ಕನ್ನಡ ಚಿತ್ರಗಳ ಬರಗೆಟ್ಟ ಲಿರಿಕ್ಸ್ ಗಳು

ಇದಕ್ಕಿಂತ ಹೊಲಸು ಹಾಗೂ ಅಶ್ಲೀಲವಾದದ್ದನ್ನ ಬರೆಯಲು ಸಾಧ್ಯವೇ ಇಲ್ಲ.

ಉದಾ-1. ಊ ಲಾಲಾ ಊಲಾಲಾ ಇದು ಹಾಲು ಕೊಡೊ ಎಮ್ಮೆ, ಊ ಲಾಲಾ ಊಲಾಲಾ ಹಾಲ್ ಕರ್ಕೋ ನೀ ಸುಮ್ನೆ, ಮುಂದಿನಿಂದಲೂ ಹಿಂದಿನಿಂದಲೂ ಹಾಯೋ ಕೋಣ ಯಾಕೆ. (ಕಠಾರಿವೀರ ಸುರಸುಂದರಾಂಗಿ)

ಉದಾ-2.  ಕಣ್ಮುಚ್ರೋ ಕಣ್ಮುಚ್ರಿ, ಪೈಲ್ವಾನ್ ಮಂದಿಯಲ್ಲಿ ವಿನಂತಿ, ಫಾರಿಲ್ ಹುಡುಗಿ ಬಂದ್ಲು ಕಣ್ಮುಚ್ರಿ.

ಈ ಹಾಡುಗಳಿಗೆ ಅತ್ಯಂತ ಕಡಿಮೆ ಬಟ್ಟೆಯನ್ನು ಹಾಕಿಕೊಂಡಿರುವ ನಟಿಯರು(?) ಅಸಹ್ಯವಾಗಿ ಕುಣಿದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಚಿತ್ರಗಳು, ಲಿರಿಕ್ಸ್ ಗಳು ನೋಡಿದರೆ, ಯಾವ ಮಟ್ಟದಲ್ಲಿ ಚಿತ್ರರಂಗ ಪರಿಕಲ್ಪನೆ ಹಾಗೂ ಪ್ರತಿಭೆಗಳ ಕೊರತೆಯಿಂದ ಬಳಲುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ. ಲಾಂಗು ಮಚ್ಚು ಆಧಾರಿತ ಚಿತ್ರಗಳು ಇನ್ನೂ ಬರುತ್ತಿರುವುದು, ಕ್ರಿಯೇಟಿವಿಟಿ ಹೆಸರಿನಲ್ಲಿ ಅಸಹ್ಯ ಹಾಗೂ ಮುಜುಗರವನ್ನುಂಟು ಮಾಡುವುದು ಸರಿಯಾ? ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದು ಅಂತ, ಕೆಲ ನಿರ್ದೇಶಕರು, ನಿರ್ಮಾಪಕರು ಹೇಳುತ್ತಾರೆ. ಆದರೆ ಅವರು ನಿರ್ದೇಶಿಸಿದ ಚಿತ್ರಗಳನ್ನು ಮನೆಮಂದಿಯೆಲ್ಲ ಕುಳಿತು ನೋಡಿದರೆ, ನಿರ್ದೇಶಕನ ಮನೆಮಂದಿ ಎಂಥವರಿರಬಹುದು ಎಂದು ಆಶ್ಚರ್ಯವಾಗುತ್ತದೆ.

ಕಾಪಾಡು ದೇವರೆ!!

ಪ್ರಶ್ನೆ ಕೇಳೋದು ಸರಿಯಾಗಿಲ್ಲ

ಹೌದಲ್ವಾ?

