‘ಉದಯವಾಣಿ’ಯಲ್ಲಿ ‘ಕಂಪೌಂಡ್ ದೇವರು’

ಭಾನುವಾರದ ಉದಯವಾಣಿಸಾಪ್ತಾಹಿಕ ಸಂಪದದಲ್ಲಿ ನನ್ನ ಕಥೆ ಕಂಪೌಂಡ್ ದೇವರು ಪ್ರಕಟವಾಗಿದೆ. ಓದಿಗಾಗಿ ಕಥೆಯ ಮೇಲೆ ಕ್ಲಿಕ್ ಮಾಡಿ.

1 2

 

 

‘ಉದಯವಾಣಿ’ಯಲ್ಲಿ ನನ್ನ ಕಥೆ ‘ಓ ಧನಾತ್ಮಕ’

...

ಇಂದಿನ ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿರುವ ನನ್ನ ಕಥೆ ‘ಓ ಧನಾತ್ಮಕ

ಕಥೆ ಇಲ್ಲಿದೆ….

ಸಮಾಹಿತ ಹಾಗೂ ಸುಗುಣಿಗೆ ಸಾಕಾಗಿ ಬಿಟ್ಟಿತ್ತು. ಮೊದಮೊದಲು ಅದನ್ನೆಲ್ಲ ತುಂಬಾ ಲಘುವಾಗಿ ತೆಗೆದುಕೊಂಡಿದ್ದರು. ಇತ್ತೀಚೆಗೆ ನೀರು ಮೂಗಿನ ಮಟ್ಟಕ್ಕೆ ಬಂದಿತ್ತು. ದಿನಾಗ್ಲೂ ಸುಮಿತ್ರಮ್ಮನ ಅದೇ ಮಾತು ಕೇಳಿ ಕೇಳಿ ತಲೆ ಚಿಟ್ಟುಹಿಡಿದು, ತಾವು ನಿತ್ಯವೂ ಇಂಪೋರ್ಟೇಡ್ ಶ್ಯಾಂಪೂ ಹಾಕಿ ತೊಳೆಯುವ, ಫಳಫಳ ಹೊಳೆಯುವ, ರೇಷ್ಮೆಯಂತಹ ಕೂದಲುಗಳು ಉದುರಿಬಿಡುತ್ತವೆಯೋ ಎಂದು ಇಬ್ಬರಿಗೂ ಆತಂಕ ಶುರುವಾಗಿತ್ತು. ಮೊನ್ನೆ ಸಮಾಹಿತನ ತಲೆಯಲ್ಲಿ ಬೆಳ್ಳಿ ಕೂದಲೊಂದನ್ನು ನೋಡಿ ಹೌಹಾರಿದ್ದ ಸುಗುಣಿ, ತನ್ನ ಗಂಡನ ಶೀರ್ಷದಲ್ಲಿನ ಈ ಬೆಳ್ಳಿ ಕೂದಲಿನ ಚೊಚ್ಚಲ ಜನನಕ್ಕೆ ಸುಮಿತ್ರಮ್ಮನ ಕಿರುಕುಳವೇ ಕಾರಣ ಎಂದು ನಿರ್ಧರಿಸಿಬಿಟ್ಟಿದ್ದಳು. ತನ್ನ ತಲೆಯಲ್ಲಿ ಬೆಳ್ಳಿ ಕೂದಲಿನ ಬಾಣಂತನ ಮಾಡಲು ಇಷ್ಟವಿಲ್ಲದ ಆಕೆಗೆ, ಈ ಸಮಸ್ಯೆಗೆ ಉಪಾಯ ಹುಡುಕಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು. ಆದರೆ ಏನೇ ಮಾಡಿದರೂ ಈ ಸಮಸ್ಯೆಯಿಂದ ಪಾರಾಗುವ ಬಗ್ಗೆ ಮಾತ್ರ ದಂಪತಿಗಳು ‘ದಂ’ ಬರುವವರೆಗೆ ಯೋಚಿಸಿದರೂ ಗೊತ್ತಾಗಿರಲಿಲ್ಲ. ಒಟ್ಟಿನಲ್ಲಿ ಆಡುವ ಹಾಗಿಲ್ಲ, ಅನುಭವಿಸುವ ಹಾಗಿಲ್ಲ ಅನ್ನೋ ಪರಿಸ್ಥಿತಿ.

ಆಗಿದ್ದಿಷ್ಟೇ….ಸಮಾಹಿತ ಹಾಗೂ ಸುಗುಣಿ ಮದುವೆಯಾಗಿ, ಮೊದಲ ಮಹಡಿಯಲ್ಲಿದ್ದ ಈ ಹೊಸ ಮನೆಗೆ ಬಾಡಿಗೆಗೆ ಬಂದು ಆರು ತಿಂಗಳು ಕಳೆದಿತ್ತು. ಬಾಡಿಗೆ ಮನೆಯನ್ನು ತೋರಿಸಲು ಬ್ರೋಕರ್ ಕರೆದುಕೊಂಡು ಬಂದಾಗ ಇಬ್ಬರಿಗೂ ಮನೆ ತುಂಬಾ ಇಷ್ಟವಾಗಿಬಿಟ್ಟಿತ್ತು. ಜೊತೆಗೆ ಬ್ರೋಕರ್ ಎಂಬ ಮನೆಮುರುಕನ ಹಿಂದೆ ನಾಲ್ಕು ದಿನಗಳಿಂದ ಮನೆ ಬಾಡಿಗೆ ಮನೆ ನೋಡಲು ಸುತ್ತಾಡಿದ್ದರಿಂದ, ಇನ್ನೂ ಹೆಚ್ಚು ಮನೆಗಳನ್ನು ನೋಡುವ ತ್ರಾಣವಾಗಲಿ, ಸಮಯವಾಗಲಿ ಇಬ್ಬರಿಗೂ ಇರಲಿಲ್ಲ. ಹೀಗಾಗಿ ಇದೇ ಮನೆಯನ್ನು ಬಾಡಿಗೆಗೆ ಹಿಡಿಯುವುದೆಂದು ನಿರ್ಧರಿಸಿದರು.  ಓನರ್ ಜೊತೆ ಮಾತನಾಡಲು ಕುಳಿತಾಗಲಂತೂ, ಓನರ್ ಗೋಪಾಲಯ್ಯ ಹಾಗೂ ಅವರ ಧರ್ಮಪತ್ನಿ ಸುಮಿತ್ರಮ್ಮ ತುಂಬ ಪ್ರೀತಿಯಿಂದ ಮಾತನಾಡಿಸಿದರು. ಗೋಪಾಲಯ್ಯನವರ ಮನೆಯ ಟೀಪಾಯ್ ಮೇಲಿದ್ದ ಒಂದು ಇಂಗ್ಲೀಷ್, ಒಂದು ಕನ್ನಡ ದಿನಪತ್ರಿಕೆ, ಕನ್ನಡದ ಎರಡು ಪ್ರಮುಖ ವಾರ ಪತ್ರಿಕೆಗಳು, ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಖ್ಯಾತ ಸಾಹಿತಿಯೊಬ್ಬರ ಬೋಗಸ್ ಕಾದಂಬರಿ –ಈ ಎಲ್ಲ ಪರಮೋಚ್ಚ ಕನ್ನಡ ಸಾಹಿತ್ಯವು ಓನರ್ ಸಾಕಷ್ಟು ಓದಿಕೊಂಡವರು ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. ಗೋಪಾಲಯ್ಯ ಮನೆಮುರುಕನಿಗೆ ಬಾಡಿಗೆ ಮನೆಯ ಕೀ ಕೊಡದೆ, ಹಸಿರು ಕ್ರಾಂತಿ ಆದಾಗ ಭಾರತದಲ್ಲಿ ಬಂದ ಬಂಪರ್ ಬೆಳೆಯನ್ನು ನೆನಪಿಸುವ ತಮ್ಮ ಎದೆಯ ಮೇಲಿನ ಕಪ್ಪು-ಬಿಳಿ ಮಿಶ್ರಿತ ಕೂದಲುಗಳನ್ನು ಪ್ರದರ್ಶಿಸುತ್ತ, ಗುಂಡುಗುಂಡಾದ ಶರೀರವನ್ನು ಹೊತ್ತುಕೊಂಡು ದುಡುದುಡು ಫಸ್ಟ್ ಫ್ಲೋರ್ ಗೆ ಹೋಗಿ, ಇಡೀ ಮನೆಯಲ್ಲಿ ಅಡ್ಡಾಡಿ ದಂಪತಿಗಳಿಗೆ ಮನೆ ತೋರಿಸಿದ್ದರು. ಮನೆಯಲ್ಲಿ ಯಥೇಚ್ಛವಾಗಿದ್ದ ಗಾಳಿ ಬೆಳಕು, ಮನೆಯ ಲೊಕೇಷನ್ ಎಲ್ಲವೂ ತುಂಬಾ ಚೆನ್ನಾಗಿತ್ತು. ಕೆಳಗೆ ಓನರ್, ಮೇಲೆ ಬಾಡಿಗೆದಾರರು. ಕಾವೇರಿ ಕನೆಕ್ಷನ್ ಜೊತೆಗೆ ಬೋರ್ವೆಲ್ ನೀರು. ಪ್ರತ್ಯೇಕ ಮೀಟರ್. ವಿಶಾಲವಾದ ಟೆರೆಸ್…..ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಎಲ್ಲರೂ ಮನೆ ನೋಡಿಕೊಂಡು ಕೆಳಗೆ ಬರುವಷ್ಟರಲ್ಲಿ ಗೋಪಾಲಯ್ಯನವರ ಧರ್ಮಪತ್ನಿ ಮಾ.ಸ.ಸೌ. (ಮಾತೋಶ್ರಿ ಸಮಾನರಾದ ಸೌಭಾಗ್ಯವತಿ ಅಲ್ಲ, ಮಾತಿನಿಂದ ಸಡ್ಡುಹೊಡೆಯುವ ಸೌಭಾಗ್ಯವತಿ) ಸುಮಿತ್ರಮ್ಮ ಬೆಳ್ಳಿ ಬಟ್ಟಲನ್ನು ನಾಚಿಸುವ ಸ್ಟೀಲ್ ಬಟ್ಟಲುಗಳಲ್ಲಿ ಎಲ್ಲರಿಗೂ ಬಿಸಿ ಬಿಸಿ ಕಾಫಿ ತಂದಿರಿಸಿದ್ದರು. ಕಾಫಿ ಹೀರುತ್ತ ಬಾಡಿಗೆ ವಿಷಯ ಚರ್ಚೆಯಾಯಿತು.

“ಒಂಭತ್ತೂವರೆ ಸಾವಿರ ರೂಪಾಯಿ, ಹತ್ತು ತಿಂಗಳ ಬಾಡಿಗೆ ಅಡ್ವಾನ್ಸ್” ಗೋಪಾಲಯ್ಯ ಹೇಳಿದರು.

“ಸಾರ್, ನಾವು ಈಗಷ್ಟೇ ಮದುವೆಯಾಗಿದ್ದೇವೆ. ನಿಮಗೂ ಗೊತ್ತು….ಆರಂಭದಲ್ಲಿ ಸಂಸಾರ ಎಷ್ಟು ಕಷ್ಟ ಅಂತ. ಹೀಗಾಗಿ ಎಂಟೂವರೆ ಸಾವಿರ, ಹತ್ತು ತಿಂಗಳ ಬಾಡಿಗೆಯಾದರೆ ನಮಗೆ ಅನುಕೂಲವಾಗುತ್ತಿತ್ತು” ಎಂದ ಸಮಾಹಿತ. ಗೋಪಾಲಯ್ಯ ಏನೋ ಮಾತಾಡಬೇಕು ಅನ್ನುವಷ್ಟರಲ್ಲಿ ಮತ್ತೆ ಮಾ.ಸ.ಸೌ ಅವರು ಮಧ್ಯೆಯೇ ಮೂಗು ತೂರಿಸಿ “ನಮ್ದೂ ಬೇಡ. ನಿಮ್ದೂ ಬೇಡ. ಒಂಬತ್ತು ಸಾವಿರ. ಹತ್ತು ತಿಂಗಳ ಅಡ್ವಾನ್ಸ್. ಆಗ್ಬಹುದಾ?” ಅಂದರು. ಸಮಾಹಿತ-ಸುಗುಣಿಗೂ ಅಷ್ಟೇ ಬೇಕಾಗಿತ್ತು. ಇನ್ನೇನು ಟೋಕನ್ ಅಡ್ವಾನ್ಸ್ ಕೊಡಬೇಕು ಅನ್ನುವಷ್ಟರಲ್ಲಿ ಥಟ್ಟನೆ ಸುಮಿತ್ರಮ್ಮ ಕೇಳಿದ ಪ್ರಶ್ನೆಗೆ ಸಮಾಹಿತ ಬೆಚ್ಚಿದ್ದ.

“ಅಂದಹಾಗೆ, ನಿಮ್ಮದು ಯಾವ ಕಡೆ?”

ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಸಮಾಹಿತನಿಗೆ ಗೊತ್ತಾಗಲಿಲ್ಲ. ಮೇಡಂ ತಮ್ಮ ಊರು ಕೇಳುತ್ತಿದ್ದಾರೋ, ಜಾತಿ ಕೇಳುತ್ತಿದ್ದಾರೋ, ಅಥವಾ ಬೇರೆನನ್ನೋ ಕೇಳುತ್ತಿದ್ದಾರೋ ತಿಳಿಯದೆ ಗೊಂದಲಕ್ಕೊಳಗಾದ. ರಕ್ಷಣಾತ್ಮಕವಾಗಿ ಆಡಲು ನಿರ್ಧರಿಸಿದವನೇ, “ನಮ್ಮದು ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ವಡಗಾಂವ್ ಬುದ್ರುಕ್ ಊರು” ಎಂದಿದ್ದ.

“ಛೆ ಛೆ ನಾನು ಊರು ಕೇಳ್ಳಿಲ್ಲ…..ಅಂದ್ರೆ ನೀಮ್ಮದು ಯಾವ ಕಮ್ಯುನಿಟಿ ಅಂತ?” ಎಂದು ರಾಗವಾಗಿ, ಕನ್ನಡದ ಖ್ಯಾತ ಸೀರಿಯಲ್ ಒಂದರಲ್ಲಿನ ಪೆದ್ದು ಶಾರದಮ್ಮನ ಪಾತ್ರ ಕೇಳುವ ಹಾಗೆ ತಾನ್ ಪುರಾ ಇಲ್ಲದೆ ರಾಗವಾಗಿ ಸುಮಿತ್ರಮ್ಮ ಕೇಳಿದರು.

ಸಮಾಹಿತ ಸುಲಭವಾಗಿ ಸುಳ್ಳು ಹೇಳಬಹುದಾಗಿದ್ದರೂ, ಆತನಿಗಾಗಲಿ ಸುಗುಣಿಗಾಗಲಿ ಸುಳ್ಳು ಹೇಳುವುದು ಇಷ್ಟವಿರಲಿಲ್ಲ. ಗೋಪಾಲಯ್ಯ-ಸುಮಿತ್ರಮ್ಮ ಸಾಕಷ್ಟು ಸಂಪ್ರದಾಯಸ್ಥರಂತೆ ಕಾಣುತ್ತಿದ್ದುದರಿಂದ ಅವರಿಂದ ಸತ್ಯ ಮುಚ್ಚಿಟ್ಟು ಚೀಟ್ ಮಾಡುವುದು ಬೇಡ ಅನ್ನಿಸಿತು.

“ನನ್ನದು ……………ಕಮ್ಯುನಿಟಿ. ಸುಗುಣಿಯದ್ದು…………….ಕಮ್ಯುನಿಟಿ. ನಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್” ಅಂದ..

“ಲವ್ ಮ್ಯಾರೇಜ್ಜಾ?” ಧಟ್ಟನೆ ಕೇಳಿದ್ದರು ಮಾ.ಸ.ಸೌ.

