ಪತ್ರಕರ್ತರ ಫೋಟೋ ಗೀಳು…

ನಮ್ಮಲ್ಲಿ ಕೆಲ ಪತ್ರಕರ್ತರಿಗೆ ಏನಾಗಿದೆಯೋ ಗೊತ್ತಿಲ್ಲ. ಮಾಜಿ/ಹಾಲಿ ಮುಖ್ಯಮಂತ್ರಿಗಳು, ಸಚಿವರು, ರಾಜಕಾರಣಿಗಳ ಜೊತೆಗೆ ಹಲ್ಲು ಕಿಸಿಯುತ್ತಲೋ, ಅಥವಾ ಏನೋ ಭಾರೀ ಮಾತನಾಡುತ್ತಿರುವಂತೆಯೋ ಅವರ ಪಕ್ಕ ನಿಂತುಕೊಂಡು ಫೋಟೋ ಹೊಡೆಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಅಂದಹಾಗೆ ಈ ರಾಜಕಾರಣಿಗಳಾರ್ಯೂ ಸಾಭ್ಯಸ್ಥರಲ್ಲ….ಒಂದಲ್ಲ ಒಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡವರೇ. ಆದರೆ ನಮ್ಮ ಕೆಲ ಪತ್ರಕರ್ತರಿಗ್ಯಾಕೋ ಇಂಥವರ ಮೇಲೆ ಅದೇನು ಭಕ್ತಿಯೋ ಗೊತ್ತಿಲ್ಲ, ಅವರ ಜೊತೆ ನಿಂತು ಫೋಟೋ ಹೊಡೆಸಿಕೊಳ್ಳುವುದೆಂದರೆ ವಿಶೇಷ ಪ್ರೀತಿ. ನಿನ್ನೆ ಮೊನ್ನೆ ಫೀಲ್ಡಿಗೆ ಬಂದ ಹುಡುಗ ಹುಡುಗಿಯರಾದರೆ ಏನೋ ಒಂದು ರೀತಿ. ಹೊಸಬರು, ಇನ್ನೂ ಮಾಧ್ಯಮ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಬಹುದು. ಆದರೆ ಆರೇಳು ವರ್ಷ ಅನುಭವವಿರುವ ಪತ್ರಕರ್ತರೇ ಹೀಗೆ ಮಾಡಿದರೆ ಹೇಗೆ? ಅಷ್ಟಕ್ಕೂ ಇಂತಹ ಫೋಟೋಗಳಿಂದ ನೀಡುವ ಸಂದೇಶವಾದರೂ ಏನು? ತಾವು ಆ ರಾಜಕಾರಣಿಯ ಜೊತೆ ತುಂಬಾ ಕ್ಲೋಸ್ ಆಗಿದ್ದೇವೆ ಎಂದು ತೋರಿಸಿಕೊಳ್ಳುವುದೆ? ಅಥವಾ ತನ್ನ ಕಾಂಟಾಕ್ಟ್ ಎಲ್ಲಿಯವರೆಗಿದೆ ಎಂದು ಪ್ರಭಾವಲಯ ಸೃಷ್ಟಿಸಿಕೊಳ್ಳುವುದೆ? ಮಾಧ್ಯಮವಲಯದಲ್ಲಿ ಒಂದು ಮಾತಿದೆ. ಪತ್ರಕರ್ತನಾದವನು ಎಲ್ಲರೊಂದಿಗೆ (ರಾಜಕಾರಣಿ-ಅಧಿಕಾರಿ-ಉದ್ಯಮಿ-ಖಾಕಿ-ಕಾವಿ ಇತ್ಯಾದಿ) ಉತ್ತಮ ಸಂಪರ್ಕನ್ನಿಟ್ಟುಕೊಳ್ಳಬೇಕೆ ಹೊರತುು ಉತ್ತಮ ಸಂಬಂಧವನ್ನಲ್ಲ ಎಂದು. ಈ ಪತ್ರಕರ್ತರಂತೂ ಈ ಮಾತನ್ನು ಸಾರಾಸಗಟಾಗಿ ಮೂಲೆಗೊತ್ತಿದ್ದಾರೆ. ಈ ರೀತಿಯ ಗೀಳಿನಿಂದ, ಇಂತಹ ಪತ್ರಕರ್ತರ ವರದಿಗಾರಿಕೆಯೇ ಮೇಲೆ ನಂಬಿಕೆಯೇ ಹೊರಟುಹೋಗುತ್ತದೆ. ಎಷ್ಟರ ಮಟ್ಟಿಗೆ ಇವರು ನಿರ್ಭೀತ ಮತ್ತು ಮುಕ್ತ ವರದಿಯನ್ನು ಮಾಡಬಲ್ಲರು ಎಂಬುದೇ ಪ್ರಶ್ನೆ.

ಮಾಧ್ಯಮ: ಅತ್ತ, ಇತ್ತ, ಎತ್ತ?

ಉತ್ಥಾನ ಸಂಕ್ರಾಂತಿ ವಿಶೇಷಾಂಕ 2014 ರಲ್ಲಿ ಪ್ರಕಟವಾಗಿರುವ ನನ್ನ ಲೇಖನ. ಅಭಿಪ್ರಾಯಗಳಿಗೆ ಸ್ವಾಗತ.

...