ಕನ್ನಡದ ಹಿರಿಯ ನಟರೊಬ್ಬರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಈ ಹಿರಿಯ ನಟರು ಕನ್ನಡದಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿ ಜನಮಾನಸದ ಮೇಲೆ ಅಚ್ಚಳಿಯದ ಮುದ್ರೆಯೊತ್ತಿದ್ದಾರೆ. ನಮ್ಮ ಜೊತೆ ಮತ್ತೊಬ್ಬ ವ್ಯಕ್ತಿಯೂ ಪ್ರಯಾಣಿಸುತ್ತಿದ್ದರು. ಅವರಿಗೆ ಈ ಹಿರಿಯ ನಟರನ್ನು ಕಂಡರೆ ತುಂಬಾ ಗೌರವ. ಹೀಗಾಗಿ ಹಿರಿಯ ನಟರದ್ದು ಹಾಗೂ ಈ ವ್ಯಕ್ತಿಯದ್ದೂ ನಿರಂತರವಾಗಿ ಮಾತು ಸಾಗಿತ್ತು. ಹೀಗೇ ಮಾತನಾಡುವಾಗ ವ್ಯಕ್ತಿ, ಹಿರಿಯ ನಟರಿಗೆ ಕೇಳಿದರು,

“ಸರ್ ತಾವು ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ? ವಿಷ್ಣುವರ್ಧನ್ ಜೊತೆ ಎಷ್ಟು ಪಿಕ್ಚರ್ ಮಾಡಿದ್ದೀರಿ?” ಅಂತ. ಆಗ ತಕ್ಷಣ ಹಿರಿಯ ನಟರು ಹೇಳಿದರು, “ನೋಡಿ ಸ್ವಾಮಿ, ಜನ ಹೀಗೇ ಕೇಳ್ತಾರೆ. ರಾಜ್ ಕುಮಾರ್ ಜೊತೆ ಎಷ್ಟು ಪಿಕ್ಚರ್ ಮಾಡಿದೀಯಾ, ವಿಷ್ಣು ಜೊತೆ ಎಷ್ಟು ಮಾಡಿದೀಯಾ ಅಂತ. ಪೋಷಕ ನಟರೆಂದರೆ ಜನರಿಗೆ ಯಾಕೆ ಈ ರೀತಿಯ ಭಾವನೆಯೋ ಗೊತ್ತಿಲ್ಲ. ಯಾರೂ ನನ್ನನ್ನ, ‘ಸಾರ್ ರಾಜ್ ಕುಮಾರ್ ನಿಮ್ಮ ಜೊತೆ ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ, ವಿಷ್ಣು ಎಷ್ಟು ಪಿಕ್ಚರ್ ಗಳಲ್ಲಿ ಮಾಡಿದ್ದಾರೆ’ ಅಂತ ಕೇಳೋದೇ ಇಲ್ಲ. ಒಂದು ಚಿತ್ರದಲ್ಲಿ ನವರಸಗಳೂ ಬೇಕು. ಊಟದಲ್ಲಿ ಎಲ್ಲ ರುಚಿಯೂ ಬೇಕು. ಊಟ ಮಾಡುವಾಗ ಹಲವಾರು ಬಾರಿ ಮುಖ್ಯ ಪದಾರ್ಥಕ್ಕಿಂತ ಉಪ್ಪಿನಕಾಯಿಯ ರುಚಿಯೇ ನಾಲಿಗೆಯಲ್ಲಿ ಉಳಿಯುತ್ತದೆ ಅಲ್ಲವೆ?” ಎಂದರು.

ಅವರ ಪಾಯಿಂಟ್ ಸರಿಯೆನಿಸಿತು.

 

ಮನುಷ್ಯ ಸುಮ್ಮನೆ ಕೂರ್ತಾನೆ. ದೇವರು ಯಾಕೆ ಸುಮ್ನಿರ್ತಾನೆ?

ನೀರ ಮೇಲಣ ಗುಳ್ಲೆ ನಿಜವಲ್ಲ ಹರಿಯೆ...