ಹೌದೆಂದು ಇಬ್ಬರೂ ತಲೆಯಾಡಿಸಿದರು. ತಮ್ಮದು ಇಂಟರ್ ಕಾಸ್ಟ್ ಮ್ಯಾರೇಜ್ ಅಂದ ತಕ್ಷಣ ಈ ಮನೆ ತಮ್ಮಿಂದ ಕೈಬಿಟ್ಟಿತು ಅಂದುಕೊಂಡಿದ್ದ ಸಮಾಹಿತ. ಏಕೆಂದರೆ ಈ ಹಿಂದೆ ಕೂಡ ನಾಲ್ಕೈದು ಕಡೆ ಮನೆ ಓನರ್ ಗಳು ಎಲ್ಲದಕ್ಕೂ ಒಪ್ಪಿ ಕೊನೆಗೆ ಇವರು ತಮ್ಮ ಕಮ್ಯುನಿಟಿಯಲ್ಲ ಎಂದ ತಕ್ಷಣ, ಏನೋ ಕಾರಣ ಹೇಳಿ ಮನೆ ಬಾಡಿಗೆಗೆ ನೀಡಿರಲಿಲ್ಲ. ಇಲ್ಲಿ ಮಾತ್ರ ನಡೆದದ್ದೇ ಬೇರೆ. ಸುಮಿತ್ರಮ್ಮ ಸರಿಯಾಗಿ ಹನ್ನೊಂದು ನಿಮಿಷ 21 ಸೆಕೆಂಡು 17 ಮೈಕ್ರೋ ಸೆಕೆಂಡು ಯಾರಿಗೂ ಮಧ್ಯ ಪ್ರವೇಶಿಸಲು ಅನುವಾಗದಂತೆ ನಿರಂತರವಾಗಿ, ಪಕ್ಕಾ ಪ್ರಗತಿಪರ ನಾಯಕರಂತೆ “ಜಾತಿಯೆಲ್ಲ ಮಿಥ್ಯ, ಮನುಷ್ಯತ್ವವೊಂದೇ ಸತ್ಯ, ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮನುಷ್ಯ ಜಾತಿ ತಾನೊಂದೇ ವಲಂ, ನೂರ ದೇವರನೆಲ್ಲ ನೂಕಾಚೆ ದೂರ, ತಮಗಂತೂ ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ,…”ಎಂದೆಲ್ಲ ಯದ್ವಾತದ್ವಾ ಮಾತಾಡಿ ನವದಂಪತಿಗಳಿಗೆ ಆನಂದವನ್ನುಂಟುಮಾಡಿದ್ದರು. ಅಂದೇ ಸಾಯಂಕಾಲ ರೆಂಟ್ ಅಗ್ರಿಮೆಂಟ್ ಗೆ ಸಹಿ ಬಿದ್ದಿತ್ತು. ಬ್ರೋಕರ್ ತನ್ನ ಹರುಕು ಮುರುಕು ಇಂಗ್ಲೀಷ್ ನಲ್ಲಿ ಕಾಗೆ ಕಾಲು ಗುಬ್ಬಿ ಕಾಲು ಕೆತ್ತಿ ಸಹಿ…….ಓ ಸಾರಿ……ಸಿಗ್ನೇಚರ್ ಮಾಡಿದ್ದ.

ಒಂದು ಶುಭ ದಿನ ಮಿನಿ ಲಾರಿಯೊಂದರಲ್ಲಿ ಎಲ್ಲ ಸಾಮಾನುಗಳನ್ನು ಹೊಸ ಮನೆಗೆ ಶಿಫ್ಟ್ ಮಾಡಲಾಯಿತು. ನೂತನ ದಂಪತಿಗಳ ಸಂಸಾರ ಶುರುವಾಯಿತು. ಸುಮಿತ್ರಮ್ಮ ಹಾಗೂ ಗೋಪಾಲಯ್ಯನವರಿಗೆ ಮಕ್ಕಳಿರಲಿಲ್ಲ ಎಂದು ನಿಧಾನವಾಗಿ ಸುಗುಣಿ-ಸಮಾಹಿತರಿಗೆ ತಿಳಿದಿತ್ತು. ಸುಮಿತ್ರಮ್ಮನೇ ಪರೋಕ್ಷವಾಗಿ ಈ ವಿಷಯ ತಿಳಿಸಿದ್ದರು. ಮಕ್ಕಳಿರುತ್ತಿದ್ದರೆ ಬಹುಶಃ ಸಮಾಹಿತ, ಸುಗುಣಿಯ ವಯಸ್ಸಿನವರೇ ಆಗಿರುತ್ತಿದ್ದರು. ಆದರೆ ಈಗ ಈ ಇಬ್ಬರೂ ಆ ಇಬ್ಬರಿಗೆ ಮಕ್ಕಳಂತಾಗಿದ್ದರು. ಮನೆಗ ಬಂದ ಎರಡನೆಯ ದಿನವೇ ತಮ್ಮನ್ನು ಸರ್ ಎಂದು ಕರೆಯದೆ ಅಂಕಲ್ ಹಾಗೂ ಆಂಟಿ ಎಂದು ಕರೆಯಬೇಕೆಂದು ಗೋಪಾಲಯ್ಯ ತಾಕೀತು ಮಾಡಿದ್ದರು. ತನ್ನ ಮನೆಯಲ್ಲಿ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಸುಗುಣಿಯನ್ನು ಆಕೆಯ ತಂದೆ, ತಾಯಿ, ಅಣ್ಣಂದಿರು, ನೆಂಟರು ಬಾಯಿಕಾಟು ಮಾಡಿದ್ದರು. ಹೀಗಾಗಿ ಆಕೆಯಂತೂ ಆಂಟಿ-ಅಂಕಲ್ ಎಂದು ಕರೆಯುವ ಬದಲಾಗಿ ಮಮ್ಮಿ-ಡ್ಯಾಡಿ ಎಂದು ಕರೆಯುವುದೊಂದು ಬಾಕಿಯಿತ್ತು. ಸುಗುಣಿ, ಸುಮಿತ್ರಮ್ಮನವರ ಜಾತಿಯವಳೇ ಆಗಿದ್ದ ಕಾರಣ ಸ್ವಲ್ಪ ಹೆಚ್ಚೇ ಅನಿಸುವಷ್ಟು ವಾತ್ಸಲ್ಯ ನಾಲ್ಕೇ ದಿನದಲ್ಲಿ ಬೆಳೆದು ಬಿಟ್ಟಿತ್ತು. ಗೋಪಾಲಯ್ಯ ರಿಟೈರ್ ಆಗಿದ್ದರಿಂದ ಧಾರಾಳವಾಗಿ ವಾತ್ಸಲ್ಯ ಹರಿಸುತ್ತ ಕೂರುವಷ್ಟು ಸಮಯ ಅವರ ಬಳಿಯೂ ಇತ್ತು.

ಆದರೆ ಸಮಸ್ಯೆ ಶುರುವಾಗಿದ್ದು ಕೆಲ ದಿನಗಳ ಕಳೆದ ಬಳಿಕ. ನವ ದಂಪತಿಗಳು ಜಗತ್ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಜಗತ್ಪ್ರಸಿದ್ದ ಕಂಪನಿ ಎಂದ ಮೇಲೆ ಕೇಳಬೇಕೆ?, ಇಬ್ಬರಿಗೂ ಲಕ್ಷಕ್ಕೂ ಮೇಲ್ಪಟ್ಟು ಸಂಬಳ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ಅಂಡಮಾನ್ ಜೈಲಿನ ಕಾಲಾಪಾನಿಯ ಕೈದಿಗಳಿಗೆ ನೀಡಲಾಗುತ್ತಿದ್ದ ಕೆಲಸಕ್ಕಿಂತ ಹೆಚ್ಚು ಕೆಲಸ ಇಬ್ಬರ ಪಾಲಿಗೂ ಇರುತ್ತಿತ್ತು. ಹೀಗಾಗಿ ಗಂಡ-ಹೆಂಡತಿ ನಿತ್ಯವೂ ದುಡಿದುಡಿದು, ಸ್ಟಾರ್ಚ್ ಹಾಕಿರುತ್ತಿದ್ದ ಬಟ್ಟೆಗಳನ್ನು ಹಿಗ್ಗಾಮುಗ್ಗಾ ಸುಕ್ಕು ಮಾಡಿಕೊಂಡು ಹೈರಾಣಾಗಿ ಮನೆಗೆ ಬರುತ್ತಿದ್ದರು. ಮನೆಗೆ ಬಂದ ಮೇಲೆ ಸುಗುಣಿಗೆ ಅಡಿಗೆ ಮಾಡುವುದು ಹೋಗಲಿ, ಟೀ ಮಾಡುವಷ್ಟು ಕೂಡ ತ್ರಾಣ ಇರುತ್ತಿರಲಿಲ್ಲ. ಒಂದು ದಿನ ಡೋಮಿನೋಸಂ, ಮತ್ತೊಂದು ದಿನ ಪಿಝಾ ಹಟ್ಟಂ, ಮಗದೊಂದು ದಿನ ಮಯೂರಿಯಂ, ಅದರ ನೆಕ್ಸ್ಟ್ ದಿನ ನಂದಿನಿ ಡೀಲಕ್ಸಂ ಹೀಗೆ ಹೋಟಲ್ ನಿಂದ ಊಟ-ತಿಂಡಿ ಬರುವುದು ಸಾಮಾನ್ಯವಾಗಿತ್ತು. ಇಂತಹ ಒತ್ತಡದ ಬದುಕಿನಲ್ಲೇ ಸುಗುಣಿ ಸಾಧ್ಯವಾದಗಲೆಲ್ಲ ಮನೆಯ ಹೊರಗೆ ರಂಗೋಲಿ ಹಾಕುವುದು, ದೇವರ ಪೂಜೆ ಮಾಡುವುದು ಮಾಡುತ್ತಿದ್ದಳು.

ನಿಜವಾದ ಸಮಸ್ಯೆ ಇಲ್ಲಿಂದ ಶುರುವಾಯಿತು ಅನ್ನಬಹುದು.ಸುಮಿತ್ರಮ್ಮ ಅಂದು ಮಾಡಿದ ಪ್ರಗತಿಪರ ಭಾಷಣಕ್ಕೂ ಅವರ ವರ್ತನೆಗೂ ಸಂಬಂಧವೇ ಇಲ್ಲ ಎಂಬುದು ಸುಗುಣಿಗೆ ನಿಧಾನವಾಗಿ ತಿಳಿಯುತ್ತ ಹೋಗಿತ್ತು. ನಾಗರ ಪಂಚಮಿಯಿಂದ ವಿಜಯದಶಮಿಯವರೆಗಿನ ಅವಧಿಯಲ್ಲಿ ನವದಂಪತಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. “ನೀನು ದಿನಾಲೂ ಯಾಕೆ ಮನೆ ಮುಂದೆ ರಂಗೋಲಿ ಹಾಕಲ್ಲ?”, “ಇವತ್ತು ಗ್ರಹಣ. ಮನೆಗೆ ವಾಪಸ್ ಬಂದ್ಮೇಲೆ ಸ್ನಾನ ಮಾಡಿಲ್ವಾ?”, “ಇವತ್ತು ಗಣೇಶ ಚತುರ್ಥಿ. ಮನೇಲಿ ಮೋದಕ ಮಾಡಿದಿಯಾ ತಾನೆ?”, “ನಿಮ್ಮ ಕಡೆ (ನಿಮ್ಮ ಜಾತಿಯಲ್ಲಿ) ವರಮಹಾಲಕ್ಷ್ಮಿ ಹಬ್ಬ ಮಾಡಲ್ವಾ?”, ಹೀಗೆ ಆಯಾಯಾ ಸಂದರ್ಭಕ್ಕೆ, ಹಬ್ಬಕ್ಕೆ ತಕ್ಕಂತೆ ಮಿಲಿಯನ್ ಗಟ್ಟಲೆ ಪ್ರಶ್ನೆ ಕೇಳಿ ಸುಗುಣಿಯನ್ನು ಸುಸ್ತು ಮಾಡಿದ್ದರು ಸುಮಿತ್ರಮ್ಮ. ಬರೀ ಪ್ರಶ್ನೆ ಕೇಳಿದ್ದರೆ ಪರವಾಗಿರಲಿಲ್ಲ. ಆದರೆ ಅವರು ಕೇಳುತ್ತಿದ್ದ ರೀತಿ ಹೇಗಿರುತ್ತಿತ್ತೆಂದರೆ “ಎಂಥ ಜನಾನಪ್ಪ ನೀವು? ಒಂಚೂರು ಸಂಪ್ರದಾಯ, ನೇಮ ನಿಷ್ಠೆ ಅಂತ ಬೇಡ್ವ. ಸಮಾಹಿತಂದು ಬಿಡು. ಅವನು ಬೇರೆ ಜಾತಿ. ನೀನಾದ್ರೂ ಮಾಡ್ಬಾರ್ದಾ? ನಿಂದು ನಮ್ದು ಒಂದೇ ಜಾತಿ ಅಲ್ವ?” – ಈ ಎಲ್ಲ ಭಾವಗಳನ್ನು ಸುಮಿತ್ರಮ್ಮ ತಮ್ಮ ಪ್ರಶ್ನೆಯಲ್ಲಿ ಧ್ವನಿಸುತ್ತಿದ್ದರು. ಒಂದೆರಡು ಬಾರಿಯಂತೂ ಪರೋಕ್ಷವಾಗಿ ಸುಮಿತ್ರಮ್ಮ ಹೀಗೆ ಹೇಳಿಯೂ ಇದ್ದರು. ಮನೆಯ ಎದುರು ರಂಗೋಲಿ ಹಾಕಲು ಸಮಯವಿಲ್ಲದ ಸುಗುಣಿ, ಗೌರಿ ಹಬ್ಬಕ್ಕೆ ಮೋದಕ ಮಾಡುವುದು, ಆಚಾರ್ಯರೇಣುಕರು ರಾಜ್ಯದ ಡಿಸಿಎಂ ಆಗುವಷ್ಟೇ ಅಸಾಧ್ಯವಾಗಿತ್ತು. ಈ ಚೊರೆ ಎಷ್ಟು ಹೆಚ್ಚಿತೆಂದರೆ ಹಬ್ಬ-ಹರಿದಿನ-ಸೂರ್ಯಗ್ರಹಣ-ಚಂದ್ರಗ್ರಹಣಕ್ಕೆ ಎರಡು ದಿನ ಮೊದಲೇ ಸುಗುಣಿಯ ರಕ್ತದೊತ್ತಡ ಜಾಸ್ತಿಯಾಗಿ, ಮೂಡ್ ಆಫ್ ಆಗಿ, ಅದರಿಂದಾಗಿ ಸಮಾಹಿತನ ಜೊತೆ ವಿನಾಕಾರಣ ಜಗಳ ಆಗಿ ಇನ್ನೇನೇನೆಲ್ಲ ಆಗಿ, ಆಗಬಾರದ್ದೆಲ್ಲ ಆಗಿ ಬಿಡುತ್ತಿತ್ತು.

ಮೊದಲೆಲ್ಲ ಬರೀ ಪ್ರಶ್ನೆಯಾಗಿ ಕಾಡಲಾರಂಭಿಸಿದ್ದು, ನಂತರ ಆದೇಶಗಳಾಗಿ ಮಾರ್ಪಟ್ಟವು. ಪ್ರಶ್ನಾರ್ಥಕ ಚಿಹ್ನೆಗಳು ಮಾಯವಾದವು. “ರಂಗೋಲಿ ಹಾಕು, ತೋರಣ ಕಟ್ಟು, ಅರಿಷಿನ ದಾರ ಕಟ್ಕೋ, ಇವತ್ತು ರಾತ್ರಿ ಸಮಾಹಿತನ ಜೊತೆ ಮಲಗ್ಬೇಡ, ದಿನ ಚನ್ನಾಗಿಲ್ಲ…..”ಹೀಗೆಲ್ಲ ಸುಮಿತ್ರಮ್ಮ ಮಾತಾನಾಡಲಾರಂಭಿಸಿದ್ದರು. ಸುಗುಣಿ ಸಿಕ್ಕಾಗಲೆಲ್ಲ ತಮ್ಮದು ಶ್ರೇಷ್ಠ ಜಾತಿ. ಅಷ್ಟೇ ಅಲ್ಲ ಆ ಶ್ರೇಷ್ಠ ಜಾತಿಯ ಸಬ್ ಕಾಸ್ಟ್ ಗಳಲ್ಲಿರುವ ಮತ್ತೂ ಶ್ರೇಷ್ಠವಾಗಿರುವ ಜಾತಿ ತಮ್ಮದು. ತಮ್ಮ ಜಾತಿಯ ವಿಶಿಷ್ಟತೆ, ಆಚಾರ, ಪದ್ಧತಿ ಇತ್ಯಾದಿಗಳ ಬಗ್ಗೆ ಸಮಾ ಕೊರೆಯುತ್ತಿದ್ದರು. ಆಗಾಗ ಸಮಾಹಿತನ ಜಾತಿಯ ಬಗ್ಗೆ ನೇರವಾಗಿಯೇ ಕೀಳಾಗಿ ಮಾತಾಡುತ್ತಿದ್ದರು ಕೂಡ.

