ಬದ್ರಾ ಸ್ಟಾಪ್ ನಲ್ಲಿ ಕಾಫಿ ರುಚಿ

ಮಳೆಗಾಲದಲ್ಲಿ ನನ್ನ ಊರಾದ ಕೊಪ್ಪಕ್ಕೆ ಒಂದು ಟ್ರಿಪ್ ನಾನು ಮಾಡಲೇಬೇಕು. ಈ ಬಾರಿ ಬೆಂಗಳೂರಿನಿಂದ ಡ್ರೈವ್ ಮಾಡಿಕೊಂಡು ಹೋಗಿದ್ದೆ. ಕೊಪ್ಪದಿಂದ ಮರುಳುವಾಗ ಅಣ್ಣ, “ಬದ್ರಾ ಸ್ಟಾಪ್ ನಲ್ಲಿ ಕಾಫಿ ಕುಡಿದು ಹೋಗಿ” ಎಂದಿದ್ದ. ಬಾಳೆಹೊನ್ನೂರಿಂದ ಸ್ವಲ್ಪ ಮುಂದೆ ಬಂದರೆ ಬದ್ರಾ ಸ್ಪಾಪ್ ಎಂಬ ಬೋರ್ಡ್ ಕಂಡ ಕೂಡಲೇ ಕಾರ್ ನಿಲ್ಲಿಸಿದೆ. ಕಾಫಿ ತೋಟದ ನಡುವೆ ಈ ಪುಟ್ಟ ಬದ್ರಾ ಸ್ಟಾಪ್ ಇದೆ. ಬಿಸಿ ಬಿಸಿ ಅಪ್ಪಟ ಕಾಫಿ ದೊರೆಯುತ್ತದೆ. ಸುರಿಯುವ ಮಳೆಯ ನಡುವೆ ಬಿಸಿ ಬಿಸಿ ಕಾಫಿ ಹೀರುತ್ತಿದ್ದರೆ…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸುಘೋಷ!!

ಯಾವುದಾದರೂ ನಿರ್ದಿಷ್ಟ ವಿಷಯದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಯಾರಾದರೂ ಸಂಬಂಧವೇ ಇಲ್ಲದ ಮಾತುಗಳನ್ನಾಡಿದರೆ, “ಬದ್ರಾ ಸ್ಟಾಪಿಗೆ ಹೋಗಿ ಟೀ ಕೇಳಿದ ಹಾಗಾಯಿತು, ಮಾರಾಯ” ಎಂಬ ಮಾತು ಕೂಡ ಕೊಪ್ಪದಲ್ಲಿ ಇದೀಗ ಹುಟ್ಟಿಕೊಂಡಿದೆ!!

 

ಇತರ ಜಾತಿಗಳ ರಜೆಗಳ ಬಳಕೆ : ಹೀಗೊಂದು ವಿಚಾರ.

234
ರಜೆಗಳನ್ನು ಪಡೆದುಕೊಳ್ಳುವುದರಲ್ಲಿ ನಮ್ಮಲ್ಲಿ ಹೆಚ್ಚಿನವರು ಮುಂದು. ಅಗಸ್ಟ್ 15, ಜನವರಿ 26 ಮುಂತಾದವು ಭಾನುವಾರ ಬಂತೆಂದರೆ ಪೆಚ್ಚುಮೋರೆ ಹಾಕುವ, ಜನವರಿ ಮೊದಲ ವಾರದಲ್ಲಿ ವರ್ಷದ ಕ್ಯಾಲೆಂಡರ್ ಹಿಡಿದು ಯಾವ ಯಾವ ದಿನಗಳನ್ನು ಕ್ಲಬ್ ಮಾಡಿದರೆ ಲಾಂಗ್ ಲೀವ್ ಪಡೆದುಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುವವರೇ ಹೆಚ್ಚು. ಒಟ್ಟು 365 ದಿನಗಳಲ್ಲಿ ಭಾನುವಾರ, ಎರಡನೇ ಶನಿವಾರ, (ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಕಾರ್ಪೋರೇಟ್ ವಲಯಕ್ಕೆ ಪ್ರತಿ ಶನಿವಾರ), ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ವರಮಹಾಲಕ್ಷ್ಮಿ, ಮೊಹರ್ರಂ, ಈದ್, ಕನಕ ಜಯಂತಿ, ಗುರುನಾನಕ್ ಜಯಂತಿ, ದೀಪಾವಳಿ, ಗಣೇಶ ಚತುರ್ಥಿ, ವಿಜಯದಶಮಿ, ಗುಡ್ ಫ್ರೈಡೆ, ಕ್ರಿಸ್ ಮಸ್ ಎಂದು ರಜೆಗಳೋ ರಜೆಗಳು. ಇದರ ಜೊತೆಗೆ ರಾಜಕಾರಣಿ, ಗಣ್ಯವ್ಯಕ್ತಿ ನಿಧನಕ್ಕೆ ಸಂತಾಪದ(?) ರಜೆ.
ಭಾರತ ಬಹು ಜಾತಿ ಜನರಿರುವ ದೇಶ. ಜಾತ್ಯತೀತ ದೇಶವಾದ ಭಾರತದಲ್ಲಿ ಎಲ್ಲ ಜಾತಿಗಳೂ ಸಮಾನ. ಪ್ರತಿಯೊಂದೂ ಜಾತಿಗೂ ಅವರವರ ಹಬ್ಬಗಳು, ವಿಶೇಷ ದಿನಗಳು ಮಹತ್ವದ್ದೇ. ಆದರೆ ಅವೇ ದಿನಗಳು ಉಳಿದ ಜಾತಿಯವರಿಗೆ ಮಹತ್ವದ್ದೆ? ಉದಾಹರಣೆಗೆ, ಬಕ್ರೀದ್ ಮುಸ್ಲಿಮರ ಪ್ರಮುಖ ಹಬ್ಬ. ಅದನ್ನು ಮುಸ್ಲಿಂ ಸಮುದಾಯ ವಿಶಿಷ್ಟವಾಗಿ ಆಚರಿಸುತ್ತದೆ. ಆದರೆ ಹಿಂದೂಗಳು ಬಕ್ರೀದ್ ಆಚರಿಸುವುದಿಲ್ಲ. ಕ್ರಿಸ್ ಮಸ್ ಕ್ರಿಶ್ಚಿಯನ್ನರಿಗೆ ಪ್ರಮುಖ ಹಬ್ಬ ಆದರೆ ಮುಸ್ಲಿಮರಾಗಲಿ, ಹಿಂದೂಗಳಾಗಲಿ ಕ್ರಿಸ್ ಮಸ್ ಆಚರಿಸುವುದಿಲ್ಲ. ಹಾಗೆಯೇ, ಕ್ರಿಶ್ಚಿಯನ್ನರಿಗೂ ವರಮಹಾಲಕ್ಷ್ಮೀ ಹಬ್ಬಕ್ಕೂ ಏನೆಂದರೆ ಏನೂ ಸಂಬಂಧವೇ ಇಲ್ಲ. ಹೀಗಿದ್ದ ಮೇಲೆ ಈ ವಿಶೇಷ ದಿನಗಳ ರಜೆಯ ಸವಲತ್ತು ಆಯಾ ಜಾತಿಯವರಿಗೆ ಮಾತ್ರ ಸಿಗಬೇಕಲ್ಲವೆ? ಅಪ್ಪಟ ಲಿಂಗಾಯತ ವ್ಯಕ್ತಿಯೊಬ್ಬ ಮೊಹರ್ರಂ ದಿನದಂದು ರಜೆ ಪಡೆದುಕೊಂಡು ಏನು ಮಾಡುತ್ತಾನೆ? ಶ್ರದ್ಧಾವಂತ ಮುಸ್ಲಿಂ ವ್ಯಕ್ತಿ, ಮಹಾವೀರ ಜಯಂತಿಯಂದು ರಜೆ ಪಡೆದುಕೊಂಡು ಸಾಧಿಸುವುದಾದರೂ ಏನು? ಪ್ರತಿಯೊಬ್ಬ ಜಾತಿಯವರಿಗೂ ಅವರದೇ ದೇವರು ಶ್ರೇಷ್ಠ. (ಅದು ಸ್ವಾಭಾವಿಕ ಕೂಡ). ಹೆಚ್ಚಿನ ಹಿಂದೂಗಳು ಅಪ್ಪಿತಪ್ಪಿಯೂ ಶಿಲುಬೆಯನ್ನು ನೋಡಿ ಕೈಮುಗಿಯುವುದಿಲ್ಲ. ಹೆಚ್ಚಿನ ಕ್ರಿಶ್ಚಿಯನ್ನರು ಅಪ್ಪಿತಪ್ಪಿಯೂ ಮೃತ್ಯುಂಜಯ ಹೋಮ ಮಾಡಿಸುವುದಿಲ್ಲ. ಹೆಚ್ಚಿನ ಮುಸ್ಲಿಮರು ಅಪ್ಪಿತಪ್ಪಿಯೂ ಗಾಯತ್ರಿ ಮಂತ್ರ ಹೇಳುವುದಿಲ್ಲ. ಆದರೆ ಇವರೆಲ್ಲರಿಗೂ ಮತ್ತೊಂದು ಜಾತಿಯ ರಜೆ ಮಾತ್ರ ಬೇಕು. ಇಮಾಮ್ ಸಾಬಿಗೂ ಗೋಕಲಾಷ್ಟಮಿಗೂ ಯಾವುದೇ ಸಂಬಂಧವಿಲ್ಲ. ಆದರೆ ಗೋಕುಲಾಷ್ಟಮಿಯ ದಿನ ಇಮಾಮ್ ಸಾಬಿ ರಜೆ ತೆಗೆದುಕೊಳ್ಳುತ್ತಾನೆ, ಇಮಾಮ್ ಸಾಬಿ ಈದ್ ಎಂದು ನಮಾಜ್ ಮಾಡಲು ಹೋದರೆ, ಶ್ರೀ. ಗೋಕುಲ್ ಕೃಷ್ಣ ಅವರೂ ಕೂಡ ರಜೆ ತೆಗೆದುಕೊಳ್ಳುತ್ತಾರೆ.
ಲೇಖನದ ಆರಂಭದಲ್ಲಿ ಬರೆದಿರುವಂತೆ ನಾವೆಲ್ಲರೂ ರಜಾಪ್ರಿಯರು. ಹಬ್ಬಗಳು ಬರಲಿ ಆದರೆ ಭಾನುವಾರದಂದು ಮಾತ್ರ ಬೇಡ ಎಂಬ ಮನೋಧರ್ಮದವರು. ರಜೆಗಳನ್ನು ಪಡೆದೂ ಪಡೆದು ದೇಶ ಸೋಮಾರಿಗಳ ಗೂಡಾಗಿ ಮಾರ್ಪಟ್ಟಿದೆ. ನಮ್ಮಲ್ಲೇ ಹಲವು ಸರ್ಕಾರಿ ಕಚೇರಿಗಳು ನಾಲ್ಕೂವರೆಗೆಲ್ಲ ಖಾಲಿ ಹೊಡೆಯುತ್ತಿರುವತ್ತವೆ. ಬೇರೆ ಜಾತಿಯ ದೇವರನ್ನು ನಂಬದ, ಆ ಜಾತಿಯ ಪದ್ಧತಿಯಂತೆ ಜೀವನ ನಡೆಸದ, ಆ ಜಾತಿಯ ಆಚರಣೆಗಳನ್ನು ಮಾಡದ ನಮಗೆ ನಿಜವಾಗಿಯೂ ಆ ಜಾತಿಯ ರಜೆಯನ್ನು ಅನುಭವಿಸುವ ನೈತಿಕ ಹಕ್ಕು ಇದೆಯೆ? ಈ ಒಟ್ಟು ರಜೆಗಳಿಂದಾಗುವ ರಾಷ್ಟ್ರೀಯ ನಷ್ಟವನ್ನು ಎಂದಾದರೂ ನಾವು ಲೆಕ್ಕ ಹಾಕಿದ್ದೇವೆಯೆ? ಭಾರತದಲ್ಲಿ ರಜೆಗಳಿಂದಾಗಿಯೇ ಒಟ್ಟು ರಾಷ್ಟ್ರೀಯ ಉತ್ಪನ್ನ ಕುಂಟುತ್ತ ಸಾಗಿದೆ. ನಮ್ಮ ಸೋಮಾರಿತನದಿಂದಾಗಿಯೇ ದೇಶ ಮುಂದುವರೆಯುತ್ತಿಲ್ಲ ಎಂಬುದೂ ಸತ್ಯ. ಹೀಗಿರಬೇಕಾದರೆ, ಆದಷ್ಟು ರಜೆಗಳನ್ನು ಕಡಿಮೆ ಮಾಡಿ, ಕೆಲಸದ ಅವಧಿಯನ್ನು ಜಾಸ್ತಿ ಮಾಡಿ ನಮ್ಮ ನಮ್ಮ ಪ್ರೊಡಕ್ಟಿವಿಟಿಯನ್ನು ಹೆಚ್ಚಿಸಿಕೊಂಡರೆ ದೇಶ ತನ್ನಿಂದ ತಾನೇ ಮುಂದೇ ಬಂದೀತು. ಭಾರತವೆಂದರೆ ಭಿಕಾರಿಗಳ ದೇಶ ಎಂಬ ಹಣೆಪಟ್ಟಿಯಿಂದ ಮುಕ್ತರಾಗಲು, ಮೈಮುರಿದು ದುಡಿಯುವುದೊಂದೇ ಉಪಾಯ. ಆದರೆ ಎದ್ದರೆ ಬಿದ್ದರೆ ರಜೆಗಳನ್ನು ಪಡೆಯಲುವ ಹಾತೊರೆಯುವವರಿಂದ ನಿಜವಾಗಿಯೂ ಎಷ್ಟರ ಮಟ್ಟಿಗಿನ ಪ್ರಗತಿ ಸಾಧ್ಯ?
ಎಲ್ಲರೂ ಒಂದಾಗಿ ಬಾಳಬೇಕು, ಸಾಮರಸ್ಯದಿಂದ ಇರಬೇಕು. ಪರಸ್ಪರರ ನಂಬಿಕೆ-ವಿಚಾರ-ದೇವರುಗಳನ್ನು ಗೌರವಿಸಬೇಕು ಎಂಬುದು ಒಪ್ಪತಕ್ಕದ್ದೇ. ಈ ನಮ್ಮ ಸಾಮರಸ್ಯವನ್ನು ನಾವು ಕೋಮುಗಲಭೆಗಳನ್ನು ತಡೆಗಟ್ಟಿ ಪ್ರದರ್ಶಿಸಬೇಕೆ ಹೊರತು ಬೇರೆ ಜಾತಿಯ ರಜೆಯನ್ನು ತೆಗೆದುಕೊಳ್ಳುವುದರಿಂದ ಅಲ್ಲ. ಇನ್ನು ಮೇಲಾದರೂ ಪ್ರಾಮಾಣಿಕರಾಗಿ ನಾವು ಆಚರಿಸುವ ಹಬ್ಬಗಳ ರಜೆಗಳನ್ನು ಮಾತ್ರ ತೆಗೆದುಕೊಂಡು ನೈತಿಕವಾಗಿ ಆರೋಗ್ಯವಂತರಾಗೋಣವೆ?
(ಅಂದಹಾಗೆ ಈ ಲೇಖನದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ಹೆಸರುಗಳನ್ನು ಹಾಗೂ ಆಯಾ ಹಬ್ಬದ ಹೆಸರುಗಳನ್ನು ಪ್ರಾಸಂಗಿಕವಾಗಿ ಬಳಸಲಾಗಿದೆ. ಇಲ್ಲಿ ಯಾವುದೇ ಜಾತಿಯನ್ನು ಹೀಗಳೆಯುವ ಉದ್ದೇಶ ಇರುವುದಿಲ್ಲ. ಈ ಜಾತಿಯ ಬದಲಾಗಿ ಯಾವುದೇ ಜಾತಿಯ ಹೆಸರು ಎಲ್ಲಿಯೇ ಹಾಕಿದರೂ, ಲೇಖನದ ಮೂಲ ಆಶಯಕ್ಕೆ ಧಕ್ಕೆ ಬರುವುದಿಲ್ಲ).