ಕಿರುತೆರೆಯಲ್ಲಿ ನಟಿಯಾಗಿರುವ ನನ್ನ ಸ್ನೇಹಿತೆಯೊಬ್ಬಳು ಹೇಳಿದ ಘಟನೆ ಇದು……

ನಟನೆ ಎನ್ನುವುದು ನೀರ ಮೇಲಣ ಗುಳ್ಳೆ. ಅದು ಕಿರುತೆರೆಯಾಗಿರಬಹುದು ಅಥವಾ ಬೆಳ್ಳಿತೆರೆಯಾಗಿರಬಹುದು. ಒಂದು ಕಾಲದಲ್ಲಿ ಮಿರಿಮಿರಿ ಮಿಂಚಿದ್ದ ಎಷ್ಟೋ ಜನ ನಟ-ನಟಿಯರು ಕೊನೆ ದಿನಗಳಲ್ಲಿ ಒಪ್ಪೊತ್ತು ಊಟಕ್ಕೂ ಪರದಾಡಿ, ಹೆಂಡತಿ ಮಕ್ಕಳನ್ನು ಬೀದಿಪಾಲು ಮಾಡಿ, ಪತ್ರಿಕೆಗಳಲ್ಲಿ ಸಿಂಗಲ್ ಕಾಲಂ ಸಾವಿನ ಸುದ್ದಿ ಮಾಡಿ ಸತ್ತು ಹೋಗಿದ್ದಾರೆ. ಆದರೆ ಇಷ್ಟೆಲ್ಲ ಇದ್ದರೂ ನಮ್ಮ ನಟರಿಗೆ ಬುದ್ಧಿ ಅನ್ನೋದು ಬರೋದೇ ಇಲ್ವಾ ಅನ್ಸತ್ತೆ.

ಒಬ್ಬ ನಟರಿದ್ದಾರೆ ಸುಘೋಷ್. ತುಂಬಾ ಹಿರಿಯ ನಟರು. ಅವರ ಆಕ್ಟಿಂಗ್ ಬಗ್ಗೆ ಎರಡು ಮಾತಿಲ್ಲ ನೋಡು. ಸಿಂಗಲ್ ಟೇಕ್ ಆರ್ಟಿಸ್ಟ್. ಔಟ್ ಪುಟ್ ಅದ್ಭುತವಾಗಿದೆ. ಆ ಯಪ್ಪಾ ಕ್ಯಾಮರೆ ಮುಂದೆ ನಿಂತ್ರೆ, ಡೈರೆಕ್ಟರ್ ಆದವನು ಎಪಿಸೋಡ್ ಗಟ್ಲೆ ಸುತ್ತಬಹುದು.

ಆದರೆ……

ಅದೇ ಎಟಿಟ್ಯೂಡ್ ವಿಷಯಕ್ಕೆ ಬಂದ್ರೆ ಕನ್ನಿಂಗು, ದುರಹಂಕಾರ, ನನ್ನ ಬಿಟ್ರೆ ಬೇರೆ ಆಕ್ಟರ್ ಗಳೇ ಇಲ್ಲ ಅನ್ನೊ ಕೊಬ್ಬು. ತಮ್ಮ ನಡತೆಯಲ್ಲಿ, ಮಾತಿನಲ್ಲಿ ಸದಾ ಇದನ್ನೇ ತೋರಿಸೋರು. ಸಹ ನಟರ ಎದುರಿಗೇ ಗಾಂಚಾಲಿ ಮಾಡುತ್ತಿದ್ದ ಮನುಷ್ಯ ಇನ್ನು ಸೆಟ್ ಹುಡುಗರನ್ನು ಬಿಟ್ಟಾರೆಯೆ? ನಾವು ಮನೆ ನಾಯಿಯನ್ನೂ ಆ ರೀತಿ ನಡೆಸಿಕೊಳ್ಳುವುದಿಲ್ಲ ಸುಘೋಷ್, ಹಾಗೆ ನಡೆಸಿಕೊಳ್ಳೋರು.