ಪರಿಸ್ಥಿತಿ ಹೀಗಿರುತ್ತ ಒಂದು ದಿನ……

ವಿದೇಶದಲ್ಲಿ ಯಾವುದೋ ಫೀಸ್ಟ್ ಇದ್ದದ್ದರಿಂದ ಭಾರತದಲ್ಲಿನ ಸುಗುಣಿ ಕೆಲಸ ಮಾಡುತ್ತಿದ್ದ ಜಗತ್ಪ್ರಸಿದ್ಧ ಎಂಎನ್ಸಿ ಕಂಪನಿಗೆ ರಜಾ ಇತ್ತು. ಸುಮಿತ್ರಮ್ಮನಿಂದ ತಪ್ಪಿಸಿಕೊಳ್ಳಲು ಸುಗುಣಿ, ಪಕ್ಕದ ಮನೆಗೆ ಹೋಗಿ ಮಾತನಾಡುತ್ತ ಕುಳಿತಿದ್ದಳು. ಹೀಗೆ ಮಾತುಮಾತಲ್ಲೇ ಸುಗುಣಿ, ಸುಮಿತ್ರಮ್ಮನವರಿಗೆ ಮಕ್ಕಳಿಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದಳು. ಆಗ ಪಕ್ಕದ ಮನೆಯಾಕೆ ಹೌಹಾರಿ, “ಅಯ್ಯೋ ಅವರಿಗೇನ್ ಬಂತ್ರಿ ರೋಗ… ನಿಮ್ಮ ಹತ್ರ ತಮಗ ಮಕ್ಳಿಲ್ಲ ಅಂತ ಹೇಳಿದ್ರಾ…? ರಾಮ ರಾಮ…!! ಏನು ಕಾಲ ಬಂತು ನೋಡ್ರಿ…ಅವರಿಗೆ ಮಗ ಸೊಸೆ ಎಲ್ಲಾ ಇದಾರೆ ಕಣ್ರೀ. ಆದರೆ ಇವರ ಜೊತೆ ಇರಲ್ಲ. ಬೇರೆ ಮನೆ ಮಾಡ್ಕೊಂಡು ಇರ್ತಾರೆ ಅಷ್ಟೆ” ಎಂದರು. ಸುಗುಣಿಗೆ ಒಂದು ಕ್ಷಣ ಏನೂ ಗೊತ್ತಾಗಲಿಲ್ಲ.

“ಮತ್ತೆ ನಮ್ಮ ಹತ್ರ ಹಾಗ್ಯಾಕೆ ಹೇಳಿದರು?” ಅಂತ ಕೇಳಿದಳು. ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದರೂ, ಅಭ್ಯಾಸ ಬಲದಂತೆ ಆ ಕಡೆ ಈ ಕಡೆ ನೋಡಿದ ಪಕ್ಕದ ಮನೆಯಾಕೆ, ತೀರ ಮೆಲುದನಿಯಲ್ಲಿ “ಅಯ್ಯೋ ಅವರ ಮಗಂದು ಲವ್ ಮ್ಯಾರೇಜು. ಲವ್ವಲ್ಲಿ ಜಾತಿ ಯಾರಾದ್ರೂ ನೋಡ್ತಾರಾ? ಸರಿ, ಅವರ ಮಗಾನೂ ಜಾತಿ ನೋಡ್ತೇ ಲವ್ ಮಾಡ್ದ. ಹುಡುಗಿದು ಯಾವುದೋ ಕೆಳಗಿನ ಜಾತಿ ಅಂತ ಸುಮಿತ್ರಮ್ಮಂಗೆ ಗೊತ್ತಾಯ್ತು. ನೀವು ನಂಬಲ್ಲ ಆದ್ರೂ ಹೇಳ್ತಿನಿ. ಈ ಸುಮಿತ್ರಮ್ಮ ತಮ್ಮ ಸೊಸೆಗೆ ಮನೆ ಹೊಸಿಲು ತುಳಿಯೋದಕ್ಕೂ ಬಿಡ್ಲಿಲ್ಲ. ಗೋಪಾಲಯ್ಯ ಮಗನ ಮದುವೆನ ಒಪ್ಕೊಂಡ್ರೂ ಸುಮಿತ್ರಮ್ಮ ರಂಪ ರಾಮಾಯಣ ಮಾಡಿ ಸೊಸೆನ ಮನೆ ಒಳಗೆ ಬಿಟ್ಟಕೊಳ್ಳಲೇ ಇಲ್ಲ. ಅದಕ್ಕೆ ಮಗ ಬೇರೆ ಮನೆ ಮಾಡಿ ಇದ್ದಾನೆ. ಜಾತಿ ಅಂದ್ರೆ ಅಷ್ಟು ಮುಖ್ಯ ಆ ಯಮ್ಮಂಗೆ” ಅಂದರು ಪಕ್ಕದ ಮನೆಯಾಕೆ.

ಗಿರ್ ಎಂದು ಸುತ್ತುತ್ತಿದ್ದ ಸುಗುಣಿಯ ತಲೆ ಸಮಸ್ಥಿತಿಗೆ ಬರಲು ಕೆಲವು ನಿಮಿಷಗಳೇ ಹಿಡಿದವು. ವಾಪಸ್ ಮನೆಗೆ ಬಂದಳವಳೇ ಸಮಾಹಿತನಿಗೆ ಹಿಂಗಿಂಗೆ ಹಿಂಗಿಂಗೆ ಎಂದು ಹೇಳಿ, ಸುಮಿತ್ರಮ್ಮನ ಕಾಟದಿಂದ ತಪ್ಪಿಸಿಕೊಳ್ಳಬೇಕಾದರೆ ಹಾಗೂ ತಮ್ಮ ತಲೆ ಕೂದಲುಗಳು ಬಿಳಿಯಾಗುವುದನ್ನು ತಡೆಯಬೇಕಾದರೆ, ಬೇರೆ ಮನೆ ನೋಡುವುದೇ ಉತ್ತಮ ಎಂದು ಹೇಳಿದಳು. ಸಮಾಹಿತ ತುಂಬ ಹರ್ಷದಿಂದ ಇದನ್ನು ಒಪ್ಪಿದ. ಸುಮಿತ್ರಮ್ಮನ ಮಾತಿನ ಟಾರ್ಚರ್ ನಿಂದಾಗಿ ಸುಗುಣಿ ಅನಗತ್ಯವಾಗಿ ತನ್ನ ಫ್ರಸ್ಟ್ರೇಷನ್ನನ್ನು ಸಮಾಹಿತನ ಮೇಲೆ ತೀರಿಸಿಕೊಳ್ಳುತ್ತಿದ್ದಳು. ಹೀಗಾಗಿ ಇಬ್ಬರ ನಡುವೆ ಅನಗತ್ಯವಾಗಿ ಮಾತಿನ ಚಕಮಕಿ ನಡೆಯುತ್ತಿದ್ದವು. ಜಾತಿಗಾಗಿ ಸ್ವಂತ ಸೊಸೆಯನ್ನೇ ಒಪ್ಪದ ಸುಮಿತ್ರಮ್ಮ ತಮ್ಮ ನಡುವೆ ಡಿವೋರ್ಸ್ ಮಾಡಿಸಲೂ ಹಿಂಜರಿಯುವುದಿಲ್ಲ ಎಂದು ಸುಗುಣಿಗೆ ಅನ್ನಿಸಿತ್ತು. ಬರೀ ಜಾತಿ ಜಾತಿ ಎಂದು 24 ಗಂಟೆಯೂ ಬಡಿದುಕೊಳ್ಳುವ ಜನಕ್ಕೆ ಬುದ್ಧಿ ಬರುವಾದದರೂ ಯಾವಾಗ ಎಂದು ಆಕೆ ಯೋಚಿಸುತ್ತಿದ್ದಳು. ಫುಲೆ, ಕಬೀರ್, ಬಸವಣ್ಣ, ಮತ್ತೆ ಹುಟ್ಟಿಬರಬಾರದೇ ಎನಿಸುತ್ತಿತ್ತು.

ಸಮಾಹಿತ ಅದಾಗಲೇ ಹೊಸ ಬಾಡಿಗೆ ಮನೆ ನೋಡಿ ಬಂದಿದ್ದ. ಹೊಸ ಮನೆ ಯಾವ ರೀತಿಯಲ್ಲಿಯೂ ಅವರು ಈಗಿದ್ದ ಮನೆಗೆ ಸಮವಾಗಿಲ್ಲದಿದ್ದರೂ ಮನೆ ಬದಲಾಯಿಸಲು ದಂಪತಿಗಳು ನಿರ್ಧರಿಸಿಯಾಗಿತ್ತು.

ಇನ್ನೇನು ಒಂದೆರಡು ದಿನದಲ್ಲೇ ಮನೆ ಬದಲಾಯಿಸುಬೇಕು ಅನ್ನುವಷ್ಟರಲ್ಲಿ…..

ತಮ್ಮ 1987 ಮಾಡೆಲ್ ಬಜಾಜ್ ಸ್ಕೂಟರ್ ಮೇಲೆ ಹೋಗುತ್ತಿದ್ದ ಗೋಪಾಲಯ್ಯನವರಿಗೆ ಆಟೋರಿಕ್ಷಾ ಬಂದು ಗುದ್ದಿತು. ಗೋಪಾಲಯ್ಯನವರನ್ನು ಆಸ್ಪತ್ರೆ ಸೇರಿಸಲು ಸುತ್ತಲಿದ್ದ ಸೊಫಿಸ್ಟಿಕೇಟೆಡ್ ಜನ ಮುಂದಾಗದ ಕಾರಣ, ಕೊನೆಗೆ ಪೋಲಿಸರೇ ಬಂದು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸುಮಿತ್ರಮ್ಮನವರಿಗೆ ಸುದ್ಧಿ ತಿಳಿದು ಆಸ್ಪತ್ರೆ ತಲುಪಿದಾಗ ಗೋಪಾಲಯ್ಯನವರ ತಲೆ, ಕಾಲು, ಭುಜಕ್ಕೆ ಬ್ಯಾಂಡೇಜ್ ಸುತ್ತಿ ಮಲಗಿಸಲಾಗಿತ್ತು. ಅವರಿಗೆ ತುರ್ತು ಆಪರೇಷನ್ ಮಾಡಬೇಕಿತ್ತು. ಸುಮಿತ್ರಮ್ಮನ ಪರ್ಸಿನಲ್ಲಿ ಎರಡು ಕ್ರೆಡಿಟ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ನೋಡಿದ ಖಾಸಗಿ ಆಸ್ಪತ್ರೆಯವರು ಗೋಪಾಲಯ್ಯನವರನ್ನು ತಕ್ಷಣ ಆಪರೇಷನ್ ಥೇಟರ್ ನೊಳಕ್ಕೆ ಕರೆದೊಯ್ದರು. ಅಷ್ಟರಲ್ಲಿ ಅಪಘಾತದ ಸುದ್ಧಿ ತಿಳಿದು ಸುಗುಣಿ-ಸಮಾಹಿತ ಕೂಡ ಬಂದು ಸುಮಿತ್ರಮ್ಮನವರನ್ನು ಕೂಡಿಕೊಂಡರು. ಕೆಲ ಹೊತ್ತಿನಲ್ಲಿ ಆಪರೇಷನ್ ಥೇಟರ್ ನೊಳಗಿಂದ ಹೊರ ಬಂದ ಜೂನಿಯರ್  ಡಾಕ್ಟರ್ ಪಾಶ್ಚಾಪುರೆ, “ಮೇಡಂ, ನಿಮ್ಮ ಹಸ್ಬೆಂಡ್ ಗೆ ಅರ್ಜೆಂಟಾಗಿ ಬ್ಲಡ್ ಕೊಡಬೇಕು. ನಮ್ಮಲ್ಲಿ ಬ್ಲಡ್ ಇಲ್ಲ. ಅರೇಂಜ್ ಮಾಡಿ. ಕ್ವಿಕ್” ಎಂದು ಹೇಳಿ ಮಾಯವಾದರು. ಕ್ರೆಡಿಟ್ ಕಾರ್ಡ್ ಇದ್ದರೆ ಎಲ್ಲವೂ ಸಾಧ್ಯ ಅಂದುಕೊಂಡಿದ್ದ ಸುಮಿತ್ರಮ್ಮ ತಕ್ಷಣ ತಮ್ಮ ಮೊಬೈಲ್ ನಿಂದ ನೆಂಟರಿಗೆಲ್ಲ ಫೋನ್ ಮಾಡಲಾರಂಭಿಸಿದರು. ಇಪ್ಪತ್ತು ನಿಮಿಷ ಕಳೆದರೂ ಸುಮಿತ್ರಮ್ಮನವರಿಗೆ ತಮ್ಮ ಯಾವೊಬ್ಬ ನೆಂಟರಿಂದಲೂ ರಕ್ತ ನೀಡಲು ಕರೆಸಲಾಗಲಿಲ್ಲ. ಅಷ್ಟರಲ್ಲಾಗಲೇ ಡಾ. ಪಾಶ್ಚಾಪುರೆ ಎರಡು ಬಾರಿ ಬಂದು “ಅರೇಂಜ್ ಆಯ್ತಾ?” ಎಂದು ಕೇಳಿ ಸುಮಿತ್ರಮ್ಮನವರ ಹೆಚ್ಚುತ್ತಿರುವ ರಕ್ತದೊತ್ತಡಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿ ಹೋಗಿದ್ದರು. ಬ್ಲಡ್ ಬ್ಯಾಂಕ್ ಗಳಿಗೆ ಸುಮಿತ್ರಮ್ಮ ಏಕೆ ಫೋನ್ ಮಾಡುತ್ತಿಲ್ಲ ಎಂಬುದು ಸುಗುಣಿ ಸಮಾಹಿತರಿಗೆ ಅರ್ಥವಾಗಿತ್ತು. ಕೊನೆಗೂ ತಮ್ಮ ನೆಂಟರು ಯಾರೊಬ್ಬರೂ ಸಿಗದೇ ಸುಮಿತ್ರಮ್ಮ ಕೈಚೆಲ್ಲಿ ಕುಳಿತಾಗ ಸುಗುಣಿಗೆ ಕೆಡುಕೆನಿಸಿತು. ಸುಮಿತ್ರಮ್ಮನ ಬಳಿ ಹೋದವಳೇ, “ಆಂಟಿ, ಸಮಾಹಿತಂದು ‘ಓ’ ಪಾಸಿಟಿವ್ ಬ್ಲಡ್ ಗ್ರೂಪ್. ಅಂದ್ರೆ ಯೂನಿವರ್ಸಲ್ ಡೋನರ್. ನಿಮಗೆ ಪರ್ವಾಗಿಲ್ಲ ಅಂದ್ರೆ, ಸಮಾಹಿತಾನೇ ಬ್ಲಡ್ ಡೊನೇಟ್ ಮಾಡ್ತಾರೆ. ಆದ್ರೆ ಅವರು ನಿಮ್ಮ ಜಾತಿ ಅಲ್ಲ. ಗೊತ್ತಲ್ವ? ನಿಮಗೆ ನಡೆಯತ್ತಾ?” ಎಂದು ಕೇಳಿದಳು.

ಕೆಲ ಹೊತ್ತಿನ ನಂತರ ಸುಗುಣಿ-ಸಮಾಹಿತ ಆಸ್ಪತ್ರೆಯಿಂದ ಹೊರಟರು. ಸಮಾಹಿತ, ಕೈಮೇಲೆ ಸೂಜಿ ಚುಚ್ಚಿದ್ದ ಜಾಗವನ್ನು ಹತ್ತಿಯಲ್ಲಿ ಒರೆಸಿಕೊಂಡು, ರಕ್ತವಂಟಿದ್ದ ಹತ್ತಿಯನ್ನು ಡಸ್ಟ್ ಬಿನ್ ನಲ್ಲಿ ಒಗೆದು ಸುಗುಣಿಯ ಕೈಹಿಡಿದು ನಡೆಯತೊಡಗಿದ.