ಈ ಬಾರಿಯ ನಿಗಳೆ ಪಾರಿತೋಷಕ ಪ್ರಶಸ್ತಿ ಹೀಗಿತ್ತು…

ಪ್ರತಿವರ್ಷ ಕೊಪ್ಪದಲ್ಲಿ ನಾನು ಕೊಡುವ ನಿಗಳೆ ಪಾರಿತೋಷಕ ಪ್ರಶಸ್ತಿ ಈ ಬಾರಿ ಹೀಗಿತ್ತು. ಶೈಕ್ಷಣಿಕವಾಗಿ ಶೇ. 60 ಕ್ಕಿಂತ ಹೆಚ್ಚು ಅಂಕ, ಕಲೆ, ಕ್ರೀಡೆ, ನಾಟಕ ಇತ್ಯಾದಿ. ಕನಿಷ್ಠ ನಾಲ್ಕು ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಹತ್ತನೆ ತರಗತಿ ಅಥವಾ ಪಿಯುಸಿ ವಿದ್ಯಾರ್ಥಿ/ನಿಗೆ ಪಾರಿತೋಷಕ ಮೀಸಲು. ಪ್ರಶಸ್ತಿ ನೀಡುತ್ತಿರುವುದು ಈ ಸಲ ಮೂರನೇ ಬಾರಿ.
Nigale award 2014

ಸ್ವಿಮ್ಮಿಂಗ್ ಪೂಲ್ ನಲ್ಲಿ ಎನ್ ಕ್ವೈರಿ

123
ಬೆಂಗಳೂರಿನ ಪ್ರಸಿದ್ಧ ಬಿಬಿಎಂಪಿಯ ಪ್ರಸಿದ್ಧ ಸ್ವಿಮ್ಮಿಂಗ್ ಪೂಲ್ ವೊಂದರಲ್ಲಿ ಸ್ನೇಹಿತನನ್ನು ಕ್ಲಾಸಿಗೆ ಸೇರಿಸಬೇಕೆಂದು ಹೋಗಿದ್ದೆ. ಆತ ಯಾವುದೋ ಕಾರಣಕ್ಕೆ ಹೊರಗೆ ಹೋದ. ಅಲ್ಲಿಯ ಮ್ಯಾನೇಜರ್ ಜೊತೆ ನಾನು ಕೂತಿದ್ದೆ. ಆಗ ಸುಮಾರು 30 ವರ್ಷದ ಒಬ್ಬ ವ್ಯಕ್ತಿ ಹಾಗೂ ಮತ್ತೊಬ್ಬ ವಯಸ್ಕರು ಎನ್ ಕ್ವೈರಿಗಾಗಿ ಬಂದರು. ನಾವು ಬರೀ ವೀಕ್ ಎಂಡ್ ಕ್ಲಾಸಿಗೆ ಅಷ್ಟೇ ಬರ್ತೀವಿ, ನೀರಿನ ಆಳ ಎಷ್ಟು, ಕೋಚಿಂಗ್ ಯಾವ ರೀತಿ ಇರುತ್ತೆ, ವೀಕ್ ಎಂಡ್ ಅಷ್ಟೇ ಬಂದರೆ ಸ್ವಿಮ್ಮಿಂಗ್ ಕಲಿಯಲು ಎಷ್ಟು ದಿನ ಬೇಕು ಎಂದೆಲ್ಲ ತರಹೇವಾರಿ ಪ್ರಶ್ನೆ ಕೇಳಿದರು. ಪರಮ ನಿರ್ಲಿಪ್ತನಾಗಿದ್ದ ಮ್ಯಾನೇಜರ್ ಅವರ ಎಲ್ಲ ಪ್ರಶ್ನೆಗಳಿಗೆ ನಿರ್ಲಿಪ್ತನಾಗಿ ಉತ್ತರಿಸುತ್ತಿದ್ದ. ಕೊನೆಗೆ ಅವರಲ್ಲೊಬ್ಬ, “ಸರ್ ನಾವು ವೀಕೆಂಡ್ ಮಾತ್ರ ಬರೋರು, ಅದೂ ಸಂಜೆ 7 ರಿಂದ 9. ಆಗ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಸಿ ನೀರು ಇರುತ್ತಾ?” ಎಂದು ಕೇಳಿದ. ಮ್ಯಾನೇಜರ್ ಗೆ ರೇಗಿ ಹೋಯಿತು, “ಸರ್, ನೀವು ಬೆಂಗಳೂರಿನ ಯಾವುದೇ ಸ್ವಿಮ್ಮಿಂಗ್ ಪೂಲ್ ಗೆ ಹೋಗಿ, ಎಲ್ಲಿಯೂ ಬಿಸಿನೀರು ಇರುವುದಿಲ್ಲ” ಎಂದ. ನಾನು ಹೇಗೇಗೋ ನಗು ಕಂಟ್ರೋಲ್ ಮಾಡಿದೆ.

ಹೀಗೊಂದು ಮುಖಾಮುಖಿ

ಬಸವನಗುಡಿ ರಸ್ತೆಯ ಒಂದು ಸಿಗ್ನಲ್. ಕೆಂಪು ದೀಪ ಇನ್ನೂ 100 ಸೆಕೆಂಡ್ ತೋರಿಸುತ್ತಿದ್ದುದರಿಂದ ಬೈಕ್ ಆಫ್ ಮಾಡಿ ನಿಲ್ಲಿಸಿದ್ದೆ. ಪಕ್ಕದಲ್ಲಿ ಹೈ ಎಂಡ್ ಕಾರೊಂದು ಬಂದು ನಿಂತಿತು. ಒಳಗಿದ್ದವರು ಸುಮಾರು 50 ರ ಆಸುಪಾಸಿನ ಇಬ್ಬರು ವ್ಯಕ್ತಿಗಳು. ಬಿಸ್ಕಿಟ್ ತಿನ್ನುತ್ತಿದ್ದರು. ಇನ್ನೇನು ಸಿಗ್ನಲ್ ಬಿಟ್ಟಿತು ಎನ್ನುವಷ್ಟರಲ್ಲಿ ಬಿಸ್ಕೆಟ್ ರ್ಯಾಪರನ್ನು ಹೊರಗೆ ಎಸೆದು ಕಾರ್ ಮೂವ್ ಮಾಡಿದರು.

ನಾನು – ಏನ್ ಸಾರ್, ರ್ಯಾಪರ್ ಹೀಗೆ ರಸ್ತೆ ಮೇಲೆ ಬಿಸಾಡ್ತೀರಲ್ಲ?

ಆತ – ನೀನೇ ಎತ್ಕೊಂಡು ಬಿಡು..

ನಾನು – ಯಾಕೆ, ಬೆಂಗಳೂರು ನಿಮ್ಮದಲ್ವ?

ಆತ – ರ್ರೀ…ಇರ್ಲಿ ಬಿಡ್ರಿ, ನಾಳೆ ಕಸ ಎತ್ತೋರು ಬಂದು ಕ್ಲೀನ್ ಮಾಡ್ತಾರೆ. ನೀವ್ಯಾಕೆ ತಲೆ ಕೆಡಿಸ್ಕೋತೀರಾ?

ಕೊನೆಗೂ ನನಗೆ ಉಳಿದ ಪ್ರಶ್ನೆ, ಕೂತಿರೋದು ಹೈ ಎಂಡ್ ಕಾರ್ ನಲ್ಲಿ. ಆದರೆ ಬುದ್ಧಿ ಮಾತ್ರ ಯಾಕೆ ಲೋ ಎಂಡ್?

ಕೆಲವರು ಹೀಗೇಕೆ?

Photo-Internet
Photo-Internet

ಎಲ್ಲ ಕ್ರಿಶ್ಚಿಯನ್ನರೂ ಹೀಗೆ ಅಂತ ಅಲ್ಲ. ಆದರೆ ನನಗೆ ಪರಿಚಯವಾಗಿರುವ ಅಥವಾ ಈಗಾಗಲೇ ಪರಿಚಯವಿರುವ ಕ್ರಿಶ್ಚಿಯನ್ ಗೆಳೆಯ-ಗೆಳತಿಯರು ಒಂದಿಲ್ಲ ಒಂದು ಸಂದರ್ಭದಲ್ಲಿ ನನಗೆ ಬೈಬಲ್ ಅನ್ನು ಕೊಡುಗೆಯನ್ನಾಗಿ ನೀಡಿದ್ದಾರೆ. ಶಾಲೆಯ ದಿನಗಳಿಂದ ಹಿಡಿದು ಇತ್ತೀಚಿನವರೆಗೆ ನನಗೆ ಸುಮಾರು 15 ಬೈಬಲ್ ಗಳು ಉಡುಗೊರೆಯಾಗಿ ದೊರೆತಿವೆ. ಬೇಡ ಎಂದು ಹೇಳಿದಾಗ, ನಿಷ್ಠುರ ಕಟ್ಟಿಕೊಂಡದ್ದೂ ಇದೆ. ಇದು ತಮ್ಮ ಧರ್ಮದ ಅಸ್ತಿತ್ವದ ಕುರಿತು ಇರುವ ಅಭದ್ರತೆಯ ಭಾವವೆ?

ಈ ಟಿವಿ ಕನ್ನಡದ 13 ನೇ ವಾರ್ಷಿಕೋತ್ಸವ…

ನನಗೆ ಮಾಧ್ಯಮವನ್ನು ಹೇಳಿಕೊಟ್ಟ, ಕಲಿಸಿಕೊಟ್ಟ, ಬದುಕು ಕೊಟ್ಟ ಈ ಟಿವಿ ಕನ್ನಡಕ್ಕೆ ಇಂದು 13ನೇ ವಾರ್ಷಿಕೋತ್ಸವದ ಸಂಭ್ರಮ!!

...

ಬ್ರೇಕಿಂಗ್ ನ್ಯೂಸ್ – ನನ್ನ ಬ್ಲಾಗ್ ಗೆ 1 ಲಕ್ಷ್ ಹಿಟ್ಸ್ ಸಂಭ್ರಮ

ಆ ಕ್ಷಣ ಬಂದೇ ಬಿಟ್ಟಿದೆ. ನನ್ನ ಬ್ಲಾಗ್ ಇಂದಿಗೆ 1 ಲಕ್ಷ ಹಿಟ್ ಗಳನ್ನು ಪೂರ್ತಿಗೊಳಿಸಿದೆ. ಬ್ಲಾಗನ್ನು ಓದಿದ, ಕಮೆಂಟಿಸಿದ, ಪೋಷಿಸಿದ, ತಿದ್ದಿ ತೀಡಿದ ಎಲ್ಲರಿಗೂ ಧನ್ಯವಾದಗಳು.
ಪ್ರೀತಿಯಿರಲಿ,
ಸುಘೋಷ್ ಎಸ್. ನಿಗಳೆ

.....
…..

ಕಾರ್ತಿಕ ಕಾವ್ಯ ಸಂಭ್ರಮ

ಆನೇಕಲ್ ನ ಮುತ್ಯಾಲಮಡುನಲ್ಲಿ ಜೇನುಗೂಡು ಹಾಗೂ ಹೊಸಬೆಳಕು ಟ್ರಸ್ಟ್ ವತಿಯಿಂದ ಕಾರ್ತಿಕ ಕಾವ್ಯ ಸಂಭ್ರಮವೆಂಬ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅಲ್ಲಿನ ಕೆಲ ಚಿತ್ರಗಳು.

.....
…..

2 (2)

4 (1)

4 (2)

5

ನೇತ್ರದಾನ ಮಾಡಿ, ಮತ್ತೊಬ್ಬರ ಬಾಳಿಗೆ ಬೆಳಕು ನೀಡೋಣ

ನಾನು ನೇತ್ರದಾನ ಮಾಡಲು ನಿರ್ಧರಿಸಿದ್ದೇನೆ. ನನ್ನ ಐ ಡೋನರ್ ಕಾರ್ಡ್ ಇಲ್ಲಿದೆ. ಏನೋ ವಿಚಿತ್ರ ಸಮಾಧಾನ….

......
……

ಬೆಳಗಾವಿಯ ಬಿ. ಕೆ. ಮಾಡೆಲ್ ಶಾಲೆಯ ಪ್ರಾರ್ಥನೆ

ನಾನು ಎಂಟನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಕಲಿತದ್ದು ಬೆಳಗಾವಿಯ ಬಿ.ಕೆ.ಮಾಡೆಲ್ ಶಾಲೆಯಲ್ಲಿ. ಕೆಲ ತಿಂಗಳುಗಳ ಹಿಂದೆ ಆ ಶಾಲೆಯಲ್ಲಿ ನಾನು ಸೇರಿದಂತೆ 16 ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಆ ಸಂದರ್ಭದಲ್ಲಿ ಶಾಲೆಯ ಮಕ್ಕಳು ಹಾಡಿದ ಪ್ರಾರ್ಥನೆ.

ಏನ ಬರ್ಲಿ, ಸರ್ ಆಶೀರ್ವಾದ ಒಂದ್ ನನ್ನ ಮ್ಯಾಲಿರಲಿ

ಡಾ. ಶ್ರೀನಿವಾಸ ಎಲ್. ಕುಲಕರ್ಣಿ, ಬೆಳಗಾವಿಯ ಆರ್ ಪಿ ಡಿ ಮಹಾವಿದ್ಯಾಲಯದಲ್ಲಿ ನನಗೆ 5 ವರ್ಷಗಳ ಕಾಲ ಕನ್ನಡ ಪಾಠವನ್ನು ಮಾಡಿದವರು. ಕನ್ನಡ ಪಾಠದ ಜೊತೆಗೆ ಬದುಕಿನ ಪಾಠವನನ್ನೂ ಕಲಿಸಿಕೊಟ್ಟವರು. ಅವರ ಷಷ್ಠಿ ಪೂರ್ತಿ ಸಂದರ್ಭದ ಅಭಿನಂದನಾ ಸಂಚಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ ಇಲ್ಲಿದೆ.

...