2

ಮಾಧ್ಯಮ: ಅತ್ತ, ಇತ್ತ, ಎತ್ತ?
“ಇವತ್ತು ಮಾಧ್ಯಮದಲ್ಲಿ ಲೆಫ್ಟಿಸ್ಟ್ ಗಳು ಸೇರಿಕೊಂಡಿದ್ದಾರೆ. ಕಮ್ಯೂನಿಸ್ಟರೂ ಇದ್ದಾರೆ. ಹಾಗೆಯೇ ರೈಟಿಸ್ಟ್, ಕ್ಯಾಪಿಟಾಲಿಸ್ಟ್, ಸೋಷಿಯಾಲಿಸ್ಟ್ ಗಳೂ ಇದ್ದಾರೆ. ಆದರೆ ದುರಂತ ಅಂದರೆ ಜರ್ನಲಿಸ್ಟ್ ಗಳೇ ಇಲ್ಲ” ಎಂದು ವಿಚಾರ ಸಂಕಿರಣವೊಂದರಲ್ಲಿ ಪತ್ರಕರ್ತರೊಬ್ಬರು ಅಳಲು ತೋಡಿಕೊಂಡರು. ಅಲ್ಲೊಂದು ಮೌನವಿತ್ತು. ಅವರ ಧ್ವನಿಯಲ್ಲಿದ್ದ ನೋವು ನಿಧಾನವಾಗಿ ಕೇಳುಗರ ಹೃದಯವನ್ನು ತಟ್ಟಿ ಯೋಚನೆಗೆ ಹಚ್ಚುವಂತೆ ಮಾಡಿತ್ತು.
ಹೌದು. ಮಾಧ್ಯಮದಲ್ಲಿ ಇಂದು ಎಲ್ಲ ‘ಇಸಂ’ಗಳನ್ನು ಪ್ರಮೋಟ್ ಮಾಡುವವರು ದಂಡಿದಂಡಿಯಾಗಿ ಸಿಗುತ್ತಾರೆ. ಆದರೆ ಪತ್ರಿಕೋದ್ಯಮಕ್ಕೆ ಮಾತ್ರ ನಿಷ್ಠರಾಗಿರುವ ಪತ್ರಕರ್ತರನ್ನು ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಹುಡುಕಬೇಕಾದ ಪರಿಸ್ಥಿತಿಯಿದೆ. ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯುತ್ತಾರೆ. ಸ್ವಾತಂತ್ರ್ರಾನಂತರದ ವರ್ಷಗಳಲ್ಲಿ ಮಾಧ್ಯಮ, ವಾಸ್ತವವಾಗಿಯೂ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆಯೇ ಎಂದು ಪ್ರಶ್ನಿಸಿದಾಗ, ‘ಖಂಡಿತ ಇಲ್ಲ’ ಎಂಬ ಉತ್ತರ ಸಿಗುತ್ತದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರದ ಕೆಲ ವರ್ಷಗಳಲ್ಲಿ ಮಾಧ್ಯಮ ಸರಿಯಾದ ಹಾದಿಯಲ್ಲಿಯೇ ಇತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಂತೂ ಪತ್ರಿಕೆಗಳು ರೂಪಿಸಿದ ಆಂದೋಲನದ್ದೇ ಒಂದು ತೂಕ.
ಆದರೆ ಬರಬರುತ್ತ ಮಾಧ್ಯಮದ ಸ್ವರೂಪವೇ ಬದಲಾಗತೊಡಗಿತು. ಸ್ವಾತಂತ್ರ್ಯ, ಸಚ್ಚಾರಿತ್ರ್ಯ, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಪತ್ರಿಕಾರಂಗದಲ್ಲಿ ಬಂಡವಾಳಶಾಹಿಗಳ ಕೈ ಮೇಲಾಗತೊಡಗಿತು. ಈಗ ಅದರ ಫಲವನ್ನು ಉಣ್ಣುತ್ತಿದ್ದೇವೆ, ಅಷ್ಟೇ. ಮಾಧ್ಯಮವನ್ನು ಒಂದು ಸೇವೆ ಎಂದು ಸರ್ಕಾರ ಗುರುತಿಸುತ್ತದೆ. ಆದರೆ ನೂರೆಂಟು ಪತ್ರಕರ್ತರನ್ನು, ಜಿಲ್ಲೆಗಳಲ್ಲಿ ಒಂದರಂತೆ ಆಫೀಸು ತೆರೆದು, ಕ್ಯಾಮೆರಾ, ಸ್ಟೂಡಿಯೋ, ಎಸಿ ಹಾಲ್, ಓಬಿ ವ್ಯಾನ್, ಸ್ಯಾಟಲೈಟ್ ರೈಟ್ಸ್, ಪ್ರಿಂಟಿಂಗ್ ಪ್ರೆಸ್ ಎಂದೆಲ್ಲಾ ಬಂಡವಾಳ ಹಾಕಿರುವ ಪತ್ರಿಕೆ ಅಥವಾ ಚ್ಯಾನಲ್ ನ ಮಾಲೀಕನಿಗೆ ಮಾತ್ರ ಮಾಧ್ಯಮ ಎಂಬುದು ಕೇವಲ ಮತ್ತು ಕೇವಲ ಬಿಝಿನೆಸ್. ‘ನಾನು ದುಡ್ಡು ಹಾಕಿದ್ದೇನೆ. ನನಗೆ ಲಾಭ ಬರಬೇಕು’ ಎಂಬುದು ಅವರ ವಾದ. ಅದಕ್ಕಾಗಿಯೇ ಮಹಿಳೆಯೆರ ಒಳಉಡುಪುಗಳನ್ನು ಮಾರುವ ಕಂಪನಿಯೊಂದು ಟೂ ಪೀಸ್ ತೊಟ್ಟಿರುವ ವಿದೇಶಿ ಹೆಣ್ಣುಮಗಳ ಚಿತ್ರವನ್ನು ಜಾಹೀರಾತಾಗಿ ನೀಡುತ್ತದೆ. ರಾಜ್ಯಮಟ್ಟದ ಪತ್ರಿಕೆಯೊಂದು ಅದನ್ನು ಮುಖಪುಟದಲ್ಲಿಯೇ ಪ್ರಕಟಿಸುತ್ತದೆ. ಅದಕ್ಕಾಗಿಯೇ ಮಟಮಟ ಮಧ್ಯಾಹ್ನ ಬೆಡಗಿಯೊಬ್ಬಳು ಲೈಂಗಿಕ ದುರ್ಬಲತೆಯನ್ನು ಹೋಗಲಾಡಿಸುವ ಗುಳಿಗೆ ಹಾಗೂ ಲೇಹ್ಯವನ್ನು 15 ನಿಮಿಷಗಳ ಕಾಲ ರಾಜ್ಯಮಟ್ಟದ ಚ್ಯಾನಲ್ ನಲ್ಲಿ ಮಾರುತ್ತಾಳೆ. ಅದಕ್ಕಾಗಿಯೇ, ಯಾರೋ ಒಬ್ಬ ರಾಜಕಾರಣಿಯ ಅನೈತಿಕ ಲೈಂಗಿಕ ಕ್ರಿಯೆಯನ್ನು ಒಂಚೂರೂ ಬ್ಲರ್ ಮಾಡದೇ, ಮನೆಮಂದಿಯೆಲ್ಲ ಕುಳಿತು ನೋಡುವ ಹೊತ್ತಿನಲ್ಲೇ ಹಸಿಬಿಸಿಯಾಗಿ ತೋರಿಸಲಾಗುತ್ತದೆ. ಅದಕ್ಕಾಗಿಯೇ, ದರಿದ್ರ ವಿಷಯವೊಂದನ್ನು ಎತ್ತಿಕೊಂಡು ತಾಸುಗಟ್ಟಲೆ ಅದನ್ನು ಹಿಂಜಿ, ಪ್ಯಾನಲ್ ಡಿಸ್ಕಷನ್ ಮಾಡಿಸಿ, ಲೈವ್ ಮಾಡಿಸಿ, ಯಾರ್ಯಾರನ್ನೋ ಕರೆದು ಜನರನ್ನು ತಪ್ಪು ದಾರಿಗೆ ಪ್ರಚೋದಿಸಲಾಗುತ್ತದೆ. ಅದಕ್ಕಾಗಿಯೇ ‘ಗುರೂಜಿ’ಗಳನ್ನು ಕರೆಯಿಸಿ ತಾಸುಗಟ್ಟಲೆ ವಾಸ್ತು ಪರಿಹಾರ, ಅನಾರೋಗ್ಯ ಪರಿಹಾರ, ಹಣಕಾಸಿನ ಪರಿಹಾರ ಮಾಡಿಸಲಾಗುತ್ತದೆ. ಯಾಕೆಂದರೆ ಬಂಡವಾಳ ಹಾಕಿದ್ದಾರೆ. ಲಾಭ ಬೇಕಲ್ಲವೆ?
ಹಾಗೆ ನೋಡಿದರೆ, ಅವರ ವಾದದಲ್ಲಿ ತಪ್ಪೂ ಇಲ್ಲ. ಬಂಡವಾಳ ಹಾಕಿರುವ ಪ್ರತಿಯೊಬ್ಬ ವ್ಯಾಪಾರಿಯೂ ಲಾಭ ಅಪೇಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಅದು ಅರ್ಥ ಶಾಸ್ತ್ರ, ವಾಣಿಜ್ಯ ಧರ್ಮ. ಕ್ಷೇತ್ರ ಯಾವುದಾದರೆ ವ್ಯಾಪಾರಿಗೇನು?
ಇದರ ಪರಿಣಾಮ ಮಾತ್ರ ಭೀಕರ. ಈಗಾಗಲೇ ಕಾರ್ಯಾಂಗ, ಶಾಸಕಾಂಗ ತಮ್ಮ ಮಾನವನ್ನು ಹರಾಜು ಹಾಕಿಕೊಂಡು ಲಜ್ಜೆಗೆಟ್ಟಿವೆ. ಪೋಲಿಸರೇ ಕಳ್ಳರ ಜೊತೆ ಶಾಮೀಲಾಗಿ ಪರ್ಸಂಟೇಜ್ ಹೊಡೆಯುವುದು, ಗಣಿ ಕೆಸರಲ್ಲಿ ಮೈಯೆಲ್ಲ ಕೆಸರು ಮಾಡಿಕೊಂಡ ಸಚಿವನೊಬ್ಬ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗುವುದು, ಕಾರ್ಯಾಂಗ ಹಾಗೂ ಶಾಸಕಾಂಗದ ಲೇವಡಿಯಲ್ಲದೆ ಮತ್ತೇನು?
ಇಲ್ಲಿ ಮಾಧ್ಯಮದ ಪರಿಸ್ಥಿತಿಯೇನೂ ಭಿನ್ನವಾಗಿಲ್ಲ. ಮೇಲಿನಿಂದ ಕೆಳಗಿನ ಸ್ತರದ ವರೆಗೂ ಭ್ರಷ್ಟಾಚಾರವೇ ತುಂಬಿದೆ. ನೀರಾ ರಾಡಿಯಾ ಟೇಪ್ ಹಗರಣದಲ್ಲಿ ತಮಗೇ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡ, ಎದ್ದರೆ ಬಿದ್ದರೆ ಜಮ್ಮು-ಕಾಶ್ಮೀರದಿಂದಲೇ ರಿಪೋರ್ಟಿಂಗ್ ಮಾಡುವ ಹಿರಿಯ ಪತ್ರಕರ್ತರು ಒಂದೆಡೆಯಾದರೆ, ಚಿತ್ರ-ವಿಚಿತ್ರ ಹೆಸರುಗಳನ್ನಿಟ್ಟುಕೊಂಡ ತಾಲೂಕು ಮಟ್ಟದ ಪೀತ ಪತ್ರಿಕೆಗಳು ಮತ್ತೊಂದೆಡೆ. ಇವುಗಳ ಮಧ್ಯದಲ್ಲಿ, ಸಾಧ್ಯವಾದಷ್ಟು ದಿನ ಮಾಧ್ಯಮದಲ್ಲಿ ಇದ್ದು ರಾಜ್ಯೋತ್ಸವ ಪ್ರಶಸ್ತಿಗೆ ಲಾಬಿ ಮಾಡಿ, ಮಾಡಿಸಿ, ಸೈಟು, ಕಾರು, ಮನೆ ಮಾಡಿಕೊಂಡು, ವಿಧಾನ ಸೌಧದ ಕಾರಿಡಾರ್ ಗಳಲ್ಲಿ ಟ್ರಾನ್ಸ್ ಫರ್ ಗಳನ್ನು ಮಾಡಿಸುತ್ತ ಹಾಯಾಗಿರುವವರು ನೂರಾರು ಮಂದಿ. ಇಂತಹ ಕೆಲವರಿಗೆ ಮ್ಯಾನೇಜ್ ಮೆಂಟ್ ಗಳಿಂದಲೇ ಕುಮ್ಮಕ್ಕು. ಯಾಕೆಂದರೆ ಆ ಮ್ಯಾನೇಜ್ ಮೆಂಟ್ ಪ್ರಮುಖನಿಗೆ ‘ಸಮಾಜ ಸೇವಾ ರತ್ನ’ ದಂತಹ ಪ್ರಶಸ್ತಿ ಕೊಡಿಸುವುದು, ಸಹೋದರ ಸಂಸ್ಥೆಗಳ ಟೆಂಡರ್ ಅಪ್ರೂವ್ ಮಾಡಿಸುವ ಕೆಲಸವನ್ನು ಇದೇ ಪತ್ರಕರ್ತರು ಮಾಡಬೇಕು. ಹಲವು ಮಾಧ್ಯಮ ಸಂಸ್ಥೆಗಳಂತೂ ಇದಕ್ಕಾಗಿಯೇ ‘ಸ್ಪೆಷಲ್ ಕರೆಸ್ಪಾಂಡಂಟ್’ ಗಳನ್ನು ಇಟ್ಟುಕೊಂಡಿದ್ದಾರೆ.
ಈ ಭ್ರಷ್ಟಾಚಾರಕ್ಕಿಂತ ಭಯಾನಕವಾಗಿರುವುದು ಹಾಗೂ ಆತಂಕಕಾರಿಯಾಗಿರುವುದು ಮಾಧ್ಯಮ ಹಾಗೂ ರಾಜಕಾರಣದ ಸಂಬಂಧ. ಕರ್ನಾಟಕವನ್ನೇ ನೋಡಿ. ಹಲವು ಪತ್ರಿಕೆಗಳು ಹಾಗೂ ಚ್ಯಾನಲ್ ಗಳನ್ನು ರಾಜಕಾರಣಿಗಳೇ ಬಹಿರಂಗವಾಗಿ ನಡೆಸುತ್ತಿದ್ದಾರೆ. ಇಂತಹ ಚ್ಯಾನಲ್ ಗಳಿಂದ ಎಷ್ಟರಮಟ್ಟಿಗೆ ನೈಜ ಸುದ್ದಿಯನ್ನೂ, ನೇರ ವರದಿಯನ್ನೂ, ನಿರ್ಭೀತ ಪತ್ರಿಕೋದ್ಯಮವನ್ನೂ ನಿರೀಕ್ಷಿಸಲು ಸಾಧ್ಯ? ಹೋಗಲಿ, ವಿರುದ್ಧ ಪಾರ್ಟಿಯವರ ಪತ್ರಿಕಾಗೋಷ್ಠಿಯಲ್ಲಿ ಈ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಎಷ್ಟರಮಟ್ಟಿಗೆ ತಲೆ ಎತ್ತಿ, ಎದೆ ಉಬ್ಬಿಸಿ ಪ್ರಶ್ನೆ ಕೇಳಲು ಸಾಧ್ಯ? ನವದೆಹಲಿಯಲ್ಲಿ ನಡೆಯುವ ರಾಜಕಾರಣಿಗಳ ಪತ್ರಿಕಾಗೋಷ್ಠಿಯಲ್ಲಿ ಹಲವು ರಾಜ್ಯಗಳ ಮುಖಂಡರು ತಮ್ಮ ವಿರೋಧಿ ರಾಜಕಾರಣಿ ನಡೆಸುವ ಚ್ಯಾನಲ್ ಗೆ ಸೇರಿದ ಪತ್ರಕರ್ತನ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೇ ಹೋಗುವುದಿಲ್ಲ. “ಯೂ ಮೇಯ್ ಲೀವ್ ದಿ ಪ್ರೆಸ್ ಕಾನ್ಫರೆನ್ಸ್” ಎಂದು ಮುಲಾಜಿಲ್ಲದೆ ಹೇಳುತ್ತಾರೆ.