……

 

ಧರ್ಮಸಂಸ್ಥಾಪನಾರ್ಥಾಯ….2

ವಿಸ್ಮಯ ಒಮ್ಮೆ ತಲೆಯೆತ್ತಿ ತನ್ನ ನಿದ್ದೆಗೆಟ್ಟ ಕಣ್ಣುಗಳಿಂದ ಪ್ರಿಯಾಳತ್ತ ನೋಡಿದ. ಪ್ರಿಯಾ ಎಂಬ ಹೆಸರು ಈಕೆಗೆ ಎಷ್ಟು ಸೂಟ್ ಆಗುತ್ತೊ, ಗಚ್ಚಿನಕಟ್ಟಿ ಎಂಬ ಅಡ್ಡಹೆಸರು ಅಷ್ಟೇ ಯಡವಟ್ಟಾಗಿದೆ ಎಂದು ವಿಸ್ಮಯನಿಗೆ ಅನ್ನಿಸಿತು. ಹೀಗೆ ಅನ್ನಿಸಿದ್ದು ಇದೇನು ಮೊದಲ ಬಾರಿಯಲ್ಲ. ಆದರೆ ಇದನ್ನೆಂದೂ ಆತ ಪ್ರಿಯಾಳಿಗೆ ಹೇಳಿರಲಿಲ್ಲ. ತನ್ನ ವೈಯುಕ್ತಿಕ ವಿಷಯಗಳ ಬಗ್ಗೆ ತೀರಾ ಪರ್ಟಿಕ್ಯುಲರ್ ಆಗಿದ್ದ ಪ್ರಿಯಾ, ಹಿಂದೊಮ್ಮೆ ಬೈಲೈನ್ ನಲ್ಲಿ ಅಡ್ಡಹೆಸರು ಮಿಸ್ ಆಯಿತೆಂದು ಪೇಜ್ ಮಾಡುವವರನ್ನು ತರಾಟೆಗೆ ತೆಗೆದುಕೊಂಡು ಸಂಪಾದಕರಿಗೆ ದೂರಿತ್ತಿದ್ದು ವಿಸ್ಮಯನಿಗೆ ನೆನಪಾಯಿತು.

ಅಷ್ಟರಲ್ಲಿ ಪ್ರಿಯಾಳ ಗುಡಂಗ್ ಗರಮ್ ಹೊಗೆ ಮತ್ತೊಮ್ಮೆ ವಿಸ್ಮಯನ ಮುಖವನ್ನು ಆವರಿಸಿತು. ಆತನೆನೂ ಮುಖ ಸಿಂಡರಿಸಲಿಲ್ಲ. ಒಮ್ಮೆ ನಿಟ್ಟುಸಿರುಬಿಟ್ಟು ಕೇಳಿದ,

“ನಿಂಗೆ ಹಾಗೇ ಹೇಳೊದು ತುಂಬಾ ಈಝಿ ಕಣೆ….ಆದ್ರೆ ಇದನ್ನೆಲ್ಲ ನೆನೆಸ್ಕೊಂಡ್ರೆ ಮೈ ಉರಿಯತ್ತೆ ಗೊತ್ತಾ?”

“It’s ok Vismay. But what can you do in this situation? ನೋಡು, ಮಾಧ್ಯಮದಲ್ಲಿ ಕೆಲಸ ಮಾಡುವ ನಮಗೆ ಸಾಮಾಜಿಕ ಜವಾಬ್ದಾರಿ ಅನ್ನೊದು ಇಂದಿನ ಕಾಲದಲ್ಲಿ ಕೇವಲ ಒಂದು ಆಪ್ಶನ್….ನಾಟ್ ಮ್ಯಾಂಡೇಟರಿ. ಹಿಂದಿನ ಕಾಲದ ಥರ ಅಲ್ಲ ಆಯ್ತಾ? ನಿನ್ನ ಕೆಲಸದಿಂದ ಯಾರಿಗಾದ್ರೂ ಹೆಲ್ಪ್ ಆಗುತ್ತೆ ಅಂದ್ರೆ ಫೈನ್, ಆಗ್ಲಿಲ್ಲ ಅಂದ್ರೆ ಕತ್ತೆ ಬಾಲ. ಸಾಮಾಜಿಕ ಜವಾಬ್ದಾರಿಯನ್ನ ನೀನು ಯಾಕೆ ಆಬ್ಸೇಷನ್ ಮಾಡ್ಕೊಂಡಿದೀಯಾ?”

“ಆಬ್ಸೇಷನ್ ಅಲ್ಲ ಪ್ರಿಯಾ, ನಿನಗೆ ಸಾಮಾಜಿಕ ಜವಾಬ್ದಾರಿ ಅನ್ನೋದು ಆಪ್ಶನ್ ಆಗಿರ್ಬಹುದು. ಆದ್ರೆ ನನಗೆ ಅದು ಕರ್ತವ್ಯ ಅನ್ನಿಸುತ್ತೆ. I may sound too immature….ಆದ್ರೆ ನಾನು ಹೀಗೇ ಇರೋದಕ್ಕೆ ಇಷ್ಟ ಪಡ್ತೀನಿ. ಮೊನ್ನೆ ಬೀದರ್ ನಲ್ಲಿ ಏನಾಯ್ತು ಗೊತ್ತ, ಬಸ್ ಸ್ಟಾಂಡ್ ನಲ್ಲಿ ಒಂದೂವರೆ ವರ್ಷದ ಹೆಣ್ಣುಮಗುವಿನ ಶವ ಪತ್ತೆಯಾಯ್ತು. ಮುದ್ದಾದ ಫ್ರಾಕ್ ತೊಟ್ಟಿದ್ದ ಆ ಮಗು, ಸಾವಿನಲ್ಲೂ ಕ್ಯೂಟ್ ಆಗಿ ಕಾಣ್ತಾ ಇತ್ತು. ಆದರೆ ಅವಳಮ್ಮನಿಗೆ ಮಗುವಿನ ಅಂತ್ಯಸಂಸ್ಕಾರಕ್ಕೆ ದುಡ್ಡು ಇರ್ಲಿಲ್ಲಾಂತ ಆಕೆ ಬಸ್ ಸ್ಟಾಂಡ್ ನಲ್ಲಿ ಹೆಣ ಇಟ್ಟು ಭಿಕ್ಷೆ ಬೇಡಿ ಹಣ ಸಂಗ್ರಹಿಸಲು ಎಲ್ಲೊ ಹೋದ್ಲು. ಅಷ್ಟರಲ್ಲಿ ಪೋಲಿಸ್ರಿಗೆ ಹಿಂಗಿಂಗೆ ಶವ ಇದೆ ಅಂತ ಪಬ್ಲಿಕ್ ಮೆಸೆಜ್ ಹೋಗಿತ್ತು. ಪೋಲಿಸ್ರು ಬಂದು ಹೆಣ ಎತ್ಕೊಂಡು ಹೋದ್ರು, ತಾಯಿ ಬಂದಾಗ ಮಗುವಿನ ಶವ ಇರ್ಲಿಲ್ಲ….. ”

“ಓಕೆ. ಓಕೆ, ನನಗೂ ಗೊತ್ತು ಆ ಇನ್ಸಿಡೆಂಟ್. ನಾವೂ ಕವರ್ ಮಾಡಿದ್ವಲ್ಲ ಅದನ್ನ. ಆಮೇಲೇನಾಯ್ತು ಹೇಳು, ಪೋಲಿಸ್ರೇ ಅವಳಿಗೆ ಅಂತ್ಯಸಂಸ್ಕಾರಕ್ಕೆ ದುಡ್ಡು ಕೊಟ್ಟು ಎಲ್ಲವನ್ನೂ ಮಾಡಿ ಮುಗಿಸಿದ್ರಲ್ಲ…That story had a happy ending right?”

“What bloody happy ending Priya?  ನಾನು ಆ ವಿಷುವಲ್ ನೋಡ್ದೆ ಗೋತ್ತಾ? ಆ ಸುದ್ದಿಗೆ ಆಂಕರ್ ಕೂಡಾ ನಾನೇ ಆಗಿದ್ದೆ. ಪ್ಯಾಕೇಜ್ ರನ್ ಆಗ್ತಿದ್ದಾಗ, ನನ್ನ ಕಣ್ಣು ಎಷ್ಟು ಮಂಜಾಯ್ತು ಅಂದ್ರೆ, ಟಿಪಿ ಓದ್ಲಿಕ್ಕೇ ಆಗ್ಲಿಲ್ಲ. ಪಿಸಿಆರ್ ಗೆ ಕಮ್ಯುನಿಕೇಟ್ ಮಾಡ್ದೆನೇ ಸಡನ್ ಆಗಿ ಬ್ರೇಕ್ ಅನೌನ್ಸ್ ಮಾಡ್ಬಿಟ್ಟೆ. ಪಿಸಿಆರ್ ನಲ್ಲಿ ಪ್ರಶಾಂತ್ ಇದ್ದ, ಹೇಗೊ ಮ್ಯಾನೇಜ್ ಮಾಡ್ದ. ನೋಡು, ನಮ್ಮ ಸಿಸ್ಟಮ್ ಹೇಗಿದೆ ಅಂತ? ಒಂದು ಕಡೆ ಒಬ್ಬ ತಾಯಿಗೆ ತನ್ನ ಮಗುವಿನ ಅಂತ್ಯಸಂಸ್ಕಾರ ಮಾಡೊಕ್ಕೆ ದುಡ್ಡಿಲ್ಲ, ಮತ್ತೊಂದಡ್ಕೆ ನಮಗೆ ಬೇಲ್ಔಟ್ ಕೊಡಿ ಅಂತ ಮಲ್ಯ ಥರದವ್ರು ನಾಚಿಕೆಯಲ್ಲಿದೆ ಪರೋಕ್ಷವಾಗಿ ಬ್ಯಾಂಕ್ ಮೇಲೆ ಪ್ರೆಷರ್ ಹಾಕಿ ಅದ್ರಲ್ಲಿ ಸಕ್ಸಸ್ ಕೂಡಾ ಆಗ್ತಾರೆ. Is not ridiculous? ಬೀದರ್ ನ ಆ ಸ್ಟೋರಿ ಮೂರು ನಿಮಿಷದ ಪ್ಯಾಕೇಜ್ ಫಾರ್ಮಾಟ್ ನಲ್ಲಿ ಹೋದ್ರೆ, ಇದೇ ಮಲ್ಯನ ನ್ಯೂ ಇಯರ್ ಕ್ಯಾಲೆಂಡರ್ ಅರ್ಧ ಗಂಟೆ ಸೆಗ್ಮೆಂಟ್ ಆಗತ್ತೆ…. ”

“ಹೇಯ್ ವಿಸ್ಮಯ್, ಅದನ್ನೇ ನಾನು ಹೇಳೋದು ಡೋಂಟ್ ಟೇಕಿಟ್ ಟು ಹಾರ್ಟ್ ಅಂತ. ನಿನ್ಗೇ ಗೊತ್ತಿದೆ, ಕಿಂಗ್ ಫಿಷರ್ ಕ್ಯಾಲೆಂಡರ್ ಸೇಲ್ ಆಗತ್ತೆ. ಟಿಆರ್ ಪಿ ಬರತ್ತೆ. ಬೀದರ್ ಸ್ಟೋರಿ ಗೆ ಬರತ್ತಾ ಹೇಳು. ಕಿಂಗ್ ಫಿಷರ್ ನ ಮಾಡಲ್ ಹೆಚ್ಚು ತೋರಿಸಿದಷ್ಟೂ, ನಿನ್ನ ಸ್ಯಾಲರಿ ಹೆಚ್ಚಾಗುತ್ತೆ. ಮೈಂಡ್ ಇಟ್…..” ಅನ್ನುತ್ತ ಪ್ರಿಯಾ ಮತ್ತೊಂದು ಗುಡಂಗ್ ಗರಮ್ ಹತ್ತಿಸಿದಳು.

ವಿಸ್ಮಯನ ಮತ್ತಷ್ಟು ಡಿಸ್ಟರ್ಬ್ ಆಗಿ ಟೇಬಲ್ ಮೇಲಿದ್ದ ಕೋಕ್ ಕ್ಯಾನ್ ಅನ್ನು ತುಟಿಗೆ ಸೊಂಕಿಸಿದ.

(ಸಶೇಷ…)

 

ಧರ್ಮಸಂಸ್ಥಾಪನಾರ್ಥಾಯ…

ಮಾಧ್ಯಮ ಲದಗೊಂ

“ಇಟ್ಸ್ ಎ ವಿಶೀಯಸ್ ಸರ್ಕಲ್ ಬ್ರೊ…..ಡೋಂಟ್ ಟೇಕ್ ಇಟ್ ಟು ಹಾರ್ಟ್, ಜಸ್ಟ್ ಚಿಲ್” ಎನ್ನುತ್ತ ಪ್ರಿಯಾ ಗಚ್ಚಿನಕಟ್ಟಿ, ಗುಡಂಗ್ ಗರಮ್ ಸಿಗರೇಟಿನ ಕಿಟ್ಟವನ್ನು ಆಶ್ ಟ್ರೇಯಲ್ಲಿ ಚೆಲ್ಲಿದಳು. ಅವಳು ಬಿಟ್ಟ ಆ ಯಾಲಕ್ಕಿ ಸುಗಂಧ ಭರಿತ ಹೊಗೆ ವಿಸ್ಮಯನ ಮುಖವನ್ನೆಲ್ಲ ಆವರಿಸಿತು. ಒಂದು ಕ್ಷಣ ವಿಸ್ಮಯನಿಗೆ ಹಿತವೆನ್ನಿಸಿದರೂ, ಅದು ಅಂದು ಆಫೀಸಿನಲ್ಲಿ ಉಂಟಾಗಿದ್ದ ಅಹಿತಕರ ಅನುಭವವನ್ನು ಕಡಿಮೆ ಮಾಡಲಿಲ್ಲ.

(ಸಶೇಷ……)

ಬೊಗಸೆಯ ಕೈ…

....

ಮೊದಲಿನಿಂದಲೂ ಶಂಕ್ರಪ್ಪ ಹಿರೇಮಠರ ಕಡೆಯಿಂದ ಆಕೆ ಬೊಗಸೆಯೊಡ್ಡಿಯೇ ಹಣ ಇಸಿದುಕೊಳ್ಳುತ್ತಿದ್ದುದು. ಶಂಕ್ರಪ್ಪ ಹಿರೇಮಠರೂ ಅಷ್ಟೇ. ಅವಳು ಕೇಳುವ ಮೊದಲೇ ನಿಖರವಾಗಿ 1 ನೇ ತಾರೀಕಿನಂದೇ ಮನೆ ಮನೆಗೆ ತೆರಳಿ ಗಾಡಿಯ ಗಂಟೆ ಬಾರಿಸಿ ಕಸ ತೆಗೆದುಕೊಂಡು ಹೋಗುವ ಕಾರ್ಪೋರೇಷನ್ ನ ಪೌರಕಾರ್ಮಿಕಳಿಗೆ 20 ರೂಪಾಯಿ ಕೊಟ್ಟುಬಿಡುತ್ತಿದ್ದರು. ಬೀದಿಯ ಎಲ್ಲರೂ 15 ರೂಪಾಯಿ ನೀಡಿದರೆ ಶಂಕ್ರಣ್ಣ ಮಾತ್ರ 20 ರೂಪಾಯಿ ಕೊಡುತ್ತಿದ್ದರು. ಶಂಕ್ರಣ್ಣ ದುಡ್ಡು ಕೊಡುತ್ತಿದ್ದ ಸಂದರ್ಭದಲ್ಲಿ ಆಕೆ ಎರಡೂ ಕೈಗಳನ್ನು ಬೊಗಸೆ ಮಾಡಿ ಸ್ವೀಕರಿಸುತ್ತಿದ್ದಳು.

ಆದರೆ ಮೊನ್ನೆ ಮಾತ್ರ ಶಂಕ್ರಣ್ಣ ಹೀಗೆ ದುಡ್ಡು ಕೊಡಲು ಹೋದಾಗ ಆಕೆ ಬೊಗಸೆಯಲ್ಲಿ ಹಣ ತೆಗೆದುಕೊಳ್ಳದೆ ಬಲಗೈ ಮುಂದು ಮಾಡಿ ದುಡ್ಡು ತೆಗೆದುಕೊಂಡುಬಿಟ್ಟಳು. ಶಂಕ್ರಣ್ಣ ಈಗ ನಿರ್ಧರಿಸಿದ್ದಾರೆ ಮುಂದಿನ ತಿಂಗಳಿನಿಂದ ಆಕೆಗೆ 10 ಮಾತ್ರ ಕೊಡಬೇಕು ಎಂದು.

ಗಾಂಧಿ ಹತ್ಯೆ, ಆ ಮಹಾತ್ಮಾ…….ಬಂದ ಕಮೆಂಟುಗಳು.

ಗಾಂಧಿ ಹತ್ಯೆ - ಆ ಮಹಾತ್ಮಾ....

ಸಂದೀಪ್ ಕಾಮತ್….