ಏನ ಬರ್ಲಿ, ಸರ್ ಆಶೀರ್ವಾದ ಒಂದ್ ನನ್ನ ಮ್ಯಾಲಿರಲಿ
“ನೀವ್ ನೋಡ್ರಿ ಬೇಕಾದ್ರ, ಧಾರವಾಡದ ಒಂದ್ ಹೆಣಮಗಳನ್ನ ಪುಣೆಕ್ಕ ಮದವಿ ಮಾಡೆ ಕೊಡ್ರಿ, ಆಕಿ ಹೋಗಿ ಒಂದ್ ವಾರ ಆಗೂದ್ರೊಳಗ ಎಷ್ಟ್ ಛಂದ ಮರಾಠಿ ಕಲ್ತಿರ್ತಾಳಂದ್ರ, ಮನಿ ಮಂದಿಗಿಂತ ಛಲೋ ಮರಾಠಿ ಮಾತಾಡ್ತಿರ್ತಾಳ. ಹಂಗ, ಒಂದ್ ಪುಣೆ ಹೆಣಮಗಳು ಮದುವೆಯಾಗಿ ನಮ್ ಧಾರವಾಡಕ್ಕ ಬರ್ತಾಳ. ಬಂದ್ ಒಂದ್ ವಾರ್ ಆಗಿರೂದಿಲ್ಲ, ಮನೀ ಮಂದೀಗೆಲ್ಲ ಎಷ್ಟ ಛಲೋ ಮರಾಠಿ ಕಲಿಸಿಬಿಟ್ಟಿರ್ತಾಳ. ಕನ್ನಡಿಗರ ಈ ಸ್ವಭಾವಕ್ಕ ಏನ್ ಅಂತೀರೀ?” ಎಂದು ಕುಲಕರ್ಣಿ ಸರ್ ಪ್ರಶ್ನೆಯೊಂದನ್ನು ಎಸೆದಾಗ, ಹುಡುಗಿಯರು ಮುಸಿಮುಸಿ ನಕ್ಕರೆ, ಹುಡುಗರು ಹ್ಹೆಹ್ಹೆಹ್ಹೆ ಎಂದು ಜೋರಾಗಿಯೇ ನಕ್ಕರು.
ಅದು ಮಳೆಗಾಲ. ರಾಣಿ ಪಾರ್ವತಿದೇವಿ ಕಾಲೇಜಿನ ಭವ್ಯ ಕ್ಲಾಸ್ ರೂಮು. ಒಂದು ಮೂಲೆಯಲ್ಲಿ ವಿದ್ಯಾರ್ಥಿಗಳ ಕರಿ ಕೊಡೆಗಳೆಲ್ಲ ತೊಯ್ದುತೊಪ್ಪೆಯಾಗಿ ಕುಳಿತಿದ್ದವು. ಅದರ ನಡುವೆ ವಿದ್ಯಾರ್ಥಿನಿಯರ ಕಲರ್ ಕಲರ್ ಕೊಡೆಗಳು, ಇಡೀ ಕ್ಲಾಸ್ ರೂಮಿನ ಸೊಬಗನ್ನು ಹೆಚ್ಚಿಸಿದ್ದವು. ಯೌವನದ ಹುಚ್ಚು ಪ್ರವಾಹದಲ್ಲಿ ತೇಲುತ್ತಿದ್ದ ಹುಡುಗ-ಹುಡುಗಿಯರು, ಕುಲಕರ್ಣಿ ಸರ್ ಅವರ ಈ ಪ್ರಶ್ನೆ ಕೇಳಿ ಮುಖಮುಖ ನೋಡತೊಡಗಿದರು.
“ಅದು ಕನ್ನಡಿಗರ ಗುಣಾರೀ ಸರ….”
ಹುಡುಗಿಯೊಬ್ಬಳು ಹೇಳಿದಳು.
“ಭಾಳ ಛಲೋ ಆತು. ನೀವು ಗುಣ ಅಂದ್ರಿ. ಕೆಲವು ಮಂದಿ ಇದನ್ನ ಕನ್ನಡಿಗರ ದೊಡ್ಡಸ್ತಿಕೆ ಅಂತಾರ” ಎಂದು ಸುಮ್ಮನಾದರು. ಅಲ್ಲೊಂದು ಪ್ರೆಗ್ನೆಂಟ್ ಪಾಸ್ ಇತ್ತು. ವಿದ್ಯಾರ್ಥಿಗಳಿಗೆ ವಿಚಾರ ಮಾಡಲು ಅವಕಾಶ.
ಹೀಗೆ ಎಸ್.ಎಲ್. ಪಾಠಮಾಡುತ್ತಿದ್ದರೆ ಹಾಗೇ ಕೇಳುತ್ತ ಕೂರಬೇಕು ಎನಿಸುತ್ತಿತ್ತು. ದೈನಂದಿನ ಬದುಕಿನ ಘಟನೆಗಳನ್ನೇ ಬಾಲವಿಲ್ಲದ ನಮ್ಮಂತಹ ಟೀನೇಜುಗಳಿಗೆ ಎಷ್ಟು ಸರಳವಾಗಿ ಹೇಳುತ್ತಿದ್ದರೆಂದರೆ, ಅವರ ಕ್ಲಾಸ್ ಮಿಸ್ ಮಾಡಿಕೊಳ್ಳಬೇಕು ಅನ್ನಿಸುತ್ತಲೇ ಇರಲಿಲ್ಲ. ಅವರ ಕ್ಲಾಸ್ ಎಂದಿಗೂ ಏಕಮುಖಿಯಾದ ಉದಾಹರಣೆ ಇಲ್ಲವೇ ಇಲ್ಲ. ಅದೊಂದು ಚರ್ಚಾಕೂಟ. ಅಲ್ಲಿ ಆರೋಪ, ಪ್ರತ್ಯಾರೋಪ, ವಾದ, ವಿವಾದ ಎಲ್ಲವೂ ಆಗಿ ಕೊನೆಗೆ ಜಜ್ ಸ್ಥಾನದಲ್ಲಿ ಕುಳಿತಿರುತ್ತಿದ್ದ ಎಸ್ ಎಲ್ ಅತ್ಯಂತ ಮ್ಯಾಚೂರ್ ಆದ ಅಭಿಪ್ರಾಯ ಹೇಳಿ ನಮ್ಮ ಬೌದ್ಧಿಕ ಹಸಿವನ್ನು ತಣಿಸುತ್ತಿದ್ದರು.
ಒಮ್ಮೆ, “For every action, there is an equal and opposite reaction ಅನ್ನೂ ನ್ಯೂಟನ್ನನ ಸಿದ್ಧಾಂತ, ಭೌತಶಾಸ್ತ್ರಕ್ಕಿಂತಾ ಮನುಷ್ಯ ಸಂಬಂಧಗಳಿಗೇ ಹೆಚ್ಚು ಅನ್ವಯಸ್ತದ” ಎಂದು ಬಾಂಬ್ ಹಾಕಿದ್ರು. ವಿದ್ಯಾರ್ಥಿಗಳು ಸುಮ್ಮನಾಗಿ “ಇದು ಹ್ಯಾಂಗ?” ಎಂದು ಮನಸ್ಸಿನಲ್ಲಿಯೇ ಯೋಚಿಸತೊಡಗಿದರು. ಆಗ ನಾನೆಂದೆ,
“ಸರ, ನಾ ಒಂದ್ ಹುಡುಗೀನ್ನ ಪ್ರೀತ್ಸಾಕ್ಹತ್ತೇನಿ. ಒಂದೇ ವ್ಯಾಳೆ ಪ್ರತಿಯೊಂದು action ಗೂ equal reaction ಇರ್ಬೇಕ ಅಂದ್ರ, ಆಕಿನೂ ನನ್ನ ಪ್ರೀತಿಸ್ಬೇಕು. ಆದ್ರ ಆಕಿ ನನ್ನ ಪ್ರೀತಿಸವಾಳ್ಳು. ಇಲ್ಲಿ, ನ್ಯೂಟನ್ನನ ಲಾ ಫೇಲ್ ಆತಲ್ರಿ?” ಎಂದೆ.
“ಅಲ್ರೀ…, ಸುಘೋಷ್, ನೀವ್ ಪ್ರೀತ್ಸಾಕ್ಹತ್ತೇರಿ, ಅಂದ್ರ ಈಕ್ವಲ್ ಆಗಿ ಆಕಿನೂ ಪ್ರೀತಸ್ಪೇಕು ಅಂತೇನಿಲ್ಲ. ಆಕಿ opposite ಆಗಿರ್ಬಹುದಲ್ಲ….ಆವಾಗ ನ್ಯೂಟನ್ನನ ಸಿದ್ಧಾಂತ ಸಂಬಂಧಗಳಿಗೆ ಹೆಚ್ಚು ಅನ್ವಯ ಆಗ್ತದ ಅಂತ ಅನ್ಸೂದಿಲ್ಲೇನು?” ಎಂದರು ಕುಲಕರ್ಣಿ ಸರ್. ಈಗ ನಗುವ ಸರದಿ ನಮ್ಮೆಲ್ಲರದ್ದಾಗಿತ್ತು. ಅಂದು ಹುಡುಗಿಯರೆಲ್ಲ ಗುರಾಯಿಸಿ ನನ್ನ ಕಡೆ ನೋಡುತ್ತಿದ್ದರೆ, ಹುಡುಗರು “ಸುಗ್ಯಾಂದು ತಲಿ ಕೆಟ್ಟೇತಿ, ಆಂವ ಮಾನಸಿಕ ಆಗ್ಯಾನ” ಎಂದು ತೀರ್ಮಾನಿಸಿದ್ದರು.
ನಾನು ಕುಲಕರ್ಣಿ ಸರ್ ಬಳಿ ಕಲಿತದ್ದು ಬರೋಬ್ಬರಿ 5 ವರ್ಷ. ಅದೊಂದು ಎಫ್ ಡಿ ಯಂತೆ ಇಂದಿಗೂ ನನ್ನ ಬಳಿ ಇದೆ. ಅದರ ಬಡ್ಡಿಯನ್ನು ಇನ್ನೂ ನಾನು ಪಡೆಯುತ್ತಿದ್ದೇನೆ. ಕ್ಲಾಸ್ ರೂಮಿನ ಆ ಪರಿಮಳ, ಕಾಲೇಜು ಬಿಟ್ಟು 12 ವರ್ಷಗಳಾಗುತ್ತಿದ್ದರೂ, ಇನ್ನೂ ನಿನ್ನೆ ಮೊನ್ನೆ ನಡೆದಷ್ಟು ಫ್ರೆಶ್ ಆಗಿದೆ ನನ್ನ ಮನಸ್ಸಿನಲ್ಲಿ.
ಕುಲಕರ್ಣಿ ಸರ್ ಕೇವಲ ಕ್ಲಾಸಿರೂಮಿಲ್ಲಿ ಮಾತ್ರ ‘ಸರ’ ಆಗದೆ ಕ್ಯಾಂಪಸ್ಸಿನಲ್ಲಿಯೂ ‘ಸರ್’ ಆಗಿದ್ರು. “ಸರ್, ಧಾರವಾಡ ಆಕಾಶವಾಣಿಯೊಳಗೆ ನಿಮ್ಮ ಭಾಷಣ ಭಾಳ ಛಲೋ ಇತ್ರೀ” ಅಂದಾಗ, “ಕೇಳಿದ್ರಿ…..”ಎಂದು ಸಂತಸ ವ್ಯಕ್ತಪಡಿಸಿದ, ಹಣದ ಅಡಚಣೆಯಲ್ಲಿದ್ದಾಗ ಗರಿ ಗರಿ ನೋಟನ್ನು ನಿರ್ಲಿಪ್ತವಾಗಿ ಕೈಗೆ ನೀಡಿದ, ಯೂತ್ ಫೆಸ್ಟಿವಲ್ ಗೆ ಯೂನಿವರ್ಸಿಟಿಗೆ ಹೋದ ಸಂದರ್ಭದಲ್ಲಿ ಕದ್ದು ಸಿಗರೇಟು ಹೊಡೆಯುತ್ತಿದ್ದಾಗ, ನೋಡಿಯೂ ನೋಡದಂತೆ ನಡೆದುಕೊಂಡ ಹೋದ, “ಪತ್ರಿಕೋದ್ಯಮ ಅನ್ನೋದು ಭಾಳ ಎಲ್ಲಾ ಕೊಡ್ತದ. ಪ್ರಾಮಾಣಿಕರಾಗಿರ್ರೀ…. ಅಷ್ಟ ಸಾಕು. ನಿಮಗ ಗಿಫ್ಟ್ ಕೊಟ್ಟಾಂವ ಸುಮ್ಮ ಕೊಡೂದಿಲ್ಲ, ಜಗತ್ತಿಗೆಲ್ಲ ಹೇಳ್ಕೊಂಡು ಅಡ್ಯಾಡತಾನ ನಾನ ಕೊಟ್ಟಿದ್ದು ಅಂತ. ಹಂತಾ ಪ್ರಸಂಗ ತಂದ್ಕೋಬ್ಯಾಡ್ರಿ” ಎಂದು ಈಟಿವಿ ಸೇರಿದಾಗ ಬುದ್ಧಿವಾದ ಹೇಳಿದ ಕುಲಕರ್ಣಿ ಸರ್ ಇಂದಿಗೂ ನನಗೆ ಮಾರ್ಗದರ್ಶಕರು.
ಫೈನಲ್ ಇಯರ್ ಬಿ.ಎ. ಇರಬೇಕಾದರೆ ನಡೆದ ಘಟನೆಯೊಂದು ಮಾತ್ರ ನನ್ನ ಮನಸ್ಸಿನಲ್ಲಿ ಕುಲಕರ್ಣಿ ಸರ್ ಬಗ್ಗೆ ಹುಳಿ ಹಿಂಡಿಬಿಟ್ಟಿತು. ಕಾಲೇಜಿನ ಜಿಎಸ್ ಸ್ಥಾನಕ್ಕೆ ಚುನಾವಣೆಗಳು ಕ್ಯಾನ್ಸಲ್ ಆಗಿದ್ದವು. ಇಲೆಕ್ಷನ್ ಸಂದರ್ಭದಲ್ಲಿ ಆಗುತ್ತಿದ್ದ ವಿದ್ಯಾರ್ಥಿಗಳ ನಡುವಿನ ಘರ್ಷಣೆಗಳು, ಹೊಡೆದಾಟ, ಪೊಲೀಸ್ ಸೆಕ್ಯುರಿಟಿ, ಚುನಾವಣೆಯ ಸಂದರ್ಭದಲ್ಲಿ ಹೊರಗಿನ ರೌಡಿಗಳ ಮಧ್ಯ್ಪರವೇಶ ಇತ್ಯಾದಿಗಳಿಂದ ಕಾಲೇಜು ಆಡಳಿತ ಮಂಡಳಿ ರೋಸಿಹೋಗಿತ್ತು. ಹೀಗಾಗಿ ಸೆಲೆಕ್ಷನ್ ಪದ್ಧತಿ ಜಾರಿಗೆ ಬಂದಿತ್ತು. ನಾನು ಜಿಎಸ್ ಆಗವುದು ಆ ಸೂರ್ಯಚಂದ್ರರಷ್ಟೇ ಸತ್ಯವಾಗಿತ್ತು. ಸಮಸ್ಯೆಯಾಗಿದ್ದು ನಾನು ನನ್ನ ಕೆಲವು ಸ್ನೇಹಿತರನ್ನು ಎಲ್ ಆರ್, ಸಿಎಸ್ ಪೋಸ್ಟ್ ಗೆ ಸಂದರ್ಶನದ ಸಂದರ್ಭದಲ್ಲಿ ಇನ್ ಫ್ಲುಯೆನ್ಸ್ ಮಾಡಲು ಹೋದಾಗ. ಪ್ರಿನ್ಸಿಪಾಲರು ಕೋಪಗೊಂಡರು. ಸೆಲೆಕ್ಷನ್ ಕಮಿಟಿಯಲ್ಲಿದ್ದ ಕುಲಕರ್ಣಿ “ಸರ್ ಅದ್ಹೆಂಗ್ ಆಗ್ತದ, ಸಾಧ್ಯನ ಇಲ್ಲ ಬಿಡ್ರಿ” ಎಂದರು. ಪರಿಣಾಮ ಆ ವರ್ಷ ಇಡೀ ಪ್ರಕ್ರಿಯಿಯೇ ಸ್ಥಗಿತಗೊಂಡುಬಿಟ್ಟಿತು. ಸೆಪ್ಟೆಂಬರ್ ಸುಮಾರಿಗೆ ಅಂತೂ ಇಂತೂ ಬೇರೆ ಯಾರನ್ನೋ ಸಿಎಸ್ ಹಾಗೂ ಎಲ್ ಆರ್ ಆಗಿ ನೇಮಿಸಲಾಯಿತು. ನನಗೆ ಕುಲಕರ್ಣಿ ಸರ್ ಬಗ್ಗೆ ನಖಶಿಖಾಂತ ಕೋಪಬಂದಿತ್ತು. ನಾ ಜಿಎಸ್ ಆಗೂದನ್ನ ತಪ್ಸಿದ್ದು ಕುಲಕರ್ಣಿ ಸರ್ ಎಂಬ ಭಾವನೆಯಲ್ಲಿದ್ದೆ. ಮುಂದೊಂದು ದಿನ ಕುಲಕರ್ಣಿ ಸರ್ ಸಿಕ್ಕಾಗ ಅವರೇ ಮಾತಿಗೆ ನಿಂತಿದ್ದರು, “ನೀವು ಜಿಎಸ್ ಆಗ್ದೇ ಇದ್ದಿದ್ದು ಒಳ್ಳೇದಾತು ಸುಘೋಷ್” ಅಂದ್ರು. ನಾನು ಉರಿದು ಹೋದೆ. “ನೀವ ನನ್ನ ಜಿಎಸ್ ಮಾಡ್ಲಿಲ್ಲ” ಎಂದು ಅಸಮಧಾನದಿಂದ ನುಡಿದೆ. “ಸುಘೋಷ, ನಾ ಭಾಳ ಹುಡುಗುರನ್ನ ನೋಡೇನಿ. ಈ ಜಿಎಸ್, ಎಲ್ ಆರು, ಸಿಎಸ್ ಅಂತ ಇಡೀ ವರ್ಷ ವೇಸ್ಟ್ ಮಾಡ್ಕೊಂಡು ಬಿಡ್ತಾರ. ಎಲ್ಲಾರೂ ಅಲ್ಲ….ಆದ್ರ ಆ ಜವಾಬ್ದಾರಿಯ ಒತ್ತಡದಾಗ ಒಮ್ಮೊಮ್ಮೆ ಹಂಗ ಆಗಿ ಬಿಡ್ತದ… ಅಭ್ಯಾಸ ಮಾಡೋದಿಲ್ಲ. ಪರೀಕ್ಷಾ ಬಂದಾಗ ಏನೂ ಓದಿರೋದಿಲ್ಲ. ಹುಶಾರಿರ್ತಾರು ಆದ್ರ, ಅಭ್ಯಾಸ ಮಾಡಿಲ್ಲ ಅಂದ್ರ ಏನ್ ಆಗ್ತದ ಹೇಳ್ರೀ…ಪರ್ಸಂಟೇಜು ಡೌನ್ ಆಗ್ತದ. ಮುಂದಿನ ಜೀವನಕ್ಕ ಅದು ತೊಂದ್ರಿ ಆಗ್ತದ” ಅಂದ್ರು. ಆಗ ಅವರು ಹೇಳಿದ್ದು ಖಂಡಿತವಾಗಿಯೂ ನನಗೆ ರುಚಿಸಿರಲಿಲ್ಲ. ಆದರೆ ಕಾಲೇಜಿನಿಂದ ಹೊರಬಂದ ಒಂದೆರಡು ವರ್ಷಗಳಲ್ಲೇ ಕುಲಕರ್ಣಿ ಸರ್ ಅವರ ನಿರ್ಧಾರದಿಂದ ನಾನೆಷ್ಟು ಪ್ರಯೋಜನ ಪಡೆದೆನೆಂದು ಗೊತ್ತಾಯಿತು. ಕಾಲೇಜಿನಲ್ಲಿದ್ದಾಗ ‘ಕ್ರಾಂತಿವೀರ’ ಎಂದು ಹೆಸರು ಗಳಿಸಿದ್ದ ನಾನು ಯೂತ್ ಫೆಸ್ಟಿವಲ್, ನಾಟಕ, ನೃತ್ಯ, ಹಾಡು, ಕಾಲೇಜಿನ ಗಲಾಟೆಗಳು ಎಂದು ಸಂಪೂರ್ಣ ‘ಷಹೀದ್’ ಆಗುವುದು ನಿಶ್ಚಿತವಾಗಿತ್ತು. “ಏನ ಮಾಡ್ರಿ, ಒಂದು ಮಿತಿಒಳಗ ಮಾಡ್ರಿ. ಅತೀ ಆದ್ರ ಅಮೃತಾನೂ ವಿಷ ಆಗ್ತದ” ಎನ್ನುವ ಅವರ ಮಾತು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ.
ಇಂದಿನ ನನ್ನ ಯಶಸ್ಸಿನಲ್ಲಿ ಕುಲಕರ್ಣಿ ಸರ್ ಅವರ ಪಾತ್ರ ಬಹು ಮಹತ್ವದ್ದು. ನನ್ನ ಕಾಲೇಜು ದಿನಗಳಲ್ಲಿ ಬಹುಶಃ ಇಂತಹ ಗುರುಗಳು ಇಲ್ಲದೇ ಹೋಗಿದ್ದರೆ, ನನ್ನ ಬದುಕು ಇಂದು ಇಷ್ಟೊಂದು ವೈವಿಧ್ಯಮಯ ಹಾಗೂ ಸುಂದರವಾಗಿರುತ್ತಿರಲಿಲ್ಲ. ಕುಲಕರ್ಣಿ ಸರ್ ಅಂದಿಗೂ ಇಂದಿಗೂ ಎಂದಿಗೂ ನನ್ನ ಗುರುಗಳು. ಷಷ್ಟಿಪೂರ್ತಿಯ ಈ ಸಂದರ್ಭದಲ್ಲಿ ನಾನು ಭಗವಂತನಲ್ಲಿ ಕೇಳುವುದು, “ಏನ ಬರ್ಲಿ, ಕುಲಕರ್ಣಿ ಸರ್ ಆಶೀರ್ವಾದ ಒಂದು ನನ್ನ ಮ್ಯಾಲಿರಲಿ. ಇಂಥಾ ಗುರುಗಳಿಂದ ಮಾತ್ರ ನಿಜವಾದ ಸುಭಿಕ್ಷ ಸಮಾಜ ನಿರ್ಮಾಣ ಸಾಧ್ಯ. ಹಿಂತಾವ್ರಿಗೆ ಆಯುರಾರೋಗ್ಯ ಕೊಟ್ಟು, ನಮ್ಮ ಮ್ಯಾಲೆ ಕೃಪಾ ತೋರ್ಸಪ್ಪಾ” ಅಂತಾ ಮಾತ್ರ.