ಮಾಧ್ಯಮ ರಾಜಕಾರಣ ಇಲ್ಲಿಯೇ ನಿಲ್ಲುವುದಿಲ್ಲ. ಹಿಂದಿ-ಇಂಗ್ಲೀಷ್-ಕನ್ನಡ ಚ್ಯಾನಲ್ ಗಳಲ್ಲಿ ನಡೆಯುತ್ತಿರುವ ಪ್ಯಾನಲ್ ಡಿಸ್ಕಷನ್ ಗಳ ಪರಿಸ್ಥತಿ ನೋಡಿದರೇ ಆ ಚ್ಯಾನಲ್ ನ ಬಣ್ಣ ಬಯಲಾಗುತ್ತದೆ. ಡಿಸ್ಕಷನ್ ಆರಂಭವಾದ ಐದಾರು ನಿಮಿಷಗಳಲ್ಲೇ ಆಂಕರ್ ನ ನಿಲುವೇನು, ಆತ ಯಾವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾನೆ ಎಂದು ಯಾರೇ ಆದರೂ ಥಟ್ಟನೆ ಗುರುತಿಸಬಹುದು. ಆಂಕರ್, ಪ್ಯಾನಲ್ ನಲ್ಲಿರುವ ನಿರ್ದಿಷ್ಟ ಪಕ್ಷ ಅಥವಾ ಸಂಘಟನೆಗೆ ಸೇರಿದ ವ್ಯಕ್ತಿಗೆ ಮಾತನಾಡಲು ಅವಕಾಶವನ್ನೇ ನೀಡದಿರುವುದು ಅಥವಾ ಮಧ್ಯದಲ್ಲೇ ಆತನ ಮಾತನ್ನು ತುಂಡರಿಸುವುದು, ಅನಗತ್ಯ ಪ್ರಶ್ನೆಗಳನ್ನು ಕೇಳಿ ಕಿರಿಕಿರಿ ಉಂಟುಮಾಡುವುದು, ಮತ್ತೊಬ್ಬರಿಗೆ ಬೇಕಾದ ಹಾಗೆ ಪ್ರಶ್ನೆ ಕೇಳುವುದು – ಎಲ್ಲದರಲ್ಲೂ ಅಡಗಿರುವುದು ಇದೇ ಪಕ್ಷ ರಾಜಕಾರಣ.
ರಾಜಕಾರಣದ ಮುಖ ಹೀಗಾದರೆ, ಇನ್ನು ಪತ್ರಕರ್ತರ ಪರಿಸ್ಥಿತಿ ಅವಲೋಕಿಸಿದರೆ ವಿಷಾದ ಹಾಗೂ ಆತಂಕ ಎರಡೂ ಉಂಟಾಗುತ್ತದೆ. ಮೊದಲಾದರೆ ಪತ್ರಿಕೋದ್ಯಮಕ್ಕೆಂದೇ ವಿಶೇಷವಾದ ಕೋರ್ಸ್ ಗಳಿರಲಿಲ್ಲ. ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಯಾರೂ ಹೇಳಿಕೊಡತ್ತಲೂ ಇರಲಿಲ್ಲ. ಆದರೂ ಕರ್ನಾಟಕ ‘ವಾಹ್’ ಎಂದು ಬರೆಯುವ ಪತ್ರಕರ್ತರನ್ನು ಕಂಡಿತು. ಇಂದು ಪತ್ರಿಕೋದ್ಯಮದ ಕೋರ್ಸ್ ಗಳಿವೆ. ಮಾಧ್ಯಮಕ್ಕಾಗಿಯೇ ವಿಶೇಷವಾದ ಕಾಲೇಜುಗಳಿಗವೆ. ಹೀಗಿದ್ದೂ ಅತ್ಯುತ್ತಮ ಪತ್ರಕರ್ತರು ಮಾತ್ರ ತಯಾರಾಗುತ್ತಿಲ್ಲ. ಇತ್ತಿಚೆಗಷ್ಟೇ ನನ್ನ ಸಹೋದ್ಯೋಗಿ ಪತ್ರಕರ್ತರು ಈ ಘಟನೆಯನ್ನು ವಿವರಿಸಿದರು. ಪತ್ರಿಕೋದ್ಯಮವನ್ನು ಪಾಠಮಾಡಲೆಂದು ಅವರನ್ನು ಕರ್ನಾಟಕದ ಖ್ಯಾತ ಮಾಧ್ಯಮ ಕಾಲೇಜೊಂದಕ್ಕೆ ಆಹ್ವಾನಿಸಲಾಗಿತ್ತಂತೆ. ಸ್ನಾತಕೋತ್ತರ ಪದವಿಯನ್ನು ಆಫರ್ ಮಾಡುವ ಕಾಲೇಜು ಅದು. ಹೀಗಾಗಿ ಇವರು ಸಾಕಷ್ಟು ತಯಾರಿ ಮಾಡಿಕೊಂಡೇ ಕಾಲೇಜಿಗೆ ಭೇಟಿ ಇತ್ತರು. ಪಾಠ ಮಾಡುತ್ತ, ವಿದ್ಯಾರ್ಥಿಗಳ ಬರವಣಿಗೆ ಶೈಲಿ ಹೇಗಿದೆ ಎಂದು ಅರಿಯುವ ಮನಸ್ಸಾಯಿತು. ಸರಿ ಎಂದು, ವಿದ್ಯಾರ್ಥಿಗಳಿಗೆ ಅವರು ಬಯಸಿದ ಯಾವುದಾದರೂ ಒಂದು ವಿಷಯದ ಮೇಲೆ ಚಿಕ್ಕದಾದ ಲೇಖನ ಬರೆಯಲು ಹೇಳಿದರಂತೆ. ವಿದ್ಯಾರ್ಥಿಗಳ ಲೇಖನಗಳು ಕೈಸೇರುತ್ತಿದ್ದಂತೆ ಸ್ನೇಹಿತರಿಗೆ ಯಾಕೋ ಎಲ್ಲಿಯೋ ಏನೋ ತಪ್ಪಿದ ಭಾವ. ಕಾರಣ, ವಿದ್ಯಾರ್ಥಿಗಳು ಬರೆದ ಲೇಖನದ ತುಂಬಾ ನೂರಾರು ಕಾಗುಣಿತ ತಪ್ಪುಗಳು, ತಪ್ಪು ವಾಕ್ಯರಚನೆಗಳು ಹಾಗೂ ವ್ಯಾಕರಣ ದೋಷಗಳು. ಸ್ನೇಹಿತರಿಗೆ ಆತಂಕವಾಗಿ, ವಿದ್ಯಾರ್ಥಿಗಳಿಗೆ ‘ಅ ಆ ಇ ಈ’ ಬರೆಯಿರಿ ಅಂದರಂತೆ. ಇದನ್ನು ವಿದ್ಯಾರ್ಥಿಗಳು ಬರೆದು ನೀಡಿದಾಗ, ಸ್ನೇಹಿತರಿಗೆ ಶಾಕ್. 30 ವಿದ್ಯಾರ್ಥಿಗಳಲ್ಲಿ 29 ವಿದ್ಯಾರ್ಥಿಗಳು ತಪ್ಪು ತಪ್ಪು ‘ಅ ಆ ಇ ಈ’ ಬರೆದಿದ್ದರಂತೆ. ಇದು ನಡೆದದ್ದು, ಕರ್ನಾಟಕದ ಪ್ರತಿಷ್ಠಿತ ಮಾಧ್ಯಮ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಕ್ಲಾಸಿನಲ್ಲಿ. ಇವರೇ ನಮ್ಮ ಮುಂದಿನ ಪತ್ರಕರ್ತರು. ಸಮಾಜದ ಡೊಂಕನ್ನು ತಿದ್ದುವ ಅಂಕಣಕಾರರು!! ಹೇಗಿದೆ ನೋಡಿ ಪರಿಸ್ಥಿತಿ.
ಇನ್ನು ಸುದ್ದಿ ಮಾಧ್ಯಮಕ್ಕಿಂತ ಹೆಚ್ಚು ಪ್ರಭಾವ ಬೀರುವುದು GEC ಗಳು ಅಂದರೆ, General Entertainment Channel. ಇದರಲ್ಲಿ ಪ್ರಸಾರವಾಗುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ನಾಗರಿಕರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಯೋಚನಾ ಶೈಲಿ ಹಾಗೂ ಮನೋಧರ್ಮವನ್ನು ರೂಪಿಸುತ್ತವೆ. ಆದರೆ ಇಂದು ರಾಷ್ಟ್ರೀಯ ಹಾಗೂ ರಾಜ್ಯದ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಗುಣಮಟ್ಟ, ಕಥಾ ಹಂದರ, ಸನ್ನಿವೇಶ, ಡೈಲಾಗ್ ಗಳ ಬಗ್ಗೆ ಮಾತನಾಡದಿದ್ದರೇ ಒಳಿತು. ರಾಮಾಯಣ, ಮಹಾಭಾರತ, ಚಾಣಕ್ಯ, ನುಕ್ಕಡ್, ಹೆಲೋ ಝಿಂದಗಿ, ವಾಗಳೆ ಕಿ ದುನಿಯಾ, ಗುಡ್ಡದ ಭೂತದಂತಹ ಜಾಗದಲ್ಲಿ ಬಂದಿರುವ ಸೀರಿಯಲ್ ಗಳು ಅನಾಹುತವನ್ನೇ ಸೃಷ್ಟಿಸುತ್ತಿವೆ. ಎಲ್ಲ ವಾಹಿನಿಗಳಲ್ಲಿ ಹೀಗಿದೆ ಎಂದೆಲ್ಲ. ಆದರೆ ಒಳ್ಳೆಯ ಧಾರಾವಾಹಿಗಳ ಪ್ರಮಾಣ ಮಾತ್ರ ತೀರ ಕಡಿಮೆ. ರಿಯಾಲಿಟಿ ಶೋಗಳ ಹೆಸರಿನಲ್ಲಿ ಜೀವ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು, ಕೊಳ್ಳುಬಾಕ (ಕೆಟ್ಟ)ಸಂಸ್ಕೃತಿಯನ್ನು ಪ್ರಚೋದಿಸುವ, ಮಹಿಳೆಯರನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಮುಕವಾಗಿ ತೋರಿಸುವ ಕೆಲಸಗಳೇ ವಿಜೃಂಭಿಸುತ್ತಿವೆ.
ಇದೆಲ್ಲವನ್ನು ಅವಲೋಕಿಸಿದ ಬಳಿಕ ಧುತ್ತೆಂದು ಎದುರಾಗುವ ದೊಡ್ಡ ಪ್ರಶ್ನೆಯೆಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಅಂದರೆ ಮಾಧ್ಯಮಕ್ಕೆ ಕಡಿವಾಣ ಯಾರು ಹಾಕಬೇಕು ಎಂದಾಗ ಯಾರೂ ಕೈಯೆತ್ತುವುದೇ ಇಲ್ಲ. ಟಿವಿಯಲ್ಲಿ ಕೆಟ್ಟದೆನೋ ಪ್ರಸಾರವಾಗುತ್ತಿದೆ ಎಂದಾಕ್ಷಣ ಚ್ಯಾನಲ್ ಬದಲಾಯಿಸುವವರೇ ಹೆಚ್ಚು. ಆದರೆ ಆ ಚ್ಯಾನಲ್ ಪ್ರಸಾರ ಮಾಡುತ್ತಿರುವ ದೃಶ್ಯ/ವಿಷಯ ವಸ್ತುವಿನ ವಿರುದ್ಧ ಚ್ಯಾನಲ್ ಪ್ರಮುಖರಿಗಾಗಲಿ, BCCC ಮತ್ತು NBA ಗಳಿಗಾಗಿ ದೂರು ಸಲ್ಲಿಸುವವರು ಎಷ್ಟು ಮಂದಿ. “ಥೂ ಅಸಹ್ಯವಾದದ್ದನ್ನು ತೋರಿಸಿದರು ಮಾರಾಯ್ರೆ”, “ಈ ವಿಷಯದ ಮೇಲೂ ಪ್ಯಾನಲ್ ಡಿಸ್ಕಷನ್ ಬೇಕೆನ್ರಿ?” ಎಂದು ಗೊಣಗಿಕೊಂಡು ಚ್ಯಾನಲ್ ಬದಲಾಯಿಸಿ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಮುಳುಗುವವರೇ ಹೆಚ್ಚು. ಮೊದಲ ಹಂತದಲ್ಲಿ ನಾಗರಿಕರೇ ಪ್ರಶ್ನಿಸುವ, ಪ್ರಶ್ನೆಯನ್ನು ಸರಿಯಾದವರಿಗೆ ಕೇಳುವ ಕೆಲಸವನ್ನು ಮಾಡಬೇಕು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಈಗಾಗಲೇ ಇದಕ್ಕಾಗಿ ವೀಕ್ಷಕರಿಗೆ ಒಳ್ಳೆಯ ವೇದಿಕೆಯನ್ನು ಕಲ್ಪಿಸಿದೆ. ಅದನ್ನು ಸರಿಯಾಗಿ, ಸಂಪೂರ್ಣವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕಿದೆ.
ನಾವು ಬಯಸುವ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಮಾಧ್ಯಮವನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳೋಣ. ಮಾಧ್ಯಮವನ್ನು ಪ್ರಶ್ನಿಸೋಣ. ಬದಲಾವಣೆ ತರೋಣ.
——————–

