿನಲ್ಲಿ ಹಾಕಿದೆ. ಹಿಂದಿನ ಪೂರ್ತಿ ಸೀಟನ್ನು ಆವರಿಸಿಕೊಳ್ಳುವಷ್ಟು ದೊಡ್ಡದಾಗಿತ್ತು ಆ ಹದ್ದು. ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ ಪಕ್ಕದಲ್ಲಿರುವ ಪೀಪಲ್ ಫಾರ್ ಎನಿಮಲ್ಸ್ ಗೆ ಹದ್ದನ್ನು ತೆಗೆದುಕೊಂಡು ಹೋಗೋಣ ಎಂದುಕೊಂಡೆ. ದಾರಿ ಮಧ್ಯೆ ನನ್ನ ಮನೆಯೂ ಇದೆ. ಅಲ್ಲಿ ಕೊಂಚ ನಿಲ್ಲಿಸಿ ಹದ್ದಿಗೆ ನೀರು ಕುಡಿಸುವ ಪ್ರಯತ್ನ ಮಾಡಿದೆ. ಆದರೆ ತೇಲುಗಣ್ಣು ಮಾಡಿದ್ದ ಹದ್ದು, ನೀರು ಕುಡಿಯಲು ನಿರಾಕರಿಸಿತು. ನಂತರ ಸೀದಾ ಪಿಎಫ್ಎ ಗೆ ಒಯ್ದೆ. ಅಲ್ಲಿನ ಸಿಬ್ಬಂದಿ ‘ಹದ್ದು ಬದುಕುತ್ತದೆ. ಅಷ್ಟು ಸುಲಭವಾಗಿ ಅವು ಪ್ರಾಣ ಬಿಡುವುದಿಲ್ಲ’ ಎಂದರು. ನಾನು ನಂತರ ಆಫೀಸ್ ಗೆ ತೆರಳಿದೆ.

ಆದರೆ ಎರಡು ದಿನಗಳ ಬಳಿಕ ಮತ್ತೆ ಪಿಎಫ್ಎ ಗೆ ಹೋದಾಗ, ‘ಇಲ್ಲ ಸರ್, ಅದಕ್ಕೆ ತುಂಬಾ ಇಂಟರ್ನಲ್ ಬ್ಲೀಡಿಂಗ್ ಆಗಿತ್ತು. ಹೀಗಾಗಿ ಉಳಿಸಿಕೊಳ್ಳಲು ಆಗಲಿಲ್ಲ. ಅದು ಬಲಾಢ್ಯವಾಗಿತ್ತು. ಚೆನ್ನಾಗಿ ಬೆಳೆದ ಹದ್ದಾಗಿತ್ತು’ ಎಂದರು. ಯಾಕೋ ಹದ್ದನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ದುಃಖ ಪ್ರತಿಬಾರಿ ಬೇರೆ ಹದ್ದುಗಳನ್ನು ನೋಡಿದಾಗ ಮರುಕಳಿಸಿಬರುತ್ತದೆ.