RNN LIVE ನಲ್ಲಿ “……ಚಿಕನ್ ಪಾಕ್ಸ್” ಲೇಖನ

ಆರ್ ಎನ್ ಎನ್ ಲೈವ್ ನಲ್ಲಿ ಈ ವಾರ ತಾಮ್ರದ ಉದ್ಧರಣೆ, ತಟ್ಟೆ, ಲೋಟಕ್ಕೆ ಚಿಕನ್ ಪಾಕ್ಸ್ ಲೇಖನ ಪ್ರಕಟವಾಗಿದೆ. ಸಂಪೂರ್ಣ ಓದಿಗೆ ಇಲ್ಲಿ ಕ್ಲಿಕ್ಕಿಸಿ.

....
….

Donate blood, Save life

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ನಾನು ಹಾಗೂ ನನ್ನ ಸಹೋದ್ಯೋಗಿ ಪಣೀಂದ್ರಕುಮಾರ್ ರಕ್ತ ನೀಡಿದೆವು. 3 ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸಮಾಜದ ಆರೋಗ್ಯಕ್ಕೆ ಕೂಡ.

...

CAUTIOUSMIND ಗೆ 5 ರ ಸಂಭ್ರಮ

....
….

ನನ್ನ ಬ್ಲಾಗ್ ಇಂದಿಗೆ ಸರಿಯಾಗಿ 4 ವರ್ಷಗಳನ್ನು ಪೂರೈಸಿ, 5 ನೇ ವರ್ಷಕ್ಕೆ ಕಾಲಿಡುತ್ತಿದೆ. ನೂರಾರು ಲೇಖನಗಳು, ಫೋಟೋಗಳು, ಆಹ್ವಾನ ಪತ್ರಿಕೆಗಳು, ವಾದ-ಪ್ರತಿವಾದ, ಕಥೆ, ನಾಟಕ, ಕವನ, ವ್ಯಾಪಾರ, ಉತ್ತಮವಾದದ್ದನ್ನು ಪ್ರಕಟಿಸಿದಾಗ ಮೆಚ್ಚಿ ಕಮೆಂಟಿಸುವ, ಚೆನ್ನಾಗಿಲ್ಲದಿದ್ದರೆ ತಿದ್ದುವ ಕಮೆಂಟಿಗರು, ಕತ್ತಲಲ್ಲಿ ಕುಳಿತು ಸೆಗಣಿ ಎಸೆಯುವವರ ಅನಾಮಿಕ ಕಾಮೆಂಟುಗಳು – ಹೀಗೆ ಎಲ್ಲದಕ್ಕೂ ಈ ನಾಲ್ಕು ವರ್ಷ ಸಾಕ್ಷಿಯಾಗಿದೆ. ನಾಲ್ಕನೇ ವರ್ಷಕ್ಕೆ ಸರಿಯಾಗಿ 89201 ಹಿಟ್ ಗಳನ್ನು ಬ್ಲಾಗ್ ದಾಖಲಿಸಿದೆ. ಬ್ಲಾಗ್ ನಲ್ಲಿನ ಲೇಖನಗಳ ಸಂಗ್ರಹ ‘ನ್ಯೂಸ್ ಪಿಂಟ್’ ಪುಸ್ತಕ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಲ್ಕು ವರ್ಷಗಳಲ್ಲಿ ಒಂದು ಬಾರಿ CAUTIOUSMIND, ವರ್ಡ್ ಪ್ರೆಸ್ ನ ಮೊದಲ ಸ್ಥಾನವನ್ನೂ ಅಲಂಕರಿಸಿದೆ. ಇಲ್ಲಿಯವರೆಗೆ ಬ್ಲಾಗ್ ಓದಿ, ತಿದ್ದಿ, ಗುದ್ದಿ ಕಮೆಂಟಿಸಿದ, ಹುರಿದುಂಬಿಸಿದ ಎಲ್ಲ ಸಹೃದಯರಿಗೆ ಧನ್ಯವಾದ. ನಿಮ್ಮ ಪ್ರೀತಿ, ವಿಶ್ವಾಸ ಮುಂದೆಯೂ ಇರಲಿ.

ವಿಶ್ವಾಸಿ.

ಸುಘೋಷ್ ಎಸ್. ನಿಗಳೆ

ಈ ಬಾರಿಯ ನಿಗಳೆ ಪಾರಿತೋಷಕ ಪ್ರಶಸ್ತಿ ಹೀಗಿತ್ತು

ಕಳೆದ ವರ್ಷದಂತೆ ಈ ವರ್ಷ ಕೂಡ ನನ್ನ ಊರಾದ ಕೊಪ್ಪದಲ್ಲಿ ‘ನಿಗಳೆ ಪಾರಿತೋಷಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಓದಿನ ಜೊತೆಜೊತೆಗೆ ಕನಿಷ್ಠ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಆ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿರುವ ಮಕ್ಕಳಿಗೆ ನಿಗಳೆ ಪ್ರಶಸ್ತಿ ಮೀಸಲು. 2013 ನೇ ಸಾಲಿನ ಪ್ರಶಸ್ತಿಗೆ ಪಾತ್ರವಾಗಿರುವ ವಿದ್ಯಾರ್ಥಿನಿ ಅಶ್ವಿನಿ ಜಿ. ವಿ. ಕೊಪ್ಪ ತಾಲೂಕು ಗುಡ್ಡೆತೋಟದವರು. ಈ ಬಾರಿಯ ಪಿಯುಸಿಯಲ್ಲಿ ಶೇ. 87 ಅಂಕ. ಜೊತಗೆ ಚೆಸ್, ವಾಲಿಬಾಲ್, ಭಾವಗೀತೆ, ಚಿತ್ರಕಲೆ, ಓರಿಗಾಮಿ, ಕಥೆ-ಕವನ ಬರೆಯುವುದು ಸೇರಿದಂತೆ ಇನ್ನೂ ಹಲವೂ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನನ್ನ ಅಪ್ಪ-ಅಮ್ಮ ಎಚ್. ಎನ್. ಸದಾಶಿವರಾವ್ ಹಾಗೂ ಸುಮಾ ರಾವ್, ನಿಗಳೆ ಪಾರಿತೋಷಕ ಪ್ರಶಸ್ತಿಯನ್ನು ಅಶ್ವಿನಿಯವರಿಗೆ ಕೊಪ್ಪದಲ್ಲಿ ಪ್ರದಾನ ಮಾಡಿದ್ದಾರೆ. ನಿಗಳೆ ಪ್ರಶಸ್ತಿ, ಪಾರಿತೋಷಕ ಹಾಗೂ 501/- ನಗದು ಒಳಗೊಂಡಿದೆ.

.....
…..

ನಾನೀಗ ಈ ಟಿವಿಯ ತೆಕ್ಕೆಯಲ್ಲಿ…..

ಹೌದು, ನಾನೀಗ ಮತ್ತೆ ಈ ಟಿವಿಯ ತೆಕ್ಕೆಯಲ್ಲಿದ್ದೇನೆ. ವಿವರಗಳು ಶೀಘ್ರದಲ್ಲಿ.. . . .

.....
…..

ಯಾವ ಲೆವೆಲ್ ಗೆ ಇಳಿದೀದೀವಪ್ಪಾ?

ಮನುಷ್ಯ ಮತ್ತೊಬ್ಬ ಮನುಷ್ಯನ ಸಾವು ಬದುಕಿನ ಹೋರಾಟವನ್ನೂ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಾನೆ. ಟ್ರಾಫಿಕ್ ನಲ್ಲಿ ಸೈರನ್ ಬಾರಿಸುತ್ತ ಸಾಗುವ ಆಂಬ್ಯುಲೆನ್ಸ್ ಹಿಂದೆಯೇ ಹತ್ತಾರು ವಾಹನಗಳು ಬೆನ್ನು ಬಿದ್ದಿರುತ್ತವೆ. 😦

ನಿನಗೆ ನನ್ನ ಬರ್ತ್ ಡೇ ನೆನಪಿದ್ಯಾ? ಸೋ ಸ್ವೀಟ್ ಆಫ್ ಯೂ…

ನನ್ನದೊಂದು ಪುಟ್ಟ ಡೈರಿಯಿತ್ತು. ಅದರಲ್ಲಿ ನನ್ನ ಪ್ರೀತಿ ಪಾತ್ರರಾದವರ ಜನ್ಮದಿನಾಂಕ, ಮದುವೆ ವಾರ್ಷಿಕೋತ್ಸವಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದೆ. ಇದು ನಾನು ಶಾಲಾ ದಿನಗಳಿಂದಲೂ ಇಟ್ಟುಕೊಂಡಿದ್ದ ಡೈರಿಯಾಗಿತ್ತು. ಪ್ರತಿವರ್ಷವೂ ನಾನು ಈ ಡೈರಿಯ ರೆಫರೆನ್ಸ್ ಇಟ್ಟುಕೊಂಡು ವಿಶ್ ಮಾಡುತ್ತಿದ್ದೆ. “ಓಹ್, ನಿನಗೆ ನೆನಪಿದ್ಯಾ ನನ್ನ ಬರ್ತ್ ಡೇ…ಸೋ ಸ್ವೀಟ್ ಆಫ್ ಯೂ…ಥ್ಯಾಂಕ್ಸ್ ಎ ಲಾಟ್….ನೀನೊಬ್ನೆ ನೋಡು ನನ್ನ ಬರ್ತ್ ಡೇ ನೆನಪಿಟ್ಟುಕೊಂಡು ವಿಶ್ ಮಾಡಿದ್ದು” ಎಂದೆಲ್ಲ, ನಾನು ವಿಶ್ ಮಾಡಿದವರು ಹೇಳುತ್ತಿದ್ದರು. ಅವರಿಗೆ ನಿಜಕ್ಕೂ ಸಂತಸವಾಗಿರುತ್ತಿತ್ತು. ಅವರ ಸಂತಸ ನೋಡಿ ನನಗೂ ಆನಂದವಾಗುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ನನ್ನ ಬಳಿ ಈಗಲೂ ಆ ಪುಟ್ಟ ಡೈರಿ ಇದೆ. ಅದರಲ್ಲಿನ ಹೆಸರುಗಳ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ನಾನು ಈಗ ವಿಶ್ ಮಾಡಿದಾಗ, ಎಲ್ಲರೂ ಕೇಳುವುದು, “ಓಹ್   ಥ್ಯಾಂಕ್ಸ್….ಹೇಗೆ ಗೊತ್ತಾಯ್ತು ನನ್ನ ಬರ್ತ್ ಡೇ ಅಂತ….ಫೇಸ್ ಬುಕ್ ನಲ್ಲಿ ನೋಡಿದೆ ಅಲ್ವಾ?…..”