ಮೋದಿ ವಿರುದ್ಧದ ಅಸಹನೆ ನೋಡಿ ನಗುಬಂತು…

....
….

ಇಂದು ಬೆಳಿಗ್ಗೆ ಹಿಂದಿ ಹಾಗೂ ಇಂಗ್ಲೀಷ್ ನ್ಯೂಸ್ ಚಾನಲ್ ಗಳಲ್ಲಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ವಿಶ್ಲೇಷಣೆಯದ್ದೇ ಆರ್ಭಟ. ಆದರೆ ಅವುಗಳ ವರದಿಯ ರೀತಿ ಮಾತ್ರ ನಗೆಬರಿಸುವಂತಿತ್ತು.
ರಾಜಸ್ಥಾನದಲ್ಲಿ ವಸುಂಧರಾ ರಾಜೆ ಗೆದ್ದಿದ್ದಾರೆ, ಆದರೆ ಮೋದಿ ಪ್ರಚಾರ ನಡೆಸಿದ ಯಾವುದೇ ಸ್ಥಳದಲ್ಲಿ ಬಿಜೆಪಿಯ ಸಾಧನೆ ಅಷ್ಟೇನೂ ಹೇಳಿಕೊಳ್ಳುವಂತೆ ಇಲ್ಲ.
ಮಧ್ಯಪ್ರದೇಶದಲ್ಲಿ ಜನ ವೋಟ್ ಹಾಕಿರುವುದು ಶಿವರಾಜ್ ಸಿಂಗ್ ರ ಆಡಳಿತಕ್ಕೆ ಹೊರತು, ಮೋದಿ ಪ್ರವಾಸಕ್ಕಲ್ಲ.
ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪ್ರಚಾರವೇ ಚೆನ್ನಾಗಿರಲಿಲ್ಲ. ಇಲ್ಲಿಯಂತೂ ಮೋದಿ ಹೆಸರು ಮೋಡಿಯನ್ನೇ ಮಾಡಿಲ್ಲ, ಹೀಗಿರುವಾಗ ಮೋದಿ ಪ್ರಧಾನಿಯಾಗಲು ಸಾಧ್ಯವೆ? ಹೀಗೆ ಪುಂಖಾನುಪುಂಖವಾಗಿ ಚ್ಯಾನಲ್ ಗಳ ವರದಿ ಸಾಗಿತ್ತು.
ನಾನು ಮೋದಿ ಅಭಿಮಾನಿಯಲ್ಲ. ವಿರೋಧಿಯೂ ಅಲ್ಲ. ಓರ್ವ ಪತ್ರಕರ್ತನಾಗಿ ನಾನು ಮತ ಹಾಕುವುದು ವ್ಯಕ್ತಿಯ ಹಾಗೂ ಪಕ್ಷದ ಐದು ವರ್ಷಗಳ ಸಾಧನೆ ಮಾನದಂಡದ ಮೇಲೆ. ಆದರೆ ಓರ್ವ ಪತ್ರಕರ್ತನಾಗಿ ಈ ರೀತಿ ಜರ್ನಲಿಸಂ ಮಾಡುವುದನ್ನು ವಿರೋಧಿಸುತ್ತೇನೆ. ಇದ್ಯಾವ ಪತ್ರಿಕೋದ್ಯಮ ಸ್ವಾಮಿ?

ರಂಗಭೂಮಿ ಮತ್ತು ಮಾಧ್ಯಮ

2013 ರ ಮೇ ನಲ್ಲಿ ಬೆಂಗಳೂರಿನ ಕೆ. ಎಚ್. ಕಲಾಸೌಧದಲ್ಲಿ ‘ಅನಾವರಣ’ ಆಯೋಜಿಸಿದ್ದ ವಿಚಾರಣ ಸಂಕಿರಣದಲ್ಲಿ ‘ರಂಗಭೂಮಿ ಮತ್ತು ಮಾಧ್ಯಮ’ ಎಂಬ ಬಗ್ಗೆ ನನ್ನ ವಿಚಾರಗಳು.

ಪತ್ರಿಕೋದ್ಯಮದ ಲಂಚ

ಸುದ್ದಿ ಕೃಪೆ – ವಿಜಯ ಕರ್ನಾಟಕ – 19-09-2013

.....................................
……………………………….

2 TV channels fined for programme code breach

BCCC ಎರಡು ಚಾನಲ್ ಗಳಿಗೆ ಫೈನ್ ಹಾಕಿದೆ. ವಿವರಗಳಿಗೆ ಲಿಂಕ್ ಕ್ಲಿಕ್ ಮಾಡಿ.

http://articles.timesofindia.indiatimes.com/2013-08-16/india/41417221_1_2-tv-channels-acid-attacks-tv-content

BIAL ಗೆ ಮೊಟ್ಟ ಮೊದಲ ಭೂಸ್ಪರ್ಶ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊಟ್ಟ ಮೊದಲು ಕರೆದುಕೊಂಡು ಹೋಗಿದ್ದು ಪತ್ರಕರ್ತರನ್ನು. ಪ್ರಯಾಣ ಬೆಳೆಸಿದ್ದು ಎಚ್ಎಎಲ್ ವಿಮಾನ ನಿಲ್ದಾಣದಿಂದ. ಅದರ ಸ್ಟೋರಿ ಹೀಗಿತ್ತು.

ATV ಮೇಲೆ ಹೀಗೊಂದು ಸ್ಟೋರಿ….

ಈ ಟಿವಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಾಡಿದ್ದ ಸ್ಟೋರಿ ಹಾಗೂ ಪಿಟಿಸಿ.

ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ…

...

ಮೊನ್ನೆ ನನ್ನ ಮಿತ್ರರೊಬ್ಬರು ಭೇಟಿಯಾಗಿದ್ದರು. ಅವರ ತಮ್ಮ, ಖಾಸಗಿ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕರು. ತಮ್ಮನಿಗೆ ಯಾವುದಾದರೂ ಚಾನಲ್ ನಲ್ಲಿ ನ್ಯೂಸ್ ಆಂಕರ್ ಆಗಬೇಕೆನ್ನುವ ಬಯಕೆ. ಆದರೆ ಆಸೆ ಇನ್ನೂ ಈಡೇರಿಲ್ಲ. ಲೋಕಭಿರಾಮವಾಗಿ ಮಾತನಾಡುತ್ತಿರುವಾಗ ಮಿತ್ರರು ಹೇಳಿದರು, ಅವರ ತಮ್ಮ ಹೀಗೇ ತಮಾಷೆ ಮಾಡುತ್ತಿರುತ್ತಾನಂತೆ, “ನಾನು ನ್ಯೂಸ್ ಆಂಕರ್ ಆಗಲು ಸಾಧ್ಯವೇ ಇಲ್ಲ ಬಿಡಿ, ಯಾಕೆಂದರೆ ನನ್ನ ಕನ್ನಡದ ಉಚ್ಚಾರಣೆ ಶುದ್ಧವಿದೆ” ಅಂತ. ಇಂದಿನ ಬಹುಪಾಲು ಆಂಕರ್ ಗಳ ದುಸ್ಥಿತಿ ಹೇಗಿದೆ ಎಂಬುದಕ್ಕೆ ಕನ್ನಡಿಯಂತೆ ಇದೆ ಅಲ್ವೆ ನನ್ನ ಮಿತ್ರರ  ಹೇಳಿಕೆ?

ಪೋಲಿಸ್ ಆಗಿದ್ದಾಗ ಸೇವನೆ ಮಾಡಲು ಆಗಲೇ ಇಲ್ಲ…

....
….