ಒಳ್ಳೆಯ ಕಥೆ .

ಡಾ. ನಾ. ಸೋಮೇಶ್ವರ………..
…….ಇತ್ತೀಚೆಗಂತೂ ಜೂನಿಯರ್ ಗಾಂಧಿ ಇಬ್ಬರು ಹೆಣ್ಣುಮಕ್ಕಳ ಹೆಗಲ ಮೇಲೆ ಕೈಯಿಟ್ಟುಕೊಂಡು ಬಂದು ವೇದಿಕೆಯೇರತೊಡಗಿದ್ದ…….. “ಮತ್ತೊಂದು ಗಾಂಧಿ ಹತ್ಯೆ” ಎಂಬ ತಲೆಬರಹದಲ್ಲಿ ಗಾಂಧಿಯ ಮೊದಲು ‘ಜೂನಿಯರ್’ ಪದವನ್ನು ಚಿಕ್ಕದಾಗಿ ಪ್ರಕಟಿಸಿತ್ತು.

ಕಥೆಯಲ್ಲಿ ಗಮನ ಸೆಳೆಯುವ ವಾಕ್ಯಗಳು. ಮೇಲೆ ಹತ್ತುವುದು ಮುಖ್ಯ…ಹತ್ತಲು ನೆರವಾದ ಏಣಿಯನ್ನು ಏನು ಹೆಗಲ ಮೇಲೆ ಹಾಕಿಕೊಂಡು ಓಡಾಡಬೇಕೇನು? ಅದನ್ನು ಆ ಕಡೆ ದೂಡಿ ಹೋದರಾಯಿತು ಎನ್ನುವ ಮಾನವ ಸ್ವಭಾವಕ್ಕೆ ಕನ್ನಡಿ ಹಿಡಿದ ಹಾಗಿದೆ.
“”ಜೂನಿಯರ್ ಗಾಂಧಿ ಪಾಪ್ಯುಲರ್ ಆಗುತ್ತಿದ್ದಾನಲ್ಲವೆ. ಹಾಗಿದ್ದರೆ ನಿಜವಾದ ಗಾಂಧಿಯ ಪಾಪ್ಯುಲಾರಿಟಿ ಕಡಿಮೆ ಮಾಡಿದರೆ, ಜೂನಿಯರ್ ಗಾಂಧಿ ಬಾಯಿಬಾಯಿ ಬಡಿದುಕೊಳ್ಳಬೇಕಾಗುತ್ತದೆ”” – ಎಂತಹ ಭಯಂಕರ ಐಡಿಯಾ ಮಾರಾಯ್ರೆ!
– ಕಥೆಯನ್ನು ಮುಂದುವರೆಸಿ. ಅಭಿನಂದನೆಗಳು.
-ನಾಸೋ

ರಂಗಣ್ಣ ಕೆ……..
ಸುಘೋಷ್,

ನೀವು ಯಾರನ್ನಾದ್ರೂ ಉದ್ದೆಶವಾಗಿತ್ತುಕೊಂಡಿದ್ದೀರಾ ಅನ್ಸುತ್ತೆ ನನಗೆ..
ಯಾರಯಾರದೋ ಕುಂಡಿ ಚಿವುಟಿದ್ದೀರಾ………………!
ಅದು ಏನೇ ಇರಲಿ, ಕಥೆ ಚೆನ್ನಾಗಿದೆ……..

ಮಂಜುನಾಥ್ ಎಚ್. ಟಿ. ………..
ಇ೦ದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯ೦ತಿದೆ, ನಿಜವಾದ ಗಾ೦ಧಿ, ಅವರ ತತ್ವಗಳು ಇ೦ದು ಯಾರಿಗೂ ಬೇಕಿಲ್ಲ, ಕೇವಲ ಹೆಸರು ಮಾತ್ರ, ಅದೂ ಅಧಿಕಾರಕ್ಕೇರಲು!

ಜಯದೇವ್…..

It is nice. I read it yesterday in Udayavani and liked it

ಸುನೀತಾ ಬೆಟ್ಕೆರೂರ್…….

a thought provoking

ಉಮೇಶ್ ದೇಸಾಯಿ……..

ನಿಗಳೆಯವರಿಗೆ ಪ್ರಸ್ತುತ ಸನ್ನಿವೇಶಕ್ಕೆ ತಕ್ಕದಾದ ಕತೆ. ಗತಿ ಇದೆ ಮೊನಚಿದೆ ಇದು ಹೀಗೆ ಆದು ಹಾಗೆ ಎಂದು
ಕತೆಗಾರ ಮೂಗು ತೂರಿಸಿ ಹೇಳುವುದಿಲ್ಲ ಇದು ಸಮಾಧಾನದ ಸಂಗತಿ.
ಇನ್ನೂ ಹೆಚ್ಚಿನದನ್ನು ನಿಮ್ಮಿಂದ ಅಪೇಕ್ಷೆ ಮಾಡಬಹುದು. ಶುಭವಾಗಲಿ

ಕೆ. ಎಸ್. ರಾಘವೇಂದ್ರ ನಾವಡ……..

ಗಾ೦ಧಿ ಜಯ೦ತಿಯ೦ದೇ ಅದನ್ನು ಉದಯವಾಣಿಯಲ್ಲಿ ಓದಿದ್ದೆ. ನಾನು ಉದಯವಾಣಿ ಯನ್ನು ಮಾತ್ರವೇ ತರಿಸುವುದು. ಲೇಖಕರ ಹೆಸರು ಓದಿ, ಎಲ್ಲೋ ಕೇಳಿದ ಹಾಗೆ ಇದೆ ಎನ್ನಿಸುತ್ತಿತ್ತು. ಪತ್ತೆ ಹಚ್ಚಲು ಈ ಪ್ರಯೋಗ. ಸಫಲನಾದೆ. ಸು೦ದರ್ ಕಥೆ ಹಾಗೂ ವಿಭಿನ್ನ ರೀತಿಯ ನಿರೂಪಣಾ ಶೈಲಿ. ಮುದ ನೀಡಿತು.

ನಮಸ್ಕಾರಗಳೊ೦ದಿಗೆ,

ನಿಮ್ಮವ ನಾವಡ

ಮೋಹನ್ ಹೆಗಡೆ

ಹಾಯ್, ಕಥೆ ಓಳ್ಳೆದಾಗಿದೆ. ಉದಯವಾಣಿ ಪೇಪರ್ ನಲ್ಲಿ ಓದಿದೆ. ಸೊಗದಾಸ ನಿರೂಪಣೆ. ಪ್ರಾಸದ ಪೇಪರ್ ನವರ ಟೈಟಲ್ ಸೂಪರ್.

ಮನಸು….

ಕಥೆ ಇಷ್ಟವಾಯಿತು, ಜೊತೆಗೆ ನಿಮ್ಮ ಬರವಣಿಗೆ ಶೈಲಿ ತುಂಬಾನೇ ಚೆನ್ನಾಗಿದೆ. ನಿಮಗೆ ಮತ್ತೊಮ್ಮೆ ಅಭಿನಂದನೆಗಳು, ಹೀಗೆ ಹಲವು ಕಥೆಗಳು ಮೂಡಿಬರಲೆಂದು ಆಶಿಸುತ್ತೇವೆ.

‘ಅಕ್ಕ’ದಲ್ಲಿ, ‘ಉದಯವಾಣಿ’ಯಲ್ಲಿ, ‘ಅವಧಿ’ಯಲ್ಲಿ ಗಾಂಧಿ ಹತ್ಯೆ – ಆ ಮಹಾತ್ಮಾ

‘ಅಕ್ಕ’ ಏರ್ಪಡಿಸಿದ್ದ ಕಥಾ ಸ್ಪರ್ಧೆಗೆ ನಾನು ಬರೆದ ಕಥೆ ‘ಗಾಂಧಿ ಹತ್ಯೆ’ ಬೆಸ್ಟ್ 20 ರಲ್ಲಿ ಆಯ್ಕೆಗೊಂಡು, ದೀಪ ತೋರಿದೆಡೆಗೆ ಸಂಕಲನದಲ್ಲಿ ಪ್ರಕಟವಾಗಿರುವುದನ್ನು ತಮಗೆಲ್ಲ ತಿಳಿಸಿದ್ದೇನೆ. ಈ ಕಥೆ ‘ಆ ಮಹಾತ್ಮ’ ಹೆಸರಿನಲ್ಲಿ ನಿನ್ನೆ ಉದಯವಾಣಿಯಲ್ಲಿ ಪ್ರಕಟವಾಗಿದೆ. ಕಥೆ ಓದಲು ಭೇಟಿ ಕೊಡಿ ಅವಧಿ

ಈಶ್ವರ್ ಅಲ್ಲಾ ತೇರೆ ಜಹಾಂ ಮೇ...ನಫರತ ಕ್ಯೂಂ ಹೈ, ಜಂಗ ಹೈ ಕ್ಯೂಂ..

ಜಗತ್ತಿನ ಅತ್ಯಂತ ಚಿಕ್ಕ ಕಥೆ

ಯೆಂಗಿದೆ?

SHE SMILED.

HE DIED.

(ಕಥೆ ಕಳಿಸಿಕೊಟ್ಟವರು ಜಗಳೂರು ಸೀತಾರಾಮ್)

‘ಅಕ್ಕ’ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಗ್ರಹ – ದೀಪ ತೋರಿದೆಡೆಗೆ

ದೀಪ ತೋರಿದೆಡೆಗೆ
ದೀಪ ತೋರಿದೆಡೆಗೆ

ನಿಮ್ಮಂಥ ಹಲ್ಕಟ್ ಗಳಿಂದಲೇ ಹೀಗಾಗೋದು

ಜನ-ವಾಹನ ನಿಬಿಡ ರಸ್ತೆ. ಜನ ನೋಡನೋಡುತ್ತಿರುವಂತೆ ವ್ಹೀಲಿ ಮಾಡುತ್ತಿದ್ದ ತರುಣನೊಬ್ಬ ದಭಾರ್ ಎಂದು ಎದುರಿನಿಂದ ಬರುತ್ತಿದ್ದ ಆಟೋವೊಂದಕ್ಕೆ ಡಿಕ್ಕಿ ಹೊಡೆದ. ಆಟೋ ಡ್ರೈವರ್, ಹಿಂದೆ ಕುಳಿತ ಪ್ರಯಾಣಿಕನಿಗೆ ಸಾಧಾರಣ ಗಾಯವಾಯಿತು. ಈ ತರುಣನಿಗೆ ಕೂಡ ಗಾಯವಾದರೂ ತಕ್ಷಣ ಎದ್ದ. ಜನರೆಲ್ಲ ಬಂದು ಬಿದ್ದವರಿಗೆ ಉಪಚರಿಸಿದರು. ಯಾರೋ ನೀರು ತಂದುಕೊಟ್ಟರು. ಟ್ರಾಫಿಕ್ ಪೋಲಿಸ್ ಪ್ರತ್ಯಕ್ಷನಾಗಿ ವಿಚಾರಿಸತೊಡಗಿದ. ಯಾರಿಗೂ ಅಷ್ಟೇನೂ ಪೆಟ್ಟಾಗಿರಲಿಲ್ಲವಾದ್ದರಿಂದ ಪ್ರಕರಣ ಬಗೆಹರಿಯಿತೆಂದು ಜನರು ಅಂದುಕೊಂಡು ತಮ್ಮ ತಮ್ಮ ಪಾಡಿಗೆ ಹೋಗಲು ಅನುವಾದರು. ಆದರೆ ಅಷ್ಟರಲ್ಲಿ ಅದೆಲ್ಲಿದ್ದರೋ ಪುಣ್ಯಾತ್ಮ….ಆರಡಿ ಮೀರಿದ ಸುಮಾರು 60 ದಾಟಿದ್ದರೂ ಕಟ್ಟು ಮಸ್ತಾಗಿದ್ದ ವೃದ್ಧರೊಬ್ಬರು ಗುಂಪಿನಿಂದ ತೂರಿಕೊಂಡು ಬಂದವರೇ ಆ ತರುಣನ ಕಾಲರ್ ಪಟ್ಟಿ ಹಿಡಿದು ರಪರಪನೆ ಕಪಾಳಕ್ಕೆ ಬಿಗಿಯತೊಡಗಿದರು. ಅಪಘಾತದ ಶಾಕ್ ನಿಂದ ಇನ್ನೂ ಹೊರಬರದ ತರುಣ ಸಮಾ ಏಟು ತಿನ್ನತೊಡಗಿದೆ. ಜನರಿಗೆ ಏನಾಗುತ್ತಿದೆ ಎಂದು ಅರಿವಿಗೆ ಬರುವದರ ಮೊದಲೇ ತರುಣ ಕೆಳಗೆ ಬಿದ್ದಿದ್ದ. ಆ ವೃದ್ಧರು ಈಗ ಕಾಲಿನಿಂದ ಒದೆಯಲು ಆರಂಭಿಸಿದ್ದರು. ಅಂತೂ ಇಂತೂ ಜನ ಮಧ್ಯಪ್ರವೇಶಿಸಿ ತರುಣನನ್ನು ವೃದ್ಧರ ತೆಕ್ಕೆಯಿಂದ ಬಿಡಿಸಿದರು. “ಏನ್ರೀ ಏನು ಮಾಡ್ತಾ ಇದ್ದೀರಿ? ಆಕ್ಸಿಡೆಂಟ್ ಆಗಿದೆ. ಪಾಪ ಹುಡುಗ ಬಿದ್ದಿದ್ದಾನೆ. ಅವನನ್ನ ಉಪಚರಿಸೋದು ಬಿಟ್ಟು ಹೊಡೀತಾ ಇದ್ದೀರಲ್ರೀ?” ಎಂದು ಗುಂಪಿನಲ್ಲಿದ್ದವನೊಬ್ಬ ವೃದ್ಧರನ್ನು ತರಾಟೆಗೆ ತೆಗೆದುಕೊಂಡ. “ಸಹಾಯ ಮಾಡದೇ ಇದ್ರೆ ಸುಮ್ಮನೇ ಇರ್ರೀ. ಯಾಕ್ರೀ ದನಕ್ಕೆ ಹೊಡೆದ ಹಾಗೆ ಹೊಡೀತಾ ಇದ್ದೀರಾ?” ಎಂದ ಮತ್ತೊಬ್ಬ. ಎಲ್ಲರೂ ಸೇರಿ ವೃದ್ಧರಿಗೆ ದಬಾಯಿಸತೊಡಗಿದರು.

safe riding

ನಿಧಾನವಾಗಿ ವೃದ್ಧರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ವೃದ್ಧರು ಮಾತಿಗಿಳಿದರು. “ಅನ್ನಿ ಸಾರ್ ಅನ್ನಿ…ಯಾರೂ ಬೇಕಾದ್ರೂ ಏನೂ ಅನ್ನಿ….ಆದ್ರೆ ನನ್ನ ಗೋಳು ಯಾರು ಕೇಳುವವರು ಹೇಳಿ? ನನ್ನ 25 ವರ್ಷದ ಹುಡುಗನ್ನ ನಾನು ಮೊನ್ನೆಯಷ್ಟೇ ಕಳೆದುಕೊಂಡೆ. ಹ್ಯಾಗೆ ಗೊತ್ತಾ? ಈ ದರಿದ್ರ ಮೋಟರ್ ಬೈಕನವನು ಇದ್ದಾನಲ್ಲ….ಇವನಂತಹ ಯಾರೋ ಹಲ್ಕಟ್ ನಿಂದ. ಬೈಕ್ ಓಡಿಸುತ್ತ ಏಳು ವರ್ಷವಾಗಿದ್ದರೂ, ಯಾರಿಗೂ ಒಂಚೂರು ಟಚ್ ಮಾಡದೆ ಜಾಗರೂಕನಾಗಿ ಬೈಕ್ ಓಡಿಸಿದ್ದ ನನ್ನ ಮಗ. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರೆ ಜನ ಇರೋ ರಸ್ತೆನಲ್ಲಿ ವ್ಹೀಲಿ ಮಾಡುತ್ತಿದ್ದವನೊಬ್ಬ ಸೀದಾ ಬಂದು ನನ್ನ ಮಗನ ಎದೆಯ ಮೇಲೇ ಫ್ರಂಟ್ ಟೈರ್ ಗುದ್ದಿದ್ದ. ಗುದ್ದಿದ ರಭಸಕ್ಕೆ ನನ್ನ ಮಗ ಸ್ಥಳದಲ್ಲೇ ಸತ್ತ. ಬೈಕ್ ಇರೋದು ಪ್ರಯಾಣಿಸುವುದಕ್ಕೆ ಕಣ್ರೀ…ಇಂತಹ ಲೋಫರ್ ಗಳು ಜನರಿರೋ ರಸ್ತೆಯಲ್ಲಿ ವ್ಲೀಲಿ ಮಾಡುವುದಕ್ಕಲ್ಲ….ಬಿಸಿರಕ್ತ….ವ್ಲೀಲಿ ಮಾಡಿದರೂ ಜನರಿಲ್ಲದ ಎಷ್ಟೋ ರಸ್ತೆ ಇವೆಯಲ್ಲ…ಅಲ್ಲಿ ಬೇಕಾದರೆ ತೋರಿಸಲಿ ತಮ್ಮ ಗಾಂಚಾಲಿ….ಇಲ್ಯಾಕೆ ಬೇಕು ಹೇಳಿ…”ಹೀಗೆ ವೃದ್ಧರ ಮಾತು ಮುಂದುವರೆಯುತ್ತಿದ್ದಂತೆ ಜನರಿಗೆ ನಿಜವಾಗಿಯೂ ಆ ತರುಣನ ಮೇಲೆ ಸಿಟ್ಟು ಬಂದಿತ್ತು.