ನನ್ನ ಪುಟ್ಟ ಡೈರಿ ಅಳುತ್ತಿರುವುದು ಯಾರಿಗೂ ಕೇಳಿಸುತ್ತಿಲ್ಲ.

ಎಲ್ಲೊ ಒಂದು ಕಡೆ ಫೇಸ್ ಬುಕ್ ಮನುಷ್ಯರ ನಡುವಿನ ಸಂಬಂಧಗಳನ್ನ ಯಾಂತ್ರೀಕೃತವಾಗಿಸುತ್ತಿದೆಯಾ?

ಬಕಾಸನದ ಒಂದು ಭಂಗಿ…(ಅಫ್ ಕೋರ್ಸ್ ಕಾಲೇಜಿನ ದಿನಗಳಲ್ಲಿ ಮಾಡಿದ್ದು)

…………..

ಕನಸು ಪೂರ್ಣಗೊಳ್ಳಲು 8 ವರ್ಷಗಳು ಬೇಕಾದವು

ಅದು 2003. ಬೆಳಗಾವಿಯಿಂದ ಬೆಂಗಳೂರಿಗೆ ಪಿ.ಜಿ. ಮಾಡಲು ಬಂದಿದ್ದೆ. ಬೆಂಗಳೂರಿನ ಥಳಕು ಬಳುಕಿನ ಬದುಕು ಅಕ್ಷರಶಃ ನನ್ನನ್ನು ಕಂಗೆಡಿಸಿತ್ತು. ಇಲ್ಲಿನ ಜನ, ರಸ್ತೆಗಳು, ಮಾತು, ಲೈಟುಕಂಬ, ನನಗೆ ಹಾಡಹಗಲೇ ಅಣಕಿಸಿದ್ದವು. ಬೆಂಗಳೂರು ನನ್ನನ್ನು ಹೀರಿಕೊಳ್ಳಲು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವರ್ಷ. ಭಾರತೀಯ ವಿದ್ಯಾಭವನದಲ್ಲಿ ಪಿ. ಜಿ. ಡಿಪ್ಲೋಮಾ ಇನ್ ಮಾಸ್ ಕಮ್ನೂನಿಕೇಷನ್ ಆಗ ತಾನೇ ಮುಗಿಸಿದ್ದೆ. ಮಾಧ್ಯಮ ರಂಗ ಪ್ರವೇಶಿಸಿಲು ಉತ್ಸುಕನಾಗಿದ್ದೆ. ನ್ಯೂಸ್ ಆಂಕರ್ ಆಗಬೇಕೆಂಬುದು ನನ್ನ ಮಹೋನ್ನತ ಕನಸುಗಳಲ್ಲಿ ಒಂದಾಗಿತ್ತು. ಯಾರೋ ಹೇಳಿದರು, “ಇದಕ್ಕೆಲ್ಲ ಮೊದಲು ಪೋರ್ಟ್ ಫೋಲಿಯೋ ಮಾಡಿಸ್ಕೊಳ್ಳಬೇಕು ಕಣಯ್ಯ” ಅಂತ. ಯಾವುದು ಬೆಸ್ಟ್ ಸ್ಟುಡಿಯೋ ಎಂದು ವಿಚಾರಿಸಿದಾಗ ಎಲ್ಲರಿಂದಲೂ ಒಮ್ಮೆಲೇ ಬಂದ ಹೆಸರು ಜಿ. ಕೆ. ವೇಲ್. ಸರಿ ನಾನು ಹಾಗೂ ದೀಪು (ದೀಪು ಈಗ ಸ್ಟಾಂಡರ್ಜ್ ಚಾರ್ಟರ್ಡ್ ಬ್ಯಾಂಕ್ ನಲ್ಲಿ ಬ್ರಾಂಚ್ ಮ್ಯಾನೇಜರ್) ಜೇಬು ತಡಕಾಡಿಕೊಂಡು ಎಂ. ಜಿ. ರೋಡ್ ನಲ್ಲಿದ್ದ ಜಿ. ಕೆ. ವೇಲ್ ಗೆ ಹೋದೆವು. ನಾನು ಹಿಂಗಿಂಗೆ ನ್ಯೂಸ್ ಆಂಕರ್ ಆಗ್ಬೇಕು ಅಂತಿದ್ದೀನಿ. ಅದಕ್ಕೆ ತಕ್ಕ ಹಾಗೆ ಫೋಟೋ ಬೇಕು ಅಂದೆ. ಓ ಯಸ್ ಅಂದವರೇ, ನನ್ನನ್ನು ಸ್ಟುಡಿಯೋಗೆ ಕಳುಹಿಸಿದರು. ಶಿವು ಎಂಬ ಫೋಟೋಗ್ರಾಫರ್ ನನ್ನ ಫೋಟೋಗಳನ್ನು ತೆಗೆದರು. ನಿಜಕ್ಕೂ ಆ ಫೋಟೋದಲ್ಲಿ ನಾನು ಅಪ್ಪಟ ಆಂಕರ್ ಥರಾನೇ ಕಾಣಿಸ್ತಿದ್ದೆ. ಆದರೆ, ಈ ಫೋಟೋಗಳನ್ನು ಹಿಡಿದುಕೊಂಡು ಅಲೆಯುವ ಪ್ರಸಂಗವೇ ಬರಲಿಲ್ಲ. ಯಾಕೆಂದರೆ ಆಗ ಇದ್ದಿದ್ದೇ ಎರಡು ಚ್ಯಾನಲ್. ಒಂದು ಈ ಟಿವಿ, ಮತ್ತೊಂದು ಉದಯ. ಈ ಟಿವಿಯಲ್ಲಿ ಆಂಕರ್ ಆಗಬೇಕೆಂದರೆ ಹೈದ್ರಾಬಾದ್ ನಲ್ಲಿ ಕೆಲಸ ಮಾಡಬೇಕು. ಆದರೆ ಈಟಿವಿ ಸೇರಿದ ಆರೇ ತಿಂಗಳಿಗೆ ನನ್ನನ್ನು ಬೆಂಗಳೂರಿಗೆ ಎತ್ತಿ ಹಾಕಿದ್ದರು. ಮುಂದೆ ರಿಪೋರ್ಟಿಂಗ್ ನಲ್ಲಿ ಕಳೆದುಹೋಗಿಬಿಟ್ಟೆ. ಈ ಮಧ್ಯೆ ಸೀರಿಯಲ್ ಕೈಹಿಡಿಯಿತು. ನ್ಯೂಸ್ ಆಂಕರ್ ಗಿಂತ ಹತ್ತು ಪಟ್ಟು ಕೀರ್ತಿಯನ್ನು ತಂದು ಕಣ್ಮುಂದೆ ಕೆಡವಿತು. ನಂತರ ‘ಸಮಯ’ ಸೇರಿ ಮತ್ತೆ ಮಾಧ್ಯಮ ರಂಗ ಮರುಪ್ರವೇಸಿಸಿದಾಗ ಅಂತೂ ಇಂತೂ ಆಂಕರ್ ಆದೆ. ಅಂದು ಜಿ. ಕೆ. ವೇಲ್ ಸ್ಟುಡಿಯೋದಲ್ಲಿ ಹಾಕಿಕೊಂಡಿದ್ದ ಅದೇ ಕೋಟ್ ಹಾಕಿಕೊಂಡು 8 ವರ್ಷಗಳ ಬಳಿಕ ನ್ಯೂಸ್ ರೀಡಿಂಗ್ ಮಾಡಿದಾಗ, “ಆಜ್ ಮೈ ಊಪರ್ ಆಸಮಾಂ ನೀಚೆ” ಅನುಭವ. ಆ ಎರಡೂ ಫೋಟೋಗಳು ಇಲ್ಲಿವೆ. ಅಫ್ ಕೋರ್ಸ್ ಅದೇ ಕೋಟಿನೊಂದಿಗೆ….

(ಅಂದ ಹಾಗೆ ಈ ಕೋಟ್ ಕೂಡ ನನ್ನ ಕಸಿನ್ ಅಣ್ಣ ವಿವೇಕ್ ಹಳಬೆ ನೀಡಿದ್ದು. “ಕೋಟು ಹಳೆಯದಾದರೇನು, ಲುಕ್ಕು ನವನವೀನ…”)

2003 ರಲ್ಲಿ ಜಿ. ಕೆ. ವೇಲ್ ಸ್ಟುಡಿಯೋದಲ್ಲಿ
2012 ರಲ್ಲಿ ಸಮಯ ಸ್ಟುಡಿಯೋದಲ್ಲಿ

ನೀರಿನ ರುಚಿ ಬದಲಾಗಿದೆ

ಇತ್ತೀಚೆಗೆ ಬೆಳಗಾವಿಗೆ ಹೋಗಿದ್ದೆ. ನಾನು ಅಲ್ಲಿ ಕಳೆದಿರುವುದು ಸುಮಾರು 22 ವರ್ಷ. ಬೆಳಗಾವಿ ನೀರು ಕುಡಿದು ಬೆಳೆದವನು. ಸದಾ ಸಿಹಿ ಸಿಹಿಯಾಗಿರುತ್ತಿದ್ದ ನೀರು ಈ ಬಾರಿ ಮಾತ್ರ ಯಾಕೋ ಸ್ವಲ್ಪ ಬೇರೆಯಾಗಿದೆ ಅನಿಸಿತು. ರುಚಿಯಲ್ಲಿ ಏನೋ ವ್ಯತ್ಯಾಸ. ಸಿಹಿ ಕಡಿಮೆಯಾದ ಅನುಭವ. ಸ್ನೇಹಿತನ್ನ ಕಾರಣವೇನೆಂದು ಕೇಳಿದೆ, “ಇಲ್ಲೀಮಟ ರಾಕಸ್ಕೋಪ್ ನೀರ್ ಕೊಡ್ತಿದ್ರು. ಈಗ ಚೋವೀಸ್ ತಾಸ್ ಪಾಣಿ (24 ಗಂಟೆ ನೀರು) ಅಂತ ಹೇಳಿ ಹಿಡಕಲ್ ಡ್ಯಾಮ್ ನೀರ್ ಬಿಡಾಕ್ ಹತ್ಯಾರ. ನೀ ಈಗ ಕುಡದದ್ದು ಹಿಡಕಲ್ ಡ್ಯಾಮ್ ನೀರು” ಅಂದ. ಬೆಳಗಾವಿಯಲ್ಲಿ ನೀರು ಸರಬರಾಜು ಖಾಸಗೀಕರಣಗೊಂಡಿದೆ. ಸಧ್ಯಕ್ಕೇನೋ ಚೋವೀಸ್ ತಾಸ್ ಪಾಣಿ ಬರುತ್ತಿದೆ. ಆದರೆ, ನೀರು ಸರಬರಾಜು ಖಾಸಗೀಕರಣಗೊಂಡಿರುವುದರಿಂದ ಮುಂದೆ ಇದೇ ರೀತಿ ನೀರು ಬರುತ್ತದೆಯೆಂಬ ಗ್ಯಾರಂಟಿ ಮಾತ್ರ ಕೊಂಚವೂ ಇಲ್ಲ. ಬೆಳಗಾವಿ ಬದಲಾಗುತ್ತಿದೆ. ಆ ಬದಲಾವಣೆ ಗಾಬರಿ ಹುಟ್ಟಿಸುತ್ತಿದೆ.

ಹೀಗೊಂದು ಪ್ರಶ್ನೆ….

ಸುದ್ದಿಮನೆಯ ಒತ್ತಡದಿಂದಾಗಿ, ಬರವಣಿಗೆ ಸತ್ತುಹೋಗುತ್ತಿದೆ. ಬ್ಲಾಗಲ್ಲಿ ಬರಯಲು ಆಗುತ್ತಿಲ್ಲ. ಬರೆಯಲು ಕುಳಿತರೆ, ಏನೂ ಹೊಳೆಯುವುದಿಲ್ಲ. ಏನು ಮಾಡಲಿ?

ಬರೆಯುವೆನೆಂದರೆ ಬರೆಯಲಿ ಹ್ಯಾಂಗ?

 

ಅಪ್ಪ ಬದಲಾಗಿದ್ದಾನೆ…!!!

©SUGHOSH S. NIGALE

 

©SUGHOSH S. NIGALE

ಅಪ್ಪ. ಅದೊಂದು ಆತ್ಮವಿಶ್ವಾಸ. ಅದೊಂದು ನಂಬಿಕೆ. ಅದು ಭದ್ರತೆ. ಅದು ಭಯಮಿಶ್ರಿತ ಪ್ರೀತಿ ಅಥವಾ ಪ್ರೀತಿ ಮಿಶ್ರಿತ ಭಯ. ಅದೊಂದು ಆಸರೆ. ದಟ್ಟ ಕೂದಲಿನ ಗಟ್ಟಿ ಎದೆಯ ಮೇಲೆ ಪುಟ್ಟ ತಲೆಯನ್ನಿಟ್ಟು ತಾಚಿ ಮಾಡಿದ ಮಗು ಆ ಸ್ಪರ್ಶವನ್ನೆಂದಿಗೂ ಮರೆಯಲಾರದು. ಅಪ್ಪ ಮುದ್ದಿಸುವಾಗ ಎರಡು ದಿನದಿಂದ ಕ್ಷೌರ ಮಾಡಿರದ ಆತನ ಗಡ್ಡ ಚುಚ್ಚಿದರೂ, ಅದರಲ್ಲೇ ಪ್ರೀತಿ ಕಾಣುತ್ತದೆ ಮಗು. ಅಪ್ಪ ಎಂದಿಗೂ ಅಪ್ಪನೇ.

ಅಪ್ಪ ಯಾರು ಎಂಬುದಕ್ಕೆ ಚೆಂದಾದ ಸುಭಾಷಿತವೊಂದು ಸರಳವಾದ ವ್ಯಾಖ್ಯೆಯನ್ನು ನೀಡುತ್ತದೆ. ಸುಭಾಷಿತ ಹೀಗಿದೆ.

ಜನಿತಾಚೋಪನೇತಾಚ ಯಸ್ತು ವಿದ್ಯಾಂ ಪ್ರಯಚ್ಛತಿ

ಅನ್ನದಾತಾ ಭಯತ್ರಾತಾ ಪಂಚೈತೇ ಪಿತರಸ್ಮೃತಾಃ

ಅರ್ಥ – ಜನ್ಮ ನೀಡಿದವನು, ಉಪನಯನ ಮಾಡಿದವನು, ವಿದ್ಯೆ ಹೇಳಿಕೊಟ್ಟವನು, ಅನ್ನ ನೀಡಿದವನು, ಅಂಜಿಕೆ ಹತ್ತಿರ ಸುಳಿಯದಂತೆ ಕಾಪಾಡಿದವನು – ಈ ಐದನ್ನು ಯಾರು ಮಾಡುತ್ತಾರೋ ಆತ ತಂದೆ ಅನ್ನಿಸಿಕೊಳ್ಳಲು ಅರ್ಹ.