ಇತ್ತೀಚೆಗೆ ನಿವೃತ್ತ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜಕೀಯ ಪಕ್ಷವೊಂದನ್ನು ಸೇರಿ ರಾಜಕಾರಣ ಪ್ರವೇಶ ಮಾಡಿದರು. ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ, ಖಾಸಗಿ ಚಾನಲ್ ನ ಪತ್ರಕರ್ತರೊಬ್ಬರು ಅವರನ್ನು ಸಂದರ್ಶನ ಮಾಡಿದರು. ಭ್ರಷ್ಟಾಚಾರದ ಆರೋಪವಿರುವ ಆ ಮಹಿಳಾ ಅಧಿಕಾರಿಗೆ ಕನ್ನಡ ಬರುವುದು ಅಷ್ಟಕಷ್ಟೇ. “ರಾಜಕೀಯ ಸೇರಲು ಕಾರಣವೇನು?” ಎಂಬ ಪತ್ರಕರ್ತನ ಮೊದಲ ಪ್ರಶ್ನೆಗೆ ಆಕೆ ಉತ್ತರಿಸಿದ್ದು, “ಪೋಲಿಸ್ ಡಿಪಾರ್ಡ್ ಮೆಂಡ್ ಣಲ್ಲಿದ್ದಾಗ ಸೇವನೆ ಮಾಡಲು ಆಗ್ಲಿಲ್ಲ…ರಾಜಕೀಯ ಸೇರಿ ಸೇವನೆ ಮಾಡುವುದೇ ನನ್ನ ಉದ್ದೇಶ”.

ಪತ್ರಕ್ರರ್ತ ಸುಸ್ತು….

ಮೂರ್ಖರ, ಮೂರ್ಖರಿ೦ದ, ಮೂರ್ಖರಿಗಾಗಿ

.....
…..

ಪ್ರಮೋದರ Cipher’s Space ನಿಂದ……

ತ್ರಾಸದಿ೦ದಲೇ ಅಸ೦ಬದ್ಧ ಪ್ರಾಸಕ್ಕಾಗಿ ಶಬ್ದ ತಿರುಚಿ ನ್ಯೂಸ್ ಹೆಡ್ ಲೈನ್ಸ್ ಮಾಡೋದು ಒ೦ದು ಟ್ರೆ೦ಡ್. ವಿಜಯ ಕರ್ನಾಟಕದಲ್ಲಿ ಶುರುವಾದ ಇದು ಕ್ಲೀಷೆಯಾಗಿ ಎಲ್ಲ ಕಡೇ ತು೦ಬಿ ಕನ್ನಡ ನರಳುತ್ತಿದೆ. ಅರೆ ಬೆ೦ದ ಕನ್ನಡದ ಚಾನೆಲ್ ಗಳು ಪು೦ಖಾನುಪು೦ಖವಾಗಿ ತಮ್ಮ ಪ್ರತಿಭೆಯನ್ನು ಕನ್ನಡಿಗರ ಮು೦ದೆ ತೋರಿಸಿ ಬೆತ್ತಲಾಗಿದ್ದಾರೆ. ಕನ್ನಡಿಗರೇನು ಕಮ್ಮಿ. ಉದಾರಿಗಳು. ಬೇಕಾದಷ್ಟು ಹಿ೦ದಿ, ತೆಲುಗು, ತಮಿಳು ಚಾನೆಲ್ ಇದ್ದಾವೆ. ಅದನ್ನು ನೋಡಿಕೊ೦ಡು ಹಾಯಾಗಿ ಬಿದ್ದಿರುತ್ತಾರೆ.

ಆದರೆ ಬರಿಯ ಕನ್ನಡ ಗೊತ್ತಿದ್ದವರು ಏನು ಮಾಡೋದು!!

ಇದು ಟೀವಿಯ ಒ೦ದು ತುದಿ. ಇನ್ನೊ೦ದು ತುದಿಗೆ ಹೋದಾಗ..

ಒ೦ದಾನೊ೦ದು ಕಾಲದಲ್ಲಿ ಸರಕಾರಿ ಕೆಲಸದ ಬಿದ್ದಿದ್ದ ಮಿಡಲ್ ಕ್ಲಾಸ್, ರಿಯಲ್ ಎಸ್ಟೇಟ್, ಷೇರು ಪೇಟೆ, ಐಟಿ ಇತ್ಯಾದಿಗಳ ಹಿ೦ದೆ ಬಿತ್ತು. ಸದ್ಯಕ್ಕೆ ಅವೆಲ್ಲವೂ ಬಿದ್ದಿವೆ. ರಿಯಲ್ ಎಸ್ಟೇಟ್ ಮಾಫಿಯದಿ೦ದ ಬಚಾವಾಗಳು ಮಿಡಲ್ ಕ್ಲಾಸ್ ಗೆ ಕಷ್ಟವಾಗಿದ್ದರಿ೦ದ ಮಿಡಲ್ ಕ್ಲಾಸ್ ಯಾವುದಾದರೂ ಒಳ್ಳೆಯ ಫಸಲು ಕೊಡುವ ಪ್ರೊಫೆಷನ್ ಹುಡುಕುತ್ತಿದೆ.ಮು೦ದಕ್ಕೇನು ಮಾಡುವುದು ಎ೦ಬುದಾಗಿ ಪ್ರಶ್ನೆ ಹುಟ್ಟಿಕೊ೦ಡಿದೆ.

ಇಡೀ ದಿನ ಟೀವಿ ಮು೦ದೆ ಅ೦ಗಾಲಾಚಿ ಬಿದ್ದಿರುವ ಮಿಡಲ್ ಕ್ಲಾಸ್ ಗೆ ಟೀವಿ ಸೇರಿದರೆ ಮನೆಮಾತಾಗಬಹುದು.ಟ್ಯಾಲೆ೦ಟ್ ಇಲ್ಲದೆ ದುಡ್ಡು ಮಾಡುವ ಇನ್ನೊ೦ದು ವಿಧಾನ ಟೀವಿ ಚಾನೆಲ್ ಗಳು, ನ್ಯೂಸ್, ಸೀರಿಯಲ್ ಗಳು. ಅಸ೦ಬದ್ಧಕ್ಕೆ ಹೊಸ ಔನ್ನತ್ಯ ಕೊಟ್ಟ ಧಾರವಾಹಿಗಳಿಗೆ ಕೂಡ ಬಹಳಷ್ಟು ಕತ್ತೆಗಳು ಕ್ಷಮಿಸಿ ಮನುಷ್ಯರು ಬೇಕಾಗುತ್ತಾರೆ. ಈ ಧಾರವಾಹಿಗಳ ಬಗ್ಗೆ ಒ೦ದಲ್ಲ ಮೆಗಾ ಬ್ಲಾಗಿನಲ್ಲಿ ಬರೆಯಬಹುದು. ಸದ್ಯಕ್ಕೆ ನ್ಯೂಸ್ ಚಾನೆಲ್ ಗಳ ಬಗ್ಗೆ  ಅವಲೋಕಿಸೋಣ.

ಸೊಟ್ಟ ನಿರ೦ತರ, ಹುತ್ತಮ ತೆಲುಗು ಸಮಾಜಕ್ಕಾಗಿ, ಇಪ್ಪತ್ನಾಲ್ಕು ಕ್ಯಾರೆಟ್ ಹಿತ್ತಾಲೆ ಚೊ೦ಬು  ಇತ್ಯಾದಿ ವಿಧ ವಿಧವಾಗಿ ಟ್ಯಾಗ್ ಹಾಕಿ ಮಿನುಗುತ್ತಿರುವ ಚಾನೆಲ್ ಗಳಿಗೆ ಸೇರಲು ಈ ಕೆಲವು ಅರ್ಹತೆಗಳು ಇದ್ದರೆ ನಿಮಗೆ ಕೆಲಸ ಸಿಗುವುದು ಖ೦ಡಿತ.

 • ಕ೦ಟೆ೦ಟ್ ಇಲ್ಲದೇ ಜೋರಾಗಿ ಅರಚಲು, ಕಿರುಚಲು ಗೊತ್ತಿರಬೇಕು.
 • ಒಟ್ಟಾರೆಯಾಗಿ, ಎಲ್ಲೋ ಒ೦ದು ಕಡೆ ಇತ್ಯಾದಿ ವೇದಶಬ್ದಗಳನ್ನು ಕ೦ಠಪಾಠ ಮಾಡಿ ನಿಮ್ಮ ವಾಕ್ಯದಲ್ಲಲ್ಲಿ ತುರುಕಿಸಿ ಸಾವಿರಾರು ಸಾರಿ ಸುತ್ತಿ ಬಳಸಿ ಹೇಳಿದ್ದನ್ನೇ ಹೇಳಲು ಸಿದ್ದರಿರಬೇಕು.
 • ದಿನಾಲೂ ಇದೇ ಪ್ರೋಗ್ರಾಮ್ ಲೀಸ್ಟ್ ಚಾಚೂ ತಪ್ಪದೇ ಪಾಲಿಸಬೇಕು – ಬೆಳಗ್ಗೆ ದೆವ್ರು, ದೇವ್ರ ಬಗ್ಗೆ ಭಯ ಹರಡಿಸೋದು, ಜ್ಯೋತಿಷ್ಯ, ಡಿಸ್ಕವರಿ ಯೂಟ್ಯೂಬ್ ಕಾಪಿ, ಕ೦ಪಲ್ಸರಿ ಕ್ರಿಕೆಟ್, ಯಥಾವತ್ ಅಡುಗೆ ,ಸ೦ಜೆ ಪಾಲಿಟಿಕ್ಸು, ಆಮೇಲೆ ಮರ್ಡರು ಕಾಮ ಕ್ರೈಮು, ನ೦ತರ ಹೀಗೂ ಉ೦ಟೆ.
 • ಚ೦ದನ, ಈಟೀವಿ ನ್ಯೂಸ್ ನ೦ತೆ ನ್ಯೂಟ್ರಲ್ ಆಗಿರದೆ ಪಕ್ಕದ ಮನೆಯವರ ಹತ್ರ ಗಾಸಿಪ್ ಮಾಡಿದ೦ತೆ ಮಾತಾಡಬೇಕು. ಹಾಗ೦ತೆ, ಹೀಗ೦ತೆ ಹೀಗೆ ಅ೦ತೆಕ೦ತೆಗಳ ಬೊ೦ತೆ ಇರಬೇಕು.
 • ರೇಪ್, ಸೆಕ್ಸ್ ವೈಭವೀಕರಿಸಿ ತೋರಿಸುವ ಲಜ್ಜೆಗೆಟ್ಟ ಎದೆಗಾರಿಕೆ ಇರಬೇಕು.
 • ಫುಡಾರಿಗಳ, ಫಿಲ೦ ಸ್ಟಾರ್(ಸ್ವ೦ತ ಸರ್ಟಿಫಿಕೇಟ್ ಮಾಡಿಸಿಕೊ೦ಡವರು) ಗಳ ಬೂಟು, ^&*% ನೆಕ್ಕಲು ರೆಡಿಯಾಗಿರಬೇಕು.
 • ತೆಲುಗು, ಬಾಲಿವುಡ್ ಫಿಲ೦ ಇ೦ಡಸ್ಟ್ರೀ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಅದರ ಬಗ್ಗೆ ಹಾಡಿ ಹೊಗಳಲು ಗೊತ್ತಿರಬೇಕು.
 • ಮನೆಹಾಳ್ ಜ್ಯೋತಿಷ್ಯ ಹೇಳುವವರ ಜೊತೆ ಬೊಗಳೆ ಮಾತಾಡಲು ಗೊತ್ತಿರಬೇಕು.
 • ನಿಜವಾದ ಸಮಸ್ಯೆಗಳನ್ನು ಸೈಡಿಗೆ ಹಾಕಿ, ಕೋಟಿಗಟ್ಟಳೆ ಖರ್ಚಿನ ಫಿಲ೦ ಸ್ಟಾರ್ ಮಕ್ಕಳ ಮದುವೆ, ದುಡ್ಡು ಹಾಳು ಮಾಡೊದನ್ನು ತೋರಿಸುವಷ್ಟು ಹೀನ, ಮತಿಹೀನ ನಾಗಿರಬೇಕು.
 • ಸಲೀಸಾದ, ನೇರವಾದ  ಸಬ್ಜಕ್ಟ್ ನ್ನು ಕಾ೦ಟ್ರವರ್ಸಿ ಯಾಗಿ ಕನ್ವರ್ಟ್ ಮಾಡುವ ಜಾಣ್ಮೆ ಇರಬೇಕು. ಡಿಬೇಟ್ ನಲ್ಲಿ ಕಾ೦ಟ್ರವರ್ಸಿ ಕಿ೦ಗ್ ಗಳನ್ನೇ ಕರೆಸಿ ಸೋ ಕಾಲ್ಡ್ ಡಿಸ್ಕಶನ್ ಮಾಡಿಸಬೇಕು.
 • ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಬದಲು ಅವಿವೇಕಿ, ಮೂಢ, ದರಿದ್ರ ಮನುಷ್ಯರನ್ನು ಸ್ಟುಡಿಯೋಗೆ ತ೦ದು ಅವರ ಬಾಯಿ೦ದ ನುಡಿ ಮುತ್ತನ್ನು ಉದುರಿಸುವ ಟ್ಯಾಲೆ೦ಟ್ ಇರಬೇಕು.
 • ಯಾವುದೇ ಕ್ಷಣದಲ್ಲಿ ಸಿಕ್ಕಿದನ್ನೆಲ್ಲಾ ವೀಡಿಯೋ ಮಾಡಲು ಕ್ಯಾಮೆರ ಇರೋ ಸ್ಮಾರ್ಟ್ ಫೋನ್ ಇದ್ದರೆ ಚೆನ್ನ.