ನಾವು ಗೇಯ್ದು ಗಳಸ್ತೀವಿ, ನೀವು ….ಯ್ದು ಗಳಸ್ತೀರಿ.

ಶಿವಪ್ಪ ಕಾಯೋ ತಂದೆ....

(ಸತ್ಯ ಘಟನೆ)

ಅಪ್ಪನಿಗೆ 7 ಏಕರೆ ಫಲವತ್ತಾದ ಜಮೀನಿತ್ತು. ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬನೇ ಮಗನಿಗೆ ಅದನ್ನು ವಹಿಸಿ ಸುಖವಾಗಿ ಸಾಯಬೇಕೆಂದು ಅಪ್ಪನ ಆಸೆ. ಕೃಷಿಯೆಂದರೆ ಕೆಸರು, ಮಣ್ಣು ಎಂಬ ಭಾವನೆ ಮಗನಿಗಿಲ್ಲವಾದರೂ, ಕೃಷಿಯೆಂದರೆ ಅಷ್ಟಕಷ್ಟೆ. ತಂದೆಯ ಒತ್ತಾಯಕ್ಕೆ ಕೆಲ ದಿನ ದುಡಿದಂತೆ ಮಾಡಿದ ಮಗ ನಂತರ ನಗರ ಸೇರಿಬಿಟ್ಟ. ಅಲ್ಲಲ್ಲಿ ಸಿಕ್ಕಸಿಕ್ಕ ಕೆಲಸ ಮಾಡಿದ. ಮಾಡಿದ. ಮಾಡಿದ. ಮಾಡುತ್ತಲೇ ಹೋದ. ಕೈಯಲ್ಲಿ ಕಾಸು ಓಡಾಡದಿದ್ದರೂ ಶೋಕಿಗೇನೂ ಕೊರತೆಯಿರಲಿಲ್ಲ. ಒಮ್ಮೆ ಹಳ್ಳಿಗೆ ಮರಳಿದಾಗ ಅಪ್ಪನಿಗೆ ಅಂತ ಶಾಲು, ಕೋಲು, ಪಂಚೆ, ಅಂತ ಉಡುಗೊರೆಗಳನ್ನು ತಂದಿದ್ದ. ಇದೆಲ್ಲ ನೋಡಿದವನೇ ಅಪ್ಪ, ಕೋಪಗೊಂಡು “ನಾವೆಲ್ಲ ಇಲ್ಲಿ ಹಳ್ಳಿಯಲ್ಲಿ ಗೇಯ್ದು ಗಳಸ್ತೀವಿ….ನೀವು ಅಲ್ಲಿ ಕೇಯ್ದು ಗಳಸ್ತೀರಿ” ಅಂತ ಅಬ್ಬರಿಸಿ, ಎಲ್ಲ ಉಡುಗೊರೆಗಳನ್ನು ತಿರಸ್ಕರಿಸಿಬಿಟ್ಟ. ಬಂಗಾರಂದತಹ ಜಮೀನನ್ನು ನೋಡಿಕೋಳ್ಳದ ವೃದ್ಧ ತಂದೆಯ ಕೋಪ ಸ್ಫೋಟಿಸಿತ್ತು. ಅದಾದ ಕೆಲ ದಿನಗಳ ನಂತರ ಅಪ್ಪ ಕೊರಗಿನಲ್ಲಿಯೇ ತೀರಿಕೊಂಡ. ಮಗ ಇನ್ನೂ ನಗರದಲ್ಲಿ ಕೆಲಸ ಮಾಡುತ್ತಿದ್ದಾನೆ. ಏಳು ಎಕರೆ ಭೂಮಿ ಪಾಳು ಬೀಳುತ್ತಿದೆ.

ಮುದುಕಿಗೂ ಇಂದಿಗೂ ಒಂದು ಆಸೆ ಉಳಿದುಕೊಂಡಿದೆ….

ಅವಳಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಮಗು ಬೇಕೆಂಬ ಹಂಬಲ ತುಂಬಾ ಇತ್ತು. ಅಂತೂ ಇಂತು ಮೊದಲ ಮಗುವಾಯಿತು. ಆದರೆ ಅವಳಿಗೆ ಬೇಸರ. ಕಾರಣ ಆಕೆಗೆ ಗಂಡು ಬೇಕಾಗಿತ್ತು, ಹೆಣ್ಣು ಹುಟ್ಟಿತ್ತು. ಒಲ್ಲದ ಮನಸ್ಸಿನಿಂದಲೇ ಹೆಣ್ಣುಮಗುವಿಗೆ ಹಾಲುಣಿಸಿದಳು.

ಗಂಡುಬೇಕೆಂಬ ಆಸೆ ಹಾಗೇ ಉಳಿದಿತ್ತು. ಎರಡು ವರ್ಷಗಳ ತರುವಾಯ ಮತ್ತೆ ಗರ್ಭಿಯಾಣದಳು. ಈ ಬಾರಿ ಖಂಡಿತ ಗಂಡು ಎಂಬ ವಿಶ್ವಾಸ ಆಕೆಗೆ. ಆದರೆ ಆಕೆಯ ದುರಾದೃಷ್ಟ ಮತ್ತೆ ಹೆಣ್ಣಾಯಿತು. ಅವಳ ದುಃಖಕ್ಕೆ ಪಾರವೇ ಇರಲಿಲ್ಲ. ವಿಧಿಯಿಲ್ಲದೆ ಎರಡನೇ ಹೆಣ್ಣು ಮಗುವಿಗೆ ಹಾಲುಣಿಸಿದಳು.

ಗಂಡು ಬೇಕೆಂಬ ಆಸೆ ಹಾಗೇ ಉಳಿದಿತ್ತು. ಮತ್ತೆರಡು ವರ್ಷಗಳ ತರುವಾಯ ಗರ್ಭಿಣಿಯಾದಳು. ಈ ಬಾರಿಯಂತೂ ಖಂಡಿತ ಗಂಡು ಎಂಬ ವಿಶ್ವಾಸ ಆಕೆಗೆ. ಆದರೆ ಆಕೆಯ ದುರಾದೃಷ್ಟ ಮೂರನೆಯದೂ ಹೆಣ್ಣಾಯಿತು. ಈಗ ದುಃಖದ ಜೊತೆಗೆ ಸಿಟ್ಟೂ ಬಂತು. ಈ ಅನಿಷ್ಟ ಹೆಣ್ಣು ಮಗುವಿಗೆ ಹಾಲುಣಿಸುವುದಿಲ್ಲ ಎಂದು ಚೀರಾಡಿದಳು. ಸಂಬಂಧಿಕರು ಸಮಾಧಾನ ಮಾಡಿದರು. ದುಃಖ, ಸಿಟ್ಟಿನ ಜೊತೆಗೇ ಮೂರನೇ ಹೆಣ್ಣು ಮಗುವಿಗೆ ಹಾಲುಣಿಸಿದಳು.

ಈ ಘಟನೆಯಾಗಿ ಸುಮಾರು 30 ವರ್ಷಗಳೇ ಕಳೆದಿವೆ. ಇಂದು ಮೊದಲ ಮಗಳು ಲಂಡನ್ ನಲ್ಲಿ ಯಶಸ್ವಿ ವೈದ್ಯೆಯಾಗಿ ಸೆಟಲ್ ಆಗಿದ್ದಾಳೆ. ಎರಡನೇ ಮಗಳು ಖ್ಯಾತ ಇಂಜಿನಿಯರ್. ಮೂರನೇ ಮಗಳು ಎಂಬಿಬಿಎಸ್ ಕೊನೆಯ ಸೆಮಿಸ್ಟರ್ ಕಲಿಯುತ್ತಿದ್ದಾಳೆ. ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿ.

ತಾಯಿ ಮುದುಕಿಯಾಗಿದ್ದಾಳೆ. ಇಂದಿಗೂ ಆಕೆಗೆ ಒಂದು ಆಸೆ ಉಳಿದುಕೊಂಡಿದೆ. ತನ್ನ ಮೊಮ್ಮಕ್ಕಳಾದರೂ ಗಂಡಾಗಿರಲಿ ಎಂದು.

ಬರೀ ಬಾಲ್ ಬಂತು ಅಂದುಕೊಂಡಿದ್ದೇ ತಪ್ಪಾಯಿತು….

speeeeeeeeeed

ಬಾಸ್ ದುಬೈಗೆ ಹೊರಟಿದ್ದರು. ಅವರನ್ನು ಏರ್ ಪೋರ್ಟ್ ಗೆ ಬಿಡಲು ವಾಹಿದ್ ತನ್ನ ಮಹಿಂದ್ರಾ ಲೋಗಾನ್ ಕಾರನ್ನು 100 ಕೀಮಿ. ಸ್ಪೀಡಿನಲ್ಲಿ ಓಡಿಸುತ್ತಿದ್ದ. ಆಗಲೇ ಲೇಟ್ ಆಗಿದ್ದರಿಂದ ಎಕ್ಸಲೇಟರ್ ಮೇಲಿಟ್ಟಿದ್ದ ಕಾಲನ್ನು ಎತ್ತಲು ವಾಹಿದ್ ಸಿದ್ಧನಿರಲಿಲ್ಲ. ಸರಕ್ಕನೆ ಇನ್ನೋವಾ ಹಿಂದೆ ಹಾಕಿ, ಆಟೋವನ್ನು ಒಂದು ಇಂಚು ದೂರದಿಂದ ಓವರ್ ಟೇಕ್ ಮಾಡಿದ. ಈಗ ಆತನ ಕಾರು 120 ಕಿಮಿ. ಸ್ಪೀಡ್ ನಲ್ಲಿ ಓಡುತ್ತಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ವಾಹಿದ್ ನ ಡ್ರೈವಿಂಗ್ ಬಗ್ಗೆ ಬಾಸ್ ಗೆ ಎಲ್ಲಿಲ್ಲದ ಆತ್ಮವಿಶ್ವಾಸ. ಹೀಗಾಗಿ ನಿಧಾನ ಹೋಗು ಎಂದು ಅವರು ವಾಹಿದ್ ಗೆ ಹೇಳಲಿಲ್ಲ. ಫ್ಲೈಟಿಗೆ ಬೇರೆ ತಡ ಆಗಿತ್ತಲ್ಲ….

ಹೆಬ್ಬಾಳ ದಾಟಿದ ಬಳಿಕ ಕಾರು ಗಾಳಿಯಲ್ಲಿ ಹಾರುವುದೊಂದೆ ಬಾಕಿಯಿತ್ತು. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಕ್ರಿಕೆಟ್ ಬಾಲೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಂತು. ಓಹ್…ಬಾಲ್ ಅಷ್ಟೇ ಅಲ್ವ ಎಂದುಕೊಂಡು ವಾಹಿದ್ ಬ್ರೇಕ್ ಹಾಕುವ ಗೋಜಿಗೇ ಹೋಗಲಿಲ್ಲ…ಎರಡು ಸೆಕೆಂಡ್ ಕಳೆದಿರಬೇಕಷ್ಟೇ….ಬಾಲ್ ಹಿಂದೆಯೇ ಪುಟ್ಟ ಹುಡುಗನೊಬ್ಬ ರಸ್ತೆ ಮಧ್ಯ ಓಡಿ ಬಂದು ಬಿಟ್ಟ…..

ಈ ಬಸ್ ಏನು ನಿಮ್ ಅಪ್ಪಂದ?

ಮಿರಿಮಿರಿಮಿರಿ ಮಿಂಚುವ ಕೆಂಪುಬಣ್ಣದ ಬಿಎಂಟಿಸಿ ವೋಲ್ವೋ ಬಸ್ ಅದು. “ಆಜಾ ಸನಮ್ ಮಧುರ ಚಾಂದನಿ ಮೇ ಹಂ ತುಂ ಮಿಲೇ ಹೆ ಜಿಯಾ” ಹಾಡು ಎಫ್ ಎಂ ನಿಂದ ಮೂಡಿ ಬಂದು ಇಡೀ ಎಸಿ ಬಸ್ ನ ವಾತಾವರಣವನ್ನು ಮತ್ತಷ್ಟು ಆಹ್ಲಾದಕರವನ್ನಾಗಿಸಿದೆ. ಭಯಂಕರ ಎತ್ತರದ ಕಟ್ಟಡಗಳಲ್ಲಿ ಕೆಲಸ ಮಾಡುವ ಐಟಿ-ಬಿಟಿ-ಘಾಟಿ ಮಂದಿ ಬೆಳಿಗ್ಗೆಬೆಳಿಗ್ಗೆಯೇ ಹ್ಯಾಪು ಮೋರೆ ಹಾಕಿಕೊಂಡಿದ್ದರೂ, ಬಸ್ ನ ವಾತಾವರಣ ಹಾಗೂ ಹಾಡು ಅವರಲ್ಲಿ ಅದೇನೋ ಚೈತನ್ಯ ಮೂಡಿಸಿದೆ.

ಆದರೆ….

ಅಷ್ಟರಲ್ಲಿ ಮಾಸಿದ ಬಿಳಿ ಅಂಗಿ, ಮಣ್ಣು ಮೆತ್ತಿದ ಬಿಳಿ ಪಂಚೆ ಧರಿಸಿದ, ಕೈಯಲ್ಲಿ ಕೋಲು ಹಿಡಿದುಕೊಂಡಿರುವ ಮುದುಕನೊಬ್ಬ ಯಾವುದೋ ಮಾಯದಲ್ಲಿ ಈ ವೋಲ್ವೋ ಬಸ್ ಹತ್ತಿಬಿಟ್ಟಿದ್ದಾನೆ. ಒಳಗಿದ್ದ ಜನ ಇದನ್ನು ವಾರೆಗಣ್ಣಿನಲ್ಲೇ ಗಮನಿಸಿದ್ದಾರೆ. ವೋಲ್ವೋ ಬಸ್ ಚಾರ್ಜ್ ಕೊಡುವಷ್ಟು ಹಣ ಈತನ ಬಳಿ ಇದ್ದಿರಬಹುದೆ ಎಂದು ನೋಡಿದವರಿಗೆ ಪ್ರಶ್ನೆ ಬಿದ್ದಿದೆ. ಆದರೆ ಅಲ್ಲಲ್ಲಿ ಆಧಾರ ಹಿಡಿದುಕೊಂಡು ಮುದುಕ ಕೊನೆಗೂ ಬಾಗಿಲೆದುರಿನ ಸೀಟ್ ಮೇಲೆ ಕುಳಿತಿದ್ದಾನೆ. ಕಂಡಕ್ಟರ್ ಅಲ್ಲಿಗೆ ಬರುವುದಕ್ಕೂ, ಮುದುಕ ತನ್ನ ಪಂಚೆಯನ್ನು ಎತ್ತಿ ಅಂಡರವೇರ್ ನ ಕಿಸೆಯಲ್ಲಿಟ್ಟದ ಪಾಸ್ ತೆಗೆಯುವುದಕ್ಕೂ ಸರಿ ಹೋಗಿದೆ. ಪಾಸ್ ನೋಡಿದ ಕಂಡಕ್ಟರ್ ಬೇಸರಿಸಿ, “ಈ ಪಾಸ್ ನಡ್ಯಲ್ಲ ಅಜ್ಜ ಈ ಬಸ್ ಗೆ. ಮುಂದಿನ ಸ್ಟಾಪ್ ಗೆ ಇಳಿದು ಬಿಡು” ಎಂದಿದ್ದಾನೆ. ಸರಿ ಎಂದು ಮುದುಕ ಕುಳಿತಿದ್ದಾನೆ. ಆದರೆ ಮುಂಬೈ ಲೋಕಲ್ ಟ್ರೇನ್ ಗಳಂತೆ ಮುಂದಿನ, ಅದರ ಮುಂದಿನ ಸ್ಟಾಪ್ ನಲ್ಲಿ ಬಸ್ ಕೇವಲ ಹದಿನೈದು ಸೆಕೆಂಡ್ ಮಾತ್ರ ನಿಂತಿದೆ. ಹೀಗಾಗಿ ಮುದುಕಪ್ಪನಿಗೆ ಇಳಿಯಲಾಗಿಲ್ಲ. ವಾಪಸ್ ಬಂದ ಕಂಡಕ್ಟರ್ ಮುದುಕನ ಮೇಲೆ ರೇಗಿದ್ದಾನೆ. “ಒಂದು ಸಾರಿ ಹೇಳಿದ್ರೆ ಮರ್ಯಾದೆಯಾಗಿ ತಿಳಕೋಬೇಕು. ಇಳಿ ಅಂತ ಹೇಳಿರಲಿಲ್ವಾ…ನಮ್ಮ ಕೆಲಸ ತಗಸ್ತೀರಾ” ಅಂದು ಬೈದಿದ್ದಾನೆ. ಅದಕ್ಕೆ ಉತ್ತರ ಕೊಡಲು ಹೋದ ಅಜ್ಜನ ಕೈಹಿಡಿದು ಬಸ್ಸನ್ನು ಮಧ್ಯದಲ್ಲಿಯೇ ನಿಲ್ಲಿಸಿ ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದ್ದಾನೆ. ಮುಂದಿನ ಸ್ಟಾಪ್ ನಲ್ಲಿ ಖಂಡಿತ ಇಳಿಯುವುದಾಗಿ ಅಜ್ಜಪ್ಪ ರಿಕ್ವೆಸ್ಟ್ ಮಾಡಿಕೊಂಡರೂ ಕಂಡಕ್ಟರ್ ಕೇಳಿಲ್ಲ.