ಹಿಂದಿನ ಕಾಲದಿಂದಲೂ ನಮ್ಮ ಪರಂಪರೆಯಲ್ಲಿ ಅಪ್ಪನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ತಾಯಿಗೆ ನಮಸ್ಕಾರ ಅಂದ ತಕ್ಷಣ ನಾವು ಅನ್ನುವುದೇ ‘ಪಿತೃ ದೇವೋಭವ’ ಎಂದು. ದೇವರ ಸ್ಥಾನವನ್ನು ನೀಡಿರುವ ನಮ್ಮ ಪರಂಪರೆಯೇ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ತಂದೆಯಾದವನು ಮಗುವಿನೊಡನೆ ಯಾವ ರೀತಿಯಿಂದ ನಡೆದುಕೊಳ್ಳಬೇಕು ಎಂಬುದನ್ನೂ ಸೂಚಿಸಿದೆ.

ಲಾಲಯೇತ್ ಪಂಚವರ್ಷಾಣಿ

ದಶ ವರ್ಷಾಣಿ ತಾಡಯೇತ್

ಪ್ರಾಪ್ತೇತು ಷೋಡಷೇ ವರ್ಷೇ

ಪುತ್ರಂ ಮಿತ್ರವದಾಚರೇತ್

ಅರ್ಥ – ಮಗುವನ್ನು ಐದು ವರ್ಷದ ವರಗೆ ಪ್ರೀತಿಯಿಂದ ನೋಡಿಕೊಳ್ಳಬೇಕು. ಹತ್ತು ವರ್ಷದವನಾದಾಗ ತಪ್ಪು ಮಾಡುವ ಸಂದರ್ಭದಲ್ಲಿ ಎರಡೇಟು ಹಾಕಿ ತಿದ್ದಬೇಕು. ಆದರೆ ಅದೇ ಮಗು ಹದಿನಾರು ವರ್ಷದವನಾದಾಗ ಅದನ್ನು ಮಿತ್ರನಂತೆ ನೋಡಿಕೊಳ್ಳಬೇಕು ಎನ್ನುತ್ತದೆ ಸುಭಾಷಿತ. ಹೌದು. ದೇವರೂ ಕೂಡ ಮಿತ್ರನಾಗಲು ಸಾಧ್ಯವಲ್ಲವೆ?

ನಮ್ಮಲ್ಲಿ ಮೊದಲಿನಿಂದಲೂ ತಂದೆಯ ಬಗ್ಗೆಯಿದ್ದ ಪರಿಕಲ್ಪನೆ ಒಂದೇ ತೆರನಾಗಿದ್ದಾದರೂ, ಕಾಲದಿಂದ ಕಾಲಕ್ಕೆ ತಂದೆ-ಮಗ  ಅಥವಾ ತಂದೆ-ಮಗಳ ಸಂಬಂಧ ಮಾತ್ರ ಕಾಲನ ಹೊಡೆತಕ್ಕೆ ಸಿಕ್ಕು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಆಧುನಿಕತೆ ಹಾಗೂ ಜಾಗತೀಕರಣದ ಇಂದಿನ ಯುಗದಲ್ಲಂತೂ ತಂದೆ-ಮಗನ ಸಂಬಂಧ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಶ್ರೀರಾಮನ ಆಸ್ಥಾನಕ್ಕೆ ಬಂದು ಕುಶ-ಲವರು ರಾಮ ಚರಿತೆಯನ್ನು ಹಾಡಿದಾಗ ಇದ್ದ ಸಂಬಂಧಕ್ಕೂ, ತಂದೆಯಾದವನು ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೋ, ಮದುವೆಗೋ ಎಂದೋ ಮಕ್ಕಳಿಗೆ 2 ವರ್ಷ ತುಂಬುತ್ತಲೇ ಉಳಿತಾಯ ಆರಂಭಿಸಬೇಕು ಅಥವಾ ವಿಮಾ ಪಾಲಿಸಿ ತೆಗೆದುಕೊಳ್ಳಬೇಕು ಎಂದು ಹೇಳುವ ಇಂದಿನ ಕಾಲದ ಸಂಬಂಧಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಸಹಜವಾಗಿಯೇ ತಂದೆಗೊಂದು ಸ್ಥಾನ ತಾನೇ ತಾನಾಗಿ ಲಭಿಸಿದೆ. ಆ ತಂದೆ ಎಂತಹ ಕ್ರೂರ ತಂದೆಯೇ ಆಗಿರಲಿ – ಇದು ವಿಪರ್ಯಾಸವಾದರೂ – ಆತನಿಗೊಂದು ಸ್ಥಾನ ಎಂದು ನೀಡಲ್ಪಟ್ಟಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಂದೆಯಾದವನು ಮಕ್ಕಳಿಗೆ ಒಂದು ಅನನ್ಯತೆಯನ್ನು (ಐಡೆಂಟಿಟಿ) ದೊರಕಿಸಿಕೊಡುತ್ತಾನೆ. “ತಾಯಿಯಾರೋ ಗೊತ್ತಿಲ್ಲ” ಎಂಬುದಕ್ಕಿಂತ “ತಂದೆಯಾರೋ ಗೊತ್ತಿಲ್ಲ” ಎಂಬುದು ನಮ್ಮ ಸಮಾಜದಲ್ಲಿ ಹೆಚ್ಚು ಇರುಸುಮುರುಸು ಉಂಟುಮಾಡುವ ಸಂಗತಿಯಾಗಿದೆ. ಹಿಂದಿ ಚಿತ್ರರಂಗದಲ್ಲಂತೂ ತಂದೆಯಿಲ್ಲದೆ, ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುವ ನಾಯಕ ಚಿತ್ರದುದ್ದಕ್ಕೂ ಪ್ರೇಕ್ಷಕರ ಕರುಣೆಗಿಟ್ಟಿಸುತ್ತಾನೆ.

ರಾಮಾಯಣದ ಕಾಲದಲ್ಲಿ ವಾಸ್ತವವಾಗಿಯೇ ತಂದೆ ‘ದೇವೋಭವ’ ಆಗಿದ್ದ. ಅದಕ್ಕೇ ಅಲ್ಲವೇ ಸ್ವತಃ ಶ್ರೀರಾಮ ತಂದೆಯ ಮಾತನ್ನು ಉಳಿಸಲು ಪತ್ನಿ ಹಾಗೂ ತಮ್ಮನೊಡನೆ 14 ವರ್ಷಗಳ ಕಾಲ ಕಾಡಿನತ್ತ ಹೆಜ್ಜೆ ಹಾಕಿ ಇನ್ನಿಲ್ಲದ ಕಷ್ಟಗಳಿಗೆ ಸಿಕ್ಕಿಹಾಕಿಕೊಂಡದ್ದು? ರಾಮ ಅಂದಿಗೂ ಇಂದಿಗೂ ನಮಗೆ ಆದರ್ಶ. ಎಲ್ಲ ಸಂಬಂಧಗಳಿಗೂ ಆದರ್ಶ. ಅಗಸನ ಮಾತನ್ನು ಕೇಳಿಕೊಂಡು ಪತ್ನಿಯನ್ನು ದೂರ ಮಾಡಿದ ಎಂಬ ಆರೋಪ ರಾಮನ ಮೇಲಿದ್ದರೂ, ಹಿಂದಿನ ಘಟನೆಗಳು ಆಯಾ ದೇಶ-ಕಾಲ-ಪರಿಸ್ಥಿತಿಯ ಒತ್ತಡಗಳಿಂದ ಉಂಟಾಗಿದ್ದು ಎಂಬುದನ್ನು ಮರೆಯಬಾರದು. ರಾಮ ಅಧಿಕಾರವನ್ನು ತ್ಯಜಿಸಿ ಸೀತೆ ಹಾಗೂ ಲಕ್ಷ್ಮಣನೊಡನೆ ಕಾಡಿಗೆ ಹೋಗಿದ್ದು, ಅಲ್ಲಿ ಲಕ್ಷ್ಮಣ, ಶೂರ್ಪನಖಿಯ ಮೂಗು ಕತ್ತರಿಸಿದ್ದು, ಸೀತೆಗೆ ಮಾಯಾಜಿಂಕೆ ಕಂಡಿದ್ದು, ಸೀತಾಪಹರಣವಾಗಿದ್ದು, ಜಟಾಯು ರೆಕ್ಕೆ ಕತ್ತರಿಸಿಕೊಂಡದ್ದು, ಹನುಮ ಸಮುದ್ರ ಜಿಗಿದದ್ದು, ತನ್ನ ಬಾಲದಿಂದ ಲಂಕೆಗೆ ಬೆಂಕಿ ಇಟ್ಟದ್ದು, ಭಾರತದಿಂದ ಶ್ರೀಲಂಕೆಗೆ ಸೇತುವೆ ನಿರ್ಮಾಣವಾಗಿದ್ದು, ರಾಮ-ರಾವಣ ಯುದ್ಧವಾಗಿದ್ದು, ಕೊನೆಗೆ ರಾಮ ಸೀತೆಯೊಡನೆ ಮರಳಿದ್ದು ಎಲ್ಲವೂ ನಡೆದಿದ್ದು ಕೇವಲ ಕೇವಲ ಶ್ರೀರಾಮನ ಪಿತೃವಾಕ್ಯ ಪರಿಪಾಲನೆಗಾಗಿ!!

ಬಹುಶಃ ಶ್ರೀರಾಮ, “ಇಲ್ಲ ತಂದೆಯೇ, ನೀನು ಕೈಕೇಯಿಗೆ ಮಾತು ಕೊಟ್ಟಿರಬಹುದು. ನಿನ್ನ ಮಾತನ್ನು ಉಳಿಸಿಕೊಳ್ಳುವುದು ನಿನ್ನ ಜವಾಬ್ದಾರಿಯೇ ಹೊರತು. ನನ್ನದಲ್ಲ. ಕ್ಷಮಿಸು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ರಾಜನ ಮಗನಾಗಿ ನನ್ನ ಕರ್ತವ್ಯ ಕೇವಲ ಅಯೋಧ್ಯೆಯ ರಕ್ಷಣೆ ಹಾಗೂ ಪ್ರಜಾ ಪರಿಪಾಲನೆ. ಅದು ಧರ್ಮ ಕೂಡ” ಎಂದಿದ್ದರೆ ರಾಮನ ಮಾತಿಗೆ ಭರತನೂ ಎದುರಾಡುತ್ತಿರಲಿಲ್ಲ. ರಾಮಾಯಣವೂ ನಡೆಯುತ್ತಿರಲಿಲ್ಲ! ಆದರೆ ರಾಮ ತಂದೆಯ ಇಕ್ಕಟ್ಟನ್ನು ಅರ್ಥಮಾಡಿಕೊಂಡವನೇ ನೇರವಾಗಿ ಕಾಡಿಗೆ ನಡೆದುಬಿಟ್ಟ. 14 ವರ್ಷಗಳಲ್ಲಿ ಏನೆಲ್ಲ ನಡೆದುಹೋಯಿತು. ಕೇವಲ ರಾಮ ದಶರಥನ ಮೇಲೆ ಇಟ್ಟಿದ್ದ ಭಕ್ತಿ ಹಾಗೂ ಗೌರವಕ್ಕಾಗಿ.

ತ್ರೇತಾಯುಗದಲ್ಲಿ ‘ಪಿತೃವಾಕ್ಯ’ಕ್ಕಾಗಿ ಇಷ್ಟೆಲ್ಲ ನಡೆದರೆ ದ್ವಾಪರಯುಗದಲ್ಲಿ ನಡೆದದ್ದು ಮತ್ತಷ್ಟು ವಿಚಿತ್ರ.  ತಂದೆ ಶಂತುನುವಿಗಾಗಿ ಸತ್ಯವತಿಯ ಬಳಿ ತೆರಳಿ ಬ್ರಹ್ಮಚಾರಿಯಾಗಿರುವುದಾಗಿ ಘೋಷಿಸಿದ ಭೀಷ್ಮ ಎಲ್ಲೊ ಒಂದು ಕಂಡೆ ದ್ವಾಪರದಲ್ಲಿ ಶ್ರೀರಾಮನ ಮುಂದುವರಿದ ಭಾಗದಂತೆ, ಆತನ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಆದರೆ ಈ ಸಾತ್ವಿಕತೆ ಹೆಚ್ಚು ಹೊತ್ತು ಉಳಿಯುವುದಿಲ್ಲ. ಏಕೆಂದರೆ ತಲೆ ಮೇಲೆ ಮಗುವನ್ನು ಹೊತ್ತುಕೊಂಡು ಯಮುನಾ ನದಿ ದಾಟಿ ಕೃಷ್ಣನನ್ನು ಬದುಕಿಸಿದ ವಸುದೇವ ಆದರ್ಶ ತಂದೆಯಾಗಿ ಕಂಡರೆ, ಮತ್ತೊಂದೆಡೆ ಮಕ್ಕಳ ಮೇಲಿನ ಕುರುಡು ಪ್ರೀತಿಯಿಂದ ಮಕ್ಕಳ ವಿನಾಶಕ್ಕೇ ಕಾರಣನಾದ ಧೃತರಾಷ್ಟ್ರನೂ ಕಾಣಸಿಗುತ್ತಾನೆ. ತ್ರೇತಾಯುಗದಲ್ಲಿ ಅಪ್ಪನ ಮಾತಿಗೆ ಮಗ ಬೆಲೆಕೊಟ್ಟು ಕಾಡಿಗೆ ಹೋದರೆ, ದ್ವಾಪರದಲ್ಲಿ ಅಪ್ಪನೇ ಮಕ್ಕಳ ಕುಕರ್ಮಗಳನ್ನು ತಿದ್ದದೆ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತಾನೆ. ಇದು ಕಾಲದ ಬದಲಾವಣೆಯನ್ನು ತೋರಿಸುವುದರ ಜೊತೆಗೆ ಅಪ್ಪ ಎಂಬ ಮೌಲ್ಯ, ಆದರ್ಶ ಹೇಗೆ ಬದಲಾಯಿತು ಎಂಬುದನ್ನು ಸೂರ್ಯನಷ್ಟು ಸ್ಪಷ್ಟವಾಗಿ ತೋರಿಸುತ್ತದೆ. ಜೊತೆಗೆಯೇ ದ್ವಾಪರಯುಗದಲ್ಲಿ ತಂದೆಯ ಮೌಲ್ಯವೇ ಹಲವಾರು ಸಂದರ್ಭಗಳಲ್ಲಿ ಅಲ್ಲಾಡಿಹೋಗುತ್ತದೆ. ತಂದೆಯ ಅಸ್ತಿತ್ವಕ್ಕೆ ಪ್ರಶ್ನೆ ಚಿಹ್ನೆ ಎದುರಾಗುತ್ತದೆ. ಪಾಂಡುರಾಜ, ಧೃತರಾಷ್ಟ್ರ, ವಿದುರ, ಕರ್ಣ, ಹಾಗೂ ಪಾಂಡವರ ಜನನ ಪ್ರಕ್ರಿಯೆಯಲ್ಲಿ ಅಪ್ಪನಾದವನು ಕೇವಲ ಜೈವಿಕ ತಂದೆ (ಬಯೋಲಾಜಿಕಲ್ ಫಾದರ್) ಆಗುತ್ತಾನೆಯೇ ಹೊರತು ಭಾವನಾತ್ಮಕ ತಂದೆ ಆಗುವುದೇ ಇಲ್ಲ. ಅಪ್ಪನ ಅಸ್ತಿತ್ವ, ಮೌಲ್ಯ, ಪಾತ್ರ, ಇತ್ಯಾದಿಗಳ ಬಗ್ಗೆ ಬಹುಶಃ ಮೊಟ್ಟಮೊದಲ ಸ್ಥಿತ್ಯಂತರ ಇಲ್ಲಿಂದಲೇ ಆರಂಭವಾಯಿತು ಎನ್ನಬಹುದು.