ವೀಕ್ಷಕ ಮಹಾಶಯನ ಬಗ್ಗೆ ಜಾಸ್ತಿ ತಲೆಗೆಡಿಸಿಕೊಳ್ಳಬೇಡಿ. ಭಾರತದಲ್ಲಿ ನೂರಿಪ್ಪತ್ತು ಕೋಟಿ ಜನ ಇದ್ದಾರೆ. ಎಷ್ಟೊ೦ದು ಜನ ಪರ್ಪಸ್ ಇಲ್ದೇ ಹುಟ್ಟಿದ್ದಾರೆ. ಯಾವುದೇ ಪ್ರೋಗ್ರಾಮ್ ಇರಲಿ, ಎಷ್ಟೇ ಕೆಟ್ಟ ಕೀಳು ಅಭಿರುಚಿಯ ಪ್ರೋಗ್ರಾಮ್ ಇರಲಿ ನೋಡೋರು ಸಿಗ್ತಾರೆ. ಆಫ್ಟರ್ ಆಲ್ ಅವನು ಯಾವುದಾದರೂ ಚಾನೆಲ್ ನೋಡಲೇಬೇಕು. ಟೀವಿಯ ಮು೦ದೆ ಕೂರುವರೆಲ್ಲಾ ಮೂರ್ಖರೆ೦ಬ ಆಪ್ತ ಭಾವನೆಯಿ೦ದ ಪ್ರೋಗ್ರಾಮ್ ನಡೆಸಿಕೊಡಿ. ತಲೆ ನಮ್ಮದು ಯಶಸ್ಸು, ಟಿಆರ್ ಪಿ ನಿಮ್ಮದು.

ಜಾಸ್ತಿ ಟಿಆರ್ ಪಿ ಎ೦ದರೆ ಚೆನ್ನಾಗಿರಲೇಬೇಕು ಎ೦ಬುದು ಮಾಸ್ ಹಿಸ್ಟೀರಿಯ. ಜಾಸ್ತಿ ಪೇಪರ್ ಸರ್ಕುಲೇಷನ್ ಅ೦ದರೆ ಚೆನ್ನಾಗಿರಲೇಬೇಕು ಅಲ್ಲವೇ. ಉದಾ. ಟೈ೦ಸ್ ಆಫ್ ಇ೦ಡಿಯಾ ದ೦ತಹ ಪೇಪರ್ ತಮ್ಮನ್ನು ತಾವು ಹಾಡಿ ಕೊ೦ಡಾಡಿಕೊ೦ಡು ಮಾರಿ, ಜನರನ್ನು ಯಾಮರಿಸುತ್ತಿರುವುದು ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ. ನೆಟ್ಟಗೆ ಯಾವತ್ತಾದರೂ ಹೆಡ್ ಲೈನ್ ಬರೆದವರಲ್ಲ.  ಮನೆ ಮ೦ದಿ ಕುಳಿತು ಓದುವ ಪೇಪರಲ್ಲ.  ಲಜ್ಜೆಗೆಟ್ಟ ನ್ಯೂಸ್ ನ್ನು ಬಿಡದೆ ಆರಿಸಿ ಪ್ರಿ೦ಟ್ ಮಾಡಿದವರು. ಲಾಸ್ಟ್ ಸ್ಟಾಪ್ ಜಾಸ್ತಿ ಸರ್ಕುಲೇಷನ್. ಅದಕ್ಕೆ ಏನೂ ಮಾಡಲು ರೆಡಿ.

ಜಾಸ್ತಿ ಕ್ಲಿಕ್ ಗಳೆ೦ದರೆ ಬೆಸ್ಟ್ ವೆಬ್ ಸೈಟ್. ಇದೂ ಮೇಲೆ ಹೇಳಿ೦ದತೆ ಸ್ವ೦ತ ಸರ್ಟಿಫೀಕೇಟ್.  ಟೈ೦ಸ್, ಹಿ೦ದೂಸ್ತಾನ್ ಟೈಮ್ಸ್ ಇತ್ಯಾದಿ ಕಾ೦ಗ್ರೆಸ್ ಕೃಪಾ ಪೋಷಿತ ಸುದ್ಧಿ ಮನೆಗಳು ಧಾರಾಳವಾಗಿ ಅಶ್ಲೀಲತೆಯನ್ನು ನಾಭೀಕರಿಸಿ ತೋರಿಸುತ್ತಾರೆ. ಇದರ ಹಿ೦ದಿನ ಉದ್ದೇಶ ಜಾಸ್ತಿ ಕ್ಲಿಕ್ಕ್ ಗಳು. ಅಶ್ಲೀಲ ವೆಬ್ ಸೈಟ್ ಗಳಿಗೂ ಈ ವೆಬ್ ಸೈಟ್ ಗಳಿಗೂ ಜಾಸ್ತಿ ವ್ಯತ್ಯಾಸವಿಲ್ಲ. ಬರಿಯ 18 ವಯಸ್ಸಿನ ಡಿಸ್ಕ್ಲೈಮರ್ ಮಾತ್ರ.

ಜಾಸ್ತಿ ಹಣಗಳಿಸಿದೆಯೆ೦ದರೆ ಒಳ್ಳೆಯ ಚಿತ್ರ ಎ೦ದು ಮಾಧ್ಯಮದವರು ಸೃಷ್ಟಿಸಿದ ಮಿಥ್ಯತೆ ಎಲ್ಲಾ ಕಡೆ ವ್ಯಾಪಿಸಿ ಅದೇ ಸತ್ಯವಾಗಿ ತೋರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ. ನೂರು ಕೋಟಿ ಕ್ಲಬ್ ನಲ್ಲಿರುವ ಬಾಲಿವುಡ್ ಚಿತ್ರಗಳ ಪಟ್ಟಿ ನೋಡಿ. ಟೀವಿ ಹಾಗು ನ್ಯೂಸ್ ಪೇಪರ್ ನವರು “ಮಸ್ಟ್ ವಾಚ್”, “ಡೋ೦ಟ್ ಮಿಸ್” ಅ೦ತಾ ಬರೆದು, ಸಿಲೆಬ್ರಿಟಿ ಪು೦ಗಿ ಊದಿ ಊದಿ ಚೆನ್ನಾಗಿ “ರಿವ್ಯೂ” ಬರುವ೦ತೆ ನೋಡಿಕೊಳ್ಳುತ್ತಾರೆ. ಶಾರುಕ್, ಯಶ್ ರಾಜ್ ಪ್ರೊಡಕ್ಷನ್  ಇ೦ಡಸ್ಟ್ರಿ ಭಯದಿ೦ದ ಕ೦ಪಲ್ಸರಿ 3.5-4 ಸ್ಟಾರ್ ರೇಟಿ೦ಗ್ ಚಿತ್ರಗಳಾಗುತ್ತವೆ. ಪ್ರತಿ ಸಾರಿಯೂ ಮೋಸ ಹೋಗುವವರ ದುಡ್ಡು  ಅದೇ ದೊಡ್ಡ ಫ್ರಾಡ್ಯೂಸರ್ ಗಳ ಕಿಸೆಗೆ ಸೇರುತ್ತವೆ.

ಹೆಚ್ಚಿನವರಿಗೆ ದಿನ ಬೆಳಗಾಗುವುದು ಟೀವಿಯಿ೦ದಲೇ. ಎಲ್ಲರಿಗೂ ದಿನ ಮುಗಿಯುವುದು ಟೀವಿಯಿ೦ದ. ಟೀವಿ ಮೂರ್ಖರ ಪೆಟ್ಟಿಗೆ ಅನ್ನುತ್ತಿದ್ದರು. ಅದು ಮೂರ್ಖರನ್ನು ಹುಟ್ಟು ಹಾಕುತ್ತದೆ. ಮೂರ್ಖರನ್ನು ತನ್ನ ತೆಕ್ಕೆಗೆಳೆದು ನಿಯ೦ತ್ರಿಸುತ್ತದೆ ಕೂಡ.