ಅಲ್ಲಿದ್ದ ಜನರಿಗೆ ಇದು ನೋಡಿ ಬೇಜಾರಾಗಿದೆ. ಒಬ್ಬ ಹೇಳಿದ್ದಾನೆ. “ರ್ರೀ…ಇಷ್ಟು ದೂರ ಬಂದಿದ್ದಾರೆ. ಮುಂದಿನ ಸ್ಟಾಪ್ ನಲ್ಲಿ ಇಳಿಸಬಾರ್ದಾಗಿತ್ತಾ..ಬೇಕಾದ್ರೆ ನಾನೇ ಟಿಕೆಟ್ ತಗಸ್ತಾ ಇದ್ದೆ. ಯಾಕೆ ರಸ್ತೆ ಮಧ್ಯಾನೇ ಇಳಿಸೋದಕ್ಕೆ ಹೋದ್ರಿ?”

ಕಂಡಕ್ಟರ್ ಹೇಳಿದ್ದಾನೆ “ನೀವು ಒಳ್ಳೇವ್ರು ಸಾರ್ ಅದಕ್ಕೇ ಹೀಗೆ ಹೇಳ್ತಾ ಇದ್ದೀರಿ. ಆದ್ರೆ ಚೆಕಿಂಗ್ ಗೆ ಬರುವವರು ನಿಮ್ಮ ತರಹ ಇರ್ತಾರೆ ಅನ್ಕೊಂಡ್ರಾ…? ನಾನು ಒಂದು ಸಾರಿ ಹೀಗೆ ಜನಸೇವೆ ಮಾಡಲು ಹೋದಾಗ, ‘ಈ ಬಸ್ಸೇನು ನಿಮ್ಮ ಅಪ್ಪಂದ ಬ್ಯಾವರ್ಸಿಗಳನ್ನೆಲ್ಲ ಕರೆದುಕೊಂಡು ಹೋಗಾದಿಕ್ಕೆ?’ ಅಂತ ಬೈಸಿಕೊಂಡಿದ್ದೇನೆ. ಹೀಗಾಗಿ…..”

ತರಂಗ ಯುಗಾದಿ ವಿಶೇಷಾಂಕದಲ್ಲಿ ಎರಡೂಕಾಲು ಅಡಿ

ಆತ್ಮೀಯರೆ,

ಈ ಬಾರಿಯ ತರಂಗ ಯುಗಾದಿ ವಿಶೇಷಾಂಕದಲ್ಲಿ ನನ್ನ ಪ್ರಪ್ರಥಮ ಕಥೆ ಎರಡೂಕಾಲು ಅಡಿ ಪ್ರಕಟವಾಗಿದೆ. ದಯವಿಟ್ಟು ಓದಿ. ಅಭಿಪ್ರಾಯ ತಿಳಿಸಿ.


ವಿಕ್ರಮ್ – ಬೇತಾಲ್ ಕಥೆಗಳು ನನಗೆ ಇಂದಿಗೂ ಪ್ರಿಯ…

ಹುಡುಗನ ಬದುಕಿನ ಪುಟಗಳು…

100_1778

ಗಂಟೆಗೆ ಇಂತಿಷ್ಟು ವೇಗದಲ್ಲಿ ಇಂತಿಷ್ಟು ಎತ್ತರದಲ್ಲಿ ಹಾರುತ್ತಿರುವ ವಿಮಾನದಿಂದ ಇಂತಿಷ್ಟು ಭಾರದ ಕಲ್ಲನ್ನು ಎಸೆದರೆ ಅದು ಭೂಮಿಗೆ ಬೀಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬತಹ ಭೌತಶಾಸ್ತ್ರದ ಪ್ರಶ್ನೆಗಳು ನನ್ನ ಭೌತಿಕವನ್ನೇ ಅಲ್ಲಾಡಿಸಿದ್ದ ಸಮಯ. ಬಯಾಲಜಿ, ಗಣಿತ, ಕೆಮಿಸ್ಟ್ರಿಯಲ್ಲಿ ಹಿಡಿತವಿತ್ತಾದ್ದರೂ ನನ್ನ ನೈಜ ಬದುಕಿಗೆ ಜೀವಮಾನವಿಡಿ ಎಳ್ಳಷ್ಟೂ ಸಂಬಂಧವಿರದ ಗಣಿತದ ಸಮಸ್ಯೆಗಳನ್ನೂ, ರಸಾಯನಶಾಸ್ತ್ರದ ಸೂತ್ರಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ಒಲವಿರಲಿಲ್ಲ. ನಾಟಕ, ಏಕಪಾತ್ರಾಭಿನಯ, ಹಾಡು, ನೃತ್ಯ, ಆಧ್ಯಾತ್ಮ, ಚರ್ಚೆ/ಭಾಷಣ ಸ್ಪರ್ಧೆ, ಸ್ಕೇಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಪ್ಲಾಂಚೆಟ್,  ಹೀಗೆ ಛಪ್ಪನ್ನೈವತ್ತಾರು ಹವ್ಯಾಸಗಳು ಮಾತ್ರ ಎರ್ರಾಬಿರ್ರಿ ಮೈದುಂಬಿಕೊಂಡಿದ್ದವು. ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡು ಇದನ್ನೆಲ್ಲ ಮೇಂಟೇನ್ ಮಾಡುವುದು, ರಾಜಕಾರಣಿಯಾಗಿದ್ದು ಪ್ರಾಮಾಣಿಕನಾಗಿರುವುದಷ್ಟೇ ಕಷ್ಟವಾಗಿತ್ತು. ಇಂತಿರುವಾಗ, ಕಾಲನೆಂಬ ಕಾಲನು ಕೊಂಚವೂ ತಡಮಾಡದೆ, ಏಪ್ರಿಲ್ ತಿಂಗಳನ್ನು ಧುತ್ತಂತ ಎದುರಿಗಿಟ್ಟು, ‘ಪರೀಕ್ಷೆ ಎದುರಿಸು ಮಗನೆ’ ಎಂದುಬಿಟ್ಟನು.

ಪರೀಕ್ಷೆ ಎದುರಿಸಿದ್ದರೆ ವಿದ್ಯಾದೇವತೆ ಸರಸ್ವತಿಯಾಣೆಗೂ ದಡ ಸೇರುವುದು ಕಷ್ಟವೇನಾಗಿರಲಿಲ್ಲ. ಆದರೆ, ಇನ್ನೊಂದು ವರ್ಷ ಅದೇ ಸೈನ್ಸನ್ನು ಓದುವಷ್ಟು ತಾಳ್ಮೆ, ಆಸಕ್ತಿ ಸೂಜಿಮೊನೆಯಷ್ಟೂ ಇರಲಿಲ್ಲ. ಈ ಮಧ್ಯೆ ಬಿಳಿಬಿಳಿ ಬಣ್ಣದ ನಾಜೂಕು ಕಟಿಯ ಕ್ಲಾಸ್ ಮೇಟ್ ಹಾಗೂ ನಾನಾರು, ಎಲ್ಲಿಂದ ಬಂದೆ, ಎಲ್ಲಿ ಹೋಗುವೆ, ಬ್ರಹ್ಮಚರ್ಯವೇ ಜೀವನ, ಮದುವೆಯಾಗುವುದೇ ಮರಣ ಎಂಬ ಆಧ್ಯಾತ್ಮಿಕ ವಿಚಾರಗಳ ನಡುವೆ ನುಜ್ಜುಗುಜ್ಜಾಗಿ ಪರೀಕ್ಷೆ ತಪ್ಪಿಸಿಕೊಳ್ಳಲು ಪರೀಕ್ಷೆಯ ದಿನದಂದು ಪರೀಕ್ಷೆಗೆ ಹೋಗುವುದಾಗಿ ಹೇಳಿ ಅಮ್ಮನಿಗೆ ನಮಸ್ಕರಿಸಿ ಮನೆಯಿಂದ ಎಸ್ಕೇಪ್ ಆಗಿಬಿಟ್ಟೆ.

ಮೇಯಲು ಬಿಟ್ಟ ಎಮ್ಮೆ ಸಂಜೆಯಾಗುತ್ತಿದ್ದಂತೆ ವಿಧೇಯವಾಗಿ ಕೊಟ್ಟಿಗೆಗೆ ಹಿಂತಿರುವಂತೆ ಪ್ರತಿನಿತ್ಯ ಮನೆಗೆ ಹಿಂತಿರುಗುತ್ತಿದ್ದ ನಾನು ರಾತ್ರಿ ಹತ್ತಾದರೂ ಪತ್ತೆಯಾಗದಿದ್ದಾಗ ಅಮ್ಮ ಕಂಗಾಲಾಗಿ ನೆಂಟರಿಷ್ಟರಿಗೆಲ್ಲ ವಿಷಯ ತಿಳಿಸಿ ಎಲ್ಲೆಡೆ ಹುಡುಕಿದ್ದೇ ಹುಡುಕಿದ್ದು. ಅಪ್ಪ ಬೇರೆ, ನನ್ನ ಅಜ್ಜನ ಮನೆಗೆ ಹೋಗಿದ್ದ. ಇತ್ತ ನಾನು ತಲೆಯಲ್ಲಿ ಬಿಲಿಯಾಂತರ ವಿಚಾರಗಳನ್ನು ತುಂಬಿಕೊಂಡು ಬಸ್ ಹತ್ತಿ ಸೀದಾ ಹೋಗಿದ್ದು ನನ್ನ ಅಜ್ಜನ ಮನೆಗೇ. ಅಲ್ಲಾಗಲೇ ಸ್ವಂತ ಕೆಲಸ ಮಾಡಿಕೊಂಡಿದ್ದ ನನ್ನ ಪ್ರೀತಿಯ ಅಣ್ಣ ಹಾಗೂ ವಾತ್ಸಲ್ಯಮಯಿ ಅಪ್ಪ (ಹೌದು. ನನ್ನ ಅಪ್ಪ ನಿಜವಾಗಲೂ ವಾತ್ಸಲ್ಯಮಯಿ) ನನ್ನನ್ನು ರಿಸೀವ್ ಮಾಡಿಕೊಂಡು ಮೊದಲು ಮಾಡಿದ ಕೆಲಸ…..ನನಗೆ ಧೈರ್ಯ ತುಂಬಿದ್ದು.

ಆಕ್ಚುಲಿ, ಸಮಸ್ಯೆಯ ಪ್ರಸವವಾಗಿದ್ದು ಸೈನ್ಸ್ ಆಯ್ದುಕೊಂಡದ್ದರಿಂದ. ಎಲ್ಲರೂ ಮಾಡುವ ತಪ್ಪಿನಂತೆ ನಾನೂ ಗೆಳೆಯರ ಗುಂಪಿನಲ್ಲಿ ಗೋವಿಂದನಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿಯೂ ಯುನಿವರ್ಸಲ್ ಟ್ರೂತ್ ಆಗಿರುವ ವಿಜ್ಞಾನ ಶಾಖೆಯನ್ನು ಆಯ್ದುಕೊಂಡಿರುವವರು ಉತ್ತಮರು, ಕಾಮರ್ಸ್ ಮಧ್ಯಮರು ಹಾಗೂ ಆರ್ಟ್ಸ್ ಅಧಮರು ಎಂಬ ಪ್ರಭಾವಳಿಗೆ ಆಕರ್ಷಿತನಾಗಿ ಸೈನ್ಸ್ ತೆಗೆದುಕೊಂಡಿದ್ದೆ. ಮೊದಲ ಹೊಡೆತ ಅಲ್ಲೇ ಬಿದ್ದಿತ್ತು.

ಮಗನ ಘನಂದಾರಿ ಕೆಲಸ ಅಪ್ಪ-ಅಮ್ಮನಲ್ಲೂ ಆತಂಕ ಉಂಟುಮಾಡಿತ್ತು. ಮುಂದೇನು ಎಂದು ಎಲ್ಲರಲ್ಲಿ ಕೊರೆಯುತ್ತಿದ್ದರೂ, ಯಾರೂ ಕೂಡ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ.

ಆದರೆ ಮುಂದಿನ ಓದಿನ ದಿಕ್ಕನ್ನು ಸೂಚಿಸಿದ್ದು ನನ್ನದೇ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲ್ ಗಲಗಲಿ ಎಂಬುವವರು. ಅವರ ಸಲಹೆಯಂತೆ ಆರ್ಟ್ಸ್ ಶಾಖೆಗೆ ಮತ್ತೆ ಮೊದಲ ವರ್ಷದಿಂದ ಸೇರಿ ನನ್ನ ಪ್ರಿಯ ವಿಷಯಗಳಾದ ಇತಿಹಾಸ, ಸೈಕಾಲಜಿ, ಲಾಜಿಕ್ ಆಯ್ದುಕೊಂಡು ಶಿಕ್ಷಣ ಮುಂದುವರೆಸಿದೆ. ಪಿಯುಸಿ ಎರಡನೇ ವರ್ಷದಲ್ಲಿ ಕಾಲೇಜಿಗೆ ಎರಡನೇ ರಾಂಕ್ ಗಳಿಸಿದೆ. ಎಂ ಎಸ್ ಡಬ್ಲ್ಯೂ ಆಸಕ್ತಿಯಿಂದ ಓದಿದೆ. ನನ್ನ ಎಲ್ಲ ಹವ್ಯಾಸಗಳನ್ನು ಮುಂದುವರೆಸುವುದೂ ಸಾಧ್ಯವಾಯಿತು. ಇದೀಗ ಉತ್ತರ ಕರ್ನಾಟಕದ ಎನ್ ಜಿ ಓ ಒಂದರಲ್ಲಿ ವ್ಯವಸ್ಥಾಪಕನಾಗಿ ದುಡಿಯುತ್ತ ಹಣ, ಕೀರ್ತಿ ಹಾಗೂ ಮನಸ್ಸಿಗೆ ತೃಪ್ತಿಯನ್ನೂ ಕಂಡುಕೊಂಡಿದ್ದೇನೆ.