ಇನ್ನು ಕಲಿಯುಗದಲ್ಲಿ ಕಂಡಷ್ಟು ಸ್ಥಿತ್ಯಂತರಗಳು, ಬದಲಾವಣೆಗಳು ಇನ್ನೂ ಅಗಾಧ. ಇಂದು ಅಪ್ಪ ಕೇವಲ ಅಪ್ಪನಾಗಿ ಉಳಿದಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಕೆಲಸದ ಒತ್ತಡ, ಬದಲಾಗಿರುವ ಜೀವನ ಶೈಲಿ, ವ್ಯಾಯಮ ರಹಿತ ಜೀವನ, ಕುಡಿತ-ಸಿಗರೇಟು ಸೇವನೆಯಂತಹ ದುಶ್ಚಟಗಳು, ಅತಿಯಾದ ಬೊಜ್ಜು, ಕಲುಷಿತ ಆಹಾರ-ನೀರು ಸೇವನೆ, ಕುಂಠಿತಗೊಂಡಿರುವ ವೀರ್ಯಾಣುಗಳ ಸಂಖ್ಯೆಯಿಂದಾಗಿ ಜೈವಿಕ ತಂದೆಯಾಗುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. (ಹಾಗಾದರೆ ಭಾರತದ ಜನಸಂಖ್ಯೆ ಇಷ್ಟು ಹೇಗೆ ಹೆಚ್ಚಾಗಿದೆ ಅನ್ನುತ್ತೀರಾ? ಈ ಅಂಶವನ್ನು ಸಧ್ಯ ಪಕ್ಕಕ್ಕಿಟ್ಟು ಯೋಚಿಸೋಣ). ಸಂತಾನ ಹೀನತೆ ಹೊಸ ಯುಗದಲ್ಲಿ ಸವಾಲಾಗಿ ಪರಿಣಮಿಸಿದ್ದರೆ, ವೈದ್ಯಕೀಯ ರಂಗಕ್ಕೆ ಉದ್ಯಮವಾಗಿ ಮಾರ್ಪಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿವರ್ಷ ಹೊಸ ಹೊಸ ಸಂತಾನ ಹೀನತೆ ಚಿಕಿತ್ಸಾ ಕೇಂದ್ರಗಳು ಸಂತಾನವಿಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ದಿನೇದಿನೇ ಏರುತ್ತಿದೆ. ಬೆಂಗಳೂರಿನಲ್ಲೇ ಪ್ರತಿಷ್ಠಿತ ಚಿಕಿತ್ಸಾ ಕೇಂದ್ರಗಳಲ್ಲಿ ತಿಂಗಳಿಗೆ ಕನಿಷ್ಠ ತಲಾ 5 ಪ್ರನಾಳ ಶಿಶುಗಳು ಜನ್ಮತಾಳುತ್ತಿವೆ. ಪ್ರತಿಯೊಂದು ಪ್ರನಾಳ ಶಿಶುವಿಗೂ ಕನಿಷ್ಠ ಒಂದೂವರೆಯಿಂದ 2 ಲಕ್ಷ ರೂಪಾಯಿಯಷ್ಟು ಖರ್ಚು ತಗಲುತ್ತದೆ. ಆದರೆ ವೈದ್ಯಕೀಯ ಸಾಧನೆಗಳ ಸಹಾಯದಿಂದ ಜೈವಿಕ ತಂದೆ-ತಾಯಿಯಾಗುವವರು, ಭಾವನತ್ಮಕವಾಗಿ, ಲೌಕಿಕವಾಗಿ ಕೂಡ ಉತ್ತಮ ತಂದೆತಾಯಿ ಎನಿಸಿಕೊಳ್ಳಬೇಕಾಗುತ್ತದೆ. ಈ ಹಂತದಲ್ಲೇ ಸ್ವಲ್ಪ ಎಡವಟ್ಟಾಗುತ್ತಿರುವುದು ಕಂಡಬರುತ್ತಿದೆ.

ಮೊನ್ನೆ ಒಬ್ಬ ಹಿರಿಯರು ಹೇಳಿದರು. “ಇತ್ತೀಚೆಗೆ DINK ಕುಟುಂಬಗಳು ಹೆಚ್ಚಾಗುತ್ತಿವೆ” ಅಂತ. “ಹಾಗೆಂದರೇನು?” ಅಂತ ಕೇಳಿದೆ. ಅವರು ಹೇಳಿದ್ದು “DINK ಅಂದರೆ Double Income No Kids ಕುಟುಂಬಗಳು” ಅಂತ. ಮಕ್ಕಳು ಬೇಕೋ ಬೇಡವೋ ಎಂಬ ನಿರ್ಧಾರ ವೈಯುಕ್ತಿಕ ಮಟ್ಟದ್ದು. ಅದರಲ್ಲಿ ಮೂರನೇ ವ್ಯಕ್ತಿ ತಲೆಹಾಕುವ ಹಾಗಿಲ್ಲ. ಎಷ್ಟೋ ದಂಪತಿಗಳು ಮದುವೆಗೆ ಮುನ್ನವೇ ತಮಗೆ ಮಕ್ಕಳು ಬೇಡ ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ. ಆದರೆ ಮಕ್ಕಳು ಬೇಕೆಂದು ಬಯಸುವ ತಂದೆತಾಯಿಗಳು ಆಧುನಿಕತೆ ಹಾಗೂ ಆಧುನಿಕ ಜೀವನ ಶೈಲಿಯ ಒತ್ತಡದಿಂದಾಗಿ ಸಾಕಷ್ಟು ಹಣ ಗಳಿಸುತ್ತಿದ್ದರೂ ಮಕ್ಕಳಾಗದೇ ಕೊರಗುವುದು ಹೊಸ ಯುಗದ ಮತ್ತೊಂದು ದುರಂತ ಎನಿಸುತ್ತದೆ.

ಶ್ರೀಮಂತ ಹಾಗೂ ಮಧ್ಯಮ ವರ್ಗದಲ್ಲಿ ಈ ಕಥೆಯಾದರೆ ಬಡ ವರ್ಗದ ಲೆಕ್ಕಾಚಾರಗಳೇ ಬೇರೆ. ಅಲ್ಲಿ ಮದುವೆಯಾದ ಬಳಿಕ ಅಪ್ಪನಾಗುವುದು ಹೆಮ್ಮೆಯ ವಿಷಯ ಅಲ್ಲವೇ ಅಲ್ಲ. ಮಕ್ಕಳನ್ನು ‘ಹುಟ್ಟಿಸುವುದು’ ಅನಿವಾರ್ಯವೇ ಹೊರತು ಆಯ್ಕೆಯಲ್ಲ. ಹೆಚ್ಚು ಹೆಚ್ಚು ಮಕ್ಕಳಾದಷ್ಟೂ ಕುಟುಂಬದ ಬಡತನ ದೂರವಾಗುತ್ತದೆ ಎಂಬ ಭ್ರಮೆ ಜನಸಂಖ್ಯಾ ಸ್ಫೋಟಕ್ಕೆ ಕಾರಣವಾಗುತ್ತದೆ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಅಪ್ಪನ ಮೇಲಿರುವುದರಿಂದ ಆತನ ಮೊದಲ ಮಗನ ವಯಸ್ಸು 16 ವರ್ಷಗಳಿದ್ದರೆ ಕೊನೆಯ ಮಗಳಿಗೆ 8 ತಿಂಗಳೂ ಪೂರೈಸಿರುವುದಿಲ್ಲ. ಇವರೂ ಕೇವಲ ಜೈವಿಕ ತಂದೆಯರು. ದ್ವಾಪರ ಯುಗದ ಜೈವಿಕ ಅಪ್ಪಂದಿರ ಹಾಗೆ. ಕಾರಣಗಳು ಬೇರೆ ಬೇರೆ ಇದ್ದರೂ ಪರಿಣಾಮ ಮಾತ್ರ ಒಂದೇ. ಒಂದು ಮಗುವಿಗೆ ಅಪ್ಪನಾಗುವುದೇ ಕಷ್ಟವಿರುವಾಗ ಹತ್ತು ಮಕ್ಕಳಿಗೆ ಒಬ್ಬನೇ ವ್ಯಕ್ತಿ ಅದ್ಹೇಗೆ ಸಮರ್ಥ ತಂದೆಯಾಗಬಲ್ಲ? ಹತ್ತು ಮಕ್ಕಳಲ್ಲಿ ಯಾವ ಮಗು ತಾನೆ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಅಂತ ಹೆಮ್ಮೆಯಿಂದ ಹೇಳಬಹುದು?

ಈ ಸಮಸ್ಯೆ ಕೇವಲ ಹತ್ತು ಮಕ್ಕಳಿರುವ ಕುಟುಂಬದಲ್ಲಿಯೇ ಇರಬೇಕು ಎಂದೇನಿಲ್ಲ. ಎಷ್ಟೋ ಉಳ್ಳವರ ಮನೆಗಳಲ್ಲಿಯೇ, ಒಂದೇ ಮಗು ಇರುವ ಕುಟುಂಬದಲ್ಲಿ ಕೂಡ ಆ ಒಂಟಿ ಮಗು ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳುವ ಪರಿಸ್ಥಿತಿಯಿಲ್ಲ.

ಕೆಲ ವರ್ಷಗಳ ಹಿಂದೆ ಜೋಕೊಂದು ಪ್ರಚಲಿತದಲ್ಲಿತ್ತು. ವಿದೇಶದಲ್ಲಿ ತಂದೆಯಾದವನು ಎಷ್ಟು ಬಿಝಿಯಾಗಿರುತ್ತಾನೆಂದರೆ, ವೀಕೆಂಡ್ ಗಳಲ್ಲಿ ಆತ ಮನೆಗೆ ಬಂದಾಗ ಆತನ ಮಗ ತನ್ನ ತಾಯಿಗೆ “ಮಮ್ಮಿ, ಸಮ್ ಅಂಕಲ್ ಹ್ಯಾಸ್ ಕಮ್” ಎಂದು ಹೇಳುತ್ತಾನೆ ಅಂತ. ಆದರೆ ಈ ಜೋಕ್ ಇದೀಗ ನಮ್ಮಲ್ಲಿನ  ಸಾಕಷ್ಟು ಕುಟುಂಬಗಳಲ್ಲಿ ಘಟಿಸಿಬಿಡುವ ಆತಂಕ ಎದುರಾಗಿದೆ. ಮಗು ತನ್ನ ತಂದೆಗೆ ಅಂಕಲ್ ಎಂದು ಹೇಳದಿದ್ದರೂ, ತಂದೆ ಮಕ್ಕಳ ನಡುವಿನ ಸಂಬಂಧದ ರೇಷ್ಮೆ ದಾರಗಳು ಲಡ್ಡಾಗುತ್ತಿವೆ.

ಅಪ್ಪನಾದನವ ಪಾತ್ರ, ಜವಾಬ್ದಾರಿ, ಹರವು, ವಿಸ್ತಾರ, ಇಂದು ತೀರ ಹೆಚ್ಚಿದೆ. ಅಪ್ಪ ಇಂದು ಕೇವಲ ಅಪ್ಪನಾಗಿ ಉಳಿಯದೇ ಅಮ್ಮನ ಪಾತ್ರವನ್ನೂ ನಿರ್ವಹಿಸುತ್ತಿದ್ದಾನೆ. ಹಾಗೆ ನೋಡಿದರೆ, ಅಮ್ಮನಾದವಳು ಕೂಡ ಅಪ್ಪನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಬಿಡಿ. ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಭಾಗಶಃ ಎಲ್ಲ ಅಮ್ಮಂದಿರಿಗೂ ಅಪ್ಪನ ಪಾತ್ರವನ್ನು ನಿರ್ವಹಿಸುವದು ಸಾಧ್ಯ. ಆ ಅರ್ಹತೆ, ಸಾಮರ್ಥ್ಯ, ಅಡಾಪ್ಟೆಬಿಲಿಟಿ, ಎಲ್ಲ ಸ್ತ್ರೀಯರಲ್ಲಿದೆ. ಆದರೆ ಪುರುಷರಲ್ಲಿ? ಪುಟ್ಟ ಮಗುವೊಂದರ ಚಡ್ಡಿ ಬದಲು ಮಾಡಬೇಕೆಂದರೂ ಹಲವು ಅಪ್ಪಂದಿರಿಗೆ ಕುತ್ತಿಗೆಗೆ ಬಂದು ಬಿಡುತ್ತದೆ. ಇನ್ನು ಮಗುವಿಗೆ ಒಂದು, ಎರಡು ಮಾಡಿಸುವುದಂತೂ ದೂರ ಉಳಿಯಿತು. ಎಲ್ಲ ಅಪ್ಪಂದಿರೂ ಇದನ್ನು ಮಾಡಲೇಬೇಕೆಂದಿಲ್ಲ. ಹಲವರಿಗೆ ಇದನ್ನು ಮಾಡಲೇಬೇಕಾದ ಅನಿವಾರ್ಯತೆ ಕೂಡ ಇರಲಾರದು.

ಆದರೆ ಅಪ್ಪನಾದವನು ಅಮ್ಮನಾಗುವುದರಲ್ಲಿ ಇರುವ ಸುಖವೇ ಬೇರೆ. ಆ ಮಜವನ್ನು ಅನುಭವಿಸಿದ ಅಪ್ಪಂದಿರಿಗೇ ಗೊತ್ತು, ಆ ಸುಖ ಎಂತಹುದೆಂದು. ಮಕ್ಕಳಿಗೆ ಇನ್ಶೂರೆನ್ಸ್ ಮಾಡಿಸುವುದು, ನೋಟ್ ಪುಸ್ತಕ, ಪೆನ್ನು, ಪಾಟಿಚೀಲ (ಈಗಿನ ಮಕ್ಕಳು ಪಾಟಿ ಬಳಸದೇ ಇರುವುದರಿಂದ ಸ್ಕೂಲ್ ಬ್ಯಾಗ್ ಅನ್ನೋಣವೇ?), ಹೊತ್ತಿಗೆ ಸರಿಯಾಗಿ ಊಟ, ಬಟ್ಟೆ, ವಸತಿ ಒದಗಿಸಿಬಿಟ್ಟರೆ ಅಲ್ಲಿಗೆ ಅಪ್ಪನ ಜವಾಬ್ದಾರಿ ಮುಗಿದುಹೋಯಿತೆ? ಅನೇಕ ಅಪ್ಪಂದಿರು ಇವಿಷ್ಟನ್ನೇ ತಮ್ಮ ಜವಾಬ್ದಾರಿಯೆಂದು ತಿಳಿದುಕೊಂಡಿರುವುದು ಆಘಾತಕಾರಿ. ಮಗು ಒಂದಾ ಮಾಡಿದರೆ, ಆರಾಮವಾಗಿ ಟಿವಿ ನೋಡುತ್ತ, ಚಿಪ್ಸ್ ಮೆಲ್ಲುತ್ತ ಕುಳಿತಿರುವ ಗಂಡ, ಹೆಂಡತಿಯನ್ನು ಕರೆದು “ನೋಡೇ, ಪುಟ್ಟ ಒಂದಾ ಮಾಡಿದೆ. ಒರಸೂ ಒಂಚೂರು” ಎಂದು ಹೇಳುವುದು, ಹಾಗೆಯೇ ಅಡಿಗೆ ಮನೆಯಲ್ಲಿ ದುಡಿದುಡಿದು ಹೈರಾಣಾಗಿರುವ ಹೆಂಡತಿ ಒದ್ದೆ ಕೈಯನ್ನು ಒರೆಸಿಕೊಳ್ಳುತ್ತ ಬಂದು ಪುಟ್ಟನ ಒಂದಾ ಒರೆಸಿ, ಚಡ್ಡಿ ಬದಲಿಸುವುದು – ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಮಕ್ಕಳಿಗೆ ಸ್ನಾನಮಾಡಿಸುವುದು, ತುತ್ತು ತಿನ್ನಿಸುವುದು, ತಲೆ ಬಾಚುವುದು, ಬ್ರಷ್ ಮಾಡಿಸುವುದು, ಎಲ್ಲವೂ ತಾಯಿಯೇ. ಆದರೆ ವೈದ್ಯರ ಪ್ರಕಾರ ಮಗುವಿನ ಬೆಳವಣಿಗೆಯಲ್ಲಿ ‘ಸ್ಪರ್ಶ’ ಮಹತ್ವದ ಪಾತ್ರವಹಿಸುತ್ತದೆ. ಈ ಸ್ಪರ್ಶವೇ ವಾಸ್ತವವಾಗಿ ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಪ್ರೀತಿಯಿಂದ ಮಗುವನ್ನು ಸ್ಪರ್ಶಿಸಿದಾಗ ಸ್ವಾಭಾವಿಕವಾಗಿಯೇ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಾಯಮಾಡಿದಂತಾಗುತ್ತದೆ. ಮಗುವನ್ನೇ ಸ್ಪರ್ಶಿಸದಿರುವ ತಂದೆ ಯಾವುದೇ ರೀತಿಯಲ್ಲಿಯೂ ಆ ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಾರ. ಆತ ಸಮಾಜದಲ್ಲಿ ಓರ್ವ ಜವಾಬ್ದಾರಿಯುತ ಅಪ್ಪ ಎನಿಸಿಕೊಳ್ಳಬಹುದು. ಆದರೆ ಮಗುವಿನ ಮನಸ್ಸಿನ ಮೂಲೆಯಲ್ಲೆಲ್ಲೋ ಅಪ್ಪನ ಕುರಿತಂತೆ ಒಂದು ಅಂತರ ಉಳಿದುಕೊಂಡುಬಿಡುತ್ತದೆ. ಈ ಅಂತರವೇ ಮುಂದೆ ಮಗ ದೊಡ್ಡವನಾಗಿ ಕಾಲೇಜು ಮೆಟ್ಟಿಲೇರಿದಾಗ ಸ್ಲಾಮ್ ಬುಕ್ ಗಳ ‘ಮೈ ಎನಿಮಿ’ ಕಾಲಂನಲ್ಲಿ ‘ಮೈ ಫಾದರ್’ ಎಂದು ತುಂಬುವಂತೆ ಮಾಡುತ್ತದೆ. ಹೀಗಾಗಿ ಅಪ್ಪನಿಗೆ ಅಗತ್ಯ ಇರಲಿ, ಇಲ್ಲದಿರಲಿ ಆತ ತಾಯಿಯ ಪಾತ್ರವನ್ನೂ ನಿರ್ವಹಿಸಿದರೆ ಮಗು ನಿಜವಾಗಿಯೂ ಮೈ ಡ್ಯಾಡಿ ಸ್ಟ್ರಾಂಗೆಸ್ಟ್ ಎಂದು ಹೇಳಬಹುದು.