ಒಂದಿನ ಸೆಟ್ ನಲ್ಲಿ ಊಟ ಮಾಡ್ತಾ ಇದ್ವಿ. ನನ್ನ ಪಕ್ಕಾನೇ ಸಾಹೇಬ್ರು ಊಟ ಮಾಡ್ತಾ ಕೂತ್ಕೊಂಡಿದ್ರು. ಅವರ ಊಟ ಮುಗೀತು. ನಾವೆಲ್ಲ ಊಟ ಮುಗಿದ್ರೆ, ನಲ್ಲಿ ಹತ್ರ ಪ್ಲೇಟ್ ಇಟ್ಟು, ಅಲ್ಲೇ ಕೈತೊಳ್ಕೊಂಡು ಬರ್ತಿವಿ. ಆಮೇಲೆ ಬಾಳೆ ಹಣ್ಣು ಇಟ್ಟಿರ್ತಾರೆ. ಅದನ್ನ ತಿಂತೀವಿ. ಆದರೆ ಈ ಯಪ್ಪಾ ಊಟ ಮುಗಿದ ಬಳಿಕ, ಊಟದ ಹುಡಗನ್ನ “ಏ ಬಾರೋ ಇಲ್ಲಿ” ಎಂದು ದರ್ಪದಿಂದ ಕರೆದರು. ಆತ “ಏನ್ ಸಾರ್?” ಎಂದು ಇವರ ಬಳಿ ಬಂದ. ಆತನ ಕೈಗೆ ತಮ್ಮ ತಟ್ಟೆ ಇಟ್ಟರು. ಅದನ್ನು ಇನ್ನೇನು ಹುಡುಗ ತೆಗೆದುಕೊಂಡು ಹೋಗಬೇಕು. ಅಷ್ಟರಲ್ಲಿ “ಏ…..ನಿಲ್ಲೋ ಒಂಚೂರು. ಎಲ್ಲಿ ಓಡಿ ಹೋಗ್ತಿಯಾ?” ಎಂದವರೇ ಆತನ ಕೈಯಲ್ಲಿ ತಟ್ಟೆ ಇರುವಂತೆಯೇ ಅದರಲ್ಲಿ ತಮ್ಮ ಕೈ ತೊಳೆದುಕೊಂಡರು. ಹುಡುಗನಿಗೆ ಒಂಥರಾ ಆಯಿತು. ಆದರೂ ಪಾಪ ಸುಮ್ಮನಿದ್ದ. ಅವರದ್ದು ಕೈ ತೊಳೆದು ಮುಗಿಯಿತು. ಹುಡುಗ ಇನ್ನೇನು ಹೋಗಬೇಕು, ಮತ್ತೆ ತಡೆದು “ಏ……… ಬರೀ ಅರ್ಜಂಟ್ ಮಾಡ್ತಿ ಕಣಯ್ಯಾ ನೀನು. ಏನ್ ಎಲ್ಲಾದ್ರೂ ಹೋಗ್ಬೇಕಾ?” ಎಂದವರೇ ಅಲ್ಲೇ ಇಟ್ಟಿದ್ದ ಬಾಳೆಹಣ್ಣು ತಗೊಂಡು ಸಿಪ್ಪೆ ಸುಲಿದು ಅದನ್ನು ತಟ್ಟೆಯಲ್ಲಿ ಹಾಕಿ “ಹಂ…ನಡಿ” ಎಂದರು ಸೊಕ್ಕಿನಿಂದ. ನಾನು ಸೇರಿದಂತೆ ಅಲ್ಲಿದ್ದ ಹಲವರಿಗೆ ಈ ನಟರ ನಡವಳಿಕೆ ವಾಕರಿಕೆ ಹುಟ್ಟಿಸಿತು. ಆದರೆ ಏನೂ ಅನ್ನುವ ಹಾಗಿಲ್ಲ. ಹಿರಿಯ ನಟರಲ್ಲವೆ? ಹುಡುಗನಿಗೆ ಊಟ ಮಾಡಿದ ತಟ್ಟೆ ಕೊಟ್ಟು ಅದರಲ್ಲಿ ಕೈತೊಳೆದುಕೊಳ್ಳುವುದು ಅನೇಕಬಾರಿ ನಡೆದಿತ್ತು.

ಮನುಷ್ಯರು ಸುಮ್ಮನಿರಬಹುದು. ಆದರೆ ದೇವರು ಸುಮ್ಮನಿರುತ್ತಾನೆಯೆ? ಕರ್ಮಕ್ಕೆ ತಕ್ಕ ಹಾಗೆ ಫಲ.