ನಾನು ಫೋರಂ ಮಾಲ್ ಗೆ ಮಾತ್ರ ಬರಲ್ಲ….

chikkamma

ಚಿಕ್ಕಮ್ಮಳದೂ ನನ್ನದೂ ಕಳೆದ ಮೂರು ದಿನಗಳಿಂದ ಒಂದೇ ವಾದ. ನಾನು “ಕರೆದುಕೊಂಡು ಹೋಗುತ್ತೇನೆ. ಬಾ” ಅಂತ. ಅವಳು “ನಾ ಬರಲ್ಲ. ನೀ ಒಬ್ನೇ ಹೋಗಿ ಬಾ” ಅಂತ. ಸಾಧಾರಾಣವಾದ ‘ಬಿ’ ಸೆಂಟರ್ ನಲ್ಲಿ ಜೀವನ ಸವೆಸಿದ್ದ ನನ್ನ ಚಿಕ್ಕಮ್ಮ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಮಗನ ಮನೆಗೆ ಉಳಿಯಲೆಂದು ಬಂದಿದ್ದಳು. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕಬ್ಬನ್ ಪಾರ್ಕ್, ಲಾಲ್ ಬಾಗ್, ಅಕ್ವೇರಿಯಂ, ಎಂ.ಜಿ. ರಸ್ತೆ ಎಲ್ಲವನ್ನೂ ತೋರಿಸಿಯಾಗಿತ್ತು. ಈಗ ಮುಂದಿನ ಸರದಿ ಫೋರಂ ಮಾಲ್ ದಾಗಿತ್ತು. ಎಲ್ಲ ಸ್ಥಳಗಳಿಗೆ ಹರ್ಷದಿಂದಲೇ ಬಂದಿದ್ದ ಚಿಕ್ಕಮ್ಮ, ಫೋರಂ ಮಾಲ್ ಗೆ ಬರಲು ಮಾತ್ರ ಜಪ್ಪಯ್ಯ ಅಂದರೂ ಸಿದ್ಧಳಿರಲಿಲ್ಲ.

ನನ್ನ ಸ್ವಗತ –

ಚಿಕ್ಕಮ್ಮ ಹೀಗೇಕೆ ಹಠ ಹಿಡಿಯುತ್ತಿದ್ದಾಳೆ? ಬೆಂಗಳೂರಿನ ಎಲ್ಲ ಕಡೆ ಬಂದವಳಿಗೆ ಫೋರಂ ಮಾಲ್ ಗೆ ಬರಲೇನು ಕಷ್ಟ? ಉಳಿದ ಸ್ಥಳಗಳಿಗೆ ಬಂದಾಗ ತೀರ ಉತ್ಸಾಹದಿಂದಿದ್ದ, ಅರೆ ಬಟ್ಟೆ ತೊಟ್ಟ ಶ್ರೀಮಂತ (ಬಡ) ಹುಡುಗಿಯರ ಮೇಲೆ ಕಾಮೆಂಟ್ಸ್ ಪಾಸ್ ಮಾಡುತ್ತಿದ್ದ, ಮನೆಯಿಂದಲೇ ಎಲ್ಲ ಕಡೆಗೂ ಮೊಸರನ್ನ, ಬಿಸಿಬೇಳೆಬಾತ್ ಮಾಡಿಕೊಂಡು ಬರುತ್ತಿದ್ದ ಚಿಕ್ಕಮ್ಮ ಈಗೇಕೆ ಹೀಗಾಡುತ್ತಿದ್ದಾಳೆ?

ಚಿಕ್ಕಮ್ಮಳ ಸ್ವಗತ-

ಈ ಮಕ್ಕಳಿಗೇನೂ ತಿಳಿಯುತ್ತದೆ ನನ್ನ ಕಷ್ಟ. ಬನ್ನೇರುಘಟ್ಟ ಪಾರ್ಕ್, ಎಂ.ಜಿ. ರಸ್ತೆಯಲ್ಲ ಒಂದು ತೂಕವಾದರೆ ಈ ಫೋರಂ ಮಾಲ್ ನದೇ ಮತ್ತೊಂದು ತೂಕ. ಇವ ನನ್ನ ಜೊತೆಗೆ ಬಂದರೂ ಪ್ರಯೋಜನವೇನು? ಹೋಗಬೇಕಾಗಿರುವುದು ತಾನಲ್ಲವೆ? ನನಗೆ ಮೊದಲೇ ಅಭ್ಯಾಸವಿಲ್ಲ. ಟಿವಿ ಯಲ್ಲಿ ನೋಡಿದ್ದೇನೆ ಮಾತ್ರ. ಅದೂ ಎಷ್ಟು ವೇಗವಾಗಿ ಸಾಗುತ್ತಿರುತ್ತದೆ. ಈ ನಗರದವರಿಗೇನು ಧಾಡಿ ಅಂತೀನಿ. ಅಲ್ಲ, ಸರಿಯಾಗಿ ದೈಹಿಕ ಶ್ರಮವನ್ನೂ ಮಾಡಲೊಲ್ಲೆ ಅನ್ನುತ್ತಾರಲ್ಲ. ಹಾಗಾಗಿಯೇ ಎಲ್ಲ ನಗರದ ಹೆಣ್ಣುಮಕ್ಕಳೂ ಬ್ಯಾರೆಲ್ ಗಳಾಗಿರುವುದು. ತೀರ ಇಷ್ಟು ಕೂಡ ಸೋಮಾರಿತನವಿರಬಾರದು. ರುಬ್ಬುಕಲ್ಲು ಬಿಸಾಡಿ, ಮನೆಗೆ ವಾಷಿಂಗ್ ಮಷಿನ್ ತಂದು, ಮೈಕ್ರೋ ಓವನ್, ಇಲೆಕ್ಟ್ರಿಕ್ ಕುಕರ್ ನಲ್ಲಿ ಅಡಿಗೆ ಮಾಡಿ ಈಗಾಗಲೇ ಸೋಮಾರಿತನ ಬೆಳೆಸಿಕೊಂಡಿದ್ದಾರೆ. ಹೋಗಲಿ ಮಾಲ್ ಗಳಂತಹ ವಿಶಾಲ ಪ್ರದೇಶದಲ್ಲಿ ಓಡಾಡಿಯಾದರೂ ಸ್ವಲ್ಪ ದೈಹಿಕ ಶ್ರಮ ಮಾಡಬಾರದೆ? ಇಲ್ಲೂ ಸೋಮಾರಿತನವೆ? ನಾನಂತೂ ಆ ಮಾಲ್ ಗೆ ಹೋಗುವುದಿಲ್ಲ. ಅದೇನೋ ಎಲಿವೇಟರ್ ಅಂತ ಹೇಳುತ್ತಾನೆ ಈತ. ಹತ್ತಿ ನಿಂತುಕೊಂಡು ಬಿಡುವುದಂತೆ. ಅದೇ ನಮ್ಮನ್ನು ಮೇಲಿನ ಮಹಡಿಗೆ ತಲುಪಿಸುತ್ತದಂತೆ. ಇಳಿಯುವಾಗ ಕೂಡ ಹಾಗೇ ಅಂತೆ. ಆದರೆ ನನಗೇನು ಆ ಎಲಿವೇಟರ್ ಹತ್ತಲು ಬರುತ್ತದೆಯೆ? ಕಾಲಿಡುವಾಗ ಸ್ಪಲ್ಪ ಹೆಚ್ಚುಕಡಿಮೆಯಾದರೂ ಬಿದ್ದು ಬಿಟ್ಟೇನು….ಕಾಲು ಉಳುಕಿದರೆ ಗತಿಯೇನು? ಅದಕ್ಕಿಂತ ಹೆಚ್ಚಾಗಿ ನಾಲ್ಕು ಜನರ ಮಧ್ಯೆ ಎಲಿವೇಟರ್ ಹತ್ತಲು ಬರದೆ ಬಿದ್ದೆನೆಂದರೆ ನೋಡಿದವರು ಏನೆಂದಾರು?

ಅಂತೂ ಇಂತೂ –

ಅಂತೂ ಇಂತೂ ನಾನು ಚಿಕ್ಕಮ್ಮಳ್ಳನ್ನು ಕನ್ವಿನ್ಸ್ ಮಾಡಿದೆ. ಅಂದು ಸಂಭ್ರಮದಿಂದ ಮನೆಮಂದಿಯೆಲ್ಲ ಫೋರಂ ಮಾಲ್ ಗೆ ಹೋದೆವು. ನಮ್ಮ ರಿಕ್ಷಾ ಸರಿಯಾಗಿ ಫೋರಂ ಮಾಲ್ ನ ಪಕ್ಕದಲ್ಲಿ ನಿಂತಿತು. ಆಟೋಡ್ರೈವರ್ ಎಂದಿನಂತೆ ಎರಡು ರೂಪಾಯಿಗೆ ಚಿಲ್ಲರೆ ನೀಡಲಿಲ್ಲ. ಆತನನ್ನು ಶಪಿಸುತ್ತ ಎಲ್ಲರೂ ಮಾಲ್ ಒಳಗೆ ಪ್ರವೇಶಿಸಿದೆವು. ಅದೇಕೋ ಎಲಿವೇಟರ್ ಸಮೀಪ ಬರುತ್ತಲೇ ಚಿಕ್ಕಮ್ಮ ನನ್ನ ಕೈಹಿಡಿದುಕೊಂಡಳು. ನಾನು ಕಾಲಿಟ್ಟ ತಕ್ಷಣ ನೀನೂ ಕಾಲು ಇಡು ಎಂದೆ. ಆಯಿತು ಎಂಬಂತೆ ತಲೆಯಾಡಿಸಿದಳು. ಅಷ್ಟರಲ್ಲಿ ನಮ್ಮ ಮಧ್ಯದಿಂದ ನುಸುಳಿದ ನಾಲ್ಕಾರು ಚಿಣ್ಣರು ನಮಗಿಂತ ಮೊದಲು ಟಣ್ ಎಂದು ಎಲಿವೇಟರ್ ಹತ್ತಿ ನಮಗೆ ಟಾಟಾ ಮಾಡುತ್ತ ಮೇಲೇರುತ್ತ ಹೋದರು. ಅವರನ್ನು ನೋಡುತ್ತ ಚಿಕ್ಕಮ್ಮ ಅಲ್ಲಿಯೇ ನಿಂತುಕೊಂಡಳು. ನನ್ನ ಕೈಯನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದುಕೊಂಡು.

ಒಂದು ಕಿಂಗ್ ಸಿಗರೇಟ್ ಹಾಗೂ ಅಣ್ಣ ಬಸವಣ್ಣ….

ವಗಕಾ

ಆತ ಹಾಗೆ ನೋಡಿದರೆ ಚೈನ್ ಸ್ಮೋಕರ್ ಏನೂ ಅಲ್ಲ. ಆದರೆ ದಿನಕ್ಕೆ ಹೆಚ್ಚೆಂದರೆ ಒಂದು ಸಿಗರೇಟು ಸೇದುತ್ತಿದ್ದ. ತೀವ್ರ ಕೆಲಸದ ಒತ್ತಡದಿಂದಾಗಿ ಕಳೆದ ಒಂದು ವಾರದಿಂದ ಒಂದೂ ಸಿಗರೇಟು ಸೇದಿರಲಿಲ್ಲ. ಸಿಗರೇಟು ಸೇದಬೇಕೆಂಬ ಹಪಹಪಿ ತೀವ್ರವಾಗಿತ್ತು. ರಸ್ತೆ ಬದಿಯ ದೊಡ್ಡ ಮರದ ಪುಟ್ಟ ಗೂಡಂಡಗಡಿಯಲ್ಲಿ ಹಾಫ್ ಟೀ ಹಾಗೂ ಒಂದು ಕಿಂಗ್ ಸಿಗರೇಟು ಸೇದುತ್ತ ಹೊಗೆ ಬಿಡುತ್ತಿದ್ದರೆ ವ್ಯಗ್ರವಾಗಿರುತ್ತಿದ್ದ ಮನಸ್ಸು ನಿಧಾನವಾಗಿ ಶಾಂತವಾಗುತ್ತಿತ್ತು.

ಎಂದಿನಂತೆ ಗೂಡಂಗಡಿ ಎದುರು ತನ್ನ ನೆಚ್ಚಿನ ಸ್ಪ್ಲೆಂಡರ್ ಬೈಕ್ ನಿಲ್ಲಿಸಿದ. ಸಿಂಗಲ್ ಸ್ಟಾಂಡ್ ಹಾಕುವುದು ಸೋಮಾರಿತನ ಎಂದು ತಿಳಿದಿದ್ದ ಆತ ಎಂದಿಗೂ ಡಬಲ್ ಸ್ಟಾಂಡ್ ಹಾಕುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ. ಅಂದೂ ಹಾಗೆಯೇ ಡಬಲ್ ಸ್ಟಾಂಡ್ ಹಾಕಿದ. ಕಿಂಗ್ ಸಿಗರೇಟ್ ಗೆ ನಾಲ್ಕೂವರೆ ರೂಪಾಯಿ. ಐದು ರೂಪಾಯಿಯ ಕಾಯಿನ್ ಹೊರ ತೆಗೆದ. ಹೊಳೆಹೊಳೆಯುವ ಐದು ರೂಪಾಯಿಯ ಒಂದು ಕಡೆ, ತುಂಬ ಮುದ್ದಾಗಿ 5 ಎಂದು ಬರೆದಿತ್ತು. ಕಾಯಿನ್ ತಿರುಗಿಸಿ ನೋಡಿದ. ಅಣ್ಣ ಬಸವಣ್ಣನ ಚಿತ್ರ ಸುಂದರವಾಗಿ ಮೂಡಿಬಂದಿತ್ತು. ತಕ್ಷಣ ಈತನಿಗೆ ನೆನಪಾಯಿತು. ಇದೇ ಅಂತರಂಗ ಶುದ್ಧಿ….ಇದೇ ಬಹಿರಂಗ ಶುದ್ದಿ…ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ.…ಛೆ…ಬಸವಣ್ಣ ಇರುವ ಕಾಯಿನ್ ನಿಂದ ಸಿಗರೇಟು ಕೊಳ್ಳುವುದೇ? ಇನ್ನೇನು ಆ ಕಾಯಿನ್ ಅಂಗಡಿಯವನಿಗೆ ಕೊಡಬೇಕು. ಅಷ್ಟರಲ್ಲಿ ಅದನ್ನು ಜೇಬಿಗಿಳಿಸಿ ವಾಪಸ್ ಬೈಕ್ ಏರಿದ…….

ತುಂಬ ಸಿಂಪಲ್ ಆಕ್ಸಿಡೆಂಟ್

147

ಅದೊಂದು ಕ್ರಾಸ್ ರೋಡ್.

ನಾಲ್ಕು ರಸ್ತೆ ಕೂಡುವ ಜಾಗ.

ಆತ ಆಫೀಸಿಗಾಗಿ ಬೈಕ್ ನಲ್ಲಿ ದಿನಾಲೂ ಅಲ್ಲಿಂದ ಹಾದು ಹೋಗುತ್ತಿದ್ದ.

ಗೆಳೆಯರು ಆತನನ್ನು ಪದೇ ಪದೇ ಎಚ್ಚರಿಸುತ್ತಿದ್ದರು. “ಹುಷಾರು ಮಾರಾಯ. ಆ ಕ್ರಾಸ್ ರೋಡಿನಲ್ಲಿ ಹಾದುಹೋಗುವಾಗ ಅಕ್ಕಪಕ್ಕದ ರೋಡ್ ಗಳಿಂದ ಸ್ಪೀಡಾಗಿ ಬರುತ್ತಾರೆ. ನೋಡಿಕೊಂಡು ಓಡಿಸು”.

ಹೀಗಾಗಿ ಈತ ಪ್ರತಿನಿತ್ಯ ಕ್ರಾಸ್ ರೋಡ್ ಬಂದೊಡನೆ ಹಾರ್ನ್ ಬಾರಿಸುತ್ತ ಅಕ್ಕಪಕ್ಕ ನೋಡಿ, ಯಾವುದೇ ವಾಹನ ಬರುತ್ತಿಲ್ಲ ಎಂದು ಖಾತರಿ ಮಾಡಿಕೊಂಡು ಮುಂದೆಸಾಗುತ್ತಿದ್ದ.

ಆ ದಿನ ಮತ್ತೆ ಆಫಿಸಿಗೆಂದು ಬೈಕ್ ಏರಿದ.

ಕ್ರಾಸ್ ರೋಡ್ ಸಮೀಪ ಬಂದ.

ಅಕ್ಕ ಪಕ್ಕ ನೋಡಿದ.

ಹಾರ್ನ್ ಬಾರಿಸಿದ.

ಯಾರೂ ಇರಲಿಲ್ಲ.

ಮುಂದೆ ಸಾಗಿದ.

ಆದರೆ ಮುಂದಿನಿಂದ ಭಾರೀ ಟ್ರಕ್ ವೇಗವಾಗಿ ಬರುತ್ತಿದ್ದುದನ್ನು ನೋಡಲೇ ಇಲ್ಲ…..