ಈ ಹಿಂದೆ ಅಪ್ಪ ನಿಜವಾಗಿಯೂ ಭಯ ಹುಟ್ಟಿಸುವ, ಶಿಕ್ಷಿಸುವ, ತಪ್ಪು ಮಾಡಿದಾಗ ನಾಲ್ಕು ಬಾರಿಸುವ, ತನ್ನ ಮಗನನ್ನೇ ‘ಮಂಗ್ಯಾನ ಮಗನೇ’ ಎಂದು ಬೈಯುವುದುಕ್ಕಷ್ಟೇ ಸೀಮಿತನಾಗಿದ್ದ. ಆದರೆ ಇದನ್ನೆಲ್ಲ ಮಾಡುತ್ತಿದ್ದ ಅಪ್ಪ ಒಳಗಿನಲ್ಲಿ ಕರುಣಾಮಯಿಯೇ ಆಗಿರುತ್ತಿದ್ದ. ಸಡಿಲ ಬಿಟ್ಟರೆ ಎಲ್ಲಿ ಮಗ ಹಾಳಾಗಿಬಿಡುತ್ತಾನೋ ಎಂಬ ಆತಂಕ ಅಪ್ಪನನ್ನು, ಸದಾ ಗಂಟು ಮೂತಿ ಹಾಕಿಕೊಂಡು, ಒಂದು ಕೈಯಲ್ಲಿ ಬರಲು ಮತ್ತೊಂದು ಕೈಯಲ್ಲಿ ಮಗನ ಪ್ರೋಗ್ರೆಸ್ ರಿಪೋರ್ಟ್ ಹಿಡಿದುಕೊಂಡು ಮಗ ಮನೆಗೆ ಬಂದಕೂಡಲೆ ಆತನಿಗೆ ಹೊಡೆಯಲು ಸನ್ನದ್ಧನಾಗಿಯೇ ನಿಂತಿರುವಂತೆ ಮಾಡುತ್ತಿತ್ತು. ಕುಂ. ವೀರಭದ್ರಪ್ಪನನವರ ಆತ್ಮಕಥೆ ‘ಗಾಂಧಿ ಕ್ಲಾಸು’ ನಲ್ಲಿ ಅವರು ತಮ್ಮ ತಂದೆಯನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆಂದರೆ, ಆ ತಂದೆ ಹಿಂದಿನ ಕಾಲದ ಎಲ್ಲ ತಂದೆಯರ ಪ್ರತಿನಿಧಿಯಂತೆ ನಮಗೆ ತೋರುತ್ತಾರೆ. ಕುಂವಿ ತಂದೆಯ ಬಗ್ಗೆ ನಮಗೆ ನಿಜಕ್ಕೂ ಗೌರವ ಭಾವನೆ ಮೂಡತ್ತದೆ. ಹೊಡೆಯುವ, ಶಿಕ್ಷಿಸುವ ತಂದೆಯನ್ನೇ ಮುಂದೆ ಮಗ ದೊಡ್ಡವನಾದ ಮೇಲೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅಪ್ಪ ತನ್ನ ಒಳ್ಳೆಯದಕ್ಕಾಗಿಯೇ ಹೀಗೆ ಮಾಡಿದ್ದು ಎಂದು ಮಗನಿಗೂ ಗೊತ್ತಿರುತ್ತಿತ್ತು. ಮನೆಯಲ್ಲಿ ನಾಲ್ಕು ಮಕ್ಕಳಿದ್ದರೆ ನಾಲ್ಕೂ ಮಕ್ಕಳಿಗೆ ಒಟ್ಟಿಗೆ ಒಂದೇ ಬಣ್ಣದ ಜವಳಿ ತೆಗೆದುಕೊಂಡು ಬಂದು, “ಸ್ವಲ್ಪ ದೊಡ್ಡದಾಗಿಯೇ ಹೊಲಿಯಪ್ಪ. ಬೆಳೆಯುವ ಹುಡುಗರು” ಎಂದು ಸಿಂಪಿಗೆ ಹೇಳಿ ಅಸಡ್ಡಾಳ ದೊಗಳೆ ಚಡ್ಡಿಗಳನ್ನು ಹೊಲಿಸಿಕೊಂಡು ಬರುತ್ತಿದ್ದ ಅಪ್ಪ, ಅಂದಿನ ಮಕ್ಕಳಿಗೆ ಅಚ್ಚುಮೆಚ್ಚಿನವನಾಗಿರುತ್ತಿದ್ದ. ‘ಮೈ ಆಟೋಗ್ರಾಫ್’ ಚಿತ್ರದಲ್ಲಿ ಹತ್ತನೇ ಕ್ಲಾಸಿನ ಹುಡುಗ ತಂದೆಯ ಕ್ಷೌರದಲಗನ್ನು ಬಳಸಿದಾಗ ತಂದೆ ಮಗನನ್ನು “ಓಹೋ ದೋಡ್ಡೋವ್ನಾಗಿ ಬಿಟ್ಯೇನೋ…ಕತ್ತೆ ಭಡವ” ಎಂದು ಬೈಯ್ಯುತ್ತ ಕೋಲು ತೆಗೆದುಕೊಂಡು ಮಗನಿಗೆ ಬಾರಿಸುತ್ತಾನೆ. ಆದರೆ ಅಂತಹ ತಂದೆಯೇ ಮುಂದೆ ಅದೇ ಮಗನಿಗೆ ಆತ್ಮೀಯ ಗೆಳೆಯನಾಗುತ್ತಾನೆ.

ಆದರೆ ವಿಚಿತ್ರ ನೋಡಿ, ಇಂದು ಮಗುವಿಗೆ ಎಲ್ಲ ಸೌಲಭ್ಯಗಳನ್ನು ತಂದುಕೊಡುವ ಅಪ್ಪಂದಿರ ‘ಉದಯ’ವಾಗಿದ್ದರೂ ವೃದ್ಧಾಶ್ರಮಗಳ ಸಂಖ್ಯೆ ಏರಿದೆ. ಅಲ್ಲಿ ಸೇರಿಸಲ್ಪಡುತ್ತಿರುವ ಅಪ್ಪ-ಅಮ್ಮಂದಿರ ಸಂಖ್ಯೆಯೂ ಏರುತ್ತಿದೆ. ವೃದ್ಧಾಶ್ರಮದಲ್ಲಿರುವ ಒಬ್ಬೊಬ್ಬ ಅಜ್ಜ-ಅಜ್ಜಿಯರ ಕಥೆ ಕೇಳಿದರೆ ಮನುಷ್ಯತ್ವ, ಮಾನವೀಯತೆಯ ಬಗ್ಗೆ ನಂಬಿಕೆಯೇ ಹೊರಟುಹೋಗುತ್ತದೆ. ಹಾಗಾದರೆ ಇಂತಹ ಸ್ಥಿತಿ ಏಕೆ ನಿರ್ಮಾಣವಾಗಿದೆ? ಲಕ್ಷ ಲಕ್ಷ ಗಳಿಸುವ ಮಕ್ಕಳು ಏಕೆ ತಮ್ಮ ಅಪ್ಪನನ್ನೋ-ಅಮ್ಮನನ್ನೋ ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ? ಇದು ಮಕ್ಕಳನ್ನು ಸರಿಯಾಗಿ ಬೆಳೆಸದಿರುವ ಪರಿಣಾಮವೇ? ಅಥವಾ ವೃದ್ಧಾಶ್ರಮಗಳು ಈ ಕಾಲದ, ಬದಲಾದ ಸನ್ನಿವೇಶದ, ಬದಲಾದ ಪರಿಸ್ಥಿತಿಯ ಅನಿವಾರ್ಯ ಅವಿಭಾಜ್ಯ ಅಂಗಗಳೇ?

ಒಂದಂತೂ ಸತ್ಯ. ಅಪ್ಪನ ಜವಾಬ್ದಾರಿ ಕೇವಲ ಭೌತಿಕ ಸಂಗತಿಗಳ ಪೂರೈಕೆಗಷ್ಟೇ ಮುಕ್ತಾಯವಾಗುವುದಿಲ್ಲ. ಒಳಗೆ ಪ್ರೀತಿಯಿಟ್ಟುಕೊಂಡು ಬಾಹ್ಯದಲ್ಲಿ ಬರಲು ಹಿಡಿದು ಶಿಕ್ಷಿಸುವುದು ಇಂದಿನ ಪರಿಸ್ಥಿತಿಗೆ ಹೊಂದುವುದೂ ಇಲ್ಲ. ಏಕೆಂದರೆ ಮಕ್ಕಳ ರಕ್ಷಣೆಗೆಂದು ಮಾನವ ಹಕ್ಕು ಆಯೋಗಗಳಿವೆ, ಸರ್ಕಾರೇತರ ಸಂಸ್ಥೆಗಳಿವೆ. ಹಾಗೆಂದು ಹೇಳಿ, ಮಗ ಹಟ ಮಾಡುತ್ತಾನೆಂದು ಅದನ್ನು ಸಮಾಧಾನಪಡಿಸಲೊಸುಗ ಬೇಕುಬೇಕೆಂದಾಗಲೆಲ್ಲ ಪಿಝಾ ತಿನ್ನಿಸಿದರೆ, ಆತ 12-13 ವರ್ಷಕ್ಕೆಲ್ಲ 70 ಕೆಜಿ ತೂಗುತ್ತಾನೆ. ಅದನ್ನು ಕಡಿಮೆ ಮಾಡುವ ಜವಾಬ್ದಾರಿ ಅಪ್ಪನೇ ಹೊರಬೇಕಾಗುತ್ತದೆಯೇ ಹೊರತು, ಮಾನವ ಹಕ್ಕುಗಳ ಆಯೋಗ ಅಥವಾ ಸರ್ಕಾರೇತರ ಸಂಸ್ಥೆ ಸಹಾಯಕ್ಕೆ ಬರುವುದಿಲ್ಲ! ಇಂದಿನ ಕಾಲದ ಅಪ್ಪಂದಿರು ತೀರ ಸೂಕ್ಷ್ಮವಾಗಿ ತಮ್ಮ ಕಾಯಿಯನ್ನು ಚಲಿಸಬೇಕಾಗಿದೆ. ಒಂದು ಗುಲಗುಂಜಿ ಬಿದ್ದರೆ ಹೆಚ್ಚಾಯಿತು, ತೆಗೆದರೆ ಕಮ್ಮಿಯಾಯಿತು ಎಂಬಂತಹ ಪರಿಸ್ಥಿತಿ. ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನಭವತಿ ಎಂಬುದು ಮಕ್ಕಳಿಗೂ ಗೊತ್ತು. ಹೀಗಾಗಿ ಅಪ್ಪನ ಮೇಲೆ ಗೂಬೆ ಕೂರಿಸುವುದು ಸುಲಭ ಕೂಡ. ಬೆಳೆದ ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆಂದು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದರೆ, ಮುದುಕರಾದಾಗ ತಮ್ಮ ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದೆಂದರೆ, ಇಂದಿನ ಅಪ್ಪ ‘ದೇವೋಭವ’ ಆಗಬೇಕೆಂದೇನಿಲ್ಲ. ಬರೀ “ಅಪ್ಪ” ನಾದರೆ ಅಷ್ಟೇ ಸಾಕು.

(ಈ ಬಾರಿಯ ಉತ್ಥಾನ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ)

ನಾನು ರಕ್ತ ದಾನ ಮಾಡಿದೆ

ಮೊನ್ನೆ 14 ನೇ ತಾರೀಕು ನಾನು ರಾಷ್ಟ್ರೋತ್ಥಾನ ರಕ್ತ ನಿಧಿಯಲ್ಲಿ 400 ಎಂಎಲ್  ರಕ್ತ ನೀಡಿದೆ. ತುಂಬಾ ಖುಷಿಯಾಯಿತು.

ರಕ್ತ ನೀಡಿದ ಬಳಿಕ ನೀಡಲಾದ ಸರ್ಟಿಫಿಕೆಟ್

ನ್ಯೂಸ್ ಪಿಂಟ್ ಪುಸ್ತಕದ ಮುಖಪುಟ ಹೀಗಿದೆ

ಮುಖಪುಟ ವಿನ್ಯಾಸ – ಪ. ಸ. ಕುಮಾರ್

ಯೆಂಗೈತೆ ಪಿಂಟು?

ಬ್ರೇಕಿಂಗ್ ನ್ಯೂಸ್ – ನನ್ನ ಪುಸ್ತಕ ಬಿಡುಗಡೆ ಜೂನ್ 12 ರಂದು

ನನ್ನ ಪುಸ್ತಕ ನ್ಯೂಸ್ ಪಿಂಟ್ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಭಾನುವಾರ ದಿನಾಂಕ 12 ಜೂನ್, 2011 ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪುಸ್ತಕ ಬಿಡುಗಡೆ. ತಮಗೆ ಆತ್ಮೀಯವಾದ ಸ್ವಾಗತ. ಅಂದು ನಿಮ್ಮೆಲ್ಲರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ಖಂಡಿತ ಬನ್ನಿ.

ಬನ್ನಿ ಭೇಟಿಯಾಗೋಣ, ಮಾತಾಡೋಣ...