ನ್ಯೂಸ್ ಪಿಂಟ್ ಈಗ ಆನ್ ಲೈನ್ ನಲ್ಲಿ ಲಭ್ಯ

ನನ್ನ ಪುಸ್ತಕ ‘ನ್ಯೂಸ್ ಪಿಂಟ್’,  ‘ಸಪ್ನ ಆನ್ ಲೈನ್’ ನಲ್ಲಿ ಲಭ್ಯವಿದೆ. ಭೇಟಿ ಕೊಡಿ Sapna Online

.....
…..

 

ಕನಿಷ್ಠ ಶಿಷ್ಟಾಚಾರವೂ ಇಲ್ಲದ ರಾಜಕಾರಣಿಗಳು

 

ರಾಜಕಾರಣಿಗಳಿಗೆನೂ ಕಡಿಮೆ ಕೊಬ್ಬು ಇರುವುದಿಲ್ಲ. ಅಫ್ ಕೋರ್ಸ್ ಹಲವರಿಗೆ ಮೈ ತುಂಬ ತುಂಬಿಕೊಂಡಿರುವುದು ಬರೀ ಕೊಬ್ಬೇ. ಸುದ್ದಿ ವಾಹಿನಿಯೊಂದರಲ್ಲಿ ಸಾಮಾನ್ಯವಾಗಿ ಮಹತ್ವದ ಬೆಳವಣಿಗೆಗಳು ನಡೆದಾಗ ಸಂಬಂಧಪಟ್ಟವರ ಫೋನ್ ಇನ್ ತೆಗೆದುಕೊಳ್ಳುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಡಿಎಸ್ ಎಂಬ ರಾಜಕಾರಣಿಯ ಫೋನೋ ತೆಗೆದುಕೊಳ್ಳಬೇಕಾಗಿತ್ತು. ಕೆಡಿಎಸ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕೈ ರಾಜಕಾರಣಿ. ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ, ಭೂಮಿ ಡಿನೋಟಿಫಿಕೇಷನ್ ಎಲ್ಲದರಲ್ಲಿಯೂ ಎತ್ತಿದ ಕೈ. ಹಿಟ್ ಫಿಲ್ಮ್ ಗಳ ಹಿರೋಯಿನ್ ಗಳು ಈತನ ಹಾಸಿಗೆಗೆ ಬರಲೇಬೇಕು. ಈಗ ಪ್ರಸಿದ್ಧ ನಟಿಯಾಗಿರುವ ಒಬ್ಬಾಕೆ ಈತನ ಬೇಡಿಕೆಗೆ ಒಪ್ಪದಿದ್ದಾಗ, ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿರಾತಕ ಈ ಕೆಡಿಎಸ್.

ಮೊನ್ನೆ ಯಾವುದೋ ಸುದ್ದಿ ವಾಹಿನಿಯೊಂದರಲ್ಲಿ ನೋಡಿದ್ದು. ಈತ ಆನ್ ಏರ್ ಗೆ ಬಂದ ಕೂಡಲೇ, ಸುದ್ದಿ ವಾಚಕಿ, “ಕೆಡಿಎಸ್ ಅವರೇ ನಮಸ್ಕಾರ” ಎಂದಿದ್ದಾರೆ. ಆದರೆ ಕೆಡಿಎಸ್ ಗೆ ಕೊಬ್ಬು ಎಷ್ಟೆಂದರೆ, ಪ್ರತಿ ನಮಸ್ಕಾರ ಹೇಳದೆ, “ಹಂ….” ಅಂತ ಅಷ್ಟೇ ಹೇಳಿದ್ದಾನೆ. ಆದರೂ ಸುದ್ದಿ ವಾಚಕಿ ಕನಿಷ್ಠ ಶಿಷ್ಟಾಚಾರವನ್ನೂ ಬಯಸದೇ ಮುಂದಿನ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ನೆನಪಾಗಿದ್ದು, “When you were only asked to bend, many of you chose to crawl”

 

ತಮ್ಮ ರಾಜೀನಾಮೆಯನ್ನು ನ್ಯೂಸ್ ಆಂಕರ್ ಗಳು ಲೈವ್ ಆಗಿ ಬ್ರೇಕ್ ಮಾಡಿದ್ದು ಹೀಗೆ…

ಇತ್ತೀಚೆಗೆ ಎಬಿಸಿ7 ಎಂಬ ಸುದ್ದಿ ವಾಹಿನಿಯ ಇಬ್ಬರು ಸುದ್ದಿ ವಾಚಕರು ತಮ್ಮ ರಾಜೀನಾಮೆಯನ್ನು ಲೈವ್ ಆಗಿ ಬ್ರೇಕ್ ಮಾಡಿದ್ದು ಹೀಗೆ…

ಇಲೆಕ್ಟ್ರಾನಿಕ್ ಮೀಡಿಯಾದ ಸಂವೇದನೆಗಳು ಬದಲಾಗತೊಡಗಿವೆ

….

ಕೆಲ ವರ್ಷಗಳ ಹಿಂದೆ ನಡೆದ ಘಟನೆ. ಓರಿಸ್ಸಾದ ಪೋಲಿಸ್ ಮಹಾನಿರ್ದೇಶಕನೊಬ್ಬ ನ್ಯಾಯ ಒದಗಿಸುವ ನಾಟವನ್ನಾಡಿ ಆದಿವಾಸಿ ಹುಡುಗಿಯೊಬ್ಬಳನ್ನು ತನ್ನ ತೆವಲಿಗೆ ಬಳಸಿಕೊಂಡಿದ್ದ. ಆಕೆಯನ್ನು ಮತ್ತೆ ಮತ್ತೆ ಬಳಸಿಕೊಂಡೂ, ಆಕೆಗೆ ಯಾವುದೇ ರೀತಿಯ ಸಹಾಯವನ್ನು ಮಾಡಲಿಲ್ಲ. ಕೊನೆಗೆ ರೋಸಿ ಹೋದ ಹುಡುಗಿ, ಸ್ಥಳೀಯ ಇಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತನೊಬ್ಬನನ್ನು ಸಂಪರ್ಕಿಸಿದಳು. ಆ ಪತ್ರಕರ್ತ ಹುಡುಗಿಯೊಂದಿಗೆ ಉಪಾಯವಾಗಿ ಹಿಡನ್ ಕ್ಯಾಮೆರಾ ಕಳಿಸಿ ಡಿಜಿಯ ಕಾಮಕೇಳಿಯ ದೃಶ್ಯಗಳನ್ನು ಸೆರೆಹಿಡಿದ. ಆ ದೃಶ್ಯಗಳು ತೀರ ಹಸಿಹಸಿಯಾಗಿದ್ದವು. ಆ ವಿಶುವಲ್ಸ್ ಗಳನ್ನು ಹೆಡ್ ಆಫೀಸ್ ಗೆ ಕಳಿಸಲಾ ಎಂದು ಕೇಳಿದ್ದಕ್ಕೆ, ವಿಶುವಲ್ಸ್ ನ ತೀವ್ರತೆ ಅರಿಯದ ಹೆಡ್ ಆಫೀಸ್ ನವರು, ಕಳಿಸು, ಅಂದಿದ್ದಾರೆ. ಆದರೆ ಯಾವಾಗ ವಿಶುವಲ್ಸ್ ಗಳು ಎಲ್ಲರೂ ಆಕ್ಸೆಸ್ ಮಾಡಬಹುದಾದ ಫೋಲ್ಡರ್ ಗೆ ಬಂದು ಬಿತ್ತೊ, ಇಡೀ ಆಫೀಸಿನವರು ಆ ವಿಶುವಲ್ಸ್ ಗಳನ್ನು ಕದ್ದು ಮುಚ್ಚಿ ನೋಡತೊಡಗಿದ್ದಾರೆ. ತಕ್ಷಣ ಜಾಗೃತಗೊಂಡ ಐಟಿ ತಂಡ, ಆ ವಿಶುವಲ್ಸ್ ಗಳನ್ನು ಸೀಕ್ರೇಟ್ ಫೋಲ್ಡರ್ ಗೆ ಹಾಕಿ ನಿಟ್ಟುಸಿರು ಬಿಟ್ಟಿದೆ. ಆಫೀಸಿನಲ್ಲಿದ್ದ ಮಹಿಳಾ ಉದ್ಯೋಗಿಗಳಿಗೆ ಈ ಘಟನೆ ತೀರ ಮುಜುಗರ ತಂದಿದೆ.

ಕೆಲ ವರ್ಷಗಳ ಬಳಿಕ, ಅಂದರೆ ಇತ್ತಿತ್ತಲಾಗಿ, ಇದೇ ತರಹದ ಘಟನೆಯೊಂದು ಬಾಗಲಕೋಟೆಯಿಂದ ವರದಿಯಾಗಿದೆ. ಎಂದಿನಂತೆ ವಿಶುವಲ್ಸ್ ಗಳು ಹೆಡ್ ಆಫೀಸಿಗೆ ಬಂದಿವೆ. ವಿಶುವಲ್ಸ್ ಗಳು ಬಹಿರಂಗವಾಗಿ ನೋಡಲಾಗದ ಮಟ್ಟಿಗಿವೆ. ಆದರೆ ಆಫೀಸಿನಲ್ಲಿ ಎಲ್ಲರೂ ರಾಜಾರೋಷವಾಗಿ ಅವನ್ನು ನೋಡಿದ್ದಾರೆ.

ಈ ಎರಡೂ ಘಟನೆಗಳನ್ನು ಇಟ್ಟು ನೋಡಿದಾಗ, ಇವುಗಳ ವಿಶ್ಲೇಷಣೆ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಮಾಧ್ಯಮದ ಸಿಬ್ಬಂದಿ ಪ್ರಾಕ್ಟಿಕಲ್ ಆಗುತ್ತಿದ್ದಾರೆಯೆ ಅಥವಾ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆಯೆ? ನೀವೇನನ್ನುತ್ತೀರಿ?

ಮಾಧ್ಯಮ ರಂಗದ ಹೊಸ ರೋಗ

……..

ಯಾರೇ ಮಾಧ್ಯಮ ರಂಗ ಪ್ರವೇಶಿಸಿದರೂ, ಡೆಸ್ಕ್ ನಲ್ಲಿ ಮೊದಲು ಕೊಡುವ ಕೆಲಸವೇ ಇಂಗ್ಲೀಷ್ ಕಾಪಿಗಳನ್ನ ಕನ್ನಡಕ್ಕೆ ಅನುವಾದ ಮಾಡುವುದು. ಇಂಗ್ಲೀಷ್ ಹಾಗೂ ಕನ್ನಡ ಭಾಷೆ ಸುಧಾರಿಸಲಿ ಎಂಬ ಉದ್ದೇಶದ ಜೊತೆಗೆ, ಡೆಸ್ಕ್ ನ ಅವಿಭಾಜ್ಯ ಕೆಲಸಗಳಲ್ಲಿ ಇದು ಒಂದಾಗಿದೆ. ತುಂಬಾ ಮುಖ್ಯವಾದ ಅಥವಾ ತಾಂತ್ರಿಕ, ವೈಜ್ಞಾನಿಕ, ಆರ್ಥಿಕ ವರದಿಗಳನ್ನ ಮುಖ್ಯಸ್ಥರೇ ಅನುವಾದಿಸುತ್ತಾರೆ.