ಮುಂದೊಂದು ದಿನ ಈ ಹಿರಿಯ ನಟರಿಗೆ ಆಕ್ಡಿಡೆಂಟ್ ಆಗಿ ಎರಡೂ ಕಾಲೂ ಫ್ರಾಕ್ಚರ್ ಆಯಿತು. ಅವರು ಆಕ್ಸಿಡೆಂಟ್ ನಲ್ಲಿ ಉಳಿದದ್ದೇ ಹೆಚ್ಚು. ಆದರೆ ಆಕ್ಸಿಡೆಂಟ್ ಎಂದು ಶೂಟಿಂಗ್ ನಿಲ್ಲಿಸುವಂತಿರಲಿಲ್ಲ. ತುಂಬಾ ಮುಖ್ಯವಾದ ಕ್ಯಾರೆಕ್ಟರ್ ಮಾಡುತ್ತಿದ್ದರು. ಹೀಗಾಗಿ ಕೆಲವೇ ದಿನಗಳ ಬಳಿಕ ಇನ್ನೂ ಕಾಲುಗಳಿಗೆ ಪ್ಲಾಸ್ಟರ್ ಇರುವಂತೆಯೇ ಏನೇನೋ ಪ್ರಯಾಸ ಪಟ್ಟು ಅವರನ್ನು ಶೂಟಿಂಗ್ ಗೆ ಕರೆತರಲಾಯಿತು. ಆಗ ನೋಡಬೇಕಾಗಿತ್ತು ಸೀನು, ಹಿರಿಯ ನಟರಿಗೆ ಕನಿಷ್ಠ ಇಬ್ಬರ ಸಹಾಯವಿಲ್ಲದೆ ನಡೆಯಲು ಬರುತ್ತಿರಲಿಲ್ಲ. ಆ ಕಡೆ ಈ ಕಡೆ ಇಬ್ಬರ ಹೆಗಲ ಮೇಲೆ ಕೈಹಾಕಿ ನಿಧಾನವಾಗಿ ನಡೆದುಕೊಂಡು ಬರಬೇಕಿತ್ತು. ಆದರೆ ಸೆಟ್ ನಲ್ಲಿ ಒಬ್ನೇ ಒಬ್ಬ ಹುಡುಗ ಕೂಡ ಅವರನ್ನ ಕಾರಿನಿಂದ ಇಳಿಸಿಕೊಳ್ಳುವುದಕ್ಕೆ ಬರಲಿಲ್ಲ. ಎಲ್ಲರೂ ಬೇಕೆಂದೇ ಮುಖ ತಪ್ಪಿಸಿಕೊಂಡು ಓಡಾಡುವವರೇ. ಕಾರಿನ ಡ್ರೈವರ್ ಹುಡುಗರನ್ನು ಕರೆದರೂ, ಕುಂಟು ನೆಪ ಹೇಳಿಯೋ, ತಮಗೆ ಬೇರೆ ಕೆಲಸವಿದೆಯೆಂದೋ ಮಾಯವಾದರು. ಆಗ ನಾವೇ ಕೆಲ ಕಲಾವಿದರು ಸೇರಿ ಅವರನ್ನು ಮೇಕಪ್ ರೂಂಗೆ ಕರೆದುಕೊಂಡು ಹೋಗಬೇಕಾಯಿತು. ಈಗೇನೋ ಅವರ ಪ್ಲಾಸ್ಟರ್ ತೆಗೆಯಲಾಗಿದೆ. ಆದರೆ ಪ್ಲಾಸ್ಟರ್ ಹಾಕಿಕೊಂಡೇ ಶೂಟಿಂಗ್ ಬರುತ್ತಿದ್ದಾಗ ಸೆಟ್ ನಲ್ಲಿ ಹುಡುಗರು ಅವರಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಜನರ ಪ್ರೀತಿ ಗಳಿಸಿಕೊಳ್ಳದೇ ಇದ್ರೆ ಏನು ಮಾಡಿ ಏನ್ ಬಂತು ಅಲ್ವಾ?