ಆದರೆ ಇತ್ತೀಚೆಗೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಹೊಸ ರಕ್ತಕ್ಕೆ ರೋಗವೊಂದು ಅಂಟಿಕೊಂಡಿದೆ. ಇಂಗ್ಲೀಷ್ ಕಾಪಿ ಕೊಟ್ಟ ತಕ್ಷಣ, google ಟ್ರಾನ್ಸ್ ಲೇಷನ್ ಗೆ ಹೋಗಿ ಛಕ್ಕಂತ ಅನುವಾದ ಮಾಡಿಬಿಡುವುದು. ಸಣ್ಣ ಪುಟ್ಟ ತಪ್ಪುಗಳನ್ನ ನಂತರ ಸರಿಪಡಿಸುವುದು. ಆದರೆ ಈ ರೀತಿ ಮಾಡುವುದರಿಂದ ತಲೆಗೇನೂ ಕೆಲಸವಿಲ್ಲ. ಇಂತಹ ತಲೆಗಳಿಗೆ ಮುಂದೆ ಭವಿಷ್ಯವೂ ಇಲ್ಲ ಬಿಡಿ.

ಕೃಷ್ಣಾರ್ಪಣಮಸ್ತು…

ಜ್ಯೋತಿಷ್ಯಾಯ ಜಯಂ, ನ ಡಾಕ್ಟರಾಯ

…..

ಮಾಧ್ಯಮಗಳು ಸಹಾಯ ಮಾಡಲು ಮುಂದೆ ಬರುತ್ತವೆ ಅಂದರೂ ಜನರಿಗೆ ಅದು ಬೇಡವಾಗಿರುತ್ತದೆ ಅನ್ನುವುದಕ್ಕೆ ಮೊನ್ನೆ ನಡೆದ ಘಟನೆ ಉದಾಹರಣೆ.

ಕೊಪ್ಪಳದಿಂದ ಒಂದು ಸ್ಟೋರಿ ಬಿತ್ತರವಾಯಿತು. 12 ವರ್ಷದ ಹುಡುಗನೊಬ್ಬನ ಕೈ ಹಾಗೂ ದೇಹದ ಕೆಲ ಭಾಗಗಳಿಂದ ಇದ್ದಕ್ಕಿದ್ದ ಹಾಗೆ ರಕ್ತ ಹರಿಯಲಾರಂಭಿಸುತ್ತದೆ. ಯಾವ ಪೂರ್ವ ಸೂಚನೆಯೂ ಇರುವುದಿಲ್ಲ. ಡಾಕ್ಟರ್ ಆಯ್ತು, ಹಕೀಮರಾಯಿತು, ದೇವರು-ದಿಂಡರು ಆಯಿತು, ಮಾಟ-ಮಂತ್ರ ಮಾಡಿಸಿದ್ದಾಯ್ತು, ಭಾನಾಮತಿ ಕಾಟ ತೆಗೆಸಿದ್ದೂ ಆಯ್ತು. ಏನೂ ಮಾಡಿದ್ರೂ ಹುಡುಗ ಮಾತ್ರ ಹುಷಾರಗಲೊಲ್ಲ.

ಆದರೆ ಈ ಸ್ಟೋರಿಯನ್ನು ನೋಡಿದ ಬೆಂಗಳೂರಿನ ಖ್ಯಾತ ವೈದ್ಯರೊಬ್ಬರು ತಕ್ಷಣ ಚಾನಲ್ ಸಂಪರ್ಕಿಸಿ ಆ ಕಾಯಿಲೆಯ ವೈಜ್ಞಾನಿಕ ಹೆಸರು, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಸೂಚಿಸಿ, ಬೇಕಿದ್ದರೇ ತಾವೇ ಉಚಿತವಾಗಿ ಆಪರೇಷನ್ ಮಾಡಿಸುವುದಾಗಿಯೂ ಹೇಳಿದರು. ಚಾನಲ್ ನವರು ಆ ಹುಡುಗ, ಹುಡುಗನ ತಂದೆ, ವೈದ್ಯರನ್ನು ಕೂರಿಸಿ ಪ್ಯಾನಲ್ ಡಿಸ್ಕಷನ್ ಮಾಡಿಸಿದ್ದೂ ಆಯಿತು. ಸ್ಟೋರಿ ಮಾಡಿದ ರಿಪೋರ್ಟರ್ ನಲ್ಲಿ ಸಾರ್ಥಕ ಭಾವ.

ಕೆಲ ದಿನಗಳ ನಂತರ ಗೊತ್ತಾಗಿದ್ದು, ಆ ಹುಡುಗನ ಕಡೆಯವರು ಆಪರೇಷನ್ ಮಾಡಿಸಲೇ ಇಲ್ಲವಂತೆ. ಈ ಸ್ಟೋರಿ ನೋಡಿದ ಹುಬ್ಬಳ್ಳಿ ಕಡೆಯ ಖ್ಯಾತ ಜ್ಯೋತಿಷಿಗಳ್ಯಾರೋ, ಇದು ಯಾವುದರದ್ದೊ ಕಾಟ. ತಾವು ಅದನ್ನು ತೆಗೆಸುತ್ತೇವೆ. ಕೆಲವು ಸಿಂಪಲ್ ಪೂಜೆ ಮಾಡಿದರಾಯಿತು ಅಂತ ತಂದೆಗೆ ಫೋನ್ ಮಾಡಿದರಂತೆ. ತಂದೆ, ಈಗ ಆ ಜ್ಯೋತಿಷಿಯನ್ನು ಎಡತಾಕುತ್ತಿದ್ದಾರಂತೆ. ಹುಡುಗನ ರಕ್ತ ಹರಿಯುತ್ತಲೇ ಇದೆ.

ಏನು ಮಾಡಬೇಕು ಇಂತಹ ಜನರಿಗೆ?

Vulture Stalking a Child

….

Courtesy – Iconic Photos

In March 1993, photographer Kevin Carter made a trip to southern Sudan, where he took now iconic photo of a vulture preying upon an emaciated Sudanese toddler near the village of Ayod. Carter said he waited about 20 minutes, hoping that the vulture would spread its wings. It didn’t. Carter snapped the haunting photograph and chased the vulture away. (The parents of the girl were busy taking food from the same UN plane Carter took to Ayod).

The photograph was sold to The New York Times where it appeared for the first time on March 26, 1993 as ‘metaphor for Africa’s despair’. Practically overnight hundreds of people contacted the newspaper to ask whether the child had survived, leading the newspaper to run an unusual special editor’s note saying the girl had enough strength to walk away from the vulture, but that her ultimate fate was unknown. Journalists in the Sudan were told not to touch the famine victims, because of the risk of transmitting disease, but Carter came under criticism for not helping the girl. ”The man adjusting his lens to take just the right frame of her suffering might just as well be a predator, another vulture on the scene,” read one editorial.

Carter eventually won the Pulitzer Prize for this photo, but he couldn’t enjoy it. “I’m really, really sorry I didn’t pick the child up,” he confided in a friend. Consumed with the violence he’d witnessed, and haunted by the questions as to the little girl’s fate, he committed suicide three months later.

Jayalalitha hits back…

ಈ ವಿಡಿಯೋವನ್ನು ಬಹುತೇಕ ಎಲ್ಲ ಮಾಧ್ಯಮ ಟ್ಲೈನಿಂಗ್ ಗಳಲ್ಲಿ ಬಳಸಲಾಗುತ್ತದೆ. ನಾನು ಕೂಡ ನನ್ನ ಟ್ರೈನಿಂಗ್ ಕ್ಲಾಸ್ ಗಳಲ್ಲಿ ಇದನ್ನು ಹಲವಾರು ಬಾರಿ ಬಳಸಿದ್ದೇನೆ. ಈ ವಿಡಿಯೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ.

ಪ್ರತಾಪನಿಗೆ “ನಿಗಳೆ ಪಾರಿತೋಷಕ ಪ್ರಶಸ್ತಿ – 2012”

ನನ್ನೂರು ಕೊಪ್ಪದಲ್ಲಿ ಪ್ರತಿವರ್ಷ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ವಿದ್ಯಾನಿಧಿ (ಧನ ಸಹಾಯ) ಹಾಗೂ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಒಂದು ಪ್ರಶಸ್ತಿಯನ್ನು ನಾನು ನೀಡಿದೆ. ಆದರೆ ನನ್ನ ಪ್ರಶಸ್ತಿಯ ಮಾನದಂಡ ಬೇರೆ ಇತ್ತು.

ಕೇವಲ ಅಂಕಗಳು ಬದುಕನ್ನು ರೂಪಿಸುವುದಿಲ್ಲ. ಕೇವಲ ಅಂಕಗಳು ಬದುಕಿನಲ್ಲಿ ಎಲ್ಲವೂ ಅಲ್ಲ ಎಂಬುದು ನನ್ನ ನಂಬಿಕೆ.

ಹೀಗಾಗಿ,  ಎಸ್ಎಸ್ಎಲ್ಸಿ ಅಥವಾ ಪಿಯುಸಿಯಲ್ಲಿ ಕನಿಷ್ಠ  ಶೇ.70 ಅಂಕ ಹಾಗೂ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ (ಪಠ್ಯೇತರ ಚಟುವಟಿಕೆ- ಭಾಷಣ, ಸಂಗೀತ, ಕ್ರೀಡೆ ಇತ್ಯಾದಿ) ತೊಡಗಿಸಿಕೊಂಡಿರುವ ವಿದ್ಯಾರ್ಥಿ/ನಿಗೆ “ನಿಗಳೆ ಪಾರಿತೋಷಕ ಪ್ರಶಸ್ತಿ – 2012” ಹಾಗೂ ರೂ. 501/- ಯೋಜಿಸಿದ್ದೆ. ಈ ಬಾರಿಯ ನಿಗಳೆ ಪಾರಿತೋಷಕ ಪ್ರಶಸ್ತಿಯನ್ನ ಪ್ರತಾಪನಿಗೆ ನೀಡಲಾಗಿದೆ. ಪ್ರತಾಪ ಓದಿನಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಎತ್ತಿದ ಕೈ.

ಆಲ್ ದಿ ಬೆಸ್ಟ್ ಪ್ರತಾಪ್….

ನಿಗಳೆ ಪಾರಿತೋಷಕ ಪ್ರಶಸ್ತಿ – 2012
ಪ್ರತಾಪ್